ಇತ್ತೀಚೆಗೆ ಫೇಸ್ಬುಕ್ಕಿನಲ್ಲಿ ಪತ್ರಕರ್ತ ರಾಜಾರಾಂ ತಲ್ಲೂರು ಅವರು ವಿನೋದ್ ಮೆಹ್ತಾ, ಪಿ. ಲಂಕೇಶ್ ಅವರುಗಳ ಕುರಿತ ತಮ್ಮ ಅಭಿಪ್ರಾಯಗಳನ್ನು ಪೋಸ್ಟ್ ಮಾಡಿದ್ದಾರೆ. ಎರಡೂ ಕೂಡ ಗಂಭೀರ ಪೋಸ್ಟ್ಗಳು. ಒಂದು ಇತ್ತೀಚೆಗೆ ಬರೆದಿದ್ದು, ಮತ್ತೊಂದು ಎರಡು ವರ್ಷದ ಹಿಂದೆ ಬರೆದಿದ್ದನ್ನು ಮತ್ತೆ ಶೇರ್ ಮಾಡಿರುವುದು. ಮೊದಲನೇಯದರಲ್ಲಿ ಪತ್ರಕರ್ತರಾದ ಖುಷ್ವಂತ್ ಸಿಂಗ್, ಪ್ರೀತೀಶ್ ನಂದಿ, ವಿನೋದ್ ಮೆಹ್ತಾ ಮತ್ತು ಲಂಕೇಶ್ ಮಾದರಿಯ ಪತ್ರಿಕೋದ್ಯಮದ ಬಗ್ಗೆ ಲಘು ಟಿಪ್ಪಣಿಗಳನ್ನು ಮಾಡಿದ್ದಾರೆ.

ಮುಖ್ಯವಾಗಿ ವಿನೋದ್ ಮೆಹ್ತಾ, ಲಂಕೇಶ್ ಅವರುಗಳ ಪತ್ರಿಕೋದ್ಯಮ ಮಾದರಿಗಳನ್ನು ಮೆಚ್ಚಿದ್ದಾರೆ. ಅವರ ಅಭಿಪ್ರಾಯಕ್ಕೆ ಅವರ ಪೋಸ್ಟಿನಲ್ಲಿಯೇ ನನ್ನ ಕಾಮೆಂಟ್ ಸಹ ಹಾಕಿದ್ದೇನೆ. ಅವರ ಅಭಿಪ್ರಾಯಕ್ಕೆ ಸಹಮತ ಕೂಡ ಸೂಚಿಸಿದ್ದೇನೆ. ಎರಡನೇ ಪೋಸ್ಟಿನಲ್ಲಿರುವ ಒಂದು ವಾಕ್ಯ ಬಹುವಾಗಿ ಕಾಡಿದೆ. ಅದು ಹೀಗಿದೆ “ಲಂಕೇಶ್ – ವಿನೋದ್ ಮೆಹ್ತಾ. ಈವತ್ತಿಗೂ ಇವರಿಬ್ಬರಂತೆ “ಒಟ್ಟು ಒಳನೋಟಗಳಿರುವ” ಇನ್ನೊಬ್ಬ ಪತ್ರಕರ್ತ ಭಾರತೀಯ ಪತ್ರಿಕೋದ್ಯಮದಲ್ಲಿ ಬಂದದ್ದು ನಂಗೆ ಗೊತ್ತಿಲ್ಲ”

