• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಗಣತಂತ್ರ ವ್ಯವಸ್ಥೆ ಧಿಕ್ಕರಿಸುವಿರೇಕೆ ಕೇಜ್ರಿವಾಲ್… ?

ಪ್ರಜಾತಂತ್ರದ ಸುಂದರತೆ (Beauty of democracy) ಯಿಂದಾಗಿಯೇ ದಿಲ್ಲಿ ಮುಖ್ಯಮಂತ್ರಿ ಗಾದಿಗೇರಿದವರು ಅರವಿಂದ ಕೇಜ್ರಿವಾಲ್. ಈಗ ಗಣರಾಜ್ಯೋತ್ಸವದ ಆಶಯಗಳನ್ನು ಮರೆತು ‘ಅದರಲ್ಲೇನಿದೆ ಮಹತ್ವ, ಅದು ಕೆಲವೇ ವಿಐಪಿಗಳಿಗಾಗಿ ನಡೆಯುವ ಪ್ರಹಸನ’ ಎಂಬಂತೆ ಮಾತನಾಡಿದ್ದಾರೆ. ರಾಷ್ಟ್ರ ರಾಜಧಾನಿ ಭದ್ರತೆಯನ್ನೂ ಸವಾಲಿಗೊಡ್ಡಿದ್ದಾರೆ. ತನ್ಮೂಲಕ ಅವರೊಳಗಿನ ಸರ್ವಾಧಿಕಾರಿ ಪ್ರಕಟಗೊಳ್ಳುತ್ತಿದ್ದಾನೆ.
 ದೆಹಲಿ ರೈಲುಭವನದ ಮುಂದೆ ಎಎಪಿ ನಡೆಸುತ್ತಿರುವ ಧರಣಿ ಹೆಸರಿನ ಡ್ರಾಮ ತಾರಕಕ್ಕೇರುತ್ತಿದೆ. ಮಹಾನಗರದ ದೈನಂದಿನ ಜನಜೀವನ ಅಸ್ತವ್ಯವಸ್ತಗೊಂಡಿದೆ. ಪ್ರಮುಖ ಸಾರಿಗೆ ಮೇಟ್ರೋದ ನಾಲ್ಕು ಪ್ರಮುಖ ಸ್ಟೇಷನ್ಗಳು ಮುಚ್ಚಲ್ಪಟ್ಟಿವೆ. ಸಂಚಾರ ಅವ್ಯವಸ್ಥೆಯಿಂದಾಗಿ ಸಾಮಾನ್ಯ ಜನ ಪರದಾಡುತ್ತಿದ್ದಾರೆ. ಇದೆಲ್ಲದರ ಪರಿವೆ ಇಲ್ಲದೆ ಕೇಜ್ರಿವಾಲ್ ದೆಹಲಿ ಜನತೆಯನ್ನೂ ಧರಣಿಯಲ್ಲಿ ಸಕ್ರಿಯವಾಗಿ ಪಾಲ್ಗೊಳಲು ಆಹ್ವಾನಿಸುತ್ತಿದ್ದಾರೆ. ಇಷ್ಟು ಸಾಲದು ಎಂಬಂತೆ ದೆಹಲಿ ಪೊಲೀಸ್ನ ಪ್ರಾಮಾಣಿಕರು ಖಾಕಿ ಕಳಚಿ ತಮ್ಮೊಂದಿಗೆ ಭಾಗವಹಿಸುವಂತೆ ಹೇಳುತ್ತಿದ್ದಾರೆ. ಇದು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಶಪಥ ಮಾಡಿದ್ದ ಓರ್ವ ಮುಖ್ಯಮಂತ್ರಿ ನಡೆದುಕೊಳ್ಳುವ ರೀತಿಯೇ… ?
‘ವರದಿಗಾರ ಡಾಟ್ ಕಾಮ್’ ನಲ್ಲಿ ನಾನು ಬರೆದಿರುವ 'ಜನಹಿತ ಮರೆತ ಕೇಜ್ರಿವಾಲ್ ನಡೆ '(http://www.varadigara.com/2014/01/blog-post_21.html?utm_source=BP_recent) ಎಂಬ ಲೇಖನಕ್ಕೆ ಪ್ರತಿಕ್ರಿಯಿಸಿರುವ ಕೆಲವರು ದೆಹಲಿ ಪೊಲೀಸ್ ವ್ಯವಸ್ಥೆಯನ್ನು ಅಲ್ಲಿನ ರಾಜ್ಯ ಸರ್ಕಾರದ ಅಧೀನಕ್ಕೆ ನೀಡಲು ತೊಂದರೆಯೇನು ಎಂದು ಕೇಳಿದ್ದಾರೆ. ಈ ಕುರಿತು ಈಗಾಗಲೇ ವಿವರಿಸಿದ್ದೇನೆ. ಆದರೂ ಮತ್ತೊಮ್ಮೆ ಹೇಳುತ್ತೇನೆ.
