• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಜನಹಿತ ಮರೆತ ಕೇಜ್ರಿವಾಲ್ ನಡೆ !

ದೆಹಲಿ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದ ಅರವಿಂದ ಕೇಜ್ರಿವಾಲ್ ಧರಣಿ ಕುಳಿತಿದ್ದಾರೆ. ಇದರಿಂದ ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗಿದೆ. ಕೆಲವೇ ಮಂದಿ ಪೊಲೀಸರ ಅಮಾನತಿಗಾಗಿ ಒತ್ತಾಯಿಸಿ ಓರ್ವ ಮುಖ್ಯಮಂತ್ರಿ ಪ್ರತಿಭಟನೆ ಹೆಸರಿನಲ್ಲಿ ನಡೆಸುತ್ತಿರುವ ಪ್ರಹಸನ ಅಚ್ಚರಿ ಮೂಡಿಸಿದೆ. ಕೇಜ್ರಿವಾಲರ ಈ ನಡೆಯ ಹಿಂದೆ ಪಳಗಿದ ರಾಜಕಾರಣಿ ನಡೆಯಿದೆ. ಆದರೆ ಜನಹಿತ ಮರೆತ ರಾಜಕಾರಣವೆಷ್ಟು ಸರಿ…?
ಬಹುಶಃ ದೆಹಲಿ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆಂದು ಸ್ವತಃ ಅರವಿಂದ ಕೇಜ್ರಿವಾಲರಿಗೂ ವಿಶ್ವಾಸ ಇರಲಿಲ್ಲ. ಇವರು ರಚಿಸಿದ ಆಮ್ ಆದ್ಮಿ ಪಾರ್ಟಿಯದು ಮೊದಲ ರಾಜಕೀಯ ಪ್ರಯತ್ನ. ಇದು ಕೇಜ್ರಿವಾಲ ಮತ್ತು ತಂಡ ನಡೆಸಿದ ರಾಜಕೀಯ ಪ್ರಯೋಗ. ಅಲ್ಲಿನ ಸ್ಥಳೀಯ ಜನತೆ, ಅಪರಾಧ ಪ್ರಕರಣಗಳ ಹೆಚ್ಚಳದಿಂದ ಎಷ್ಟರ ಮಟ್ಟಿಗೆ ರೋಸಿದರೆಂದರೆ ಇನ್ನೂ ಒಂದು ವರ್ಷವೂ ತುಂಬದ ಎಎಪಿ ಪಾರ್ಟಿಯ 28 ಮಂದಿಯನ್ನು ಶಾಸಕರನ್ನಾಗಿ ಮಾಡಿದರು.
ಇದು ಭಾರತೀಯ ರಾಜಕಾರಣದ ಸಂಪ್ರದಾಯಿಕ ಬದ್ಧ ವೈರಿಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಅರಗಿಸಿಕೊಳ್ಳಲಾಗದಂಥ ಬೆಳವಣಿಗೆ. ನಿಂತ ನೀರಿನಂತಾಗಿದ್ದ ರಾಜಕಾರಣಕ್ಕೆ ಎಎಪಿ ಗೆಲುವು ಅವಶ್ಯಕತೆ ಇತ್ತು. ಇದು ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸುವಂಥ ಬೆಳವಣಿಗೆಯೂ ಹೌದು.
ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ಸಮಾನಂತರ ಕಾಯ್ದುಕೊಳ್ಳುತ್ತೆವೆಂದ ಆಮ್ ಆದಿ ನಂತರ ನಿಲುವು ಬದಲಿಸಿ ಕಾಂಗ್ರೆಸ್ ನೆರವಿನೊಂದಿಗೆ ಸರ್ಕಾರ ರಚಿಸಿದಾಗ ಕೋಟ್ಯಾಂತರ ಕಣ್ಣುಗಳ ಆಶಾಭಾವ ಅತ್ತ. ಆಮ್ ಆದ್ಮಿ ಪಾರ್ಟಿ ಪವಾಡ ಮಾಡದಿದ್ದರೂ ದೆಹಲಿಯ ಜನತೆಗೆ ಅತ್ಯುತ್ತಮ ಸರ್ಕಾರ ನೀಡಬಲ್ಲದು ಎಂಬ ಭರವಸೆ ಮೂಡಿಸಿತು. ಇಷ್ಟು ಮಾತ್ರವೇ ಅಲ್ಲ, ಜನಪರ ಹೋರಾಟ ನಡೆಸುತ್ತಿರುವ ರಾಷ್ಟ್ರದ ಅನೇಕ ಸಂಘಟನೆಗಳಿಗೂ ಎಎಪಿ ರಾಜಕೀಯ ಪ್ರಯೋಗ ವಿಶ್ವಾಸ ಮೂಡಿಸಿತು. ಆದರೆ ಸರ್ಕಾರ ರಚಿಸಿ ಇನ್ನೂ ಒಂದು ತಿಂಗಳು ಪೂರ್ತಿಯಾಗಿಲ್ಲ. ಆಗಲೇ ಆಮ್ ಆದ್ಮಿ ಪಾರ್ಟಿ ಚುಕ್ಕಾಣಿ ಹಿಡಿದವರು ಇಡುತ್ತಿರುವ ಹೆಜ್ಜೆ ನಿರಾಶೆ ಮೂಡಿಸತೊಡಗಿದೆ.
