• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಪಾತ್ರ ಬದಲಾದರೂ ಸಾವು ತಪ್ಪುವುದಿಲ್ಲ

"ಉತ್ತಮ ವಿಲನ್'  ಸಿನೆಮಾ; ಜನಪ್ರಿಯ ನಟನೋರ್ವನ ಬದುಕಿನ ಒಳಗು-ಹೊರಗುಗಳ ಪರಿಚಯ ಮಾಡಿಸುತ್ತಲೆ ಜೀವನ ಎಂಬ  ರಂಗಭೂಮಿ ಜೀವಂತ ಪಾತ್ರಗಳ ಆಷಾಢಭೂತಿತನ, ಅಸೂಯೆ, ದುರಾಶೆ ಇವುಗಳನ್ನು ತೆರೆದಿಡುತ್ತಾ ಹೋಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ 'ಪಾತ್ರ ಬದಲಾದರೂ ಸಾವು' ತಪ್ಪದು' ಎಂಬುದನ್ನೂ ಹೇಳುತ್ತದೆ.

ಸಿನೆಮಾ ಆರಂಭವೇ ನಟ ಮನೋರಂಜನ್ ಹೊಸ ಚಲನಚಿತ್ರ ಮೊದಲ ಪ್ರದರ್ಶನ, ಜಮಾಯಿಸಿದ ಭಾರಿ ಅಭಿಮಾನಿ ಸಮೂಹ ತೋರಿಸುವುದರೊಂದಿಗೆ  ಈತನ (ದೈಹಿಕ ಸ್ಥಿತಿ  ಸೇರಿದಂತೆ) ಮತ್ತು ಈತನ ಪತ್ನಿ, ಮಗ, ಅತ್ತೆ-ಮಾವಂದಿರ ಮನೋಸ್ವಭಾವಗಳ ಸೂಕ್ಷ್ಮ ಪರಿಚಯ ಮಾಡಿಕೊಡುತ್ತದೆ. ನಟ ದುಗುಡದಲ್ಲಿ ಇರುವುದು ಕೂಡ ತಿಳಿಯುತ್ತದೆ. 
ಮನೋರಂಜನ್ ಜೀವನ ತೆರೆದಿಟ್ಟ ಪುಸ್ತಕ. ಅದರಲ್ಲಿ ಅದುವರೆಗೂ ಯಾರೂ ಓದಿರದ ಪುಟಗಳಿವೆ ಎಂಬುದನ್ನು ಸಿನೆಮಾ ಹೇಳುತ್ತಾ ಹೋಗುತ್ತದೆ. ಕುಟುಂಬ ಸದಸ್ಯರೆಲ್ಲ ಇದ್ದರೂ ಪ್ರೇಯಸಿಯನ್ನೂ ಸಿನೆಮಾ ವೀಕ್ಷಣೆಗೆ ಆಹ್ವಾನಿಸುವ ಮೂಲಕ ನಟ ತಾನು ಬಚ್ಚಿಟ್ಟುಕೊಳ್ಳುವ ಗುಣದವನಲ್ಲ ಎಂಬುದನ್ನು ಮನಗಾಣಿಸುತ್ತಾನೆ.
ಜನಪ್ರಿಯ ಸಿನೆಮಾ ನಟನಾಗುವ ಪೂರ್ವದ ಪ್ರೇಮ ಪ್ರಕರಣ, ಇದರ ಪರಿಣಾಮದ ಹೆಣ್ಣು ಮಗು ಇವುಗಳನ್ನು ಹೇಳತೊಡಗುವ ಸಿನೆಮಾ ಅದೇ ಹಳಿಯಲ್ಲಿ ಮುಂದುವರಿಯದೆ ಬೇರೆಬೇರೆ ಆಯಾಮಗಳನ್ನು ತೆರೆದಿಡುತ್ತಾ ಹೋಗುತ್ತದೆ. 