• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಮಂಡಿಯೂರಿದ ಭಯ

ಸಾವಿನ ಭಯ ಇಲ್ಲದ ಸಾಮಾನ್ಯರಾರು… ಕ್ಯಾನ್ಸರ್ ರೂಪದಲ್ಲಿ ಆವರಿಸಲು ಬಂದಂಥ ಸಾವನ್ನು ಹಿಮ್ಮೆಟಿಸಿದ ಅನುಭವವನ್ನು “ಸಾಸಿವೆ ತಂದವಳು” ಕೃತಿಯಲ್ಲಿ ಬಿ.ವಿ. ಭಾರತಿ ಉತ್ಪ್ರೇಕ್ಷೆಗಳಿಲ್ಲದೆ ಹೇಳುತ್ತಾ ಹೋಗಿದ್ದಾರೆ. ಉತ್ಪ್ರೇಕ್ಷೆ ಇಲ್ಲದೆ ಹೇಳಿರುವ ರೀತಿಯಿಂದ ಇದು ಏಕಕಾಲಕ್ಕೆ ಸಾಹಿತ್ಯ ಕೃತಿಯಾಗಿಯೂ, ಅನುಭವಿಸಿದ ಯಾತನೆಯನ್ನು ದೂರ ಸರಿಸಿದ ವಿವರಣಿಕೆಯೂ ಆಗಿದೆ.

ಸಾಮಾನ್ಯವಾಗಿ ಕಾಯಿಲೆಗಳೊಂದಿಗೆ ಗುದ್ದಾಡುತ್ತಿರುವವರ, ಗುದ್ದಾಡಿ ಗೆದ್ದವರ ವಿವರಣೆ ಕೇಳುವುದು ಅಷ್ಟು ಸುಲಭವಲ್ಲ. ಏಕೆಂದರೆ ಇದು ಕೇಳುಗರಲ್ಲಿ ಜಿಗುಪ್ಸೆ, ಬೇಸರ, ಆತಂಕ ಉಂಟು ಮಾಡುವ ಸಾಧ್ಯತೆ ಅಪಾರ. ಆದರೆ ‘ಸಾಸಿವೆ ತಂದವಳು ಕೃತಿ ಇಂಥ ಗುಣಗಳಿಲ್ಲದ ಹೊರತಾಗಿ ಓದಿಸಿಕೊಳ್ಳುತ್ತದೆ.

ಕೃತಿಯ ಆರಂಭದಲ್ಲಿ ಕಂಡು ಬರುವುದೆನೆಂದರೆ ಭಾರತೀ ಅವರ ಅತಿಭಯ. ವಿಮಾನದಲ್ಲಿ, ರೈಲಿನಲ್ಲಿ ಪಯಣಿಸುವಾಗ ಭಯ. ಇನ್ನೊಬ್ಬರ ಕಾಯಿಲೆ ವಿಷಯ ಕೇಳುವಾಗಲೂ ಭಯ. ಹೀಗೆ ಆಂತರ್ಯದಲ್ಲಿ ಭಯವನ್ನೆ ಬದುಕಾಗಿಸಿಕೊಂಡಿದ್ದ ಮಹಿಳೆ ಅದನ್ನು ಗೆದ್ದ ವೃತ್ತಾಂತವೂ ಇಲ್ಲಿದೆ. ಆದ್ದರಿಂದಲೇ ಈ ಕೃತಿಯ ಕೇಂದ್ರ ಪ್ರಜ್ಞೆ ಭಯ. ಅಂದರೆ ಸಾವಿನ ಭಯ. ಅನುಭವದ ವಿವರಣೆಯಲ್ಲಿಯೂ ಕೇಂದ್ರ ಪ್ರಜ್ಞೆ ಇರುತ್ತದೆಯೇ ಎಂಬ ಪ್ರಶ್ನೆ ಓದುಗರಲ್ಲಿ ಮೂಡಬಹುದು. ಆದರೆ ಕ್ಯಾನ್ಸರ್ ಇಲ್ಲದ ದಿನಗಳಲ್ಲಿನ ಲೇಖಕಿ ಅನುಭವ ಕೇಳಿದರೆ ಇದು ಆಕೆ “ ಭಯವನ್ನು ತನ್ನ ಮುಂದೆ ಮಂಡಿಯೂರಿಸಿದ ಕಥೆಯ ಹಾಗೆಯೂ ಕಾಣುತ್ತದೆ. 

