• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಲೂಸಿಯಾ: ‘ಭ್ರಮೆ’ ನಿರಸನ !!

“ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ, ನೀ ದೇಹದೊಳಗೊ, ದೇಹ ನಿನ್ನೊಳಗೋ, ನೀ ಕನಸಿನೊಳಗೋ, ಕನಸು ನಿನ್ನೊಳಗೋ, ನೀ ಅಮಲಿನೊಳಗೋ ಅಮಲು ನಿನ್ನೊಳಗೋ’ ಎಂಬ ರೂಪಕ ಆಧರಿಸಿ ಚಿತ್ರ ನಿರ್ದೇಶಕ ಪವನ್ ಕುಮಾರ್ ‘ಲೂಸಿಯಾ’ ನೀಡಿದ್ದಾರೆ. ನಮ್ಮ ಮುಂದಿರುವ ಪ್ರಶ್ನೆ, ಈ ರೂಪಕವನ್ನು ಇವರು ಸಮರ್ಥವಾಗಿ ವೀಕ್ಷಕರಿಗೆ ಕಟ್ಟಿಕೊಟ್ಟಿದ್ದಾರೆಯೇ…?
ಸುಪ್ತಮನಸ್ಸಿನ ತಾಕಲಾಟಗಳು ಕನಸುಗಳಾಗಿ ಹೊರಹೊಮ್ಮುತ್ತವೆ. ತಮ್ಮ ಮೇಲಿರುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮನಸ್ಸು ಅನುಸರಿಸುವ ತಂತ್ರ ಇದು. ಕಂಡ ಕನಸುಗಳೆಲ್ಲವೂ ನೆನಪಿನಲ್ಲಿ ಉಳಿಯುವುದಿಲ್ಲ ! ಇದೆಲ್ಲ ಸಹಜ ಪ್ರಕ್ರಿಯೆ. ಆದರೆ ಓರ್ವ ವ್ಯಕ್ತಿ ತನಗೆ ಇಷ್ಟವಾದ ವಿಷಯ, ಸನ್ನಿವೇಶಗಳ ಬಗ್ಗೆ ಪ್ರಯತ್ನಪೂರ್ವಕವಾಗಿ ಕಾಣುವ ಕನಸು ಸಹಜ ಕನಸಲ್ಲ. ಇದು ಹಗಲುಗನಸು. ಇದು ಗೀಳಾದರೆ ಮನೋರೋಗವಾಗಿ ಪರಿವರ್ತಿತವಾಗುತ್ತದೆ. ಕೆಲವರು ಮಾದಕ ವಸ್ತುಗಳನ್ನು ಸೇವಿಸಿಯೂ ಹಗಲುಗನಸು ಕಾಣುತ್ತಾರೆ. ಪರ್ಯಾಯ ಪ್ರಪಂಚ ಸೃಷ್ಟಿಸಿಕೊಳ್ಳಲು ಯತ್ನಿಸುತ್ತಾರೆ. ನಿದ್ರೆಯೂ ಅಲ್ಲದ,ಎಚ್ಚರವೂ ಅಲ್ಲದ ಈ ಸ್ಥಿತಿ ಮತ್ತಷ್ಟು ಅಪಾಯಕಾರಿ. 

ಲೂಸಿಯಾ ಸಿನಿಮಾದ ನಿಖಿಲ್, ಮಾದಕ ವಸ್ತು ತೆಗೆದುಕೊಳ್ಳುವ ಮೂಲಕ ಇಂಥ ಪರ್ಯಾಯ ಪ್ರಪಂಚ ಸೃಷ್ಟಿಸಿಕೊಳ್ಳುತ್ತಾ ಹೋಗುತ್ತಾನೆ. ಆತ ನಿಜ ಜೀವನದಲ್ಲಿ ಕಂಡ ಸನ್ನಿವೇಶಗಳು, ಪಾತ್ರಗಳು ಇಲ್ಲಿ ಬದಲಾದ ಪಾತ್ರಗಳು, ಪ್ರಸಂಗಗಳಾಗಿ ರೂಪುಗೊಳ್ಳುತ್ತವೆ. 