ಸರಳ ಬೇಡಿಕೆ ಆದರೆ ಅಗಾಧ ಯೋಜನೆ
ಮೇಲ್ನೋಟಕ್ಕೆ ಅರವಿಂದ ಕೇಜ್ರಿವಾಲ್ ಅವರು ಕೇಂದ್ರದ ಮುಂದಿಟ್ಟ ಬೇಡಿಕೆ ಸರಳ. ರಾಜ್ಯ ಸಚಿವರ ಸೂಚನೆ ಪಾಲಿಸದೆ ಕರ್ತವ್ಯ ಚ್ಯತಿ ಮಾಡಿದ  ನಾಲ್ವರು ಪೊಲೀಸರನ್ನು ಅಮಾನತುಗೊಳಿಸಬೇಕು. ರಾಜ್ಯ ಸರ್ಕಾರದ ಆಧೀನಕ್ಕೆ ದೆಹಲಿ ಪೊಲೀಸ್ ಇಲಾಖೆ ಸೇರ್ಪಡೆಗೊಳಿಸಬೇಕು. ಆದರೆ ಮೊದಲಿನ ಒತ್ತಾಯವನ್ನು ಈಡೇರಿಸಬಹುದಾದರೂ ಎರಡನೇ ಬೇಡಿಕೆಯನ್ನು ಅಷ್ಟು ಸುಲಭವಾಗಿ ನೆರವೇರಿಸಲು ಸಾಧ್ಯವಿಲ್ಲ. ಐಎಎಸ್ ಪಾಸ್ ಮಾಡಿ ನಾಗರೀಕ ಸೇವೆಯ ಉನ್ನತ ಅಧಿಕಾರಿಯಾಗಬೇಕೆಂಬ ಕನಸು ಹೊತ್ತ ಕೇಜ್ರಿವಾಲ್ ಐಎಎಸ್ ಶ್ರೇಣಿ ಪಡೆಯಲು ವಿಫಲರಾಗಿ ಐ.ಆರ್.ಎಸ್. ಅಂದರೆ ಭಾರತೀಯ ಕಂದಾಯ ಸೇವೆಗೆ ಆಯ್ಕೆಯಾದವರು. 1995ರಿಂದ 2006ರಲ್ಲಿ ಉದ್ಯೋಗಕ್ಕೆ ರಾಜಿನಾಮೆ ನೀಡುವವರೆಗೂ ವಿವಿಧ ಹಂತಗಳ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಸಹಜವಾಗಿಯೇ ಇವರಿಗೆ ದೆಹಲಿ ಆಡಳಿತಾತ್ಮಕ ಸೂಕ್ಷ್ಮಗಳು ಅರ್ಥವಾಗಿವೆ.

ಕಾನೂನು-ಸುವ್ಯವಸ್ಥೆ ಅಧಿಕಾರ
ರಾಜ್ಯಗಳ ಕಾನೂನು-ಸುವ್ಯವಸ್ಥೆ ಕಾಪಾಡಬೇಕಾದ ಹೊಣೆ ಆಯಾ ರಾಜ್ಯ ಸರ್ಕಾರಗಳದ್ದು. ಇದರಿಂದಲೇ ಸ್ಥಳೀಯ ಪೊಲೀಸ್ ಇಲಾಖೆ, ರಾಜ್ಯ ಸರ್ಕಾರದ ನೇರ ನಿಯಂತ್ರಣದಲ್ಲಿರುತ್ತದೆ. ಒಂದು ವೇಳೆ ರಾಜ್ಯ ಸರ್ಕಾರ ತನ್ನ ಹೊಣೆಗಾರಿಕೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮನದಟ್ಟಾದರೆ ಮಾತ್ರ ರಾಷ್ಟ್ರಪತಿ ಆಡಳಿತ ಹೇರಲ್ಪಡುತ್ತದೆ. ಆಗಲೂ ರಾಜ್ಯಪಾಲರು ಸ್ಥಳೀಯ ಪೊಲೀಸ್ ಇಲಾಖೆ ಮುಖಾಂತರವೇ ಕಾನೂನು-ಸುವ್ಯವಸ್ಥೆ ಸರಿಪಡಿಸಲು ಮುಂದಾಗುತ್ತಾರೆ. ಈ ಸಂದರ್ಭದಲ್ಲಿ ಅನಿವಾರ್ಯವಾದರೆ ಮಾತ್ರ ಕೇಂದ್ರದ ಪಡೆಗಳ ನೆರವು ಪಡೆದುಕೊಳ್ಳಬಹುದು.
