• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಕಪ್ಪು ಕಾಫಿ ಮತ್ತು ಸಮುದ್ರ

ಅಧ್ಯಾತ್ಮ ಮತ್ತು ಸಮುದ್ರ ಸಂಗಮ, ಅಡಂಬರ ಇಲ್ಲದ ವಾಸ್ತುಶಿಲ್ಪ, ವಾಯು ವಿಹಾರಕ್ಕೆಂದೆ ವಿಶಾಲ ರಸ್ತೆಯನ್ನು ನಿದಿಷ್ಟ ಸಮಯ ಮೀಸಲಿಡುವ, ಭದ್ರತೆ ಇದೆ ಎಂಬ ವಾತಾವರಣ ಮೂಡಿಸುವ ಸ್ಥಳೀಯ ಆಡಳಿತ ಇರುವ ಸ್ಥಳ ಮುದ ನೀಡುತ್ತದೆ. ಇಂಥ ಕಾರಣಗಳಿಂದಾಗಿ ಪಾಂಡಿಚೇರಿಗೆ ಆಗಾಗ ಹೋಗಿರುವುದು ನನಗೆ ಇಷ್ಟ.

ಪಾಂಡಿಚೇರಿ ಹೋಗಿ ಪುದುಚೇರಿ ಆಗಿದೆ. ಆದರೂ ಸ್ಥಳೀಯರು, ಪ್ರವಾಸಿಗರು ಕರೆಯುವುದು ಪಾಂಡೀ ಎಂದೇ. ಬಹಳ ವರ್ಷ ಪೋರ್ಚುಗೀಸರಿಂದ ಆಳಲ್ಪಟ್ಟ ಕಾರಣ ಇಲ್ಲಿಯ ಹೆಚ್ಚಿನ ಹಳೆಯ ಕಟ್ಟಡಗಳು, ರಸ್ತೆಗಳು ಬೇರೆ ನಗರಗಳಿಗಿಂತ ವಿಶಿಷ್ಟ-ವಿಭಿನ್ನ. ದೇಶದ ಬೇರೆಬೇರೆ ರಾಜ್ಯಗಳು, ವಿಶ್ವದ ವಿವಿಧ ರಾಷ್ಟ್ರಗಳಿಂದ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ಹೀಗೆ ಬಂದ ಎಲ್ಲರನ್ನೂ ಪ್ರವಾಸಿಗರೆಂದು ಸಾರಸಗಟಾಗಿ ಹೇಳಲು ಆಗುವುದಿಲ್ಲ. ಏಕೆಂದರೆ ಅಧ್ಯಾತ್ಮದ ಕಾರಣದಿಂದ ಬರುವವರ ಸಂಖ್ಯೆಯೂ ಹೆಚ್ಚು.  ಇಂಥವರ ಆಕರ್ಷಣೆ ಅರಬಿಂದೋ ಮತ್ತು ಮಾ.
ನಗರದಲ್ಲಿರುವ ಅರಬಿಂದೋ ಆಶ್ರಮ, ಕುದಿವ, ಶಾಂತಿ ಅರಸುವ ಮನಗಳಿಗೆ ಪ್ರಶಾಂತತೆ ನೀಡುವ ತಾಣ. ನಗರದಿಂದ ತುಸು ದೂರದಲ್ಲಿರುವ ಅರೋವಿಲೆ ಕೂಡ ಆಶ್ರಮಕ್ಕೆ ಸಂಬಂಧಿಸಿದ ಸ್ಥಳ. ಇಲ್ಲಿಯ ಧ್ಯಾನ ಕೇಂದ್ರ ತನ್ನ ವಿಶಿಷ್ಟ ವಾಸ್ತು ಕಾರಣಕ್ಕಾಗಿಯೂ ಜಗತ್ಪ್ರಸಿದ್ಧ. ಪಾಂಡಿಯ ಈ ಎಲ್ಲವುಗಳ ಬಗ್ಗೆ ಮತ್ತೊಮ್ಮೆ ಬರಿಯುತ್ತೇನೆ. ನಾನೀಗ ಹೇಳಲು ಹೊರಟಿರುವುದು 'ಲೆ ಕೆಫೆ' ಬಗ್ಗೆ.
