• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಚಿತ್ರ ಆವರಿಸಿಕೊಳ್ಳುವ ಬಾಲಕರು

'ಕಾಕ ಮೊಟೈ' ತಮಿಳು ಸಿನೆಮಾ ಏನು ಹೇಳಲು ಹೊರಟಿದೆ; ಸ್ಲಮ್ ಬದುಕು, ಉಡುಪಿಗೆ ಮಾನ್ಯ ನೀಡುವ ಮನಸ್ಥಿತಿ ? ನನ್ನ ಗ್ರಹಿಕೆ ಪ್ರಕಾರ ಇದ್ಯಾವುದೂ ಅಲ್ಲ. ಇಬ್ಬರು ಬಾಲಕರು ಚಿನ್ನಚಿನ್ನ ಆಸೈ (ಸಣ್ಣಸಣ್ಣ ಆಸೆ) ಈಡೇರಿಸಿಕೊಳ್ಳಲು ನಡೆಸುವ ಪ್ರಯತ್ನ, ಉರಿವ ಮನೆಯಲ್ಲಿಯೂ ಗಳ ಹಿರಿಯುವ ಮನಸ್ಥಿತಿ, ಭ್ರಷ್ಟಗೊಂಡ ವ್ಯವಸ್ಥೆ, ಆಧುನಿಕ ಕಾಲಘಟ್ಟದಲ್ಲಿ ಒಂದು ಜಂಕ್ ಪುಡ್ ಕೂಡ ಉಳ್ಳವರು-ಇಲ್ಲದವರು ನಡುವಿನ ಕಂದಕ ಹೆಚ್ಚಿಸಲು ಹೇಗೆ ಕಾರಣ ಆಗುತ್ತದೆ, ಜನಪ್ರಿಯ ಸಿನೆಮಾ ನಟರು ತಮಗೆ ಅರಿವಿಲ್ಲದ ಹಾಗೆ ಬಡವರಲ್ಲಿ ಆಸೆಗಳನ್ನು ಮೂಡಿಸಿ ಅವರನ್ನು ಉದ್ದೀಪಿಸುತ್ತಾರೆ ಎಂಬುದನ್ನೆಲ್ಲ ಮನಮುಟ್ಟುವ ಹಾಗೆ ವಿವರಿಸಲಾಗಿದೆ.

ಇಡೀ ಕಥೆ ನಡೆಯುವುದು ಮಹಾನಗರದ (ಇಲ್ಲಿ ಚೆನ್ನೈ ನೆಪ ಅಷ್ಟೆ) ಸ್ಲಮ್, ರೈಲ್ವೇ ಹಳಿ ಬದಿ ಮತ್ತು ಪಿಜ್ಜಾ ಕಾರ್ನರಿನಲ್ಲಿ. ಸ್ಲಮ್ ಸನಿಹವೇ ಪಿಜ್ಜಾ ಅಂಗಡಿ ತೆರೆಯುತ್ತದೆ. ಅದನ್ನು ಉದ್ಘಾಟಿಸಿಲು ನಾಡಿನ ಜನಪ್ರಿಯ ಸಿನೆಮಾ ನಟನ ಆಗಮನ ಆಗುತ್ತದೆ. ಆತ ಸುದ್ದಿವಾಹಿನಿಗಳ ಕ್ಯಾಮೆರಾಗಳ ಸಲುವಾಗಿ ಬಾಯಿ ಚಪ್ಪರಿಸಿಕೊಂಡು ಪಿಜ್ಜಾ ತಿನ್ನುವುದನ್ನು ನೋಡಿದ ಸಹೋದರರಾದ ಇಬ್ಬರು ಬಾಲಕರಿಗೂ ತಾವೂ ಅದನ್ನು ಸೇವಿಸಲೇಬೇಕೆಂಬ ಆಸೆ ಮೂಡುತ್ತದೆ.