ದೆಹಲಿಯದು ಭಿನ್ನ
ಮೊದಲು ದೆಹಲಿ (ನವ ಮತ್ತು ಹಳೆ ದೆಹಲಿ ಸೇರಿ)ಯ ಸ್ಥಳೀಯ ಆಡಳಿತದ ಜವಾಬ್ದಾರಿಯನ್ನು ಅಲ್ಲಿನ ಪಾಲಿಕೆಯೇ ನಿರ್ವಹಿಸುತ್ತಿತ್ತು. ನಗರದ ವ್ಯಾಪ್ತಿ ಬೆಳೆದಾಗ ರಾಜ್ಯದ ಸ್ಥಾನಮಾನ ನೀಡಲಾಯಿತು. ಕಾನೂನು ಸುವ್ಯವಸ್ಥೆ ಜವಾಬ್ದಾರಿ ಹೊರತುಪಡಿಸಿ ಉಳಿದ ಅವಶ್ಯಕ ಆಡಳಿತಾತ್ಮಕ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ.
ಸೂಕ್ಷ್ಮ ಪರಿಸ್ಥಿತಿ
ಭೌಗೋಳಿಕ-ರಕ್ಷಣಾತ್ಮಕ-ರಾಜಕೀಯವಾಗಿ ದೆಹಲಿ ಆಯಕಟ್ಟಿನ ಪ್ರದೇಶ. ಇಲ್ಲಿ ಸಂಸತ್ತಿದೆ, ಕೇಂದ್ರ ಸರ್ಕಾರದ ವಿವಿಧ ಕಾರ್ಯಾಲಯಗಳಿವೆ, ರಾಷ್ಟ್ರಪತಿ ಭವನವಿದೆ. ರಾಷ್ಟ್ರದ ರಕ್ಷಣೆ ಜವಾಬ್ದಾರಿ ಹೊತ್ತ ಸೇನೆಗಳ ಪ್ರಮುಖ ಕಾರ್ಯಾಲಯವಿದೆ. ಇಂಥ ಪ್ರದೇಶದಲ್ಲಿ ಸ್ಥಳೀಯ ಪೊಲೀಸ್ ವ್ಯವಸ್ಥೆ ಕೇಂದ್ರದ ನೇರ ಉಸ್ತುವಾರಿಯಲ್ಲಿ ಇರುವುದು ಸೂಕ್ತವೆಂದೆ ಭಾವಿಸಲಾಗಿದೆ. ಇದು ರಾಷ್ಟ್ರದ ದೃಷ್ಟಿಯಿಂದ ಕ್ಷೇಮವೂ ಹೌದು.
ಗೊತ್ತಿದ್ದೂ ರಾಜಕೀಯ ದಾಳ
ಇವೆಲ್ಲ ಸೂಕ್ಷ್ಮಗಳು ಕೇಂದ್ರ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡಿರುವ ಕೇಜ್ರಿವಾಲ್ ಅವರಿಗೆ ತಿಳಿದಿದೆ. ತಿಳಿದು ತಿಳಿದೂ ಸುಲಭದಲ್ಲಿ ಈಡೇರಿಸಲು ಸಾಧ್ಯವಿಲ್ಲದ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿದ್ದಾರೆ. ಇವರ ಪ್ರಥಮ ಒತ್ತಾಯವಾದ ಪೊಲೀಸ್ ಸಿಬ್ಬಂದಿ ಅಮಾನತು ಕೂಡ ಅಷ್ಟು ಸರಳವಾಗಿ ಈಡೇರುವಂಥದ್ದಲ್ಲ. ನಿರ್ಭಯ ಪ್ರಕರಣದ ನಂತರ ದೆಹಲಿ ಪೊಲೀಸರ ಮೇಲೆ ಒತ್ತಡ ಹೆಚ್ಚಿದೆ. ಅಲ್ಲಿನ ಎಲ್ಲ ಪೊಲೀಸರು ಭ್ರಷ್ಟರು, ಸೋಮಾರಿಗರು ಎಂದು ಹೇಳಲು ಸಾಧ್ಯವಿಲ್ಲ. ಕಿರಣ್ ಬೇಡಿಯಂಥ ದಕ್ಷ ಪೊಲೀಸ್ ಅಧಿಕಾರಿ ಕೆಲಸ ಮಾಡಿದ್ದು ದೆಹಲಿಯಲ್ಲಿಯೇ ಎಂಬುದನ್ನು ಮರೆಯುವಂತಿಲ್ಲ. ಇಂಥ ಅನೇಕ ಅಧಿಕಾರಿಗಳು ಅಲ್ಲಿದ್ದಾರೆ.
