• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಕಾನೂನು ಕೈಗೆತ್ತಿಕೊಂಡು ಸಾಧಿಸಿದ್ದೇನು ಕೇಜ್ರಿವಾಲ್..?

ಸಿಎಂ ಎಂಬುದನ್ನೆ ಮರೆತಂತೆ ಬೀದಿಗಿಳಿದಿದ್ದ ಅರವಿಂದ ಕೇಜ್ರಿವಾಲ್ ಪ್ರಹಸನಕ್ಕೆ ಸದ್ಯಕ್ಕೆ ವಿರಾಮ ದೊರೆತಿದೆ. ಧರಣಿಗೆ ದೆಹಲಿ ಸೇರಿದಂತೆ ರಾಷ್ಟ್ರದ ಎಲ್ಲೆಡೆಯಿಂದ ಅಪ್ಪಳಿಸತೊಡಗಿದ ನಕಾರಾತ್ಮಕ ಪ್ರತಿಕ್ರಿಯೆ ಅವರನ್ನು ಕಂಗೆಡೆಸಿದೆ. ಮೀಡಿಯಾ ಡಾರ್ಲಿಂಗ್ ಆಗಿದ್ದ ತಾನು ಮೀಡಿಯಾ ದುಷ್ಮನ್ ಆಗತೊಡಗಿದ ಬೆಳವಣಿಗೆ ಚಿಂತೆಗೀಡು ಮಾಡಿದೆ. ಇಬ್ಬರು ಪೊಲೀಸ್ ಅಧಿಕಾರಿಗಳನ್ನು ರಜೆ ಮೇಲೆ ಕಳಿಸಲಾಗುವುದು ಎಂದು ಹೇಳಿದ ತಕ್ಷಣ ಪ್ರತಿಭಟನೆ ಹಿಂತೆಗೆದುಕೊಂಡಿದ್ದಾರೆ.
ಒತ್ತಾಯಗಳು ಈಡೇರುವ ಮುನ್ನವೆ ಅರವಿಂದ ಕೇಜ್ರಿವಾಲ್ ಧರಣಿ ಹಿಂತೆಗೆದುಕೊಂಡಿದ್ದು ಅಚ್ಚರಿಯ ಬೆಳವಣಿಗೆ ಅಲ್ಲ. ತನ್ನ ರಾಜಕೀಯ ಲೆಕ್ಕಾಚಾರ ಉಲ್ಟಾ ಆಗುತ್ತಿರುವುದನ್ನು ಗ್ರಹಿಸಿ ಮುಖ ಉಳಿಸಿಕೊಳ್ಳುವುದಕ್ಕಾಗಿ ಇಂಥ ತೀರ್ಮಾನ ತೆಗೆದುಕೊಂಡಿದ್ದಾರೆ. ಆದರೆ ಇಬ್ಬರು ಪೊಲೀಸರನ್ನು ರಜೆ ಮೇಲೆ ಕಳಿಸುವುದಕ್ಕಾಗಿ ಇಂಥ ಡ್ರಾಮಬಾಜಿ ಅಗತ್ಯವಿತ್ತೆ ಎಂದು ಕೇಳುತ್ತಿರುವ ಜನತೆ ಪ್ರಶ್ನೆಗೆ ಉತ್ತರಿಸಲಾಗದೆ ಪರದಾಡುತ್ತಿದ್ದಾರೆ.