ಇಂಗ್ಲಿಷ್ ಪತ್ರಿಕೊದ್ಯಮದ ಮಾತು ಒತ್ತಟ್ಟಿಗಿರಲಿ. ಕನ್ನಡ ಪತ್ರಿಕೋದ್ಯಮ ವಿಷಯಕ್ಕೆ ಬಂದರೆ ಲಂಕೇಶ್ ಅವರಂತೆ ಒಟ್ಟು ಒಳನೋಟಗಳಿರುವ ಪತ್ರಕರ್ತರು ಬಂದಿಲ್ಲವೇ…. ಖಂಡಿತವಾಗಿಯೂ ಲಂಕೇಶ್ ಅವರು ಹಾಕಿಕೊಟ್ಟ ಪತ್ರಿಕೋದ್ಯಮ ಮಾದರಿಯ ಹಾದಿಯಲ್ಲಿ ನಡೆಯುತ್ತಿರುವ ವಿಶಿಷ್ಟ ಒಳನೋಟಗಳ ಪತ್ರಕರ್ತರು ನಮ್ಮ ನಡುವೆ ಇದ್ದಾರೆ. ಆದರೆ ಅವರುಗಳ ಬಗ್ಗೆ ಹೆಚ್ಚು ಚರ್ಚೆಯಾಗಿಲ್ಲ ಅಥವಾ ಚರ್ಚೆಯೇ ಆಗಿಲ್ಲ. ಇಂಥವರ ಬಗ್ಗೆ ಮಾತನಾಡುವ ಮುನ್ನ ಲಂಕೇಶ್ ಏಕೆ ಓರ್ವ ವಿಭಿನ್ನ ಪತ್ರಕರ್ತ ಎಂಬುವುದರ ಬಗ್ಗೆ ನನ್ನ ಗ್ರಹಿಕೆಗಳನ್ನು ಹಂಚಿಕೊಳ್ಳುತ್ತೇನೆ.

ಇವತ್ತು ‘ಸಿಟಿಜನ್ ಜರ್ನಲಿಸಂ’ ಎಂದು ಕರೆಯುತ್ತೇವೆಯೊ ಆ ಮಾದರಿಯನ್ನು 80ರ ದಶಕದಲ್ಲಿಯೇ ಲಂಕೇಶ್ ಪತ್ರಿಕೆ ಮೂಲಕ ಲಂಕೇಶ್ ಆರಂಭಿಸಿದರು. ಈ ಕಾರಣಕ್ಕಾಗಿಯೇ ಅದು ನಿಜಕ್ಕೂ ಕರ್ನಾಟಕದ ಜಾಣಜಾಣೆಯರ ಪತ್ರಿಕೆ ಎನಿಸಿಕೊಂಡಿತು. ಆವತ್ತಿನವರೆಗೂ ಪತ್ರಿಕೆಗಳು ಹೇಗಿದ್ದವು ಎಂದರೆ ಪತ್ರಿಕೋದ್ಯಮ ಮಾಡುವ ಒಂದು ವರ್ಗ ಸುದ್ದಿಗಳನ್ನು ನೀಡುತ್ತದೆ ಮತ್ತೊಂದು ವರ್ಗವಾದ ಓದುಗರು ಅದನ್ನು ಓದುತ್ತಾರೆ. ಇಲ್ಲಿ ಸಂವಾದಪೂರ್ಣತೆಯ ಕೊರತೆಯಿತ್ತು. ಓದುಗವರ್ಗದ ಅರ್ಥಾತ್ ಜನಸಾಮಾನ್ಯರ ಧ್ವನಿಗಳಿಗೆ ಗಮನಾರ್ಹ ಅವಕಾಶ ಇರಲಿಲ್ಲ. ಇದನ್ನು ಮುರಿದವರು ಲಂಕೇಶ್. ಅಲ್ಲಿ ಜನಸಾಮಾನ್ಯರ ಅಳಲು, ದುಃಖದುಮ್ಮಾನಗಳಿಗೆ ಬಹುದೊಡ್ಡ ಅವಕಾಶ ದೊರೆಯಿತು. ಇದು ಜನವರ್ಗದಲ್ಲಿ ದೊಡ್ಡದೊಂದು ಸಂಚಲನಕ್ಕೂ ಕಾರಣವಾಯಿತು.