ಲೆ ಕೆಫೆ ಕಟ್ಟಡ ಕೂಡ ಮೊದಲಿಗೆ ಗಮನ ಸೆಳೆಯುವುದು ತನ್ನ ವಾಸ್ತುವಿನಿಂದಲೇ… ಸಮುದ್ರ ಮತ್ತು ನಗರ ಎರಡೂ ಕಡೆಯೂ ಮುಖ ಮಾಡಿ ನಿಂತಂತಿದೆ. ಇದಕ್ಕೆ ಎರಡು ಶತಮಾನಗಳಿಗೂ ಮೀರಿದ ಇತಿಹಾಸ. ರೈಲ್ವೆ ಸ್ಟೇಷನ್, ಬಂದರು ಕಚೇರಿ, ಪೋಸ್ಟ್ ಆಫೀಸ್ ಹೀಗೆ ಅವತಾರಗಳನ್ನು ತಾಳಿದ ಕಟ್ಟಡ ಈಗ 'ಕಾಫಿ ಕೇಂದ್ರ' ಎಲ್ಲೆಲ್ಲೂ ಕಾಫಿ ಕೇಂದ್ರ ಇರುತ್ತದೆ. ಇದರದೇನು ವಿಶೇಷ ಅನಿಸಬಹುದು. ವಿಶೇಷಗಳಿವೆ.
ವಿರಳ ಸಂದರ್ಭಗಳನ್ನು ಬಿಟ್ಟು 'ಲೆ ಕೆಫೆ' ಬಾಗಿಲು ಮುಚ್ಚುವುದಿಲ್ಲ. ದಿನದ ಇಪ್ಪತ್ನಾಲ್ಕು ಗಂಟೆಯೂ ತೆರೆದಿರುತ್ತದೆ. ಎಷ್ಟು ಹೊತ್ತಿಗೆ ಹೋದರೂ ಬಿಸಿಬಿಸಿ ಕಾಫಿಯೊಂದಿಗೆ ಸ್ವಾಗತಿಸುತ್ತದೆ. ಈ ಕಾರಣಕ್ಕಾಗಿ ಇದರ ಮುಂದೆ ಹೋದೊಡನೆ ಮುಗುಳ್ನಗೆಯಿಂದ ಸ್ವಾಗತಿಸುತ್ತಿದೆಯೇನೂ ಎಂಬ ಭಾವ ಮೂಡದೇ ಇರದು. ಮುಂಜಾವು ಮತ್ತು ರಾತ್ರಿ ಹೆಚ್ಚು ಆಪ್ತ ಎನಿಸುತ್ತದೆ. ಈ ಹೊತ್ತುಗಳಲ್ಲಿ ಗ್ರಾಹರ ಸಂಖ್ಯೆ ಕಡಿಮೆ ಇರುವುದು ಸಹ ಇದಕ್ಕೆ ಕಾರಣ ಇರಬಹುದು.

ಪೂರ್ವ ಕರಾವಳಿಯಲ್ಲಿರುವ ತಾಣ ಆದರೂ ಮುಂಜಾನೆ ತಂಪಾಗಿರುತ್ತದೆ. ವಾಕಿಂಗು ಮುಗಿಸಿಯೂ ಅಥವಾ ವಾಕಿಂಗಿಗೆ ಮೊದಲು ಇಲ್ಲಿ ಕುಳಿತು ಬಿಸಿಬಿಸಿ ಕಾಫಿ ಹೀರುತ್ತಾ ಅಲೆಗಳ ಸದ್ದನ್ನು ಕೇಳಿಸಿಕೊಳ್ಳುವುದು ಸಂತಸ ನೀಡುತ್ತದೆ. ನಸುಕು ನಿಧಾನವಾಗಿ ಹರಿದು ಸೂರ್ಯ ಮೇಲೇರುವುದನ್ನು ನೋಡುವುದು ಮತ್ತಷ್ಟೂ ಸಂತಸದ ಸಂಗತಿ.