ಈಡೇರದ ಯೋಜನೆ
ಗಣರಾಜ್ಯೋತ್ಸವ ಸಮೀಪ ಇರುವ ದಿನಗಳಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದು ಮನಸಿಗೆ ಬಂದ ಹಾಗೆ ಆರೋಪ ಮಾಡಿದರೆ, ನಗರದ ದೈನಂದಿನ ಜೀವನ ಅಸ್ತವ್ಯಸ್ತಗೊಳಿಸಿ ಭದ್ರತಾ ವ್ಯವಸ್ಥೆ ಆತಂಕಕ್ಕೀಡು ಮಾಡಿದರೆ ರಾಜ್ಯ ಸರ್ಕಾರ ರಚನೆಗೆ ನೀಡಿದ ಬೆಂಬಲವನ್ನೂ ಕಾಂಗ್ರೆಸ್ ಹಿಂತೆಗೆದುಕೊಳ್ಳುತ್ತದೆ. ತನ್ನ ಮತ್ತು ಎಎಪಿ ಇತರ ಪ್ರಮುಖರ ಬಂಧನವೂ ಆಗಬಹುದು. ಇದನ್ನೆ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಅಭೂತಪೂರ್ವ ಗೆಲವು ಸಾಧಿಸಬಹುದು ಎಂಬುದು ಕೇಜ್ರಿವಾಲ ಯೋಚನೆಯಾಗಿತ್ತು.
ಕಾಂಗ್ರೆಸ್ ನಡೆ
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತನ್ನ ಸಂಪುಟದ ಆರು ಮಂದಿ ಸಚಿವರೊಂದಿಗೆ ರೈಲುಭವನದಲ್ಲಿ ಕುಳಿತು ಧರಣಿ ಆರಂಭಿಸಿ ಶಾಂತಿ ಭಂಗ ಮಾಡಿ ಕೇಂದ್ರದ ಗೃಹ ಸಚಿವರ  ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದಂತೆ ಕಾಂಗ್ರೆಸ್ ತನ್ನ ಬೆಂಬಲ ಹಿಂತೆಗೆದುಕೊಳ್ಳಬಹುದಿತ್ತು. ಜೊತೆಗೆ ಪ್ರತಿಭಟನಾ ನಿರತರನ್ನು ಬಂಧಿಸಬಹುದಾಗಿತ್ತು.
ಒಂದು ವೇಳೆ ಹೀಗೆ ಮಾಡಿದ್ದರೆ ಪರಿಸ್ಥಿತಿ ಎಎಪಿಗೆ ಅನುಕೂಲಕರವಾಗಿ ಪರಿಣಮಿಸುತ್ತಿತ್ತು. ಇದನ್ನು ಅರಿತ ಕಾಂಗ್ರೆಸ್ ಮೌನವಹಿಸಿ ಜನಾಭಿಪ್ರಾಯ ಕೇಜ್ರಿವಾಲ್ ವಿರುದ್ಧ ಆಗುವುದನ್ನು ನೋಡತೊಡಗಿತು. ಕಾಂಗ್ರೆಸ್ನಿಂದ ಕೆರಳಿದ ಪ್ರತಿಕ್ರಿಯೆ ನಿರೀಕ್ಷಿಸಿದ್ದ ಕೇಜ್ರಿವಾಲ್ಗೆ ನಿರಾಶೆಯಾಯಿತು. ಜೊತೆಗೆ ಬಿಜೆಪಿಯ ಪ್ರಮುಖ ನಾಯಕರು ನಡೆಸಿದ ವಾಗ್ದಾಳಿ ಮತ್ತಷ್ಟು ಎದೆಗುಂದುವಂತೆ ಮಾಡಿದೆ.
ಸಾಧಿಸಿದ್ದೇನು
ಸೂಕ್ಷ್ಮ ಪ್ರದೇಶವಾದ ರೈಲು ಭವನದ ಮುಂದೆ ಬೆಂಬಲಿಗರೊಂದಿಗೆ ಧರಣಿ ಕುಳಿತು ಪೊಲೀಸರನ್ನು ಕ್ಷಣಕ್ಷಣಕ್ಕೂ ಕೆರಳಿಸಲು ಯತ್ನಿಸುತ್ತಾ ದಿನಗಳನ್ನು ಕಳೆದ ಕೇಜ್ರಿವಾಲ್ ಸಾಧಿಸಿದ್ದೇನು. ಕಾನೂನು ಸಚಿವರ ಆದೇಶ ಪಾಲಿಸಲಿಲ್ಲ ಎಂಬ ಆರೋಪ ಎದುರಿಸುತ್ತಿರುವ ಮಾಳವೀಯ ನಗರ ಪೊಲೀಸ್ ಠಾಣಾಧಿಕಾರಿ ಮತ್ತು ಪಹರ್ ಗಂಜ್ ವ್ಯಾಪ್ತಿಯ ಪೊಲೀಸ್ ಗಸ್ತು ವಾಹನದ ಉಸ್ತುವಾರಿ ಅಧಿಕಾರಿ ಇಬ್ಬರನ್ನು ರಜೆ ಮೇಲೆ ಕಳಿಸುವ ತೀರ್ಮಾನವನ್ನು ಗೃಹ ಸಚಿವಾಲಯ ತೆಗೆದುಕೊಂಡಿದೆ. ಇದು ಅಮಾನತು ಅಲ್ಲ.
