• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ವ್ಹಾರೆವ್ಹಾ...... ಗೋಲಿಸೋಡಾ… !

ಕಥೆಗಳಿಗಾಗಿ ಎಲ್ಲೆಲ್ಲೋ ಹುಡುಕಬೇಕಿಲ್ಲ. ನಮ್ಮ ಸುತ್ತಮುತ್ತಲೇ ಸಮೃದ್ಧವಾಗಿರುತ್ತವೆ. ಅವುಗಳನ್ನು ನೋಡುವ ಕಣ್ಣು ಆ ಪಾತ್ರಗಳ ಹಾಡು-ಪಾಡು ಕೇಳುವ ಕಿವಿ ಇರಬೇಕು. ಹೀಗೆ ಇದ್ದರೆ ಎಂಥ ವಿಷಯ ದೊರೆಯುತ್ತದೆ ಎನ್ನುವುದಕ್ಕೆ ತಾಜಾ ಉದಾಹರಣೆ ತಮಿಳು ಚಿತ್ರ ‘ಗೋಲಿಸೋಡಾ’ ಮಾರುಕಟ್ಟೆ ಎಂದ ಮೇಲೆ ಅಲ್ಲಿ ನಾನಾ ಬಗೆಯ ವ್ಯಾಪಾರಿಗಳು, ದಳ್ಳಾಳಿಗಳು, ಮೋಸಗಾರರು, ಕುಡುಕರು ಮತ್ತು ಅನಾಥರೂ ಇರುತ್ತಾರೆ. ಇವರೆಲ್ಲರ ದುಡಿಮೆಯ ರಕ್ತ ಹೀರಲು ಮಾರ್ಕೇಟ್ ರೌಡಿಗಳು ಇರುತ್ತಾರೆ. ಇವರೆಲ್ಲರ ನಡುವೆ ಸಿನಿಮಾ ಬೆಳೆಯುತ್ತದೆ. ಅದು ಹೇಗೆ…?
 ತಮಿಳುನಾಡಿನ ಕೊಯಂಬೇಡು ಮಾರುಕಟ್ಟೆಯಲ್ಲಿ ನಾಲ್ವರು ಹದಿಹರೆಯದ ಅನಾಥ ಹುಡುಗರು. ನಮಗೆ ನಾವೇ ಎನ್ನುವಂಥ ವಿಶ್ವಾಸ. ಇದೇ ತಂದುಕೊಟ್ಟಿದೆ ಬಹುದೊಡ್ಡ ಆತ್ಮವಿಶ್ವಾಸ. ಇದರ ಪರಿಣಾಮ ಇವರು ಕಾಣುವ ಕನಸುಗಳಿಗೆ ಬರವಿಲ್ಲ. ವಯಸ್ಸಿನ ಆವೇಗಕ್ಕೆ ತಕ್ಕಂತೆ ಮಾತು. ಕೆಲಸದ ನಡುವೆ ಕೊಂಚ ವಿರಾಮ ದೊರೆತರೂ ಚಂದ ಕಾಣುವ ಒಂದೇ ಬಟ್ಟೆಯನ್ನು ಮೂವರು ಹಾಕಿ ಸಮಾನ ವಯಸ್ಸಿನ ಹುಡುಗಿಯರಿಗೆ ಲೈನ್ ಹೊಡೆಯುವ ಖುಷಿ. ಮತ್ತೊಬ್ಬ ಮಾತ್ರ ಹೇಗಿದ್ದರೂ ಬದುಕು ಸಾಗುತ್ತದೆ ಎಂಬಂತೆ ನಿರ್ಲಿಪ್ತ.