ಹುಸಿ ಲೋಕದೊಳಗೆ ಪ್ರವೇಶಿಸಿದ ವ್ಯಕ್ತಿಯ ವಿಕ್ಷೀಪ್ತತೆಯನ್ನು ಕಟ್ಟಿಕೊಡಲು ಮತ್ತು ಏಕೆ ಆತ ಇಂಥ ದಾರುಣ ಸ್ಥಿತಿಗೆ ತಲುಪಿದ ಎಂದು ಹೇಳುವಲ್ಲಿ ಲೂಸಿಯಾ ಸೋತಿದೆ. ಇಂಥ ಕಥಾವಸ್ತುವಿನ ಚಿತ್ರಕಥೆಯನ್ನು ಸಮರ್ಥವಾಗಿ ಕಟ್ಟಲು ಮತ್ತು ಅದನ್ನು ಒಂದು ಶಕ್ತಿಯುತ ಸಿನಿಮಾ ಆಗಿ ಪರಿವರ್ತಿಸಲು ಕೂಡ ನಿರ್ದೇಶಕರು ಸೋತಿದ್ದಾರೆ.
ಆದರೆ ಬಹು ಕ್ಲಿಷ್ಟವಾದ ಅಥವಾ ಕಗ್ಗಂಟು ಎನಿಸುವ ರೂಪಕವನ್ನು ಸಿನಿಮಾ ಮಾಡಲು ನಿರ್ದೇಶಕ ಪವನ್ ಕುಮಾರ್ ಮತ್ತು ತಂಡದವರು ಶ್ರಮ ಪಟ್ಟಿದ್ದಾರೆ. ಇದರಿಂದಾಗಿಯೇ ಚಿತ್ರ ನೋಡಲು ಅರ್ಹವಾಗಿದೆ ಮತ್ತು ಗಂಭೀರ ಪ್ರಯತ್ನ ಎನ್ನುವುದರಲ್ಲಿ ಎರಡು ಮಾತಿಲ್ಲ.

ಆದರೆ ನನ್ನ ತಕರಾರಿರುವುದು ಕನ್ನಡಕ್ಕೆ  ವಿಶಿಷ್ಟವಾದ ಕಥಾ ವಸ್ತುವನ್ನು ‘ಸಮರ್ಥ ಸಿನಿಮಾ’ ಆಗಿ ಕಟ್ಟಿಕೊಡುವುದರಲ್ಲಿ ಪವನ್ ಸ್ವಲ್ಪದರಲ್ಲಿಯೇ ಮಿಸ್ ಆಗಿದೇಕೆ ಎಂಬುದರಲ್ಲಿ. ಇದೇ ಸಿನಿಮಾದ ‘ ನೀ ತೊರೆದ ಗಳಿಗೆಯಲ್ಲಿ’  ಹಾಡಿನ ಸಾಲುಗಳಾದ “ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ, ನೀ ದೇಹದೊಳಗೊ, ದೇಹ ನಿನ್ನೊಳಗೋ, ನೀ ಕನಸಿನೊಳಗೋ, ಕನಸು ನಿನ್ನೊಳಗೋ, ನೀ ಅಮಲಿನೊಳಗೋ ಅಮಲು ನಿನ್ನೊಳಗೋ’ ರೂಪಕವನ್ನು ಚಿತ್ರದ ಅಂತಿಮ ಹಂತದವರೆಗೂ ಯಶಸ್ವಿ ಆಗಿ ತೆಗೆದುಕೊಂಡು ಹೋಗುವ ಅವಕಾಶವಿತ್ತು. ಆದರೆ ಸಿನಿಮಾಕ್ಕೊಂದು ಟೆಂಪೋ ಸಿಗುತ್ತಿದೆ ಎನ್ನುವಷ್ಟರಲ್ಲಿ  ಈ ರೂಪಕ ಒಡೆದುಹೋಗಿದೆ !

