ಗ್ರಾಮಿಣ ಭಾರತದಲ್ಲಿ ಇಂದಿಗೂ ಹೆಣ್ಣು ಮಕ್ಕಳಿಗೆ ಕುಸ್ತಿ ಅಲ್ಲ ಎಂಬ ನಂಬಿಕೆ ಇದೆ. ಜೊತೆಗೆ ಅಪ್ಪ-ಅಮ್ಮನ ಆಸೆ ಈಡೇರಿಸುವವರು, ವಂಶದ ಉತ್ತರಾಧಿಕಾರಿಗಳು, ವಂಶೋದ್ಧಾರಕರು ಗಂಡು ಮಕ್ಕಳೇ ಎಂಬ ಕುರುಡು ನಂಬಿಕೆ ಇದೆ. ನಗರ ಪ್ರದೇಶವೂ ಇದಕ್ಕೆ ಹೊರತಲ್ಲ. ಇಂಥ ಪೊಳ್ಳುತನಗಳನ್ನೆಲ್ಲ ‘ದಂಗಲ್’ ಒಡೆಯುತ್ತಾ ಹೋಗುತ್ತದೆ.ಪ್ರಸ್ತುತವೂ ಹರಿಯಾಣದಲ್ಲಿ ಜಾತಿ ಪಂಚಾಯ್ತಿಗಳು ಪ್ರಬಲವಾಗಿವೆ. ಹೆಣ್ಣು, ಗೃಹಿಣಿಯಾಗಷ್ಟೆ ಇರಬೇಕು. ಅವಳಿಗೆ ಸ್ವಾತಂತ್ರ್ಯ ನೀಡಬಾರದು ಎಂದು ಇವು ನಂಬುತ್ತವೆ. ಇಂಥ ಪ್ರದೇಶದ ತಂದೆಯೋರ್ವ ತನ್ನ ಕನಸು ಸಾಕಾರಗೊಳ್ಳುವ ಬೆಳಕನ್ನು ತನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಕಾಣುತ್ತಾನೆ ಎಂದರೆ ಅದು ದೊಡ್ಡ ಸಂಗತಿ.

ಈ ದಿಶೆಯಲ್ಲಿ ಈತ ಹೆಣ್ಣು ಮಕ್ಕಳನ್ನು ತಯಾರಿ ಮಾಡುತ್ತಾನೆ. ಹೀಗೆ ಮಾಡುತ್ತಾ ಸಾಗುವಾಗಲೇ ಆತ ಹೆಣ್ಣು ಮಕ್ಕಳೆಂದರೆ ಹೀಗೆ ಇರಬೇಕು. ಹೀಗೆ ಉಡುಪು ಧರಿಸಿರಬೇಕು. ಹಣೆಗೆ ಬಿಂದಿ, ಕೈಗೆ ಬಳೆ, ಉದ್ದನೆ ತುರುಬಿಗೆ ಹೂವು ಮುಡಿದಿರಬೇಕು. ಮದುವೆಯಾಗಿ ಪರರ  ಮನೆ ಬೆಳಗಲಷ್ಟೆ ಅವರನ್ನು ತಯಾರು ಮಾಡಬೇಕು ಎಂಬ ಕಟ್ಟುಪಾಡುಗಳನ್ನು ಮುರಿಯುತ್ತಾ ಹೋಗುತ್ತಾನೆ. ಅಕ್ಷರಶಃ ಆತ ಸಾಂಪ್ರದಾಯಿಕ ಪೊಳ್ಳುತನಗಳ ಜೊತೆ ಕುಸ್ತಿಯಾಡುತ್ತಾ ಹೋಗಿ ಅವುಗಳನ್ನು ಚಿತ್ (ಸೋಲಿಸುವಿಕೆ) ಮಾಡುತ್ತಾನೆ.
ಮೊದಲು ಹೆಂಡತಿ, ಬಂಧುಗಳು, ಸ್ನೇಹಿತರು ಮತ್ತು ಸಮಾಜದ ವಿರೋಧ ಎದುರಿಸುವ ಈತ ಎಂಥ ಪ್ರತಿಕೂಲ ಸನ್ನಿವೇಶದಲ್ಲಿಯೂ ಹಿಂಜರಿಯದೇ ಇರುವುದನ್ನು ದಂಗಲ್ ಚಿತ್ರಿಸುತ್ತಾ ಹೋಗುತ್ತದೆ. ಆದ್ದರಿಂದ ಇದು ಓರ್ವ ಸಾಹಸಿ ತಂದೆ, ಧೈರ್ಯಸ್ಥ ಹೆಣ್ಣು ಮಕ್ಕಳಿಬ್ಬರ ಕಥೆಯಷ್ಟೇ ಅಲ್ಲ. ಸಮಾಜದ ನಂಬಿಕೆಗಳ ವಿರುದ್ಧ ಸೆಣಸಿ ಗೆಲ್ಲುವ ಕುಸ್ತಿ ಕಥೆಯೂ ಹೌದು.

