• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಕನ್ನಡಕ್ಕೆ ಸಮರ್ಥ ಪ್ರತಿನಿಧಿಗಳ ಕೊರತೆ - ಪ್ರೊ. ಪುರುಷೋತ್ತಮ ಬಿಳಿಮಲೆ

ಡಿಸೆಂಬರ್ 2016ರ ಮೂರನೇ ವಾರದಲ್ಲಿ ದೆಹಲಿಯ ಜವಾಹರಲಾಲ್ ನೆಹ್ರು ವಿಶ್ವವಿದ್ಯಾಲಯದ ಆವರಣ (ಜೆ.ಎನ್.ಯು.)ದಲ್ಲಿ ಅಲ್ಲಿನ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಪ್ರೊ. ಪುರುಷೋತ್ತಮ ಬಿಳಿಮಲೆ ಅವರನ್ನು ಭೇಟಿಯಾಗಿದ್ದೆ. ಈ ಸಂದರ್ಭದಲ್ಲಿ ಅವರ ಸಂದರ್ಶನ ಮಾಡಿದೆ. ಅವರ ಮಾತುಗಳು ಪ್ರಪಂಚದ ಶ್ರೀಮಂತ, ಸಮೃದ್ಧ ಭಾಷೆಗಳಲ್ಲಿ ಒಂದಾಗಿರುವ ಕನ್ನಡದ ಅನನ್ಯತೆಯನ್ನು ಕನ್ನಡಿಗರ ಪ್ರತಿನಿಧಿಗಳು ಸಮರ್ಥವಾಗಿ ಬಳಸಿಕೊಳ್ಳದ, ಬಿಂಬಿಸದ ವಿಫಲತೆಯನ್ನು ಹೇಳುತ್ತವೆ. ತುರ್ತಾಗಿ ಆಗಬೇಕಿರುವ ಕಾರ್ಯಗಳ ವಿವರಗಳನ್ನು ತೆರೆದಿಡುತ್ತವೆ. ಇದರ ಮೊದಲ ಭಾಗ ನಿಮ್ಮ ಮುಂದಿದೆ. ದಯವಿಟ್ಟು ಓದಿ ಪ್ರತಿಕ್ರಿಯಿಸಿ.
ಕನ್ನಡದ ಓದುಗ ಬಳಗಕ್ಕೆ ಪುರುಷೋತ್ತಮ ಬಿಳಿಮಲೆ ಅವರ ಪರಿಚಯ ಇದ್ದೇ ಇದೆ. ಆದರೂ ಅವರ ಸಂದರ್ಶನವನ್ನು ನಿಮ್ಮ ಮುಂದಿಡುವಾಗ ಅವರ ಕಿರು ಪರಿಚಯ ಮಾಡಿಕೊಡುವುದು ಕರ್ತವ್ಯ. ಬಿಳಿಮಲೆ ಅವರು ಕನ್ನಡದ ಬಹುಮುಖ್ಯ ವಿದ್ವಾಂಸರು. ಇಲ್ಲಿನ ಜಾನಪದ, ಯಕ್ಷಗಾನದ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಾರೆ. ಕನ್ನಡದ ಸಂಸ್ಕೃತಿ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲವರು. ಜೊತೆಗೆ ಯಾವುದೇ ಮುಲಾಜಿಲ್ಲದೆ ತಮ್ಮ ಗಮನಕ್ಕೆ ಬಂದ ವಿಷಯವನ್ನು ಮುಂದಿಡುತ್ತಾರೆ. ಕನ್ನಡ ಮತ್ತು ಅದರ ಸಂಸ್ಕೃತಿ ಬಗ್ಗೆಗಿನ ಪ್ರೀತಿ ಅಂಥ ಶಕ್ತಿಯನ್ನು ಇವರಿಗೆ ನೀಡಿದೆ.
ಕನ್ನಡದ ವಿದ್ವಾಂಸ ಪ್ರೊ. ಪುರುಷೋತ್ತಮ ಬಿಳಿಮಲೆ
ಕುಮಾರ ರೈತ: ಕನ್ನಡ ಕಟ್ಟುವ ಕೆಲಸದಲ್ಲಿ ಉತ್ತರ ಭಾರತದಲ್ಲಿರುವ ಜೆ.ಎನ್.ಯು. ಕನ್ನಡಪೀಠ ಯಾವ ರೀತಿ ತೊಡಗಿಸಿಕೊಳ್ಳಬಹುದು
ಪುರುಷೋತ್ತಮ ಬಿಳಿಮಲೆ: ಕಳೆದ ಒಂದು ವರ್ಷದಿಂದ ಜೆ.ಎನ್.ಯು.ವಿನಲ್ಲಿ ಕನ್ನಡಪೀಠದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥನಾಗಿ ಕೆಲಸ ಮಾಡ್ತಾ ಇದ್ದೇನೆ. ಕೆಲಸ ಮಾಡುವ ರೀತಿಯಲ್ಲಿ ಮೂಲತಃ ಎರಡು ರೀತಿ ಇದೆ. ಉತ್ತರ ಪ್ರದೇಶದ ಬನಾರಸ್ ವಿವಿಯಲ್ಲಿ ಒಂದು ಕನ್ನಡ ಅಧ್ಯಯನ ಪೀಠ ಇತ್ತು. ಈಗ ಅಲ್ಲಿ ಯಾರೂ ಅಧ್ಯಾಪಕರು/ ಪ್ರಾಧ್ಯಾಪಕರು ಇಲ್ಲದೇ ಮುಚ್ಚಿಹೋಗಿದೆ. ಅಹಮದಾಬಾದ್ ವಿವಿಯಲ್ಲಿ ಇದ್ದ ಕನ್ನಡ ಅಧ್ಯಯನಪೀಠವೂ ಮುಚ್ಚಿಹೋಗಿದೆ. ಹಾಗೆ ಡೆಲ್ಲಿ ವಿವಿಯಲ್ಲಿದ್ದ ಪೀಠವೂ ಮುಚ್ಚಿದೆ. 
