• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಡಬ್ಬಿಂಗ್ ಬಗ್ಗೆ ಸರ್ಕಾರದ ನಿಲುವೇನು…?

ಇತ್ತೀಚೆಗೆ ಡಬ್ಬಿಂಗ್ ಬೇಕು ಎಂಬ ಕೂಗೂ ಪ್ರೇಕ್ಷಕ/ ಗ್ರಾಹಕರಿಂದ ಪ್ರಬಲವಾಗಿ ಕೇಳಿಬರುತ್ತಿದೆ. ಕನ್ನಡ ಚಿತ್ರರಂಗದಲ್ಲಿಯೇ ಬೇಕು, ಬೇಡ ಎನ್ನುವ ಎರಡು ಬಣಗಳಿವೆ. ವಾದ-ವಿವಾದ ತಾರಕಕ್ಕೇರಿದೆ. ಬೇಡ ಎನ್ನುವ ಬಣ ಪ್ರತಿಭಟನಾ ಸಭೆಯನ್ನೂ ಮಾಡಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ತನ್ನ ಅಧಿಕೃತ ನಿಲುವು ಪ್ರಕಟಿಸಿಲ್ಲ. 50 ವರ್ಷಗಳಿಂದ ಮಾತನಾಡದ ಸರ್ಕಾರ ಈಗ ಮಾತನಾಡಬಹುದೇ, ಆಗ ಪರಿಸ್ಥಿತಿ ಏನಾಗಬಹುದು…? 
 ಚಿತ್ರರಂಗ ಬೆಳೆಯಲಿ ಎಂಬ ಆಶಯ...
50 ವರ್ಷಗಳ ಹಿಂದೆ ಕನ್ನಡ ಚಿತ್ರರಂಗ ಬೆಳೆದಿರಲಿಲ್ಲ. ತೆರೆ ಕಾಣುತ್ತಿದ್ದ ಮೂಲ ಕನ್ನಡ ಚಿತ್ರಗಳ ಸಂಖ್ಯೆ ಬೆರಳೆಣಿಕೆಯಷ್ಟು. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ತೆರೆ ಕಾಣುತ್ತಿದ್ದ ಪರಭಾಷೆ ಚಿತ್ರಗಳ ಸಂಖ್ಯೆ ಏರುತ್ತಿತ್ತು. ಡಬ್ ಆಗಿ ಕನ್ನಡಕ್ಕೆ ಬರುವ ಚಿತ್ರಗಳ ಸಂಖ್ಯೆಯೂ ಹೆಚ್ಚಿತ್ತು. ಇಂಥ ಸಂದರ್ಭದಲ್ಲಿ ರಾಜಕುಮಾರ್ ಮತ್ತಿತರರು ಸ್ಥಳೀಯ ಚಿತ್ರರಂಗದ ಬೆಳವಣಿಗೆ ದೃಷ್ಟಿಯಿಂದ ಡಬ್ಬಿಂಗ್ ತಡೆಗಟ್ಟುವ ತೀರ್ಮಾನ ಕೈಗೊಂಡರು.
ಬೆಳೆದ ಚಿತ್ರರಂಗ...
ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ನಟ ರಾಜಕುಮಾರ್. ಇವರ ಪ್ರತಿಭೆಯಿಂದಲೇ ಚಿತ್ರರಂಗ ಬೆಳೆಯತೊಡಗಿತು. ಚಿತ್ರಗಳ ಆಂತರಿಕ ಮಾರುಕಟ್ಟೆಯೂ ವಿಕಾಸವಾಗತೊಡಗಿತು. ಕನ್ನಡ ಚಿತ್ರೋದ್ಯಮದ ಹಿತದೃಷ್ಟಿಯಿಂದ ಬೇರೆಲ್ಲೂ ಹೋಗದೆ ಇಲ್ಲಿಯೇ ಕಾಲೂರಿ ನಿಂತರು, ಬೆಳೆದರು. ಜೊತೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹಲವರ ಬೆಳವಣಿಗೆಗೂ ಕಾರಣರಾದರು.
ಹೆಚ್ಚಿದ ಚಿತ್ರಗಳ ಸಂಖ್ಯೆ...
ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ವಾರ್ಷಿಕ 120 ರಿಂದ 140 ಚಿತ್ರಗಳು ತೆರೆ ಕಾಣುತ್ತಿವೆ. ಅಂದು ಕೆಲವು ಲಕ್ಷಗಳಲ್ಲಿದ್ದ ಚಿತ್ರ ನಿರ್ಮಾಣದ ಬಜೆಟ್ ಇಂದು ಹಲವು ಕೋಟಿಗಳಿಗೇರಿದೆ. ಆದರೆ ಅಂದು ಅನಧಿಕೃತವಾಗಿ ಹೇರಿದ್ದ ನಿಷೇಧ ಮಾತ್ರ ಇನ್ನೂ ತೆರವುಗೊಂಡಿಲ್ಲ. ಅಂದು ಡಬ್ಬಿಂಗ್ ತಡೆಗಟ್ಟುವ ನಿರ್ಧಾರ ಕೈಗೊಂಡವರ ಆಶಯವನ್ನು ಇಂದು ಚಿತ್ರರಂಗದಲ್ಲಿ ಇರುವವರು ಅರ್ಥೈಸಿಕೊಂಡಿಲ್ಲ. 'ಬೆಳವಣಿಗೆ ಆದರೂ ಅಮ್ಮನ ಮಡಿಲು ತೊರೆಯಲು ಹೆದರುವ ಮಗನಂತೆ' ಇನ್ನೂ ಡಬ್ಬಿಂಗ್ ನಿಷೇಧಕ್ಕೆ ಆತುಕೊಂಡಿದೆ !
ಟಿವಿ ಕ್ಷೇತ್ರದಲ್ಲಿಯೂ ನಿಷೇಧ...
ಕನ್ನಡದ ಟೆಲಿವಿಷನ್ ರಂಗಕ್ಕೂ ನಿಷೇಧ ವ್ಯಾಪಿಸಿದೆ. ಅನ್ಯಭಾಷೆಯಿಂದ ಡಬ್ ಆದ ಯಾವುದೇ ಕಾರ್ಯಕ್ರಮಗಳು ಪ್ರಸಾರ ಆಗದಂತೆ ತಡೆಯಲಾಗಿದೆ. ಕನ್ನಡದ ಮನರಂಜನಾ ವಾಹಿನಿಯೊಂದರಲ್ಲಿ ಕೆಲವು ವರ್ಷದ ಹಿಂದೆ ನಟ ಅಮೀರ್ ಖಾನರ ‘ಸತ್ಯಮೇವ ಜಯತೇ’ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಲು ಯತ್ನಿಸಿದಾಗ ವಿರೋಧ ಉಂಟಾಯಿತು. ಟಿವಿ ಕಚೇರಿ ಮೇಲೆ ದಾಳಿಯೂ ನಡೆಯಿತು. ಮತ್ತೆ ಟಿವಿಯಲ್ಲಿ ಡಬ್ ಆದ ಕಾರ್ಯಕ್ರಮಗಳು ಕಾಣಲಿಲ್ಲ.
ಪ್ರತಿರೋಧಕ ಶಕ್ತಿ ತರದ ನಿರ್ಧಾರ...
ಡಬ್ಬಿಂಗ್ ಚಿತ್ರಗಳಿಗೆ ತಡೆಯೊಡ್ಡಿದ್ದರಿಂದ ಕನ್ನಡ ಚಿತ್ರರಂಗವೇನೋ ಬೆಳೆದಿದೆ. ಆದರೆ ‘ಬೀದೀ ಕೂಸು ಬೆಳೀತು ಕೋಣೇ ಕೂಸು ಕೊಳೀತು’ ಎನ್ನುವಂಥ ಸ್ಥಿತಿ ಉಂಟಾಗಿದೆ. ಪೈಪೋಟಿಗೆ ತೆರೆದುಕೊಳ್ಳದ ಕಾರಣ ಪ್ರತಿರೋಧಕ ಶಕ್ತಿಯೇ ಬೆಳೆದಿಲ್ಲ. ಇದರಿಂದಾಗಿಯೇ ಹೊರಗಡೆಯಿಂದ ಬರುವ ಚಿತ್ರಗಳಿಗೆ ಅಂಜುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಡಬ್ಬಿಂಗ್ ಸಿನಿಮಾಗಳಿಗೆ ತೆರೆದುಕೊಂಡ ತಮಿಳು, ತೆಲುಗು ಮತ್ತು ಮಲೆಯಾಳ ಚಿತ್ರೋದ್ಯಮಗಳು ಸಶಕ್ತವಾಗಿವೆ. ಅಲ್ಲಿಯ ಟಿವಿ ವಾಹಿನಿಗಳೂ ಡಬ್ಬಿಂಗ್ ಕಾರ್ಯಕ್ರಮ/ಧಾರವಾಹಿಗಳಿಗೆ ಅವಕಾಶ ನೀಡಿವೆ. ಆದರೂ ಅಲ್ಲಿನ ಕಿರುತೆರೆ ಉದ್ಯಮ ಸೊರಗಿಲ್ಲ !
