ಅಡಗೂರು ಹುಚ್ಚೇಗೌಡ ವಿಶ್ವನಾಥ್ ತೀರಾ ಬಳಲಿದಂತೆ ಕಾಣುತ್ತಿದ್ದರು. ಸೂಕ್ಷ್ಮವಾಗಿ ನೋಡಿದರೆ ಅದು ದೈಹಿಕ ಬಳಲಿಗೆಗಿಂತ ರಾಜಕೀಯ ಬಳಲಿಕೆಯೇ ಎಂದು ಗೊತ್ತಾಗುತ್ತಿತ್ತು. ಅವರ ಮಾತುಗಳಲ್ಲಿ ಎಂದಿನ ಚಾರ್ಮ್ ಇರಲಿಲ್ಲ. ಮೊನ್ನೆ ಪತ್ರಕರ್ತರು ಏರ್ಪಡಿಸಿದ್ದ ಸಂವಾದದಲ್ಲಿ ಅವರ ಒಳಮನಸು ಭಾಗಿಯಾದಂತೆ ಕಾಣುತ್ತಿರಲಿಲ್ಲ. ಯಾಂತ್ರಿಕವಾಗಿ ಮಾತನಾಡುತ್ತಿದ್ದರು. ಅದು ಗೊತ್ತಾದ ಕಾರಣದಿಂದಲೋ ಏನೋ ಯಾವ ಪತ್ರಕರ್ತರು ಕೆದಕಿಕೆದಕಿ ಪ್ರಶ್ನೆಗಳನ್ನು ಕೇಳುತ್ತಿರಲಿಲ್ಲ. ಅರೇ ಮುಂಚೆ ಇವರು ಹೀಗಿರಲಿಲ್ಲವಲ್ಲ; ವಿಶ್ವನಾಥ್ ಪತ್ರಿಕಾಗೋಷ್ಠಿ ಎಂದರೆ ಅಲ್ಲೊಂದು ಮಿಂಚಿರುತ್ತಿತ್ತು. ಹಾಸ್ಯದ ಹೊನಲು ಇರುತ್ತಿತ್ತು. ಮಾತಿನಲ್ಲಿ ಎದುರಾಳಿಗೆ ಛಡೀಯೇಟು ಕೊಡುವಷ್ಟು ಶಕ್ತಿ ಇರುತ್ತಿತ್ತು… ಎಲ್ಲಿ ಕಾಣೆಯಾದವು ಅವು….?

ಇತ್ತೀಚೆಗೆ ಸುದ್ದಿಸಂಸ್ಥೆಯೊಂದು ನಡೆಸಿದ ಸಂದರ್ಶನದಲ್ಲಿ “ನಾನು ದೇವೇಗೌಡರ ರಬ್ಬರೂ ಅಲ್ಲ; ಕುಮಾರಸ್ವಾಮಿ ಅವರ ಸ್ಟಾಂಪೂ ಅಲ್ಲ. ನನ್ನತನವನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ನಾನೀಗಲೂ ಅದೇ ಹಳೆಯ ವಿಶ್ವನಾಥ ಮಾತನಾಡುತ್ತಿರುವುದು, ಸ್ವಲ್ಪ ವಯಸ್ಸಾಗಿದೆ ಅಷ್ಟೆ” ಎಂದಿದ್ದಾರೆ. ಪ್ರೆಸ್ ಕ್ಲಬ್ಬಿನಲ್ಲಿ ಇವರೊಂದಿಗಿಗ ಸಂವಾದದಲ್ಲಿ ಪಾಲ್ಗೊಂಡಿದ್ದ ನನಗೆ ಈ ಮಾತುಗಳು ಅವರ ಅಂತರಾಳದ ಮಾತುಗಳು ಎನಿಸಲಿಲ್ಲ. ಅಲ್ಲಿ ನಿಜವಾದ ಗುಡುಗು ಇರಲಿಲ್ಲ. ರೇವಣ್ಣ, ಕುಮಾರಸ್ವಾಮಿಗಿಂತ ತುಸು ಹಿರಿಯರಷ್ಟೆ ಆಗಿರುವ ಇವರು ತಮ್ಮೊಳಗಿನ ದುಮ್ಮಾನಗಳಿಗೆ ವಯಸ್ಸಿನ ಕಾರಣ ಕೊಡುವುದು ಸರಿಯೇ ?