ಕ್ಯಾನ್ಸರ್ ಆಗಿರದಿರಲಿ ಎಂದು ಗಳಿಗೆಗಳಿಗೆಗೂ ಪರಿತಪಿಸುವ ಆತಂಕದ ಮನಸ್ಥಿತಿ ದಿನಕಳೆದಂತೆ ಮರೆಯಾಗುತ್ತಾ ಹೋಗಿ ಅಲ್ಲಿ ಬದುಕಬೇಕೆನ್ನುವ ಜೀವನೋತ್ಸವ ಮೂಡುವುದನ್ನು ಕೃತಿಯಲ್ಲಿ ಕಾಣುತ್ತಾ ಹೋಗಬಹುದು. ಇದು ಇದಕ್ಕಿಂದಂತೆ ಸಂಭವಿಸಿಬಿಡುವ ಸ್ಥಿತಿಯಲ್ಲ. ಅದು ದಿನಕಳೆದಂತೆ ಮನಸು ತಾನಿರುವ ಸ್ಥಿತಿ ಗೆಲ್ಲಲು ಮೂಡಿಸಿಕೊಳ್ಳುತ್ತಾ ಹೋಗುವ ಮನಸ್ಥಿತಿ ಎನ್ನವುದು ತಿಳಿಯುತ್ತದೆ.

ಇಂಥ ಮನಸ್ಥಿತಿ ರೂಪುಗೊಂಡಿದಾದರೂ ಹೇಗೆ ಎನ್ನುವುದನ್ನು ಭಾರತೀ ವಿವರಿಸುತ್ತಾರೆ. ಇದು ಮಾರಕ ರೋಗದಿಂದ ಬಳಲುತ್ತಿರುವ ಮನಸುಗಳಿಗೂ  ಬದುಕಿನ ಭರವಸೆ ಮೂಡಿಸುವ ದಾರಿದೀಪ ಆಗಬಲ್ಲದು.

ಕ್ಯಾನ್ಸರ್, ಅದರ ನಿವಾರಣೆಯ ಚಿಕಿತ್ಸೆ ಸಂದರ್ಭಗಳಲ್ಲಿ ಆದ ಯಾತನೆ, ಅಂಥ ಸ್ಥಿತಿಯಲ್ಲಿ ಮಸನು ಬಯಸುವ ಸಾಂತ್ವನ, ಅದು ಅತಿ ಅನುಕಂಪವಾದಾಗ ಅನುಕಂಪವೇ ಹಿಂಸೆಯಾಗಿ ಪರಿವರ್ತಿತವಾಗುವ ರೀತಿಯನ್ನು ತಿಳಿಸುತ್ತಾರೆ. ಕಾಯಿಲೆ ಇದೆ ಎಂದು ಗೊತ್ತಾದ ಸಂದರ್ಭದಲ್ಲಿ ನಮ್ಮವರೆನ್ನಿಸಿಕೊಂಡವರು ಅಂದರೆ ಅಪ್ಪ, ಅಮ್ಮ, ಗಂಡ, ಮಕ್ಕಳು ಮತ್ತು ಬಂಧುಗಳು ನಮ್ಮೊಂದಿಗೆ ಸದಾ ಇರಲಿ ಎನಿಸುತ್ತಿರುತ್ತದೆ. ಆದರೆ ಶೀಘ್ರದಲ್ಲಿಯೇ ಇಂಥ ಭಾವ ಮರೆಯಾಗಿ ಅವರವರು ಅವರವರಷ್ಟಕ್ಕೆ ಯಥಾ ಪ್ರಕಾರ ಇರಬಾರದೇ ಎನಿಸುವಿಕೆಯನ್ನು ಭಾರತಿ ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಮಾರಣಾಂತಿಕ ಕಾಯಿಲೆಗಳಿಗೆ ಒಳಗಾದವರಿಗೆ ಎದುರಾಗುವ ಪರಿಚಿತ ವ್ಯಕ್ತಿಗಳಲ್ಲಿ ಅಮಾನುಶ ವ್ಯಕ್ತಿತ್ವ ಇದ್ದರೆ ಅದು ಹೇಗೆ ಹಿಂಸೆಗೆ ಗುರಿಪಡಿಸುತ್ತದೆ. ಅಂಥ ಮನಸ್ಥಿತಿಯ ಕ್ರೌರ್ಯತೆ ಎನು ಎನ್ನುವುದನ್ನು ಉದಾಹರಣೆಗಳ ಮೂಲಕ ತಿಳಿಸಿಕೊಡುತ್ತಾರೆ.

