• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಊರು ಭಂಗ; ವಿಭಿನ್ನ ಪಾತಳಿಗಳಲ್ಲಿ ಸಾಗುವ ಕಥಾನಕ

'ಎಲ್ಲವನ್ನೂ ಹೇಳುತ್ತೇನೆ' ಎನ್ನುವುದರ ಮೂಲಕವೇ ಊರು ಭಂಗ ಆರಂಭ ಆಗುತ್ತದೆ. ಕಾರ್ಪೊರೇಟ್ ಕಂಪನಿಯೊಂದರ ಹಿರಿಯ ಅಧಿಕಾರಿ ಹೇಳುವ ಮಾತಿದು. ಇದು ಅಲ್ಲಿನ ಸುಳಿಗಳ, ತಂತ್ರಗಾರಿಕೆಗಳ, ಛಾತಿ ಇದ್ದವರನ್ನು ಹಣಿಯುವ ಮಸಲತ್ತಿನ ವಿವರಗಳ ಕಾದಂಬರಿ ಇರಬಹುದು ಎಂಬ ಅಭಿಪ್ರಾಯ ಮೂಡತೊಡಗುತ್ತದೆ. ಆದರೆ ಓದುತ್ತಾ ಹೋದಂತೆ ಅಲ್ಲಿ ಬೇರೆ ಬೇರೆ ಜಗತ್ತೂ ಇರುವುದು, ವರ್ತಮಾನ, ಭೂತ, ಭವಿಷ್ಯ ಎಲ್ಲವೂ ಪರಸ್ಪರ ಹೆಣೆದುಕೊಂಡು ಬೆಳೆಯುತ್ತಾ ಹೋಗುವುದು ಅರಿವಿಗೆ ಬರತೊಡಗುತ್ತದೆ.

ಊರು ಭಂಗ, ಕಾರ್ಪೊರೇಟ್ ರಂಗದ ಒಳಸುಳಿಗಳನ್ನು ನಿಧಾನವಾಗಿ ಹೇಳುತ್ತಾ ಹೋದಂತೆ ತೆಂಕಣಕೇರಿ ಎಂಬ ಊರಿನ ಭೂತ ಜಗತ್ತು ಬಿಚ್ಚಿಕೊಳ್ಳತೊಡಗುತ್ತದೆ. ಅದೂ ಪುಟಿಯುವ ಯೌವನದ ಯುವತಿ  ಸೆಳೆಯುವ ಸಲುವಾಗಿ ! ಕಿಮಾನಿ ವಕೀಲರು, ಸದಾನಂದ ಮಾಸ್ತರು, ಸುಂಕಾಪೂರ ಮಾಸ್ತರ ದಿನಗಳನ್ನು ಕಂಡ ಮನಮೋಹನ ಅವರೆಲ್ಲ ವಿವರಗಳನ್ನು ಶಮಿಗೆ ದಾಟಿಸುವ ವಾಹಕನಾಗಿ ಕೆಲಸ ಮಾಡತೊಡಗುತ್ತಾನೆ.
ಮನಮೋಹನ, ಎರಡೂ ತಲೆಮಾರುಗಳ ನಡುವಿನ ಕೊಂಡಿ. ಮಧ್ಯವಯಸ್ಕನಾದ ಈತನಿಗೆ ಕಿಮಾನಿ ವಕೀಲರ ಕಾಲವೂ ಗೊತ್ತು, ಅತ್ಯಾಧುನಿಕ ಜಗತ್ತಿನ ಪ್ರತಿನಿಧಿಯಾದ ಶಮಿ ಕಾಲೀನರ ಮುಕ್ತತೆಯೂ ಗೊತ್ತು. ಆದರೆ ಇವೆರಡನ್ನೂ ಅನುಭವಿಸದ ಎಡಬಿಡಂಗಿ ಈತ. ಇವೆಲ್ಲದರ ಜೊತೆಗೆ ಇಲ್ಲಿ ಕ್ರಾಂತಿಕಾರಿಗಳ ಜಗತ್ತೂ ಇದೆ. ಚಂದ್ರು, ಚಿರಾಗ್ ಮೂಲಕ ಪರಿಚಯವಾಗುವ ವಿವರಗಳು ಕೂಡ ದಾಟುವುದು ಕೂಡ ಯಾವೂದೂ ಅಲ್ಲದ ಮನಮೋಹನನ ಮುಖಾಂತರ.
