ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕರ್ನಾಟಕಕ್ಕೆ ಮೂರೇ ತಿಂಗಳ ಅವಧಿಯಲ್ಲಿ ಎರಡು ಬಾರಿ ಭೇಟಿ ಮಾಡಿದ್ದಾರೆ. ಇನ್ನೂ ರಾಷ್ಟ್ರೀಯ ನಾಯಕರಾಗಿ ಗುರುತಿಸಿಕೊಳ್ಳದ ಇವರನ್ನು ಕರ್ನಾಟಕ ಬಿಜೆಪಿ ಘಟಕ ಅಲ್ಪಾವಧಿಯಲ್ಲಿಯೇ ಎರಡು ಬಾರಿ ಕರೆಸುತ್ತದೆ ಎಂದರೆ ಅದರಲ್ಲಿ ವಿಶೇಷವಾದ ಲೆಕ್ಕಾಚಾರಗಳಿವೆ…. ಅದೇನು ಎಂದು ತಿಳಿಯುವ ಮುನ್ನ ನಾಥಪಂಥ ಮತ್ತು ಕರ್ನಾಟಕಕ್ಕೂ ಇರುವ ಸಂಬಂಧಗಳ ಬಗ್ಗೆ ತಿಳಿಯೋಣ…..

UP CM Yogi Adityanath

ನಾಥಪಂಥ ಶೈವ ಸಂಪ್ರದಾಯವನ್ನು ಅನುಸರಿಸುತ್ತದೆ. ಉತ್ತರಪ್ರದೇಶ ರಾಜ್ಯದ ಗೋರಕಪುರದಲ್ಲಿ ಇದರ ಮುಖ್ಯ ಗೋರಕನಾಥ ಕೇಂದ್ರಮಠವಿದೆ. ದಕ್ಷಿಣದ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಮಾತ್ರ ನಾಥಪಂಥದ ಮಠಗಳಿವೆ. ಇಲ್ಲಿಯಷ್ಟೆ ಏಕೆ ಈ ಮಠಗಳು ಸ್ಥಾಪನೆಗೊಂಡವು ಎಂಬುದು ಅಧ್ಯಯನಾರ್ಹವಾದ ವಿಷಯ.

ಕರ್ನಾಟಕದಲ್ಲಿ ಮಂಗಳೂರಿನ ಕದ್ರಿಮಠ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವಿಟ್ಲದಲ್ಲಿರುವ ನಾಥಮಠ, ಮಂಡ್ಯಜಿಲ್ಲೆಯಲ್ಲಿರುವ ಆದಿಚುಂಚನಗಿರಿ ಮಠ ನಾಥಪಂಥದ ಮಠಗಳು. ಬೆಳಗಾವಿ ಜಿಲ್ಲೆಯ ಕಿತ್ತೂರ ಸಮೀಪದಲ್ಲಿ ಹಂಡಿ ಬಡಗನಾಥ ಯಾತ್ರಕೇಂದ್ರವಿದೆ. ಸ್ವಾಮೀಜಿ ಇರುವ ಈ ಮಠವೂ ನಾಥಪಂಥದ ಪ್ರಭಾವ ಹೊಂದಿದೆ ಎನ್ನಲಾಗುತ್ತದೆ.

ಸವದತ್ತಿಯ ಯಲ್ಲಮ್ಮ ದೇವಸ್ಥಾನದ ಸಮೀಪ ಇರುವ ಮಠ ಸಹ ನಾಥಪಂಥದ ಪ್ರಭಾವ ಹೊಂದಿದೆ. ಅಲ್ಲಿ ಈಗಲೂ ಈ ಪಂಥದ ಸನ್ಯಾಸಿಗಳಿದ್ದಾರೆ. ಧಾರವಾಡ ಜಿಲ್ಲೆ ಯಮಸೂರು, ಶಿರಹಟ್ಟಿಯ ಫಕೀರಸ್ವಾಮಿ ಮಠ ಇವುಗಳು ನಾಥ ಪಂಥದ ಪ್ರಭಾವ ಹೊಂದಿರುವ ಮಠಗಳೆಂದು ಹೇಳಲಾಗುತ್ತದೆ. ನಿಪ್ಪಾಣಿ ಸುತ್ತಮುತ್ತಲೂ ನಾಥಪಂಥದ ಸ್ಪಷ್ಟ ಪ್ರಭಾವವಿದೆ. ಇದಕ್ಕೆ ಕಾರಣ ಹದಿನೆಂಟು ಮತ್ತು ಹತ್ತೊಂಭತ್ತನೆ ಶತಮಾನದ ನಡುವೆ ಬದುಕಿದ್ದ ಹಾಲಸಿದ್ಧನಾಥ ಎಂಬ ಸಂತರು ಕಾರಣ. ಇವರು ನಾಥಪಂಥದ ಅನುಯಾಯಿಗಳು. ಇವುಗಳಲ್ಲದೇ ರಾಜ್ಯದ ಇತರ ಕೆಲವೆಡೆಗಳ ಧಾರ್ಮಿಕ ಸ್ಥಳಗಳಲ್ಲಿಯೂ ನಾಥಪಂಥದ ಪ್ರಭಾವ ಇರುವುದು ಕಂಡು ಬರುತ್ತದೆ.