ಬಿಡುಗಡೆ ಕೇಳಿದ್ದೆ: ವಿಶ‍್ವನಾಥ್ ಮಂತ್ರಿಯಾಗಿದ್ದವರು. ಇದಲ್ಲದೇ ಪಕ್ಷದಲ್ಲಿ, ಸರ್ಕಾರದಲ್ಲಿ, ಸಮಿತಿಗಳಲ್ಲಿ ಬೇರೆಬೇರೆ ಜವಾಬ್ದಾರಿಗಳನ್ನು ನಿರ್ವಹಿಸಿದವರು. ಸಂಸದರಾಗಿ ರಾಷ್ಟ್ರಮಟ್ಟದಲ್ಲಿಯೂ ಗುರುತಿಸಿಕೊಂಡವರು. ಇವರು ವಹಿಸಿಕೊಂಡ ಕೆಲಸದಿಂದ ಬಿಡುಗಡೆ ಕೇಳಿದ್ದನ್ನು ಖಂಡಿತವಾಗಿಯೂ ಪತ್ರಕರ್ತರು ಕಂಡಿಲ್ಲ. ಇವರು ಬಿಡುಗಡೆ ಕೇಳಿದ್ದು ಶಾಸಕ ಸ್ಥಾನದಿಂದಲ್ಲ; ಜೆ.ಡಿ.ಎಸ್. ರಾಜ್ಯಧ್ಯಕ್ಷ ಸ್ಥಾನದಿಂದ. ದೊಡ್ಡವರು ಒಪ್ಪಲಿಲ್ಲ ಎಂದರು.

ಅಧಿಕಾರ ವಹಿಸಿಕೊಂಡು ವರ್ಷವೂ ಆಗಿಲ್ಲ: ಜೆಡಿಎಸ್ ರಾಜ್ಯಧ‍್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಇನ್ನೂ ಒಂದು ವರ್ಷವೂ ಆಗಿಲ್ಲ (ಆಗಸ್ಟ್ 2018) ಪಕ್ಷ ಸೇರಿದ್ದು 2017ರಲ್ಲಿ ಒಂದು ವರ್ಷ ಕಳೆಯುವುದರೊಳಗೆ ಅಧ್ಯಕ್ಷರಾದರು. ಬಹುಹುರುಪಿನಿಂದಲೇ ಪಕ್ಷ ಸಂಘಟನೆ ಬಗ್ಗೆ ಮಾತನಾಡಿದ್ದರು. ದೂರದಿಂದ ಕಂಡ ದೇವೇಗೌಡ್ರು ಬೇರೆ, ಹತ್ತಿರದಿಂದ ಕಾಣುವ ದೇವೇಗೌಡ್ರೆ ಬೇರೆ, ಅವರು, ಕುಮಾರಸ್ವಾಮಿ, ರೇವಣ್ಣ ಎಲ್ಲ ಬೆಂಬಲ ಕೊಡ್ತಾರೆ ಎಂದಿದ್ದರು. ಆದರೀಗ ನೋಡಿದರೆ ಪಕ್ಷದ ಅಧ್ಯಕ್ಷಸ್ಥಾನದಿಂದ ಬಿಡುಗಡೆ ಕೇಳಿದೆ ಎನ್ನುತ್ತಿದ್ದಾರೆ.

ಈ ಬಿಡುಗಡೆಗೆ ಇವರು ಕೊಡುವ ಕಾರಣ ಆರೋಗ್ಯ ಅಷ್ಟು ಸರಿಯಿಲ್ಲ, ಎಲ್ಲರಿಗೂ ಆರೋಗ್ಯ ಆಗಾಗ ಕೈಕೊಡುವುದು ಸಾಮಾನ್ಯ. ಆದರೆ ಪಕ್ಷದ ರಾಜ್ಯಧ್ಯಕ್ಷ ಸ್ಥಾನದಿಂದ ಬಿಡುಗಡೆ ಕೇಳುವಷ್ಟು ಆರೋಗ್ಯ ಕೆಟ್ಟಿದೆ ಎಂದು ನೋಡಿದವರಿಗೆ ಅನಿಸುವುದಿಲ್ಲ. ಸಂಸದೀಯಪಟುಗಳು ಕೆಲವು ಸೂಕ್ಷ್ಮ ಸಂದರ್ಭದಲ್ಲಿ ಆಡುವ ಮಾತುಗಳಿಗೆ ಒಂದೇ ಅರ್ಥವಿರುವುದಿಲ್ಲ. ಬಹುತೇಕ ಅವರು ಒಂದೇರೀತಿಯ ಅರ್ಥ ಬರುವಂತೆಯೂ ಮಾತನಾಡಿರುವುದಿಲ್ಲ.

