• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಬೆಂಗಳೂರಿಗೆ ನೈಟ್ ಲೈಫ್ ಬೇಕೆ…?

ಬೆಂಗಳೂರಿಗೆ ನೈಟ್ ಲೈಫ್ ಬೇಕು ಎಂದು ವಿಷನ್ ಗ್ರೂಪ್ ಹೇಳಿದೆ. ಸಮಿತಿ ಶಿಫಾರಸುಗಳನ್ನು ಗಂಭೀರವಾಗಿ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ತೀವ್ರ ಅಪರಾಧ ಹೆಚ್ಚಳ ಇರುವ ರಾಷ್ಟ್ರದ ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ. ಹೀಗಿರುವಾಗ ಜನತೆ ನೆಮ್ಮದಿ ಕೆಡಿಸಲು ನೈಟ್ ಲೈಫ್ ಅಗತ್ಯವೆ..? ಎಂಬ ಕುರಿತು ವಿಶ್ಲೇಷಣೆ ಮಾಡಿದ್ದೇನೆ. ಬೆಂಗಳೂರಿಗರ ನೆಮ್ಮದಿ ಉಳಿಸುವ ನಿಟ್ಟಿನಲ್ಲಿ ನಿಮ್ಮ ಅಭಿಪ್ರಾಯವನ್ನೂ ತಿಳಿಸಿ…
ಕರ್ನಾಟಕದ ರಾಜ್ಯದ ಪ್ರವಾಸೋದ್ಯಮ ನೀತಿ ರೂಪಿಸಲು ಸರ್ಕಾರ ವಿಷನ್ ಗ್ರೂಪ್ ರಚಿಸಿತ್ತು. ಇದರ ಅಧ್ಯಕ್ಷರು ಟಿ.ವಿ. ಮೋಹನದಾಸ್ ಪೈ. 2014ರ ಜನವರಿ 21ರಂದು ಗ್ರೂಪ್ ವರದಿ ನೀಡಿದೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಅನೇಕ ಶಿಫಾರಸುಗಳನ್ನು ಮಾಡಿದೆ.
ರಾಜ್ಯವನ್ನು ಆಕರ್ಷಕ ಪ್ರವಾಸಿ ತಾಣವಾಗಿಸಲು ರಾತ್ರಿ 1ರ ತನಕ ಬೆಂಗಳೂರನ್ನು ಸಕ್ರಿಯವಾಗಿಡಬೇಕು,ಇದಕ್ಕಾಗಿ ಮದ್ಯದಂಗಡಿಗಳು, ಬಾರ್ ಅಂಡ್ ರೆಸ್ಟೋರೆಂಟ್ಗಳು, ನೈಟ್ ಕ್ಲಬ್ಗಳು, ಹೋಟೆಲುಗಳು ರಾತ್ರಿ 1ರ ತನಕ ತರೆದಿರಬೇಕು. ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಬೇಕೆಂಬ ನಿಟ್ಟಿನಲ್ಲಿ ಇದು ಅವಶ್ಯಕ ಎಂದು ಸಮಿತಿ ಹೇಳಿದೆ.
ಎತ್ತೆಣಿದೆತ್ತ ಸಂಬಂಧ..?
ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸುವುದು ಎಂದರೇನರ್ಥ…? ಅವುಗಳನ್ನು ಸುಸ್ಥಿತಿಯಲ್ಲಿಡುವುದು, ಅಲ್ಲಿಗೆ ತಲುಪಲು ಉತ್ತಮ ರಸ್ತೆ, ಸಾರಿಗೆ, ಅವಶ್ಯಕತೆ ಇದ್ದರೆ ರೈಲು ಮಾರ್ಗ, ವಿಮಾನ ಸೌಲಭ್ಯ, ಶುಚಿ-ರುಚಿ ಆಹಾರ ಒದಗಿಸುವ ಹೋಟೆಲ್, ಲಾಡ್ಜ್ ಗಳು, ವೈದ್ಯಕೀಯ ಕೇಂದ್ರಗಳು, ಸುರಕ್ಷತೆ ಕಾಪಾಡಲು ಪೊಲೀಸ್ ಚೌಕಿಗಳು ಬೇಕು.
