• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಹತಾಶ ವ್ಯಕ್ತಿಗಳ ಬಗ್ಗೆ ಎಚ್ಚರ

ಅತ್ಯಂತ ಆಪ್ತರಾದ ವ್ಯಕ್ತಿ ಅಗಲಿಕೆ, ಭರಿಸಲಾಗದ ಆಕಾಂಕ್ಷೆ, ನಷ್ಟ. ಕಾಯಿಲೆ, ಭಯ-ಆತಂಕ, ಉನ್ಮಾದ ಇತ್ಯಾದಿ ಅನೇಕ ಕಾರಣಗಳಿಂದ ಬಳಲುತ್ತಿರುವವರ ಬಗ್ಗೆ ಹತ್ತಿರದ ಸಂಬಂಧಿಗಳು ಮತ್ತು ಸ್ನೇಹಿತರು ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಇಂಥವರು ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೊಂಚ ಎಚ್ಚರ ವಹಿಸಿದರೆ ಆಗುವಂಥ ಅನಾಹುತ ತಡೆಗಟ್ಟಲು ಸಾಧ್ಯ.

ಒಂದು ವೇಳೆ ಹತಾಶ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿ ವಿಫಲವಾದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವುದು ಅತ್ಯವಶ್ಯಕ. ಆದ್ದರಿಂದ ಪ್ರಥಮ ಚಿಕಿತ್ಸೆಯ ಬಗ್ಗೆ ಸ್ವಲ್ಪವಾದರೂ ತಿಳಿದಿರುವುದು ಉತ್ತಮ. ಹತಾಶ ವ್ಯಕ್ತಿಗಳ ಸುತ್ತಮುತ್ತಲಿನವರು ಇಂಥ ಚಿಕಿತ್ಸೆ ಬಗ್ಗೆ ತಿಳಿದಿರಲೇಬೇಕು ಎಂದೇನಿಲ್ಲ. ಇಂದಿನ ಆಧುನಿಕ ಸಂದರ್ಭದಲ್ಲಿ ಆಸಕ್ತಿ ಇರುವವರು ಪ್ರಥಮ ಚಿಕಿತ್ಸೆಯ ರೀತಿಗಳನ್ನು ತಿಳಿದಿರುವುದು ಸೂಕ್ತ. ಎಷ್ಟೋ ಬಾರಿ ಸಕಾಲಕ್ಕೆ ಒದಗಿದ ಪ್ರಥಮ ಚಕಿತ್ಸೆಯೇ ವ್ಯಕ್ತಿಯ ಪ್ರಾಣ ಉಳಿಸಿದ ನಿದರ್ಶನಗಳಿವೆ.

ಸಾಂತ್ವನ-ಭರವಸೆ:
ಹತಾಶ ವ್ಯಕ್ತಿ ಅತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ಸೇರಿದ ಸಂದರ್ಭದಲ್ಲಿ ಕುಟುಂಬದ ಇತರ ಸದಸ್ಯರು ಕುಗ್ಗಿ ಹೋಗಿರುತ್ತಾರೆ. ಇಂಥ ಸಂದರ್ಭದಲ್ಲಿ ಅವರಿಗೂ ಸಾಂತ್ವನ-ಭರವಸೆಯ ಮಾತುಗಳನ್ನು ಹೇಳುವುದು ಅವಶ್ಯಕ. ಬದುಕುಳಿದ ವ್ಯಕ್ತಿ ಮೇಲೆ ಕೂಗಾಡದೇ ಅವರಿಗೂ ಕೂಡ ಬದುಕಿನ ಬಗ್ಗೆ ಭರವಸೆ ಮೂಡಿಸುವಂಥ ಮತ್ತು ನಾವಿದ್ದೇವೆ ಎಂದು ಧೈರ್ಯ ತುಂಬುವಂಥ ಕೆಲಸ ಮಾಡಬೇಕು

ಆತ್ಮಹತ್ಯೆಗೆ ಯತ್ನಿಸುವುದು ಶಿಕ್ಷಾರ್ಹ ಅಪರಾಧ:
ಭಾರತೀಯ ದಂಡ ಸಂಹಿತೆ ಪ್ರಕಾರ ಆತ್ಮಹತ್ಯೆಗೆ ಯತ್ನಿಸುವುದು ಶಿಕ್ಷಾರ್ಹ ಅಪರಾಧ. ತನಿಖೆ ಸಂದರ್ಭದಲ್ಲಿ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದವರೆಂದು ಗುಮಾನಿ ಬಂದ ವ್ಯಕ್ತಿಗಳ ಮೇಲೂ ಕಾನೂನು ಕ್ರಮ ಜರುಗಿಸಬಹುದು. ಇಂಥ ಸಂದರ್ಭ ಕುಟುಂಬದವರಿಗೆ ಮತ್ತು ಕಾನೂನು ಕ್ರಮಕ್ಕೆ ಒಳಗಾದವರಿಗೆ ನರಕ ಯಾತನೆ ಅನುಭವ ಆಗುತ್ತದೆ. ಪೊಲೀಸರು ದುರುದ್ದೇಶದಿಂದ ಕೇಸು ಹಾಕದೇ ಇದ್ದರೂ ಅಮಾಯಕರು ಕೆಲವೊಮ್ಮೆ ತೊಂದರೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭಗಳಲ್ಲಿ ಸಾಂತ್ವನ ಮತ್ತು ಭರವಸೆ ಮಾತುಗಳು ಅಪತ್ಬಂಧುವಿನಂಥ ಕೆಲಸ ಮಾಡುತ್ತವೆ.

