ಭಾರತೀಯ ಯೋಧರು ಬಹು ಸಂಕೀರ್ಣ ಸನ್ನಿವೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ತಮ್ಮ ಅಮೂಲ್ಯ ಜೀವಗಳನ್ನು ಪಣವಾಗಿಟ್ಟು ಸೆಣಸುತ್ತಿರುತ್ತಾರೆ. ಉಗ್ರಗಾಮಿಗಳೊಂದಿಗೆ ಕಾದಾಡುವ ಪರಿಸ್ಥಿತಿ ಬಹು ಸವಾಲಿನದಾಗಿರುತ್ತದೆ. ಈ ದಿಶೆಯಲ್ಲಿ ಅವರಿಗೆ ಉಗ್ರಗಾಮಿಗಳನ್ನು ಪತ್ತೆಹಚ್ಚಬಲ್ಲ ರೇಡಾರ್ ಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ಕುರಿತ ವಿವರ ನಿಮ್ಮ ಮುಂದೆ ….

ಎಂಥ ಹವಾಮಾನದಲ್ಲಿಯೂ ಧರಿಸಬಹುದಾದ ಬುಲೆಟ್ ಪ್ರೂಫ್ ಜಾಕೆಟ್ ರೂಪಿಸಲಾಗಿದೆ. ಭಾರತೀಯ ವಿಜ್ಞಾನಿ ಶಂತನು ಭೌಮಿಕ್ ಇದನ್ನು ಅಭಿವೃದ್ಧಿಪಡಿಸಿದ್ದಾರೆ. ರಕ್ಷಣಾ ಸಚಿವಾಲಯ ಇದನ್ನು ಭಾರತೀಯ ಸೈನಿಕರಿಗೆ ವಿತರಿಸಲಿದೆ.  ಪ್ರಸ್ತುತ ಉಗ್ರಗಾಮಿಗಳನ್ನು ಪತ್ತೆಹಚ್ಚುವಂಥ ರೇಡಾರ್ ಗಳನ್ನು ನೀಡುವ ಪ್ರಕ್ರಿಯೆ ನಡೆಸಿದೆ.

ಕಾಶ್ಮೀರದಲ್ಲಿ ಉಗ್ರಗಾಮಿಗಳ ಹಾವಳಿ ವಿಪರೀತ. ಅವರೊಂದಿಗೆ ಸೈನಿಕರು ಪದೇಪದೇ ಮುಖಾಮುಖಿಯಾಗುತ್ತಿರುತ್ತಾರೆ. ಗುಂಡಿನ ಚಕಮಕಿ ನಡೆಯುತ್ತಿರುತ್ತದೆ. ಅನೇಕ ಸಂದರ್ಭಗಳಲ್ಲಿ ಉಗ್ರಗಾಮಿಗಳು ನಾಗರಿಕ ಪ್ರದೇಶಗಳಲ್ಲಿ  ಅಡಗಿಕೊಂಡಿರುತ್ತಾರೆ. ಉಗ್ರಗಾಮಿಗಳನ್ನು ಪತ್ತೆಹಚ್ಚಲು ಸದಾ ಯತ್ನಿಸುತ್ತಲೇ ಇರುವ ಯೋಧರ ಮೇಲೆ ಅಡಗುದಾಣಗಳಿಂದಲೇ ಅನಿರೀಕ್ಷಿತ ದಾಳಿ ನಡೆಸುತ್ತಾರೆ. ಇವರು ನಿಖರವಾಗಿ ಎಲ್ಲಿ ಅಡಗಿದ್ದಾರೆ ಎಂಬುದನ್ನು ಪತ್ತೆಹಚ್ಚುವುದು ಅಗತ್ಯ.

