• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

‘ತಾಯಿ ನೆಲದಲ್ಲಿ ಪ್ರಶಸ್ತಿ ಬಾರದ ಕೊರಗಿದೆ’


ಎರಡು ದಶಕದ ಹಿಂದೆ ಕನ್ನಡ ಚಲನಚಿತ್ರ ಬೆಳ್ಳಿಪರದೆಯಲ್ಲಿ ಮಿಂಚಿದ ನಾಯಕಿಯರಲ್ಲಿ ಭವ್ಯ ಪ್ರಮುಖರು. ಅಭಿನಯಿಸಿದ ಪಾತ್ರಗಳಿಗೆ ನ್ಯಾಯ ಒದಗಿಸಿದವರು. ಈ ಕಾರಣದಿಂದಲೇ ಚಿತ್ರ ವೀಕ್ಷಕರ ನೆನಪಿನಲ್ಲಿ ಇಂದಿಗೂ ಇವರ ನೆನಪು ಹಸಿರಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಆಗಸ್ಟ್ 31, 2013ರಂದು ಬೆಂಗಳೂರಿನಲ್ಲಿ ಆಯೋಜಿಸಿದ ‘ಬೆಳ್ಳಿಹೆಜ್ಜೆ’ಯಲ್ಲಿ ಭವ್ಯ ತಮ್ಮ ಬೆಳ್ಳಿಹೆಜ್ಜೆಗಳನ್ನು ಮೆಲುಕು ಹಾಕಿದರು.
ಬೆಂಗಳೂರಿನ ಮಧ್ಯಮ ವರ್ಗದ ಕಡು ಸಂಪ್ರದಾಯಸ್ಥ ಕುಟುಂಬದ ಭಾರತೀದೇವಿ ಹೆಸರಿನ ನಾನು ಭವ್ಯಳಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದು ಆಕಸ್ಮಿಕ. ಸಿನಿಮಾಗಳನ್ನು ನೋಡಲು ಸಹ ಅವಕಾಶ ಇರಲಿಲ್ಲ. ತಾಯಿಗೆ ತಿಳಿಯದಂತೆ ಅಪರೂಪಕ್ಕೆ ಸಿನಿಮಾಗಳನ್ನು ನೋಡುತ್ತಿದೆ. ಅಭಿನಯಿಸಬೇಕಾದ ಮಹತ್ವಾಕಾಂಕ್ಷೆ ನನಗಿತ್ತು. ಕುಟುಂಬದ ಆಪ್ತರೊಬ್ಬರ ಮೂಲಕ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಅವರ ಪರಿಚಯವಾಯಿತು. ಸ್ಕ್ರೀನ್ ಟೆಸ್ಟ್ ಮಾಡಿದರು. ಕೆಲವು ಸಂಭಾಷಣೆಗಳನ್ನು ಹೇಳಲು ತಿಳಿಸಿದರು. ಹೇಳಿದ್ದನ್ನು ಚೆನ್ನಾಗಿ ಗ್ರಹಿಸಿ ಒಪ್ಪಿಸುವ ನನ್ನ ಅಭಿನಯ ಅವರಿಗೆ ಮೆಚ್ಚುಗೆಯಾಯಿತು. ಇದೇ ಕಾರಣದಿಂದ ಅವರ ಮಗ ಮುರುಳಿ ನಾಯಕರಾಗಿದ್ದ ‘ಪ್ರೇಮಪರ್ವ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ದೊರೆಯಿತು. ಈ ಚಿತ್ರ ಯಶಸ್ಸು ಕಂಡ ನಂತರ ಕನ್ನಡ ಚಲನಚಿತ್ರರಂಗದಲ್ಲಿ ನಾನು ಹಿಂದಿರುಗಿ ನೋಡಲಿಲ್ಲ.ಈ ಸಿನಿಮಾಕ್ಕೂ ಮುನ್ನ ಒಂದು ಕನ್ನಡ ಸಿನಿಮಾದಲ್ಲಿ ನಟಿಸಿದ್ದೆನಾದರೂ ಆ ಚಿತ್ರ ಪೂರ್ಣಗೊಳ್ಳಲಿಲ್ಲ. ಈ ಕಾರಣದಿಂದ ‘ಪ್ರೇಮಪರ್ವವೇ ನನ್ನ ಮೊದಲ ಚಿತ್ರ ಎಂಬ ಭಾವನೆ ಇದೆ.
