ಕನ್ನಡ ಕಟ್ಟುವ ಕಾರ್ಯ ಬೇರೆಬೇರೆ ಆಯಾಮಗಳಲ್ಲಿ ನಡೆದಿದೆ; ನಡೆಯುತ್ತಿದೆ; ನಡೆಯುತ್ತದೆ. ಸಂಕ್ರಮಣ ಸ್ಥಿತಿ ಕಾಲಘಟ್ಟದಲ್ಲಿ ಕನ್ನಡದ ರುಚಿ ಹತ್ತಿಸುವ ತುರ್ತು ಇರುತ್ತದೆ. ಕಾವ್ಯ ಇದಕ್ಕೆ ಸಶಕ್ತ. ಇಲ್ಲಿ ಕಾವ್ಯ ಎಂದರೆ ಮೌಖಿಕ ಸಾಹಿತ್ಯ ಪರಂಪರೆಯೂ ಸೇರಿದಂತೆ ನಾಟಕ, ಕವನ, ಸಿನೆಮಾ, ಸಂಗೀತ ಹೀಗೆ ಯಾವುದು ಕನ್ನಡವನ್ನು ಒಳಗೊಂಡಿದೆಯೋ ಅವೆಲ್ಲವನ್ನೂ ಸೇರಿಸಿ. ಬೆಂಗಳೂರಿಗರಿಗೆ ‘ಬೇಂದ್ರ ಬೆಳಗು’ ಕಾವ್ಯದ ಕಾವು ತಾಗಿಸುವಿಕೆಯನ್ನ ‘ಅವಿರತ’ ಮಾಡಿತು. ಈ ಬೆಳಕಾದರೂ ಹೇಗಿತ್ತು ..

ಮಾರ್ಚ್ 5, 2015ರ ಸಂಜೆ ರಾಮಾಂಜನೇಯ ಗುಡ್ಡದಲ್ಲಿ ಬೇಂದ್ರೆ ಅವತರಿಸಿದ್ದರು. ಈ ಕಾವ್ಯ ಗಾರುಡಿಗ ಅಲ್ಲಿ ತಮ್ಮ ಇಂದ್ರಜಾಲ ಪ್ರದರ್ಶಿಸಿದರು. ನೋಡುಗರು ಕೇಳುಗರು ಮಂದಾರದಲ್ಲಿ ತೇಲುವಂತೆ, ನದಿಯಲ್ಲಿ ಮೀಯುವಂತೆ, ಸಮುದ್ರದಲ್ಲಿ ಈಜುವಂತೆ ಮಾಡಿದ್ದರು. ನಾದಲೋಕದಲ್ಲಿ ಸಂಚಾರ ಮಾಡಿಸಿದರು. ಅಲ್ಲಿ ಕಾಲ ನಿಶ್ಚಲವೂ, ಚಲವೂ ಆಗಿತ್ತು !
“ಬಾರೋ ಸಾಧನ ಕೇರಿಗೆ ಮರಳಿ ನೀನೀ ಊರಿಗೆ ಮಳೆಯು ಎಳೆಯುವ ತೇರಿಗೆ ಹಸಿರು ಏರಿದೆ ಏರಿಗೆ ಹಸಿರು ಸೇರಿದೆ ಊರಿಗೆ ಹಸಿರು ಚಾಚಿದೆ ದಾರಿಗೆ ನಂದನದ ತುಣುಕೊಂದು ಬಿದ್ದಿದೆ ನೋಟ ಸೇರದು ಯಾರಿಗೆ” ಈ ಹಾಡು ರಾಮಚಂದ್ರ ಅವರಿಂದ ಹೊಮ್ಮುತ್ತಿದಂತೆಯೇ ಬೆಂಗಳೂರಿಗರು ನಾದದ ಅಲೆಯ ಮುಖಾಂತರ ಸಾಧನಕೇರಿ ತಲುಪಿ ಆಗಿತ್ತು. ಅಲ್ಲಿ ಸಾಕ್ಷತ್ ಬೇಂದ್ರೆ ಬೆಳಗಲ್ಲಿ ಮೀಯಲು ಅವರ ತನು ಮನ ಸಜ್ಜಾಗಿದ್ದವು.