ಬಾಯ್ದೆರೆಯದ ಸರ್ಕಾರ:
ಇಂದಿಗೂ ಸರ್ಕಾರ, ಡಬ್ಬಿಂಗ್ ಚಿತ್ರಗಳ ಬಗ್ಗೆ ತನ್ನ ಅಧಿಕೃತ ನಿಲುವು ಪ್ರಕಟಿಸಿಲ್ಲ. ಆದರೆ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶ ಇರಬೇಕೆಂಬ ಒತ್ತಡವೂ ಹೆಚ್ಚುತ್ತಿದೆ. ಇದರ ಜೊತೆಯಲ್ಲಿಯೇ ಚಿತ್ರೋದ್ಯಮದ ಡಬ್ಬಿಂಗ್ ವಿರೋಧಿಗಳು ಇದಕ್ಕೆ ಅವಕಾಶ ನೀಡಬಾರದೆಂದು ಭಾರಿ ಒತ್ತಡ ಹೇರುತ್ತಿದ್ದಾರೆ. ಪ್ರತಿಭಟನಾ ಸಭೆಯನ್ನೂ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿಲುವು ತಿಳಿಸಲೇಬೇಕಾಗಿದೆ. ಅದು ಹೇಗಿರಬಹುದು ಎಂಬ ಮುನ್ಸೂಚನೆಯೂ ದೊರೆತಿದೆ.
ಬಾಯ್ಬಿಟ್ಟ ಸಚಿವರು...
ಕನ್ನಡ ಚಿತ್ರರಂಗದ ಕಲಾವಿದರ ಸಂಘದ ಅಧ್ಯಕ್ಷರೂ ಆದ ನಟ ಅಂಬರೀಷ್ ಡಬ್ಬಿಂಗ್ ಕುರಿತಂತೆ ಬಾಯ್ದೆರೆದಿಲ್ಲ. 'ಚಿತ್ರರಂಗದಲ್ಲಿ ಸಕ್ರಿಯನಾಗಿರುವುದು ಬಿಟ್ಟು 12 ವರ್ಷಗಳಾಗಿವೆ' ಎಂದು ಕೈ ತೊಳೆದುಕೊಳ್ಳಲು ಯತ್ನಿಸಿದ್ದಾರೆ. ಆದರೆ ನಾಟಕ/ ಸಿನಿಮಾ ಕ್ಷೇತ್ರದಲ್ಲಿ ಗಳಿಸಿದ ಖ್ಯಾತಿಯ ಕಾರಣದಿಂದ ತೇರದಾಳ ಶಾಸಕಿ ನಂತರ ಮಂತ್ರಿಯೂ ಆಗಿರುವ ಉಮಾಶ್ರೀ ಮಾತನಾಡಿದ್ದಾರೆ. ‘ಕನ್ನಡಕ್ಕೆ ಡಬ್ಬಿಂಗ್ ಅಗತ್ಯ ಇಲ್ಲ. ಈ ಹಿಂದೆ ಕಲಾವಿದೆಯಾಗಿ ಡಾ. ರಾಜ್ ಸಮಿತಿಯಲ್ಲಿದ್ದ ನಾನು ಈಗಲೂ ಡಬ್ಬಿಂಗ್ ವಿಷಯದಲ್ಲಿ ಅದೇ ನಿಲುವು ಹೊಂದಿದ್ದೇನೆ. ನಮ್ಮ ಭಾಷೆಗೆ ಪೂರಕವಾದ ತೀರ್ಮಾನ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸರ್ಕಾರದ ಮಟ್ಟದಲ್ಲಿಯೂ ಡಬ್ಬಿಂಗ್ ಕುರಿತು ಚರ್ಚೆ ನಡೆದಿದೆ’ ಎಂದಿದ್ದಾರೆ. ಸದನದಲ್ಲಿಯೂ ಪ್ರಸ್ತಾಪ...
