• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ನಾನಾ ಉಪಕಥೆಗಳಿಗೆ ಒಂದೇ ಚೌಕಟ್ಟು


'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಕಾಣೆಯಾದ ಓರ್ವ ವೃದ್ಧರನ್ನು ಹುಡುಕುವ ಕಥೆಯಂತೆ ಕಂಡರೂ ನಾನಾ ಉಪಕಥೆಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಅನೇಕರ ತೊಳಲಾಟಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಆದ್ದರಿಂದ ಇದು ಒಂದೇ ಕೇಂದ್ರಬಿಂದು ಹೊಂದಿರುವ ಸಿನೆಮಾ ಅಲ್ಲ. ಆದರೆ ನಿರ್ದೇಶಕರು ಎಷ್ಟರ ಮಟ್ಟಿಗೆ ಉಪ ಕಥಾಬಿಂದುಗಳಿಗೂ ನ್ಯಾಯ ಒದಗಿಸಿದ್ದಾರೆ ಎನ್ನುವುದೇ ಪ್ರಶ್ನೆ.

ಚಿತ್ರ ತೆರೆದುಕೊಳ್ಳುವುದೇ ಶಿವ ವಿ. ರಾವ್ ಪಾತ್ರದ ಮೂಲಕ. ಚಿತ್ರ ಮುಕ್ತಾಯವಾಗುವುದು ಕೂಡ ಇದೇ ಪಾತ್ರದ ಮೂಲಕ. ಮರೆಗುಳಿತನದ ಸಮಸ್ಯೆಯಿಂದ ಈತನ ತಂದೆ ವೆಂಕೋಬರಾವ್ ಕಾಣೆಯಾಗುತ್ತಾರೆ. ಇವರನ್ನು ಈತ ಹುಡುಕಲು ಹೊರಟಾಗಲೇ ಈತನ ಮತ್ತು ಈತನ ತಂದೆಯ ಕಥಾನಕ ತೆರೆದುಕೊಳ್ಳುತ್ತಾ ಹೋಗುತ್ತದೆ. ಅನೇಕ ಮನೆಮನೆಗಳಲ್ಲಿ ಕಾಣಸಿಗುವ ಕಾಣಸಿಗುವ ಪಾತ್ರಗಳಿವು. ಇಂಥ ಪಾತ್ರಗಳನ್ನು ಮುಂದಿಟ್ಟುಕೊಂಡು ಪ್ರಸಕ್ತ ಜೀವನಶೈಲಿ ಉಂಟು ಮಾಡುವ ತೊಂದರೆಗಳನ್ನು ಕೂಡ ನಿರ್ದೇಶಕರು ಹೇಳಲು ಯತ್ನಿಸಿದ್ದಾರೆ.
ಸಮಾನಾಂತರವಾಗಿ ಶಿವ ವಿ. ರಾವ್, ವೆಂಕೋಬರಾವ್, ಡಾ. ಸಹನಾ, ಅಚ್ಯುತ, ರಂಗ, ಮಂಜ ಇವರ ಬದುಕಿನ ಪುಟಗಳು ಕೂಡ ತೆರೆದುಕೊಳ್ಳುತ್ತವೆ. ಮಧ್ಯಮವರ್ಗದ ವೆಂಕೋಬರಾವ್ ವ್ಯಕ್ತಿತ್ವ, ಪ್ರೇಮ ಪ್ರಸಂಗ, ಆತನ ಹೆಂಡತಿ ಸಾವು ಮರೆಗುಳಿತನ ಇವೆಲ್ಲ ಆತನನ್ನು ಕಂಡವರಿಂದ ಅನಾವರಣಗೊಳ್ಳುತ್ತದೆ. ಇದನ್ನು ಆತನ ಮಗ ಶಿವ ವಿ. ರಾವ್ ಮುಖಾಂತರವೂ ಹೇಳಿಸುತ್ತಾ ಈತನ ವ್ಯಕ್ತಿತ್ವವನ್ನೂ ಅನಾವರಣ ಮಾಡಲಾಗುತ್ತದೆ. 