ಇತ್ತೀಚಿನ ವರ್ಷಗಳಲ್ಲಿ ಕಡಿಮೆ, ಮಧ್ಯಮ ಆದಾಯ ಇರುವ ವರ್ಗಗಳಲ್ಲಿಯೂ ಪ್ರವಾಸದ ಅಭಿರುಚಿ ಹೆಚ್ಚಿದೆ. ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವಾಗ ಇವರನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು. ಸೌಕರ್ಯಗಳು ದುಬಾರಿಯಾಗಿರಬಾರದು. ವಿದೇಶಿಗರನ್ನಷ್ಟೆ ದೃಷ್ಟಿಯಲ್ಲಿ ಇಟ್ಟುಕೊಂಡರೆ ಪ್ರವಾಸೋದ್ಯಮ ಅಭಿವೃದ್ಧಿಯಾಗುವುದಿಲ್ಲ.
ಯಾರನ್ನು ದೃಷ್ಟಿಯಲ್ಲಿ ಇಟ್ಟುಕೊಳ್ಳಲಾಗಿದೆ...?
ಪ್ರವಾಸಿ ತಾಣಗಳಲ್ಲಿ ಬೆಳಗ್ಗಿನಿಂದ ಸಂಜೆ ತನಕ ಸುತ್ತುವ ಪ್ರವಾಸಿಗರು ದಣಿದಿರುತ್ತಾರೆ. ರಾತ್ರಿ ಬೇಗ ಊಟ ಮಾಡಿ ತಂಗುದಾಣ ಸೇರುವ ತವಕದಲ್ಲಿ ಇರುತ್ತಾರೆ. ಮದ್ಯಪಾನ ಮಾಡುವವರು ಬೇರೆ ಅಪರಿಚಿತ ಸ್ಥಳಗಳಿಗೆ ಹೋದಾಗ ಸಂಜೆ ನಂತರ ಆದಷ್ಟು ಬೇಗ ತಮ್ಮ ಅಭ್ಯಾಸ ಪೂರೈಸಿಕೊಳ್ಳುವ ಧಾವಂತದಲ್ಲಿ ಇರುತ್ತಾರೆ. ಹೀಗಿರುವಾಗ ಮೋಹನದಾಸ್ ಪೈ ನೇತೃತ್ವದ ವಿಷನ್ ಗ್ರೂಪ್ ಯಾರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬೆಂಗಳೂರಿನಲ್ಲಿ ನೈಟ್ ಲೈಫ್ ಬೇಕು ಎಂದು ಶಿಫಾರಸು ಮಾಡಿದೆ…?
ವಿದೇಶಿಗರು ಮತ್ತು ಐಟಿ ಕಂಪನಿ ಉದ್ಯೋಗಿಗಳು
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೆ. ತಡರಾತ್ರಿಯಲ್ಲಿಯೂ ಹೊರರಾಜ್ಯ, ದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಇವರಲ್ಲಿ ವಿದೇಶಿಗರ ಸಂಖ್ಯೆ ಅಧಿಕ. ಬಂದ ಇವರಿಗೆ ಮದ್ಯ ಬೇಕು, ಮನರಂಜನೆ ಬೇಕು. ಇದಕ್ಕಾಗಿ ಮದ್ಯದಂಗಡಿಗಳು, ಬಾರ್ ಅಂಡ್ ರೆಸ್ಟೋರೆಂಟ್ ಗಳು, ನೈಟ್ ಕ್ಲಬ್ ಗಳು ತಡರಾತ್ರಿ ತನಕ ತೆರೆದಿರಬೇಕು. ಇದು ವಿಷನ್ ಗ್ರೂಪ್, ವಿಷನ್ !