ಕೇಜ್ರಿವಾಲರ ಒತ್ತಾಯಕ್ಕೆ ಮಣಿದು ಯಾವುದೇ ಪ್ರಾಥಮಿಕ ವಿಚಾರಣೆ ಪೂರ್ಣಗೊಳಿಸದೆ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಿದರೆ ಇಂಥ ಅಧಿಕಾರಿಗಳ ಸ್ದೈರ್ಯ ಉಡುಗುತ್ತದೆ. ಇದು ಕೂಡ ಕೇಜ್ರಿವಾಲರಿಗೆ ತಿಳಿದ ಸಂಗತಿ. ಆದರೂ ಅವರು ತಮ್ಮ ಪಟ್ಟು ಸಡಿಲಿಸಲು ನಿರ್ಧಾರವಿಲ್ಲ.
ಇದಕ್ಕೆ ಕಾರಣ ಸದ್ಯದಲ್ಲಿಯೇ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಲೋಕಸಭಾ ಸ್ಥಾನಗಳನ್ನು ಗೆಲ್ಲುವುದು ಮತ್ತು ಇದೇ ಸಂದರ್ಭದಲ್ಲಿ ದೆಹಲಿ ಅಸೆಂಬ್ಲಿ ಚುನಾವಣೆಯೂ ನಡೆಯುವಂತೆ ನೋಡಿಕೊಂಡರೆ ಸ್ವತಂತ್ರವಾಗಿ ಸರ್ಕಾರ ರಚಿಸುವಷ್ಟು ಬಹುಮತ ಪಡೆಯಬಹುದು ಎಂಬ ಲೆಕ್ಕಾಚಾರ !
ಕಾಂಗ್ರೆಸ್ ತಾನಾಗಿ ಬೆಂಬಲ ಹಿಂತೆಗೆಯಲಿ
ಇದು ಕೇಜ್ರಿವಾಲ ಆಲೋಚನೆ. ಲೋಕಪಾಲ್ ಮಸೂದೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದ ದಿನಗಳಿಂದಲೂ ಕೇಜ್ರಿವಾಲ ನಡೆ ಗಮನಿಸಿದರೆ ಪಕ್ಕಾ ಕಾಂಗ್ರೆಸ್ ವಿರೋಧಿ ಎಂಬುದು ತಿಳಿಯುತ್ತದೆ. ಆದರೂ ಸರ್ಕಾರ ರಚಿಸಲು ಕಾಂಗ್ರೆಸ್ ಬೆಂಬಲ ಪಡೆದುಕೊಂಡಿದ್ದು ಈ ರಾಜಕೀಯ ದೂರದೃಷ್ಟಿಯ ಕಾರಣದಿಂದಲೆ. ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಅಲ್ಲಿ ಎಎಪಿ ಪ್ರಾಬಲ್ಯ ಇರುತ್ತಿರಲಿಲ್ಲ. ಬೆಂಬಲ ಹಿಂತೆಗೆದುಕೊಂಡರೂ ಅಪಖ್ಯಾತಿಗೆ ಒಳಗಾಗಬೇಕಿತ್ತು.
ನಡೆಯ ಅಂಗವಾಗಿ ಗಂಭೀರ ಆರೋಪ
ಈಗಲೂ ಅಪಖ್ಯಾತಿಗೆ ಒಳಗಾಗಲು ಅರವಿಂದ ಕೇಜ್ರಿವಾಲ್ ಸಿದ್ಧವಿಲ್ಲ. ಆದ್ದರಿಂದಲೇ ಕಾಂಗ್ರೆಸ್ ತಾನಾಗಿ ಬೆಂಬಲ ಹಿಂಪಡೆಯಲಿ ಎಂದೇ ಅನಗತ್ಯವಾದ, ವಿವಾದಾದತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಸಮಂಜಸ ಒತ್ತಾಯಗಳನ್ನು ಮುಂದಿಡುತ್ತಿದ್ದಾರೆ. ಒತ್ತಡ ಹೇರುವ ಸಲುವಾಗಿಯೇ ಕೇಂದ್ರ ಗೃಹಸಚಿವ ಶಿಂಧೆ ಅವರಿಗೂ ದೆಹಲಿ ಪೊಲೀಸರಿಂದ ಭ್ರಷ್ಟಾಚಾರದ ಹಣ ಸಂದಾಯವಾಗುತ್ತಿದೆ ಎಂಬ ಹಾಸ್ಯಾಸ್ಪದ ಆರೋಪ ಮಾಡಿರುವುದು. ಇದರಿಂದ ಮುಜುಗರಕ್ಕೊಳಗಾಗುವ ಕಾಂಗ್ರೆಸ್ ತಂತಾನೆ ಬೆಂಬಲ ಹಿಂಪಡೆಯುತ್ತದೆ. ಆಗ ಬೆಂಬಲ ಹಿಂಪಡೆತದ ಖ್ಯಾತಿ ಅದರದು, ಜನತೆಯ ಸಹಾನುಭೂತಿ ತನ್ನದು ಎಂಬುದು ಕೇಜ್ರಿವಾಲಾ ಆಲೋಚನೆ.