ಅತ್ಯುತ್ತಮ ಹಾಡುಗಳು ಮತ್ತು ಚಿತ್ರೀಕರಣ
ಸಿನಿಮಾದ ಪ್ರತಿ ಹಾಡು ಅತ್ಯುತ್ತಮ.  (ಈ ಲಿಂಕ್ ನೋಡಿ:   http://www.varadigara.com/2013/06/blogpost_30.html) ಅದರ ಸಾಹಿತ್ಯ, ಹಾಡುಗಾರಿಕೆ, ಹಿನ್ನೆಲೆ ಸಂಗೀತ, ಭಾವಾಭಿನಯ ಮತ್ತು ಪಿಕ್ಚರೈಜೇಶನ್ ಸೊಗಸಾಗಿವೆ. ಈ ಪ್ರಕ್ರಿಯೆಯ ಪ್ರತಿ ಹಂತದಲ್ಲಿಯೂ ಸಿನಿತಂಡ ಬಹಳ ಪರಿಶ್ರಮಪಟ್ಟಿದೆ. ಆದರೆ ಸಿನಿಮಾದಿಂದ ಪ್ರತ್ಯೇಕವಾಗಿಯೇ ಕಾಣುತ್ತವೆ. ಲೂಸಿಯಾದ ಲಯಕ್ಕೆ, ಬೆಳವಣಿಗೆಯ ಧಾಟಿಗೆ ಇವುಗಳು ಒಗ್ಗಿಲ್ಲ.
ಸಿನಿಮಾ ಮಾಡುವಾಗ ಅನೇಕ ಸಣ್ಣಸಣ್ಣ ಅಂಶಗಳು ಕೂಡ ಮುಖ್ಯ. ‘ನಿದ್ರೆ ಬಾರದೆ ಹೊರಬಂದು ಶೆಕೆಯ ಕಾರಣ ಕೊಡುವಾತ ಪೊಲೀಸ್ ಪ್ರಸಂಗದ ನಂತರ ಎದುರಾಗುವ ಇಬ್ಬರು ವ್ಯಕ್ತಿಗಳಿಗೂ ಇದನ್ನೇ ಹೇಳುತ್ತಾನೆ. ಆದರೆ ಅವರಿಬ್ಬರು ರಸ್ತೆ ಕಸ ಸಾಗಿಸುವ ಗಾಡಿಯಲ್ಲಿದ್ದ ಚಿಂದಿಗೆ ಬೆಂಕಿಕೊಟ್ಟು ಚಳಿ ಕಾಯಿಸುತ್ತಿರುತ್ತಾರೆ. ಇನ್ನೂ ಆಶ್ಚರ್ಯ ಎಂದರೆ ಶೆಕೆ ಎಂದು ಹೇಳುವ ಸಂಭಾಷಣೆಯಲ್ಲಿಯೇ ನನಗೂ ವಸಿ ಬೆಂಕಿ ಕೊಡ್ರಪ್ಪಾ ಎಂಬ ಸಾಲಿರುವುದು !

ಸಿನಿನಾಯಕನ ಆಪ್ತ, ನಾಯಕನಿಗೆ ಎಸಿಪಿ ಬಂದಿದ್ದಾರೆ ಎಂದು ಹೇಳುತ್ತಾನೆ. ನಂತರದ ದೃಶ್ಯಗಳಲ್ಲಿ ಎಸಿಪಿ ಎಂದು ಪರಿಚಿತನಾದ ವ್ಯಕ್ತಿ ಹಿರಿಯ ಐಪಿಎಸ್ ಅಧಿಕಾರಿ ಸಮವಸ್ತ್ರ ಧರಿಸಿರುತ್ತಾನೆ. ಮುಂಬೈನಿಂದ ಬಂದ ಪೊಲೀಸ್ ಅಧಿಕಾರಿಯ ವಿಚಾರಣೆಗೆ ಮೊದಲೇ ಸ್ಥಳೀಯ ಪೊಲೀಸರ ‘ಆತಿಥ್ಯ’ದಿಂದ ಆರೋಪಿ ಕ್ಲೋಸ್ ಆಗಿರುತ್ತಾನೆ. ಇದನ್ನು ‘ಆತಿಥ್ಯ’ ನೀಡಿದ ಸಬ್ ಇನ್ಸ್ಪೆಕ್ಟರ್ ಸೂಚ್ಯವಾಗಿ ಹೇಳುತ್ತಾನೆ. ಆದರೆ ನಂತರದ ಸನಿವೇಶದಲ್ಲಿ ಮುಂಬೈಯ ಅಧಿಕಾರಿ, ಸತ್ತ ಆರೋಪಿ ಕೂರಿಸಿಕೊಂಡು ಹೇಳಿಕೆ ಪಡೆಯುತ್ತಾನೆ !

