• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಟ್ರೈನ್ ಟು ಪಾಕಿಸ್ತಾನ; ಸಮರ್ಥ ಅನುವಾದದ ಸೊಬಗು

ಖುಷ್ವಂತಸಿಂಗ್ ಅವರ "ಟ್ರೈನ್ ಟು ಪಾಕಿಸ್ತಾನ" ಇಂಗ್ಲಿಷ್ ಕೃತಿ ಓದಿದ್ದೆ. ತದನಂತರ ಕನ್ನಡಕ್ಕೆ ಅದು ಅನುವಾದಗೊಂಡರೂ ಮೂಲಕೃತಿ ಓದಿದ್ದ ಕಾರಣ ಪುಸ್ತಕ ಖರೀದಿಸುವ ಆಸಕ್ತಿ ಮೂಡಲಿಲ್ಲ. ಮೊನ್ನೆ ಕೃತಿಯ ಕನ್ನಡ ಅನುವಾದಕ ಡಾ. ಎಂ.ಬಿ. ರಾಮಮೂರ್ತಿ ಅವರು  ಇತ್ತೀಚೆಗೆ ಕಾರ್ಯಕ್ರಮವೊಂದರ ಸ್ಮರಣಾರ್ಥ ಪುಸ್ತಕನೀಡಿದರು. ಆಗ ನನ್ನ ಸಂಪಾದಕತ್ವದ ಪತ್ರಿಕೆ ಹೊರ ಬರುವ ಸಮಯ. ಪುಸ್ತಕ ಓದಲು ಸಮಯ ಇರಲಿಲ್ಲ. ಊಟ ಮಾಡುವಾಗ ಏನನಾದರೂ ಓದುವುದು ನನ್ನ ದುರಭ್ಯಾಸ. ಕಾರಣದಿಂದ ನನ್ನ ಮನೆಮಂದಿಯಿಂದ ಬೈಸಿಕೊಳ್ಳುವುದೂ ಉಂಟು. ಅದಕ್ಕೆ ಕಾರಣ 'ತಟ್ಟೆಗೆ ಏನು ಬಡಿಸುತ್ತಿದ್ದಾರೆ ಗಮನಿಸದೆ ತಿನ್ನುವುದು; ಉಪ್ಪು-ಹುಳಿ-ಕಾರ ಬಗ್ಗೆ ಏನೊಂದು ಮಾತನಾಡದಿರುವುದು; ಕೊನೆಯಲ್ಲಿ ಅಡಿಗೆ ಚೆನ್ನಾಗಿದೆ ಎಂದು ಕಾಮೆಂಟು ಪಾಸು ಮಾಡುತ್ತೀರಿ' ಎನ್ನಿಸಿಕೊಳ್ಳುವುದು.

ಟ್ರೈನ್ ಟು ಪಾಕಿಸ್ತಾನದ ಮುನ್ನುಡಿಗಳನ್ನು ದಾಟಿ ಒಂದೆರಡು ಪುಟ ಓದುತ್ತಿದಂತೆಯೆ ಆಸಕ್ತಿ ಮೂಡತೊಡಗಿತು. ಅಂದು ರಾತ್ರಿ ಓದಲು ಕುಳಿತವನು ಪುಸ್ತಕ ಕೆಳಗಿಟ್ಟಾಗ ಬೆಳಕು ಹರಿಯಲು ಇನ್ನೆರಡು ತಾಸು ಬಾಕಿ ಇತ್ತು ! ಇದಕ್ಕೆ ಮುಖ್ಯ ಕಾರಣ ಕೃತಿಯ ಸಮರ್ಥ ಅನುವಾದದ ಸೊಬಗು. ಇದು ಪದಪದ ಅನುವಾದ ಅಲ್ಲ. ಮೂಲ ಪುಸ್ತಕದ ಅಂತಃಸತ್ವ ಗ್ರಹಿಸಿದ ಭಾವಾನುವಾದ.