ಸಾಮಾನ್ಯವಾಗಿ ನಿರ್ಬಂಧ ಇರುವ ಸ್ಥಳಕ್ಕೆ ಹೋದವರು ‘ಎಷ್ಟುಬೇಗ ಬಿಡುಗಡೆಯಾಗುತ್ತೊ” ಎನ್ನುತ್ತಾರೆ. ಏಕೆಂದರೆ ಅಲ್ಲಿ ವ್ಯಕ್ತಿತ್ವ ಅರಳುವ, ಸ್ವಂತ ಅಭಿಪ್ರಾಯ, ನಿರ್ಧಾರಗಳನ್ನು ಜಾರಿಗೆ ತರುವ ಸ್ವಾತಂತ್ರ್ಯವಿರುವುದಿಲ್ಲ. ಆದ್ದರಿಂದಲೇ ಎಷ್ಟುಬೇಗ ಬಿಡುಗಡೆಯಾದ್ರೆ ಸಾಕಪ್ಪಾ ಎನ್ನುತ್ತಿರುತ್ತಾರೆ. ವಿಶ್ವನಾಥ್ ಅವರ ಮಾತಿನೊಳಗಿನ ಧ್ವನಿತವೂ ಇದೇ ಆಗಿತ್ತು ಎನಿಸುತ್ತಿತ್ತು. ಇಲ್ಲದಿದ್ದರೆ “ರಾಜಿನಾಮೆ ಕೊಡಲು ಹೋಗಿದ್ದೆ, ಪಕ್ಷದ ಹೈಕಮಾಂಡ್ ಒಪ್ಪುತ್ತಿಲ್ಲ ಎನ್ನಬೇಕಿತ್ತಲ್ಲವೇ. ಅದನ್ನು ಬಿಟ್ಟು “ದೊಡ್ಡವರು” ಒಪ್ಪುತ್ತಿಲ್ಲ ಎನ್ನುತ್ತಿರಲಿಲ್ಲ. ಏಕೆಂದರೆ ವಿಶ್ವನಾಥ್ ಎಲ್ಲರೂ ಸಮಾನರೇ ಎಂದು ನೋಡುವವರು, ಸಮಾನತೆಯ ಕನಸು ಕಾಣುವವರು. ಹೀಗೆ ಸಮಾನತೆ ಕನಸು ಕಾಣುವವರು ಪಕ್ಷದ ಹೈಕಮಾಂಡ್ ಎನ್ನುತ್ತಾರೆ. ಹೀಗೆ ಅಂದರು ಒಂದೇ; ದೊಡ್ಡವರು ಅಂದರೂ ಒಂದೇ ಅಲ್ಲವೇ ಎನಿಸಬಹುದು. ಆದರೆ ವಿಶ್ವನಾಥ್ ಅಂಥವರ ವಿಷಯದಲ್ಲಿಯಂತೂ ಇದು ಒಂದೇ ಅಲ್ಲ