ಸಿದ್ದತೆ ನಡೆಸಲು ಸಮಯ
2014ರ ಮೇ 31ಕ್ಕೆ 15ನೇ ಲೋಕಸಭಾ ಅವಧಿ ಮುಕ್ತಾಯವಾಗುತ್ತದೆ. ಇದಕ್ಕೆ ಇನ್ನೂ ಸುಮಾರು ಐದು ತಿಂಗಳ ಅವಧಿಯಿದೆ. ಚುನಾವಣೆ ಘೋಷಣೆಯಾಗಿ ಅದರ ಪ್ರಕ್ರಿಯೆಗಳೆಲ್ಲ ಮುಗಿಯಲು ಇನ್ನೂ ಒಂದಿಷ್ಟು ಸಮಯ ಅವಶ್ಯಕ. ಇದೇ ಸಂದರ್ಭದಲ್ಲಿ ದೆಹಲಿ ಅಸೆಂಬ್ಲಿ ಚುನಾವಣೆ ನಡೆಸುವುದು ಅನಿವಾರ್ಯ. ಇಷ್ಟರಲ್ಲಿ ಮತ್ತೆ ಮಿಂಚಿನಂತೆ ಪ್ರಚಾರ ನಡೆಸಿ ಹೆಚ್ಚಿನ ಅಸೆಂಬ್ಲಿ ಮತ್ತು ಲೋಕಸಭಾ ಸ್ಥಾನಗಳನ್ನು ಗೆಲ್ಲಬಹುದು ಎಂಬ ರಾಜಕೀಯ ಲೆಕ್ಕಾಚಾರ.
ಸ್ಥಾನಗಳ ಚಿತ್ರಣ
ದೆಹಲಿ ಅಸೆಂಬ್ಲಿಯಲ್ಲಿ ಒಟ್ಟು 70 ಸ್ಥಾನಗಳಿವೆ. 7 ಲೋಕಸಭಾ ಸ್ಥಾನಗಳಿವೆ. 70ರಲ್ಲಿ ಎಎಪಿ ಪಡೆದಿರುವುದು 28, ಸರ್ಕಾರ ರಚಿಸಲು 36 ಶಾಸಕರ ಅಗತ್ಯವಿದೆ. ಮುಂಚಿಗಿಂತಲೂ ಹೆಚ್ಚಿನ ತಯಾರಿಯೊಂದಿಗೆ ಹೋದರೆ 10ರಿಂದ 15 ಸ್ಥಾನಗಳನ್ನು ಗೆಲ್ಲಬಹುದು. ಕನಿಷ್ಠ 4ರಿಂದ 5 ಲೋಕಸಭಾ ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳಬಹುದು ಎಂಬುದು ಕೇಜ್ರಿವಾಲಾ ಲೆಕ್ಕಚಾರ. ಇವೆಲ್ಲದರ ಜೊತೆಗೆ ಸಹಾನುಭೂತಿ ಅಲೆಯಲ್ಲಿ ಇತರ ಕೆಲವು ರಾಜ್ಯಗಳಲ್ಲಿ ಗಣನೀಯ ಲೋಕಸಭಾ ಸ್ಥಾನಗಳ ಖಾತೆ ತೆರೆಯಬಹುದು ಎಂಬ ರಾಜಕೀಯ ಯೋಚನೆ.
ಭಿನ್ನವಲ್ಲ
ಆದರೆ ಇಂಥ ನಡೆ ಇಡಲು ಉತ್ಸುಕರಾಗಿರುವ ಅರವಿಂದ ಕೇಜ್ರಿವಾಲಾ ಇತರ ಸಂಪ್ರದಾಯಿಕ ರಾಜಕಾರಣಿಗಳಿಗಿಂತ ತಾನು ಭಿನ್ನ ಅಲ್ಲ ಎಂಬುದನ್ನು ತೋರಿಸುತ್ತಿದ್ದಾರೆ. ಈ ಮೂಲಕ ಎಎಪಿ ಮೇಲೆ ಭರವಸೆ ಇಟ್ಟಿದ್ದ ಜನತೆಯಲ್ಲಿ ಮುಖ್ಯವಾಗಿ ಯುವಕರಲ್ಲಿ ನಿರಾಶೆ ಮೂಡಿಸಲು ಸಜ್ಜಾಗಿದ್ದಾರೆ. ಇಂಥ ನಡೆ ಇಟ್ಟಿದ್ದೆ ಆದರೆ ಅದು ಪ್ರಮುಖವಾಗಿ ಆಶಾಕಂಗಳಿಂದ ಎಎಪಿಯತ್ತ ನೋಡುತ್ತಿರುವ ದೆಹಲಿಗರಿಗೆ ಮಾಡುವ ದ್ರೋಹ.