'ಆದಿ ಶಂಕರ' ಸಿನೆಮಾ ಆಫರ್ ಬೇಡ ಎನ್ನುವ ಮನೋರಂಜನ್ ಮತ್ತೊಂದು ವಿಭಿನ್ನ ಸಿನೆಮಾ ನಿರ್ಮಾಣಕ್ಕೆ ಮುಂದಾಗುತ್ತಾನೆ. ತನ್ನನ್ನು ಮುಂಬೆಳಕಿಗೆ ತಂದ ನಿರ್ದೇಶಕ ಮಾರ್ಗದರ್ಶಿ ವಯೋವೃದ್ಧರಾದರೂ ಅವರಿಂದಲೆ ತನ್ನ ಸ್ವಂತ ನಿರ್ಮಾಣದ ಸಿನೆಮಾ ನಿರ್ದೇಶನ ಮಾಡಿಸಬೇಕೆಂಬ ಹೆಬ್ಬಯಕೆ. ಅವರನ್ನೂ ಹಠ ಹಿಡಿದು ಒಪ್ಪಿಸುತ್ತಾನೆ. 
ಚಿತ್ರ ನಿರ್ಮಾಣ ಶುರು ಆಗುತ್ತದೆ. ಇದರ ಹೆಸರೇ 'ಉತ್ತಮ ವಿಲನ್' ಇದರದು ಒಂದು ವಿಚಿತ್ರ ಕಥಾ ವಸ್ತು.  ಸುಮಾರು ಒಂದು ಸಾವಿರ ವರ್ಷ ಹಳೆಯದಾದ ಥೆಯ್ಯಾಮ್, ತಮಿಳುನಾಡಿನ ಜನಪದ ಕಲಾ ಪ್ರಕಾರ ಕೂತತ್ತು ವೈಶಿಷ್ಟಗಳನ್ನು ಬಳಸಿಕೊಳ್ಳುವ ಸಿನೆಮಾ
ಉತ್ತಮ ವಿಲನ್ ಸಿನೆಮಾದ ಉತ್ತಮ ಸಾವಿನ ದವಡೆಯಿಂದ ಪಾರಾಗುತ್ತಲೆ ನಡೆಯುತ್ತಾನೆ. ಇದು ಅತ್ಯಂತ ಆಕಸ್ಮಿಕ ಎಂಬುದು ಅವನಿಗೆ ತಿಳಿದಿರುತ್ತದೆ. ಆದರೆ ಲೋಕದ ಕಣ್ಣಿನಲ್ಲಿ ಅವನು ಮೃತ್ಯುಂಜಯ. ಇದನ್ನು ಪರೀಕ್ಷೆಸಲೆಂದೆ ಆತನನ್ನು ಪದೇಪದೇ ಮೃತ್ಯುವಿನ ದವಡೆಗೆ ನೂಕುವ ವಂಚಕ ರಾಜನ ಕ್ರೌರ್ಯ. ಇವನ ಬೆನ್ನ ಹಿಂದೆ ನಡೆಯುತ್ತಿರುವ ಗುಪ್ತ ಯೋಜನೆಗಳು ಇವುಗಳನ್ನು ಕಾಣಿಸುತ್ತಲೆ ಸಿನೆಮಾ ಮುಂದುವರಿಯುತ್ತದೆ. 
ಬದುಕಿನ ಕ್ರೌರ್ಯ ಮತ್ತು ದ್ವಂದ್ವ ಎಂದರೆ ಸಾವಿನಿಂದ ಕೂದಲೆಳೆ ಅಂತರದಲ್ಲಿ ಉತ್ತಮ ಪಾರಾಗುತ್ತಲೆ ಹೋದರೆ ಅದರ ಪಾತ್ರಧಾರಿ ಮನೋರಂಜನ್ ಅಷ್ಟೆ ಸಾವಿಗೆ ಹತ್ತಿರ ಆಗುತ್ತಾ ಹೋಗುತ್ತಾನೆ.  ತನ್ನೆಡೆಗೆ ಸಾವು ನಡೆದು ಬರುತ್ತಿರುವುದನ್ನು ನಿರ್ಲಿಪ್ತವಾಗಿ ನೋಡುವ ನೋಟ ಈತನದು. ಈತನಿಗೆ ಸಾವಿನ ಭಯಕ್ಕಿಂತಲೂ ತನ್ನ ಬಂಧು-ಮಿತ್ರರ ಬದುಕು ಮುರುಟಿ ಹೋಗಬಾರದು ಎಂಬ ಕಾಳಜಿ. 