“ಇಳಿದು ಬಾ ತಾಯಿ ಇಳಿದು ಬಾ ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ; ದೇವದೇವರನು ತಣಿಸಿ ಬಾ ದಿಗ್ದಿಗಂತದಲಿ ಹಣಿಸಿ ಬಾ ಚರಾಚರಗಳಿಗೆ ಉಣಿಸಿ ಬಾ” ಜಲಪಾತ ಧುಮ್ಮಿಕುವ ವೇಗದಂತೆ ಆವೇಗದಲ್ಲಿ ರಾಮಚಂದ್ರ ಹಡಪದ್ ಹಾಡುತ್ತಿದ್ದರೆ ಬೇಂದ್ರೆ ಕನ್ನಡ ತಾಯಿಯನ್ನು ಕಾಯಿ ಎಂದು ಕರೆಯುವಂತೆ ಭಾಸವಾಗುತ್ತಿತ್ತು.
“ಹೊಸ ದ್ವೀಪಗಳಿಗೆ  ಹೊರಟಾನ ಬನ್ನಿ, ಅಂದದೋ ಅಂದದಾ ಬಂಗಾರನೀರ ಕಡಲಾಚೆಗೀಚೆಗಿದೆ ನೀಲನೀಲ ತೀರ, ಮಿಂಚುಬಳಗ ತೆರೆತೆರೆಗಳಾಗಿ ಅಲೆಯುವುದು ಪುಟ್ಟ ಪೂರ  ಅದು ನಮ್ಮ ಊರು ಇದು ನಿಮ್ಮ ಊರು  ತಂತಮ್ಮ ಊರೋ ಧೀರ ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ” ಬೇಂದ್ರೆ ಕಾವ್ಯ ಶಕ್ತಿ ಹೇಗಿದೆಯೆಂದರೆ ಅಲ್ಲಿ ಸಂಗೀತ ಅಂತರ್ಗತ. ಗಾಯಕ ಇಲ್ಲಿ ವಾಹಕ. ರಾಮಚಂದ್ರ ಹಡಪದ್ ಅವರು ತೆರೆತೆರೆಯ ರೂಪದಲ್ಲಿ ಇದನ್ನು ಹೊರಹೊಮ್ಮಿಸುತ್ತಿದಂತೆ ಕೇಳುಗರು ಬಂಗಾರನೀರ ಕಡಲಾಚೆಗೀಚೆಗಿದೆ ನೀಲನೀಲ ತೀರ ತಲುಪಿಯಾಗಿತ್ತು !
“ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವ ವಾರದಾಗ ಮೂರುಸರತಿ ಬಂದು ಹೋದಂವಾ, ಭಾರಿ ಜರದ ವಾರಿ ರುಮ್ಮಾಲ ಸುತ್ತಿಕೊಂಡಂವಾ ತುಂಬ-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ ಮಾತುಮಾತಿಗೆ ನಕ್ಕುನಗಿಸಿ ಆಡಿಸ್ಯಾಡಾಂವಾ ಏನೋ ಅಂದರ ಏನೋ ಕಟ್ಟಿ ಹಾsಡಾ ಹಾಡಂವಾ ಇನ್ನೂ ಯಾಕ ಬರಲಿಲ್ಲ” ಬೇಂದ್ರೆ ಬೆಳಗಿನ ನಾಲ್ಕನೆ ಹಾಡಿದು. ಸಖಿಗೀತ ಸಂಗ್ರಹದಲ್ಲಿನ ಈ ಕಾವ್ಯವನ್ನು ಅಂಬಿಕಾತನಯದತ್ತ ಅವರು ನಾಟಕವೊಂದಕ್ಕೆ ಬರೆದರು ಎಂದು ಕೇಳಿದ್ದೇನೆ. ಬೇಂದ್ರೆ ಕಾವ್ಯ ಎಂದರೆ ನವರಸ ಸಾರ. ಇದರ ರಸಾನೂಭೂತಿಯನ್ನು ಗಾರ್ಗಿ ಅವರು ಸೊಗಸಾಗಿ ಕಟ್ಟಿಕೊಟ್ಟರು. ಪ್ರತಿಯೊಂದು ಸಾಲನ್ನು ಅವರು ಅನುಅನುಭವಿಸಿ ಹಾಡಿದರು.
“ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ ಆಗ- ಸಂಜೆಯಾಗಿತ್ತ; ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ ಹಾಳಿಗೆ ಮೇಲಕೆದ್ದಿತ್ತ ಬಿದಿಗಿ ಚಂದ್ರನಾ ಚೊಗಚೀ-ನಗಿ-ಹೂ ಮೆಲ್ಲಗೆ ಮೂಡಿತ್ತ ಮ್ಯಾಲಕ ಬೆಳ್ಳಿನ ಕೂಡಿತ್ತ; ಇರುಳ ಹೆರಳಿನಾ ಅರಳು ಮಲ್ಲಿಗೀ ಜಾಳಿಗೆ ಹಾಂಗೆತ್ತ ಸೂಸ್ಯಾವ ಚಿಕ್ಕಿ ಅತ್ತಿತ್ತ” ಸಂಜೆ ವಿಶ್ರಾಂತಿಗೆಂದು ಸೂರ್ಯ ಚಲಿಸಿದಾಗ ಮುಗಿಲಿನ ಮುಖ (ಮಾರಿ ಎಂದರೆ ಮುಖ ಎಂದರ್ಥ) ದಲ್ಲಿ ರಾಗರತಿಯ ಕಳೆ ಬರುತ್ತದೆ ಎನ್ನುವ ಕವಿ ಕಲ್ಪನೆ ಗಾಯಕಿ ಶೃತಿ ಅವರಿಂದ ಸೊಗಸಾಗಿ ಸಾಕಾರಗೊಂಡಿತು. ಇವರು ಹಾಡುತ್ತಿದ್ದರೆ “ಬೇಂದ್ರೆ ಬೆಳಗು” ವಿನ ಸಂಜೆಯಲ್ಲಿ ಕೇಳುಗರಲ್ಲಿ ಕಾವ್ಯದ ನಂಜು ಅಂದರೆ ನಶೆ ಏರತೊಡಗಿತ್ತು !
“ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ ಸೂರ್ಯನ ಬಿಂಬಕೆ ಚಂದ್ರನ ಬಿಂಬವು ರಂಜಿಸಿ ನಗೆಯಲಿ ಮೀಸುತಿದೆ ಭೂರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ನವೆಯುತಿದೆ ತುಂಬುತ ತುಳುಕುತ ತೀರುತ ತನ್ನೊಳು ತಾನೇ ಸವಿಯನು ಸವಿಯುತಿದೆ ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸೆಯಿಸಿತು ಮಿತ್ರನ ಮೈತ್ರಿಯ ಒಸಗೆ ಮಸಗದಿದೆ ಮರುಕದ ಧಾರೆಯ ಮಸೆಯಿಸಿತು” ಎಷ್ಟು ಕೇಳಿದರೂ ಮತ್ತೆಮತ್ತೆ ಕೇಳಬೇಕೆನ್ನಿಸುವ ಆಯಾ ಕಾಲಘಟ್ಟ; ಸಂದರ್ಭದಲ್ಲಿ ನಮ್ಮ ಮನೋರಾಗಗಳಿಗೆ ತಕ್ಕಂತೆ ಅರ್ಥಗಳನ್ನು ಸ್ಫುರಿಸುವ ಹಾಡಿದು. ‘ಸಾಕ್ಷಾತ್ಕಾರ’ ಚಲನಚಿತ್ರದಲ್ಲಿ ವಿಜಯ ಭಾಸ್ಕರ್ ಅವರ ಸಂಗೀತ ನಿರ್ದೇಶನ, ಪಿ.ಬಿ. ಶ್ರೀನಿವಾಸ ಮತ್ತು ಪಿ. ಸಶೀಲ ಅವರ ಹಿನ್ನೆಲೆ ಗಾಯನ ರಾಜಕುಮಾರ ಮತ್ತು ಜಮುನಾ ಅಭಿನಯದಲ್ಲಿ ಈ ಹಾಡನ್ನು ಕನ್ನಡಿಗರ ಮನೆಮನಗಳಿಗೆ ತಲುಪಿಸುವ ಕಾರ್ಯವನ್ನು ನಿರ್ದೇಶಕ ಪುಟ್ಟಣ್ಣ ಕಣಗಾಲ ಮಾಡಿದ್ದಾರೆ. ಇದೇ ಜನಪ್ರಿಯ ಧಾಟಿಯಲ್ಲಿ ರಾಮಚಂದ್ರ ಹಡಪದ್ ಸುಶ್ರಾವ್ಯವಾಗಿ ಹಾಡಿದರು.