ಧರಣಿ ವಾಪಸಾತಿಗೆ ಕಾತರ
ಎಎಪಿ ನಡೆಗೆ ನಿರೀಕ್ಷಿಸಿದ ಬೆಂಬಲ ದೊರೆಯದೆ ಪ್ರತಿರೋಧ ವ್ಯಕ್ತವಾಗುತ್ತಿದಂತೆ ಕಳವಳಗೊಂಡ ಕೇಜ್ರಿವಾಲ್ ಧರಣಿ ವಾಪಸಾತಿಗೆ ಕಾತರರಾಗಿದ್ದರು. ಕೇಂದ್ರ ಗೃಹ ಸಚಿವಾಲಯದ ನಿರ್ಧಾರ ಪ್ರಕಟವಾಗುತ್ತಿದಂತೆ ಧರಣಿ ಹಿಂತೆಗೆದುಕೊಂಡು ಇದು ಎಎಪಿ ಹೋರಾಟಕ್ಕೆ ಸಂದ ಜಯ ಎಂದಿದ್ದಾರೆ. ಇದು ಯಾವ ರೀತಿಯ ಜಯ ಎಂದು ವಿವರಿಸಲು ಮಾತ್ರ ಶಕ್ತರಾಗಿಲ್ಲ
ನ್ಯಾಯಾಂಗ ತನಿಖೆ
ಕರ್ತವ್ಯಲೋಪದ ಆರೋಪ ಎದುರಿಸುತ್ತಿರುವ ಪೊಲೀಸರ ವಿರುದ್ಧ ಈಗಾಗಲೇ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಇದು ಪೊಲೀಸರನಷ್ಟೆ ಒಳಗೊಳ್ಳುವುದಿಲ್ಲ. ಎಎಪಿ ಕಾನೂನು ಸಚಿವ ಸೋಮನಾಥ ಭಾರ್ತಿ ಕೂಡ ಇದರ ವ್ಯಾಪ್ತಿಗೆ ಒಳಪಡುತ್ತಾರೆ. ಮಾಳವೀಯ ನಗರ ಠಾಣೆ ವ್ಯಾಪ್ತಿಯಲ್ಲಿ ಇವರು ಎಎಪಿ ಕಾರ್ಯಕರ್ತರೊಂದಿಗೆ ಉಗಾಂಡದ ಮಹಿಳೆಯರು ವಾಸಿಸುತ್ತಿದ್ದ ಮನೆಗೆ ಅಕ್ರಮವಾಗಿ ದಾಳಿ ಇಟ್ಟಿದ್ದಾರೆ, ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡುವ ಸಲುವಾಗಿ ಈ ಮಹಿಳೆಯರು ಮೂತ್ರ ವಿಸರ್ಜಿಸುವಂತೆ ಒತ್ತಾಯ ಹೇರಿದ್ದಾರೆ, ವಾರೆಂಟ್ ಇಲ್ಲದಿದ್ದರೂ ಕ್ರಮ ಕೈಗೊಳ್ಳುವಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ ಎಂಬ ಆರೋಪಗಳು  ಸಾಬೀತಾದರೆ ಆಗ ಎಎಪಿ ನಡೆ ಹೇಗಿರಬಹುದು.. ?