ಇವರ ಶಿಫಾರಸಿಗೆ ಇನ್ನು ಕಾರಣಗಳಿವೆ. ಆದರೆ ಇವೆಲ್ಲವನ್ನೂ ಗ್ರೂಪ್ ವಿವರಿಸಿಲ್ಲ. ಆದರೆ ಗ್ರೂಪ್ ಸಮಾನ ಮನಸ್ಕರಾದ ಕೆಲವರು ಐಟಿ-ಬಿಟಿ ದಿಗ್ಗಜರು ರಾತ್ರಿ 1ರ ತನಕ ಹೋಟೆಲ್ ಗಳು, ಬಾರ್ ಗಳು ತೆರೆದಿರಬೇಕೆಂದು ಹಿಂದೆಯೂ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇವೆಲ್ಲವನ್ನೂ ವಿಷನ್ ಗ್ರೂಪ್ ತನ್ನ ದೃಷ್ಟಿಯಲ್ಲಿ ಇಟ್ಟುಕೊಂಡಿದೆ ಅನಿಸುತ್ತದೆ.
ಬೆಂಗಳೂರಿನಲ್ಲಿ ಐಟಿ ಕಂಪನಿಗಳು ಸಾಕಷ್ಟು ಇವೆ. ದಿನದ ಇಪ್ಪತ್ನಾಲ್ಕು ಗಂಟೆಯೂ ಇವುಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಉದ್ಯೋಗಿಗಳು ಪಾಳಿಯಲ್ಲಿ ದುಡಿಯುತ್ತಿರುತ್ತಾರೆ. ಸಂಜೆ ಪಾಳಿಗೆ ಹೋದವರು ಬರುವುದು ತಡವಾಗುತ್ತದೆ. ಇಂಥ ಕಂಪನಿಗಳ ಉದ್ಯೋಗಿಗಳು, ಸಲಹೆಗಾರರು, ಆಡಳಿತ ಮಂಡಳಿಗಳ ನಿರ್ದೇಶಕರು, ಎಂಡಿಗಳು ತಡರಾತ್ರಿಯೂ ಬರುತ್ತಿರುತ್ತಾರೆ, ಹೋಗುತ್ತಿರುತ್ತಾರೆ. ಇವರಿಗೆ ಮದ್ಯ ಬೇಕು, ಮನರಂಜನೆಯೂ ಬೇಕು. ಆದ್ದರಿಂದ ನೈಟ್ ಲೈಫ್ ಇದ್ದರೆ ಅನುಕೂಲ ಎಂದು ಗ್ರೂಪ್ ಯೋಚಿಸಿರಬಹುದು. ಆದರೆ ಇದಕ್ಕೆ ನಗರ ತೆರುವ ಬೆಲೆಯೇನು..?
ಸಮಯಾವಕಾಶ ಹೆಚ್ಚಳ ಬೇಕೆ…?
ಬೆಂಗಳೂರು ನಗರದಲ್ಲಿ ಮದ್ಯದಂಗಡಿಗಳು ರಾತ್ರಿ 10.30, ಬಾರ್ ಮತ್ತು ರೆಸ್ಟೋರೆಂಟ್ ಗಳು ರಾತ್ರಿ 11ರವವರೆಗೆ ತೆರೆದಿರಲು ಅವಕಾಶ ಇದೆ. ಆದರೆ ಇವುಗಳು ಮುಚ್ಚುವುದು ತಮಗೆ ಮಿತಿ ಇರುವ ಸಮಯಕ್ಕಿಂತಲೂ ಕನಿಷ್ಠ 1 ರಿಂದ 3 ತಾಸು ತಡವಾಗಿ. ಹೀಗಿರುವಾಗ ರಾತ್ರಿ 1ರ ತನಕ ಇವುಗಳು ತೆರೆದಿರಲು ಅವಕಾಶ ನೀಡಿದರೆ ಏನಾಗುತ್ತದೆ. 1ಗಂಟೆಗೆ ಮುಚ್ಚಬೇಕಾದ ಬಾರ್ಗಳು ಬೆಳಗ್ಗಿನ ಜಾವ 4 ರಿಂದ 5 ಗಂಟೆ ತನಕ ತೆರೆದಿರುತ್ತವೆ. ಇದು ಅಪರಾಧ ಎಸಗುವವರಿಗೆ ಮತ್ತಷ್ಟು ಸುವರ್ಣವಕಾಶ ಕಲ್ಪಿಸಿದಂತೆ ಆಗುತ್ತದೆ.