ಹಾಗಿದ್ದರೆ ಕಥೆಗಾರ ಹೇಳಲು ಹೊರಟಿರುವುದಾದರೂ ಏನು ? ಊರು ಭಂಗದ ಕೇಂದ್ರ ಪ್ರಜ್ಞೆಯೇನು ? ಯಾವ ಕಾಲಘಟ್ಟಕ್ಕೂ  ಪೂರ್ಣ ಸಲ್ಲದ ಮನಮೋಹನನ ಮುಖಾಂತರ ಈತನ ಪೀಳಿಗೆಯ ತ್ರಿಶಂಕು ಸ್ಥಿತಿ ಮತ್ತು ಇದರ ವಿವರಣೆಯೇ ಕೇಂದ್ರ ಪ್ರಜ್ಞೆ. ಇದು ನನ್ನ ಗ್ರಹಿಕೆ. ಈ ಪ್ರಯತ್ನದಲ್ಲಿ ಕಥೆಗಾರ ಯಶಸ್ವಿ.
ಬೇರೆ ಬೇರೆ ಜಗತ್ತಿನ ವಿವರಗಳನ್ನು ಹೇಳುತ್ತಲೇ ಅದನ್ನು ಬೆಳೆಸಿಕೊಂಡು ಹೋಗುತ್ತಾ ಅವುಗಳ ತಾರ್ಕಿಕ ಅಂತ್ಯ-ಆರಂಭವನ್ನು ಹೇಳುವ ಕ್ರಮವೇ ಅನನ್ಯ. ಇಲ್ಲಿನ ವಿವರಗಳು ಸಿಕ್ಕುಸಿಕ್ಕಾಗದಂತೆ ಅಥವಾ ಗೋಜಲಾಗದಂತೆ ಓದುಗರ ಮುಂದಿಡುವ ಪರಿ ಗಮನಾರ್ಹ. ಜೊತೆಗೆ ಕೃತಿ ಮುಕ್ತವಾಗಿ ಹೇಳುವುದು ಗಟ್ಟಿ ಪಾತ್ರ ಹೆಣ್ಣು. ಅದು ಕಿಮಾನಿ ಮಾಸ್ತರರ ಪತ್ನಿ ನೀಲಾವತಿ ಮತ್ತು ಶಮಿ ತಾಯಿ ರೇವತಿ. ಇವರಿಬ್ಬರೂ ತಮ್ಮತಮ್ಮ ಮಿತಿಯೊಳಗೆ ತಮಗಿರುವ ಸವಾಲುಗಳನ್ನು ಎದುರಿಸಿ ಗೆಲ್ಲಲ್ಲು ಯತ್ನಿಸುತ್ತಿರುವವರು. ಹಾಗೆ ನೋಡಿದರೆ ಕಥಾನಕದೊಳಗೆ ಹೆಚ್ಚು ವಿವರಗಳು ಇರುವ ಪಾತ್ರಗಳು ಇವಲ್ಲ. ಆದರೂ ಕೃತಿ ಮುಗಿಸಿದಾಗ ಬರುವ ದೊಡ್ಡ ನಿಟ್ಟುಸಿರಿನೊಡನೆ ಆವರಿಸಿಕೊಳ್ಳುವ ಪಾತ್ರಗಳು ಇವೆರಡೆ.