ನ್ಯಾಯಾಲಯಕ್ಕೆ ಹೋದರೆ
ಅರವಿಂದ ಕೇಜ್ರಿವಾಲ್ ಮತ್ತು ಎಎಪಿ ಪ್ರಮುಖರ ಧರಣಿಯಿಂದ ದೆಹಲಿಯಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಲಾಗಿತ್ತು.  ರೈಲುಭವನದ ಸುತ್ತಮುತ್ತ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ಹೇರಲಾಗಿತ್ತು. ಇದರನ್ವಯ ಐದು ಜನಕ್ಕಿಂತ ಹೆಚ್ಚಿನ ಮಂದಿ ಒಂದೆಡೆ ಗುಂಪುಗೂಡುವಂತಿಲ್ಲ, ಪ್ರತಿಭಟನೆ ನಡೆಸುವಂತಿಲ್ಲ. ಆದರೆ ಕೇಜ್ರಿವಾಲಾ ಮತ್ತು ಸಂಗಡಿಗರು ಇದರ ಉಲ್ಲಂಘನೆ ಮಾಡಿದರು. ಇದಲ್ಲದೆ ಸಂವಿಧಾನದ ಆಶಯಗಳಿಗೆ ಭಂಗ ಉಂಟು ಮಾಡುವಂಥ ‘ಹೌದು, ನಾನು ಅರಾಜಕತವಾದಿ, ಯಾವ ಗಣರಾಜ್ಯೋತ್ಸವ, ಅದು ಕೆಲ ವಿಐಪಿಗಳಿಗಾಗಿ ನಡೆಯುವ ಪ್ರಹಸನ’ ಎಂದೆಲ್ಲ ಮಾತನಾಡಿದರು.
ನಾಳೆ ಇವೆಲ್ಲದರ ದಾಖಲಾತಿಗಳನ್ನು ಮುಂದಿಟ್ಟುಕೊಂಡು ಸಂವಿಧಾನದ ಆಶಯ ರಕ್ಷಿಸಬೇಕಾದ ಮುಖ್ಯಮಂತ್ರಿ ಕೇಜ್ರಿವಾಲ್ ಅವುಗಳಿಗೆ ಭಂಗ ಉಂಟು ಮಾಡಿದ್ದರೆ, ನಿಷೇಧಾಜ್ಞೆ ಇದ್ದರೂ ಉಲ್ಲಂಘಿಸಿದ್ದಾರೆ. ಆದರೂ ಪೊಲೀಸರು ಅವರ ಮೇಲೆ ಕ್ರಮ ಜರುಗಿಸದೆ ಪಕ್ಷಪಾತ ಮಾಡಿದ್ದಾರೆ ಎಂದು ಹೇಳಿ ಯಾರಾದರು ಕೋರ್ಟಿಗೆ ಹೋದರೆ ಏನಾಗಬಹುದು..?
ಈ ಎಲ್ಲ ಸಾಧ್ಯತೆಗಳೂ ಇವೆ. ಆಗ ಅರವಿಂದ ಕೇಜ್ರಿವಾಲ್ ಸ್ಥಿತಿ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತೆ ಆಗುತ್ತದೆ. ಮತ್ತೆ ಪ್ರಹಸನಗಳ ಮೇಲೆ ಪ್ರಹಸನ ನಡೆಸಿದರೂ ಜನ ನಂಬುವುದಿಲ್ಲ. ಅತಿಯಾದ ರಾಜಕೀಯ ಹೆಜ್ಜೆ ಇಡಲು ಹೋಗಿ ಇಂಥ ಪರಿಸ್ಥಿತಿಗಳ ನಿರ್ಮಾಣಕ್ಕೆ ಆಸ್ಪದ ನೀಡುವಂತ ಅವಶ್ಯಕತೆ ಕೇಜ್ರಿವಾಲ್ ಅವರಿಗಿತ್ತೆ… ?

No comments:

Post a Comment