ಸಿನಿಮಾ ಪ್ರದರ್ಶನ
ಒಂದೂವರೆ ದಶಕದ ಹಿಂದೆ ರಾತ್ರಿ 12. 30 ರಿಂದ 1ರ ತನಕ ಸಿನಿಮಾ ಪ್ರದರ್ಶನ ಇರುತ್ತಿತ್ತು. ಕಳ್ಳರು, ದರೋಡೆಕೋರರು, ಖದೀಮರು, ಅತ್ಯಾಚಾರಿಗಳು ಇದರ ಫಾಯಿದೆ ತೆಗೆದುಕೊಳ್ಳುತ್ತಿದ್ದರು.ಸಿನಿಮಾ ಬಿಟ್ಟ ನಂತರ ಅನೇಕ ವಿಧದ ಅಪರಾಧಗಳು ನಡೆಯುವ ಸಂಖ್ಯೆ ಹೆಚ್ಚಾಗತೊಡಗಿತು. ಇದರ ಬಗ್ಗೆ ಪೊಲೀಸ್ ಇಲಾಖೆ ವರದಿ ಸಲ್ಲಿಸಿದಾಗ ಸರ್ಕಾರ ಸ್ಪಂದಿಸಿತು. ತಡರಾತ್ರಿ ಪ್ರದರ್ಶನಗಳು ರದ್ದುಗೊಂಡವು ಇದರ ನೆನಪು ವಿಷನ್ ಗ್ರೂಪಿಗೆ ಇದ್ದಂತೆ ಕಾಣುತ್ತಿಲ್ಲ.
ಅಪರಾಧ ಸಂಖ್ಯೆ ಹೆಚ್ಚಳ ನಿಂತಿಲ್ಲ
ನಗರ ಬೆಳೆದಂತೆಲ್ಲ ಅಪರಾಧ ಪ್ರಕರಣಗಳ ಸಂಖ್ಯೆಯೂ ಬೆಳೆಯುತ್ತಿದೆ. 2012ರ ನ್ಯಾಷನಲ್ ಬ್ಯೂರೋ ಆಫ್ ಕ್ರೈಮ್ ರೆಕಾರ್ಡ್ಸ್ ವಿವರ ನೋಡಿದಾಗ ಅತಿಹೆಚ್ಚು ಅಪರಾಧಗಳು ಘಟಿಸುವ ದೇಶದ ಮಹಾನಗರಗಳ ಪಟ್ಟಿಯಲ್ಲಿ ದೆಹಲಿಗೆ ಮೊಲ ಸ್ಥಾನ, ಬೆಂಗಳೂರಿಗೆ ದ್ವೀತಿಯ ಸ್ಥಾನ. ರಾಬರಿ ಮತ್ತು ಡಕಾಯತಿ ಪ್ರಕರಣಗಳ ಪಟ್ಟಿ ನೋಡಿದರೆ ಬೆಂಗಳೂರು ಮೊದಲ ಸ್ಥಾನದಲ್ಲಿದೆ! ರೇಪ್, ಕಿಡ್ನಾಪ್, ಮರ್ಡರ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
ಕೊಲೆಗಳು-266. ಕೊಲೆಯತ್ನ-369, ರಾಬರಿ 670, ಡಕಾಯತಿ- 37, ಅಪಹರಣ ಪ್ರಕರಣಗಳು-532, ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು-2, 263, ರೇಪ್-90, ಗ್ಯಾಂಗ್ ರೇಪ್-2, ಕಳ್ಳತನಗಳು- 9, 826. ಈ ಪಟ್ಟಿಯನ್ನು ನೋಡಿದರೆ ದಿಗಿಲು ಮೂಡುತ್ತದೆ.