ವಿಶ್ವನಾಥ್ ಹಳ್ಳಿಹಕ್ಕಿ, ಸ್ವಾತಂತ್ರ್ಯವನ್ನು, ಸ್ವಾಭಿಮಾನವನ್ನು ಬಯಸುವ ಹಕ್ಕಿ. “ಹಳ್ಳಿಹಕ್ಕಿಯ ಹಾಡು” ಹೆಸೆರಿನಲ್ಲಿ ಆತ್ಮಕಥೆಯನ್ನೂ ಬರೆದಿದ್ದಾರೆ. ಇದುವರೆಗೂ ಬರೆದ ಪುಸ್ತಕಗಳು ಏಳು. ಬಹುಶಃ ಕರ್ನಾಟಕದ ಯಾವ ಸಕ್ರಿಯ ರಾಜಕಾರಣಿಯೂ ಇಷ್ಟು ಪುಸ್ತಕಗಳನ್ನು ಬರೆದಿಲ್ಲ. ಸಾಹಿತ್ಯ ಯಾತ್ರೆ ಮುಂದುವರೆಸಿರುವ ಇವರು ಶಿಕ್ಷಣಮಂತ್ರಿಯಾಗಿದ್ದಾಗ ಮಾಡಿರುವ ಕ್ರಾಂತಿಕಾರಕ ಕೆಲಸಗಳು ಜನಮನದಲ್ಲಿ ಹಸಿರಾಗಿವೆ. ಈ ಸಂದರ್ಭದಲ್ಲಿ ಇವರು ಕೆಲವಾರು ಮಠಾಧಿಪತಿಗಳ ವಿರೋಧ ಕಟ್ಟಿಕೊಂಡಿದ್ದು ಗುಟ್ಟಿನ ಸಂಗತಿಯೇನಲ್ಲ.

ಈ ಪರಿಯ ಕ್ರಾಂತಿಕಾರಕ ಸ್ವಭಾವ ಉಳ್ಳ ಕೆಲವರಲ್ಲಿಯಾದರೂ ತುಸು ದುಡುಕಿನ ಸ್ವಭಾವವೂ ಇರುತ್ತದೆ. ಬಹುಶಃ ಆ ದುಡುಕೇ ಕಾಂಗ್ರೆಸ್ ಪಕ್ಷದಿಂದ ಹೊರಬೀಳುವಂತೆ ಮಾಡಿರಬಹುದು. ಪಕ್ಷ ಬಿಡುವುದಕ್ಕೆ ಸಿದ್ದರಾಮಯ್ಯ ಕಾರಣ ಎನ್ನುವಂಥ ಮಾತುಗಳನ್ನು ಆಡುತ್ತಾರೆ, ಆದರೆ ರಾಜಕಾರಣದಲ್ಲಿ ವ್ಯಕ್ತಿಗತ ರಾಗದ್ವೇಷಗಳಿಗಿಂತ ಪಕ್ಷ ರಾಜಕಾರಣ, ನಿಷ್ಠೆ, ಸಿದ್ಧಾಂತ ಮೇಲು ಎನ್ನುವುದನ್ನು ವಿಶ್ವನಾಥ್ ಅವರಿಗೆ ಯಾರೂ ಹೇಳಿಕೊಡಬೇಕಾದ ಸಂಗತಿಯಲ್ಲ, ಆದರೂ ಪಕ್ಷ ತೊರೆಯುವಂಥ ಮುನಿಸೇನಿತ್ತು… ಕಾಂಗ್ರೆಸ್ ಬಿಡುವಾಗಿನ ಸಂದರ್ಭಗಳೇನಿತ್ತು ಎಂಬುದನ್ನು ಲೋಕಸಭಾ ಚುನಾವಣೆ ನಂತರವೇ ಹೇಳುತ್ತೇನೆ ಎಂದಿದ್ದಾರೆ… ನೋಡೋಣ

