• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ನೋವಿನ ಕುಲುಮೆಯಲಿ ಅರಳಿದ ಹೂವುಗಳು

ಕವಿ ಸುಬ್ಬು ಹೊಲೆಯಾರ್ ನನಗೆ ಪರಿಚಿತರು. ಎದುರಿಗೆ ಕಂಡಾಗ ಇಬ್ಬರ ಮುಖದಲ್ಲೂ ಮುಗುಳ್ನಗೆ. ಹೇಗಿದ್ದೀರಿ, ಚೆನ್ನಾಗಿದ್ದೇನೆ. ನೀವು.. ಇಷ್ಟೆ. ಇವರ ಕವನಗಳನ್ನು ಆಗಾಗ ಓದಿದ್ದೆ. ಇತ್ತೀಚೆಗೆ ಗೆಳೆಯ ಮಂಜುನಾಥ್ ಅವರಿಂದ ಮಿಂಚಂಚೆ. ಸುಬ್ಬಣ್ಣ ಅವರ ಕವನ ಸಂಕಲನ ತರುತ್ತಿದ್ದೇವೆ. ಬೆಂಗಳೂರಿನಲ್ಲಿ ಲೋಕಾರ್ಪಣೆ. ಬರಬೇಕು.

ಬಳ್ಳಾರಿಯಲ್ಲಿ ಕ್ಷಣಕ್ಷಣದ ಅಪಾಯಗಳ ನಡುವೆ ವರದಿಗಾರಿಕೆ ಮಾಡುತ್ತಿರುವಾಗ ಜೊತೆ ನೀಡಿದ ಗೆಳೆಯನೀತ. ಭೇಟಿಯಾಗದಿರಲು ಸಾಧ್ಯವಿಲ್ಲ. ಇದರಿಂದಾಗಿಯೇ ಸಮಾರಂಭಕ್ಕೆ ಹೋದೆ. ಬರುವಾಗ ಕೈಯಲ್ಲಿ ಖರೀದಿಸಿದ ಪುಸ್ತಕ. ಬಸ್ಸಿನಲ್ಲಿಯೇ ಎರಡು ಕವನದ ಓದು. ಮನೆಗೆ ಬಂದು ಕವನ ಸಂಕಲನವೀಡಿ ಓದಿಸಿಕೊಂಡ ಸೆಳೆತ. ಸಮಾರಂಭಕ್ಕೆ ಹೋಗದಿರುತ್ತಿದ್ದರೆ ಒಳ್ಳೆಯ ಕವನಗಳನ್ನು ಓದುವ ಅವಕಾಶದಿಂದ ವಂಚಿತನಾಗುತ್ತಿದ್ದೆ ಎಂಬ ಭಾವ. ಇಂಥ ಕವನಗಳ ಬಗ್ಗೆ ನನ್ನ ಅಭಿಪ್ರಾಯ ಹಂಚಿಕೊಂಡಿದ್ದೇನೆ.
“ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ” ಕವನ ಸಂಕಲನದ ಸ್ಥಾಯಿಭಾವ ನೋವು. ಕಹಿಯುಂಡ ಕವಿ ಕೆಂಡದುಂಡೆಗಳನ್ನು ಉಗುಳಿಲ್ಲ. ಆಗಿರುವ, ಆಗುತ್ತಿರುವ ನೋವು ನುಂಗಿಕೊಂಡೆ ನೀಡಿದ ರಚನೆಗಳು ನೋವುಂಡ ಮನಸುಗಳ ಸಮರ್ಥ ಅಭಿವ್ಯಕ್ತಿಯಾಗಿವೆ. ಆದ್ದರಿಂದಲೇ ಇಲ್ಲಿರುವ ಕವನಗಳು ನೋವಿನ ಕುಲುಮೆಯಲ್ಲಿ ಅರಳಿದ ಹೂವುಗಳು.
“ಹೇರ್ ಕಟ್ಟಿಂಗ್ ಮಾಡಿಸಿಕೊಳ್ಳಲು ಹೋದ ನನ್ನ ಸಮುದಾಯದವರೊಬ್ಬರ ಮೂಗನ್ನು ಕೊಯ್ದ ಘಟನೆ; ದಲಿತ ಹುಡುಗನನ್ನು ಪ್ರೀತಿಸಿದಳು ಎಂಬ ಕಾರಣಕ್ಕೆ ಜನ್ಮಕೊಟ್ಟ ತಂದೆಯೇ ಮಗಳನ್ನು ಇಲ್ಲವಾಗಿಸುವ ಘಟನೆಗಳು ನನ್ನ ಹೃದಯವನ್ನು ಮತ್ತೆಮತ್ತೆ ಘಾಸಿಗೊಳಿಸಿವೆ. ಪ್ರತಿದಿನವೂ ಇಂತಹವು ನಡೆಯುತ್ತಲೇ ಇವೆ. ಮಣ್ಣು ನೋಯುವ ಹಾಗೆ ನನ್ನಂತವರೂ ನೋಯುತ್ತಲೇ ಇದ್ದೇವೆ’ ಇವು ಸಂಕಲನದ ಆರಂಭದಲ್ಲಿನ ಕವಿಯ ಮಾತುಗಳು.