1.    ದೆಹಲಿ ರಾಜ್ಯ ಸರ್ಕಾರಕ್ಕೆ ಕಾನೂನು-ಸುವ್ಯವಸ್ಥೆ ಕಾಪಾಡುವ ಹೊಣೆ ಹೊತುಪಡಿಸಿ ಉಳಿದ ಎಲ್ಲ ಆಡಳಿತಾತ್ಮಕ ಅಧಿಕಾರ ನೀಡಲಾಗಿದೆ.
2.    ಕಾನೂನು-ಸುವ್ಯವಸ್ಥೆ ಹೊಣೆಗಾರಿಕೆ ನೀಡದಿರಲು ಕಾರಣಗಳಿವೆ. ದೆಹಲಿ ಭೌಗೋಳಿಕವಾಗಿ, ರಕ್ಷಣಾತ್ಮಕವಾಗಿ ಸೂಕ್ಷ್ಮ ಪ್ರದೇಶ. ಅಲ್ಲಿ ರಾಷ್ಟ್ರದ ಆಡಳಿತ ಚುಕ್ಕಾಣಿ ಹಿಡಿದ ಅತ್ಯುನತ ವ್ಯವಸ್ಥೆ ನೆಲೆಗೊಂಡಿದೆ. ಸೇನಾ ಮುಖ್ಯಸ್ಥರ ನೆಲೆಗಳು ಅಲ್ಲಿವೆ.
3.    ದೆಹಲಿ ಪೊಲೀಸ್ನಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ಹೊತ್ತ ಪ್ರಮುಖ ವಿಭಾಗಗಳಿರುವಂತೆ ವಿಚ್ಛಿದ್ರಕಾರಿ ಶಕ್ತಿಗಳ ಆಟ ನಡೆಯದಂತೆ ಕಾವಲಿಡುವ ಸೂಕ್ಷ್ಮ ಗುಪ್ತಚರ ವ್ಯವಸ್ಥೆಯೂ ಇದೆ. ಇಲ್ಲಿನ ವ್ಯವಸ್ಥೆ ರಾಷ್ಟ್ರದ ಅತ್ಯುನ್ನತ ಗೂಢಚರ್ಯೆ ಸಂಸ್ಥೆಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತವೆ. ಇದರಿಂದ ಸೂಕ್ತ ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸಲು ಸಹಾಯಕ.
4.    ಇಂಥ ವ್ಯವಸ್ಥೆ ಒಕ್ಕೂಟ ವ್ಯವಸ್ಥೆ ಇರುವ ಎಲ್ಲ ರಾಷ್ಟ್ರಗಳ ರಾಜಧಾನಿಗಳಲ್ಲಿಯೂ ಇದೆ. ಇದು ಅನಿರ್ವಾಯ ಕೂಡ.
5.    ದೆಹಲಿ ಪೊಲೀಸರು ತಮ್ಮ ದೈನಂದಿನ ಹೊಣೆಗಾರಿಕೆಯಲ್ಲಿ ವಿಫಲರಾಗಿದ್ದಾರೆ ಅನಿಸಿದರೆ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಗೆ ಅದನ್ನು ಖಾರವಾಗಿ ತಿಳಿಸಲು ಅನೇಕ ಸಂವಿಧಾನಾತ್ಮಕ ಮಾರ್ಗಗಳನ್ನು ಕಲ್ಪಿಸಲಾಗಿದೆ.
6.    ದೆಹಲಿ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದು ವಿವರಣೆ ಕೇಳುವುದು, ಅಲ್ಲಿನ ಗವರ್ನರ್ ಅವರಿಗೆ ಪರಿಸ್ಥಿತಿ ವಿವರಿಸುವುದು, ಕೇಂದ್ರದ ಗೃಹ ಸಚಿವರಿಗೆ, ಕಾನೂನು ಮಂತ್ರಿಗೆ, ಪ್ರಧಾನ ಮಂತ್ರಿಗೆ ಪತ್ರ ಬರೆಯುವುದು ಅಥವಾ ಭೇಟಿ ಮಾಡುವುದು, ಇದು ಆಗದಿದ್ದರೆ ರಾಷ್ಟ್ರಪತಿ ಅವರಿಗೆ ಪರಿಸ್ಥಿತಿ ಬಗ್ಗೆ ವಿವರಿಸುವುದು. ಇದೆಲ್ಲವನ್ನೂ ಹಂತಹಂತವಾಗಿ ಮಾಡಬಹುದು.
7.    ಕೇವಲ ಒಂದೆರಡು ಹಂತಗಳಲ್ಲಿಯೇ ಮುಖ್ಯಮಂತ್ರಿಯ ಒತ್ತಾಯ ಈಡೇರುತ್ತದೆ. ಈ ಪ್ರಕ್ರಿಯೆ ನಡೆಯಲು ಒಂದು ಅಥವಾ ಎರಡು ವಾರ ಸಾಕು.