ಅಂಕುಶವಿಲ್ಲ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಂತೂ ಮುಖ್ಯಮಂತ್ರಿ ಆದಿಯಾಗಿ ಜೆಡಿಎಸ್ ಪಕ್ಷದ ಶಾಸಕ, ಸಂಸದ, ಸಚಿವ ಹಿಡಿತವಿಲ್ಲದೇ ಮಾತನಾಡಿದ್ದಾರೆ, ಮಂಡ್ಯಜಿಲ್ಲೆ ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡ ಅವರು ಸುಮಲತಾ ಪರ ಪ್ರಚಾರಕ್ಕೆ ಬರುವ ಸಿನೆಮಾ ನಟರನ್ನೇ ಬೆದರಿಸುವ ಮಾತುಗಳನ್ನಾಡಿದರು. ಸಚಿವ ರೇವಣ್ಣ ಅವರಂತೂ ಪತಿಯನ್ನು ಕಳೆದುಕೊಂಡ ಪತ್ನಿ ಮನೆಬಿಟ್ಟು ಆಚೆಯೇ ಬಾರಬಾರದು ಎನ್ನುವಂಥ ಮಾತುಗಳನ್ನಾಡಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಸಿನಿನಟರನ್ನು ಜೋಡೆತ್ತು, ಕಳ್ಳೆತ್ತು ಎಂದಿದ್ದಲ್ಲದೇ ಗಂಡನನ್ನು ಕಳೆದುಕೊಂಡ ದುಃಖ ಅವರ (ಸುಮಲತಾ) ಮುಖದಲ್ಲಿ ಕಾಣುತ್ತಲೇ ಎಂದು ಹಗುರವಾಗಿ ಮಾತನಾಡಿದರು. ಮಂಡ್ಯದ ಹಾಲಿ ಲೋಕಸಭಾ ಸದಸ್ಯ ಶಿವರಾಮೇಗೌಡ ಅವರಂತೂ ಸುಮಲತಾ ಗೌಡ್ತಿಯೇ ಅಲ್ಲ ಎಂದರು. ಈ ಥರದ ಮಾತುಗಳನ್ನು ಪಕ್ಷದ ಯಾರೂ ಆಡದಂತೆ ಪಕ್ಷದ ಅಧ್ಯಕ್ಷರು ಅಂಕುಶವಿಡಬೇಕಾಗುತ್ತದೆ. ಆದರೆ ವಿಶ್ವನಾಥ್ ಕೈಗೆ ಆ ಅಂಕುಶವೆಂಬ ಅಧಿಕಾರವೇ ಸಿಕ್ಕಿರುವಂತೆ ಕಾಣುವುದಿಲ್ಲ.

ಸಮಿತಿಯಲ್ಲೂ ಇಲ್ಲ: ಮೈತ್ರಿ ಸರ್ಕಾರ ಸುಗಮವಾಗಿ ನಡೆಯಲು ರಚಿತವಾಗಿರುವ ಸಮನ್ವಯ ಸಮಿತಿಯಲ್ಲಿ ವಿಶ್ವನಾಥ್ ಅವರಂಥ ಮುತ್ಸದಿಗೆ ಅವಕಾಶ ದೊರೆತಿಲ್ಲ. ಇವರು ಪಕ್ಷದ ಅಧ್ಯಕ್ಷರಾಗಿರುವ ಕಾರಣಕ್ಕಾದರೂ ಸಮಿತಿಯಲ್ಲಿ ಸ್ಥಾನ ದೊರೆಯಬೇಕಿತ್ತು, ಏಕೆ ಎಂದು ಕಾರಣ ಕೇಳಿದರೆ ಸಿದ್ದರಾಮಯ್ಯ ಅವರತ್ತ ಬೆರಳು ತೋರಿಸುತ್ತಾರೆ. ಸಮನ್ವಯ ಸಮಿತಿಯಲ್ಲಿ ಯಾರಿರಬೇಕು, ಯಾರಿರಬಾರದು ಎಂಬುದನ್ನು ನಿರ್ಧರಿಸಬೇಕಾದವರು ಆಯಾ ಪಕ್ಷದ ಹೈಕಮಾಂಡ್. ಜೆಡಿಎಸ್ ಹೈ ಕಮಾಂಡ್ ದೇವೇಗೌಡರು ಕಾಂಗ್ರೆಸಿನ ಹೈಕಮಾಂಡ್ ಮೇಲೆ ಒತ್ತಡ ತರುವುದಿರಲಿ ಪ್ರಸ್ತಾಪಿಸಿದರೂ ಸಾಕು ಸಮಿತಿಯಲ್ಲಿ ಸ್ಥಾನ ದೊರಕುವುದಿಲ್ಲವೇ… ಇದಕ್ಕೂ ವಿಶ್ವನಾಥರೇ ಉತ್ತರಿಸಬೇಕು.