‘ಲಂಕೇಶ್ ಪತ್ರಿಕೆ’ ಟ್ಯಾಬ್ಲಾಯಿಡ್ ಮಾದರಿ ಪತ್ರಿಕೆಯದರೂ ಅದರ ಎಲ್ಲ ಮಿತಿಗಳನ್ನು ಮೀರಿತ್ತು. ಅದು ಏಕಕಾಲದಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ ಜೊತೆಗೆ ಅಗತ್ಯವಾದ ಆರ್ಥಿಕ ವಿಶ್ಲೇಷಣೆಗಳ ಪತ್ರಿಕೆಯೂ ಆಗಿತ್ತು. ದಿನಪತ್ರಿಕೆಯಲ್ಲದ ವಾರಕ್ಕೊಮ್ಮೆ ಬರುತ್ತಿದ್ದ ಪತ್ರಿಕೆಯೊಂದು ಇಷ್ಟೆಲ್ಲ ವಿಭಿನ್ನ ಆಯಾಮಗಳಿಗೆ ದನಿಯಾಗಿದ್ದು ಸಾಧಾರಣ ಸಂಗತಿಯಾಗಿರಲಿಲ್ಲ. ಇಷ್ಟೆಲ್ಲಕ್ಕೂ ಲಂಕೇಶ್ ಅವರ ಒಟ್ಟು ಒಳನೋಟಗಳು ಕಾರಣವಾಗಿದ್ದವು.

ಪ್ರಸ್ತಕ ವಿದ್ಯಮಾನಗಳ ಬಗ್ಗೆ ಟೀಕೆ-ಟಿಪ್ಪಣಿ ಓದುಗರಿಗೆ ಸಮಗ್ರ ದೃಷ್ಟಿಕೋನ ನೀಡುತ್ತಿತ್ತು. ಮರೆಯುವ ಮುನ್ನವಂತೂ ಓರ್ವ ಸಂಪಾದಕ ನಿರಂತರವಾಗಿ ತನ್ನ ಓದುಗರೊಡನೆ ಆತ್ಮೀಯವಾಗಿ ಸಂವಾದಿಸುವ ಅಂಕಣವಾಗಿತ್ತು. ಇಷ್ಟೆಲ್ಲ ವೈವಿಧ್ಯತೆ ಇದ್ದ ಕಾರಣಗಳ ಮಾತ್ರದಿಂದಲೇ ಲಂಕೇಶ್, ಕನ್ನಡ ಪತ್ರಿಕೋದ್ಯಮಕ್ಕೆ ಒಂದು ವಿಶಿಷ್ಟ ಪರಂಪರೆ ನಿರ್ಮಿಸಿಕೊಟ್ಟ ಪತ್ರಕರ್ತರು ಎನಿಸಿಕೊಳ್ಳಲಿಲ್ಲ. ಹೀಗೆ ಅನಿಸಿಕೊಳ್ಳಲು ಮತ್ತಷ್ಟು ಮಹತ್ತರ ಕಾರಣಗಳಿದ್ದವು. ಅದರಲ್ಲಿ ನನಗೆ ಬಹುವಾಗಿ ಎದ್ದುಕಾಣುವುದು ಲಂಕೇಶ್ ಜಾತಿವಾದಿಯಾಗಿರಲಿಲ್ಲ. ಪ್ರತಿಭೆಗಳನ್ನು ತುಳಿಯುವ ನಿರ್ದಯಿ ಮನಸಿನವರಾಗಿರಲಿಲ್ಲ.ಅವರಲ್ಲಿ ಮಾನವವಾವಾದಿಯಾದ ಪತ್ರಕರ್ತನಿದ್ದ. ಇಂಥ ಗುಣಗಳು, ಒಳನೋಟಗಳಿರುವ ಪತ್ರಕರ್ತರು ಮತ್ತೆ ಬರಲಿಲ್ಲವೇ….