ಭಾರತ ಎಂಬ ಭೌಗೋಳಿಕ ದೇಹದಿಂದ ಪಾಕಿಸ್ತಾನ ಎಂಬ ಭಾಗ ಕತ್ತರಿಸಲ್ಪಟ್ಟ ದಿನಗಳಲ್ಲಿ ಆದ ಕೋಮು ವೈಷಮ್ಯ ಪ್ರಮುಖವಾಗಿ ಇಟ್ಟುಕೊಂಡು ಹೆಣೆದ ಕಾದಂಬರಿ ಇದು. ಇಲ್ಲಿ ಬರುವ ಮೋನೋ ಮಜ್ರಾ ಎಂಬ ಹಳ್ಳಿ ಹೆಸರು ಕಾಲ್ಪನಿಕ ಆದರೂ ಅಲ್ಲಿ ನಡೆಯುವ ಘಟನೆಗಳು ಕಲ್ಪಿತ ಅಲ್ಲ. ನೂರಾರು ವರ್ಷ ಕಷ್ಟ-ಸುಖ ಹಂಚಿಕೊಂಡು ಬದುಕುತ್ತಾ ಬಂದ ಹಿಂದೂ-ಮುಸ್ಲೀಮ್ ಸಮುದಾಯಗಳ ನಡುವೆ ವಿಭಜನೆ ಎಂಬ ವಿಷಸರ್ಪ ಭುಸುಗುಟ್ಟತೊಗಿದ ಸಂದರ್ಭ. ಪರಸ್ಪರರ ನಡುವೆ ಮೂಡುವ ಶಂಕೆ, ಬೇರ್ಪಡುವಿಕೆ. ಇದರ ಫಾಯಿದೆ ಪಡೆಯುವ ಸಮಾಜಘಾತುಕ ಶಕ್ತಿಗಳು, ನಿರ್ಲಿಪ್ತ ಅಧಿಕಾರಶಾಹಿ, ಇಂಥ ಬೆಳವಣಿಗೆ ಆಗದಂತೆ ಎಚ್ಚರ ವಹಿಸದ ಸರಕಾರ. ಬೇರ್ಪಟ್ಟ ಎರಡು ಪ್ರದೇಶಗಳ ನಡುವೆ ಶವವಾಹಕಗಳಾದ ಟ್ರೈನುಗಳು, ಇಂಥ ವಿಷಮ ಪರಿಸ್ಥಿತಿಯಲ್ಲಿಯೂ ಮಾನವೀಯತೆ ಮೆರೆಯುವ ಮನಸುಗಳು; ತ್ಯಾಗ ಎಂಬ ಪದ ಪರಿಚಯ ಇಲ್ಲದೆಯೂ ಪ್ರೀತಿಗಾಗಿ ಪ್ರಾಣ ಕೊಡುವ ಮನಸು. ಇವೆಲ್ಲದರ ಹೃದಯಸ್ಪರ್ಶಿ ಚಿತ್ರಣ 'ಟ್ರೈನ್ ಟು ಪಾಕಿಸ್ತಾನ'
ಕೃತಿಯನ್ನು ಇಂಗ್ಲಿಷಿನಲ್ಲಿ ಓದಿದಾಗ ಮೂಡದ ಹೊಳಹುಗಳು, ಚಿಂತನೆ ಮತ್ತು ಸೂಕ್ಷ್ಮ ಸಂವೇದನೆ ಅನುವಾದಿತ ಕೃತಿ ಓದಿದಾಗ ಮೂಡತೊಗಿತು. ಮುಖ್ಯವಾಗಿ ಪ್ರಾಂತ್ಯದ ದಂಡಾಧಿಕಾರಿ ಹುಕುಮ್ ಚಂದ್, ಠಾಣಾಧಿಕಾರಿ ಕುಟಿಲತೆ, ಅಮಾಯಕರನ್ನು ಪರಿಸ್ಥಿತಿ ದಾಳವಾಗಿಸಿಕೊಳ್ಳುವ ಕ್ರೌರ್ಯದ ಸೂಕ್ಷ್ಮಗಳು, ಮಾನವೀಯತೆ ಹೆಸರಿನಲ್ಲಿ ಪಕ್ಷ ರಾಜಕಾರಣ ಮಾಡಲು ಇಕ್ಬಾಲ್ ಎಂಬ ಆದರ್ಶ ಯುವಕನನ್ನು ಮನೋ ಮಾಜ್ರಾಕ್ಕೆ ಕಳಿಸುವ ರಾಜಕೀಯ ಪಕ್ಷವೊಂದರ ನಿಲುವಿನ ಹಿನ್ನೆಲೆ, ಬಂದವನಲ್ಲಿ ಇದ್ದ ಹುಂಬತನ ಇತ್ಯಾದಿ ಸೂಕ್ಷ್ಮಗಳನ್ನು ಕನ್ನಡ ಅನುವಾದ ಮನಮುಟ್ಟಿಸಿತು.