ಗಮನ:
ಸಾವು-ಬದುಕಿನ ಮಧ್ಯೆ ಸೆಣಸುತ್ತಾ ಆಸ್ಪತ್ರೆಯಲ್ಲಿರುವ ವ್ಯಕ್ತಿಗೆ ಔಷಧ ಚಿಕಿತ್ಸೆಯೊಂದಿಗೆ ತಕ್ಷಣಕ್ಕೆ ಒಳ್ಳೆಯ ಮಾತಿನ ಚಿಕಿತ್ಸೆಯೂ ಅವಶ್ಯಕ. ಇಂಥ ಒಳ್ಳೆಯ ಮಾತುಗಳು ಕೂಡ ಅವರ ಜೀವವನ್ನುಳಿಸಲು ನೆರವಾಗುತ್ತವೆ. ವ್ಯಕ್ತಿ ಮಾನಸಿಕವಾಗಿ ಧೈರ್ಯ ತಂದುಕೊಂಡರೆ ದೈಹಿಕ ತೊಂದರೆಗಳನ್ನು ಸುಲಭವಾಗಿ ಎದುರಿಸಬಹುದು.
ಮರು ಪ್ರಯತ್ನ:
ಒಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದವರು ಮತ್ತೆ  ಯತ್ನಿಸಬಹುದು. ಇಂಥ ಮನೋಭಾವವನ್ನು ಆತ್ಮಹತ್ಯಾ ಪ್ರವೃತ್ತಿ ಎನ್ನಲಾಗುತ್ತದೆ. ಆದ್ದರಿಂದ ಇಂಥವರ ಬಗ್ಗೆಯೂ ಎಚ್ಚರದಿಂದ ಇರಬೇಕು. ಒಟ್ಟಾರೆಯಾಗಿ ಹತಾಶ ವ್ಯಕ್ತಿಗಳ ಬಗ್ಗೆಯೆ ಹೆಚ್ಚು ಎಚ್ಚರ ವಹಿಸಬೇಕು. ಸೂಕ್ತ ಮಾನಸಿಕ ಚಿಕಿತ್ಸೆ ದೊರೆತು ಸಂಪೂರ್ಣ ಗುಣಮುಖರಾಗುವವರೆಗೆ ಇಂಥ ನಿಗಾ ಅತ್ಯಾವಶ್ಯಕ. ಇಂಥ ವ್ಯಕ್ತಿಗಳು ದೈಹಿಕವಾಗಿ ತೀವ್ರ ಅಸ್ವಸ್ಥತೆಗೆ ಒಳಗಾದರೆ ಕೂಡಲೇ ಅದರ ಕಾರಣಗಳೇನೆಂದು ತಿಳಿಯಲು ಪ್ರಯತ್ನಿಸಬೇಕು.
ಸಾವುಂಟು ಮಾಡುವಂಥ ವಸ್ತುಗಳು:
ಹತಾಶ ವ್ಯಕ್ತಿ ಅಸ್ವಸ್ಥನಾದ ಸಂದರ್ಭದಲ್ಲಿ ಆತನ ಸುತ್ತಮುತ್ತ ಸಾವನ್ನುಂಟು ಮಾಡುವಂಥ ವಸ್ತುಗಳು ಕಂಡುಬರಬಹುದು. ತೀವ್ರ ವಿಷಕಾರಿ ದ್ರವಗಳು, ಮಾತ್ರೆಗಳು ಕಾಣಬಹುದು. ಅದನ್ನು ಕೂಡ ಸಂಗ್ರಹಿಸಿ ಭದ್ರ ಮಾಡಿ ಕೂಡಲೇ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಬೇಕು. ಅಲ್ಲಿ ವ್ಯಕ್ತಿ ಯಾವ ವಸ್ತುವಿನಿಂದ ವ್ಯಕ್ತಿ ಅಸ್ವಸ್ಥನಾಗಿದ್ದಾನೆ ಎಂದು ವೈದ್ಯರಿಗೆ ತಿಳಿದರೆ ಅದಕ್ಕೆ ತಕ್ಕ ಚಿಕಿತ್ಸೆಯನ್ನು ಕೂಡಲೇ ಆರಂಭಿಸಲು ಅನುಕೂಲವಾಗುತ್ತದೆ. ಆದ್ದರಿಂದ ವಿಷದ ಬಾಟಲು/ಮಾತ್ರೆ ಯಾವುದನ್ನು ವ್ಯಕ್ತಿ ಉಪಯೋಗಿಸಿದ್ದನ್ನೋ ಅದನ್ನು ವೈದ್ಯರಿಗೆ ತೋರಿಸಬೇಕು. 

No comments:

Post a Comment