ಹೈನುಗಾರಿಕೆ ಮಾಡುವಾಗ ಅದನ್ನು ಸುಸ್ಥಿರ ಮಾದರಿಯಲ್ಲಿ ಮಾಡುವುದು ಅಗತ್ಯ. ಹೀಗೆ ಮಾಡಿದಾಗ ಲಾಭಾದಾಯಕ ರೀತಿ ನಿರ್ವಹಣೆ ಮಾಡುವುದು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸ್ವಚ್ಛತೆ, ಪೋಷಕಾಂಶ ಮತ್ತು ಸೂಕ್ತ ಪ್ರಮಾಣದ ಪೋಷಕಾಂಶ ಪೂರೈಕೆ ಅತ್ಯಗತ್ಯ. ಹೈನುರಾಸುಗಳು ಸಾಮಾನ್ಯವಾಗಿ ಸೂಕ್ಷ್ಮ ಆರೋಗ್ಯ ಪ್ರಕೃತಿ ಹೊಂದಿರುತ್ತವೆ. ಆದ್ದರಿಂದ ಅವುಗಳಿಗೆ ಬಾಧಿಸಬಹುದಾಗ ಕಾಯಿಲೆಗಳ ಬಗ್ಗೆ ಮುಂಜಾಗ್ರತೆ ವಹಿಸುವುದು ಅಗತ್ಯ. ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎಂಬ ಅಂಶಗಳು ನಿಮ್ಮ ಮುಂದೆ…

ಹೈನುರಾಸುಗಳಿಗೆ ಅಗತ್ಯ ಪ್ರಮಾಣದಲ್ಲಿ ಪೋಷಕಾಂಶಗಳು ಅಗತ್ಯ. ಇವುಗಳಿಗೆ ಕೊರತೆ ಉಂಟಾದರೆ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಸುಣ್ಣ ಅಂದರೆ ಕ್ಸಾಲ್ಸಿಯಂ, ಕಬ್ಬಿಣ ಮುಂತಾದ ಆಗತ್ಯ ಲವಣಾಂಶಗಳ ಕೊರತೆ ಉಂಟಾಗದಂತೆ ಪಶುಪಾಲಕರು ಗಮನ ಹರಿಸಬೇಕು. ಹೀಗೆ ಮಾಡದಿದ್ದರೆ ಜೀವಸತ್ವಗಳ ಕೊರತೆ ಕಾಣಿಸಿಕೊಂಡು ಜಾನುವಾರುಗಳು ನಿತ್ರಾಣಗೊಳ್ಳುತ್ತವೆ.
ಜಾನುವಾರುಗಳು ತೀವ್ರ ನಿತ್ರಾಣಗೊಂಡರೆ ಸಾವು ಸಹ ಸಂಭವಿಸುತ್ತದೆ. ಆದ್ದರಿಂದ ಇಂಥ ಅನಾಹುತಗಳಿಗೆ ಅವಕಾಶವಾಗದಂತೆ ಹೈನುಗಾರಿಕೆ ಘಟಕದ ನಿರ್ವಹಣೆ ಮಾಡುವುದು ಅಗತ್ಯ. ಇಂದು ಮಾರುಕಟ್ಟೆಯಲ್ಲಿ ದೊರೆಯುವ ಪಶು ಆಹಾರಗಳ ಬೆಲೆ ದುಬಾರಿಯಾಗಿದೆ. ಪರ್ಯಾಯವಾಗಿ ಯಾವ ರೀತಿ ಪೋಷಕಾಂಶಗಳ ಕೊರತೆಯನ್ನು ನಿವಾರಣೆ ಮಾಡುವುದು ಎಂಬ ಅಂಶದ ಬಗ್ಗೆ ಗಮನ ನೀಡಬೇಕು
ಹೈನುಗಾರಿಕೆ ಮಾಡುವವರು ಪಶುವೈದ್ಯರ ಸಲಹೆಯನ್ನು ಪಡೆಯುವುದು ಅತ್ಯಗತ್ಯ. ಇದರ ಜೊತೆಗೆ ಹೈನುಗಾರಿಕಾ ಘಟಕಕ್ಕೆ ಅವರು ನಿಯಮಿತವಾಗಿ ಭೇಟಿ ನೀಡುವಂಥ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಇದರಿಂದ ಯಾವುದೇ ಜಾನುವಾರು ಸೋಂಕಿನಿಂದ ಬಳಲುತ್ತಿದ್ದರೆ ತಕ್ಷಣವೇ ಅದು ತಿಳಿಯುತ್ತದೆ. ಆಗ ಅದರ ನಿವಾರಣೆಗೆ ಅಗತ್ಯ ಔಷಧೋಪಾಚಾರಗಳನ್ನು ಮಾಡುವುದು ಸಾಧ್ಯವಾಗುತ್ತದೆ. ಇದರಿಂದ ಜಾನುವಾರು ಶೀಘ್ರವಾಗಿ ಚೇತರಿಸಿಕೊಳ್ಳುತ್ತದೆ.
ಹೈನುರಾಸುಗಳು ಕುಡಿಯಲು ಶುದ್ಧವಾದ ನೀರು ಪೂರೈಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ನೀರು ತುಂಬುವ ಸಂಗ್ರಹಾಗಾರಗಳನ್ನು ನಿಯಮಿತವಾಗಿ ಸ್ವಚ್ಛ ಮಾಡುತ್ತಿರಬೇಕು, ಇದರಿಂದ ಸಂಗ್ರಹಾಗಾರಗಳಲ್ಲಿ ಪಾಚಿ, ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯಲು ಆಸ್ಪದವಾಗುವುದಿಲ್ಲ. ನೀರನ್ನು ಸಂಗ್ರಹಿಸಿದ ಸ್ಥಳದಲ್ಲಿ ಕೊಳಚೆ ನೀರು ಸೇರದಂತೆ ನೋಡಿಕೊಳ್ಳಬೇಕು.
ಅಶುದ್ಧ ನೀರಿನ ಸೇವನೆಯಿಂದ ಹೈನುರಾಸುಗಳಲ್ಲಿ ಅನೇಕ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಮುಖ್ಯವಾಗಿ ಭೇದಿ ಉಂಟಾಗುತ್ತದೆ. ಶೀಘ್ರವಾಗಿ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಬಳಲಿಕೆ, ನಿಶಕ್ತಿಯಿಂದ ಅವುಗಳ ಸಾವು ಸಹ ಉಂಟಾಗಬಹುದು. ಆದ್ದರಿಂದ ಇಂಥ ದುರ್ಘಟನೆಗಳಿಗೆ ಅವಕಾಶವಾಗದಂತೆ ಹೈನುಗಾರಿಕಾ ಘಟಕದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು.