ರಾತ್ರಿಯಾದರೆ ಮಾರುಕಟ್ಟೆ ಕಟ್ಟಡದ ತಾರಸಿಯೇ ಹಾಸಿಗೆ. ಅಲ್ಲಿಂದ ನಕ್ಷತ್ರಗಳನ್ನು ನೋಡುವುದಕ್ಕೇನೂ ಅಡ್ಡಿ ಇಲ್ಲವಲ್ಲ. ಇವರ ನಡುವೆ ಬದುಕಿನ ದಾರಿಯಲ್ಲಿ ತನ್ನವರನ್ನು ಕಳೆದುಕೊಂಡ ನಡುವಯಸ್ಸಿನ ರಿಕ್ಷಾವಾಲಾ (ಇಮ್ಮನ್ ಅಣ್ಣಾಚಿ) ಹುಡುಗರು ಕಿಚಾಯಿಸಲು ಇಟ್ಟ ಹೆಸರು ಮಂತ್ರವಾದಿ. ಕುಡಿದರೆ ಹಾಡುವ ಖಯಾಲಿ. ಬೆಳಗ್ಗೆ ಸೂರ್ಯ, ಭೂಮಿಗೆ ಅಟೆಂಡೆನ್ಸ್ ಹಾಕುವ ಮುಂಚೆ ಇವರ ಕಾಯಕ ಆರಂಭ. ಇಂಥ ಹುಡುಗರನ್ನು ಮಮತೆಯಿಂದ ಕಾಣುವ ಆಚ್ಚಿ (ಸುಜಾತ ಶಿವಕುಮಾರಿ) ಇವರಿಗೊಂದು ಉತ್ತಮ ಬದುಕು ಕಟ್ಟಿಕೊಡಬೇಕೆಂದು ಈಕೆಯ ಹಂಬಲ.
ದುಡಿಮೆಯ ದುಡ್ಡಿನಲ್ಲಿ ಒಂದಿಷ್ಟು ಉತ್ತಮ ದಿರಿಸು ಖರೀದಿ. ಜಾಲಿಜಾಲಿ ಸುತ್ತಾಟ. ಮಾರ್ಕೇಟ್ ಹಾದಿಯಲ್ಲಿ ಬರುವ ಹುಡುಗಿಯರಿಗೆ ಟಾಟಾ. ಇಂಥ ಹುಡುಗರಿಗೆ ಹಂಚಿಕಡ್ಡಿಯಂತಿರುವ, ಹಲ್ಲು ತುಂಬ ಉಬ್ಬಾಗಿರುವ, ಸೋಡಾ ಗ್ಲಾಸ್ ಧರಿಸಿದ, ಹದಿಹರೆಯದ ಹುಡುಗಿ ಪರಿಚಯವಾಗುತ್ತಾಳೆ. ಆಪ್ತ ಗೆಳತಿಯಾಗುವ ಈಕೆ ಹುಡುಗರ ಪ್ರೇಮಕ್ಕೆ ಪ್ರೇಮಗಳು ಮತ್ತು ಪರ್ಮಿಟ್ ಕೊಡಿಸಲು ಯತ್ನ. ಹಾದಿಯಲ್ಲಿ ಆಚ್ಚಿ ಮಗಳೇ (ಸೀತಾ) ನಮ್ಮ ನಿರ್ಲಿಪ್ತ ಹುಡುಗ ಸೇತು (ಶ್ರೀರಾಮ್) ಪ್ರೇಮಿಯಾಗುತ್ತಾಳೆ.