1 comment:

 1. ಪ್ರತಿಭಟನೆ ಪ್ರಜಾಪ್ರಭುತ್ವದ ಪ್ರಬಲ ಅಸ್ತ್ರ. ಗಾಂಧೀಜಿ, ಮಂಡೇಲಾ, ಮಾಟರ್ಿನ್ ಲೂಥರ್ ಕಿಂಗ್ ಇವರೆಲ್ಲಾ ವ್ಯವಸ್ಥೆ ವಿರುದ್ಧ ಪ್ರತಿಭಟನೆಯನ್ನು ವ್ಯಕ್ತಪಡಿಸಿಯೇ ಮಹಾನ್ ವ್ಯಕ್ತಿಗಳಾಗಿ ರೂಪುಗೊಂಡಿದ್ದು. ಆ ಮೂಲಕವೇ ಅವರೆಲ್ಲಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು. ಅರವಿಂದ್ ಕೇಜ್ರಿವಾಲ್ ಕತ್ತಿ ಝಳಪಿಸಿಲ್ಲ. ಬಾಂಬ್ ಹಾಕುತ್ತೇನೆಂದು ಬೆದರಿಸಿಲ್ಲ. ದೆಹಲಿ ಜನರ ಭದ್ರತೆಗಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಸರಿಪಡಿಸಲು ಕೇಂದ್ರದ ಪ್ರಭುಗಳ ಗಮನ ಸೆಳೆಯಲು ಯತ್ನಿಸಿದ್ದಾರೆ. ನಿರ್ಭಯಳ ಪರವಾಗಿ ಜನ ಬೀದಿಗಿಳಿದು ಪ್ರತಿಭಟಿಸದಿದ್ದರೆ ಹಿಟ್ ಅಂಡ್ ರನ್ ಕೇಸ್ ರೀತಿ ಆ ಪ್ರಕರಣ ಸಾವಿರಾರು ಪೊಲೀಸ್ ಇಲಾಖೆಯ ಎಫ್ಐಆರ್ ಕಡತಗಳಲ್ಲಿ ಕಳೆದುಹೋಗುತ್ತಿತ್ತೇನೋ.....ಪ್ರತಿಭಟನೆ ನ್ಯಾಯ ದಕ್ಕಿಸಿಕೊಟ್ಟಿತು. ನಾನು ಆ ಪ್ರತಿಭಟನೆಯಲ್ಲಿ ಇರಬೇಕಾಗಿತ್ತೆಂದು ಆಗಿನ ಸುಪ್ರೀಂಕೋಟರ್್ ನ್ಯಾಯಾಧೀಶರು ಹೇಳಿಕೆ ನೀಡಿದ್ದರು. ಮೋದಿ ಪ್ರತಿಭಟಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಬೀದಿಯಲ್ಲಿ ಕುಳಿತುಕೊಳ್ಳಲು ಅವರ ಪಕ್ಷ ಬಿಡುವುದಿಲ್ಲ. ಕೇಂದ್ರ ಸಕರ್ಾರ ಸೃಷ್ಟಿಸಿದ ಹಲವಾರು ಹಗರಣಗಳಲ್ಲಿ ಯಾರನ್ನಾದರೂ ಹೊಣೆಗಾರರನ್ನಾಗಿ ಮಾಡುವಂತೆ ರಾಹುಲ್ ಗಾಂಧಿ ಪ್ರತಿಭಟಿಸಿದ್ದರೆ ಆತ ಜನ ನಾಯಕನಾಗುತ್ತಿದ್ದ. ಪರಂಪರಗತವಾಗಿ ಬಂದ ರಾಜಕೀಯ ಶಕ್ತಿಯನ್ನೇ ಬಳಸಿ ಆತ ಏನೂ ಮಾಡಲಾಗದ ಹೈಬ್ರಿಡ್ ನಾಯಕನಂತೆ ವತರ್ಿಸುತ್ತಿದ್ದಾನೆ. ಇಷ್ಟು ವರ್ಷ ದೇಶವಾಳಿದ ಈ ಕಾಂಗ್ರೆಸ್ ರಾಜಕುಮಾರನಿಗೆ ತನ್ನ ನಾಯಕತ್ವ ಸಾಬೀತುಪಡಿಸಲು