ಹೈನುರಾಸುಗಳಿಗೆ ಪ್ರತಿದಿನ ಅವಶ್ಯಕ ಪ್ರಮಾಣದಲ್ಲಿ ಮೇವು ಪೂರೈಕೆ ಆಗಬೇಕು. ಒಣಹುಲ್ಲನ್ನೇ ನಿರಂತರವಾಗಿ ನೀಡುತ್ತಿದ್ದರೆ ಅವುಗಳ ಮೇವು ಸೇವನೆ ಆಸಕ್ತಿ, ಪ್ರಮಾಣ ಕುಗ್ಗುತ್ತದೆ. ಇದು ಸಹ ಕಾಯಿಲೆಗೆ ಅವಕಾಶ ಮಾಡಿಕೊಡುತ್ತದೆ. ಆದ್ದರಿಂದ ಒಣಮೇವು ಮತ್ತು ಹಸಿರು ಮೇವನ್ನು ಸೂಕ್ತ ಪ್ರಮಾಣದಲ್ಲಿ ನೀಡಬೇಕು. ಇವುಗಳನ್ನು ಸಣ್ಣದಾಗಿ ಕತ್ತರಿಸಿ ನೀಡುವುದು ಸಹ ಅತಿಮುಖ್ಯ. ಇದರಿಂದ ಪಚನ ಕ್ರಿಯೆ ಸಲೀಸಾಗುತ್ತದೆ.
ಹೈನುರಾಸುಗಳ ಕಾಲುಗಳು ತೀರಾ ಸಣ್ಣಗಾಗಿ, ಅದರ ಹೊಟ್ಟೆ ಉಬ್ಬರಿಸಿಕೊಂಡಿದ್ದರೆ, ಅದರ ದೇಹದ ಮೇಲೆ ಒರಟಾದ ಕೂದಲು ಇದ್ದರೆ ಅಂಥ ರಾಸು ಅಪೌಷ್ಟಿಕತೆಯಿಂದ ಬಳಲುತ್ತಿದೆ ಎಂದು ಅರ್ಥ. ಆದ್ದರಿಂದ ಇದನ್ನು ತಿಳಿಯಲು ಹೈನು ಘಟಕಗಳ ಮೇಲ್ವಿಚಾರಕರು, ಮಾಲೀಕರು ನಿತ್ಯ ಘಟಕಗಳಿಗೆ ಭೇಟಿ ನೀಡುವುದು ಅಗತ್ಯ. ಪ್ರತಿನಿತ್ಯವೂ ಹೈನುರಾಸುಗಳ ಆರೋಗ್ಯ ಪರಿಶೀಲಿಸುತ್ತಿರಬೇಕಾದ ಅಗತ್ಯವಿದೆ.
ಕೊಟ್ಟಿಗೆಯಲ್ಲಿ ಗಾಳಿ-ಬೆಳಕು ಸೂಕ್ತವಾಗಿ ಲಭ್ಯವಾಗದಿದ್ದರೂ ಆ ಸ್ಥಳ ರೋಗಾಣುಗಳ ಬೀಡಾಗುತ್ತದೆ. ಆದ್ದರಿಂದ ಕೊಟ್ಟಿಗೆಯನ್ನು ವೈಜ್ಞಾನಿಕ ಮಾದರಿಯಲ್ಲಿ ನಿರ್ಮಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಅರೆ ತೆರೆದ ಕೊಟ್ಟಿಗೆಗಳು ಸಹಾಯಕವಾಗುತ್ತವೆ. ಇದರಿಂದ ಬೆಳಕು, ಗಾಳಿ ಚೆನ್ನಾಗಿ ದೊರೆಯುತ್ತದೆ. ಬಿಸಿಲು ಮತ್ತು ರಭಸದ ಗಾಳಿಯನ್ನು ತಡೆಯಬಹುದು.

Similar Posts

Leave a Reply

Your email address will not be published. Required fields are marked *