ಕನ್ನಡ ಪತ್ರಿಕೋದ್ಯಮದಲ್ಲಿ ಇಂದಿಗೂ ಮುದ್ರಣ ಮಾಧ್ಯಮದ ಬಗ್ಗೆ ಮಾತನಾಡುವಷ್ಟು ಟಿವಿ ಮಾಧ್ಯಮದ ಬಗ್ಗೆ ಮಾತನಾಡುವುದಿಲ್ಲ. ಅಲ್ಲಿಯ ಪತ್ರಕರ್ತರುಗಳ ಬಗ್ಗೆ ಗಂಭೀರ ಚರ್ಚೆಗಳೂ ಆಗುವುದಿಲ್ಲ. 2000ನೇ ಇಸ್ವಿಯ ನಂತರ ಕನ್ನಡ ಪತ್ರಿಕೋದ್ಯಮದಲ್ಲಿ ಟಿವಿ ಮಾಧ್ಯಮ ಪ್ರಬಲ ಛಾಪನ್ನು ಮೂಡಿಸಲಾರಂಭಿಸಿತು. ಇದಕ್ಕೂ ಮುಂಚೆಯೇ ಟಿವಿ ಮಾಧ್ಯಮ ಆರಂಭವಾಗಿದ್ದರೂ ಅಲ್ಲಿ ಸುದ್ದಿ ನೀಡುವುದಕ್ಕೆ ಅಗತ್ಯವಿರುವಷ್ಟು ಸ್ಪೆಸ್ ದೊರೆತಿರಲಿಲ್ಲ. ಈ ನಂತರ ಸುದ್ದಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ವಾಹಿನಿಗಳು ಆರಂಭವಾದಾಗ ಅವುಗಳು ತಮ್ಮದೇ ಹಾದಿಯನ್ನು ನಿರ್ಮಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದವು.

ಇಂಥ ಆರಂಭದ ದಿನಗಳಲ್ಲೇ ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ದಾಟಿಕೊಂಡ ಪತ್ರಕರ್ತರು ಸಹಜವಾಗಿಯೇ ಸಂಕ್ರಮಣ ಸ್ಥಿತಿಯಲ್ಲಿದ್ದರು. ಹೊಸದೊಂದು ಹಾದಿಯನ್ನು ನಿರ್ಮಿಸಿಕೊಳ್ಳುವ ಸವಾಲು ಅವರಿಗಿತ್ತು. ಇಂಥ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದವರು ಶಶಿಧರ್ ಭಟ್. ಇವರು ಸದಭಿರುಚಿಯ, ಅತಿರೇಕಗಳಿಲ್ಲದ, ಸುದ್ದಿಯನ್ನು ಸುದ್ದಿಯಾಗಿಯೇ ನೀಡುವ ವಾಹಿನಿ/ವಾಹಿನಿಗಳನ್ನು ಸಮರ್ಥವಾಗಿ ಕಟ್ಟುವ ಕೆಲಸವನ್ನ ಮಾಡಿದರು.

ಸುವರ್ಣ ವಾಹಿನಿಯಲ್ಲಿ ನಿಯಮಿತವಾಗಿ ಸುದ್ದಿಗಳು ಪ್ರಸಾರ ಆಗುತ್ತಿದ್ದ ಸಂದರ್ಭದಲ್ಲಿಯೇ ಅಲ್ಲಿ ಜನಸಮುದಾಯಕ್ಕೆ ತಲುಪಬೇಕಾಗಿದ್ದ ಮಾಹಿತಿಗಳು ಕಲಬೆರಕೆಯಿಲ್ಲದೇ ತಲುಪುತ್ತಿದ್ದವು. ಈ ನಂತರ ‘ಸುವರ್ಣನ್ಯೂಸ್’ ಹೆಸರಿನ ಪೂರ್ಣ ಪ್ರಮಾಣದ ಸುದ್ದಿವಾಹಿನಿಯಾದ ನಂತರವೂ ಅದು ಟ್ಯಾಬ್ಲಯಿಡ್ ಮಾದರಿ ಅಥವಾ ಉತ್ತರದ ವಾಹಿನಿಗಳನ್ನು ಅನುಕರಿಸುವ ಚಾನೆಲ್ ಆಗಲಿಲ್ಲ. ಅದು ಏಕಕಾಲಕ್ಕೆ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ ಜೊತೆಗೆ ಅಗತ್ಯ ಆರ್ಥಿಕ ವಿಶ್ಲೇಷಣೆಗಳನ್ನು ನೀಡುವ ವಾಹಿನಿಯಾಯಿತು. ಇದಕ್ಕೆ ಸಂಪೂರ್ಣ ಕಾರಣ ಶಶಿಧರ್ ಭಟ್. ಇದಕ್ಕೆ ಅವರ ಒಳನೋಟಗಳು, ಗ್ರಹಿಕೆಗಳು ಜೊತೆಗೆ ನನ್ನ ಗ್ರಹಿಕೆಯ ಮಟ್ಟಿಗೆ ಲಂಕೇಶ್ ಅವರು ಬೀರಿದ್ದ ಪತ್ರಿಕೋದ್ಯಮದ ಪರಿಣಾಮವೂ ಆಗಿತ್ತು.