ಪ್ರಸ್ತುತ ದೆಹಲಿಯ ಜವಾಹರ್ಲಾಲ್ ನೆಹ್ರು ವಿವಿಯಲ್ಲಿ ಕಳೆದ ಒಂದು ವರ್ಷದಿಂದ ಕನ್ನಡಪೀಠ ಶುರುವಾಗಿದೆ. ಇಂಥ ಕಡೆ ಕೆಲಸ ಮಾಡುವ ರೀತಿ ಸ್ಥಳೀಯವಾಗಿ ಕೆಲಸ ಮಾಡುವ ರೀತಿಗಿಂತ ಭಿನ್ನ. ಕರ್ನಾಟಕ ಎಂಬ ರಾಜ್ಯ, ಭಾರತದಲ್ಲಿ ಇದೆ ಎಂಬುದೇ ಬಹಳ ಜನ ಉತ್ತರ ಭಾರತೀಯರಿಗೆ ಗೊತ್ತಿಲ್ಲ. ಇದನ್ನು ಹೇಳುವಾಗ ನನಗೆ ಬಹಳ ಬೇಸರ ಆಗುತ್ತದೆ (ವಿಷಾದ ಭಾವ) 
ಉದಾಹರಣೆಗೆ ಒಂದು ವಿಷಯ ಹೇಳುತ್ತೇನೆ. ಜಯಲಲಿತಾ ಅವರು ತೀರಿಕೊಂಡಾಗ ಅದೊಂದು ರಾಷ್ಟ್ರೀಯ ಸುದ್ದಿ ಆಯಿತು. ಆಲ್ ಇಂಡಿಯಾ ರೇಡಿಯೋ ಕೂಡ ಶೋಕಾಚರಣೆ ಮಾಡಿತು. ಎಲ್ಲ ರಾಷ್ಟ್ರೀಯ ಸುದ್ದಿವಾಹಿನಿಗಳು ಈ ಸಂಗತಿಗೆ ಆದ್ಯತೆ ನೀಡಿ ಸುದ್ದಿ ಪ್ರಸಾರ ಮಾಡಿದವು. ಚರ್ಚೆ ನಡೆಸಿದವು. ತಮಿಳುನಾಡಿನ ಮುಖ್ಯಮಂತ್ರಿಯೊಬ್ಬರು ನಿಧನರಾದರೆ ಉತ್ತರಭಾರತದಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಹಾಗೆ ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು, ತೆಲಂಗಾಣದಲ್ಲಿ ಚಂದ್ರಶೇಖರ ರಾವ್ ಮಾತನಾಡಿದರೆ ಸಹ ಸುದ್ದಿಯಾಗುತ್ತದೆ. 
ಕರ್ನಾಟಕ ಯಾವರೀತಿಯಿಂದಲೂ ಸುದ್ದಿಯಾಗಿಲ್ಲ
ಇಪ್ಪತ್ತು ವರ್ಷಗಳಿಂದ ದೆಹಲಿಯಲ್ಲಿದ್ದೇನೆ. ಕರ್ನಾಟಕ ಹೀಗೆ ಯಾವ ರೀತಿಯಲ್ಲಿಯೂ ಸುದ್ದಿಯಾಗಿದ್ದನ್ನು ನಾನು ನೋಡಿಲ್ಲ. ಕೇಳಿಲ್ಲ. ಇಲ್ಲಿಯೂ ಪ್ರಭಾವಿ ಸಿಎಂಗಳು ನಿಧನರಾಗಿದ್ದಾರೆ. ದೊಡ್ಡದೊಡ್ಡ ಜನನಾಯಕರು ತೀರಿಕೊಂಡಿದ್ದಾರೆ. ರಾಜ್ಯಕ್ಕೆ, ರಾಷ್ಟ್ರಕ್ಕೆ ಘನತೆ ತಂದುಕೊಟ್ಟ ವ್ಯಕ್ತಿಗಳು ನಿಧನರಾದಾಗಲೂ ಉತ್ತರಭಾರತದಲ್ಲಿ ಅದು ಸುದ್ದಿಯಾಗುವುದೇ ಇಲ್ಲ. 
ರಾಜ್ಯದ ಪ್ರತಿನಿಧಿಕರಣ ದುರ್ಬಲ
 ಇದಕ್ಕೆ ಮುಖ್ಯ ಕಾರಣ, ರಾಷ್ಟ್ರಮಟ್ಟದಲ್ಲಿ ರಾಜ್ಯದ ಪ್ರತಿನಿಧಿಕರಣ ಬರೀ ದುರ್ಬಲವಲ್ಲ. ಅತ್ಯಂತ ದುರ್ಬಲವಾಗಿರುವುದು. ಹಾಗೆ ನೋಡಿದರೆ ರಾಷ್ಟ್ರಮಟ್ಟದಲ್ಲಿ ರಾಜ್ಯದ ಪ್ರತಿನಿಧಿಗಳು ಇಲ್ಲವೇ ಇಲ್ಲ ಎಂದು ಹೇಳಬಹುದು. ದಶಕಗಳ ಹಿಂದೆ ಶಿವರಾಮ ಕಾರಂತರು ದೆಹಲಿಯ ಸಂಗೀತ ನಾಟಕ ಅಕಾಡೆಮಿಗೆ ಬಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ತಾ ಇದ್ರು. ಬಿ.ವಿ. ಕಾರಂತರು ಬಂದು ರಾಷ್ಟ್ರೀಯ ನಾಟಕ ಅಕಾಡೆಮಿಯಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ರು. ಗಿರೀಶ್ ಕಾರ್ನಾಡ್ ಸಹ ಇಲ್ಲಿನ ಸಾಂಸ್ಕೃತಿಕ ವಲಯದಲ್ಲಿ ಕೆಲಸ ಮಾಡಿದ್ದಾರೆ. ಸಾಂಸ್ಕೃತಿಕವಾಗಿ ನೋಡಿದಾಗ ಒಂದಿಷ್ಟೆ ಪ್ರತಿನಿಧಿಕರಣ ಇದೆ. ಆದರೆ ರಾಜಕೀಯವಾಗಿ ಏನೂ ಇಲ್ಲ. ಒಂದು ವೇಳೆ ಇಂಥ ಪ್ರಭಾವ ಇದ್ದಿದ್ದರೆ ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ನಮಗೆ ದುರ್ಗತಿ ಬರುತ್ತಲೇ ಇರಲಿಲ್ಲ. 
ಕರ್ನಾಟಕದ ಬಗ್ಗೆ ಹೇಳುವುದಾದರೆ ಪ್ರತಿಬಾರಿಯೂ ರಾಷ್ಟ್ರೀಯ ಪಕ್ಷಗಳಿಗೆ ಕನ್ನಡಿಗರು ಓಟು ಹಾಕುತ್ತಾ ಬಂದಿದ್ದಾರೆ. ತಮಿಳುನಾಡಿನಲ್ಲಿ ಅಣ್ಣಾ ಡಿಎಂಕೆ, ಡಿಎಂಕೆ., ಆಂಧ್ರದಲ್ಲಿ ತೆಲುಗುದೇಶ ಬಂದ ಹಾಗೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೊಂದು ಬರಲೇ ಇಲ್ಲ. ಹೀಗೆ ಬರಲಿಲ್ಲ ಎನ್ನುವುದು ಕರ್ನಾಟಕ, ರಾಷ್ಟ್ರದೊಟ್ಟಿಗೆ ಇದೆ, ರಾಷ್ಟ್ರೀಯ ಪಕ್ಷದೊಟ್ಟಿಗೆ ಇದೆ ಎನ್ನುವುದನ್ನು ಸೂಚಿಸುತ್ತದೆ.
ಇಷ್ಟಿದ್ದೂ ಮೊನ್ನೆಮೊನ್ನೆ ಕಾವೇರಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಏನು ಹೇಳಿತು; 'ನಿಮಗೆ (ಕರ್ನಾಟಕ)  ರಾಷ್ಟ್ರದ ಒಕ್ಕೂಟದ ಮೇಲೆ ನಂಬಿಕೆ ಇಲ್ಲವೇ' ಎಂದು ಕೇಳಿತು. ಇದು ಕನ್ನಡಿಗರಿಗೆ ಬಹಳ ದೊಡ್ಡ ಅವಮಾನ. ಹೀಗೆ ಹೇಳಿದೆ ಎಂದರೆ ನ್ಯಾಯಾಲಯದಲ್ಲಿ, ಸಂಸತ್ತಿನಲ್ಲಿ, ರಾಜಕಾರಣದಲ್ಲಿ, ಬೇರೆಬೇರೆ ಕ್ಷೇತ್ರಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವವರು ದುರ್ಬಲರು ಎಂಬುದನ್ನು ಅರ್ಥ ಮಾಡಿಸುತ್ತದೆ. 
ಮಾಹಿತಿ ಕೊರತೆಯ ಸಂಸದರು
2013-14ರ ಅಂಕಿ ಅಂಶ ನನ್ನ ಬಳಿ ಇದೆ. ಪಾರ್ಲಿಮೆಂಟಿನಲ್ಲಿ ಕರ್ನಾಟಕದ ಪ್ರಾತಿನಿಧಿಕರಣಕ್ಕೆ ಸಿಕ್ಕಿದ ಅಂಕ 36ರಲ್ಲಿ 34 ಅಷ್ಟೆ. ಇದು ನಮ್ಮ ಪ್ರತಿನಿಧಿಗಳು ಸಂಸತ್ತಿನಲ್ಲಿ ಪ್ರಭಾವೀಶಾಲಿಯಾಗಿ ಮಾತನಾಡುವುದು; ಅಂಕಿ-ಅಂಶಗಳ ಸಮೇತ ವಾದ ಮಂಡಿಸುವುದನ್ನು ಮಾಡುತ್ತಲೇ ಇಲ್ಲ ಎಂಬುದನ್ನು ಅರ್ಥ ಮಾಡಿಸುತ್ತದೆ. ಇಲ್ಲಿನ ಬಿಜೆಪಿ ಸಂಸದರು ಮೋದಿ ಮುಖ ನೋಡುತ್ತಾ ಕುಳಿತಿರುತ್ತಾರೆ. ಕಾಂಗ್ರೆಸ್ ಸಂಸದರು ತಮ್ಮ ಹೈ ಕಮಾಂಡ್ ಕಡೆ ದೃಷ್ಟಿ ನೆಟ್ಟಿರುತ್ತಾರೆ. ಅವರು ಯೆಸ್ ಅಂದರೆ ಮಾತನಾಡುತ್ತಾರೆ; ಇಲ್ಲದಿದ್ದರೆ ಇಲ್ಲ. ಸಂಸದರಲ್ಲಿ ಹೆಚ್ಚಿನವರು ಬರ್ತಾರೆ. ಆದರೆ ರೊಟ್ಟಿ ತಿಂದುಕೊಂಡು ಹೊರಗೆ ಇರ್ತಾರೆ. 
ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಬಗ್ಗೆ ಮಾತನಾಡಲು ಬೇಕಾದ ಅಂಕಿಅಂಶಗಳು, ಅದಕ್ಕೆ ಬೇಕಾದ ಭಾಷಾ ತಯಾರಿ, ಸಾಂಸ್ಕೃತಿಕ-ಐತಿಹಾಸಿಕ ಹಿನ್ನೆಲೆ ಹೊಂದಿರುವ ಕರ್ನಾಟಕದ ಜನಪ್ರತಿನಿಧಿಗಳು ಬಹಳ ಕಡಿಮೆ. ಒಂದಿಷ್ಟು ತಿಳಿದುಕೊಂಡವರು ಇದ್ದರೂ ಬೇರೆ ರಾಜ್ಯದ ಪ್ರತಿನಿಧಿಗಳಿಗೆ ಹೋಲಿಸಿದರೆ ಬಹಳ ಕಡಿಮೆ. 