ನಟಿ, ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಜನವರಿ 24ರಂದು ಮೇಲ್ಮನೆಯಲ್ಲಿ ಡಬ್ಬಿಂಗ್ ನಿಷೇಧದ ಬಗ್ಗೆ ಪ್ರಸ್ತಾಪಿಸಿದ್ದಾರೆ. ‘ರಾಜ್ಯಕ್ಕೆ 50 ವರ್ಷಗಳ ಹಿಂದೆಯೇ ಡಬ್ಬಿಂಗ್ ಕಾಲಿಟ್ಟಿತ್ತು. ಅದಕ್ಕೆ ಕನ್ನಡ ಹೋರಾಟಗಾರರು, ಚಿತ್ರೋದ್ಯಮ ಅವಕಾಶ ನೀಡಲಿಲ್ಲ. ಆದರೆ ಭಾರತೀಯ ಸ್ಪರ್ಧಾ ಆಯೋಗ ಇತ್ತೀಚಿಗೆ ವರದಿ ನೀಡಿ, ಡಬ್ಬಿಂಗ್ ಮಾಡಬಹುದೆಂದು ಹೇಳಿದೆ. ಇದರಿಂದ ವಿವಾದಕ್ಕೆ ಮತ್ತೆ ಚಾಲನೆ ದೊರೆತಿದೆ. ಡಬ್ಬಿಂಗ್ ಬಂದರೆ ಸಾವಿರಾರು ಕಲಾವಿದರು, ಚಿತ್ರ ಕಾರ್ಮಿಕರು ಬೀದಿಗೆ ಬೀಳುತ್ತಾರೆ. ಇದಕ್ಕೆ ಅವಕಾಶ ನೀಡಬಾರದು’ ಎಂದರು.
ತಾರಾ ಮಾತಿಗೆ ವಾರ್ತಾ ಸಚಿವ ಆರ್. ರೋಷನ್ ಬೇಗ್ ಸದನದಲ್ಲಿಯೇ ಪ್ರತಿಕ್ರಿಯಿಸಿದ್ದಾರೆ. ‘ಕನ್ನಡ ನಾಡು, ನುಡಿ ಮತ್ತು ಚಿತ್ರೋದ್ಯಮದ ಹಿತ ಕಾಯುವ ನಿಟ್ಟಿನಲ್ಲಿ ಡಬ್ಬಿಂಗ್ ನಿಷೇಧಿಸುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ. ಕನ್ನಡ ಭಾಷೆ ಮತ್ತು ಚಿತ್ರರಂಗದ ಹಿತ ಕಾಪಾಡಲು ಸರ್ಕಾರ ಬದ್ಧ. ಸರ್ಕಾರ ನಿಮ್ಮ ಪರವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.
ನಿಷೇಧದ ತೀರ್ಮಾನ ಸಾಧ್ಯವೇ...
ಸಚಿವ ರೋಷನ್ ಬೇಗ್ ಅವರು ವಿವಾದದ ಎಲ್ಲ ಮಗ್ಗುಲುಗಳನ್ನು ಪರಿಶೀಲಿಸಿದ್ದರೆ ಇಂಥ ಭರವಸೆ ಕೊಡುವ ಗೋಜಿಗೆ ಹೋಗುತ್ತಿರಲಿಲ್ಲ. ಒಂದು ವೇಳೆ ಹೀಗೆ ಮಾಡಿದರೆ ರಾಜ್ಯ ಸರ್ಕಾರ ಫಜೀತಿಗೆ ಸಿಲುಕುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಅವುಗಳ ಪಟ್ಟಿಯನ್ನು ಇಲ್ಲಿ ನೀಡಿದ್ದೇನೆ.
1.    ಜ್ಞಾನದ ಪ್ರಸಾರಕ್ಕೆ ಡಬ್ಬಿಂಗ್ ಕೂಡ ಒಂದು ಪ್ರಬಲ ಮಾಧ್ಯಮ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.
2.    ಭಾರತೀಯ ಸಂವಿಧಾನ ಹೇಗೆ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆಯೋ ಹಾಗೆ ವ್ಯಕ್ತಿಗೆ ಅನುಕೂಲವಾದ ಯಾವುದೇ ಭಾಷೆಯಲ್ಲಿ ಆದರೂ ಜ್ಞಾನಾರ್ಜನೆ ಮಾಡುವ, ಮನರಂಜನೆ ಪಡೆಯುವ ಅವಕಾಶ ಕಲ್ಪಿಸಿದೆ.