ಸಿನೆಮಾ ಮತ್ತು ಬದುಕು ಸಮಾನಾಂತರ ಪಥದಲ್ಲಿ ನಡೆಯುತ್ತಾ ಅದರಲ್ಲಿನ ವೈರುಧ್ಯಗಳನ್ನು ಉತ್ತಮ ವಿಲನ್ ಕಾಣಿಸುತ್ತಾ ಹೋಗುತ್ತದೆ. ತನಗೆ ದೊರೆಯದ ಸುಖಗಳು ಪತಿಗೂ ದೊರೆಯಬಾರದೆಂಬ ಮನೋಭಾವದ ಪತ್ನಿ, ಅಪ್ಪನಿಗೂ ಭಾವನೆಗಳಿವೆ ಎಂಬುದನ್ನು ಮರೆತು ತಿರಸ್ಕಾರದಿಂದ ನೋಡುವ ಮಗ, ಮಗಳಿಗಾಗಿ ಪ್ರೇಮ ಪ್ರಕರಣ ಹೊಸಕಿ ಹಾಕಿ ಮನೋರಂಜನ್ ಭಾವನೆಗಳಿಗೆ ಘಾಸಿ ಮಾಡಿದ, ಮಗಳಿಗಾಗಿ ಅಳಿಯನನ್ನು ಕೊಲ್ಲಲೂ ಹೇಸದ ಮಾವ, ನಂಬಿದ ಯಜಮಾನನ ಬೆನ್ನಿಗೆ ಚೂರಿ ಹಾಕಿದ ಆಪ್ತ ಕಾರ್ಯದರ್ಶಿ. 
ಈ ಎಲ್ಲ ಪಾತ್ರಗಳು ತನ್ನ ಸುರಕ್ಷೆ-ಸುಖವೇ ಪರಮ ಎಂದು ನಂಬಿದ ಪಾತ್ರಗಳು. ಆದರೆ ಮನೋರಂಜನ್ ಸಾವಿನ ಸಮೀಪದಲ್ಲಿ ಇದ್ದಾನೆ ಎಂದು ತಿಳಿದಾಕ್ಷಣ ಸಿನೆಮಾದಲ್ಲಿ ಉಡುಪಿನ ಬಣ್ಣ ಹೇಗೆ ಬದಲಾಗುತ್ತವೆಯೋ ಅದೇ ರೀತಿ ಇವರೆಲ್ಲರ ಭಾವನೆಗಳು ಬದಲಾಗಿ ಬಿಡುತ್ತವೆ. ಸಂಬಂಧಗಳಲ್ಲಿನ ಆಷಾಢಭೂತಿತನಗಳನ್ನು ಚಿತ್ರ  ನಿಚ್ಚಳವಾಗಿ ಕಾಣಿಸುತ್ತದೆ.
ಜೀವನ ಎನ್ನುವ ರಂಗಭೂಮಿಯಲ್ಲಿ ಸಕಾರಾತ್ಮಕ ಪಾತ್ರಗಳೂ ಇರುತ್ತವೆ ಎಂಬುದನ್ನು ಚಿತ್ರ ಹೇಳುತ್ತದೆ. ಮನೋರಂಜನ್ ಸಾವಿನ ತೆಕ್ಕೆಯಲ್ಲಿ ಉಯ್ಯಾಲೆ ಆಡುತ್ತಿದ್ದಾನೆ ಎಂದು ತಿಳಿದರೂ ಆತನಿಂದ ದೂರ ಸರಿಯದ ವೈದ್ಯೆ ಪ್ರೇಯಸಿ. ಈಕೆಯ ವೃತ್ತಿ ಏನಾದರೂ ಆಗಬಹುದಿತ್ತು. ಆದರೆ ನಿರ್ದಿಷ್ಟವಾಗಿ ವೈದ್ಯೆ ಪಾತ್ರದಲ್ಲಿ ಕಾಣಿಸುವುದರ ಮೂಲಕ ಆಕೆ ಆತನ ಮನೋವೇದನೆಗಳಿಗೂ ಪ್ರತಿಸ್ಪಂದಿಸುವ ಪಾತ್ರ ಎಂಬುದನ್ನು ಕಥೆಗಾರ ಸಾಂಕೇತಿಕವಾಗಿ ಕಾಣಿಸಿದ್ದಾನೆ.