ಆತನದು ಮಾಂಸಹಾರವೆಂದರೆ ದೂರ ಸರಿಯುವ ಕುಟುಂಬ. ಕುಸ್ತಿಪಟು ತಯಾರಿಯಲ್ಲಿರುವ ತನ್ನಿಬ್ಬರು ಹೆಣ್ಣುಮಕ್ಕಳಿಗೆ ಪತ್ನಿಯ ಪ್ರತಿರೋಧದ ನಡುವೆಯೂ ಹೆಚ್ಚಿನ ಪೌಷ್ಟಿಕಾಂಶ ದೊರೆಯಲಿ ಎಂಬ ಕಾರಣಕ್ಕೆ ಮಾಂಸ ತಿನಿಸುತ್ತಾನೆ. ತಾನು ಕಲಿಸಿದ ವಿದ್ಯೆಯನ್ನು ಇವರು ಹೇಗೆ ಕರಗತ ಮಾಡಿಕೊಂಡಿದ್ದಾರೆ ಎನ್ನುವ ಸಲುವಾಗಿ ಕುಸ್ತಿಪಟು ಬಾಲಕರ ಮೇಲೆ ಕುಸ್ತಿ ಮಾಡಿಸುತ್ತಾನೆ. ಅವರಿಬ್ಬರು ಅಪ್ಪನ ನಿರೀಕ್ಷೆ ಹುಸಿ ಮಾಡುವುದಿಲ್ಲ. ಇದೆಲ್ಲ ಹೇಳುವಷ್ಟು ಸರಳ, ಸುಲಭವಾಗಿ ನಡೆಯುವುದಿಲ್ಲ. ಹಿರಿಯ ಕುಸ್ತಿಪಟುಗಳು ಈತನ ಮನವಿ ತಳ್ಳಿ ಹಾಕುತ್ತಾರೆ. ಆದರೂ ಈತ ಹಿಂಜರಿಯುವುದಿಲ್ಲ.
ಹೀಗೆ ತನ್ನ ಹೆಣ್ಣು ಮಕ್ಕಳ ಮೂಲಕ ತನ್ನ ಆಕಾಂಕ್ಷೆ ಸಫಲಗೊಳ್ಳುವಂತೆ ಮಾಡುವ ತಂದೆ ಮಹಾವೀರ್ ಸಿಂಗ್ ಪೋಗಟ್, ಆರಂಭದಲ್ಲಿ ಹಿಂಜರಿಯುತ್ತಲೇ ಅಖಾಡಕ್ಕಿಳಿದು ಗೆಲ್ಲುತ್ತಲೇ ಹೋಗುವವರೆ ಗೀತಾ ಪೋಗಟ್ ಮತ್ತು