ಪೂರ್ವನಿಯೋಜಿತ
ಆದರೆ ಪ್ರಜಾತಾಂತ್ರಿಕವಾದ ಇಂಥ ಪ್ರಕ್ರಿಯೆ ಬಗ್ಗೆ ಅರವಿಂದ ಕೇಜ್ರಿವಾಲರಿಗೆ ಸಹನೆ ಇಲ್ಲ.ಇದಕ್ಕೆ ಕಾರಣಗಳೇನು ಎಂಬುದನ್ನು ಹಿಂದಿನ ಲೇಖನದಲ್ಲಿ ಹೇಳಿದ್ದೇನೆ. ದೆಹಲಿಯಲ್ಲಿ ನೆಲಸಿರುವ ಉಗಾಂಡದ ಕೆಲ ಪ್ರಜೆಗಳು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಎಎಪಿ ಸರ್ಕಾರದ ಕಾನೂನು ಸಚಿವ ಭಾರ್ತಿ ಸ್ವತಃ ಕಾನೂನು ಕೈಗೆತ್ತಿಕೊಂಡು ಮಧ್ಯರಾತ್ರಿ ದಾಳಿ ನಡೆಸಿದರು. ವಾರೆಂಟ್ ರಹಿತವಾಗಿ ದಾಳಿ ನಡೆಸಲೂ ಪೊಲೀಸರಿಗೆ ಸೂಚಿಸಿದರು. ಇದು ಅದೆಷ್ಟು ಸೂಕ್ತ..? ನಂತರ ಪೊಲೀಸರು ಈ ಕುರಿತು ಕ್ರಮ ಕೈಗೊಂಡಿಲ್ಲ ಎಂದಾಗ ಅದನ್ನು ಪೊಲೀಸ್ ಕಮೀಷನರ್ ಅವರಿಗೆ ಪತ್ರ ಬರೆದು ಒತ್ತಾಯಿಸಬಹುದಾಗಿತ್ತು. ಅವರು ಕ್ರಮ ಕೈಗೊಳ್ಳಲು ಕನಿಷ್ಠ ಕಾಲಾವಧಿ ನೀಡಬೇಕಿತ್ತು.
ಆದರೆ ಹಾಗೆ ಮಾಡಲೇ ಇಲ್ಲ. ಮುಖ್ಯಮಂತ್ರಿ ಕೇಜ್ರಿವಾಲ್ ಕೂಡ ಭಾರ್ತಿ ನಡೆ ಸಮರ್ಥಿಸಿಕೊಂಡು ಕೂಡಲೇ ಸಂಬಂಧಿಸಿದ ಪೊಲೀಸ್ ಸಿಬ್ಬಂದಿ ಅಮಾನತು ಮತ್ತು ಪೊಲೀಸ್ ವ್ಯವಸ್ಥೆಯನ್ನು ರಾಜ್ಯ ಸರ್ಕಾರದ ಸುಪರ್ದಿಗೆ ವಹಿಸುವಂತೆ ಒತ್ತಾಯಿಸಿ ಧರಣಿ ಕುಳಿತಿದ್ದಾರೆ. ಸ್ವತಃ ಕಾನೂನು-ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ್ದಾರೆ.
ಇದಲ್ಲದೆ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಜನತೆಗೆ, ಪೊಲೀಸರಿಗೆ ಕರೆ ನೀಡುವುದರ ಮೂಲಕ ಅರಾಜಕತೆ ನಿರ್ಮಾಣ ಮಾಡತೊಗಿದ್ದಾರೆ. ಜೊತೆಗೆ ತಾನು ಅರಾಜಕತವಾದಿ ಎಂಬ ಉದ್ದಟತನದ ಹೇಳಿಕೆ ಬೇರೆ. ಓರ್ವ ಜವಾಬ್ದಾರಿಯುತ ಮುಖ್ಯಮಂತ್ರಿ ನಡೆದುಕೊಳ್ಳುವ ರೀತಿಯೇ ಇದು..?
ಜನವರಿ 26ರ ಗಣರಾಜ್ಯೋತ್ಸವಕ್ಕೆ ಇನ್ನು ಕೆಲವೇ ದಿನಗಳಿರುವಾಗ ಎಎಪಿ ಮುಖ್ಯಸ್ಥ, ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ಅವರ ಮಂತ್ರಿಮಂಡಲ ಅಸಮರ್ಥನಿಯ ಧರಣಿ ಮೂಲಕ ಪ್ರತಿಭಟನೆಗೆ ಮುಂದಾಗಿರುವುದು ಪೂರ್ವನಿಯೋಜಿತ ಎಂದೇ ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ತಿಳಿಯುತ್ತದೆ.