ಮಂಗಳೂರು ಮತ್ತು ವಿಟ್ಲದ ನಾಥಪಂಥದ ಮಠಗಳು ಉತ್ತರದ ಗೋರಕಪುರದ ಗೋರಕನಾಥ ಮಠದೊಡನೆ ಈಗಲೂ ನೇರ ಸಂಪರ್ಕ ಹೊಂದಿವೆ. ಕರ್ನಾಟಕದ ಧಾರ್ಮಿಕ ಪರಂಪರೆ ಮೇಲೆ ಶೈವಪರಂಪರೆ ಬಹಳ ಪ್ರಭಾವ ಬೀರಿದೆ. ಇದರಲ್ಲಿ ನಾಥಪರಂಪರೆ ಉಂಟು ಮಾಡಿದ ಪ್ರಭಾವವೂ ಒಂದು ಅಂಶವಾಗಿದೆ.

ಕರ್ನಾಟಕದಲ್ಲಿ ಇರುವ ಮಠಗಳಲ್ಲಿ ಸಾಕಷ್ಟು ಮಠಗಳು ಶೈವಪರಂಪರೆಯ ನೇರ ಪ್ರಭಾವಕ್ಕೊಳಗಾವಿಯಾದರೂ ಅವುಗಳೆಲ್ಲ ನಾಥಪರಂಪರೆಯ ಮಠಗಳಲ್ಲ. ರಾಜ್ಯದಲ್ಲಿ ನಾಥಪಂಥದ ನೇರ ಪ್ರಭಾವ ಹೊಂದಿರುವ ಮಠಗಳ ಸಂಖ್ಯೆ ಅತಿಕಡಿಮೆ. ಆದರೂ ಇಲ್ಲಿ ಇರುವ ಪ್ರಭಾವವನ್ನೇ ರಾಜಕೀಯಶಕ್ತಿಯಾಗಿ ಪರಿವರ್ತಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಆದ್ದರಿಂದಲೇ 2017ರ ಡಿಸೆಂಬರಿನಲ್ಲಿ ಉತ್ತರದ ಹುಬ್ಬಳ್ಳಿಗೆ 2018ರ ಮಾರ್ಚ್ ಮೊದಲ ವಾರದಲ್ಲಿ ದಕ್ಷಿಣದ ಮಂಗಳೂರಿಗೆ ಮೂಲತಃ ಗೋರಕನಾಥ ಮಠದ ಸನ್ಯಾಸಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಬಿಜೆಪಿ ಕರೆಯಿಸಿತು. ಇದು ಚುನಾವಣೆ ಮೇಲೆ ನೇರ ಕಣ್ಣಿಟ್ಟು ಮಾಡಿದ ರಾಜಕೀಯ ತಂತ್ರ.

ಅದಿರಲಿ…. ನಾಥಪಂಥವನ್ನು ಅನುಸರಿಸುತ್ತಿರುವ ರಾಜ್ಯದ ಸೀಮಿತ ಸಂಖ್ಯೆಯ ಮಠಗಳು ರಾಜಕೀಯ ಪ್ರಭಾವ ಹೊಂದಿವೆಯೇ… ? ಈ ಪ್ರಶ್ನೆಗೆ ಸಂಪೂರ್ಣ ಇಲ್ಲ ಎಂದು ಹೇಳಲಾಗದು ಅಥವಾ ಸಂಪೂರ್ಣ ಹೌದು ಎಂದು ಹೇಳಲಾಗದು. ಏಕೆಂದರೆ ಮಂಡ್ಯ ಜಿಲ್ಲೆಯ ಬೆಳ್ಳೂರಿನಲ್ಲಿ ಪ್ರಮುಖ ಕೇಂದ್ರ ಹೊಂದಿರುವ ಆದಿಚುಂಚನಗಿರಿ ಮಠ ಹೊರತುಪಡಿಸಿದರೆ ಉಳಿದ ಮಠಗಳಿಗೆ ರಾಜಕೀಯ ಪ್ರಭಾವ ಇದೆ ಎಂದು ಹೇಳಲಾಗದು.