ಪಿಜ್ಜಾ ಕಾರ್ನರ್ ಉದ್ಘಾಟಿಸಲು ಸಿನೆಮಾ ನಟ ಬಾರದಿದ್ದರೆ ಮಕ್ಕಳು ಕೂಡ ಅಲ್ಲಿಗೆ ಹೋಗುತ್ತಿರಲಿಲ್ಲ. ಅವರಿಗೆ ಜಂಕ್ ಪುಡ್ ತಿನ್ನುವ ಆಸೆಯೂ ಮೂಡುತ್ತಿರಲಿಲ್ಲ. ನಟ, ಬಾಯಿ ಚಪ್ಪರಿಸಿಕೊಂಡು ತಿನ್ನುವುದೇ ಆ ತಿಂಡಿ ಹೇಗಿರಬಹುದು ಎಂದು ಸವಿದು ನೋಡುವ ಕುತೂಹಲ, ಆಸೆ ಮೂಡಲು ಕಾರಣ ಆಗುತ್ತದೆ.  ಆದರೆ ಅದರ ಬೆಲೆ ಇವರಿಗೆ ಸುಲಭದಲ್ಲಿ ಎಟುಕುವ ಹಾಗಿರುವುದಿಲ್ಲ.
ಜೈಲಿನಲ್ಲಿರುವ ಗಂಡ, ತನ್ನಿಬ್ಬರು ಮಕ್ಕಳು, ಅತ್ತೆಯನ್ನು ಸಲಹುವ ಹೊಣೆ ಹೊತ್ತಾಕೆಗೆ 300 ರೂಪಾಯಿ ಕೂಡ ದೊಡ್ಡ ಮೊತ್ತ. ಆರ್ಥಿಕ ದುರ್ಬಲರಿಗೆ ಯಾವೋದು ಸ್ಕೀಮಿನಲ್ಲಿ ಸರಕಾರ  ಉಚಿತವಾಗಿ ಟಿವಿ ಕೊಡುತ್ತದೆ. ಅಲ್ಲಿ ಬರುವ ಪಿಜ್ಜಾ ಜಾಹಿರಾತು ಕೂಡ ಬಾಲಕರಿಬ್ಬರ ಆಸೆ ಉದ್ದೀಪಿಸುತ್ತದೆ. 
ಕಲ್ಲಿದ್ದಲು ಕದ್ದು ಮಾರುತ್ತಾ ಸ್ವಲ್ಪಸ್ವಲ್ಪವೇ ಹಣ ಕೂಡಿಸಿ 300ರ ಮೊತ್ತಕ್ಕೇರಿಸುತ್ತಾರೆ. ಪಿಜ್ಜಾ ಅಂಗಡಿಗೆ ಹೋದರೆ ಕೊಳಕು ಬಟ್ಟೆಯವರು ಎಂದು ಸೆಕ್ಯುರಿಟಿ ಒಳಸೇರುವುದಿಲ್ಲ. ಈಗ ಹೊಸ ಬಟ್ಟೆ ತೆಗೆದುಕೊಳ್ಳುವ ತವಕ. ಅದನ್ನು ಸಂಪಾದಿಸಿ, ಧರಿಸಿ ಹೋದರೆ ಪಿಜ್ಜಾ ಕಾರ್ನರ್ ಮ್ಯಾನೇಜರ್ನಿಂದ ಕಪಾಳಕ್ಕೆ ಹೊಡೆತ. ಇದರಿಂದ ಅವಮಾನಗೊಳ್ಳುವ ಬಾಲಕರು ದುಃಖದಿಂದ ಹಿಂದಿರುಗುತ್ತಾರೆ.

ಇಲ್ಲಿಂದಾಚೆ ನಡೆಯುವ ಬೆಳವಣಿಗಳು ಗಮನಾರ್ಹ. ಬಾಲಕರಿಗೆ ಆದ ಕಪಾಳಕ್ಕೆ ಹೊಡೆತ ವಿಡಿಯೋ,  ಸ್ಲಮ್ಮಿನ ಪುಢಾರಿಗಳಿಬ್ಬರಿಗೆ ಹಣ ಸಂಪಾದನೆ ದಾರಿ ಕಾಣಿಸುತ್ತದೆ. ಬೆದರಿದ ಮಾಲೀಕ ಇವರಿಗೆ ದುಡ್ಡುಕೊಡಲು ಒಪ್ಪುತ್ತಾನೆ. ಅಷ್ಟರಲ್ಲಿ ಸುದ್ದಿ ವಾಹಿನಿಗಳಲ್ಲಿ ಕಪಾಳಕ್ಕೆ ಹೊಡೆತದ ಘಟನೆ ಪ್ರಸಾರ ಆರಂಭ ಆಗುತ್ತದೆ. 