ಪಾಂಡಿಚೇರಿಯಲ್ಲಿ ಕೆಫೆ ಸ್ಥಳಕ್ಕೆ ಯಾವ ಹೊತ್ತು ಹೋದರೂ ಸಮುದ್ರಕ್ಕೆ ಮುಖ ಮಾಡಿ ಕುಳಿವರು, ವಾಯು ವಿಹಾರ ಮಾಡುವವರು ಇರುತ್ತಾರೆ. ಕೆಫೆಯಲ್ಲಂತೂ ಕನಿಷ್ಟ ಒಂದಿಬ್ಬರಾದರೂ ಕಾಫಿ ಹೀರುಗರು ಕಾಣುತ್ತಾರೆ. ಹೋಗಿ ಕುಳಿತೊಡನೆ ಸರ್ವರ್ ಬಂದು ಏನೂ ಮಾತನಾಡದೇ ಮೆನು ಕಾರ್ಡ್ ಟೇಬಲ್ ಮೇಲೆ ಇರಿಸುತ್ತಾರೆ. ನೀವು ಸಹ ಏನೂ ಮಾತನಾಡದೇ ಮೆನುವಿನಲ್ಲಿ ನಿಮಗೆ ಬೇಕಿರುವುದರತ್ತ ಬೆರಳಿರಿಸಿದರೆ ಸಾಕು. 10 ನಿಮಿಷಗಳ ಒಳಗೆ ಹಬೆಯಾಡುವ ಕಾಫಿ ನಿಮ್ಮ ಮುಂದಿರುತ್ತದೆ. 
ಹಾಲು, ಸಕ್ಕರೆ ಹಾಕಿ ಮಾಡಿದ ಫಿಲ್ಟರ್ ಕಾಫಿ ಅಷ್ಟೆ ಕುಡಿಯುವವರು ಇಲ್ಲಿನ ಮೆನುವಿನಲ್ಲಿರುವ ಕಾಫಿ ವೈವಿಧ್ಯತೆ ನೋಡಿ ಅಚ್ಚರಿ ಪಡದೆ ಇರಲಾರರು. ಅಷ್ಟೊಂದು ಬಗೆಯ ಕಾಫಿ ಇಲ್ಲಿ ದೊರೆಯುತ್ತದೆ. ನಿಮಗೆ ಬೇಕಿರುವ ಕಾಫಿ ಹೇಳಿದರೆ ಆಯಿತು. ಸಕ್ಕರೆ ಬೆರೆಸಿದ, ಕುದಿಯುತ್ತಿರುವ ಹಾಲಿಗೆ ಮೊದಲೇ ಸಿದ್ಧಪಡಿಸಿಕೊಂಡ ಡಿಕಾಕ್ಷನ್ ಬೆರೆಸಿ ತಂದಿಡುವುದಿಲ್ಲ. ಕಾಫಿಯನ್ನು ಫ್ರೆಷ್ ಆಗಿ ಮಾಡಿ ತಂದು ಕೊಡುತ್ತಾರೆ.
ಹಾಲು, ಸಕ್ಕರೆ ಬೆರೆಸಿರದ ಕಪ್ಪು ಕಾಫಿ ಎಂದರೆ ನನಗೆ ಇಷ್ಟ. ಆದರೆ ಉತ್ತಮ ಕಪ್ಪು ಕಾಫಿ ಮಾಡುವುದು ಒಂದು ಕಲೆ. ಕೆಲವರು 'ಕಪ್ಪು ಕಾಫಿ ಮಾಡುವುದೇನು ಕಷ್ಟ. ಡಿಕಾಕ್ಷನಿಗೆ ಬಿಸಿ ನೀರು ಬೆರೆಸಿದರೆ ಸಾಕು ಎನ್ನುತ್ತಾರೆ' ಆದರೆ ಹೀಗೆ ಮಾಡಿದರೆ ಅದು ಕಾಫಿ ಆಗುವ ಬದಲು ಕಹಿ ಕಷಾಯ ಆಗುತ್ತದೆ. ಕಪ್ಪು ಕಾಫಿಯಲ್ಲಿಯೂ ವೈವಿಧ್ಯ ಇದೆ. ಪ್ರತ್ಯೇಕ ರುಚಿ ಹೊಂದಿರುವ ಇವುಗಳನ್ನು ಗುಟುಕೀಕರಿಸುವುದು ಆಹ್ಲಾದಮಯ.