ದೆಹಲಿಯಲ್ಲಿ ಗಣರಾಜೋತ್ಸವನ್ನು ಶಾಂತಿಯುತವಾಗಿ ನಡೆಸುವುದು ಸವಾಲಿನ ಕಾರ್ಯ. ಕೇಂದ್ರ ಸರ್ಕಾರ ಬಹಳ ಒತ್ತಡದಲ್ಲಿರುತ್ತದೆ. ಭದ್ರತಾ ಪಡೆಗಳ ಮೇಲಿರುವ ಒತ್ತಡವೂ ಅಪಾರ. ಅಲ್ಲಿನ ರಾಜ್ಯ ಸರ್ಕಾರದ ಜವಾಬ್ದಾರಿಯೂ ಅಪಾರ. ಇಂಥ ಸಂದರ್ಭದಲ್ಲಿ ತನ್ನ ಕರ್ತವ್ಯ ಮರೆತ ಕೇಜ್ರಿವಾಲ್, ಕಾಂಗ್ರೆಸ್ ಮೇಲೆ ಒತ್ತಡ ತರುವುದರ ಮೂಲಕ ಬೆಂಬಲ ಹಿಂತೆಗೆದುಕೊಳ್ಳುವಂಥ, ತನ್ನನ್ನು ಬಂಧಿಸುವಂಥ ವಾತಾವರಣ ನಿರ್ಮಾಣ ಮಾಡಲು ಯತ್ನಿಸುತ್ತಿದ್ದಾರೆ. ಈ ಮೂಲಕ ಸಾಮಾನ್ಯ ಜನತೆ ಭದ್ರತೆಯನ್ನು ಕಡೆಗಾಣಿಸಿ ಆತಂಕದ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ.
ರೈಲು ಭವನದ ಸುತ್ತ ಅಪಾರ ಪೊಲೀಸರು
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಆಯಕಟ್ಟಿನ ಜಾಗಗಳಲ್ಲಿ ನಿಯುಕ್ತರಾಗಬೇಕಿದ್ದ ಪೊಲೀಸ್ ಪಡೆ ಎಎಪಿ ಧರಣಿ ನಡೆಸುತ್ತಿರುವ ರೈಲು ಭವನದ ಸುತ್ತ ಕೇಂದ್ರಿಕೃತಗೊಂಡಿದೆ. 6 ಸಾವಿರಕ್ಕೂ ಹೆಚ್ಚು ಪೊಲೀಸರು ಅಲ್ಲಿ ನಿಯುಕ್ತಿಗೊಂಡಿದ್ದಾರೆ. ಅನಾಹುತಕರ ಘಟನೆ ನಡೆಯಲು ಆಸ್ಪದ ನೀಡದಿರಲು ಗೃಹಖಾತೆ ಈ ಕ್ರಮ ಕೈಗೊಂಡಿದೆ. ಈಗಾಗಲೇ ಸಂಬಂಧಿಸಿದ ಪೊಲೀಸರ ವಿರುದ್ಧ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಆದ್ದರಿಂದ ಧರಣಿ ಹಿಂತೆಗೆದುಕೊಳ್ಳಬೇಕಾದ ಕೇಜ್ರಿವಾಲ್ ಅದನ್ನು ಮರೆತು ಪ್ರತಿಭಟನೆ ನಡೆಸುತ್ತಿರುವುದು ಏನನ್ನು ತೋರಿಸುತ್ತದೆ. ಈತನ ಉದ್ದಟತನದ ಮನಸ್ಥಿತಿ, ಸರ್ವಾಧಿಕಾರಿ ಧೋರಣೆ, ಸಾಮಾನ್ಯ ಜನತೆ ನೆಮ್ಮದಿ ಬಗ್ಗೆ ಕಾಳಜಿ ಇಲ್ಲದಿರುವುದು, ಅನಾಹುತಗಳ ನಡೆದರೆ ಅದರ ಮೇಲೆ ಸಿಂಹಾಸನ ಕಟ್ಟುವ ಪ್ರವೃತ್ತಿ ತೋರಿಸುತ್ತದೆ ಅಲ್ಲವೆ… ?
ಈ ಎಲ್ಲ ಹಿನ್ನೆಲೆಯಲ್ಲಿ ಅರವಿಂದ ಕೇಜ್ರಿವಾಲ ನಡೆಯನ್ನು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ನಂಬಿಕೆ ಇರುವವರೆಲ್ಲರೂ ಖಂಡಿಸಬೇಕಾಗಿದೆ. ಈತನ ನಡೆಯಿಂದಾಗಿ ದೆಹಲಿ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಹುದ್ಧೆಯ ಘನತೆ ಬೀದಿಗೆ ಬಿದ್ದಿದೆ.

No comments:

Post a Comment