ಸಿದ್ದಲಿಂಗಯ್ಯ ಅವರ ನಿರ್ದೇಶನದಲ್ಲಿ ಅಭಿನಯಿಸುವ ಅವಕಾಶ ದೊರೆತಿದ್ದರಿಂದ ಬಹುಬೇಗನೆ ನಟನೆಯ ಆಯಾಮಗಳನ್ನು ಅರಿಯುವಂತಾಯಿತು. ಬಾಡಿ ಲಾಂಗ್ವೇಜ್, ಸಂಭಾಷಣೆ ಹೇಳುವ ರೀತಿ, ಸಹನಟರು ಸಂಭಾಷಣೆ ಹೆಳುವಾಗ ನಮ್ಮ ಪ್ರತಿಕ್ರಿಯೆ ಹೇಗಿರಬೇಕು ಎಂಬುದನ್ನೆಲ್ಲ ಕಲಿತೆ. ಪ್ರೇಮಪರ್ವದ ಇಡೀ ತಂಡ ವಿಶೇಷ ಪರಿಶ್ರಮ ಪಟ್ಟಿದೆ.
ಚಿತ್ರರಂಗದ ಹಾದಿಯಲ್ಲಿ ನಡೆಯುತ್ತಾ ಹೋದಂತೆ ಕಹಿ ಘಟನೆಗಳು ಎದುರಾಗಿವೆ. ಹಿಂದಿ ಚಲನಚಿತ್ರದ ರೀಮೇಕ್ ‘ನೀ ಬರೆದ ಕಾದಂಬರಿ’ ಸಿನಿಮಾಕ್ಕೆ ನನ್ನನ್ನು ಚಿತ್ರದ ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ನಾಯಕಿಯಾಗಿ ಆಯ್ಕೆ ಮಾಡಿದಾಗ ಕೆಲವರು ವಿರೋಧಿಸಿದರು. ಆದರೂ ನಿರ್ದೇಶಕರು ನನ್ನನ್ನೇ ಆಯ್ಕೆ ಮಾಡಿದರು. ಚಿತ್ರ ಬಿಡುಗಡೆ ನಂತರ ಉತ್ತಮವಾಗಿ ಅಭಿನಯಿಸಿದ್ದೇನೆ ಎಂಬ ಪ್ರಶಂಸೆಯೂ ದೊರೆಯಿತು.
ನಾನು ಅಭಿನಯಿಸಿರುವ ಎಲ್ಲ ಪಾತ್ರಗಳೂ ನನಗೆ ಮೆಚ್ಚುಗೆಯಾಗಿವೆ. ಆದರೆ ಪ್ರೇಮಪರ್ವ, ನೀ ಬರೆದ ಕಾದಂಬರಿ ಮತ್ತು ಕೃಷ್ಣಾ ನೀ ಬೇಗನೆ ಬಾರೋ ಸಿನಿಮಾದ ಪಾತ್ರಗಳು ವಿಶೇಷ ಮೆಚ್ಚುಗೆಗೆ ಪಾತ್ರವಾಗಿವೆ. ಇಂಥ ಪಾತ್ರಗಳಿಗೆ ನನ್ನ ಮೇಲೆ ಭರವಸೆ ಇಟ್ಟು ಅವಕಾಶ ನೀಡಿದ ನಿರ್ದೇಶಕರುಗಳಿಗೆ ನಾನು ಕೃತಜ್ಞಳಾಗಿದ್ದೇನೆ.
ವಿಷ್ಣುವರ್ಧನ್, ಶಂಕರನಾಗ್, ಅನಂತನಾಗ್, ಅಂಬರೀಷ್ ಮತ್ತು ರವಿಚಂದ್ರನ್ ಮತ್ತಿತರ ಪ್ರಮುಖ ನಾಯಕರುಗಳೊಂದಿಗೆ ನಟಿಸಿದ್ದೇನೆ, ಸಹ ಕಲಾವಿದರಿಗೆ ಇವರುಗಳು ನೀಡುವ ಗೌರವ, ಸಹಕಾರ ಅಪಾರ. ವಿಷ್ಣುವರ್ಧನ್ ಅವರಂಥ ಮೇರು ನಟರೊಂದಿಗೆ ಅಭಿನಯಿಸುವಾಗ ಆತಂಕವಾಗಿತ್ತು. ಇವರ ಅಭಿನಯದ ರೀತಿಯಿಂದಲೂ ನಾನು ಕಲಿತ್ತಿದ್ದೇನೆ.