ಮೊದಲಿನಿಂದಲೇ ಆರಂಭಿಸಬೇಕು
ಈ ಎಲ್ಲ ಹಿನ್ನೆಲೆಯಲ್ಲಿ ಅಕಾಡೆಮಿಕ್ ಕ್ಷೇತ್ರದೊಳಗೆ ಕೆಲಸ ಮಾಡುವವರು ರಾಷ್ಟ್ರಮಟ್ಟದಲ್ಲಿ ಮಾಡಬೇಕಾದ್ದು ಏನೆಂದರೆ ಕರ್ನಾಟಕ ಅಂತ ಒಂದು ರಾಜ್ಯವಿದೆ, ಕನ್ನಡ ಎಂಬುದೊಂದು ಭಾಷೆ ಇದೆ, ಅದರಲ್ಲಿ ಪಂಪ, ಕುಮಾರ ವ್ಯಾಸ, ಕುವೆಂಪು, ಬೇಂದ್ರೆ ಅಂಥ ದೊಡ್ಡದೊಡ್ಡ ಬರಹಗಾರರು ಬಂದಿದ್ದಾರೆ ಎಂಬುದನ್ನು ಪರಿಚಯಾತ್ಮಕವಾಗಿ ಹೇಳುವ ಸರಳ ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡಬೇಕಾಗುತ್ತದೆ. ಕುವೆಂಪು ಅಂದರೆ ಯಾರು, ಅವರೊಬ್ಬ ಕಾದಂಬರಿಕಾರ, ಕವಿ, ನಾಟಕಕಾರ ಎಂಬುದನ್ನು ಹೇಳುತ್ತಾ ಹೋಗಬೇಕು. ಏಕೆಂದರೆ ಇಲ್ಲಿ ಎಲ್ಲ ಕೆಲಸವನ್ನು ಮೊದಲಿನಿಂದಲೇ ಮಾಡುತ್ತಾ ಹೋಗಬೇಕಾಗಿದೆ. 
ಬೌದ್ಧಿಕ ಪ್ರತಿನಿಧಿಕರಣ
ಎರಡನೇಯದಾಗಿ ಕರ್ನಾಟಕವನ್ನು ಬೌದ್ಧಿಕ ವಲಯದಲ್ಲಿ ಪ್ರತಿನಿಧಿಕರಣ ಮಾಡಬೇಕಾಗುತ್ತದೆ. ಇಲ್ಲಿನ ಬೌದ್ಧಿಕ ರೀತಿನೀತಿಗಳು ಹೇಗಿವೆ ಎಂಬುದನ್ನು ಹೇಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಕನ್ನಡಪೀಠದಿಂದ ಕವಿರಾಜ ಮಾರ್ಗವನ್ನು ಇಂಗ್ಲಿಷ್ಗೆ ಅನುವಾದ ಮಾಡಿಸುವ ಕೆಲಸ ತೆಗೆದುಕೊಂಡಿದ್ದೇನೆ. 850ರ ಇಸವಿ ಸುಮಾರಿಗೆ ಕನ್ನಡದಲ್ಲಿ ಇಂಥ ಕೃತಿ ಬಂದಿರುವುದು ದೊಡ್ಡ ಸಂಗತಿ. ಆಗಿನ ಘಟ್ಟದಲ್ಲಿ ಸಂಸ್ಕೃತ ಬಿಟ್ಟರೆ ಕನ್ನಡದಲ್ಲಿಯೇ ಇಂಥದೊಂದು ದೊಡ್ಡ ಕೃತಿ ಬಂದಿರುವುದು. ಈ ವಿಷಯ ಉತ್ತರ ಭಾರತದ ವಿದ್ವಾಂಸರಿಗಾಗಲಿ, ಪಾಶ್ಚಾತ್ಯ ವಿದ್ವಾಂಸರಿಗಾಗಲಿ ಗೊತ್ತೇ ಇಲ್ಲ. 
ತಮಿಳು ಮತ್ತು ತೆಲುಗಿನದು ಭಿನ್ನ ಕಥೆ
ಆದರೆ ತೆಲುಗಿನಲ್ಲಿ ಬಂದಿರುವ ದೊಡ್ಡದೊಡ್ಡ ಕೃತಿಗಳ ಬಗ್ಗೆ ಗೊತ್ತಿದೆ. ಏಕೆಂದರೆ ಪ್ರಾಧ್ಯಾಪಕ ವಿ. ನಾರಾಯಣ ರಾವ್ ಅವರು ವಿಸ್ಕಾನ್ಸಿಂಗ್ನಲ್ಲಿ ಕುಳಿತುಕೊಂಡು ತೆಲುಗಿನ ಕೃತಿಗಳ ಬಗ್ಗೆ ಪಾಠ ಮಾಡುತ್ತಾರೆ, ಪ್ರಚಾರ ಮಾಡುತ್ತಾರೆ. ತಮಿಳು ಭಾಷೆ ಬಗ್ಗೆ ಹೇಳುವುದಾದರೆ ವಿದೇಶಗಳಲ್ಲಿಯೇ ಅದರ ಪೀಠಗಳ ಸಂಖ್ಯೆ 17ಕ್ಕೂ ಹೆಚ್ಚು. ಹೆಚ್ಚುಕಡಿಮೆ ಪ್ರತಿಯೊಂದು ರಾಜ್ಯದಲ್ಲಿಯೂ ಅದರ ಅಧ್ಯಯನ ಪೀಠಗಳಿವೆ. ಆದ್ದರಿಂದಲೇ ಉತ್ತರ ಭಾರತದಲ್ಲಿ ದಕ್ಷಿಣ ಭಾರತ ಎಂದರೆ ತಮಿಳು ಎಂದಾಗಿದೆ. ಆದ್ದರಿಂದಲೇ ವಿದೇಶಗಳಿಂದ, ಉತ್ತರ ಭಾರತದಿಂದ ಬರುವವರಿಗೆ ದಕ್ಷಿಣ ಭಾರತದ ತಿಳಿಯಬೇಕೆನ್ನುವ ಆಸಕ್ತಿ ಇದ್ದರೆ ತಮಿಳುನಾಡಿಗೆ ಅಥವಾ ಹೈದ್ರಾಬಾದಿಗೆ ಹೋಗುತ್ತಾರೆ. ಅಂಥದೊಂದು ವಾತಾವರಣವನ್ನು ಅವರು ನಿರ್ಮಾಣ ಮಾಡಿದ್ದಾರೆ. ಹೀಗೆ ಬರುವ ಅಧ್ಯಯನಕಾರರ ಮುಂದೆ ಕರ್ನಾಟಕ ಮತ್ತು ಕನ್ನಡದ ಚಿತ್ರಣವೇ ಬರುವುದಿಲ್ಲ. ಇದು ಯಾರ ತಪ್ಪು, ಕನ್ನಡಿಗರನ್ನು ಬೇರೆಬೇರೆ ಕ್ಷೇತ್ರಗಳಲ್ಲಿ ಪ್ರತಿನಿಧಿಸಿದವರ, ಪ್ರತಿನಿಧಿಸುತ್ತಿರುವವರ ತಪ್ಪು. ಏಕೆಂದರೆ ಕನ್ನಡದಿಂದ ಅಂಥದೊಂದು ಬೌದ್ಧಿಕ ವಕಾಲತ್ತು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದದ್ದು ಬಹಳ ಕಡಿಮೆ. ಇಂಥದೊಂದು ಕೆಲಸವನ್ನು ತಮ್ಮ ಮಿತಿಯಲ್ಲಿ ಸಶಕ್ತಕವಾಗಿ ಮಾಡಿದವರು ಒಬ್ಬರೆ; ಅವರು ಎ.ಕೆ. ರಾಮಾನುಜಮ್.