ಮುಲಾಜಿಲ್ಲದೇ ಹೇಳುವ ಸ್ವಭಾವ ಎಲ್ಲಿ ಹೋಯಿತು: ಕುಟುಂಬ ರಾಜಕಾರಣದ ಬಗ್ಗೆ ಕೇಳಿದರೆ ಬಿಹಾರದಲ್ಲಿ ಇಲ್ಲವೇ, ಉತ್ತರಪ್ರದೇಶದಲ್ಲಿ ಇಲ್ಲವೇ ಎನ್ನುತ್ತಾರೆ. ಇಲ್ಲಿಯ ಅವಶ್ಯಕತೆಗಳನ್ನು ಹೇಳುವುದಿಲ್ಲ. ಒಂದೆರಡು ವರ್ಷದ ಮುಂಚೆ ಇದೇ ಮಾದರಿ ಬೆಳವಣಿಗೆಗಳಾಗಿದ್ದರೆ ಬಹುಶಃ ವಿಶ್ವನಾಥ್ ಉತ್ತರ ಕಡಕ್ ಆಗಿರುತ್ತಿತ್ತು.

ಅಭ್ಯರ್ಥಿಗಳ ಆಯ್ಕೆಯಲ್ಲಿ ಪಾತ್ರವಿಲ್ಲವೆ: ಚುನಾವಣಾ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರ ಅಭಿಪ್ರಾಯಕ್ಕೆ ವಿಶೇಷ ಅನುಮೋದನೆಯಿರುತ್ತದೆ. ಆದರೆ ಜೆಡಿಎಸ್ನಲ್ಲಿ ಇಂಥ ವಾತವರಣ ಇಲ್ಲವೇ ಎಂಬ ಪ್ರಶ್ನೆಯೂ  ಮೂಡುತ್ತದೆ. ಈ ಮಾತಿಗೆ ವಿಶ್ವನಾಥ್ ಹೇಳಿರುವುದು

“ಪಕ್ಷ ಸಂಘಟನೆ ಹೇಗಿರಬೇಕು, ಜಿಲ್ಲಾಧ್ಯಕ್ಷರನ್ನಾಗಿ ಯಾರನ್ನು ನೇಮಿಸಬೇಕು ಎಂಬುದಷ್ಟೇ ಅಧ್ಯಕ್ಷರ ಕೆಲಸ. ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಅಧ್ಯಕ್ಷರ ಜವಾಬ್ದಾರಿಯಲ್ಲ. ಅಭ್ಯರ್ಥಿಗಳ ತೀರ್ಮಾನ ಸಂಸದೀಯ ಸ ಮಿತಿಗೆ ಬಿಟ್ಟಿದ್ದು. ಪಕ್ಷದಲ್ಲಿಯೇ ಇರುವ ಸಂಸದೀಯ ವ್ಯವಸ್ಥೆ ಇದನ್ನು ನಿರ್ವಹಿಸುತ್ತದೆ. ‘adhyaksha  is one among such a decent person’

ರಾಜಕೀಯದಲ್ಲಿಯೂ ಮಂಥನಗಳಾಗುತ್ತಲೇ ಇರುತ್ತವೆ. ಮುತ್ಸದಿಗಳಿಗೆ ಕಹಿಯನ್ನು ನುಂಗುವ ಅನುಭವಗಳಾಗುತ್ತವೆ. ಆದರವರು ಮನಸು ಮಾಡಿದರೆ ಅದನ್ನೇ ಶಕ್ತಿವರ್ಧಕ ಟಾನಿಕ್ ಆಗಿಯೂ ಮಾಡಿಕೊಂಡು ಮೇಲೆಳಬಲ್ಲರು… ಈ ವಿಶ್ವನಾಥ್ ಕೂಡ ಹೊಸ ಹುರುಪಿನಿಂದ ಮುನ್ನಡೆಯಲಿ ಎನ್ನುವುದೇ ಅವರನ್ನು ಕಂಡವರ ಮಾತು….

ಕೃತಜ್ಞತೆ: ವಿಶ್ವನಾಥ್ ಅವರೊಂಗಿದಿನ ಮಾಧ್ಯಮ ಸಂವಾದದ ಎರಡು ಚಿತ್ರಗಳನ್ನು ಹೊರತುಪಡಿಸಿ ಉಳಿದ ಸಾಂದರ್ಭಿಕ ಚಿತ್ರಗಳನ್ನು ಅಂತರ್ಜಾಲದಿಂದ ತೆಗೆದುಕೊಂಡಿದ್ದೇನೆ, ಇವುಗಳ ಮೂಲ ಛಾಯಾಗ್ರಾಹಕರಿಗೆ ಕೃತಜ್ಞತೆಗಳು

Similar Posts

Leave a Reply

Your email address will not be published. Required fields are marked *