ಹೀಗೆ ನಿರ್ದಿಷ್ಟವಾಗಿ ಹೇಳಲು ಕಾರಣ ನಾನು, ಶಶಿಧರ್ ಭಟ್ ಅವರ ಸಂಪಾದಕತ್ವದಲ್ಲಿ ಕೆಲಸ ಮಾಡಿದ್ದೇನೆ. ಈಗಲೂ ಮಾಡುತ್ತಿದ್ದೇನೆ. ಇದು ಅವರ ಸಂಪಾದಕೀಯತ್ವದ ಮಾದರಿಗಳನ್ನು ಗ್ರಹಿಸಿಕೊಳ್ಳಲು ನೆರವಾಗಿದೆ. ಇದರಿಂದಲೇ ಭಟ್ ಅವರ ಪತ್ರಕರ್ತ ವ್ಯಕ್ತಿತ್ವದ ಬಗ್ಗೆ ಬರೆಯಲು ಸಾಧ್ಯವಾಗಿದೆ.  ಹೆಸರಿನಲ್ಲಿಯೇ ಜಾತಿಸೂಚಕವಿದ್ದರೂ ಶಶಿಧರ್ ಭಟ್ ಜಾತಿವಾದಿಯಲ್ಲ. ಧರ್ಮದ ವಾದಿಯೂ ಅಲ್ಲ. ಜಾತ್ಯತೀತ ಗುಣಗಳನ್ನು ಮೈಗೂಡಿಸಿಕೊಂಡು ಪಾಲಿಸುವ, ಪಾಲಿಸಲು ಪ್ರೇರೇಪಿಸುವ ಪತ್ರಕರ್ತ.

ಉದ್ಯೋಗಿಗಳನ್ನು ನೇಮಿಸಿಸುವ ಸಂಪಾದಕರೊಬ್ಬರು ಜಾತಿ/ಕೋಮುವಾದಿಯಾದರೆ ಪತ್ರಿಕೋದ್ಯಮಕ್ಕಷ್ಟೆ ಅಲ್ಲ. ಅದು ಸುದ್ದಿ ನೀಡುವುದರ ಮೇಲೆ, ಅವುಗಳನ್ನು ಓದುವ ಸಮೂಹದ ಮೇಲೆ ಬೀರುವ ನಕಾರಾತ್ಮಕ ಪರಿಣಾಮ ಅಪಾರ. ಇಂಥ ಕೆಟ್ಟ ಮಾದರಿಗಳ ಉದಾಹರಣೆಗಳನ್ನು ನೋಡಿದ್ದೇವೆ, ನೋಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಪತ್ರಕರ್ತರನ್ನು ನೇಮಿಸಿಕೊಳ್ಳುವಾಗ ಜಾತಿ/ಧರ್ಮ ಪರಿಗಣಿಸದೇ ಪ್ರತಿಭೆಗಷ್ಟೆ ಮಾನ್ಯತೆ ನೀಡುವುದರಿಂದ ಸುದ್ದಿ ಮತ್ತು ಸಮುದಾಯದ ಮೇಲೆ ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ.