ಇವರು ಜಾನಪದ ಕಥೆಗಳು, ವಚನಗಳನ್ನು ಹಿಡಿದುಕೊಂಡು ಮಾತನಾಡ್ತಾ ಇದ್ರು. ಪುರಂದರದಾಸರ ಬಗ್ಗೆ ಮಾತನಾಡ್ತಾ ಇದ್ರು. ಅನಂತಮೂರ್ತಿ ಅವರ ಬಗ್ಗೆ ಮಾತನಾಡ್ತಾ ಇದ್ರು. ಅವರು ನಿಧನರಾದ ಮೇಲೆ ಅಂಥ ಕೆಲಸವನ್ನು ಯಾರೂ ಮಾಡಲಿಲ್ಲ. ಒಮ್ಮೆ ಡಿ.ಆರ್. ನಾಗರಾಜ್ ಅವರ ಕೃತಿಯೊಂದು ಪಠ್ಯವಾಗಿತ್ತು. 
ನಮಗೆ ನಾವೇ ಹೇಳಿಕೊಂಡರಷ್ಟೆ ಸಾಲದು
ಅಮೆರಿಕಾದಲ್ಲಿ ನಡೆಯುವ ಅಕ್ಕ ಸಮ್ಮೇಳನಗಳಿಗೆ ಇಲ್ಲಿಂದ ಕನ್ನಡಿಗರ ಪ್ರತಿನಿಧಿಗಳು ಎಂದುಕೊಂಡು ಬೇರೆಬೇರೆಯವರು ಹೋಗ್ತಾರೆ. ಆದರೆ ಇವರು ಹೋಗಿ ಮಾತನಾಡುವುದು ಕನ್ನಡಿಗರಿಗೆ. ದೆಹಲಿಯಲ್ಲಿ ಕನ್ನಡ ಸಂಘವಿದೆ. ನಾವೆಲ್ಲ ಅಲ್ಲಿ ಕಾರ್ಯಕ್ರಮಗಳನ್ನು ಮಾಡ್ತೇವೆ. ಅದು ಸಹ ಕನ್ನಡಿಗರಿಗೆ. ಇಂಥ ಕಾರ್ಯಗಳು ಬೇಕು. ಆದರೆ ಇದರ ಜೊತೆಗೆ ಹೊರಭಾಷಿಕರಿಗೆ ಕನ್ನಡದ ಸಾಹಿತ್ಯ, ಸಂಸ್ಕೃತಿ ಮತ್ತು ಚರಿತ್ರೆ ಮಹತ್ವ ತಿಳಿಸುವ ಕಾರ್ಯಕ್ರಮಗಳೂ ಅವಶ್ಯಕವಾಗಿ ಆಗಬೇಕು.
ಇಂಥ ಕಾರ್ಯಗಳನ್ನು ಮಾಡುವ ಆಶಯವನ್ನು ಜೆ.ಎನ್.ಯು. ಕನ್ನಡಪೀಠ ಇಟ್ಟುಕೊಂಡಿದೆ. ಇದರ ಜೊತೆಗೆ ಭಾರತದಲ್ಲಿ ಕನ್ನಡೇತರರಿಗೆ, ವಿದೇಶಗಳ ಬೇರೆಬೇರೆ ಆಸಕ್ತರಿಗೆ ಕನ್ನಡ ಕಲಿಸಿ; ಅವರವರ ಭಾಷೆಗಳ ಮೂಲಕ ಕನ್ನಡದ ಮಹತ್ವ ಸಾರುವ ಕಾರ್ಯವನ್ನೂ ಮಾಡಬೇಕಿದೆ. ಈ ಕಾರ್ಯಗಳು ಬೇರೆಬೇರೆ ರಾಜ್ಯಗಳ, ದೇಶಗಳ ಕನ್ನಡ ಅಧ್ಯಯನಪೀಠಗಳ ಮುಖಾಂತರ ನಡೆಯಬೇಕು. 
ಈಗ ರಾಷ್ಟ್ರೀಯ ಪ್ರಜ್ಞೆ ಹೊಸದಾಗಿ ಮೂಡುತ್ತಿರುವ ಕಾಲ. ಜಾಗತಿಕರಣ ನಮ್ಮನ್ನು ಆಕ್ರಮಿಸಿಕೊಂಡಿರುವ ಕಾಲ. ಇಂಥ ಕಾಲಘಟ್ಟದಲ್ಲಿ ಕನ್ನಡವನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತುತಪಡಿಸಬೇಕಾದ ಅಗತ್ಯವಿದೆ. 'ನನ್ನ ಮಗ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದಾನೆ' ಎಂದು ಯಾರೋ ಒಬ್ಬರು ಹೇಳಿದರೆ ಅದು ಕನ್ನಡದ ಜಾಗತಿಕರಣವಲ್ಲ. ಅವನು ತನ್ನ ಉದ್ಯೋಗದ ಸಲುವಾಗಿ ಅಲ್ಲಿ ಹೋಗಿದ್ದಾನೆ ಅಷ್ಟೆ.