ಮಣ್ಣು ನೊಂದರೂ ಹೂಗಳನ್ನು ಅರಳಿಸುವ, ಜೀವಂತಿಕೆಯಿಂದ ನಳನಳಿಸುವ ಗುಣ ಬಿಡುವುದಿಲ್ಲ. ಇಲ್ಲಿ ಕವಿಯೂ ಹಾಗೆಯೇ. ತುಳಿದವರನ್ನ ಚುಚ್ಚುವುದಕ್ಕೆ, ಚಚ್ಚುವುದಕ್ಕೆ ಹೊರಟಿಲ್ಲ. ಆದರೆ ಆಗಿರುವ ಕಾವ್ಯದ ಗೇಯ್ಮೆಯ ಮೂಲಕ ದಾಟಿಸಿದ್ದಾರೆ. ಇದರಿಂದಾಗಿಯೇ ತಣ್ಣನೆಯ ಭಾವದ ಕವನ ಓದುತ್ತಿದ್ದರೂ ಅದರ ಹಿಂದಿನ ನೋವು ಓದುಗರನ್ನು ತಾಕುತ್ತದೆ.
ನಿಂತ ನಡೆದ ನೆಲವನ್ನ
ತೋರು ಬೆರಳ ಉಗುರಿನಿಂದ ಕೆರೆದೆ,
ಗಾಯವಾಯಿತಲ್ಲ ಅನಿಸಿತು
ಪುಟ್ಟ ಗಿಡದ ಎಲೆ ಮುರಿದೆ
ತೊಟ್ಟಲ್ಲಿ ಇರುವೆ ಕಣ್ಣೀರು ಬಂತು
ತಥಾಗತರಿಗೆ ಇಡಲೆಂದು
ಹೂವ ಬಿಡಿಸಿದೆ, ಬೆರಳ ತುದಿಗೆ
ತೇವ ತಾಗಿ ತಣ್ಣಗಾಯಿತು
ಇಷ್ಟು ಗಾಯ ಮಾಡಿದ ನನಗೆ
ನನ್ನಂತವರಿಗೆಲ್ಲಾ ಗಾಯ ಮಾಡಿದವರ ಕ್ಷಮೆಕೋರಿ
ಅವರ ಪಾದಕ್ಕೆ…
ಎನ್ನುತ್ತಲೇ ಮುಂದುವರಿಯುತ್ತಾರೆ. ತಾನು ಗಾಯ ಮಾಡಿರದಿದ್ದರೂ ಗಾಯ ಮಾಡಿದೆನೆಂಬ ಭಾವ. ಇಂಥವರಿಗೆಲ್ಲಾ ಗಾಯ ಮಾಡಿದವರ ಕ್ಷಮೆಕೋರಿ ಅವರ ಪಾದಕ್ಕೆ ಎನ್ನವುದನ್ನು ಓದುತ್ತಿದಂತೆ ಮೈ ಜುಮ್ ಎನ್ನುತ್ತದೆ. ಇಷ್ಟು ಸಮರ್ಥವಾಗಿ ಆಗಿರುವ ನೋವನ್ನು ಹೇಳಿರುವ ಸಂತಭಾವದ ಬಗ್ಗೆಯೂ ಅಚ್ಚರಿಯಾಗುತ್ತದೆ.