3.    ರಾಜ್ಯ ಸರ್ಕಾರದ ಅಧಿಕೃತ ನೀತಿ ಪ್ರಕಾರ ಪ್ರಥಮ ಭಾಷೆ ಕನ್ನಡ. ಇದರ ಮೂಲಕ ಜ್ಞಾನಾರ್ಜನೆಯನ್ನು ಪಡೆಯಲು ಪರಮ ಆದ್ಯತೆ ನೀಡಿದೆ.
4.    ಓರ್ವ ವ್ಯಕ್ತಿ ತನ್ನ ಮಾತೃಭಾಷೆ ಮುಖಾಂತರವೇ ಜಗತ್ತಿನ ಎಲ್ಲ ವಿದ್ಯಮಾನಗಳನ್ನು ನೋಡುವ, ಅರಿಯುವ ಪ್ರಕ್ರಿಯೆಗಳನ್ನು ಎಲ್ಲ ಸರ್ಕಾರಗಳು ಬೆಂಬಲಿಸುತ್ತವೆ.
5.    ಡಬ್ಬಿಂಗ್ ಎನ್ನುವುದು ಕಾನೂನು ಸಮ್ಮತವಾದ ಕಾರ್ಯ. ಕಾನೂನಿಗೆ ವಿರುದ್ಧವಲ್ಲದ, ಪ್ರಜೆಗಳಿಗೆ ಹಾನಿ ಇಲ್ಲದ ಈ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ನಿಷೇಧಿಸಲು ಸಾಧ್ಯವಿಲ್ಲ.
ನಿಷೇಧಿಸುವ ತೀರ್ಮಾನ ಕೈಗೊಂಡರೆ...
ಒಂದು ವೇಳೆ ಚಿತ್ರೋದ್ಯಮದ ಮಂದಿ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡರೂ ನಂತರ ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಅದು ಬಿದ್ದು ಹೋಗುತ್ತದೆ. ಅಥವಾ ಇದಕ್ಕೂ ಮೊದಲೇ ಭಾರತೀಯ ಸ್ಪರ್ಧಾ ಆಯೋಗ ಇಂಥ ತೀರ್ಮಾನ ಹಿಂತೆಗೆದುಕೊಳ್ಳುವಂತೆ ಸೂಚನೆ ನೀಡುತ್ತದೆ.
ಲೋಕಸಭಾ ಚುನಾವಣೆ ಸನ್ನಿಹಿತ:
ರಾಷ್ಟ್ರದ 16ನೇ ಲೋಕಸಭೆಗೆ ಇನ್ನು ಐದಾರು ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಇಂಥ ಸಂದರ್ಭದಲ್ಲಿ ಪ್ರಚಾರಕ್ಕಾಗಿ ರಾಜಕೀಯ ಪಕ್ಷಗಳು ಸಿನಿಮಾ ನಟ-ನಟಿಯರ ನೆರವು ಪಡೆದುಕೊಳ್ಳುತ್ತವೆ. ಆದ್ದರಿಂದ ಇವರ ಇಷ್ಟಕ್ಕೆ ವಿರುದ್ಧವಾದ ತೀರ್ಮಾನವನ್ನು ಕಾಂಗ್ರೆಸ್ ಸರ್ಕಾರ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ. ಈಗಾಗಲೇ ರಾಜ್ಯ ಬಿಜೆಪಿ ಘಟಕ ಡಬ್ಬಿಂಗ್ ನಿಷೇಧ ಪರ ಮಾತನಾಡಿದೆ. ಆದ್ದರಿಂದ ಕಾಂಗ್ರೆಸ್ ಕೂಡ ತಟಸ್ಥ ನೀತಿ ಅನುಸರಿಸುತ್ತದೆ. ಚಿತ್ರ ನಿರ್ಮಾಪಕರೂ ಆಗಿದ್ದ ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಡಬ್ಬಿಂಗ್ ಪರ ಧೋರಣೆಯ ಹೇಳಿಕೆ ನೀಡಿದ್ದಾರೆ. ಆದರೆ ನಂತರ ಸದನದಲ್ಲಿ ಈ ಕುರಿತಂತೆ ನಿರ್ಧಾರಕ್ಕೆ ಬರಲು ಒತ್ತಡ ಹೇರಿಲ್ಲ. ಚುನಾವಣೆ ಪ್ರಕ್ರಿಯೆ ನಂತರವೂ ತಟಸ್ಥ ನೀತಿ ಮುಂದುವರಿಯಬಹುದು. ಆಗ ಸಾಂವಿಧಾನಿಕ ಆಶಯಗಳ ಸ್ಥಿತಿ...?