ಬಬಿತಾ ಪೋಗಟ್. ಇದು ನಿಜ ಜೀವನದ ಕಥೆ. ‘ಹೊಟ್ಟೆಗೆ ಹಿಟ್ಟು ಬದಲು ಮೆಡಲ್ ತಿನ್ನುತ್ತೀಯಾ’ ಎಂಬ ತಂದೆ ಹೀಯಾಳಿಕೆ ಸಹಿಸದೇ ಕುಟುಂಬದ ಆರ್ಥಿಕ ದುಸ್ಥಿತಿ ಕಾರಣ ಉತ್ತಮ ಭವಿಷ್ಯವಿದ್ದರೂ ಕುಸ್ತಿಯಿಂದ ದೂರ ಸರಿದ ಮಹಾವೀರ್ ಸಿಂಗ್ ಪೋಗಟ್, ಹೆಣ್ಣು ಮಕ್ಕಳ ಮೂಲಕ ಪಡೆದ ವಿಜಯದ ಕಥೆಯಿದು.
ನಿಜಜೀವನದ ಸಂಗತಿಗಳು ಸಿನೆಮಾಕ್ಕಿಂತಲೂ ಸಿನಿಮಯ. ರೋಚಕ. ಅನಿರೀಕ್ಷಿತ ತಿರುವುಗಳ ಸಂತೆ. ತಾನು ಈಡೇರಿಸಿಕೊಳ್ಳಲು ಸಾಧ್ಯವಾಗದ  ಕುಸ್ತಿಯ ಮೇರು ಸಾಧನೆಯನ್ನು ತನ್ನ ಮಗನ ಮೂಲಕ ಈಡೇರಿಸಿಕೊಳ್ಳುತ್ತೀನಿ ಎಂಬುದು ಪೋಗಟ್ ಆಶೆ. ಆದರೆ ಪತ್ನಿಗೆ ಒಬ್ಬರ ಹಿಂದೆ ಒಬ್ಬರಂತೆ ಹೆಣ್ಣು ಶಿಶುಗಳೇ ಜನಿಸಿದಾಗ ನಿರಾಶೆ ಆವರಿಸುತ್ತದೆ. ದುಗುಡ ಕವಿಯುತ್ತದೆ. ಆದರೆ ಹೆಣ್ಣು ಮಕ್ಕಳು ಬೆಳೆಯುತ್ತಾ ಹೋದಂತೆ ಫಟಿಸಿದ ಘಟನೆ ಆತನ ನಿರಾಶೆ ಕತ್ತಲನ್ನು ದೂರ ಸರಿಸುವ ಕೋಲ್ಮಿಂಚಾಗುತ್ತದೆ.