ನಯನಾ ತಾರಾ ಅವರಿಂದ “ಬಿದಿಗೆ ಚಂದ್ರಮ”, ಗಾರ್ಗಿ ಅವರಿಂದ ಹೊಮ್ಮಿದ ‘ಬೆಳದಿಂಗಳ ನೋಡ”, ‘ “ಘಮಘಮಿಸ್ತಾವ ಮಲ್ಲಿಗೆ, ನೀ ಹೊಂಟಿದಿ ಈಗ ಎಲ್ಲಿಗೆ”, “ನಾನು ಬಡವಿ ಆತ ಬಡವ” ಶೃತಿ ಅವರಿಂದ “ಆವು ಈವಿನ ನಾವು ನೀವಿಗೆ ಆನು ತಾನದ ತನನನಾs. ನಾನು ನೀನಿನ ಈ ನಿನಾನಿಗೆ ಬೇನೆ ಏನೋ”, “ಒಂದೇ ಬಾರಿ ನಿನ್ನ ನೋಡಿ”, “ಯಾಕೋ ಕಾಣೆ ರುದ್ರವೀಣೆ”, ” ಮೂಡಲಮನೆಯ ಮುತ್ತಿನ ನೀರಿನ “, ರಾಮಚಂದ್ರ ಹಡಪದ ಅವರಿಂದ ” ನಾರಿ ನಿನ್ನ ಮಾರಿ ಮ್ಯಾಲ”, ” ಶ್ರಾವಣ ಬಂತು ಕಾಡಿಗೆ”, ” ತಾನು ಉಂಡ ಎದೆಯೊಲಮೆ”, “ಕುರುಡು ಕಾಂಚಾಣ ಕುಣಿಯುತಲಿತ್ತಾ” ಹೃದಯಂಗಮವಾಗಿ ಪ್ರಸ್ತುತಿಗೊಂಡವು. ವಾದ್ಯ ವೃಂದದವರು ಕೂಡ ಸೊಗಸಾಗಿ ಜೊತೆ ನೀಡಿದರು.
ಅದರಲ್ಲಿಯೂ ರಾಮಚಂದ್ರ ಹಡಪದ್ ಅವರು ಹಾಡಿದ ‘ನೀ ಹಿಂಗ ನೋಡಬ್ಯಾಡ ನನ್ನ” ಮಗು ಕಳೆದುಕೊಂಡ ತಂದೆ-ತಾಯಿಯ ಶೋಕವನ್ನ ಸಮರ್ಥವಾಗಿ ದಾಟಿಸಿತು. ಇದರ ರಾಗ ಸಂಯೋಜನೆ, ಸಾಲುಸಾಲುಗಳನ್ನ ವಿಸ್ತರಿಸಿ ಹಾಡಿದ ರೀತಿ ಅನನ್ಯ. ಕೇಳುಗರ ಕಣ್ಣಂಚಿನಲ್ಲಿ ನೀರಿನ ಹನಿ ದಾಟಿತ್ತು.
ಬೇಂದ್ರೆ ಅವರ ಕಾವ್ಯ ತನ್ನಷ್ಟಕ್ಕೆ ತಾನೇ ಅರ್ಥ ಆಗುತ್ತದೆ ಆದರೂ ಅದರ ತಿರುಳಿನ ರುಚಿ ಮತ್ತಷ್ಟೂ ಮಗದಷ್ಟು ರುಚಿಸುವಂತೆ ಮಾಡುವುದು ಕೆಲವೊಮ್ಮೆ ಅವಶ್ಯಕ. ಈ ಕಾರ್ಯವನ್ನು ಕವಿ ಹೆಚ್.ಎಸ್. ವೆಂಕಟೇಶಮೂರ್ತಿ, ನಾಟಕಕಾರ ಕೆ.ವೈ. ನಾರಾಯಣ ಸ್ವಾಮಿ ಸೊಗಸಾಗಿ ಮಾಡಿದರು.