ಸಂಪಾದಕ ಶಶಿಧರ್ ಭಟ್, ‘ಕಾವೇರಿ’ ಯಿಂದ ಆರಂಭಿಸಿ ಇಂದಿನ ‘ಸುದ್ದಿಟಿವಿ’ಯ ತನಕ ಇಂಥ ಸಕಾರಾತ್ಮಕ ಗುಣಗಳನ್ನು ರೂಢಿಸಿಕೊಂಡು ಬಂದಿದ್ದಾರೆ. ಇದರಿಂದಲೇ ಹಿಂದುಳಿದ, ಅಲ್ಪಸಂಖ್ಯಾತ, ದಲಿತ ಸಮುದಾಯಗಳ ಯುವಮನಸುಗಳಿಗೆ ಅವಕಾಶಗಳು ಅಪಾರವಾಗಿ ದೊರೆಯಲು, ಬೆಳೆಯಲು ಕಾರಣವಾಗಿದೆ. ಓರ್ವ ಸಂಪಾದಕನಿಗೆ ಇಂಥ ಮನಸು ಬರುವುದು ಒಟ್ಟು ಸಾಮಾಜಿಕ ಒಳನೋಟಗಳು ಮತ್ತು ಗ್ರಹಿಕೆಗಳಿಂದ ಮಾತ್ರ ಸಾಧ್ಯ.

ಪತ್ರಕರ್ತ ಎಂದರೆ ತನಿಖಾಧಿಕಾರಿಯಲ್ಲ. ಆತ ಒಂದು ಸಾಕ್ಷಿಪ್ರಜ್ಞೆ. ಎದುರಿಗೆ ಕುಳಿತ ವ್ಯಕ್ತಿಯನ್ನು ಧಾರ್ಷ್ಟ್ಯದಿಂದ ಪ್ರಶ್ನೆಗಳನ್ನು ಕೇಳುವ, ತಾನು ಕೇಳಿದ ಪ್ರಶ್ನೆಗೆ ಉತ್ತರಿಸಲೇಬೇಕೆಂದು ವರ್ತಿಸುವ ಅಧಿಕಾರ ಇರುವುದಿಲ್ಲ. ಆದರೆ ಬಹುತೇಕ ಪತ್ರಕರ್ತರು ಇದೇ ಮಾದರಿ ಅನುಸರಿಸುತ್ತಾರೆ. ಕೂಗುಮಾರಿಗಳಂತೆ ವರ್ತಿಸುತ್ತಾರೆ. ಇಂಥ ಸಂದರ್ಭದಲ್ಲಿ ಸದಭಿರುಚಿಯ ಸಂದರ್ಶನ ಹೇಗಿರಬೇಕು ಎಂಬುದಕ್ಕೆ ಶಶಿಧರ್ ಭಟ್ ನಡೆಸಿಕೊಡುವ ಸಂದರ್ಶನಗಳು ಮಾದರಿ. ಎದುರಿಗಿರುವ ವ್ಯಕ್ತಿಯನ್ನು ಅನಗತ್ಯವಾಗಿ ಕೆಣಕದೇ, ಬೇಕಾದ ಉತ್ತರಗಳನ್ನು ಹೊರಡಿಸುವುದು ಕೂಡ ಒಂದು ಕಲೆ.

