• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ತಂತ್ರಜ್ಞರ ಚಿತ್ರ ದೃಶ್ಯಂ

ಇತ್ತೀಚೆಗೆ ಮೋಹನ್ ಲಾಲ್ ಅಭಿನಯದ 'ದೃಶ್ಯಂ' ಸಿನಿಮಾ ನೋಡಿದೆ. ಅದರ ಕಥೆ, ಚಿತ್ರಕಥೆ, ಕ್ಯಾಮೆರಾ ಮತ್ತು ಸಂಗೀತ ಶ್ಲಾಘನೀಯ. ಇದಕ್ಕಾಗಿ ಈ ಚಿತ್ರದ ತಂತ್ರಜ್ಞರು ಅಪಾರ, ಅಪಾರ ಶ್ರಮ ಪಟ್ಟಿದ್ದಾರೆ ಎನ್ನುವುದು ಪ್ರತಿ ಫ್ರೇಮುಗಳಲ್ಲಿಯೂ ಮನದಟ್ಟಾಗುತ್ತದೆ. ಇದು ಸಿನಿಮಾಕ್ಕಾಗಿಯೇ ಹೆಣೆದ ಕಥೆ ಆದರೂ ಸಿನಿಮೇತರ ಸೃಜನಾತ್ಮಕ ಉತ್ತಮ ಸಾಹಿತ್ಯದ ಮಟ್ಟದಲ್ಲಿ ನಿಲ್ಲುವ ಅರ್ಹತೆ ಇದೆ. 

ಕಥೆ ಇದೆ ಎಂದಾಕ್ಷಣ ಅದನ್ನು ಹಾಗೆ ಅಕ್ಷರಶಃ ಎತ್ತಿಕೊಂಡು ಸಿನಿಮಾ ಮಾಡಲಾಗುವುದಿಲ್ಲ. ಇದು ನಿಮಗೆ ಗೊತ್ತಿದೆ. ಸವಾಲು ಇರುವುದು ಕಥೆಯ ಆಶಯಕ್ಕೆ ಧಕ್ಕೆ ಬಾರದ ಹಾಗೆ ಚಿತ್ರಕಥೆ ರಚಿಸುವುದು. ಅತ್ಯುತ್ತಮ ಚಿತ್ರಕಥೆ ರೂಪಿಸುವುದು ಅಷ್ಟು ಸುಲಭ ಅಲ್ಲ. ಇದಕ್ಕೆ ಸಿನಿಮಾ ಬೇಡುವ ಅಂಶಗಳ ಬಗ್ಗೆ ಪೂರ್ಣ ಅರಿವು ಇರಬೇಕಾಗುತ್ತದೆ. ಇದೆಲ್ಲವನ್ನೂ ಇಟ್ಟುಕೊಂಡು ರಚಿತವಾದ ಮಲೆಯಾಳಂನ 'ದೃಶ್ಯಂ'  ಹೆಚ್ಚು ಗಮನ ಸೆಳೆಯುತ್ತದೆ. ಈ ದಿಶೆಯಲ್ಲಿ ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ತ್ರಿವಳಿ ಜವಾಬ್ದಾರಿ ಹೊತ್ತ ಜೀತು ಜೋಸೆಫ್ ಯಶಸ್ವಿ.