ದ್ವಂದ್ವ ನೀತಿ...
ಚಿತ್ರಗಳ ನಿರ್ಮಾಣವನ್ನು ಉದ್ಯಮ ಎಂದು ಪರಿಗಣಿಸಬೇಕು. ಉದ್ಯಮಕ್ಕೆ ನೀಡುವ ಸವಲತ್ತು-ಸೌಲಭ್ಯ ನೀಡಬೇಕು ಎಂದು ಕನ್ನಡ ಚಿತ್ರರಂಗ ಒತ್ತಾಯಿಸಿದೆ. ಇದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಚಿತ್ರೋದ್ಯಮದ ಬೆಳವಣಿಗೆಗೆ ಅನೇಕ ಸವಲತ್ತುಗಳನ್ನು ನೀಡಿದೆ. ಆದರೆ ಡಬ್ಬಿಂಗ್ ನಿಂದ ಪಾರಾಗುವ ಸಲುವಾಗಿ ಚಿತ್ರೋದ್ಯಮವನ್ನು ಭಾರತೀಯ ಸ್ಪರ್ಧಾ ಆಯೋಗದಿಂದ ಹೊರಗಿಡಬೇಕು ಎಂಬ ಒತ್ತಾಯವನ್ನೂ ಕನ್ನಡ ಚಿತ್ರರಂಗದ ವ್ಯಕ್ತಿಗಳು ಮಾಡುತ್ತಿದ್ದಾರೆ. ಪ್ರೇಕ್ಷಕ ಗ್ರಾಹಕನಲ್ಲ ಎಂಬ ವಾದವನ್ನೂ ಮಾಡುತ್ತಿದ್ದಾರೆ. ಆದರೆ ಚಿತ್ರರಂಗಕ್ಕೆ ಉದ್ಯಮದ ಸ್ವರೂಪ ಬಂದ ಮೇಲೆ, ಮನರಂಜನಾ ತೆರಿಗೆ ವ್ಯಾಪ್ತಿಯಲ್ಲಿಯೂ ಇದ್ದ ಸಂದರ್ಭದಲ್ಲಿ ಗ್ರಾಹಕನೂ ಆಗಿರುವ ಪ್ರೇಕ್ಷಕನನ್ನು ಕೇವಲ ಪ್ರೇಕ್ಷಕ ಎಂದು ಪರಿಭಾವಿಸುವ ತೀರ್ಮಾನಕ್ಕೆ ಬರುವುದು ಕಷ್ಟ.
ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದರೆ...
ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳಿಗೆ ನಿಷೇಧ ಇದೆ. ಇದನ್ನು ತೆರವುಗೊಳಿಸಿ ಎಂದು ಭಾರತೀಯ ಸ್ಪರ್ಧಾ ಆಯೋಗಕ್ಕೆ ದೂರು ನೀಡಲಾಗಿದೆ. ಆದರೆ ಈ ವಿಷಯವಿನ್ನೂ ನ್ಯಾಯಾಲಯದ ಮೆಟ್ಟಿಲು ಏರಿಲ್ಲ. ನಾಳೆ ಚಿತ್ರಪ್ರೇಮಿಗಳು ಅಥವಾ ಆಸಕ್ತರು ಹೀಗೊಂದು ನಿಷೇಧ ಜಾರಿಯಲ್ಲಿದೆ ಎಂದು ನ್ಯಾಯಾಲಯದ ಮೊರೆ ಹೋದರೆ ಏನಾಗಬಹುದು.
1.    ನಿಷೇಧ ಹೇರಿರುವ ಆದೇಶದ ಪ್ರತಿ ನೀಡಲು ನ್ಯಾಯಾಲಯ ಕೇಳುತ್ತದೆ.
2.    ಆಗ ಲಭ್ಯವಿರುವ ಮಾಹಿತಿಗಳಿಂದ ಇದು ಅನಧಿಕೃತವಾಗಿ ಜಾರಿಯಲ್ಲಿರುವ ನಿಷೇಧ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಯತ್ನ ನಡೆಯುತ್ತದೆ.
