ಚಿತ್ರಮಂದಿರಗಳಲ್ಲಿ ಸೂಪರ್ ಸ್ಟಾರುಗಳ ಸಿನೆಮಾಗಳು ಪ್ರದರ್ಶನ ಆಗುವಾಗ ಪ್ರೊಜೆಕ್ಟರ್ ನಲ್ಲಿ ಏನಾದ್ರೂ ಸಮಸ್ಯೆ ಕಾಣಿಸಿಕೊಂಡು ಚಿತ್ರಪ್ರದರ್ಶನ ನಿಂತರೆ ಗಲಾಟೆ ಶುರುವಾಗ್ತಾ ಇತ್ತು. ಅನೇಕ ಸಂದರ್ಭಗಳಲ್ಲಿ ಪ್ರೇಕ್ಷಕರ ಸಿಟ್ಟಿಗೆ ಅಲ್ಲಿದ್ದ ಆಸನಗಳು, ಅಲಂಕಾರಿಕ ವಸ್ತುಗಳು ಬಲಿಯಾಗ್ತಾ ಇದ್ದವು. ಆದ್ದರಿಂದಲೇ ಸಿನೆಮಾ ಶುರುವಾಗಿ, ಮುಗಿಯೋ ತನಕ ಮುನ್ನ ಚಿತ್ರಮಂದಿರಗಳ ಮಾಲೀಕರು ಚಡಪಡಿಸ್ತಾ ಇದ್ರು. ಅವರ ಬಿಪಿ ತಾರಕಕ್ಕೆ ಏರಿರೋದು.


ಮನೆಗಳ ಹಜಾರಗಳಿಗೆ ಟಿವಿಗಳು ಪ್ರವೇಶ ಮಾಡಿದವು. ದೂರದರ್ಶನ ವೀಕ್ಷಿಸುವಾಗ ಆಗಾಗ ಕೆಲವುಕ್ಷಣ ಪ್ರಸಾರ ನಿಲ್ಲೋದು. ತಕ್ಷಣವೇ ಸ್ಕ್ರೀನ್ ಮೇಲೆ “ಅಡಚಣೆಗಾಗಿ ದಯವಿಟ್ಟು ಕ್ಷಮಿಸಿ” ಕಾಣಿಸಿಕೊಂಡು ಕಲರ್ ಬಾರ್ ಮೂಡ್ತಾ ಇತ್ತು. ನಂತರ ಆ್ಯಂಕರ್ ತೆರೆಮೇಲೆ ಕಾಣಿಸಿಕೊಂಡು “ತಾಂತ್ರಿಕ ತೊಂದರೆಯಿಂದಾಗಿ ಕೆಲಸಮಯ ಪ್ರಸಾರಕ್ಕೆ ಅಡ್ಡಿಯಾಗಿತ್ತು. ಅದಕ್ಕಾಗಿ ವಿಷಾದಿಸುತ್ತೇವೆ” ಎಂದು ಮುಗುಳ್ನಗೆಯೊಂದಿಗೆ ಹೇಳ್ತಾ ಇದ್ರು. ಅಷ್ಟೊತ್ತಿಗೆ ವೀಕ್ಷಕರ ಸಿಟ್ಟು ನೆತ್ತಿಗೇರಿರೋದು. ರಾಮಾಯಣ, ಮಹಾಭಾರತ ನೋಡ್ತಾ ಇರುವಾಗ ಪ್ರಸಾರಕ್ಕೆ ಅಡಚಣೆಯಾದ್ರೆ ನೋಡುಗರು ಬಹಳ ಶಾಪ ಹಾಕ್ತಾ ಇದ್ರು.