ಇಷ್ಟು ಮಾತ್ರದ ಅಂಶದಿಂದಾಗಿಯೇ ಕುಸುರಿ ಕೆತ್ತನೆಯ ಸಿನಿಮಾ ಎನ್ನಲು ಸಾಧ್ಯವಿಲ್ಲ. ಕ್ಯಾಮೆರಾ ಮತ್ತು ಹಿನ್ನೆಲೆ ಸಂಗೀತದ ಪಾತ್ರವೂ ಮುಖ್ಯ. ಅದರಲ್ಲಿಯೂ ಕ್ಯಾಮೆರಾದ ಪಾತ್ರ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಚಿತ್ರಕಥೆಯ ಗಟ್ಟಿತನ ಒಡ್ಡುವ ಸವಾಲುಗಳನ್ನು ಇಟ್ಟುಕೊಂಡು ಅದು ಕೇಳುವ ರೀತಿ ಕ್ಯಾಮೆರಾ ಜವಾಬ್ದಾರಿ ನಿರ್ವಹಿಸುವುದು ಸಾಧಾರಣ ಸಂಗತಿ ಅಲ್ಲ.
ಈ ಸಂದರ್ಭದಲ್ಲಿ ಛಾಯಾಗ್ರಾಹಕ ಚಿತ್ರಕಥೆ ಕೇಳುಗನಾದರಷ್ಟೆ ಸಾಲದು. ಆತ ಗಂಭೀರ ಓದುಗನೂ ಆಗಿರಬೇಕು. ಚಿತ್ರಕಥೆಯ ಪ್ರತಿ ಅಂಶವನ್ನೂ ಅರಗಿಸಿಕೊಂಡಿರಬೇಕು. ಇವೆಲ್ಲ ಅಂಶಗಳೂ ತನ್ನಲ್ಲಿ ಇವೆ ಎಂದು ದೃಶ್ಯಂ ಛಾಯಾಗ್ರಾಹಕ ಸುಜಿತ್ ವಾಸುದೇವನ್ ರೂಪಿಸಿದ್ದಾರೆ.
ಚಿತ್ರಕಥೆ, ಕ್ಯಾಮೆರಾ ಕಾರ್ಯಗಳ ಆಶಯಕ್ಕೆ ಕುಂದು ಉಂಟಾಗದಂತೆ ಸಂಗೀತ ನೀಡುವುದು ಕೂಡ ಸವಾಲಿನ ಕೆಲಸ. ಇದರ ಹೊಣೆ ಹೊತ್ತುಕೊಂಡಿರುವ ಅನಿಲ್ ಜಾನ್ಸನ್ ಮತ್ತು ವಿನು ಥಾಮ್ಸನ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಾರೆ. ಆಯಾ ಸನ್ನಿವೇಶಕ್ಕೆ ತಕ್ಕಂತೆ ಅಬ್ಬರ ಇಲ್ಲದ, ಆದರೆ ದೃಶ್ಯದ ಗಂಭೀರತೆ ಮನದಟ್ಟು ಮಾಡಿಸುವ, ಗಾಂಭೀರ್ಯ ಮತ್ತಷ್ಟೂ ಹೆಚ್ಚಿಸುವ ಸಂಗೀತ ನೀಡಿದ್ದಾರೆ.
ಚಿತ್ರಕಥೆ ಟೆಂಪೋಗೆ ತಕ್ಕಂತೆ ಸಂಕಲನ ಮಾಡುವ ಕಾರ್ಯ ಭಾರಿ ಪರಿಶ್ರಮದ್ದು. ಇಲ್ಲಿ ಕೊಂಚ ಎಡವಟ್ಟಾದರೂ ಪ್ರೇಕ್ಷಕ ಆಸಕ್ತಿ ಕಳೆದುಕೊಳ್ಳುತ್ತಾನೆ. ಇದರಿಂದ ಸಿನಿಮಾದ ಬೇರೆ ಬೇರೆ ವಿಭಾಗಗಳವರು ಹಾಕಿದ ಶ್ರಮ ವ್ಯರ್ಥವಾಗುತ್ತದೆ. ಆದರೆ ಸಂಕಲಕಾರ ಆಯೂಬ್ ಖಾನ್ ಅದಕ್ಕೆ ಅವಕಾಶ ನೀಡಿಲ್ಲ. ಆದ್ದರಿಂದಲೇ ಚಿತ್ರದ ಯಾವುದೇ ಒಂದು ಫ್ರೇಮು ಕೂಡ ಅನಗತ್ಯ ಎನಿಸುವುದಿಲ್ಲ. 

ಪಾತ್ರಗಳ ತೂಕಕ್ಕೆ ಸರಿದೂಗುವ ಕಲಾವಿದರ ಆಯ್ಕೆ ಕೂಡ ಭಾರಿ ಮುಖ್ಯ. ನಿರ್ದೇಶಕ ಜೀತು ಜೋಸೆಫ್ ಇದರಲ್ಲಿಯೂ ಯಶಸ್ವಿ ಆಗಿದ್ದಾರೆ. ಮೋಹನ್ ಲಾಲ್, ಮೀನಾ,ಅನ್ಸಿಬ ಹಸನ್,ಕಲಾಭವನ್ ಶಾಜನ್, ಸಿದ್ಧಿಕ್, ಆಶಾ ಶರತ್ ಮತ್ತು  ಬೇಬಿ ಎಸ್ತರಾ ನಟಿಸಿದ್ದಾರೆ ಎನ್ನುವುದಕ್ಕಿಂತಲೂ ಪಾತ್ರಗಳಲ್ಲಿ ಪರಕಾಶ ಪ್ರವೇಶ ಮಾಡಿದ್ದಾರೆ ಎನ್ನುವುದು ಹೆಚ್ಚು ಸೂಕ್ತ. 
ಕಥೆ, ಚಿತ್ರಕಥೆ, ನಿರ್ದೇಶನ, ಕ್ಯಾಮೆರಾ, ಸಂಗೀತ ಮತ್ತು ಸಂಕಲನ ವಿಭಾಗಗಳ ಅಪೂರ್ವ ಹೊಂದಾಣಿಕೆಯ ದೃಶ್ಯಂ ಈ ಕಾರಣದಿಂದಾಗಿಯೇ ನನ್ನ ಪ್ರಕಾರ ತಂತ್ರಜ್ಞರ ಚಿತ್ರ ಎನ್ನಿಸಿಕೊಳ್ಳುತ್ತದೆ.  ಸಿನಿಮಾ ನೋಡತೊಡಗುವ ಪ್ರೇಕ್ಷಕ ಅದರಲ್ಲಿ ತನ್ಮಯನಾಗಿ ಅಂತ್ಯದಲ್ಲಿ ನೆಮ್ಮದಿಯ ಗಾಢ ನಿಟ್ಟುಸಿರು ಬಿಡುವಂತೆ ಮಾಡುವಲ್ಲಿ ದೃಶ್ಯಂ ಸಫಲ.

No comments:

Post a Comment