3.    ನ್ಯಾಯಾಲಯಕ್ಕೆ ಇದು ಮನವರಿಕೆಯಾದರೆ ಆಗ ರಾಜ್ಯದಲ್ಲಿ ಸಂವಿಧಾನಾತ್ಮಕ ಆಶಯಗಳನ್ನು ಜಾರಿಗೆ ತರುವ ಹೊಣೆ ಹೊತ್ತ ರಾಜ್ಯ ಸರ್ಕಾರ ಇಂಥ ಎಲ್ಲ ಬೆಳವಣಿಗೆಗೆ ಆಸ್ಪದ ನೀಡಿದ್ದು ಹೇಗೆ ಎಂದು ಕಟುವಾಗಿ ಕೇಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
4.    ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮುಜುಗರಕ್ಕೆ ಸಿಲುಕಿ ಕೊಳ್ಳಬಹುದು.
5.    ಜನವರಿ 27 ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ಚಿತ್ರರಂಗದ ಡಬ್ಬಿಂಗ್ ವಿರೋಧಿ ಬಣ ನೀಡಿದ ಹೇಳಿಕೆಗಳ ಪತ್ರಿಕಾ ವರದಿಗಳು/ ವಿಡಿಯೋ ತುಣುಕಗಳನ್ನು ನ್ಯಾಯಾಲಯಕ್ಕೆ ನೀಡಿ ಇಂಥ ಹೇಳಿಕೆಗಳ ಮೂಲಕ ಭಯದ ವಾತಾವರಣವನ್ನು ಮೂಡಿಸಲು ಯತ್ನಿಸುತ್ತಿದ್ದಾರೆ, ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾದ ನಡೆ ಎಂಬ ಮನವಿ ಅಥವಾ ವಾದ ಸಲ್ಲಿಕೆಯಾದರೆ..?
6.    ಹೀಗೆ ಮಾಡಿದ ಮನವಿ/ವಾದ ನ್ಯಾಯಾಲಯಕ್ಕೆ ಮನವರಿಕೆಯಾದರೆ ಇಂಥ ಹೇಳಿಕೆಗಳನ್ನು ನೀಡಿದವರು ಸಂಕಷ್ಟಕ್ಕೆ ಸಿಲುಕಿಕೊಳ್ಳಬಹುದು.
ಸಂಕಷ್ಟದಲ್ಲಿ ಯಾರಿಲ್ಲ...
ಉದಾರೀಕರಣ, ಜಾಗತೀಕರಣ ಪ್ರಪಂಚದಲ್ಲಿ ರೈತರು ಸೇರಿದಂತೆ ಅನೇಕ ವಲಯಗಳವರು ಸಂಕಷ್ಟದಲ್ಲಿದ್ದಾರೆ. ಯಾವುದೇ ವಲಯದಲ್ಲಿಯೂ ಅಸ್ಥಿರತೆ, ಉದ್ಯೋಗಗಳ ಅಭದ್ರತೆಯೂ ಇದೆ. ಅತಿಯಾದ ಪೈಪೋಟಿ ಇದೆ.  ಸ್ಪರ್ಧೆಯಲ್ಲಿ ಗೆಲ್ಲುವ ಅಗತ್ಯತೆ ಇದೆ. ಇಂಥ ಸಂದರ್ಭದಲ್ಲಿ ಕನ್ನಡ ಚಿತ್ರರಂಗದವರು ನೀಡುವ ಉದ್ಯೋಗ ಅಸ್ಥಿರತೆ ಡಬ್ಬಿಂಗ್ ನಿಷೇಧಕ್ಕೆ ಕಾರಣವಾಗಲಾರದು. ಮೇಲಾಗಿ ಇಂಥ ಒತ್ತಾಯ ಅಸಂವಿಧಾನಾತ್ಮಕ, ಅಸಿಂಧುವಾದ ಒತ್ತಡ. ಇವೆಲ್ಲದರ ಜೊತೆಗೆ ಕನ್ನಡ ಚಿತ್ರಗಳೇ ಪುಂಖಾನುಪುಂಕವಾಗಿ ಪರಭಾಷೆಗಳಿಗೆ ಡಬ್ಬಿಂಗ್ ಆಗುತ್ತಿವೆ. ಆ ಚಿತ್ರೋದ್ಯಮಗಳಿಗೆ ಇಲ್ಲದ ನಿಷೇಧದ ರಕ್ಷಣೆ ನಿಮಗೇಕೆ ಎಂದರೆ ಉತ್ತರ ಎಲ್ಲಿದೆ..?