ಮೂಲಕೃತಿಯು ಮುಂಗಾರು ಮಳೆಗಾಲ ಆರಂಭದ ಬಗ್ಗೆ ಸಾಂಕೇತಿಕವಾಗಿ, ಕಾವ್ಯಮಯವಾಗಿ ಹೇಳುವ ಸಾಲುಗಳನ್ನು ಬಹಳ ಚೆಂದವಾಗಿ ಕನ್ನಡಕ್ಕೆ ದಾಟಿಸಲಾಗಿದೆ. "ಅದೇ ಕಪ್ಪನೆಯ ಗೋಡೆಯೊಂದು ಪೂರ್ವ ದಿಕ್ಕಿನಲ್ಲಿ ಮೇಲೇಳುತ್ತಿದೆಇದಕ್ಕೆ ಅಡ್ಡವಾಗಿ ಕೊಕ್ಕರೆಗಳು ಗುಂಪಾಗಿ ಹಾರುತ್ತಿವೆ. ಹಗಲು ಹೊತ್ತಿನ ಬೆಳಕನ್ನೂ ಮೀರಿಸುವಂಥ ಮಿಂಚು ಫಳಪಳಿಸುತ್ತಿದೆ. ಗಾಳಿ ತುಂಬಿದ ಕಪ್ಪನೆಯ ಮೋಡಗಳು ದೊಡ್ಡ ಅಲೆಗಳಾಗಿ ತೇಲಿ, ಸೂರ್ಯನನ್ನು ಮರೆ ಮಾಡುತ್ತವೆ. ಭೂಮಿಯ ಮೇಲೆ ಗಾಢ ನೆರಳು ಬೀಳುತ್ತದೆ. ಇನ್ನೊಮ್ಮೆ ಗುಡುಗು-ಸಿಡಿಲಿನ ಗರ್ಜನೆ ಆಗುತ್ತದೆ. ದೊಡ್ಡದಾದ ಮಳೆಹನಿಗಳು ಬಿದ್ದು ಧೂಳಡಗುತ್ತದೆ. ಮಣ್ಣಿನ ವಾಸನೆಯ ಸುಗಂಧವು ಭೂಮಿಯಿಂದ ಮೇಲೆರುತ್ತದೆ. ಹಸಿದ ಹೆಬ್ಬುಲಿಯೊಂದರ ಘರ್ಜನೆಯಂತೆ ಮತ್ತೊಮ್ಮೆ ಗುಡುಗು-ಸಿಡಿಲುಗಳ ಆರ್ಭಟ ಕೇಳಿಸುತ್ತದೆ. ಬಂದೇ ಬಿಟ್ಟಿತು ! ನೀರು ಅಲೆಅಲೆಯಾಗಿ ಹರಡಿಕೊಂಡು. ಜನರು ಆಗಸದ ಕಡೆಗೆ ಮುಖಮಾಡಿ ಸಮೃದ್ಧ ಮಳೆಯಲ್ಲಿ ತೊಯ್ದು ತೊಪ್ಪೆಯಾಗುತ್ತಾರೆ"
ಜಗ್ಗತ್ಸಿಂಗ್, ನೂರನ್ ನಡುವಿನ ಪ್ರೀತಿ-ಪ್ರಣಯ ಸನ್ನಿವೇಶಗಳನ್ನು ವಿವರಿಸುವಲ್ಲಿಯೂ ಅನುವಾದ ಹಿಂದೆ ಬೀಳುವುದಿಲ್ಲ. ಕನ್ನಡದ್ದೇ ಆದ ಪದಪುಂಜಗಳನ್ನು ಹೆಣೆದು ಪ್ರಣಯದ ಸನ್ನಿವೇಶಗಳನ್ನು ವಿವರಿಸಲಾಗಿದೆ. ಆದರೆ ಇದು ಆಶ್ಲೀಲವಾಗಿಲ್ಲ. ಯುವಪ್ರೇಮಿಗಳಿಬ್ಬರ ಉನ್ಮಾದದ ಸಂಯಮಪೂರ್ಣ ವರ್ಣನೆ ಅಷ್ಟೆ ಆಗಿದೆ.
