• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಬಹುಭಾವ ಲಹರಿ

'ಚಂದ್ರ ನೀರ ಹೂ' ಇದು ರಾಜೇಂದ್ರ ಪ್ರಸಾದ್ ಅವರ ಕವನ ಸಂಕಲನ. ಇಲ್ಲಿ ಇಂಥದ್ದೆ ಸ್ಥಾಯಿಭಾವ ಇದೆಯೆಂದು ಹೇಳು ಸಾಧ್ಯವಿಲ್ಲ. ಪ್ರೇಮ, ಕಾಮ, ವ್ಯಾತ್ಸಲ್ಯ, ಕ್ರಾಂತಿ ಎಲ್ಲವೂ ಅಡಕವಾಗಿವೆ. ಆದ್ದರಿಂದಲೇ ಇದು ಬಹುಭಾವ ಲಹರಿ. ಕವಿ ಇಲ್ಲಿ ಭಾವದೋಕುಳಿ ಆಡಲು ಹೊರಟಿದ್ದಾರೆ... ಅವರು ಹೊರಟ ಭಾವದೆಜ್ಜೆಯ ಬಗ್ಗೆಗಿನ ಪರಿಚಯ ಇಲ್ಲಿದೆ.

ಆರಂಭದಲ್ಲಿಯೇ ಪ್ರೇಮಯಾಚನೆ, ಕಾಮದ ಸೊಗಡು ಇದೆ. 'ಮತ್ತೊಂದು ಮಳೆಗಾಲ' ಕವನದಲ್ಲಿ ಕಾಮದ ಕಡಲು ಆರ್ಭಟಿಸುತ್ತದೆ. ಅದನ್ನು ಅವರು ಹೇಳುವ ಪರಿ...

" ಬೀಸುವ ಮುಂಗಾರ ಮಳೆಗಾಳಿಗೆ
ಸಿಕ್ಕ ಈ ದೇಹದಲ್ಲಿ ದಢಕ್ಕನೆ
ನಿನ್ನ ಬೆಚ್ಚನೆಯ ನೆನಪು
ಅಷ್ಟೆ, ನಿಂತಲ್ಲೇ ಸ್ವಯಂ ಸಂಭೋಗ"

 ಇಲ್ಲಿ ಕವಿಯ ಪ್ರೇಮಕ್ಕೆ ಗೆಳತಿಯ ಒಪ್ಪಿಗೆ ಇನ್ನೂ ದೊರಕಿಲ್ಲ. ಅದನ್ನು ಹೇಳುವ ಪರಿ ಸೊಗಸು. " ನನ್ನ ಪ್ರೀತಿಯ ಪ್ರಸ್ತಾಪಕ್ಕೆ ನಿನ್ನೊಲವಿನ ಮೊಹರಾಗಿಲ್ಲ. ಆದರೂ ಕವಿಗೆ ಸದಾ ಅವಳದೇ ಕನವರಿಕೆ.. ಇದರ ಪರಿಣಾಮವೇ ಆಕೆಯ ಬೆಚ್ಚನೆಯ ನೆನಪು, ಜೊತೆಗೆ ನಿಂತಲ್ಲೆ ಸ್ವಯಂ ಸಂಭೋಗ" ಇದನ್ನು ಹೇಳಿಕೊಳ್ಳಲು ಕವಿಗೆ ಮುಜುಗರವಾಗಿಲ್ಲ. ಬದಲು ಆಕೆಯ ನೆನಪಿನ ಪರಿಣಾಮವೇನು ಎಂಬುದನ್ನು ಹೇಳಿದ್ದಾರೆ. ಈ ಸಾಲುಗಳನ್ನು ಓದುತ್ತಿದಂತೆ ಓದುಗರ ಮುಖದಲ್ಲಿಯೂ ಮಂದಹಾಸದ ಲಾಸ್ಯ :-)

ಶಿಶಿರದ ಮಳೆ, ಕಾಮಮೋಕ್ಷದ ಕವನಗಳು ಪ್ರೇಮದ ಸೊಬಗು ತುಂಬಿಕೊಂಡಿವೆ. ಇವುಗಳನ್ನು ಹೇಳುವ ರೀತಿಯಲ್ಲಿ ಹಸಿಹಸಿಕಾಮದ ಘಾಟಿಲ್ಲ. ಆಗಷ್ಟೆ ಅರಳಿದ ಹೂಗಳ ಘಮಲಿದೆ.ಧಾಟಿಯಲ್ಲಿ ನಯವಿದೆ.
"ಹಗಲು ಹಕ್ಕಿ ಹಾಡುವ ಹೊತ್ತಿಗೆ
ಅವಳು ಕೊಚ್ಚಿಹೋದ ಭತ್ತದ ಗದ್ದೆ,
ನಾನು ನೆರೆನಿಂತ ಹೆಬ್ಬಳ್ಳ

ಎಂದು ಹೇಳುವ ಮೂಲಕ ಗಂಡುಹೆಣ್ಣಿನ ಮಿಲನದ ಸೊಬಗು, ಸಂತೋಷ, ಸಂಚಲನದ ಬಗ್ಗೆ ಹೇಳುತ್ತಾರೆ. ಇಲ್ಲಿ ಅವರು ಹೇಳುವ ಧಾಟಿಯಲ್ಲಿಯೇ ಕಾವ್ಯದ ಸೊಗಸು ಅಡಕವಾಗಿರುವುದನ್ನು ಗಮನಿಸಬಹುದು.