ಕವಿ ನಿರಾಶಾವಾದಿಯಲ್ಲ. ಆತನ ಕಂಗಳಲ್ಲಿ, ಎದೆಯಲ್ಲಿ ಆಶಾವಾದವಿದೆ. ವಾಸ್ತವವೆಂಬ ಹಗಲಿನ ಕ್ರೌರ್ಯವನ್ನೂ ತಿಳಿದು ಕನಸುಗಳನ್ನು ಮೂಡಿಸುವ ಕತ್ತಲೆಗಾಗಿ ಕಾಯುವಿಕೆ. ಆದ್ದರಿಂದಲೇ ‘ಕಾಯ್ತಾ ಇದ್ದೀನಿ ಎಷ್ಟೊತ್ತಿಗೆ ಕತ್ಲೆ ಆಗುತ್ತೆ ಅಂತ’ ಕವನದಲ್ಲಿ
ಕಾಯ್ತಾ ಇದ್ದೀನಿ ಎಷ್ಟೊತ್ತಿಗೆ ಬೆಳಕಾಯ್ತದೆ ಅಂತ
ಬದ್ಲಾಗ್ಬಿಡುತ್ತೆ ನಾಳೆ ಎಲ್ಲ ಅಂತಂದ್ರೆ ನಾಳೆ ಅನ್ನೋದು ಬರ್ತಾನೆ
ಇಲ್ಲ ಇನ್ನೂ…
ಎನ್ನುತ್ತಾ ಕನಸುಗಳನ್ನೆಲ್ಲಾ ವಿವರಿಸುತ್ತಾ ಕೊನೆಗೆ ಮತ್ತೆ ಕಾಯ್ತಾಯಿದ್ದೀನಿ ಎಷ್ಟೊತ್ತಿಗೆ ಕತ್ಲೆ ಆಗುತ್ತೆ ಅಂತ ಎಂದು ಹೇಳುತ್ತಾರೆ.
“ಮಲಿನದ ಮಹಾಕುಹಕ’ ಕವನದಲ್ಲಿ ಆನಂದ ಎಂದು ಹೆಸರಿಟ್ಟುಕೊಂಡರೂ ಆನಂದವಾಗದಂತೆ ನೋಡಿಕೊಳ್ಳುವವವರ ಬಗ್ಗೆ ಹೇಳುತ್ತಾರೆ.
ಮಗಾ ಎಂದಳು ಅವ್ವಾ,
ಮಗನೇ ಎಂದನು ಅಪ್ಪ,
ನೀವೇ ಕೊಟ್ಟ ಹೆಸರು ಮರೆಯುವುದೇ ?
“ಅಸ್ಪೃಶ್ಯ”
ಸಂತೋಷವಾಗಿರಬಹುದು..
ಮಹಾನ್ ಭಾರತೀಯರು ನೀವು
ಅಸ್ಪೃಶ್ಯ ಖಂಡದವನು ನಾನು
ಹೊಲಗೇರಿಯಾಗಿದ್ದೇನೆ
ಅಪ್ಪಟ ಮನುಷ್ಯನ ಹಾಗೆ
ಇದೇ ಹೆಸರಿನೊಂದಿಗೆ
ಎನ್ನುತ್ತಾರೆ. ಹೀಗೆ ಹೇಳುವ ಮೂಲಕ ಜಾತಿಪ್ರಜ್ಞೆಯ ಮನಸುಗಳ ಬಗ್ಗೆ ವ್ಯಂಗ್ಯವಾಡುತ್ತಲೆ ನೀವು ಮನುಷ್ಯರಾಗಿಲ್ಲ, ಆದರೆ ನಿಮ್ಮಿಂದ ಹೊಲಗೇರಿಯವನು ಎನಿಸಿಕೊಂಡ ನಾನು ಅಪ್ಪಟ ಮನುಷ್ಯನಾಗಿದ್ದೇನೆ ಎಂಬ ಸತ್ಯ ಹೇಳುತ್ತಾರೆ.
“ಕತ್ತಲೆಯ ತಾಯಿಯಾಗು, ಬೆಳಕೆನ್ನುವ ದೇವರೆ” ಎಂಬ ಕವನದಲ್ಲಿ ಬೆಳಕು ಎನ್ನುವುದು ಕತ್ತಲೆಯ ತಾಯಿ ಎನ್ನುತ್ತಾ…
ಹಾಡಿ ತೂಗಿ ಬೆಳೆಯಲಿ
ನನ್ನ ಕೇರಿಯ ಮಕ್ಕಳೆಲ್ಲಾ ಇನ್ನು ಮುಂದೆ
ಅಗ್ನಿಪಂಜರದ ತೊಟ್ಟಿಲಲ್ಲಿ,
ಕತ್ತಲೆಯ ತಾಯಿಯಾಗು ಬೆಳಕೆನ್ನುವ ದೇವರೆ
ಪ್ರಾರ್ಥಿಸುತ್ತೇನೆ
ಮಕ್ಕಳಾಗುತ್ತೇವೆ ಬೆಳದಿಂಗಳ ಹನಿಯಾಗಿ
ತಣ್ಣಗಾಗಲು ನನ್ನೆದೆ ಕಂಬಾಲ ಬೆಂಕಿಯಂತೆ
ಎಂದು ತಿಳಿಸುತ್ತಾರೆ. ಇಲ್ಲಿ ‘ಮಕ್ಕಳಾಗುತ್ತೇವೆ ಬೆಳದಿಂಗಳ ಹನಿಯಾಗಿ’ ಎನ್ನುವ ಸಾಲುಗಳಲ್ಲಿ ಅಡಗಿರುವ ಕಾವ್ಯದ ಬನಿ ನಮ್ಮನ್ನು ಸೆಳೆಯುತ್ತದೆ. ಇಲ್ಲಿ ಬೆಳಕು, ಕತ್ತಲೆಯ ತಾಯಿಯಾದರೆ ಎದೆಯಲಿ ಪ್ರಜ್ವಲಿಸುತ್ತಿರುವ ಬೆಂಕಿ ಕೂಡ ಬೆಳದಿಂಗಳ ಹನಿಯಾಗಬಲ್ಲದು ಎನ್ನುತ್ತಾರೆ.