ಕೊನೆ ಹಂತದಲ್ಲಿ ಪ್ರಕರಣದ ವಿಚಾರಣಾಧಿಕಾರಿ, ಮುಂಬೈ ಅಧಿಕಾರಿಗೆ ಪ್ರಕರಣ ಭೇದಿಸಲಾಗಿದೆ. ನಾಳೆ ನೀವು ವಾಪ್ಪಸಾಗಬಹುದು ಎನ್ನುತ್ತಾನೆ. ಆದರೆ ಇಡೀ ಕಥೆಯನ್ನ ನೋಡುತ್ತಾ ಕುಳಿತ ವೀಕ್ಷಕನಿಗೆ ಅಧಿಕಾರಿ ಪತ್ತೆ ಹಚ್ಚಿದಾದರೂ ಏನು ಎಂಬುದು ತಿಳಿಯುವುದಿಲ್ಲ. ಏಕೆಂದರೆ ಆತ ‘ಲೂಸಿಯಾ’ ಒಂದು ಕಿಂಗ್ ಪಿನ್ ಎಂದೇ ಮನಗಂಡಿರುವುದಿಲ್ಲ. ಇಂಥ ಇನ್ನೂ ಕೆಲವು ಅಂಶಗಳಿವೆ.
ಚಿತ್ರದ ಸಂಕಲನ ಇನ್ನೂ ಬಿಗಿಯಾಗಬೇಕಿತ್ತು.  ಹಾಡುಗಳಿಗೆ ನೀಡಿದ ಸಂಗೀತದಷ್ಟೆ ಪರಿಣಾಮಕಾರಿಯಾದ ಹಿನ್ನೆಲೆ ಸಂಗೀತ ಇಡೀ ಚಿತ್ರಕ್ಕೂ ದಕ್ಕಬೇಕಿತ್ತು. ಛಾಯಾಗ್ರಹಣ ಕುರಿತಂತೆಯೂ ಇದೇ ಮಾತು ಹೇಳಬಹುದು. ಇವೆಲ್ಲದರ ಹೊರತಾಗಿಯೂ ಪವನ್ ಹೊಸ ಪ್ರಯತ್ನ, ಹಾಡುಗಳು, ನೀನಾಸಂ ಸತೀಶ್, ಶ್ರುತಿ ಹರಿಹರನ್, ಅಚ್ಯುತ್ ಕುಮಾರ್ ನಟನೆ, ಕಾರಣಕ್ಕಾದರೂ ಒಮ್ಮೆ ಲೂಸಿಯಾ ನೋಡಬೇಕು.

7 comments:

 1. ನನಗೂ ಹಾಗೆ ಅನ್ನಿಸ್ತು.
  ಸಾಮಾನ್ಯ ಪ್ರೆಕ್ಷಕಳಾದ ನನಗೆ ಎರಡು ಗಂಟೆ ಸಿನೆಮಾ ನೋಡಲು ಸ್ವಲ್ಪ ಕಷ್ಟವಾಗಿದ್ದು ನಿಜ.

  ReplyDelete
 2. ನಾನು ನೀವು ಬರೆದ ಕೆಲವು ದೃಶ್ಯಗಳನ್ನು ಅರ್ಥೈಸಿಕೊಂಡಿದ್ದು ಹೀಗೆ:

  ಆರೋಪಿ ಸತ್ತಿರುವುದಿಲ್ಲ. ಪೊಲೀಸ್ ಅಧಿಕಾರಿ ಇನ್ನೊಬ್ಬ ಆರೋಪಿಗೆ ಭಯ ಹುಟ್ಟಿಸಲು ಮೊದಲನೇ ಆರೋಪಿಗೆ ಜ್ಞಾನ ತಪ್ಪಿದಾಗ ಅವನು "ಔಟ್" ಎಂದು ಹೇಳುತ್ತಾನೆ.

  ಪೋಲಿಸರು ನಾಯಕನು ಕೋಮಾಗೆ ಹೋಗಲು ಕಾರಣವೇನೆಂದು ತಿಳಿಯಲು ತನಿಖೆ ನಡೆಸುತ್ತಿರುತ್ತಾರೆ. ಅವನೇ ಬಿದ್ದನೋ, ನಾಯಕಿಯೂ ಅವನನ್ನು ತಳ್ಳಿ ಕೊಲೆಗೆ ಯತ್ನಿಸಿದಳೊ ಎಂದು ಅವರಿಗೆ ತಿಳಿದಿರುವುದಿಲ್ಲ. ಯಾವಾಗ ನಾಯಕಿ ಆಸ್ಪತ್ರೆಯಲ್ಲಿ ನಾಯಕನ ಸಾವಿಗೆ ಯತ್ನಿಸಿದಳೊ ಆಗ ತನಿಖೆ ಮುಗಿಯಿತು ಎಂದು ಅಧಿಕಾರಿ ತಿಳಿಯುತ್ತಾನೆ. ಆದರೆ ಮುಂಬೈ ಅಧಿಕಾರಿ ಈ ಕೋಮಾ ಘಟನೆಗೂ ಲೂಸಿಯಾಗೋ ಏನೋ ಸಂಬಂಧವಿದೆ ಎಂದು ತನಿಖೆ ಮುಂದುವರೆಸುತ್ತಾನೆ.
  -ರಾಮಕೃಷ್ಣ