2010ನೇ ಕಾಮನ್ವೇಲ್ತ್ ಕ್ರೀಡಾಕೂಟದಲ್ಲಿ ಗೀತಾ ಪೋಗಟ್ ಚಿನ್ನದ ಪದಕ ಪಡೆಯುತ್ತಾರೆ. ಬಬಿತಾ ಪೋಗಟ್ ಬೆಳ್ಳಿಪದಕ ಪಡೆಯುತ್ತಾರೆ. ಅದಕ್ಕಾಗಿ ಇವರಿಬ್ಬರು ಪಟ್ಟ ಶ್ರಮ, ತಂದೆ ಪೋಗಟ್ ತ್ಯಾಗ ಅಪಾರ. ಇವೆಲ್ಲವನ್ನೂ ಅನಗತ್ಯ ಮೆಲೋಡ್ರಾಮ ಇಲ್ಲದೆ ಸಿನೆಮಾ ಕಟ್ಟಿಕೊಟ್ಟಿರುವುದು ಬಹುಮುಖ್ಯ ವಿಷಯ.

ಕ್ರೀಡಾಪಟುಗಳ ಯಶಸ್ಸು, ಅವರ ಕೋಚ್ ಗಳ ಪರಿಣತಿ ಮೇಲೂ ಅವಲಂಬಿತವಾಗಿರುತ್ತದೆ. ಈಗೋ ತುಂಬಿಕೊಂಡ ಕೋಚ್ ತನ್ನ ಶಿಷ್ಯರನ್ನು ಅಸಮರ್ಥವಾಗಿ ತಯಾರಿಗೊಳಿಸುತ್ತಾನೆ. ಅಂಥ ಉದಾಹರಣೆಯನ್ನು ಚಿತ್ರ ನೀಡುತ್ತಾ ಹೇಗೆ ಗೆಲ್ಲುವ ಪಟುಗಳು ಸೋಲಿನ ದವಡೆಗೆ ನೂಕಲ್ಪಡುತ್ತಾರೆ ಎಂಬುದನ್ನು ಸಿನೆಮಾ ಸವಿವರವಾಗಿ ಚಿತ್ರಿಸಿದೆ.
ಭಾಷೆ: ಇಲ್ಲಿ ಬಳಸಿದ ಭಾಷೆ, ಬಾಲಿವುಡ್ಡಿನ ಮಸಾಲೆ ಸಿನೆಮಾಗಳಲ್ಲಿರುವ ಹಿಂದಿಯಲ್ಲ. ಹರಿಯಾಣದ ಗ್ರಾಮಾಂತರ ಮಂದಿ ಆಡುವ, ನಗರ ಪ್ರದೇಶದ ಉಚ್ಛಾರಣೆಗಿಂತ ಭಿನ್ನವಾಗಿರುವ ಹಿಂದಿ. ಸಿನೆಮಾದ ಉದ್ದಕ್ಕೂ ಮುಖ್ಯ ಪಾತ್ರಗಳು ಈ ಉಚ್ಛಾರಣೆ ರೀತಿಯಲ್ಲಿಯೇ ಮಾತನಾಡುತ್ತಾ ಹೋಗಿರುವುದು ಗ್ರಾಮೀಣ ಸೊಗಡನ್ನು ತಂದು ಕೊಟ್ಟಿದೆ.
ನಿರ್ದೇಶನ:
ಇಂಥ ಸ್ವಾರಸ್ಯಕರ ಘಟನೆಗಳ ಸರಮಾಲೆ ಹೇಳುವಾಗ ಸೂತ್ರಧಾರಿ ನಿರ್ದೇಶಕ ನಿತೇಶ್ ತಿವಾರಿ ಬಹು ಎಚ್ಚರಿಕೆ ವಹಿಸಿದ್ದಾರೆ. ಎಲ್ಲಿಯೂ, ಯಾವ ಪಾತ್ರಕ್ಕೂ ಅನಗತ್ಯವಾಗಿ ಮಸಾಲೆ ಸಿನೆಮಾದ ಪಾತ್ರಗಳಂತೆ ವಿಜೃಂಭಿಸುವ ಅವಕಾಶ ನೀಡಿಲ್ಲ. ಇಂಥ ತಾಳ್ಮೆಯಿಂದಲೇ ‘ದಂಗಲ್’ ಸುಂದರ ಕಲಾಕೃತಿಯಾಗಿ ಮೂಡಿ ಬಂದಿದೆ. ಚಿತ್ರಕಥೆಯ ಅಚ್ಚುಕಟ್ಟುತನ (ನಿತೇಶ್ ತಿವಾರಿ, ಪಿಯುಷ್ ಗುಪ್ತ, ಶ್ರೇಯಸ್ ಜೈನ್ ಮತ್ತು ನಿಖಿಲ್ ಮಲ್ಹೋತ್ರ) ವೂ ಇದಕ್ಕೆ ಪೂರಕವಾಗಿದೆ. ಪ್ರೀತಮ್ ಅವರ ಸಂಗೀತ ನಿರ್ದೇಶನ, ಸಿನೆಮಾಕ್ಕೆ ಲವಲವಿಕೆ, ಗಾಂಭೀರ್ಯ ತಂದುಕೊಟ್ಟಿದೆ.