 ಅಡಗುದಾಣಗಳಲ್ಲಿ ಎಷ್ಟು ಮಂದಿ ಉಗ್ರಗಾಮಿಗಳಿದ್ದಾರೆ. ಅವರ ಬಳಿ ಇರುವ ಸಲಕರಣೆಗಳೇನು ಎಂಬುದು ತಿಳಿಯುವುದು ಅಗತ್ಯ. ಪ್ರಸ್ತುತ ಇಂಥ ಸಲಕರಣೆಗಳು ಭಾರತೀಯ ಸೇನೆ ಬಳಿ ಇಲ್ಲ. ಆದ್ದರಿಂದ ಅನುಮಾನಸ್ಪದ ಅಡಗುದಾಣಗಳ ಮೇಲೆ ದಾಳಿ ನಡೆಸಿದಾಗ ಅಲ್ಲಿ ಎಷ್ಟು ಜನರಿದ್ದಾರೆ ಎಂದು ತಿಳಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಬಗ್ಗೆ ನಿಖರವಾಗಿ ಅರಿಯಲು ರೇಡಾರ್ ಗಳು ಅತ್ಯವಶ್ಯಕ

ಭಾರತೀಯ ಸೈನಿಕರು ಕೇವಲ ಅಂದಾಜು ಮೇಲೆ ದಾಳಿ ನಡೆಸಲು ಸಾಧ್ಯವಾಗುವುದಿಲ್ಲ. ಇಂಥ ಅತ್ಯಾಧುನಿಕ ಸಾಧನಗಳು ದೊರೆತರೆ ಅವರ ದಾಳಿ ಗುರಿ ಸ್ಪಷ್ಟವಾಗಿರುತ್ತದೆ. ಇಂಥ ಸಾಧನಗಳು ಅಮೆರಿಕಾ ಮತ್ತು ಇಸ್ರೆಲ್ ರಕ್ಷಣಾ ಪಡೆಗಳು ಹೊಂದಿವೆ. ಅಂಥ ಸಾಧನಗಳನ್ನು ಶೀಘ್ರವಾಗಿ ಒದಗಿಸುವಂತೆ ಭಾರತೀಯ ಸೇನೆ ಕೋರಿದೆ.

ಉಗ್ರಗಾಮಿಗಳ ಅಡಗುದಾಣಗಳ ಸನಿಹ ಸೈನಿಕರು ಹೋದಾಗ ಅನಿರೀಕ್ಷಿತ ಶೆಲ್, ಗುಂಡಿನ ದಾಳಿ ನಡೆಯುತ್ತದೆ. ಆದ್ದರಿಂದ ಇಂಥ ರೇಡಾರ್ ಗಳನ್ನು ಬಳಸಿ 60 ಮೀಟರ್ ದೂರದಿಂದಲೇ ಅಡಗುದಾಣಗಳಲ್ಲಿರುವವರ ಚಲನವಲನ ಅರಿಯಬಹುದು. ಅವರಲ್ಲಿರುವ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ಪಡೆಯಬಹುದು. ಇದರಿಂದ ಸೈನಿಕರ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯ.

ಅಂತರಾಷ್ಟ್ರೀಯ ರಕ್ಷಣಾ ಮಾರುಕಟ್ಟೆಯಲ್ಲಿ ಒಂದು ಅತ್ಯಾಧುನಿಕ ರೇಡಾರ್ ಮಾಪಕದ ಬೆಲೆ 60 ಲಕ್ಷ ರೂಪಾಯಿಗಳಿಗೂ ಹೆಚ್ಚು. ಆದರೆ ಸೈನಿಕರ ಅಮೂಲ್ಯ ಜೀವಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದ್ದರಿಂದಲೇ ಕೇಂದ್ರ ರಕ್ಷಣಾ ಸಚಿವಾಲಯ ಇಂಥ ಸಾಧನಗಳಿಗೆ ಬೇಡಿಕೆ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಸೈನಿಕರ ಕೈಸೇರಲಿವೆ. ಇದೇ ಸಂದರ್ಭದಲ್ಲಿ ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ಇಂಥ ಸಾಧನಗಳನ್ನು ಸ್ವದೇಶದಲ್ಲಿಯೇ ರೂಪಿಸುವ ಕಾರ್ಯದಲ್ಲಿ ನಿರತವಾಗಿದೆ.

Similar Posts

Leave a Reply

Your email address will not be published. Required fields are marked *