ಸ್ವಂತ ದುಡಿಮೆ ಕಲ್ಪಿಸಲು ಯತ್ನ
ದಿಕ್ಕಿಲ್ಲದ ಹುಡುಗರಿಗೆ ಒಂದು ದಿಕ್ಕು ಕಟ್ಟಿಕೊಡಲು ಆಚ್ಚಿ ಇವರನ್ನು ಮಾರುಕಟ್ಟೆಯನ್ನೇ ತನ್ನ ಹಿಡಿತದಲ್ಲಿ ಇರಿಸಿಕೊಂಡ ಡಾನ್ ನಾಯ್ಡು (ಮಧುಸೂದನ್) ಬಳಿಗೆ ಕರೆದೊಯ್ಯುತ್ತಾಳೆ. ಮರುಗುವ ಡಾನ್ ತನ್ನ ಗೋದಾಮನ್ನು ಉಚಿತವಾಗಿ ಬಿಟ್ಟು ಕೊಡುತ್ತಾನೆ. ಇಲ್ಲಿ ಹೋಟೆಲ್ ಆರಂಭ. ಹುಡುಗರ ಬದುಕು ಒಂದು ದಾರಿಗೆ ಬಂದಿತು ಎನ್ನುವಷ್ಟರಲ್ಲಿ ದೊಡ್ಡ ತಿರುವು ಉಂಟಾಗುತ್ತದೆ. ರೌಡಿಗಳಿಗೂ ಹುಡುಗರಿಗೂ ಘರ್ಷಣೆ ಆರಂಭವಾಗುತ್ತದೆ. ಇವರ ನಡುವೆ ಹುಡುಗರಿಗೆ ಸಹಾಯ ಮಾಡಲು ಯತ್ನಿಸುವ, ಆದರೆ ಪ್ರಭಾವಿ ಮುಂದೆ ಅಸಹಾಯಕನಾದ ಪೊಲೀಸ್ ಸಬ್ ಇನ್ಸ್ಪೆಕ್ಟರ್. ಇವರೆಲ್ಲರ ನಡುವಿನ ಸಂಘರ್ಷದಲ್ಲಿ ಹುಡುಗರಿಗಾಗಿ ಪ್ರಾಣ ಕೊಡಲು ತಯಾರಾದ ಹುಡುಗಿಯರು. ಅಂದ ಹಾಗೆ ಸಿತ್ತಪ್ಪ (ಪಾಂಡಿ) ಚಾಂದಿನಿ ನಡುವೆ ಲವ್ವ್ ಶುರುವಾಗಿರುತ್ತದೆ. ಇದು ಮೌನ ಕಾದಲ್ !
ಅನಾಥ ಹುಡುಗರು, ಆಚ್ಚಿ, ಇಬ್ಬರು ಹುಡುಗಿಯರು, ರೌಡಿಗಳು ಮತ್ತು ಇವರ ಧಣಿ ನಾಯ್ಡು ನಡುವಿನ ಸಂಘರ್ಷ ತೀವ್ರವಾಗುತ್ತಲೇ ಸಾಗುತ್ತದೆ. ಇದರ ಪರಿಣಾಮಗಳೇನು, ಅಂತ್ಯದಲ್ಲಿ ಏನಾಗುತ್ತದೆ. ಹುಡುಗರ ಕೆಚ್ಚು ಫಲ ನೀಡುತ್ತದೆಯೇ, ಕಾದಲ್ ಗಳ ಕಥೆಯೇನು ಎಂಬುದನ್ನೆಲ್ಲ ನೋಡಿದರೆ ಚೆಂದ. ಹೀಗೆ ಮಾಡುವುದರಿಂದ ಒಂದು ಒಳ್ಳೆಯ ಸಿನಿಮಾ ನೋಡಿದ ಖುಷಿ ದೊರೆಯುತ್ತದೆ.
ಇಡೀ ಸಿನಿಮಾದಲ್ಲಿ ಎದ್ದು ಕಾಣುವ ಇತರ ಅಂಶಗಳೇನೆಂದರೆ ಚಿತ್ರಕಥೆ. ಬಹಳ ಬಿಗಿಯಾಗಿ ಹೆಣೆಯಲಾಗಿದೆ. ಕೊನೆಯಲ್ಲಿ ಕೊಂಚ ಸಡಿಲವಾಯಿತೇನೋ ಎನಿಸುವಷ್ಟರಲ್ಲಿ ಸಿನಿಮಾ ಮತ್ತೆ ಟ್ರಾಕಿಗೆ ಬರುತ್ತದೆ. ಛಾಯಾಗ್ರಹಣ ಕೂಡ ತನ್ನ ಇತಿಮಿತಿಯಲ್ಲಿ ಚೆನ್ನಾಗಿದೆ.. ಕಥಾ ಪಾತ್ರಗಳಿಗೆ ತಕ್ಕಂತೆ ಪಾತ್ರಧಾರಿಗಳ ಆಯ್ಕೆ ನಡೆದಿದೆ. ಸಿನಿಮಾ ಒಮ್ಮೆ ಆರಂಭವಾದರೆ ಕೊನೆ ತನಕ ತನ್ನ ಟೆಂಪೋ ಕಾಯ್ದುಕೊಳ್ಳುತ್ತದೆ. ಇವೆಲ್ಲದರ ನಿರ್ವಹಣೆ ಕಾರ್ಯವನ್ನು ನಿರ್ದೇಶಕ ಸಮರ್ಥವಾಗಿ ಕೆಲಸ ಮಾಡಿದ್ದಾನೆ. ಅಂದ ಹಾಗೆ ಈ ಮೂರು ಜವಾಬ್ದಾರಿಗಳನ್ನು ವಿಜಯ ಮಿಲ್ಟನ್ ನಿರ್ವಹಿಸಿದ್ದಾರೆ. ಸಂಭಾಷಣೆ (ಪಾಂಡಿರಾಜ್) ಸಂಕಲನ (ಅಂತೋಣಿ) ಸಂಗೀತ (ಅರುಣ್ ಗಿರಿ, ಸೀಲಿನ್) ಕಾರ್ಯಗಳು ಮೆಚ್ಚುಗೆಗಳಿಸುತ್ತವೆ. ಹಾಡುಗಳು ತಮಿಳು ಜನಪದ ಮಾದರಿಯಲ್ಲಿ ಇವೆ. ಇಂಥ ಚಿತ್ರಗಳಿಗೆ ಈ ನಡುವೆ ಇಂಥ ಮಾದರಿಯ ಹಾಡುಗಾರಿಕೆ ಶೈಲಿಯೇ ಜನಪ್ರಿಯವಾಗುತ್ತಿದೆ.
ಲವಲವಿಕೆ
ಇಡೀ ಚಿತ್ರದಲ್ಲಿ ಎದ್ದು ಕಾಣುವುದು ಆರು ಹದಿಹರೆಯದ ಪಾತ್ರಗಳನ್ನು ಮಾಡಿದ ನಿಜಕ್ಕೂ ಹದಿಹರೆಯದವರೇ ಆದ ಪಾತ್ರಧಾರಿಗಳ ಲವಲವಿಕೆ. ಸಂತೋಷ್, ಶ್ರೀರಾಮ್, ಪಾಂಡಿ, ಮುರುಗೇಶ್, ಸೀತಾ ಮತ್ತು ಚಾಂದಿನಿ ಇವರುಗಳ ನಟನೆ, ಸಂಭಾಷಣೆ ಒಪ್ಪಿಸುವಿಕೆಯ ಶೈಲಿ, ಮಿಂಚಿನಂಥ ಓಟ ನೋಡಿದರೆ ಹೊಸಬರು ಎನ್ನಿಸುವುದಿಲ್ಲ. ಪ್ರಬುದ್ಧವಾಗಿ ತಮ್ಮ ಪಾತ್ರಗಳನ್ನು ಅಭಿನಯಿಸಿದ್ದಾರೆ. ಆಚ್ಚಿ ಪಾತ್ರಧಾರಿ ಸುಜಾತ ಶಿವಕುಮಾರ್, ನಾಯ್ದು ಪಾತ್ರಧಾರಿ ಮಧುಸೂದನ್, ರಿಕ್ಷಾವಾಲಾ ಪಾತ್ರ ಮಾಡಿರುವ ಇಮ್ಮನ್ ಅಣ್ಣಾಚಿ ಅಭಿನಯ ಸೊಗಸು.

2 comments:

 1. NIMAGE KANNADA CINIMAGALIGINTA TAMIL CINIMAGALE ADBHUTAVAGI KANSUTTE...

  ReplyDelete
 2. ಗುರುವೇ... ನನಗೆ ಒಳ್ಳೆಯ ಕಥೆ ಇರುವ, ನಿಜ ಅರ್ಥದಲ್ಲಿ ಸಿನಿಮಾ ಆಗಿರುವ ಚಿತ್ರಗಳೆಲ್ಲವೂ ಇಷ್ಟವಾಗುತ್ತೆ... :-)

  ReplyDelete