ಅಂತರ್ಜಾಲದ ಗರಿಷ್ಠ ಬಳಕೆ ಆಗಬೇಕು
ಉದಾಹರಣೆಗೆ ಹೇಳುವುದಾದರೆ ಸವದತ್ತಿ ಎಲ್ಲಮ್ಮನನ್ನು ಆರಾಧಿಸುವವರ ಆಚಾರ-ವಿಚಾರಗಳು, ಹಾಡುಗಳು ಮತ್ತು ಆ ಸ್ಥಳದ ನಕಾಶೆ ಆನ್ಲೈನ್ನಲ್ಲಿ ಲಭ್ಯವಾಗಬೇಕು. ಆದರೆ ಇದೆಲ್ಲ ಎಲ್ಲಿ ಸಿಗ್ತಾ ಇದೆ. ಬೆಂಗಳೂರನ್ನು ಸಿಲಿಕಾನ್ ಸಿಟಿ ಅಂತಾರೆ. ಆದರೂ ಇಂಥ ಕಾರ್ಯಗಳೇಕೆ ಆಗಿಲ್ಲ.
ಇತ್ತೀಚೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಲ್ಲಿಕಾ ಘಂಟಿ ಅವರು ಪೋನ್ ಮಾಡಿದ್ದರು. 'ಕನ್ನಡ ವಿಶ್ವವಿದ್ಯಾಲಯಕ್ಕೆ 25 ವರ್ಷ ಆಗುತ್ತಿದೆ' ಎಂದರು. ಆಗ ನಾನೇಳಿದ್ದು ಕಳೆದ 25 ವರ್ಷಗಳಿಂದ ಕನ್ನಡದ ಬಗ್ಗೆ ಅಲ್ಲಿ ಸಾಕಷ್ಟು ಕೆಲಸ ಆಗಿದೆ. ಪುಸ್ತಕಗಳೂ ಪ್ರಕಟವಾಗಿವೆ. ಇಂಥ ಪುಸ್ತಕಗಳಿಗೆ ಹೊರಗಿನ ರಾಜ್ಯ, ದೇಶಗಳಲ್ಲಿ ಇರುವವರು ಆರ್ಡರ್ ಮಾಡಿ ತರಿಸಿಕೊಳ್ಳುವ ಕಾಲ ಮುಗಿದಿದೆ. ಹೊಸ ತಲೆಮಾರಿನವರಿಗೆ ಇಷ್ಟು ಸಮಯವೂ ಇರುವುದಿಲ್ಲ. ಈ ಎಲ್ಲ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯ ಇದುವರೆಗೂ ಪ್ರಕಟಿಸಿರುವ ಎಲ್ಲ ಸಾಹಿತ್ಯವನ್ನು ಡಿಜಿಟಲೈಸ್ ಮಾಡಿ ಆನ್ಲೈನ್ನಲ್ಲಿ ಹಾಕಿ ಎಂದು ಹೇಳಿದೆ. 
ಪ್ರೊ. ಬಿಳಿಮಲೆ ಅವರೊಂದಿಗೆ ಒಂದು ಸೆಲ್ಫಿ
ಕನ್ನಡ ವಿಶ್ವವಿದ್ಯಾಲಯದ ವೆಬ್ಸೈಟಿಗೆ ಹೋದರೆ ನಮಗೆ ಕನ್ನಡದ ಮುಖ್ಯಕೃತಿಗಳೆಲ್ಲವೂ ಲಭ್ಯ ಆಗಬೇಕು. ಸಾಧ್ಯವಿರುವ ಕಡೆ ವಿಡಿಯೋ ಲಿಂಕ್ಗಳನ್ನು ಕೊಡಬೇಕು. ಆಸಕ್ತರು ಅವುಗಳನ್ನು ಓದುತ್ತಾರೆ, ನೋಡುತ್ತಾರೆ. ಹೆಚ್ಚೆಚ್ಚು ಅಭಿರುಚಿ ಬೆಳೆಸಿಕೊಳ್ಳುತ್ತಾರೆ. ಉದಾಹರಣೆಗೆ ಗೊಂದಲಿಗರ ಆಟದ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಅದರ ಬಗ್ಗೆ ವಿಡಿಯೋ ಹಾಕಿದರೆ ಬಹಳಷ್ಟು ಜನ ಅದನ್ನು ನೋಡಿ ಅರಿವು ಪಡೆದುಕೊಳ್ಳುತ್ತಾರೆ. ಇದು ಜಾಗತಿಕರಣದ ಪ್ರಯೋಜನ ಪಡೆಯುವ ಕೆಲಸ. ಒಂದೇ ಒಂದು ಕ್ಲಿಕ್ ಮಾಡುವುದರ ಮುಖಾಂತರ ಕನ್ನಡದ ಮಾಹಿತಿಗಳು ದೊರೆಯಬೇಕು. ಇಂಥ ಕಾರ್ಯಗಳನ್ನು ಮಾಡದಿದ್ದರೆ ಹೊಸ ತಲೆಮಾರಿನವರಿಂದ ರಿಜೆಕ್ಟ್ ಆಗುವ ಅಪಾಯವಿದೆ. 
ಬದಲಾವಣೆ ಪ್ರಕ್ರಿಯೆ ನಿರಂತರ 
ಬದಲಾದ ಕಾಲಘಟ್ಟದ ಅವಶ್ಯಕತೆಗಳಿಗೆ ಅನುಗುಣವಾಗಿ ಕನ್ನಡ ಸಾಹಿತ್ಯ ಲಭ್ಯತೆಯನ್ನು ಮರು ರೂಪಿಸುವ, ಮರು ಅರ್ಪಣೆ ಮಾಡುವಂಥ ಕೆಲಸ ತುರ್ತಾಗಿ ಆಗಬೇಕು. ಇದು ಆಗದಿದ್ದರೆ ಹೊಸ ತಲೆಮಾರಿನಿಂದ ದೂರವೇ ಉಳಿಯುವಂಥ ದುಸ್ಥಿತಿ ನಿರ್ಮಾಣವಾಗುತ್ತದೆ. ಇಂಥ ಎಲ್ಲ ಕೆಲಸಗಳನ್ನು ಹೊರರಾಜ್ಯಗಳಲ್ಲಿರುವ ಕನ್ನಡಪೀಠಗಳು ಮಾಡಬೇಕು. 