ಬೆದರಿದ ಪಿಜ್ಜಾ ಕಾರ್ನರ್ ಮಾಲೀಕ ಸ್ಥಳೀಯ ಜನಪ್ರತಿನಿಧಿಗೆ, ಪೊಲೀಸರಿಗೆ ಲಂಚ ನೀಡುತ್ತಾನೆ. ಅತ್ತ ಟಿವಿಗಳಲ್ಲಿ ಈ ಘಟನೆ ಕುರಿತಂತೆ ಪ್ಯಾನಲ್ ಡಿಸ್ಕಷನ್ಸ್ ನಡೆಯತೊಡಗುತ್ತವೆ.  ಇನ್ನೊಂದೆಡೆನೆ ಪ್ರತಿಭಟನೆ ಮಾಡಲು ಸಿದ್ಧತೆ ನಡೆಯತೊಡಗುತ್ತದೆ.
ಈ ಎಲ್ಲ ಬೆಳವಣಿಗಳ ಅರಿವಿಲ್ಲದೆ ತಮ್ಮ ಪಾಡಿಗೆ ಆಡಿಕೊಂಡಿದ್ದ ಮಕ್ಕಳನ್ನು ಖುದ್ದು ಭ್ರಷ್ಟ ಪೊಲೀಸ್ ಇನ್ಸ್ಪೆಕ್ಟರ್ ಬಂದು ಎಳೆದೊಯ್ಯುತ್ತಾನೆ. ಜೀಪು ನಿಲ್ಲುವುದು ಪಿಜ್ಜಾ ಕಾರ್ನರ್ ಮುಂದೆ. ಅಷ್ಟರಲ್ಲಾಗಲೇ ಸುದ್ದಿವಾಹಿನಿಗಳ ಓಬಿ ವಾಹನಗಳು, ಮೈಕ್ ಹಿಡಿದ ಪತ್ರಕರ್ತರು, ಪತ್ರಿಕೆಗಳ ಛಾಯಾಗ್ರಾಹಕರು ಮತ್ತು ಕುತೂಹಲಿಗರ ದಂಡು ಅಲ್ಲಿ ನೆರೆದಿರುತ್ತದೆ.
ಪಿಜ್ಜಾ ಕಾರ್ನರ್ ಮಾಲೀಕನೇ ಬಾಲಕರಿಬ್ಬರನ್ನೂ ಸ್ವಾಗತಿಸಿ ಒಳ ಕರೆದೊಯ್ದು ಪಿಜ್ಜಾ ತಿನ್ನಿಸುತ್ತಾನೆ. ಕ್ಯಾಮೆರಾಗಳ ಫ್ಲಾಷ್ ಲೈಟುಗಳು ಮಿಂಚತೊಡಗುತ್ತವೆ. ಪಿಜ್ಜಾ ತಿಂದ ಬಾಲಕರ ಮೊಗದಲ್ಲಿ ಖುಷಿ ಅರಳುವುದಿಲ್ಲ. ಅದರ ಬಗ್ಗೆ ತಿರಸ್ಕಾರ ಮೂಡುತ್ತದೆ. ನಮ್ಮನೆ ದೋಸೆಯೇ  ಚೆನ್ನಾಗಿವೆ ಎಂಬ ಉದ್ಗಾರಿಸುತ್ತಾರೆ. 
ಸುದ್ದಿ ವಾಹಿನಿ ವರದಿಗಾರ್ತಿ ಪಿಜ್ಜಾ ಮಾಲೀಕನನ್ನು ಕೇಳುತ್ತಾಳೆ. 'ಬಾಲಕರಿಗೆ ಹೊಡೆದ ನಿಮ್ಮ ಸಿಬ್ಬಂದಿ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತೀರಿ' ಅದಕ್ಕೆ ಮಾಲೀಕನ  ನಿರಾಸಕ್ತಿ ಉತ್ತರ 'ಶಿಸ್ತುಕ್ರಮ ಕೈಗೊಳ್ಳುತ್ತೇವೆ' ಬಾಲಕರಿಬ್ಬರ ಪಿಜ್ಜಾ ಆಸೆ, ಏನೇನೋ ಘಟನೆಗಳಿಗೆ ಕಾರಣವಾಗಿ, ಸುದ್ದಿವಾಹಿನಿಗಳಿಗೆ ರಸವತ್ತಾದ ಸುದ್ದಿ ಆಗಿ ಪೊಲೀಸರಿಗೆ, ಜನಪ್ರತಿನಿಧಿಗೆ, ಚೇಲಾಗಳಿಗೆ ದುಡ್ಡು ಕೀಳಲು ಒಂದು ಅವಕಾಶವಾಗಿ ಮುಗಿದು ಹೋಗುತ್ತದೆ. ಯಾರಿಗೂ ಬಾಲಕರ ನೋವು ಅರ್ಥ ಆಗುವುದಿಲ್ಲ. ಆದರೆ ಈ ಘಟನೆ ದುಡ್ಡು ಮಾಡಲು ಇರುವ ಅವಕಾಶ ಎನ್ನುವುದು ಮಾತ್ರ ಅರ್ಥ ಆಗುತ್ತದೆ.