ಈ ಕೃತಿಯ ಮತ್ತೊಂದು ವಿಶೇಷ ಏನೆಂದರೆ ಸ್ವ ಅನುಕಂಪ ಅಥವಾ ಮರುಕ ಇಲ್ಲದಿರುವುದು. ಸಂರ್ಕೀಣ ಸಂದರ್ಭಗಳಲ್ಲಿಯೂ ಭಾರತೀ ಅವರ ವ್ಯಕ್ತಿತ್ವದ ಅಂಶ ಎನ್ನಬಹುದಾದ ಹಾಸ್ಯಪ್ರಜ್ಞೆ ಮಿಂಚಿರುವುದು. ಇವೆಲ್ಲದರ ಜೊತೆಗೆ ಭಾರತೀ ಅವರ ಆಪ್ತ ಬಂಧುಗಳು ನಡೆದುಕೊಂಡ ರೀತಿ ನೋಡಿದರೆ ಸಂಬಂಧದ ಮೌಲ್ಯಗಳು ಅರಿವಾಗುತ್ತವೆ.

ಇವೆಲ್ಲದರ ಜೊತೆಗೆ ಚಿತ್ರದ ಮುಖಪುಟ ಕುರಿತಾಗಿಯೂ ಹೇಳದಿದ್ದರೆ ಅಪೂರ್ಣವಾಗುತ್ತದೆ. ಇಲ್ಲಿ ಭಾರತಿ ಅವರ ಮುಂದೆ ಭಾರತೀ ಅವರೇ ಮಂಡಿಯೂರಿದ ಚಿತ್ರ ಇದೆ. ಇಲ್ಲಿ ಮಂಡಿಯೂರಿರುವುದು ಭಾರತೀ ಅವರಲ್ಲ. ಅವರೊಳಗಿದ್ದ ಭಯ. ಕಾಡಿದ ಆತಂಕ. ಕ್ಯಾನ್ಸರ್ ಅನ್ನು ಆತ್ಮವಿಶ್ವಾಸದಿಂದ ಮಂಡಿಯೂರಿಸಿದ ಭಾರತಿ ಮುಖದಲ್ಲಿ ಮಂದಹಾಸ ಮೂಡಿರುವ ಚಿತ್ರ ಇದು. ಇಷ್ಟು ವಿವರಗಳನ್ನು ಒಂದು ಚಿತ್ರದಲ್ಲಿ ಚಿತ್ರಮಿತ್ರ ಮೂಡಿಸಿದ್ದಾರೆ.
ಈ ಕೃತಿ ಮರಣಾಂತಿಕ ರೋಗಗಳಿಗೆ ಒಳಗಾಗಿ ಸಾವು ಸಮೀಪ ಎಂದುಕೊಂಡವರ ಆತಂಕಗಳನ್ನು ನಿವಾರಿಸಬಲ್ಲ ತಾಕತ್ತಿರುವ ಅನುಭವ ಕಥನವಾಗಿದೆ. ಕೃತಿಯ ಕೊನೆಕೊನೆಯಲ್ಲಿ ವಿಮಾನದಲ್ಲಿ ಪಯಣಿಸುವಾಗ ನೆಮ್ಮದಿಯಿಂದ ನಿದ್ದೆ ಹೋಗಿದ್ದನ್ನು ಭಾರತೀ ತಿಳಿಸುತ್ತಾರೆ. ಇದು ನಿದ್ದೆ ಮಾಡಿದ್ದರ ವಿವರಣೆ ಮಾತ್ರ ಅಲ್ಲ. ಭಯವನ್ನು ಗೆದ್ದ ಸಂಕೇತವೂ ಹೌದು.

2 comments:

 1. ಚೆನ್ನಾಗಿದೆ. ಉತ್ಸಾಹ ತುಂಬುವ ಇಂತಹ ವ್ಯಕ್ತಿಗಳು ನಮ್ಮ ನಡುವೆ ಇರುವುದು ಖುಷಿಕೊಡುತ್ತದೆ.

  ReplyDelete