ಪ್ರೇಮದ ಸಂತಸದ ಸಮಯ ಸರಿಯುವುದು ಕವಿಗೆ ಬೇಕಿಲ್ಲ. ಆದ್ದರಿಂದ ಈ ಗಳಿಗೆಗಳು ಚಲಿಸದೆ ಹಾಗೇ ಇರಲಿ ಎಂದು "ಒಲವಿನ ಹಂಗಿಲ್ಲ' ಕವನದಲ್ಲಿ ಹೇಳುತ್ತಾರೆ. ಇಲ್ಲಿನ ರೂಪಕದ ಸೊಗಸು ಓದುಗರಿಗೆ ಸಂತೋಷ ನೀಡುತ್ತದೆ. ಇದನ್ನು ಓದುವ ರಸಿಕರು ವ್ಹಾ ಎಂದು ತಲೆದೂಗದಿರಲು ಸಾಧ್ಯವಿಲ್ಲ. ಈ ಕವನದ ಮುಂದಿನ ಸಾಲುಗಳನ್ನು ನೋಡಿದರೆ ನಿಮಗೆ ಅದು ಮನದಟ್ಟಾಗುತ್ತದೆ.

ಓಡುತ್ತಿರುವ ಈ ಸಮಯದ ಚಂದಿರನನ್ನು
ಹಿಡಿದು ಅವಳ ವ್ಯಾನಿಟಿ ಬ್ಯಾಗಿನೊಳಗೆ
ತುರುಕಲು ಯತ್ನಿಸಿದೆ...
ಆ ಕಳ್ಳ ಜಾರಿಬಿಟ್ಟ
ಈ ಮಳ್ಳ ಮರೆತುಬಿಟ್ಟ...

"ಮನೋವ್ಯಾಧಿ" ಕವನದಲ್ಲಿ ಮನೋ ಚಿಕಿತ್ಸಕಳಾಗಬೇಕಿದ್ದವಳು  ವಿಪರ್ಯಾಸವೆಂಬಂತೆ ಮನೋವ್ಯಾಧಿಯಾಗಿದ್ದಳೇ ಎಂದು ವಿಷಾದಿಸುತ್ತಾರೆ. ಅದನ್ನು ಹೇಳುವ ರೀತಿ ನೋಡಿ...

'ಅವಳೆಂಬ ಮನೋವ್ಯಾಧಿ...
ಕೂಗುತಿಹ ರೈಲಿನ
ಪುಟ್ ಬೋರ್ಡಿನ ಮೇಲೆ
ಒಲವಿನ ಹಣತೆಯೊಂದು ಬಿಮ್ಮನೆ ಕುಳಿತಿದೆ...

ಈ ಕವನ ಸಂಕಲನದಲ್ಲಿ ಕಷ್ಟಪಟ್ಟು ಪಡೆದ ಸ್ವಾತಂತ್ರ್ಯ ಅರ್ಥ ಕಳೆದುಕೊಳ್ಳುತ್ತಿರುವುದು, ಕ್ರಾಂತಿ ಅಗತ್ಯವಾಗಿರುವುದರ ಬಗ್ಗೆಯೂ  ಮೂಲಕ ಹೇಳುತ್ತಾರೆ.