ಚಿತ್ರಕಥೆ ಬರೆದು ನಿರ್ದೇಶನ ಮತ್ತು ಛಾಯಾಗ್ರಹಣದ ಹೊಣೆಯನ್ನೂ ಹೊತ್ತ ಎಂ. ಮಣಿಕಂಠನ್ ಅರ್ಥಪೂರ್ಣವಾಗಿ ನಿರೂಪಿಸಿದ್ದಾರೆ. ಯಾವುದೇ ಅನಗತ್ಯ ದೃಶ್ಯ ಮತ್ತು ಸಂಭಾಷಣೆ ಚಿತ್ರದಲ್ಲಿ ಇಲ್ಲ. ಕ್ಯಾಮೆರಾ ಮತ್ತು ಸಂಕಲನದ ಕಾರ್ಯ ಕೂಡ ಅಚ್ಚುಕಟ್ಟು.

ವಿಘ್ನೇಶ್ ಮತ್ತು ರಮೇಶ್ ಸ್ಲಮ್ ಬಾಲಕರ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇಡೀ ಚಿತ್ರವನ್ನು ಇವರ ಲವಲವಿಕೆ ನಟನೆ ಆವರಿಸಿಕೊಂಡಿದೆ. ಇವರ ತಾಯಿ ಪಾತ್ರದಲ್ಲಿ ನಟಿಸಿರುವ ಐಶ್ವರ್ಯಾ ರಾಜೇಶ್ ಅಭಿನಯ ಕೂಡ ಗಮನ ಸೆಳೆಯುತ್ತದೆ. ಚಿತ್ರದಲ್ಲಿ ಇರುವ ಎಲ್ಲ ಹಾಡುಗಳು ಕೂಡ ವಿಶಿಷ್ಟವಾಗಿವೆ. 
ಅಂದ ಹಾಗೆ ಕಾಕಮೊಟೈ ಅಂದರೆ ಕಾಗೆ ಮೊಟ್ಟೆ. ತನ್ನ ಮೊಟ್ಟೆಗಳನ್ನು ರಕ್ಷಿಸಿಕೊಳ್ಳಲು ಕಾಗೆ ಬಹಳ ಎಚ್ಚರ ವಹಿಸುತ್ತದೆ. ಅದನ್ನು ಯಾಮಾರಿಸಿ ಮೊಟ್ಟೆ ಕದ್ದಿಯುವುದು ಸುಲಭ ಅಲ್ಲ. ಆದರೆ ಹೀಗೆ ಮಾಡಿ ಮೊಟ್ಟೆಗಳನ್ನು ಎಗರಿಸಿ ಅದನ್ನು ಕುಡಿಯುವ ಅಭ್ಯಾಸವನ್ನು ಬಾಲಕರಿಬ್ಬರೂ ರೂಢಿಸಿಕೊಂಡಿರುತ್ತಾರೆ. ಇದಕ್ಕಾಗಿಯೇ ಅವರ ಅಡ್ಡ ಹೆಸರು ದೊಡ್ಡ ಕಾಕಮೊಟ್ಟೆ, ಚಿಕ್ಕ ಕಾಕ ಮೊಟ್ಟೆ. ಚಿತ್ರಕಥೆಯ ಬಿಗಿ, ನಿರೂಪಣೆ, ನಟನೆ ತಾಜಾತನ, ಕ್ಯಾಮೆರಾ ಬಳಸಿರುವ ರೀತಿಗಾಗಿ ಚಿತ್ರ ನೋಡಲು ಅರ್ಹ ಎನ್ನಿಸಿಕೊಳ್ಳುತ್ತದೆ.

No comments:

Post a Comment