ಇದಕ್ಕೂ ಮುಂಚೆ ಇದು, ವೀಕ್ಷಕರು ಟಿವಿಗೆ ಅಡಕ್ಟ್ ಆಗೋದಿಕೆ ತೊಡಗಿದ್ರು ಅನ್ನುವುದನ್ನು ಸೂಚಿಸುತ್ತೆ. ಧಾರವಾಹಿಗಳ ಕಾಲ ಶುರುವಾದ ಮೇಲಂತೂ ಜನ ಸಿನೆಮಾ ಮಂದಿರಗಳಿಂದ ದೂರ ಸರಿಯೋಕೆ ಶುರುವಾದ್ರು. ಕ್ರಮೇಣ ರಂಗಭೂಮಿಗಳಿಗೆ ವೀಕ್ಷಕರೇ ಇಲ್ಲದಿದ್ದ ಪರಿಸ್ಥಿತಿ ಬಂತು. ಸಿನೆಮಂದಿರಗಳ ಸಾಮಾನ್ಯವಾಗಿ ಕಾಣಿಸ್ತಾ ಇದ್ದ ಹೌಸ್ ಪುಲ್ ಬೋರ್ಡ್ ಕೂಡ ಬಹು ಅಪರೂಪಕ್ಕೆ ಕಾಣಿಸತೊಡಗಿತು.
ಅವತ್ತಿನಿಂದ ಶುರುವಾದ ಸಿನೆಮಾ ಪ್ರೇಕ್ಷಕರ ಇಳಿಮುಖ ಸಂಖ್ಯೆ ಇವತ್ತಿಗೂ ಏರಿಲ್ಲ. ಇದರಿಂದ ಸಿನೆಮಾ ಥಿಯೇಟರ್ ಗಳು ಕಡಿಮೆಯಾಗಿ ಶಾಪಿಂಗ್ ಮಾಲುಗಳು, ಅದರೊಳಗೆ ಮಲ್ಟಿಫ್ಲೆಕ್ಸುಗಳು ಬಂದವು. ಇದು ಮಹಾನಗರಗಳ ಪರಿಸ್ಥಿತಿ. ಅದೇ ಹಳ್ಳಿ, ಹೋಬಳಿ, ತಾಲ್ಲೂಕು, ಜಿಲ್ಲಾ ಕೇಂದ್ರಗಳಿಗೆ ಹೋಗಿ ನೋಡಿ. ಚಿತ್ರಮಂದಿರಗಳು ಕಲ್ಯಾಣ ಮಂದಿರಗಳಾಗಿವೆ !. ಇತ್ತೀಚೆಗೆ ಶಾಪಿಂಗ್ ಮಾಲುಗಳು ಸಹ ಭಣಗುಡಲು ಆರಂಭಿಸಿವೆ. ಶನಿವಾರ-ಭಾನುವಾರ ಮಾತ್ರ ಅಲ್ಲಿ ಹೆಚ್ಚಿನ ಜನ ಕಾಣಿಸ್ತಾರೆ.


ಇವತ್ತಿನ ಸಂದರ್ಭದಲ್ಲಿ ನ್ಯೂಸ್ ಚಾನೆಲ್ ಗಳು ಸಹ ಪ್ರೇಕ್ಷಕರ ಕೊರತೆ, ತನ್ಮೂಲಕ ಜಾಹಿರಾತು, ತನ್ಮೂಲಕ ಆದಾಯದ ಕೊರತೆ ಎದುರಿಸುತ್ತಿವೆ. ಇದರಿಂದ ಮಕಾಡೆ ಮಲಗಿಕೊಳ್ಳುತ್ತಿರುವ ಅಂದರೆ ಬಾಗಿಲು ಮುಚ್ಚಿಕೊಳ್ಳುತ್ತಿರುವ ಸುದ್ದಿವಾಹಿನಿಗಳ ಸಂಖ್ಯೆ ಹೆಚ್ಚುತ್ತಿದೆ. ಇದೇ ಸಂದರ್ಭದಲ್ಲಿ ಮನರಂಜನೆಯನ್ನೇ ಪ್ರಧಾನವಾಗಿರಿಸಿಕೊಂಡ ಟಿವಿ ಚಾನೆಲ್ ಗಳ ಪರಿಸ್ಥಿತಿ ಉತ್ತಮವಾಗಿಯೇ ಇದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅವರು ಧಾರವಾಹಿಗಳನ್ನು, ಕ್ವಿಜ್ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಮನರಂಜನಾ ಟಿವಿ ಚಾನೆಲುಗಳ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಲು ಸಾಧ್ಯವೆ ? ಖಂಡಿತ ಇಲ್ಲ. ಅಲ್ಲಿಯೂ ಇತ್ತೀಚೆಗೆ ಡೌನ್ ಪಾಲ್ ಶುರುವಾಗಿದೆ. ಪ್ರೇಕ್ಷಕರು ಕಳೆದುಕೊಳ್ಳುತ್ತಿರುವ ಭೀತಿಯನ್ನು ಅವುಗಳು ಆಡಳಿತ ಮಂಡಳಿಗಳು ಎದುರಿಸುತ್ತಿವೆ.
ಇದಕ್ಕೆ ಕಾರಣವಾದರೂ ಏನು ? ಕಳೆದೊಂದು ದಶಕದಿಂದ ಈ ಕ್ಷಣದವರೆಗೆ ಆಗಿರುವ ಅಗಾಧ ಬದಲಾವಣೆಗಳು. ನಾರ್ಮಲ್ ಟಿವಿಗಳ ಜಾಗದಲ್ಲಿ ಸ್ಮಾರ್ಟ್ ಟಿವಿಗಳು ಬಂದಿವೆ. ಆರಂಭದಲ್ಲಿ ದುಬಾರಿಯಾಗಿದ್ದ ಇವುಗಳ ಬೆಲೆ ಇಳಿಮುಖವಾಗಲು ತೊಡಗಿದೆ. 32 ಇಂಚಿನ ಸ್ಮಾರ್ಟ್ ಟಿವಿ ಬೆಲೆ ಆರೇಳು ಸಾವಿರ ರೂಪಾಯಿಯಿಂದಲೇ ಆರಂಭವಾಗುತ್ತಿದೆ. ಮಧ್ಯಮವರ್ಗಗಳ ಗೋಡೆಯನ್ನು ಇಂಥ ಟಿವಿಗಳು ಅಲಂಕರಿಸಿ ಸಾಕಷ್ಟು ಸಮಯವಾಗಿದೆ. ಕೆಳಮಧ್ಯಮ ವರ್ಗ, ಇದಕ್ಕೂ ಕಡಿಮೆ ಆದಾಯವುಳ್ಳ ವರ್ಗಗಳ ಮನೆಗಳಿಗೂ ಸ್ಮಾರ್ಟ್ ಟಿವಿಗಳು ಬರತೊಡಗಿವೆ.
ಹೀಗೆ ಬರುತ್ತಿರುವ ಸ್ಮಾರ್ಟ್ ಟಿವಿಗಳಿಂದ ಮನರಂಜನಾ ಟಿವಿಗಳಿಗೇನು ಅಪಾಯ ಎಂಬ ಪ್ರಶ್ನೆ ಎದುರಾಗಬಹುದು. ಭಾರತದಲ್ಲಿ ಇವತ್ತು ಇಂಟರ್ ನೆಟ್ ಬಹು ಅಗ್ಗವಾಗಿದೆ. ಆಂಡ್ರಾಯ್ಡ್ ಪೋನುಗಳು ಬಹುಕಡಿಮೆ ದರಕ್ಕೆ ದೊರೆಯುತ್ತಿವೆ. ಒಂದು ಅಂಕಿಅಂಶದ ಪ್ರಕಾರ ಭಾರತದಲ್ಲಿ ಆಂಡ್ರಾಯ್ಡ್ ಪೋನ್ ಉಳ್ಳವರ ಸಂಖ್ಯೆ 30ಕೋಟಿಗೂ ಹೆಚ್ಚು. ದಿನದಿಂದ ದಿನಕ್ಕೆ ಲಕ್ಷಗಳಲ್ಲಿ ಆಂಡ್ರಾಯ್ಡ್ ಪೋನ್ ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಆಂಡ್ರಾಯ್ಡ್ ಪೋನುಗಳಲ್ಲಿ ಟೆದರಿಂಗ್ ಕಾಮನ್ ಆಗಿದೆ. ಇದರ ಮೂಲಕ ಸ್ಮಾರ್ಟ್ ಟಿವಿಗೆ ಇಂಟರ್ ನೆಟ್ ಸಂಪರ್ಕಿಸಿ ನೆಟ್ ಆಧಾರಿತ ಕಾರ್ಯಕ್ರಮಗಳನ್ನು ನೋಡುವ ಹವ್ಯಾಸ ಹೆಚ್ಚುತ್ತಿದೆ. ನೆಟ್ ಫ್ಲಿಕ್ಸ್ ಅಮೆಜಾನ್ ಪ್ರೈಮ್. ಮುಬಿ ಇತ್ಯಾದಿ ಆ್ಯಪ್ ಗಳನ್ನು ಪ್ರಿ ಇನ್ ಸ್ಟಾಲ್ ಮಾಡಿಕೊಂಡ ಸ್ಮಾರ್ಟ್ ಟಿವಿಗಳು ಹೆಚ್ಚಿವೆ. ಇವುಗಳ ಚಂದಾದಾರಿಕೆ ಬೆಲೆಯೂ ಕೈಗೆಟ್ಟುಕುತ್ತಿದೆ. ಮನರಂಜನಾ ಟಿವಿಗಳ ಅದೇ ಅತ್ತೆಸೊಸೆಯರ ಜಗಳ, ಮನೆಮುರುಕ ಪಾತ್ರಗಳಿರುವ ಧಾರವಾಹಿಗಳನ್ನು ನೋಡಿದವರಿಗೆ ಈ ಆ್ಯಪ್ ಗಳ ಮೂಲಕ ನೋಡಸಿಗುತ್ತಿರುವ ಧಾರವಾಹಿಗಳು ಫ್ರೆಶ್ ಎನಿಸುತ್ತಿವೆ. ಹೈಸ್ಕೂಲು, ಕಾಲೇಜು ವಿದ್ಯಾರ್ಥಿಗಳು, ನಿರುದ್ಯೋಗಿ, ಉದ್ಯೋಗಿ ಯುವಜನತೆಯಲ್ಲಂತೂ ಇದರ ವೀಕ್ಷಣೆ ಸಾಮಾನ್ಯವಾಗಿದೆ.