ಮಂಗಳೂರು ಭಾಗದಲ್ಲಿ ಬಂಟರು, ಬ್ರಾಹ್ಮಣರು ಮತ್ತು ಹಿಂದುಳಿದ ಜಾತಿಗಳು ಕದ್ರಿದೇಗುಲಕ್ಕೆ ಭಕ್ತಿಪೂರ್ವಕವಾಗಿ ನಡೆದುಕೊಳ್ಳುತ್ತಾರೆ. ಆದರೆ ಇವರ ಮೇಲೆ ಕದ್ರಿಮಠದ ರಾಜಕೀಯ ಪ್ರಭಾವ ಇದೆ ಮತ್ತು ಮಠ ರಾಜಕೀಯ ಪ್ರಭಾವ ಬೀರಲು ಯತ್ನಿಸುತ್ತದೆ ಎಂದು ಹೇಳಲಾಗದು.

ಬೆಳ್ಳೂರಿನಲ್ಲಿರುವ ಆದಿಚುಂಚನಗಿರಿ ಮಠ, ಸುತ್ತಮುತ್ತಲ ಭಾಗಗಳಲ್ಲಿ ಧಾರ್ಮಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪ್ರಭಾವ ಹೊಂದಿರುವ ಶಕ್ತಿಶಾಲಿ ಮಠ. ಬಹು ಹಿಂದಿನಿಂದಲೂ ಇಲ್ಲಿ ಕಾಲಭೈರವನ ಆರಾಧನೆ ಮಾಡಿಕೊಂಡು ಬರಲಾಗುತ್ತದೆ. ಇಲ್ಲಿಗೆ ಒಕ್ಕಲಿಗರಲ್ಲದೇ ಬಹುತೇಕ ಹಿಂದುಳಿದ ಜಾತಿಗಳು ನಡೆದುಕೊಳ್ಳುತ್ತದೆ.

ಮಂಡ್ಯ, ಮೈಸೂರು, ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ ಆದಿಚುಂಚನಗಿರಿ ಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಭಕ್ತರೆಲ್ಲ ಒಂದೇ ರಾಜಕೀಯ ಪಕ್ಷದ ಮೇಲೆ ಒಲವು ಹೊಂದಿದ್ದಾರೆ ಎಂದು ಹೇಳಲಾಗದು. ಇವರೆಲ್ಲ ವಿವಿಧ ರಾಜಕೀಯ ನಿಲುವುಗಳನ್ನು ಸಹಜವಾಗಿಯೇ ಹೊಂದಿದ್ದಾರೆ. ಸನ್ಯಾಸಿಯಾದ ಯೋಗಿ ಆದಿತ್ಯನಾಥರ ಪ್ರಭಾವ ಇವರ ಮೇಲೆ ಉಂಟಾಗುತ್ತದೆ, ಅದು ರಾಜಕೀಯಶಕ್ತಿಯಾಗಿ ಪರಿವರ್ತನೆಯಾಗುತ್ತದೆ ಎಂದು ಹೇಳಲಾಗದು.

ಅಷ್ಟಕ್ಕೂ ಆದಿಚುಂಚನಗಿರಿಯ ಪ್ರಜ್ಞಾವಂತ ಸ್ವಾಮೀಜಿ, ನಿರ್ದಿಷ್ಟ ಪಕ್ಷಕ್ಕೆ ತಮ್ಮ ಒಲವು ಸೂಚಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಬಿಜೆಪಿ ಪದೇಪದೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಕರೆಯಿಸಿ ಚುನಾವಣಾ ಭಾಷಣಗಳನ್ನು ಮಾಡಿಸಿದರೂ ಅದರಿಂದಾಗುವ ಪ್ರಯೋಜನ ತೀರಾ ಸೀಮಿತ. ಇದಕ್ಕೆ ಇನ್ನೊಂದು ಕಾರಣವೂ ಇದೆ. ಕರ್ನಾಟಕದ ಮತದಾರರು ಎಂದಿಗೂ ಹಿಂದುತ್ವ ಅಜೆಂಡ ಬೆಂಬಲಿಸಿದವರಲ್ಲ.ಅತ್ಯಧಿಕ ಸಂಖ್ಯೆಯ ಮತದಾರರು ಸೆಕ್ಯುಲರ್ ಆಗಿ ಯೋಚಿಸಿಯೇ ಮತದಾನ ಮಾಡುತ್ತಾರೆ. ಆದ್ದರಿಂದ ಉತ್ತರಪ್ರದೇಶದಲ್ಲಿ ಆದಿತ್ಯನಾಥರು ಮಾಡಿದ ಭಾಷಣಗಳೂ ಇಲ್ಲಿ ಪರಿಣಾಮಕಾರಿಯಾಗುವುದಿಲ್ಲ ಎಂದೇ ಹೇಳಬೇಕಾಗುತ್ತದೆ.

Similar Posts

Leave a Reply

Your email address will not be published. Required fields are marked *