ತಂದೆಯನ್ನು ಹುಡುಕುವ ಈತನ ಕಾರ್ಯಕ್ಕೆ ಸಹಕರಿಸುವ ವೃದ್ಧಾಶ್ರಮದ ವೈದ್ಯೆ ಸಹನಾಳ ಹಿನ್ನೆಲೆ, ಆಕೆಯ ವ್ಯಕ್ತಿತ್ವವನ್ನೂ ಕಟ್ಟಿಕೊಡುವ ಕಾರ್ಯವನ್ನು ಮಾಡಲಾಗಿದೆ. ಹುಡುಕುವ ಕಾರ್ಯದಲ್ಲಿ ತೊಡಗಿದ ಇವರು ತಮ್ಮತಮ್ಮ ಸಾಂಗತ್ಯದ ಹುಡುಕಾಟದಲ್ಲಿಯೂ ಕೂಡ ತೊಡಗಿಸಿಕೊಳ್ಳುತ್ತಾ, ಅಭಿರುಚಿಗಳನ್ನು ವ್ಯಕ್ತಪಡಿಸುತ್ತಾ, ಬಹು ಸಹಜವಾಗಿ ಬಹುವಚನದಿಂದ ಏಕವಚನಕ್ಕೆ ತಿರುಗುವ ಮೂಲಕ ಸ್ನೇಹ, ಪ್ರೀತಿಗೆ ತಿರುಗುವ ರೀತಿಯನ್ನೂ ಸಮರ್ಥವಾಗಿ ಕಟ್ಟಿಕೊಡುತ್ತಾರೆ.
ಬದುಕು ಬಹಳ ನಿಗೂಢ. ಹೀಗೆ ಇರದಿದ್ದರೆ ಅದರಲ್ಲಿ ಸ್ವಾರಸ್ಯವೇ ಇರುತ್ತಿರಲಿಲ್ಲ. ಇಂಥ ಜಗತ್ತಿನಲ್ಲಿ ನಿಗೂಢ ಲೋಕಕಗಳು ಕೂಡ ಇವೆ. ಅರಿವಿಲ್ಲದೆ ಇಂಥ ಲೋಕದೊಳಗೆ ವೆಂಕೋಬರಾವ್, ಸಹಾಯ ಮಾಡಲು ಬಂದ ಅಚ್ಯುತ ಸಿಲುಕಿಕೊಳ್ಳುತ್ತಾರೆ. ಏನೂ ತಪ್ಪು ಮಾಡದಿದ್ದರೂ ಇವರಿಗೆ ಸಂಬಂಧವೇ ಇಲ್ಲದ ವ್ಯಕ್ತಿಯಿಂದ ಇವರಿಬ್ಬರನ್ನೂ ಕೊಲ್ಲಬೇಕೆಂಬ ಆದೇಶ ಬರುತ್ತದೆ. 
ಈ ಹಂತದಲ್ಲಿಯೇ ಚಿತ್ರಕಥೆ ಮತ್ತು ನಿರ್ದೇಶಕ ಎಡವಿರುವುದು ಬಹಳ ಸ್ಪಷ್ಟವಾಗಿ ತಿಳಿಯುತ್ತದೆ. ಕೊಲ್ಲಲ್ಲು ಆದೇಶ ಸ್ವೀಕರಿಸಿದ ವ್ಯಕ್ತಿಯ ತೊಳಲಾಟ, ಆತನ ಹಿನ್ನೆಲೆ ಇವ್ಯಾವುದೂ ಕೂಡ ತಿಳಿಯುವುದಿಲ್ಲ. ಐದು ಜೀವಗಳ ಉಳಿವು-ಅಳಿವನ್ನು ನಿರ್ಧರಿಸುವ ಸಂದರ್ಭದಲ್ಲಿರುವ ಪಾತ್ರದ ಬಗ್ಗೆ ತುಸು ಹೆಚ್ಚಿನ ಬೆಳಕು ಬೇಕಿತ್ತು. 