ಕಾಂಗ್ರೆಸ್ ಪಕ್ಷ ಇನ್ನೆಷ್ಟು ಅವಕಾಶಗಳನ್ನು ನೀಡಬೇಕು ಹೇಳಿ. ನಾಯಕತ್ವ ಎಂದರೆ ಬೇರೆಯವರು ಹೇಳಿದಂತೆ ಮಾಡುವುದಲ್ಲ. ಸ್ವಂತ ಬುದ್ಧಿಯಿಂದ ವ್ಯವಸ್ಥೆ ಸರಿಪಡಿಸಲು ಪುಟಿದೇಳುವುದು. ಸಂಘಟಿತರಾಗಿ ಕೆಲಸ ಮಾಡುವುದು. ಇವೆಲ್ಲವನ್ನು ಮೈಗೂಡಿಕೊಂಡಿದ್ದಾರೆ ಕೇಜ್ರಿವಾಲಾ. ಕಾನೂನು, ಸುವ್ಯವಸ್ಥೆ ಮತ್ತು ಭದ್ರತಾ ವೈಫಲ್ಯಗಳನ್ನು ಸರಿಪಡಿಸುವ ಸಲುವಾಗಿಯೇ ಆತ ಸಿಡಿದೆದ್ದಿದ್ದಾನೆ. ಮುಖ್ಯಮಂತ್ರಿ ಪದವಿಯನ್ನು ಜನ ಕೊಟ್ಟಿದ್ದು. ಅದು ಪರಂತರಾಗತ ಆಸ್ತಿಯಲ್ಲ ಎಂದು ಆತನಿಗೆ ತಿಳಿದಿದೆ. ಸ್ವರಾಜ್ಯದ ಕಲ್ಪನೆ ಅವನಲ್ಲಿ ಹಾಸುಹೊಕ್ಕಾಗಿದೆ. ದೆಹಲಿ ಜನರಿಗೆ ತನ್ನ ಅಲ್ಪಮತದ ಸಕರ್ಾರ ಇರುವುದರೊಳಗೆ ಮೈಲುಗಲ್ಲುಗಳೆಂದು ಗುರುತಿಸಬಹುದಾದ ಕೆಲಸ ಮಾಡಬೇಕೆಂದು ಗೊತ್ತಿದೆ. ಆದ್ದರಿಂದಲೇ ಆತ ಬೀದಿಗೆ ಬಿದ್ದು ಪ್ರತಿಭಟಿಸಿದ್ದಾನೆ. ಕಾನೂನು ವ್ಯವಸ್ಥೆ ಸರಿಪಡಿಸಲು ನಾವು ಕಮಿಟೆಡ್ ಆಗಿದ್ದೇವೆಂದು ಸಾಬೀತು ಮಾಡಿದ್ದಾನೆ. ಕಾನೂನು ಮಂತ್ರಿ ಸೋಮನಾಥ ಬಾತರ್ಿ, ಮಾಡಿದ ಕೆಲಸದ ಟೆಕ್ನಿಕಾಲೀಟಿಸ್ನ ನ್ಯೂನತೆಗಳು ಏನೇ ಇರಬಹುದು ಆತನ ಉದ್ದೇಶ ಮೆಚ್ಚುವಂಥದ್ದು. ನಡುರಾತ್ರಿಯಲ್ಲಿ ಜನರ ಒಳಿತಿಗಾಗಿ ಕೆಲಸ ಮಾಡಲು ಮಂತ್ರಿಯೋರ್ವ ಮುಂದಾಗಿದ್ದನ್ನು ನಾವೆಲ್ಲ ಸ್ವಾಗತಿಸಬೇಕು. ಇಷ್ಟು ದಿನ ಕಾಂಗ್ರೆಸ್, ಬಿಜೆಪಿಯ ಹುಲಿಗಳು ಮಾಡಲಾಗಿದ್ದನ್ನು ಕೇಜ್ರಿ ಮಾಡಲು ಹೊರಟಿದ್ದಾನೆ. ಇಡೀ ಸಚಿವ ಸಂಪುಟ ಬೀದಿಯಲ್ಲಿ ಕುಳಿತು ಪ್ರತಿಭಟಿಸಿದ ಗಂಭೀರತೆಯನ್ನು ಅರ್ಧಮಾಡಿಕೊಳ್ಳದಷ್ಟು ಕೇಂದ್ರ ಸಕರ್ಾರ ಜಾಣಕಿವುಡು ಪ್ರದಶರ್ಿಸಿದೆ. ಮೂರು ಮಂದಿ ಅಧಿಕಾರಿಗಳನ್ನು ಅಮಾನತುಬೇಡ, ವಗರ್ಾವಣೆ ಮಾಡಿದ್ದರೂ ಇಂಥಹ ದೊಡ್ಡ ರಾದ್ದಾಂತ ಸೃಷ್ಟಿಯಾಗುತ್ತಿರಲಿಲ್ಲ. ಮುಖ್ಯಮಂತ್ರಿ ಹೇಳಿಕೆ ನೀಡಿ ನಾಲ್ಕು ದಿನದ ನಂತರ ಪ್ರತಿಭಟನೆಗೆ ಇಳಿದಿದ್ದಾರೆ. ಎಚ್ಚರಿಕೆ ಕೊಟ್ಟು ಪ್ರತಿಭಟನೆಗೆ ಇಳಿದ ಕೇಜ್ರಿವಾಲಾ ಟೀಂನ್ನು ಎಲ್ಲಾ ಟೀಕಿಸುವವರೇ ಆಗಿದ್ದಾರೆ. ಆದರೆ ಮೂವರು ಅಧಿಕಾರಿಗಳನ್ನು ಕನಿಷ್ಠ ವಗರ್ಾವಣೆ ಮಾಡದೇ ಮೀನಮೇಷ ಎಣಿಸಿ ಕಾನೂನು ಮತ್ತು ಸುವ್ಯವಸ್ಥೆ ಬಿಕ್ಕಟ್ಟು ಸೃಷ್ಟಿಸಿದ ಕೇಂದ್ರ ಸಕರ್ಾರದ ಗೃಹ ಮಂತ್ರಿ ವರ್ತನೆಯನ್ನು ಯಾರೂ ಪ್ರಶ್ನಿಸುತ್ತಿಲ್ಲ. ಇದು ಟೈಮ್ಸ್ ನೌನಲ್ಲಿ ಕೂಗಾಡುವವರಿಗೂ, ಕಿರಣ್ಬೇಡಿಗೂ ತಿಳಿಯುತ್ತಿಲ್ಲ. ದೇವೇಗೌಡರ ಪ್ರತಿಭಟನೆ ಅತಿರೇಕವಾಗಿರಲಿಲ್ಲ. ಸಕರ್ಾರಕ್ಕೆ ಮನವಿ ಸಲ್ಲಿಸಿ, ಹೇಳಿಕೆ ನೀಡಿ ಸಾಕಾಗಿ ಕಡೆಗೆ ಕಡೆಯ ಅಸ್ತ್ರವೆಂಬಂತೆ ಅವರು ಅನುಗ್ರಹ ಮುಂದೆ ಪ್ರತಿಭಟನೆಗೆ ಮುಂದಾಗಿದ್ದರು. ಮಾಜಿ ಪ್ರಧಾನಿಯ ಪ್ರತಿಭಟನೆಯ ಗಂಭೀರತೆಯನ್ನು ಅರಿತು ಸೂಕ್ಷಮತಿಯಾಗಿದ್ದ ಮುಖ್ಯಮಂತ್ರಿ ಕೃಷ್ಣ, ಆಗಿನ ಹಾಸನದ ಎಸ್ಪಿಯನ್ನು ವಗರ್ಾವಣೆ ಮಾಡಿದ್ದರು. ಇಲ್ಲಿಯೂ ಅಷ್ಟೆ, ಸ್ವತ: ಮುಖ್ಯಮಂತ್ರಿಯೇ ಪ್ರತಿಭಟನೆಗೆ ಇಳಿದಾಗ ಅದರ ಮಹತ್ವವನ್ನು ಕೇಂದ್ರವೂ ಅರ್ಥ ಮಾಡಿಕೊಳ್ಳಲಿಲ್ಲ. ಮಾಧ್ಯಮದವರೂ ಅರ್ಥಮಾಡಿಕೊಳ್ಳಲಿಲ್ಲ. ಕನಿಷ್ಠ ಕೇಜ್ರಿವಾಲನ ಹೇಳಿಕೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ. ಆತ ಹೇಳಿದ್ದು ಜನರ ಒಳಿಗಾಗಿ ನಾನು ಹೋರಾಡುವಾಗ ನನ್ನನ್ನು ಅರಾಜಕತವಾದಿ ಎಂದು ಕರೆದರೆ ಅಥವಾ ಜರಿದರೆ ನಾನು ಅರಜಕತಾವಾದಿ ಎಂದು ಕರೆಸಿಕೊಳ್ಳಲು ಸಿದ್ಧ ಎಂದ. ಆದರೆ ಮಾಧ್ಯಮ ತಪ್ಪು ಅರ್ಥ ಮಾಡಿಕೊಂಡು ಆತನನ್ನು ಅರಾಜಕತಾವಾದಿ ಎಂದು ಹೇಳಿತು. ಒಬ್ಬರ ರಾಜಕೀಯ ಏಳ್ಗೆಯನ್ನು ಸಹಿಸದಿದ್ದರೆ ಹೀಗೆಲ್ಲಾ ಆಗುವುದು ಸಹಜ.

  ReplyDelete