ಕಿಮಾನಿ ಮಾಸ್ತರರ ಮಗಳು ವಿಜಯಾ, ರೇವತಿ ಮಗಳು ಶಮಿ ತಮ್ಮ ತಮ್ಮ ಚೌಕಟ್ಟುಗಳ ಬಗ್ಗೆ ಸಿಟ್ಟಿರುವ ಆದರೆ ಅದು ವ್ಯಕ್ತವಾಗುವ ಪರಿಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಯೋಚಿಸದ ಪಾತ್ರಗಳಾಗಿ ಕಾಣುತ್ತವೆ. ಶಮಿ ಎಲ್ಲವನ್ನೂ ಮೀರಬೇಕೆನ್ನುವ ಹಠದಲ್ಲಿ ಯಾವುದನ್ನೂ ಮೀರಲಾಗದೆ ಸೋಲುವಾಕಿ. ಚೌಕಟ್ಟಿನೊಳಗೆ ಎಲ್ಲ ಸುಖವನ್ನೂ ದಕ್ಕಿಸಿಕೊಳ್ಳಲು ಹೋಗಿ ಸೋಲುವಾತ ಮನಮೋಹನ. ಈ ಎರಡೂ ಪಾತ್ರಗಳ ಆಂತರಿಕ ಘರ್ಷಣೆಗಳನ್ನು ಇನ್ನೂ ಹೆಚ್ಚು ಪ್ರಬಲವಾಗಿ ಚಿತ್ರಿಸುವ ಸಾಧ್ಯತೆ ಇತ್ತು. ಆದರೆ ಬೇರೆಬೇರೆ ಪಾತಳಿಗಳ ವಿವರಗಳನ್ನು ಬೆಳೆಸಿಕೊಂಡು ಹೋಗುವುದರಲ್ಲಿ ಮಗ್ನವಾಗುವ ಕಥೆಗಾರ ಇದರಲ್ಲಿ ವಿಫಲ.
ಊರು ಭಂಗದಲ್ಲಿ ಆದರ್ಶಗಳು, ಕ್ರಾಂತಿಗಳು ಸೋಲನ್ನಪ್ಪುವ ವಿವರಗಳಿವೆ. ಆದರೆ ಕ್ರಾಂತಿಯ ಬೆಳವಣಿಗೆ ತಲ್ಲಣಗಳು-ತವಕಗಳನ್ನು ದಕ್ಕಿಸಿಕೊಳ್ಳಲಾಗದೆ ಮೇಲ್ನೋಟದ ವಿವರಗಳ ಮೂಲಕವೇ ಚಂದೂ ಮತ್ತು ಚಿರಾಗರನ್ನು ಚಿತ್ರಿಸುವ ಕಥೆಗಾರ ಅಂಥವರೆ ಕ್ರಾಂತಿಕಾರಿಗಳ ಪ್ರತಿನಿಧಿಗಳು ಎಂಬ ಚಿತ್ರಣ ನೀಡಲು ಯತ್ನಿಸಿದ್ದಾರೆ. ಕ್ರಾಂತಿ ಎನ್ನುವುದು ಬೇರೆಬೇರೆ ಆಯಾಮಗಳಲ್ಲಿ ವ್ಯಕ್ತವಾಗುತ್ತದೆ. ಅದೂ ಶಸ್ತ್ರರಹಿತ ಕ್ರಾಂತಿಯೂ ಆಗಿರಬಹುದು ಎಂಬುದನ್ನು ಕೃತಿಕಾರ ಅರ್ಥೈಸಿಕೊಂಡಿಲ್ಲ ಎನ್ನುವುದು ಎದ್ದು ಕಾಣುತ್ತದೆ.
ಕೃತಿ ಆರಂಭದಲ್ಲಿ ಓದುಗನಲ್ಲಿ ಮೂಡುವ ಇದು ಕಾರ್ಪೊರೇಟ್ ಒಳಸುಳಿಗಳ ವಿವರ ಎನ್ನುವುದು ಭಾಸ್ಕರರಾವ್, ಜನಾರ್ದನ ಪಾತ್ರಗಳ ಮೂಲಕ ನಿಚ್ಚಳವಾಗುತ್ತದೆ. ತಾನೇ ಹೆಣೆದ ತಂತ್ರದ ಬಲೆಯೊಳಗೆ ಜನಾರ್ದನ ಅಂಥವರನ್ನು ಬೀಳಿಸುವ ಭಾಸ್ಕರರಾವ್ ಅಂಥ ವ್ಯಕ್ತಿಗಳು ಅದರೊಳಗೆ ತಾವೇ ಸಿಲುಕಿಕೊಳ್ಳುವ ಪರಿಯನ್ನು ಕೃತಿ ಚಿತ್ರಿಸುತ್ತದೆ. ಇವೆಲ್ಲದರ ಜೊತೆಗೆ ಸಮೀರ್ ಸಾಹು ಬಗ್ಗೆ ಅನುಮಾನಗಳನ್ನಿಟ್ಟುಕೊಂಡೇ ಸುರಕ್ಷಿತವಾಗಿ ಉಳಿಯಲು ಯತ್ನಿಸುವ ಮನಮೋಹನ ಕೂಡ ಖೆಡ್ಡಾದಲ್ಲಿ ಬೀಳುತ್ತಾನೆ.