ಪಾತ್ರ ಪೋಷಣೆ:
ಈ ಮೊದಲೇ ಹೇಳಿದಂತೆ ರಂಗನ ಪಾತ್ರ ಪೋಷಣೆಯಲ್ಲಿ ಎಡವಿರುವ ನಿರ್ದೇಶಕರು ಸಹನಾಳ ಪಾತ್ರಕ್ಕೊಂದು ಗಟ್ಟಿತನವನ್ನು ಕಟ್ಟಿಕೊಡಲು ವಿಫಲರಾಗಿರುತ್ತಾರೆ. ಚೆಂದದ ಒಂದು ಹೆಣ್ಣು ಇಲ್ಲದಿದ್ದರೆ ಸಿನೆಮಾ ಸಪ್ಪೆಯನಿಸಬಹುದು, ನೋಡಿಸಿಕೊಂಡು ಹೋಗದೇ ಇರಬಹುದು ಎಂಬ ಕಾರಣಕ್ಕೆ ಗಂಡು ಪಾತ್ರಧಾರಿಯೂ ಆಗಬಹುದಾದ ವೈದ್ಯರ ಪಾತ್ರಕ್ಕೆ ಹೆಣ್ಣನ್ನು ತಂದಿದ್ದಾರೇನೂ ಎಂದನಿಸುತ್ತದೆ.
ವೃದ್ಧಾಶ್ರಮದಲ್ಲಿ ಪ್ರತಿ ವ್ಯಕ್ತಿಯ ಮುತುವರ್ಜಿ ವಹಿಸಲು ಒಬ್ಬೊಬ್ಬ ವೈದ್ಯರು ಇದ್ದಾರೇನೂ ಎನ್ನುವಂತೆ ಈಕೆ ವೆಂಕೋಬರಾವ್ ಹುಡುಕಾಟದಲ್ಲಿ ಮಗ್ನರಾಗುವುದು ಸಹಜವಾಗಿ ಮೂಡಿಬಂದಿಲ್ಲ. ಈ ಹುಡುಕಾಟದ ಯತ್ನಕ್ಕೆ ಈಕೆ ಕೊಡುವ ಕಾರಣ ಕೂಡ ಅಷ್ಟು ಗಟ್ಟಿಯಾಗಿಲ್ಲ.
ವಿವಾಹ ಉದ್ದೇಶದಿಂದ ತನ್ನನ್ನು ನೋಡಲು ಬಂದವರಿಗೆ ಗಟ್ಟಿಯಾಗಿ ಈ ಸಂಬಂಧ ಕೂಡಿ ಬರುವುದಿಲ್ಲ ಎಂದು ಹೇಳುವ ದಿಟ್ಟೆ 'ನೀನು ನನಗೆ ಇಷ್ಟ ಆಗಿದ್ದೀಯ ಎಂದು ಖಂಡಿತ ಹೇಳಬಹುದಿತ್ತು. ಅದನ್ನು ಬಿಟ್ಟು ಇನ್ನೇನು ಕೆಲವೇ ಗಂಟೆಗಳಲ್ಲಿ ಈಕೆ ತಾಳಿ ಕಟ್ಟಿಸಿಕೊಳ್ಳುವ ಹಂತದಲ್ಲಿದ್ದಾಗ ದಿಢೀರನೇ ಬಂದ ಶಿವ ವಿ. ರಾವ್ ಜೊತೆ ತೆರಳುವುದು ಇಡೀ ಸಿನೆಮಾದ ಗಂಭೀರತೆಯನ್ನು ಹಾಳು ಮಾಡಿದೆ. ಇಲ್ಲಿ ಸಾಮಾನ್ಯ ಮಸಾಲೆ ಸಿನೆಮಾಗಳ ಸೂತ್ರಕ್ಕೆ ನಿರ್ದೇಶಕರು ಜೋತು ಬಿದ್ದಿದ್ದಾರೆ.
ಅಭಿನಯ:
ಅನಂತನಾಗ್ ಅಭಿನಯಕ್ಕೆ ತಕ್ಕ ಅವಕಾಶವೇ ಇಲ್ಲಿ ದೊರೆತಿಲ್ಲ. ಈ ಪಾತ್ರ ಮುಂದಿಟ್ಟುಕೊಂಡು ಇದರ ಹಿನ್ನೆಲೆ ತಿಳಿಸುವುದರ ಜೊತೆಗೆ ಇತರ ಪಾತ್ರಗಳ ಕಥೆಯನ್ನೂ ಹೇಳುವಂಥ ಚಿತ್ರಕಥೆ ಇರುವುದರಿಂದ ಹೀಗಾಗಿದೆ ಎಂದು ಹೇಳಬಹುದು. 