ಬಾಲ್ಯದಲ್ಲಿ ನಾನು ಶಂಕರನಾಗ್ ಅಭಿಮಾನಿ. ಮುಂದೆ ಅವರೊಂದಿಗೆ ನಟಿಸುವ ಸದವಕಾಶ ದೊರೆಯಿತು. ಚಿತ್ರದ ಯಾವ ಕಾರ್ಯವನ್ನೂ ಮಾಡಲು ಅವರು ಸಂಕೋಚ ಪಡುತ್ತಿರಲಿಲ್ಲ. ಇಡೀ ತಂಡದೊಂದಿಗೆ ಬೆರೆಯುತ್ತಿದ್ದರು. ಅನಂತನಾಗ್ ಅವರು ಮೂಡಿ. ಅಭಿನಯಿಸುವ ಸಂದರ್ಭದಲ್ಲಿ ಸಹನಟರ ಅಳುಕು ದೂರ ಮಾಡುತ್ತಿದ್ದರು. ಅಂಬರೀಷ್ ಅವರದು ಸ್ನೇಹಮಯ ವ್ಯಕ್ತಿತ್ವ. ಚಿತ್ರಗಳನ್ನು ನಿರ್ಮಿಸುವಾಗ ಗುಣಮಟ್ಟದ ವಿಷಯದಲ್ಲಿ ಇವರು ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಇಂದಿಗೂ ನನಗಿರುವ ಕೊರಗೆಂದರೆ ಮೇರುನಟ ರಾಜ್ ಕುಮಾರ್ ಅವರೊಂದಿಗೆ ಅಭಿನಯಿಸಲು ಅವಕಾಶ ಅವಕಾಶ ದೊರೆಯಲಿಲ್ಲ ಎನ್ನುವುದೇ ಆಗಿದೆ.
ಮಹಿಳಾ ನಾಯಕಿಯರಲ್ಲಿ ಮಿನುಗುತಾರೆ ಕಲ್ಪನಾ, ಅಭಿನಯ ಶಾರದೆ ಜಯಂತಿ ಅವರ ಅಭಿನಯವನ್ನು ವಿಶೇಷವಾಗಿ ಮೆಚ್ಚುತ್ತೇನೆ.
ನನಗೆ ಅವಕಾಶ ನೀಡಿದ ಎಲ್ಲ ನಿರ್ದೇಶಕರ ಶೈಲಿಯನ್ನು ಮೆಚ್ಚುತ್ತೇನೆ. ಆದರೆ ಸಿದ್ದಲಿಂಗಯ್ಯ, ಪುಟ್ಟಣ ಕಣಗಾಲ್ ಮತ್ತು ಭಾರ್ಗವ ಅವರ ನಿರ್ದೇಶನದ ಶೈಲಿ ಹೆಚ್ಚು ಇಷ್ಟವಾಗಿದೆ.
ಕಲಾತ್ಮಕ ಚಿತ್ರಗಳಲ್ಲಿ ನಟಿಸಬೇಕು ಎಂಬ ಅಪೇಕ್ಷೆ ಇದೆ. ಅದರಲ್ಲಿಯೂ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ಅಭಿನಯಿಸಬೇಕು. ಈ ಅವಕಾಶ ಯಾವಾಗ ಒದಗಿ ಬರುವುದೋ ಗೊತ್ತಿಲ್ಲ. ಪ್ರೇಕ್ಷಕರ ಆದರ-ಅಭಿಮಾನಗಳಿಗೆ ಪಾತ್ರವಾದ ಸಿನಿಮಾಗಳು, ಪಾತ್ರಗಳಲ್ಲಿ ನಟಿಸಿದ್ದರೂ ರಾಜ್ಯ ಪ್ರಶಸ್ತಿಗೆ ಗುರುತಿಸಲಿಲ್ಲ ಎಂಬ ಕೊರಗಿದೆ. ತಮಿಳು, ತೆಲುಗು ಚಿತ್ರಗಳ ಅಭಿನಯಕ್ಕೆ ರಾಜ್ಯ ಪ್ರಶಸ್ತಿಗಳು ಬಂದಿದ್ದರೂ ತಾಯಿ ನೆಲದ ಚಿತ್ರರಂಗದಿಂದ ಈ ಪ್ರಶಸ್ತಿ ಬರಬೇಕಿತ್ತು ಎಂಬ ಅನಿಸಿಕೆ ಇದೆ. ಈ ಅಂಶಗಳನ್ನು ಹೊರತುಪಡಿಸಿದರೆ ಚಿತ್ರರಂಗದಲ್ಲಿ ನನಗೆ ಯಾವ ಕೊರತೆ- ಕೊರಗು ಕಾಡಿಲ್ಲ.