ಪತ್ರಕರ್ತ ಮೂಲಭೂತವಾಗಿ ಓರ್ವ ಪ್ರಜೆ. ಇತರ ಪ್ರಜೆಗಳಿಗಿರುವಂತೆ ಆತನಿಗೂ ತನ್ನದೇ ರಾಜಕೀಯ ಒಲವು-ನಿಲುವುಗಳಿರುತ್ತವೆ. ಆದರಿದು ಒಟ್ಟು ಜನಸಮುದಾಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುವಂತೆ ಇರಬಾರದು. ಓರ್ವ ಬಲಪಂಥೀಯ ಅಥವಾ ಎಡಪಂಥೀಯ ರಾಜಕೀಯ ನಿಲುವುಗಳಿರುವ ಮನೋಭಾವದ ಪತ್ರಕರ್ತ ತನ್ನ ಧೋರಣೆಗಳನ್ನು ಸುದ್ದಿಯ ಮೇಲೆ  ಹೇರುವುದು ಅಪಾಯಕಾರಿ.   ಇಂಥ ಧೋರಣೆಗಳನ್ನು ಕಳಚಿಕೊಂಡು ಸುದ್ದಿಯನ್ನು ಸುದ್ದಿಯಾಗಿ ನೀಡುವುದು, ತಾನೋರ್ವ ಪತ್ರಕರ್ತ ಮಾತ್ರ ಎಂಬ ಸಮಚಿತ್ತ ನಿರ್ವಹಣೆ ಮಾಡುವುದು ಸವಾಲಿನ ಕೆಲಸ. ಮೂಲಭೂತವಾಗಿ ಜಾತ್ಯತೀತ ಮನೋಭಾವದ, ಬಲಪಂಥೀಯ ಧೋರಣೆಯನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದ ಶಶಿಧರ್ ಭಟ್ ನೀಡುವ ಸುದ್ದಿಗಳು, ಸುದ್ದಿಗಳಾಗಿ ಮಾತ್ರ ಇರುತ್ತವೆ.

ಸುದ್ದಿವಾಹಿನಿಗಳ ಭರಾಟೆ ನಂತರ ಜ್ಯೋತಿಷ ಕಾರ್ಯಕ್ರಮಗಳಿಗೆ ಬಹುದೊಡ್ಡ ಅವಕಾಶ ದೊರೆಯಿತು. ಇದರಿಂದ ಸಾಮಾಜಿಕ ಆರೋಗ್ಯದ ಮೇಲೆ ಉಂಟಾದ ಅನಾರೋಗ್ಯದ ಪರಿಣಾಮಗಳು ಅಪಾರ. ಇದು ಸಂಪಾದಕೀಯ ತಂಡ/ ಆಡಳಿತವರ್ಗಕ್ಕೆ ಗೊತ್ತಿಲ್ಲದ ಸಂಗತಿಯಲ್ಲ. ಆದರೆ ಅವರು ಇಂಥ ಕಾರ್ಯಕ್ರಮದಿಂದ ಬರುವ ಟಿ.ಆರ್.ಪಿ. ತನ್ಮೂಲಕ ಬರುವ ದೊಡ್ಡ ಪ್ರಮಾಣದ ಆದಾಯ ಕಳೆದುಕೊಳ್ಳಲು ಸಿದ್ಧವಿರುವುದಿಲ್ಲ. ಇಂಥ ಸಂದರ್ಭದಲ್ಲಿ ಸುದ್ದಿವಾಹಿನಿ ಆರಂಭವಾದಾಗ ಶಶಿಧರ್ ಭಟ್ ತೆಗೆದುಕೊಂಡ ನಿರ್ಧಾರವೆಂದರೆ ನಮ್ಮ ವಾಹಿನಿಯಲ್ಲಿ ಜ್ಯೋತಿಷ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಿಲ್ಲ. ಇದು ಲಂಕೇಶ್ ಪತ್ರಿಕೆಯಲ್ಲಿ ಎಂದೂ ಜ್ಯೋತಿಷ ಕುರಿತ ಕಿಂಚಿತ್ ಸುದ್ದಿಯನ್ನೂ ಪ್ರಕಟಿಸದ ಲಂಕೇಶ್ ನಿಲುವನ್ನೇ ನೆನಪಿಸುತ್ತದೆ. ಸುದ್ದಿವಾಹಿನಿಯಲ್ಲಿ ಕ್ರೈಮ್ ಸುದ್ದಿಗಳ ವಿಜೃಂಭಣೆ ಇಲ್ಲ. ನಿರ್ದಿಷ್ಟ ಬುಲೆಟಿನ್ ಗಳಲ್ಲಿ ಅದರ ಪ್ರಸಾರವೂ ಇರುವುದಿಲ್ಲ. ಇದಕ್ಕಾಗಿಯೇ ನಿರ್ದಿಷ್ಟ ಸಮಯವಿರಿಸಿ ಹೇಳಬೇಕಾದನ್ನು ಕ್ಲುಪ್ತವಾಗಿ ಪ್ರಸಾರ ಮಾಡುತ್ತಿರುವುದು ವಿಶೇಷ.