ಪೊಲೀಸರ ಮೇಲೆ ಹೆಚ್ಚುತ್ತಿರುವ ಒತ್ತಡ
ರಾಷ್ಟ್ರದ ಇತರ ಯಾವುದೇ ಮಹಾನಗರಗಳ ಪೊಲೀಸರಿಗಿಂತ ಬೆಂಗಳೂರು ಪೊಲೀಸರು ಹೆಚ್ಚು ಒತ್ತಡ ಅನುಭವಿಸುತ್ತಿದ್ದಾರೆ. ಇದರಿಂದ ಅವರ ದೈಹಿಕ- ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳಾಗುತ್ತಿವೆ. ಈ ವಿಷಯದ ಬಗ್ಗೆ ಮತ್ತೊಮ್ಮೆ ವಿವರವಾಗಿ ಚರ್ಚಿಸೋಣ. ಇಲ್ಲಿನ ಪೊಲೀಸರ ಮೇಲಿನ ಒತ್ತಡಕ್ಕೆ ಕಾರಣವಾದ ಅಂಶಗಳಲ್ಲಿ ಪೊಲೀಸರ ಸಂಖ್ಯೆ ಅತ್ಯಂತ ಕಡಿಮೆ ಇರುವುದು.
ಬೆಂಗಳೂರಿನ ಜನಸಂಖ್ಯೆ 1 ಕೋಟಿ
2012ರ ವರದಿ ಪ್ರಕಾರ ನಗರದ ಕಾನೂನು-ಸುವ್ಯವಸ್ಥೆ ಮತ್ತು ಅಪರಾಧ ತಡೆಗಟ್ಟುವಿಕೆ ವಿಭಾಗಗಳಲ್ಲಿ ಇರುವ ಪೊಲೀಸ್ ಮೆನ್ ಗಳ ಸಂಖ್ಯೆ ಕೇವಲ 8, 842, ಇದರ ಸರಳವಾದ ಅರ್ಥವೇನೆಂದರೆ ಓರ್ವ ಪೊಲೀಸ್ 1130ಕ್ಕಿಂತಲೂ ಹೆಚ್ಚು ನಾಗರಿಕರ ರಕ್ಷಣೆ ನೋಡಬೇಕಿದೆ. ಅಭಿವೃದ್ಧಿ ವಿಷಯಗಳಲ್ಲಿ ವಿದೇಶಗಳು, ವಿಶೇಷವಾಗಿ ಅಮೆರಿಕ ಮಾದರಿಯನ್ನು ನಮ್ಮ ಸರ್ಕಾರಗಳು ಹೊಗಳುತ್ತವೆ. ಅಲ್ಲಿನ ನಿಯಮದಂತೆ 220 ಜನರಿಗೆ ಓರ್ವ ಪೊಲೀಸ್ ಇರಬೇಕು. ಇದನ್ನು ಇಲ್ಲಿ ನಿರೀಕ್ಷಿಸುವುದು ಸಾಧ್ಯವೆ..?
ಪ್ರತಿಭಟನೆಗಳಿಗೆ ಹೆಚ್ಚು ಬಂದೋಬಸ್ತ್
ಬೆಂಗಳೂರಿನಲ್ಲಿ ನಿತ್ಯ ಒಂದಲ್ಲ ಒಂದು ಧರಣಿ, ಮೆರವಣಿಗೆ, ರಸ್ತೆತಡೆ, ಧಿಡೀರ್ ಪ್ರತಿಭಟನೆ ನಡೆಯುತ್ತಲೆ ಇರುತ್ತವೆ. ದೇಶ-ವಿದೇಶಗಳ ಅತಿಗಣ್ಯರು ಭೇಟಿ ನೀಡುತ್ತಿರುತ್ತಾರೆ. ಇವರಿಗೆ ಹೆಚ್ಚು ಭದ್ರತೆ ನೀಡುವ ಅವಶ್ಯಕತೆಯೂ ಇರುತ್ತದೆ. ಇಲ್ಲಿನ ಬಂದೋಬಸ್ತ್ ಗಾಗಿ ಕಾಯ್ದಿಟ್ಟ ಪೊಲೀಸ್ ಪಡೆ ಅಲ್ಲದೆ ಕಾನೂನು- ಸುವ್ಯವಸ್ಥೆ, ಅಪರಾಧ ತಡೆ ಹೊಣೆ ಹೊತ್ತ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಇದರಿಂದ ಠಾಣೆಗಳು ಬಿಕೋ ಎನ್ನುತ್ತಿರುತ್ತವೆ.