ಜೂನ್ 21ರ ಶುಕ್ರವಾರ ಭಾರತೀಯ ಕಾಲಮಾನದ ಪ್ರಕಾರ ಅಪರಾಹ್ನ 12. 15ರ ಸುಮಾರಿಗೆಅಮೆರಿಕಾ, ಇಂಗ್ಲೆಡ್, ಬ್ರೆಜಿಲ್ ಇತ್ಯಾದಿ ದೇಶಗಳಲ್ಲಿ ‘Netflix Site Error’ ಆಗಿದೆ. ಇದು ಕೆಲವೇ ನಿಮಿಷಗಳ ಮಟ್ಟಿಗೆ ಆಗಿದ್ದು. ಇಷ್ಟೇ ಕಡಿಮೆ ಸಮಯದಲ್ಲಿ ಅಪಾರ ಸಂಖ್ಯೆಯ ಮಂದಿ ವೀಕ್ಷಕರು ಬಹುಸಿಟ್ಟಿನಿಂದ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್, ವಾಟ್ಸಪ್ ಗಲ್ಲಿ ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ. ಅವುಗಳ ಸ್ಕ್ರೀನ್ ಶಾಟುಗಳನ್ನು ಈ ಮುಂದೆ ಕೊಟ್ಟಿದ್ದೀನಿ ಗಮನಿಸಿ.


ಈ ಬೆಳವಣಿಗೆ ಚಿತ್ರಮಂದಿರಗಳಲ್ಲಿ ಸೂಪರ್ ಸ್ಟಾರುಗಳ ಸಿನೆಮಾ ವೀಕ್ಷಣೆ ವೇಳೆ, ಟಿವಿಗಳಲ್ಲಿ ಮಹಾಭಾರತ, ರಾಮಾಯಣ ಪ್ರಸಾರವಾಗುತ್ತಿದ್ದಾಗ ಅಡಚಣೆ ಉಂಟಾದರೆ ಪ್ರೇಕ್ಷಕರು ತೋರುತ್ತಿದ್ದ ಸಿಟ್ಟನ್ನೇ ನೆನಪಿಸುತ್ತಿದೆಯಲ್ಲವೆ…? ಆದರೆ ನೆಟ್ ಫ್ಲಿಕ್ಸ್ ಸ್ಟ್ರೀಮಿಂಗ್ ನಲ್ಲಿ ಅಡಚಣೆ ಆದಾಗ ವೀಕ್ಷಕರಿಗೆ ಉಂಟಾದ ಸಿಟ್ಟು ಅದಕ್ಕೂ ಹೆಚ್ಚಿನದು. ಇದಕ್ಕೆ ಕಾರಣ, ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್, ಮುಬಿಯಂಥ ಆ್ಯಪ್ ಗಳನ್ನು ನೋಡುವಿಕೆ ಹವ್ಯಾಸದ ಹಂತವನ್ನೂ ಮೀರಿ ವ್ಯಸನವಾಗುತ್ತಿರುವುದು. ಪ್ರತಿದಿನ ಬಿಡುವಿನ ಅವಧಿಯಲ್ಲಿ ಅಂದರೆ ಪ್ರಯಾಣಿಸುವಾಗ, ಊಟ ಮಾಡುವಾಗ, ನಿದ್ರೆ ಬಾರದೇ ಮಲಗಿರುವಾಗ ಈ ಆ್ಯಪುಗಳ ವೀಕ್ಷಣೆಯನ್ನು ಹವ್ಯಾಸ ಮಾಡಿಕೊಂಡಿರುವುದು. ದಿನದಿಂದ ದಿನಕ್ಕೆ ಇಂಥ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ.