6 comments:

 1. Subhashini HiranyaThursday, 30 January, 2014

  ಆ ಕಾಲದಲ್ಲಿ ಕಳಪೆ ಟೆಲಿಧಾರಾವಾಹಿ ಹಿಂದಿ 'ರಾಮಾಯಣ' ಕನ್ನಡದಲ್ಲಿ ಬೇಡ ಎಂಬ ನಿಲುವು ರಾಜಕುಮಾರ್ ತಳೆದಿರಬಹುದು. ರಾಜಕುಮಾರ್ ಚಿತ್ರಗಳೇ ಮಲಯಾಳಂ ಡಬ್ ಆಗಿ ಕಾಸರಗೋಡಿಗೆ ಬರ್ತಾ ಇತ್ತು. ಡಬ್ಬಿಂಗ್ ಮಾಡೋದ್ರಿಂದ ಭಾಷಾ ಬೆಳವಣಿಗೆಗೂ ಅನುಕೂಲ ಇದೆ. ಈಗ ಬರುವ ಕನ್ನಡ ಸಿನೆಮಾ ಸಾಹಿತ್ಯದಲ್ಲಿ ಭಾಷೆಯನ್ನು ಮತ್ತೂ ಹಾಳು ಮಾಡುತ್ತಿದ್ದಾರೆ.

  ReplyDelete
 2. ನನ್ನ ಅನಿಸಿಕೆ ಪ್ರಕಾರ ಜನಾಭಿಪ್ರಾಯ ಗೆ ಮನ್ನಣೆ ಸರ್ಕಾರ ನೀಡಬೇಕು .ಲೋಕಸಭಾ ಚುನಾವಣೆ ಹತ್ತಿರ ಇರೋದ್ರಿಂದ ಸರ್ಕಾರದ ನಡೆ ಏನೆಂಬುದು ಕಾದು ನೋಡಬೇಕು.

  ReplyDelete
 3. kannada annodu matru bhahe....nija tane! kannadalli yella bashe rimek madal sadyana!? pawranika.... vaijnyanika mahiti..mattu.... chalana chitra galanu kannadakke@RIMEK@ madalu sadyane illa astu mottha ..bhajet yava karnataka produsar Invest madal sadya illa....#alva#avarenu iddaru sanna putta..tamil..telugu...film ann aste rimek madtare kannada produsar galu ok@ kevala 8-10 sanna putta cinema rimek gagi @@lakshanta MAHITI@@gala BHANDHRA irodannu kevala kannada kalavidhara JUJUBI swarta kkagi kannadigaru dumming VANchitaraga beka ?kannadigaru.....kilagi bittara......kannada kalavidare nimma ge sari anisutta .congess pakksha annod janapara kalaji irod nijane adhare......nivu dhubbing nishedha dinda illivarege ada anyayavannu saripadiso takath idya?...BJP...paksha kivda agi...kanndigara dwanige spandisuttilla.....nivu avamanisutiidra dubhig suport me geleyare

  ReplyDelete
 4. Yes.. dubbing beku.. adre movies alla. Discover channels.. cartoon. Animated .. adella Kannada dalli bandre makkaligu.. artha agutthe... antha..

  ReplyDelete
 5. Paramanada RamakrishanaThursday, 30 January, 2014

  ಡಬ್ಬಿಂಗ್ ಬೇಡ ಅನ್ನುವುದು ನಮ್ಮ ಅಸಾಯಕತೆಯ ಪ್ರತೀಕ ವಾಗಿದೆ ಈ ಸ್ಪರ್ದಾ ಪ್ರಪಂಚದಲ್ಲಿ ನಾವು ಶೆಕ್ತಿ ಹೀನರು ಎನ್ನುವುವಂತೆ ತೋರುತ್ತದೆ ಆದ್ದರಿಂದ ನಾವು ವೀರಕನ್ನಡಿಗರಾಗ ಬೇಕು ಅನ್ನೊದು ನನ್ನ ಆಸೆ.

  ReplyDelete
 6. dubbing yemba 'chitra vikruti' beda

  ReplyDelete