ಸಂಸ್ಕೃತ ಬಿಟ್ಟರೆ ಕನ್ನಡದಲ್ಲಿಯೇ ಮೊಟ್ಟಮೊದಲ ಬಾರಿಗೆ ಗದ್ಯಕೃತಿ ವಡ್ಡಾರಾಧನೆ ಬಂತು. ಆದರೆ ಇಂಥ ದೊಡ್ಡ ಸಂಗತಿ ಹೊರ ಭಾಷಿಕರುಗಳಿಗೆ ಗೊತ್ತೇ ಇಲ್ಲ. ಅದರಲ್ಲಿ ಜಾತಕ ಕಥೆಗಳು, ಪ್ರಾಕೃತ ಕಥೆಗಳು, ನಮ್ಮ ಅಜ್ಜಿಕಥೆಗಳ ತಂತ್ರಗಳಿವೆ. ಈ ಪ್ರಾಕಾರಗಳ ಬಗ್ಗೆ ಕೆಲಸ ಮಾಡಿರುವ ದೇಸೀ-ವಿದೇಸೀ ವಿದ್ವಾಂಸರನ್ನು ಕರೆಸಿ ಅವರಿಗೆ ವಡ್ಡಾರಾಧನೆಯ ಇಂಗ್ಲಿಷ್ ಅನುವಾದದ ಕೃತಿ ನೀಡಿ, ಅಂತರಾಷ್ಟ್ರೀಯ ಸೆಮಿನಾರ್ ಮಾಡಿ ಚರ್ಚೆ ಮಾಡಿದಾಗ ಕನ್ನಡದ ಒಂದು ಕೃತಿ ಗ್ಲೊಬಲ್ ಲೆವೆಲ್ಗೆ ಹೋಗುತ್ತದೆ. 
ಇಂಥ ಕೆಲಸಗಳನ್ನು ಯಾರಾದರೂ ಗಂಭೀರವಾಗಿ ಮಾಡಬೇಕಲ್ಲ. ಇದನ್ನು ಪ್ರಸಕ್ತ ಸಂದರ್ಭದಲ್ಲಿ ಕನ್ನಡದಲ್ಲಿಯೇ ಮಾಡಿದರೆ ಸಾಕಾಗುವುದಿಲ್ಲ. ಬೇರೆಬೇರೆ ಭಾಷೆಗಳಲ್ಲಿ ಮುಖ್ಯವಾಗಿ ಇಂಗ್ಲಿಷ್ನಲ್ಲಿ ಮಾಡಬೇಕು. ಈ ಎಲ್ಲ ಕೆಲಸ ಕಾರ್ಯಗಳನ್ನು ಕನ್ನಡ ಅಧ್ಯಯನ ಪೀಠದಿಂದ ಮಾಡಲು ಸಾಧ್ಯವಾಗುವುದಿಲ್ಲ.  
ಪೋಸ್ಟ್ ಆಫೀಸ್ ಕೆಲಸ ಮಾಡುತ್ತಿರುವ ಕರ್ನಾಟಕ ಭವನ 
ಇಂಥ ವಿಷಯಗಳನ್ನು ದೆಹಲಿಯಲ್ಲಿರುವ ಕರ್ನಾಟಕ ಸರ್ಕಾರದ ಕರ್ನಾಟಕ ಭವನದಿಂದ ಮಾಡುವ ಸಾಧ್ಯತೆಗಳಿವೆ. ಆದರೆ ಅವರು ಪೋಸ್ಟ್ ಆಫೀಸ್ ಕೆಲಸ ಮಾಡುತ್ತಾ ಕುಳಿತಿದ್ದಾರೆ. ಇಲ್ಲಿ ಒಂದು ವಿಷಯ ಹೇಳಲು ಬಯಸುತ್ತೇನೆ. 2004ರಲ್ಲಿ ಕಾವೇರಿ ವಿಷಯವಾಗಿ ಗಲಾಟೆ ಆಗಿತ್ತು. ಆಗ ತಮಿಳರು ದೆಹಲಿಯ ಪ್ರಗತಿ ಮೈದಾನದಲ್ಲಿ ಒಂದು ವಸ್ತು ಪ್ರದರ್ಶನ ಮಾಡಿದರು. ಕಾವೇರಿ ನದಿ ತಮಿಳುನಾಡು ಗಡಿ ತಲುಪುವಲ್ಲಿಂದ ಆರಂಭಿಸಿ ಪುಂಪುಹಾರ್ನಲ್ಲಿ ಸಮುದ್ರದಲ್ಲಿ ವಿಲೀನ ಆಗುವ ತನಕದ ನಾನಾ ಹಂತಗಳಲ್ಲಿ ನಡೆದ, ನಡೆಯುವ ವಿದ್ಯಮಾನಗಳನ್ನು ಒಳಗೊಂಡ ವಿಶಾಲ ವರ್ಣಚಿತ್ರಗಳಿದ್ದವು. ಅಲ್ಲಿನ ಭತ್ತದ ಗದ್ದೆಗಳು, ಜಲಪಾತಗಳ ರಮ್ಯ ಚಿತ್ರಗಳಿದ್ದವು. ಅವರು ಎಲ್ಲಿಂದ ಆರಂಭಿಸಿದ್ದರು ಎಂದರೆ ಪ್ರಾಚೀನ ಶಿಲಪ್ಪದಿಕಾರಂ ಕೃತಿಯಲ್ಲಿ ಕಾವೇರಿಯನ್ನು ಪೊನ್ನಿ ಎಂದು ಕರೆಯುತ್ತಾರೆ. ಈ ಭಾಗವನ್ನು ಪ್ರಸ್ತುತಪಡಿಸುವ ಧ್ವನಿ ಮುದ್ರಣವನ್ನು ಅಲ್ಲಿ ಸತತವಾಗಿ ಕೇಳಿಸುತ್ತಿದ್ದರು.