ಆದರೆ ಈತ ಸಿಲುಕಿ ಹಾಕಿಕೊಳ್ಳುವ ಪರಿ ಅಚ್ಚರಿ ಮೂಡಿಸುತ್ತದೆ. ತಂತ್ರಗಳ ಬಗ್ಗೆ ಅರಿವಿದ್ದೂ, ಶಮಿ ಬಗ್ಗೆ ಒಂದು ರೀತಿಯ ನಿರ್ಲಕ್ಷ್ಯ ಭಾವ ಬೆಳೆಸಿಕೊಳ್ಳುತ್ತಾ, ತನ್ನ ಪತ್ನಿ ಶಾಲಿನಿ, ಮಗ ಅಜಿತ ಮತ್ತು ಕಂಪನಿ ವಲಯದೊಳಗೆ ಸುರಕ್ಷಿತವಾಗಿರುವ ಬಗ್ಗೆಯೇ ಯೋಚಿಸುತ್ತಾ ಎಚ್ಚರಿಕೆ ಹೆಜ್ಜೆಗಳನ್ನು ಇಡುವ ಮನಮೋಹನ ಕೊನೆಗೂ ಶಮಿ ವ್ಯಾಮೋಹದ ಕಾರಣದಿಂದ ಬಲೆಗೆ ಬಿದ್ದಂತೆ ಚಿತ್ರಿಸುವುದು ಅವಸರದ ಅಂತ್ಯದಂತೆ ಅನಿಸುತ್ತದೆ.

ಪ್ರಭಾವ
'ಊರು ಭಂಗ' ಕಾದಂಬರಿ ಮೇಲೆ ಯಶವಂತ ಚಿತ್ತಾಲರ 'ಶಿಕಾರಿ' ಕೃತಿಯ ಪ್ರಭಾವ ದಟ್ಟವಾಗಿ ಆವರಿಸಿಕೊಂಡಿರುವುದು ಎದ್ದು ಕಾಣುತ್ತದೆ. ಫೆಬ್ರುವರಿ 28, 2015ರ ಸಂಜೆ ಟೋಟಲ್ ಕನ್ನಡ ಮತ್ತು ಪೇಜ್ ವರ್ಲ್ಡ್ ಆಯೋಜಿಸಿದ್ದ ಕಾದಂಬರಿ ಕುರಿತ ಅಭಿಪ್ರಾಯ ವ್ಯಕ್ತಪಡಿಸುವಿಕೆ ಸಮಾರಂಭದಲ್ಲಿ ಕಥೆಗಾರ ವಿವೇಕ್ ಶಾನ್ ಭಾಗ್ 'ತಾನು ಚಿತ್ತಾಲರ ಪ್ರಭಾವದಿಂದ ಬಿಡುಗಡೆ ಹೊಂದಲು ಯತ್ನಿಸಿ ಯಶಸ್ವಿ ಆಗಿದ್ದೇನೆ' ಎಂಬರ್ಥದಲ್ಲಿ ಮಾತನಾಡಿದರು.
ಆದರೆ ಓದುಗನಾಗಿ ನನಗೆ ಹಾಗೆ ಅನಿಸುವುದಿಲ್ಲ' ನನ್ನ ಔದಾರ್ಯದಿಂದ ನಾನೇ ಭಾವುಕನಾಗಿ ಕಣ್ಣಾಲಿಗಳು ತುಂಬಿ ಬಂದವು' ಇದು ಮನಮೋಹನ ತನ್ನಷ್ಟಕ್ಕೆ ಹೇಳಿಕೊಳ್ಳುವ ಮಾತು. ಇಂಥವು ಪೂರಪೂರ ಚಿತ್ತಾಲರ ಪ್ರಭಾವವೇ… ಇದು ಒಂದು ಉದಾಹರಣೆ ಅಷ್ಟೆ…

No comments:

Post a Comment