ಕಪ್ಪು ಕಾಫಿಗಳಾದ 'ಎಕ್ಸ್ ಪ್ರೆಸೋ', 'ಎಕ್ಸ್ ಪ್ರೆಸೋ ಅಮೆರಿಕನೊ' ಹೀರುವುದೆಂದರೆ ನನಗೆ ಬಹುಪ್ರಿಯ. ಕಾಫಿ ಮಗ್ ಬಂದೊಡನೆ ಮಗ್ ಅನ್ನು ಮೂಗಿನ ಹತ್ತಿರಕ್ಕೆ ಕೊಂಡೊಯ್ದು ಜೋರಾಗಿ ಉಸಿರೆಳೆದುಕೊಂಡು ಪರಿಮಳ ಆಘ್ರಾಣಿಸುವುದು ವ್ಹಾವ್… ಒಂದೊಂದು ಗುಟುಕಿನ ನಡುವೆಯೂ ಕನಿಷ್ಟ 1 ನಿಮಿಷದಿಂದ 3 ನಿಮಿಷಗಳ ಅಂತರ. ಈ ಕಾರಣಕ್ಕಾಗಿ ಶೀಘ್ರವಾಗಿ ತೆರಳಬೇಕಿರುವ ಸಂದರ್ಭದಲ್ಲಿ ಕಾಫಿ ಕುಡಿಯಲು ಇಷ್ಟವಾಗುವುದಿಲ್ಲ. ಅವಸರದಿಂದ ಕುಡಿದರೆ ಅದು ಕಾಫಿ ಎನಿಸುವುದೇ ಇಲ್ಲ.
ರಾತ್ರಿ 12ರ ನಂತರ ಯಾವ ಹೊತ್ತಿಗಾದರೂ 'ಲೇ ಕೆಫೆ'ಗೆ ಹೋಗಿ ಕುಳಿತು ಸಮುದ್ರದತ್ತ ಮುಖ ಮಾಡಿ, ಕಪ್ಪನೆಯ ಸಮುದ್ರ ನೋಡುತ್ತಾ, ಅಲೆಗಳ ಸದ್ದನ್ನು ಕಿವಿಗಳೊಳಗೆ ತುಂಬಿಸಿಕೊಳ್ಳುತ್ತಾ ಕಪ್ಪು ಕಾಫಿ ಹೀರುತ್ತಾ ಕೂರುವುದು ಅವರ್ಚನೀಯ ಅನುಭವ. ನನ್ನೊಂದಿಗೆ ನಾನು ಅನುಸಂಧಾನ ನಡೆಸುತ್ತಾ, ಸಮುದ್ರದೊಳಗೆ ಕರಗಿ ಹೋಗುವ ಅನುಭವ… ತಾಸುಗಟ್ಟಲೆ ಕುಳಿತರೂ ನಿದ್ರೆಗೆ ಶರಣಾಗಿ ಕಣ್ಣುಗಳು ಮುಚ್ಚುವುದಿಲ್ಲ. ಸೂರ್ಯ ಮೇಲೆರಲು ತೊಡಗಿದಂತೆಲ್ಲ ಕಪ್ಪು ಸಮುದ್ರ, ನೀಲಿ ಸಮುದ್ರವಾಗುವ ಪರಿ ಮನಮೋಹಕ.

No comments:

Post a Comment