"ಗಾಂಧಿ ಮತ್ತು ಸ್ವಾಂತಂತ್ರ್ಯ" ಕವನದಲ್ಲಿ ಗಾಂಧಿ ಶ್ರಮ ವ್ಯರ್ಥವಾಗುತ್ತಿರುವುದರ ಬಗ್ಗೆ ಕವಿ ಹಳಹಳಿಸುವುದರ ರೀತಿ ನೋಡಿ. ಕವನದ ಮೂಲಕ ತಮ್ಮ ಭಾವನೆಯನ್ನು ಸಮರ್ಥವಾಗಿ ಕಟ್ಟಿಕೊಡುತ್ತಾರೆ.
ಕುಂಕುಮ ಭೂಮಿಯ ತುಂಬ
ಮಲ್ಲಿಗೆ ಬಳ್ಳಿಗಳ ನೆಟ್ಟ,
ಅವ ಕೊಟ್ಟ ಬಿಳಿಯ ಹೂಗಳು
ನಮ್ಮ ರಕ್ತಸಿಕ್ತ
ಕೈಗಳಲ್ಲಿ ನಗುತ್ತಲಿವೆ
"ಹಸಿದ ಹೊಟ್ಟೆಯ ಶಾಪ" ಕವನದಲ್ಲಿ ಕ್ರಾಂತಿ ಅತ್ಯಗತ್ಯವಾಗಿದೆಯೆಂದು ಪ್ರತಿಪಾದಿಸುತ್ತಾರೆ. ಅದನ್ನು ಕಾವ್ಯತ್ಮಕವಾಗಿಯೂ ಹೇಳುವುದು ಗಮನಾರ್ಹ
ಹರಿದ ಅಂಡರವೇರಿಗೂ ತ್ಯಾಪೆ
ಇದೆ ಸಾಹೇಬರೇ
ಬಟ್ಟೆ ನಮಗೆಂದೂ ಮಾನಮುಚ್ಚಿ
ಕೊಳ್ಳಲು ಸಿಗಲಿಲ್ಲ. ಶೋಕಿಗೆ
ಸಿಕ್ಕಿತೇ ಎಂದು ಕೇಳುತ್ತಾ ಕೊನೆಯಲಿ ಕವಿ ಹೀಗೆ ಹೇಳುತ್ತಾರೆ. ಈ ಸಾಲುಗಳನ್ನು ಹೇಳುವಾಗ ಅವರ ಕುದಿ  ಓದುಗರಿಗೆ ಅರ್ಥವಾಗುತ್ತದೆ.
ಬೆವರ ಬದಲು ರಕ್ತ
ಕೇಳುತ್ತಿರಿ, ನಿಮ್ಮ ಒಡಲು ಬರಿದಾದರೆ
ಬದುಕು ಬರವಾದಿತು ಸಾಹೇಬರೇ...
ಮುಂದೊಮ್ಮೆ ನಿಮ್ಮ ಬೆವರ ನೀವೇ
ಕುಡಿಯಬೇಕು.. ಕಾಲ ದೂರವಿಲ್ಲ... ಎಂದು ಶೋಷಕರನ್ನು ಬಹು ಕಟುವಾಗಿ ಎಚ್ಚರಿಸುತ್ತಾರೆ.

"ಚಂದ್ರ ನೀರ ಹೂ" ಸಂಕಲನದಲ್ಲಿ ಕೊರತೆಗಳೇ ಇಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಕೊರತೆಗಳಿವೆ. ಆದರೆ ಅವುಗಳು ಹೆಚ್ಚಾಗಿಲ್ಲ. ಕವನಗಳಲ್ಲಿನ ಅನೇಕ ಸಾಲುಗಳು ಪುನರಾವರ್ತನೆಯಾಗಿವೆ. ಒಂದೇ ಅರ್ಥ ನೀಡುವ ಇಂಥ ಸಾಲುಗಳನ್ನು ಮತ್ತೆಮತ್ತೆ ಹೇಳುವ ಅಗತ್ಯವಿಲ್ಲ. 
ಉದಾಹರಣೆಗೆ "ಮತ್ತೊಂದು ಮಳೆಗಾಲ" ಕವನದಲ್ಲಿನ ಈ ಸಾಲು ಓದಿ..ಕಳೆದ ಮುಂಗಾರುಗಳೂ ಉರುಳಿದ ಋತುಚಕ್ರಗಳೂ ಎಂದು ಹೇಳುತ್ತಾರೆ. ಕಳೆದ ಮುಂಗಾರುಗಳೇ , ಋತುಚಕ್ರಗಳ ಬಗ್ಗೆ ಹೇಳುತ್ತಿವೆ ಎನ್ನುವುದನ್ನು ಮರೆಯುತ್ತಾರೆ. ಇದೇ ಕವನದಲ್ಲಿ ಇಂಥದ್ದೇ ಅರ್ಥ ಪುನರಾವರ್ತನೆಯಾಗಿದೆ.ಈ ಕಾಲಸ್ತ್ರೀ ಬಹುಚಂಚಲೆ
ಋತುಪ್ರಜ್ಞೆಗಳರಿವಿಲ್ಲದೆ ಎನ್ನುತ್ತಾರೆ. ಸಂಕಲದಲ್ಲಿನ ಇತರೆ ಕೆಲವು ಸಂಕಲನಗಳಲ್ಲಿಯೂ ಒಂದೇ ಅರ್ಥ ಕೊಡುವ ಸಾಲುಗಳು ಮರುಕಳಿಸಿವೆ. ರಾಜೇಂದ್ರ ಪ್ರಸಾದ್ ಇವುಗಳತ್ತ ಗಮನ ನೀಡಬೇಕು. ನೀಡುತ್ತಾರೆ ಎಂದು ಆಶಿಸೋಣ. ಏಕೆಂದರೆ ಇವರ ಕವನಗಳಲ್ಲಿ ಪ್ರಗತಿಯ ಧೋರಣೆಗಳಿವೆ... ಇದು ಕವಿ ಬೆಳೆಯುವುದರ ಸಂಕೇತವೂ ಹೌದು...

1 comment:

 1. ಕುಮಾರ ಸರ್ ಚಂದದ ವಿಮರ್ಶೆ... :)

  ReplyDelete