ವೆಂಕಟೇಶಮೂರ್ತಿ ಅವರು ಬೇಂದ್ರೆಯ ” ನೋಡಿ” ಎನ್ನುವುದರಲ್ಲಿನ ಕಾಣ್ಕೆ ಕಾಣಿಸಿದರು. ‘ನವೋದಯ ಕಾವ್ಯ ಘಟ್ಟದಲ್ಲಿ ನೋಡುವವರು ಬೇಂದ್ರೆ ಅವರಿಗೆ ಮುಖ್ಯರಾಗುತ್ತಾರೆ. ಬೇಂದ್ರೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದ್ದವರು. ಇವರು ಬೀದಿಬೀದಿ ಅಲೆಯುವ ಅವಧೂತ. ಇಂಥ ಬೇಂದ್ರೆ ನಮ್ಮವ ಅನಿಸಿಕೊಳ್ಳುತ್ತಾರೆ. ಆದರೆ ಹತ್ತಿರ ಹೋದರೆ ತ್ರಿವಿಕ್ರಮರಾಗಿ ಕಾಣುತ್ತಾರೆ. ಇವರು ಸಹಜ ಕವಿ. ಆದರೆ ಇವರ ಎಲ್ಲ ಕಾವ್ಯ ಹಾಡಲಿಕ್ಕೆ ಅಷ್ಟು ಸರಳ ಅಲ್ಲ. ಅನುಭವಿಸಿ ಹಾಡಬೇಕು. ಆಗ ಅದರ ಆಳವಾದ ನೋಟ ಹಿಡಿಯಬಹುದು. ಯುಗದ ಕವಿ ಬೇಂದ್ರೆ ನೋಡುವುದನ್ನು ವಿವರವಾಗಿ, ಸಾವಧಾನವಾಗಿ ನೋಡುವುದನ್ನು ಕಲಿಸುತ್ತಾರೆ. ನೋಡಿ ಎನ್ನುವುದು ಬೇಂದ್ರೆ ಅಂತರ್ಯ” ಎಂದರು.
‘ಅವಿರತ’ ಕಾರ್ಯ’
ಕನ್ನಡ ದಾಟಿಸುವ ಕಾಯಕದಲ್ಲಿ ಅವಿರತ ಶ್ರಮಿಸುತ್ತಿದೆ ಅವಿರತ. ಬೆಂಗಳೂರಿನ ಸಂಜೆಯಲ್ಲಿ “ಬೇಂದ್ರೆ ಬೆಳಗು” ಕುಸುಮಿಸುವಂತೆ, ಪಲ್ಲವಿಸುವಂತೆ ಈ ತಂಡ ಮಾಡಿದೆ. ಇಲ್ಲಿ ಬೇರೆಬೇರೆ ಕ್ಷೇತ್ರಗಳಲ್ಲಿ ದುಡಿಯುತ್ತಾ ಕನ್ನಡದೊಂದಿಗೆ ‘ಅವಿರತ’ ಶ್ರಮಿಸುತ್ತಿರುವ ಬಳಗ ಇದೆ. ವಿಶೇಷವಾಗಿ ಸಮೂಹದ ಸತೀಶ ಗೌಡ , ಕಲರ್ ಕರಿ ನಾಗರಾಜ್, ಅಶ್ವತ್, ಶಶಿ, ಪ್ರಸನ್ನ, ಹರೀಶ್ ಕಾರ್ತಿ ಪರಿಶ್ರಮ ಅನನ್ಯ.
ಕನ್ನಡ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಉನ್ನತೀಕರಣದತ್ತ ಅವಿರತ ಗಮನ ಹರಿಸಿದೆ. ವಿದ್ಯಾರ್ಥಿಗಳ ಏಳಿಗೆಗೆ ಪೂರಕ ಆಗುವ ಎಲ್ಲ ನಿಟ್ಟಿನಲ್ಲಿಯೂ ಶ್ರಮಿಸುತ್ತಿದೆ. ಇದಕ್ಕಾಗಿ ಯೋಜನೆಗಳನ್ನು ಹಮ್ಮಿಕೊಂಡಿದೆ. ಪಠ್ಯ ಪುಸ್ತಕಗಳು, ಟಿಪ್ಪಣಿ (ನೋಟ್) ಪುಸ್ತಕಗಳ ವಿತರಣೆ, ವ್ಯಕ್ತಿತ್ವ ವಿಕಸನಕ್ಕೆ ಸಹಾಯಕ ಆಗುವ ಕಾರ್ಯಕ್ರಮಗಳು ಮತ್ತು ಭಾಷಾ ಸಾಮರ್ಥ್ಯ ಉನ್ನತೀಕರಣ ಇತ್ಯಾದಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.
Similar Posts

Leave a Reply

Your email address will not be published. Required fields are marked *