ಉತ್ತಮ ಚಿತ್ರಗಳನ್ನು ನಿರ್ಮಿಸಿ: ಎರಡು ದಶಕದ ಹಿಂದಿಗೆ ಹೋಲಿಸಿದರೆ ಇಂದು ಕನ್ನಡ ಚಿತ್ರರಂಗದಲ್ಲಿ ಗುಣಮಟ್ಟದ ಚಿತ್ರಗಳು ತುಂಬ ಕಡಿಮೆ ಆಗಿವೆ. ಕಥೆಗಳಿಗೆ ಒತ್ತು ನೀಡಬೇಕು. ಹೆಸರುಗಳೂ ಸದಭಿರುಚಿಯಿಂದ ಕೂಡಿರಬೇಕು. ಹಾಡುಗಳು ನೆನಪಿನಲ್ಲಿ ಉಳಿಯುವಂತಿರಬೇಕು.
ವೈಯಕ್ತಿಕ ಜೀವನ: 1993ರಲ್ಲಿ ವಿವಾಹವಾಯಿತು. ನಾಲ್ಕು ಮಕ್ಕಳ ತಾಯಿ. ಕುಟುಂಬ ಜೀವನದಲ್ಲಿಯೂ ಸಂತೃಪ್ತೆ. ಮದುವೆ ನಂತರ ಸುದೀರ್ಘ ಸಮಯ ಚಿತ್ರರಂಗದಿಂದ ದೂರವಿದೆ. ನಾಗತೀಹಳ್ಳಿ ಚಂದ್ರಶೇಖರ್ ಅವರು ಮತ್ತೆ ಅವರ ಸಿನಿಮಾದಲ್ಲಿ ತಾಯಿ ಪಾತ್ರದ ಅವಕಾಶ ನೀಡಿದರು. ಇದರಿಂದ ಚಿತ್ರರಂಗಕ್ಕೆ ರೀ ಎಂಟ್ರಿ ಆಯಿತು. ವಯಸ್ಸಿಗೆ ತಕ್ಕ ಪಾತ್ರಗಳನ್ನು ಮಾಡುವುದು ಸೂಕ್ತ ಎಂಬುದು ನನ್ನ ನಿಲುವು. ಈ ಕಾರಣದಿಂದಲೇ ತಾಯಿ ಪಾತ್ರಗಳನ್ನು ಮಾಡಲು ಯಾವ ಹಿಂಜರಿಕೆಯೂ ಇಲ್ಲ. ಬಂದ ಪಾತ್ರಗಳಿಗೆ ನ್ಯಾಯ ಒದಗಿಸುವುದಷ್ಟೆ ನನ್ನ ಕರ್ತವ್ಯ.

1 comment:

 1. ಭವ್ಯ ಎಂದರೆ ನೀ ಬರೆದ ಕಾದಂಬರಿ, ಕೃಷ್ಣ ನೀ ಬೇಗನೆ ಬಾರೋ ಚಿತ್ರವೇ ನೆನಪಾಗುತ್ತದೆ... ಒಂದೊಳ್ಳೆ ಅಭಿನೇತ್ರಿ... ಭವ್ಯ ಅವರ ತವರು ಮನೆ ನಮ್ಮ ಮನೆ ಹತ್ತಿರವೇ ಇರುವುದು...

  ReplyDelete