ತಮಗೆ ದೊರೆತಿರುವ ಅವಕಾಶಗಳಿಗೆ ರಕ್ಷಿತ್ ಶೆಟ್ಟಿ, ಶೃತಿ ಹರಿಹರನ್ ತಕ್ಕಮಟ್ಟಿನ ನ್ಯಾಯ ಒದಗಿಸಿದ್ದಾರೆ. ಅಚ್ಯುತ್ ಕುಮಾರ್ ಅಭಿನಯ ಎಂದಿನಂತೆ ಅತ್ಯುತ್ತಮ. ಪಾತ್ರವನ್ನು ಅವರು ಆವಾಹಿಸಿಕೊಳ್ಳುವ ರೀತಿಯೇ ಅದ್ಬುತ. ರಂಗನ ಪಾತ್ರಧಾರಿಯ ಅಭಿನಯಕ್ಕೆ ಅವಕಾಶವಿತ್ತು. ಆದರೆ ಈ ಪಾತ್ರ ನಿರ್ವಹಣೆಯಲ್ಲಿ ವಶಿಷ್ಟ ಎನ್. ಸಿಂಹ ಅವರು ಸಂಪೂರ್ಣ ಸೋತಿದ್ದಾರೆ.
ಚಿತ್ರಕಥೆಯನ್ನೂ ಬರೆದಿರುವ ನಿರ್ದೇಶಕ ಹೇಮಂತ್ ರಾವ್ ಅವರ ವಿಶಿಷ್ಟ ಪ್ರಯತ್ನ ಮೆಚ್ಚುಗೆ ಗಳಿಸುತ್ತದೆ. ಆದರೆ ಸಿನೆಮಾದ ಉಳಿದ ತಾಂತ್ರಿಕ ವಿಭಾಗಗಳನ್ನು ಸಮರ್ಪಕವಾಗಿ ದುಡಿಸಿಕೊಳ್ಳುವಲ್ಲಿ ಅವರು ಸೋತಿದ್ದಾರೆ. ಕತ್ತಲು-ಬೆಳಕಿನ ಸಂಮಿಶ್ರಣದ ದೃಶ್ಯಗಳಲ್ಲಿ ಕ್ಯಾಮೆರಾ ವಿಫಲವಾಗಿದೆ. ಕ್ಯಾಮೆರಾ ಇಟ್ಟಿರುವ ಆ್ಯಂಗಲ್ಗಳು ಕೂಡ ಅಸಮರ್ಪಕ ಎನಿಸುತ್ತಿದೆ. ಸಂಕಲನ ಇನ್ನೂ ಚುರುಕಾಗಬೇಕಿತ್ತು. ಹಿನ್ನೆಲೆ ಹಾಡುಗಳ ಶೈಲಿ ಸೂಕ್ತವಾಗಿಲ್ಲ ಜೊತೆಗೆ ಇವುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಸಿನೆಮಾದ ಹಿನ್ನೆಲೆ ಸಂಗೀತವೂ ಸಪ್ಪೆ.
ಆದರೂ ಸಿನೆಮಾ ಒಟ್ಟಾರೆ ಚೆನ್ನಾಗಿದೆ. ಇದಕ್ಕೆ ಕಾರಣ ಚಿತ್ರಕಥೆ ವಿಶಿಷ್ಟತೆ. ಹೊಸ ಥರದ ಪ್ರಯತ್ನವನ್ನು ಮಾಡಿರುವ ಹೇಮಂತ್ ರಾವ್ ಅವರು ಇನ್ನೂ ಉತ್ತಮ ಸಿನೆಮಾಗಳನ್ನು ಕೊಡಬಲ್ಲೆ ಎಂಬ ಭರವಸೆಯನ್ನಂತೂ ಮೂಡಿಸಿದ್ದಾರೆ.

No comments:

Post a Comment