ಅಭಿನಯ:

ಮಹಾವೀರ್ ಸಿಂಗ್ ಪೋಗಟ್ ವ್ಯಕ್ತಿತ್ವವನ್ನೇ ಅಮಿರ್ ಖಾನ್ ಆವಾಹಿಸಿಕೊಂಡಿದ್ದಾರೆ. ಇದಕ್ಕಾಗಿ ಅವರು ದೇಹವನ್ನು ಹುರಿಗಟ್ಟಿಸಿಕೊಂಡಿರುವುದು, ಹಾವಾಭಾವಗಳ ಯಥಾವತ್ ಅನುಕರಣೆ ಅನನ್ಯ. ಪೋಗಟ್ ಪತ್ನಿ ಪಾತ್ರಧಾರಿ ಸಾಕ್ಷಿ ತನ್ವರ್ ಅಭಿನಯ ಕೂಡ ಗಮನಾರ್ಹ. ಬಾಲ್ಯಾವಸ್ಥೆಯ ಗೀತಾ ಪೋಗಟ್, ಬಬಿತಾ ಪೋಗಟ್ ಪಾತ್ರಗಳೇ ತಾವಾಗಿರುವ ಫಾತಿಮಾ ಸನಾಶೇಖ್, ಸಾನ್ಯ ಮಲ್ಹೋತ್ರಾ  ಮೆಚ್ಚುಗೆ ಪಡೆಯುತ್ತಾರೆ. ಅಪಾರ ಮಾನಸಿಕ, ದೈಹಿಕ ತಯಾರಿ ಬಯಸುವ ಯುವ ಹಂತದ ಗೀತಾ, ಬಬಿತಾ ಪಾತ್ರಗಳಲ್ಲಿ  ನಟಿಸಿರುವ ಜೈಹ್ರಾ ವಾಸೀಮ್, ಸುಹಾನಿ ಭಟ್ನಾಗರ್ ಅಭಿನಯ ಮನೋಜ್ಞ.
ಸಾಮಾನ್ಯವಾಗಿ ಇಂಥ ಪಾತ್ರಗಳು ಒಂದಷ್ಟು ಕುಸ್ತಿ ಕಲಿಯಬೇಕಾಗುತ್ತದೆ. ಕುಸ್ತಿಪಟುಗಳ ಕಣ್ಣುಗಳ ತೀಷ್ಣತೆ ತಂದು ಕೊಳ್ಳಬೇಕಾಗುತ್ತದೆ. ಎಲ್ಲಕ್ಕಿಂತ ದೇಹವನ್ನು ಹುರಿಗಟ್ಟಿಸಿಕೊಳ್ಳಬೇಕಾಗುತ್ತದೆ. ಈ ಎಲ್ಲ ಪೂರ್ವ ತಯಾರಿಯನ್ನು ಮಾಡಿಯೇ ಜೈಹ್ರಾ ವಾಸೀಮ್, ಸುಹಾನಿ ಭಟ್ನಾಗರ್ ಅಭಿನಯದ ಕಣಕ್ಕಿಳಿದ್ದಿದ್ದಾರೆ ಎಂಬುದು ಸಿನೆಮಾ ನೋಡುತ್ತಿದ್ದಂತೆ ಮನದಟ್ಟಾಗುತ್ತದೆ.
ಸಾಮಾಜಿಕ ಪೊಳ್ಳು ನಂಬಿಕೆಗಳ ಜೊತೆ ‘ದಂಗಲ್’ ( ಅಂದ ಹಾಗೆ ದಂಗಲ್ ಎಂದರೆ ಕುಸ್ತಿಸ್ಪರ್ಧೆ) ಆಡುತ್ತಲೇ ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಈ ಚಿತ್ರ, ತಾಂತ್ರಿಕ ದೃಷ್ಟಿಯಿಂದಲೂ ಮೆಚ್ಚುಗೆ ಗಳಿಸುತ್ತದೆ. ಈ ಎಲ್ಲ ಕಾರಣಗಳಿಗಾಗಿ ಇದು ಭಾರತೀಯ ಸಿನೆಮಾ ರಂಗದ ಅವಿಸ್ಮರಣೀಯ ಚಿತ್ರಗಳ ಸಾಲಿನಲ್ಲಿ ನಿಲ್ಲುತ್ತದೆ ಎಂಬುದು ನನ್ನ ಅಭಿಪ್ರಾಯ.

Similar Posts

Leave a Reply

Your email address will not be published. Required fields are marked *