“ದೇವರನ್ನು ಸಾಕಿಕೊಂಡವರಲ್ಲಿ” ಎಂಬ ಕವನದಲ್ಲಿ ಅದ್ಬುತವಾದ ವ್ಯಂಗ್ಯ ಕಾಣುತ್ತದೆ. ಇದನ್ನು ರಾಚುವಂತೆ ಹೇಳದೆ ನಯವಾಗಿ ಹೇಳುವಲ್ಲಿ ಕವಿಯ ಕಾವ್ಯದ ಕುಸುರಿ ಶಕ್ತಿ ಕೆಲಸ ಮಾಡಿದೆ.

ಸರ್ಕಾರಕ್ಕೆ ಒಂದು
ಅರ್ಜಿ ಹಾಕಿದ್ದೇನೆ,
ಈ ದೇಶವನ್ನು ಸ್ವಲ್ಪ ದೊಡ್ಡದು ಮಾಡಿ ಅಂತ.
ನಿಂತರೂ ತಳ್ಳುತ್ತಾರೆ, ಕೂತರೂ ಸರೀ ಅಂತಾರೆ,
ನನ್ನ ಮೇಲಿನ ಗಾಯಗಳನ್ನು ನೋಡಿ
ಕೆಲವರಿಗಂತೂ ನನ್ನ ಮುಟ್ಟಿಸಿಕೊಳ್ಳದಿದ್ದರೆ
ಪರಮಾನಂದ;
ಅದಕ್ಕೆ ಕೇಳಿದ್ದು, ಈ ದೇಶವನ್ನು ಸ್ವಲ್ಪ ದೊಡ್ಡದು ಮಾಡಿ
ಅಂತ… ಎನ್ನುವ ಮೂಲಕ ಸಂಕುಚಿತ ಮನಸ್ಥಿತಿಗಳ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾರೆ.
“ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ” ಕವನ ಸಂಕಲದಲ್ಲಿ ಒಟ್ಟು 51 ಕವನಗಳಿವೆ. ಮೊದಲೇ ಹೇಳಿದ ಹಾಗೆ ಇಲ್ಲಿ ಕವಿಯ ಕುಸುರಿ ಶಕ್ತಿ ಕೆಲಸ ಮಾಡಿದೆ. ನೋವುಗಳನ್ನು ಹೂವಿನ ಮಾಲೆಯಾಗಿಸಿ ನೋಯಿಸಿದವರ ಕೊರಳಿಗೆ ಹಾಕುವ ಮೂಲಕ ಅವರೊಳಗನ್ನು ನೋಡಿಕೊಳ್ಳುವಂತೆ ಮಾಡುವ ಶಕ್ತಿ ಇಲ್ಲಿನ ಕವನಗಳಿಗಿವೆ.
ಇಂಥ ಉತ್ತಮ ಸಂಕಲನ ನೀಡಿದ ಸುಬ್ಬು ಹೊಲೆಯಾರ್, ಪ್ರಕಟಿಸಿದ ಬಳ್ಳಾರಿಯ ‘ಸಂಸ್ಕೃತಿ ಪ್ರಕಾಶನ’ದ ಸೂತ್ರ ಹಿಡಿದ ಮಂಜುನಾಥ್ ( 944 832 34 00 ) ಅಭಿನಂದನೀಯರು.

1 comment:

 1. nimma manaviya kavya samvedanege namma dhanyavadagalu. numma preethi heege erali. mattu yellarigu olleyadagali
  -
  inti
  subbu holeyar
  c manjunath
  ------

  ReplyDelete