ನೆಟ್ ಫ್ಲಿಕ್ಸ್ ಜಾಗತಿಕ ಮಟ್ಟದಲ್ಲಿ ಅಂತರ್ಜಾಲ ಆಧರಿಸಿದ ಕಾರ್ಯಕ್ರಮಗಳನ್ನು ರೂಪಿಸುವ ಬೃಹತ್ ಸಂಸ್ಥೆ. 190ಕ್ಕೂ ಹೆಚ್ಚಿನ ದೇಶಗಳಲ್ಲಿ ಇದರ ಸೇವೆ ಸಿಗುತ್ತಿದೆ. 148 ಮಿಲಿಯನ್ ಗಿಂತಲೂ ಹೆಚ್ಚಿನ ಪಾವತಿ ಚಂದಾದಾರರಿದ್ದಾರೆ. ಇದಕ್ಕೆ ಅಮೆಜಾನ್ ಪ್ರೈಮ್ ಸಂಸ್ಥೆ, ಬಹುದೊಡ್ಡ ಪೈಪೋಟಿ ನೀಡುತ್ತಿದೆ. ಇವುಗಳ ನಡುವೆ ಮುಬಿ ಸಿಲುಕಿಕೊಂಡು ನಜ್ಜುಗುಜ್ಜಾಗುವ ಪರಿಸ್ಥಿತಿಯಲ್ಲಿದೆ.


ಈ ಸಂಸ್ಥೆಗಳ ನಡುವಿನ ಪೈಪೋಟಿ ಹೇಗಿದೆಯೆಂದರೆ ಒಂದು ತಿಂಗಳ ಕಾಲ ಉಚಿತ ವೀಕ್ಷಣೆ ಅವಕಾಶ ಮಾಡಿಕೊಡುತ್ತವೆ. ಇಷ್ಟು ಅವಧಿ ನೋಡಿದವರಲ್ಲಿ 90% ಮಂದಿ ಚಂದಾದಾರರಾಗುತ್ತಾರೆ ಎಂದು ಹೇಳಲಾಗಿದೆ. ಇದಕ್ಕೆ ಕಾರಣ ಅವುಗಳಲ್ಲಿರುವ ವೈವಿಧ್ಯಮಯ, ಗುಣಮಟ್ಟದ ಕಾರ್ಯಕ್ರಮಗಳು ಹತ್ತಿಸುವ ಹೊಸರುಚಿ. ಉತ್ತಮ ಗುಣಮಟ್ಟದ ಸಿನೆಮಾಗಳನ್ನು, ಧಾರವಾಹಿಗಳನ್ನು, ಡಾಕ್ಯುಮೆಂಟರಿಗಳನ್ನು ಸಾಕಷ್ಟು ಹಣ ಕೊಟ್ಟು ಖರೀದಿಸುತ್ತಿವೆ. ಇದರ ಜೊತೆಗೆ ತಾವೂ ಅಂತವುಗಳನ್ನು ನಿರ್ಮಾಣ ಮಾಡುತ್ತಿವೆ. ನೆಟ್ ಮೂಲಕವೇ ಹೊಸ ಸಿನೆಮಾಗಳನ್ನು ಬಿಡುಗಡೆ ಮಾಡುವ ಪರಿಪಾಠವನ್ನು ಹೆಚ್ಚಿಸುತ್ತಿವೆ.