  ReplyDelete
 3. ಜನಸಾಮಾನ್ಯರ ನಡುವೆ, ಸಿನಿಮಾ ಪೊಲೀಸ್ ಭಾಷೆಯಲ್ಲಿ ಆಸಾಮಿ ಔಟ್ (ಕ್ರೀಡೆಗಳ ಸಂದರ್ಭ ಹೊರತುಪಡಿಸಿ) ಆದ ಅಂದ್ರೆ ಅವನ ಕಥೆ ಮುಗಿದಿದೆ, ಜೀವ ಹೋಗಿದೆ ಅಂತನೇ ಅರ್ಥ... ಸ್ಥಳೀಯ ಪೊಲೀಸ್ ಅಧಿಕಾರಿ ಏನು ಪತ್ತೆ ಹಚ್ಚಿ ತನಿಖೆ ಮುಗಿಯಿತು ಎಂದು ಘೋಷಿಸುತ್ತಾನೆ... ?

  ReplyDelete
  Replies
  1. ಇನ್ನೊಬ್ಬ ಆರೋಪಿಗೆ ಭಯ ಹುಟ್ಟಲಿ ಅಂತ ಅವನು ಔಟ್ ಅಂತ ಪೊಲೀಸ್ ಹೇಳಿರೋದು ತುಂಬಾ ಸ್ಪಷ್ಟವಾಗೇ ಇದೆ... ನಾಯಕಿ ರೆಡ್ ಹ್ಯಾಂಡಾಗೆ cctv ಲಿ ನಿಕ್ಕಿ ನಾ ಕೊಲೆ ಮಾಡೋಕ್ ಟ್ರೈ ಮಾಡಿರೋದು ಮೀಡಿಯಾದಲ್ಲಿ ಪಬ್ಲಿಶ್ ಆಗಿರೋದ್ರಿಂದ ಕೇಸ್ನ ಮುಂದ್ವರ್ಸೋದ್ರಲ್ಲಿ ಹುರುಳಿಲ್ಲ ಅಂತ ಅರ್ಥೈಸ್ಕೊಬಹುದಲ್ವೆ?

   Delete
 4. ಪೋಲಿಸ್ ಅಧಿಕಾರಿ ನಾಯಕಿಗೆ ನೀನು ಎರಡು ಸರ್ತಿ ಕೊಲೆ ಪ್ರಯತ್ನ ಮಾಡಿದೀಯ ಅಂತ ಕೇಳ್ತಾನೆ. That means first time she pushed him from the terrace and second time by removing ventilator. When she says yes, he declares that the case is over.

  ಇನ್ನೂ ಆಶ್ಚರ್ಯ ಎಂದರೆ ಶೆಕೆ ಎಂದು ಹೇಳುವ ಸಂಭಾಷಣೆಯಲ್ಲಿಯೇ ನನಗೂ ವಸಿ ಬೆಂಕಿ ಕೊಡ್ರಪ್ಪಾ ಎಂಬ ಸಾಲಿರುವುದು - He says "ನನ್ ಜೀವಕ್ಕೂ ಒಸಿ ಬೆಂಕಿ ಹಾಕ್ರಪ್ಪ", what I felt was he was frustrated with his inability to sleep, not because he was feeling cold!

  ReplyDelete
 5. @Anonymous,,ಇನ್ನೊಬ್ಬ ಆರೋಪಿಗೆ ಭಯ ಹುಟ್ಟಲಿ ಅಂತ ಅವನು ಔಟ್ ಅಂತ ಪೊಲೀಸ್ ಹೇಳಿರೋದು ತುಂಬಾ ಸ್ಪಷ್ಟವಾಗೇ ಇದೆ ಅನ್ನೋದು ಸರಿಯಲ್ಲ. ಕಿರಿಯ ಪೊಲೀಸ್ ಅಧಿಕಾರಿ, ಆರೋಪಿ ಜುಟ್ಟಿಡಿದು ತಲೆ ಎತ್ತಿ ಸ್ಪಂದನೆ ಸಿಗದೇ ಔಟ್ ಎಂದು ಹೇಳುತ್ತಾನೆ. ಇದರ ಗ್ರಹಿಕೆ ಬಗ್ಗೆ ಗೊಂದಲ ಅನಗತ್ಯ..

  ReplyDelete