ಅದು ಪೊನ್ನಿಯ ಹಾಡನ್ನು ಹೇಳುತ್ತಲೇ ಇರುತ್ತದೆ. ನೀವು ವಸ್ತು ಪ್ರದರ್ಶನದ ಒಳಗೆ ಹೋಗಿ ಹೊರಗೆ ಬರುವಷ್ಟರಲ್ಲಿ ನಿಮಗೆ ಅನಿಸುವುದೇನೆಂದರೆ ತಮಿಳರಿಗೆ ಕಾವೇರಿ ಎಂದರೆ ಒಂದು ನದಿ ಮಾತ್ರ ಅಲ್ಲ. ಇಡೀ ತಮಿಳು ಸಂಸ್ಕೃತಿಯನ್ನು ಬೆಳೆಸಿದ ಜೀವ ಎಂದನಿಸುತ್ತದೆ. ಇದಿಷ್ಟೆ ಅಲ್ಲ; ತಮಿಳರು ಎಷ್ಟು ಪ್ರೀತಿಯಿಂದ ಕಾವೇರಿಯನ್ನು ಅಪ್ಪಿಕೊಂಡಿದ್ದಾರೆ ಎಂಬುದು ಅರ್ಥವಾಗುತ್ತದೆ. 
ಕಾವೇರಿ ಮಹತ್ವ ಬಿಂಬಿಸುವಲ್ಲಿ ವಿಫಲತೆ
ಆದರೆ ನಮ್ಮವರು ಇಂಥದೊಂದು ಸಾರ್ವಜನಿಕ ದಾಖಲೀಕರಣದ ಕಾರ್ಯವನ್ನು ಮಾಡಲೇ ಇಲ್ಲವಲ್ಲ. ಕಾವೇರಿ ನದಿ, ಕರ್ನಾಟಕದಲ್ಲಿ ಹುಟ್ಟಿದೆ. ಹರಿಯುತ್ತದೆ. ಇಲ್ಲಿನ ಸಂಸ್ಕೃತಿಯನ್ನು ಬೆಳೆಸಿದೆ. ತಮಿಳುನಾಡಿಗಿಂತಲೂ ಅದ್ಬುತ, ರಮ್ಯ ಮತ್ತು ಮನೋಹರವಾದ ಕಾವೇರಿ ನದಿಯ ಪರಿಸರದ ತಾಣಗಳು ಇಲ್ಲಿವೆ. ಭಾಗಮಂಡಲ, ಬ್ರಹ್ಮಗಿರಿ, ಶ್ರೀರಂಗಪಟ್ಟಣ, ತಲಕಾಡು ಹೀಗೆ ವಿವಿಧ ತಾಣಗಳ ಚಿತ್ರಗಳು ಮತ್ತು ವಿಡಿಯೋಗಳನ್ನು ತೋರಿಸಬಹುದಿತ್ತು. ಇವೆಲ್ಲವನ್ನೂ ಬಳಸಿಕೊಂಡು ಹೊರಭಾಷಿಕರಿಗೆ ಕಾವೇರಿ ಬಗ್ಗೆ ಒಂದೊಳ್ಳೆಯ ಪ್ರಸ್ತುತಿಯನ್ನು ನಾವೂ ಮಾಡಬಹುದಿತ್ತು. ಆದರೆ ಮಾಡಲಿಲ್ಲ ಏಕೆ. ಏಕೆಂದರೆ ಇದು ಕನ್ನಡಿಗರನ್ನು ಪ್ರಾತಿನಿಧಿಸುವವರು ದುರ್ಬಲ ವಿಚಾರಧಾರೆಯುಳ್ಳವರು ಎಂಬುದನ್ನು ತೋರಿಸುತ್ತದೆ.  
ಸಾಧ್ಯತೆಗಳನ್ನು ದುಡಿಸಿಕೊಂಡಿಲ್ಲ
ಕೊಡಗಿನಲ್ಲಿ ಪೊನ್ನಪ್ಪ ಎಂದು ಹೆಸರಿಟ್ಟುಕೊಂಡವರು ಅನೇಕರು ಇದ್ದಾರೆ. ಈ ಹೆಸರು ಬಂದಿದ್ದು ಪೊನ್ನಿ ಎಂಬುದರಿಂದ. ಪೊನ್ನಿ ಎಂದರೆ ಕಾವೇರಿ. ಇದೆಲ್ಲವನ್ನೂ ಹೊರಭಾಷಿಕರಿಗೆ, ಮುಖ್ಯವಾಗಿ ಕೇಂದ್ರ ಸರ್ಕಾರದವರಿಗೆ, ನ್ಯಾಯಾಲಯಗಳಿಗೆ ಮನದಟ್ಟು ಮಾಡಿಸಬಹುದಾಗಿತ್ತು. ಕಾವೇರಿಯ ಪ್ರಸ್ತಾವನೆ ಕವಿರಾಜ ಮಾರ್ಗ ಕೃತಿಯಲ್ಲಿದೆ. ಇವೆಲ್ಲವನ್ನು ಹೊರಭಾಷಿಕರಿಗೆ, ರಾಷ್ಟ್ರೀಯ ಮಾಧ್ಯಮಗಳವರಿಗೆ ಕೇಳಿಸಬಹುದಾಗಿತ್ತು. ಕಾವೇರಿ ಮಹಾತ್ಮೆ, ಅಗಸ್ತ್ಯ ಮಹಾತ್ಮೆ ಎಂಬ ಕೃತಿಗಳೂ ಬಂದಿವೆ. ಇವೆಲ್ಲವನ್ನೂ ಒಳಗೊಂಡ ವಸ್ತು ಪ್ರದರ್ಶನ ಮಾಡಿದ್ದರೆ ತಮಿಳರು ಮಾಡಿದಕ್ಕಿಂತ  ಅತ್ಯುತ್ತಮವಾದ ವಸ್ತು ಪ್ರದರ್ಶನ ಮಾಡಬಹುದಾಗಿತ್ತು. ಆದರೆ ಮಾಡಿಲ್ಲ. ಮುಂದೆ ಇಂಥದ್ದು ಆಗುತ್ತದೆಯೇ ಗೊತ್ತಿಲ್ಲ. 
- ಮುಂದುವರಿಯುತ್ತದೆ ...
ಈ ಸಂದರ್ಶನವನ್ನು ಇತರ ವೆಬ್ ಸೈಟ್ ಅಥವಾ ಪತ್ರಿಕೆಗಳಲ್ಲಿ ಪ್ರಕಟಿಸುವ ಮುನ್ನ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿ ದೂ: 74067 68999

1 comment:

 1. ಮುಂದಿನ ಭಾಗಕ್ಕಾಗಿ ತೀವ್ರ ನಿರೀಕ್ಷೆಯಿದೆ...😊

  ReplyDelete