ಪ್ರತಿಗಂಟೆಗೂ ಈ ಆ್ಯಪ್ ಗಳ ಚಂದಾದಾರರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಆಗುವ ಪರಿಣಾಮಗಳಾದರೂ ಏನು ? ಸಾಂಪ್ರದಾಯಿಕವಾಗಿ ಸಿನೆಮಾ ನಿರ್ಮಾಣವನ್ನೇ ಮಾಡಿಕೊಂಡು ಬಂದ ಸಂಸ್ಥೆಗಳು ಮುಚ್ಚಿಹೋಗುತ್ತವೆ. ಸಿನೆಮಾ ಮಂದಿರಗಳಲ್ಲಿಯೇ ಹೊಸ ಸಿನೆಮಾಗಳನ್ನು ಬಿಡುಗಡೆ ಮಾಡುವ ಸಂಪ್ರದಾಯಕ್ಕೆ ತಿಲಾಂಜಲಿ ಬೀಳುತ್ತದೆ. ಇದರಿಂದ ಮಲ್ಟಿಫ್ಲೆಕ್ಸುಗಳು, ಅಳಿದುಳಿದ ಚಿತ್ರಮಂದಿರಗಳು ಪ್ರೇಕ್ಷಕರ ಕೊರತೆಯಿಂದ ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಿಸುತ್ತವೆ. ಅಮೆರಿಕಾದಲ್ಲಿ ಈಗಾಗಲೇ ಇಂಥ ಸ್ಥಿತಿ ಆರಂಭವಾಗಿದೆ. ಇವೆಲ್ಲದರ ಪರಿಣಾಮ ಸಾಂಪ್ರದಾಯಿಕ ಚಿತ್ರೋದ್ಯಮದ ಮೇಲೂ ಆಗುತ್ತದೆ.
ಭಾರತದಲ್ಲಿಯೂ ಇಂಥ ಪರಿಸ್ಥಿತಿಯ ಮೊಳಕೆಗಳು ಈಗಾಗಲೇ ಕಾಣಿಸಿಕೊಂಡಿವೆ. ಇದಕ್ಕೆ ಮೊದಲೇ ಹೇಳಿದ ಹಾಗೆ ಅಗ್ಗದ ದರದಲ್ಲಿ ದೊರೆಯುವ ಇಂಟರನೆಟ್, ಆಂಡ್ರಾಯ್ಡ್ ಪೋನುಗಳು, ಸ್ಮಾರ್ಟ್ ಟಿವಿಗಳು ಕಾರಣವಾಗುತ್ತವೆ. ಈಗಾಗಲೇ ಒಂದಷ್ಟು ಸಂಸ್ಥೆಗಳು ನೆಟ್ಟಿನಲ್ಲಿಯೇ ಹೊಸಸಿನೆಮಾಗಳನ್ನು ಬಿಡುಗಡೆ ಮಾಡುವ ಪರಿಪಾಠಕ್ಕೆ ನಾಂದಿ ಹಾಡಿವೆ. ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ನಂಥ ಭಾರಿ ಸಂಸ್ಥೆಗಳು ಭಾರತದ ನೆಲದಲ್ಲಿಯೂ ಅಪಾರ ಬಂಡವಾಳ ತೊಡಗಿಸುತ್ತಿವೆ. ಭಾರಿ ಜನಪ್ರಿಯ ಎನಿಸಿದ ಸಿನೆಮಾಗಳು ಸಹ ಕೆಲವೇ ದಿನಗಳಲ್ಲಿ ಇವುಗಳ ಭಂಡಾರ ಸೇರುತ್ತಿವೆ. ಸಿನೆಮಾದ ಮಜಲುಗಳು ಹೇಗೆ ಬದಲಾಗುತ್ತಿದೆ ಅಲ್ಲವೆ…? ಎಲ್ಲಿಂದ ಎಲ್ಲಿಗೆ ಪಯಣ. ಬದಲಾವಣೆ ಎನ್ನುವುದು ನಿರಂತರವಾಗಿ ನಡೆದುಕೊಂಡು ಬಂದಿದೆ. ಬಂದಿದ್ದನ್ನು ಸ್ವೀಕರಿಸುವುದು ಮಾತ್ರ ಅನಿವಾರ್ಯ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ “ಕಾಲೈ ತಸ್ಮೈ ನಮಃ

Similar Posts

Leave a Reply

Your email address will not be published. Required fields are marked *