 ಈ ಚಿತ್ರದ ಶೀರ್ಷಿಕೆ " ಉತ್ತಮ ವಿಲನ್" ಎನ್ನುವುದು ಕೂಡ ಸಾಂಕೇತಿಕ. ತಮಿಳು ಮತ್ತು ತೆಲುಗಿನಲ್ಲಿ ವಿಲ್ಲು ಎಂದರೆ ಬಿಲ್ಲು ಎಂದರ್ಥ. ಅರ್ಥಾತ್ ಉತ್ತಮ ವಿಲನ್ ಎಂದರೆ ಪಳಗಿದ ಧನುರ್ಧಾರಿ (ಬಿಲ್ವಿದ್ಯೆ ಪರಿಣಿತ) ಈ ಧನುರ್ಧಾರಿ ಬೇರ್ಯಾರು ಅಲ್ಲ. ಕಥೆಗಾರನಿಗೆ ಈತ ಸಾಕ್ಷತ್ ಶಿವ. 'ಉತ್ತಮ ವಿಲನ್' ಮತ್ತೊಂದು ಅರ್ಥ 'ಉತ್ತಮ ಖಳನಾಯಕ' ದುಷ್ಟ ಗುಣಗಳನ್ನೆ ಆವಾಹಿಸಿಕೊಂಡ ಖಳನಾಯಕ ಉತ್ತಮ ಹೇಗಾಗಲು ಸಾಧ್ಯ. ಇಲ್ಲಿ ಕಥೆಗಾರ ಉತ್ತಮ ಖಳನಾಯಕ ಎಂದು ಹೇಳುತ್ತಿರುವುದು 'ವಿಧಿ' ಯ ಬಗ್ಗೆ. 
ಧ್ವನಿಪೂರ್ಣ ಕಥೆಯೊಂದನ್ನು ನಟ ಕಮಲ ಹಾಸನ್ ಕಟ್ಟಿಕೊಟ್ಟಿದ್ದಾರೆ. ಸಿನೆಮಾ ನಟನೋರ್ವನ ಕಥೆಯನ್ನು ನೆಪವಾಗಿರಿಕೊಂಡು ಅಧ್ಯಾತ್ಮಿಕ-ಪಾರಮಾರ್ಥಿಕ ವಿಷಯಗಳನ್ನೂ ಹೇಳಲು ಪ್ರಯತ್ನಿಸಿದ್ದಾರೆ. ' ಪಾತ್ರ ಬದಲಾದರೂ ಸಾವು ತಪ್ಪುವುದಿಲ್ಲ' ಎಂಬುದನ್ನು ಮನೋರಂಜನ್ ಮತ್ತು ರಾಜ ಮುತ್ತರಸನ್ ಪಾತ್ರಗಳ ಮೂಲಕ ಹೇಳಿದ್ದಾರೆ. ಸಿನೆಮಾದ ಕೆಲವು ಹಾಡುಗಳ ಸಾಹಿತ್ಯವೂ ಇವರದೆ. ಇವುಗಳು ಕೂಡ ಅರ್ಥಪೂರ್ಣ. ಕೆಲವು ಹಾಡುಗಳನ್ನೂ ಚೆನ್ನಾಗಿಯೇ ಹಾಡಿದ್ದಾರೆ. ನಟನೆಯಲ್ಲಿಯೂ ಗೆದ್ದಿದ್ದಾರೆ. ಏಕಕಾಲದಲ್ಲಿ ಸರಿದು ಹೋಗುವ ಭಾವನೆಗಳನ್ನು ಮುಖದಲ್ಲಿ ಕಾಣಿಸುವ ಇವರ ರೀತಿ ಮೆಚ್ಚುಗೆಗೆ ಪಾತ್ರವಾಗುತ್ತದೆ. ಕೆ. ಬಾಲಚಂದರ್, ನಾಸೀರ್, ಎಂ.ಎಸ್. ಭಾಸ್ಕರ್, ಆಂಡ್ರಿಯಾ ಜೆರೆಮಿಯಾ, ಪೂಜಾ ಕುಮಾರ್, ಪಾರ್ವತಿ ಮೆನನ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ನಾಸೀರ್ ಅವರದು ಅದ್ವೀತಿಯ ನಟನೆ. ಭಾವನೆಗಳನ್ನು ದಾಟಿಸುವ ಕ್ರಿಯೆಯಲ್ಲಿ ಇವರ ಪರಿಶ್ರಮ ಅಪಾರ.

ಸಿನೆಮಾದ ಎಲ್ಲ ಹಾಡುಗಳೂ ಚೆನ್ನಾಗಿವೆ. ಅದರಲ್ಲಿಯೂ 'ಲವ್ವೇ ಲವ್ವ' ಪದೇಪದೇ ಕೇಳಿಸಿಕೊಳ್ಳುತ್ತದೆ. ಚಿತ್ರಗಳ ದೃಶ್ಯಗಳಿಗೆ ಒದಗಿಸಿರುವ ಹಿನ್ನೆಲೆ ಸಂಗೀತವೂ ಸೂಕ್ತವಾಗಿದೆ. ಸಂಗೀತ ನಿರ್ದೇಶಕ ಎಂ. ಗಿಬ್ರಾನ್, ಛಾಯಾಗ್ರಾಹಕ ಶ್ಯಾಮದತ್, ಸಂಕಲನಕಾರ ವಿಜಯ ಶಂಕರ್ ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಈ ಎಲ್ಲ ಕಾರ್ಯಗಳನ್ನು ಸರಿದೂಗಿಸಿರುವ ಚಿತ್ರ ನಿರ್ದೇಶಕ ರಮೇಶ್ ಅರವಿಂದ್ ಅವರ ಶ್ರಮ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರ.

No comments:

Post a Comment