ಅನುಮಾನದ ಹುತ್ತ ಹೇಗೆ ಹಂತಹಂತವಾಗಿ ಬೆಳವಣಿಗೆ ಆಗುತ್ತಾ ಹೋಗುತ್ತದೆ. ಅಲ್ಲಿಗೆ ತಮ್ಮ ಏಳಿಗೆಯೇ ಮುಖ್ಯವಾದ ರಾಜಕೀಯ ಪಕ್ಷಗಳು, ಅಧಿಕಾರಶಾಹಿ ಹೇಗೆ ಭುಸುಗುಟ್ಟುವ ಸರ್ಪಗಳನ್ನು ಸೇರಿಸುತ್ತಾರೆ . ಇಂಥ ವಿಷಗಾಳಿ ಪರಿಸರವನ್ನು ಹೇಗೆ ಆವರಿಸಿಕೊಳ್ಳುತ್ತದೆ. ಅಮಾಯಕರು ಬಲಿಯಾಗುವ ಪರಿಯ ಬಗ್ಗೆ ಅನುವಾದಿತ ಕೃತಿ ಹೇಳುತ್ತಾ ಹೋಗುವ ಪರಿ ನಡುಕ ಮೂಡಿಸುತ್ತದೆ.
ತಾನು ಬಾಳುತ್ತಿರುವ ಪರಿಸರದಲ್ಲಿ ದುಷ್ಟನೆಂದು ಪರಿಗಣಿತ ಆದವ, ಪೊಲೀಸರಿಂದ ಪದೇಪದೇ ಸಕಾರಣಗಳಿಗಿಂತಲೂ ವಿನಃ ಕಾರಣ ಚಿತ್ರಹಿಂಸೆಗೆ ಗುರಿಯಾದರೂ ಅವರ ವಿರುದ್ಧ ದ್ವೇಷ ಬೆಳಸಿಕೊಳ್ಳದೆ ಜೀವನೋತ್ಸಾಹ ತುಂಬಿಕೊಂಡಾತ ಜಗ್ಗತ್ ಸಿಂಗ್. ಈತ ತಾನು ಪ್ರೇಮಿಸಿದ ಮುಸ್ಲೀಮ್ ಯುವತಿ ಮತ್ತು ಆಕೆಯ ಸಮುದಾಯ ಕಗ್ಗೊಲೆಯಾಗುವುದನ್ನು ತಪ್ಪಿಸಲು ಕೈಗೊಂಡ ತೀರ್ಮಾನ ಮನಸನ್ನು ಭಾರಗೊಳಿಸುತ್ತದೆ. ಓದುಗನಿಂದ ದೊಡ್ಡ ನಿಟ್ಟುಸಿರು ಹೊರಬೀಳುವುದರೊಂದಿಗೆ ಕೈಗಳು ಕೃತಿಯನ್ನು ಕೆಳಗಿಳಿಸುತ್ತವೆ.
ಪುಸ್ತಕ: ಟ್ರೈನ್ ಟು ಪಾಕಿಸ್ತಾನ
ಮೂಲ ಕಾದಂಬರಿಕಾರ: ಖುಷ್ವಂತಸಿಂಗ್
ಅನುವಾದ: ಡಾ. ಎಂ.ಬಿ. ರಾಮಮೂರ್ತಿ
ಪುಸ್ತಕದ ಬೆಲೆ: 125 ರೂ.
ಪ್ರಕಾಶಕರು: ಲಂಕೇಶ್ ಪ್ರಕಾಶನ
ಸಂಪರ್ಕ ಸಂಖ್ಯೆ:080-2667 6427

No comments:

Post a Comment