ಪತ್ತೆಯಾಗದ ಅಪರಾಧ ಪ್ರಕರಣಗಳು
ಬೆಂಗಳೂರಿನಲ್ಲಿ ಇದುವರೆಗೂ ಪತ್ತೆಯಾಗದ ಅಪರಾಧ ಪ್ರಕರಣಗಳ ಸಂಖ್ಯೆಯೂ ಅಪಾರ. ತನಿಖೆ ಮಾಡಬೇಕಾದ ಅಧಿಕಾರಿಗಳು, ಸಹಕರಿಸಬೇಕಾದ ಪೊಲೀಸ್ ಮೆನ್ ಗಳ ಸಂಖ್ಯೆ ಕಡಿಮೆ ಇರುವುದೂ ಇದಕ್ಕೆ ಕಾರಣ. ಭದ್ರತೆ, ತನಿಖೆ. ಬಂದೋಬಸ್ತ್, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಒತ್ತಡಗಳಿಂದ ಇಲ್ಲಿನ ಪೊಲೀಸರು ಸುಸ್ತಾಗಿದ್ದಾರೆ. ಇನ್ನು ಈ ಮಹಾನಗರಕ್ಕೆ ನೈಟ್ ಲೈಫ್ ಬಂದರೆ…?
ರಸ್ತೆ ಅಪಘಾತಗಳು
ಈ ಮಹಾನಗರದಲ್ಲಿ ನಡೆಯುವ ರಸ್ತೆ ಅಪಘಾತಗಳ ಸಂಖ್ಯೆ ಅಪಾರ. ಅದರಲ್ಲಿಯೂ ಕುಡಿದು ವಾಹನ ಚಲಾಯಿಸಿ ಅಪಘಾತಗಳಿಗೆ ಕಾರಣವಾಗುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಮಾಯಕ ಪಾದಚಾರಿಗಳು ಇದಕ್ಕೆ ಬಲಿಯಾಗುತ್ತಿದ್ದಾರೆ. ಕುಡಿದು ವಾಹನ ಚಲಾಯಿಸುವವರ ಕಾರಣದಿಂದ ಸಂಚಾರಿ ನಿಯಮಗಳನ್ನು ಪಾಲಿಸಿ ಚಾಲನೆ ಮಾಡುವವರು ಅಪಘಾತಕ್ಕೀಡಾಗುತ್ತಿದ್ದಾರೆ. ಹೀಗಿರುವಾಗ ಬೆಂಗಳೂರಿಗೆ ನೈಟ್ ಲೈಫ್ ಬಂದರೆ
ಅಗತ್ಯವಿಲ್ಲ
ಅನುಮಾನವೇ ಇಲ್ಲ, ಬೆಂಗಳೂರಿಗೆ ನೈಟ್ ಲೈಫ್ ಬಂದರೆ ಇಲ್ಲಿ ಇರುವ ಅಲ್ಪಸ್ವಲ್ಪ ನೆಮ್ಮದಿಯೂ ಹಾಳಾಗುತ್ತದೆ. ಸಾಮಾನ್ಯ ಜನರಿರಲಿ, ಶ್ರೀಮಂತರ ಬದುಕು ನರಕವಾಗುತ್ತದೆ. ಯಾರೋ ಕೆಲವರ ಶೋಕಿಗಾಗಿ ಬಹುಜನರ ಹಿತ ಬಲಿಗೊಡುವುದು ಎಷ್ಟರ ಮಟ್ಟಿಗೆ ಸರಿ..? ಈ ಎಲ್ಲ ಹಿನ್ನೆಲೆಯಲ್ಲಿ ಬೆಂಗಳೂರಿಗೆ ನೈಟ್ ಲೈಫ್ ಬೇಕೆನ್ನುವ ಶಿಫಾರಸನ್ನು ವಿರೋಧಿಸಬೇಕಿದೆ.

No comments:

Post a Comment