ಟಿ.ಆರ್.ಪಿ. ಹಿಂದೆಯೇ ದೌಡಾಯಿಸುವ ಮನೋಭಾವದ ಸಂಪಾದಕರೇ ಹೆಚ್ಚಿದ್ದಾರೆ. ಇಂಥ ಹೊತ್ತಿನಲ್ಲಿ ಯಕ್ಷಗಾನ, ರಂಗಭೂಮಿ, ಮಾನಸಿಕ ಸ್ವಾಸ್ಥ್ಯ ಇಂಥ ಸಂಗತಿಗಳ ಕಾರ್ಯಕ್ರಮಗಳಿಗೂ ಅವಕಾಶ ನೀಡುವುದೆಂದರೆ ಅದು ಸಣ್ಣ ಸಂಗತಿಯಲ್ಲ.  ಶಶಿಧರ್ ಭಟ್ ಹೀಗೆ ಮಾಡುವುದರ ಮೂಲಕ ಸುದ್ದಿವಾಹಿನಿಯೊಂದನ್ನು ಕುಟುಂಬವೊಂದಕ್ಕೆ ಆರೋಗ್ಯಪೂರ್ಣ ಸಮೃದ್ಧ ನಿಯತಕಾಲಿಕದ ಮಾದರಿಯಲ್ಲಿ ನೀಡುತ್ತಿರುವುದು ಗಮನಾರ್ಹ.

ಬೆನ್ನ ಹಿಂದೆ ಚೂರಿ ಹಾಕಲು ಹವಣಿಸುವವರು,  ಸುವರ್ಣಾವಕಾಶ, ಸಮಯ  ದೊರೆತಾಗ ಹಾಕಿಯೂ ಬಿಡುವ  ಕೆ್ಟ್ಟ ಮನಸುಗಳ ಬಗ್ಗೆ  ಗೊತ್ತಿದ್ದರೂ ಎಂದೂ ಅವರನ್ನು ತಾನಾಗಿ ದೂರವಿರಿಸದ, ಅವರನ್ನು ಹೊರದಬ್ಬಲು ಯತ್ನಿಸದ ಮನಸ್ಥಿತಿಯ ಪತ್ರಕರ್ತನಾಗುವುದು ಎಂದರೆ ಅದು ಸಾಧಾರಣ ಸಂಗತಿಯಲ್ಲ. ಇಂಥ ನಿಲುವಿನ ಶಶಿಧರ್ ಭಟ್ ಕನ್ನಡ ಸಂದರ್ಭದ ಸುದ್ದಿವಾಹಿನಿಯ ಅಪರೂಪದ ಪತ್ರಕರ್ತ. ಅಂದ ಹಾಗೆ ಹೇಳುವುದು ಮರೆತಿದ್ದೆ. ಓದುಗವರ್ಗ/ ವೀಕ್ಷಕವರ್ಗದೊಡನೆ ಸದಾ ಮುಖಾಮುಖಿಯಾಗಲು ಹಂಬಲಿಸುವ ಪತ್ರಕರ್ತ, ಬರವಣಿಗೆಗಳ ಮೂಲಕ ಅವರಿಗೆ ಸಂವಾದಿಯಾಗಿರುತ್ತಾನೆ. ಇಂಥದೊಂದು ಪ್ರಜ್ಞೆಯನ್ನು ಕುಮ್ರಿ ಬ್ಲಾಗಿನ ಮೂಲಕ ಶಶಿಧರ್ ಚಾಲ್ತಿಯಲ್ಲಿಟ್ಟಿದ್ದಾರೆ.

Similar Posts

Leave a Reply

Your email address will not be published. Required fields are marked *