• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಅನೈತಿಕ ಮೈತ್ರಿಗೆ ಜನತೆ ವಿರೋಧ

ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ ಫಲಿತಾಂಶ ಜನತೆ, ಅನೈತಿಕ ಮೈತ್ರಿ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ. ಇದಲ್ಲದೆ ಅಪ್ರಬುಧ್ಧ, ಸೇಡಿನ ರಾಜಕೀಯವನ್ನೂ ಅವರು ಇಚ್ಛಿಸುವುದಿಲ್ಲ ಎಂಬುದೂ ಸಾಬೀತಾಗಿದೆ.

ರಾಜ್ಯದ ಜನತೆ 2004ರಲ್ಲಿ ಯಾವ ರಾಜಕೀಯ ಪಕ್ಷಗಳಿಗೂ ಬಹುಮತ ನೀಡಿರಲಿಲ್ಲ. ಕಾಂಗ್ರಸ್ 65, ಬಿಜೆಪಿ 78 ಮತ್ತು ಜೆಡಿಎಸ್ 58 ಸ್ಥಾನಗಳನ್ನು ಪಡೆದಿದ್ದವು. ಸ್ಪಷ್ಟ ಎದುರಾಳಿಗಾದ ಕಾಂಗ್ರೆಸ್, ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಸಮಿಶ್ರ ಸರ್ಕಾರದ ಗಾಲಿಗಳು ಅಲುಗಾಡುತ್ತಾ ಸಾಗುತ್ತಿರುವಾಗಲೆ ಕಾಂಗ್ರೆಸ್ ಗಾಲಿಯನ್ನು ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಬಣ ಕಿತ್ತು ಹಾಕಿ ಆ ಸ್ಥಾನದಲ್ಲಿ ಬಿಜೆಪಿಯನ್ನು ತಂದು ಕೂರಿಸಿದ್ದರ ಫಲಿತಾಂಶ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ.
ಆ ಸಂದರ್ಭದಲ್ಲಿ ಇದು ಎಚ್.ಡಿ. ದೇವೇಗೌಡರು ಅನೈತಿಕ ಹೊಂದಾಣಿಕೆ ಎಂದು  ಹೇಳುವುದರ ಜೊತೆಗೆ ಮಾಧ್ಯಮಗಳ ಮುಂದೆ ಗೋಳಾಡಿದ್ದು ಇನ್ನೂ ಸಾರ್ವಜನಿಕರ ನೆನಪಿನಲ್ಲಿ ಹಸಿರಾಗಿದೆ. ಹೀಗಿರುವಾಗ ಜೆಡಿಎಸ್ ಸಂಸದರು ರಾಜಿನಾಮೆ ಕೊಟ್ಟ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆ ಸಂದರ್ಭದಲ್ಲಿ ಅನೈತಿಕ ಮೈತ್ರಿ ಮತ್ತೆ ಜಾರಿಗೆ ಬರಬಹುದೆಂದು ಸಾಮಾನ್ಯ ಜನತೆ ಭಾವಿಸಿರಲಿಲ್ಲ. ಅದರಲ್ಲಿಯೂ ಮುಸ್ಲಿಮ್ ಮತದಾರರು ಖಂಡಿತ ಎಣಿಸಿರಲಿಲ್ಲ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಈ ನಿರ್ಧಾರ ತಳೆದಾಗ ಅದನ್ನು ವಿರೋಧಿಸುವ ಗೋಜಿಗೂ ದೇವೇಗೌಡರು ಹೋಗಲಿಲ್ಲ. ಇದರ ಶಾಕ್ ಆಗಿದ್ದು ಜೆಡಿಎಸ್ ಮುಸ್ಲಿಮ್ ಸಮುದಾಯದ ನಾಯಕರಿಗೆ.( ರಾಮನಗರ ಜಿಲ್ಲೆಯಲ್ಲಿ ಮುಸ್ಲಿಮ್ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ) ಚುನಾವಣಾ ಪ್ರಚಾರ ಅಂತಿಮಘಟ್ಟದಲ್ಲಿದ್ದ ಸಂದರ್ಭದಲ್ಲಿ ಬಿಜೆಪಿ ಪ್ರಬಲ ನಾಯಕ, ಮಾಜಿ ಉಪ ಮುಖ್ಯಮಂತ್ರಿಯೂ ಆದ ಆರ್. ಅಶೋಕ್ ಅವರು ಜೆಡಿಎಸ್ ಪ್ರಚಾರ ರಥ ಏರಿದ್ದೂ ಈ ಸಮುದಾಯಕ್ಕೆ ದಿಗ್ಬ್ರಮೆ ಉಂಟು ಮಾಡಿದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ.
 ಇಷ್ಟರಿಂದಲೆ ಫಲಿತಾಂಶ ನಿರ್ಧಾರವಾಗಿಲ್ಲ. ಇದಕ್ಕೆ ಇನ್ನೂ ಒಂದಷ್ಟು ಕಾರಣಗಳಿವೆ. ಹಿಂದುಳಿದ ಸಮುದಾಯದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಕೆಲವು ದಿನಗಳ ಅವಧಿಗಷ್ಟೆ ಕುಮಾರಸ್ವಾಮಿ ಮೌನವಾಗಿದ್ದರು. ನಂತರ ಇವರು ವಿನಃ ಕಾರಣ ರಾಜ್ಯ ಸರ್ಕಾರದ ಒಕ್ಕಲಿಗ ಅಧಿಕಾರಿಗಳನ್ನು ಆಯಕಟ್ಟಿನ ಜಾಗಗಳಿಂದ ಎತ್ತಂಗಡಿ ಮಾಡಲಾಗುತ್ತಿದೆ ಎಂದು ಹೇಳಿದ್ದು ಹಿಂದುಳಿದ ವರ್ಗಗಳಿಗಾದ ಶಾಕ್.
ಸಿದ್ದರಾಮಯ್ಯ ಅವರನ್ನ ರಾಜ್ಯದ ಹಿಂದುಳಿದ ಜಾತಿಗಳ ಸಮುದಾಯಗಳು ತಮ್ಮ ನಾಯಕ ಎಂದು ಒಪ್ಪಿಕೊಂಡಿವೆ. ರಾಜ್ಯದ ಮೂರನೆ ಪ್ರಬಲ ಕುರುಬ ಸಮುದಾಯದ ಮುಖಂಡರೂ ಆಗಿರುವ ಸಿದ್ದರಾಮಯ್ಯ ಅವರಿಗೆ ಈ ಎಲ್ಲ ಕಾರಣಗಳಿಂದ 1995-96ರ ಅವಧಿಯಲ್ಲಿ ದೇವೇಗೌಡರಿಂದ ತೆರವಾಗಿದ್ದ ಮುಖ್ಯಮಂತ್ರಿ ಗಾದಿಯೂ ಒಲಿಯುವುದರಲ್ಲಿತ್ತು. ಅಂದು ಜನತಾ ದಳದ 87 ಶಾಸಕರೂ ಇದಕ್ಕೆ ಒಪ್ಪಿಕೊಂಡಿದ್ದರು. ಆದರೂ ಮುಖ್ಯಮಂತ್ರಿ ಸ್ಥಾನ ದೊರೆಯಲಿಲ್ಲ.
2004ರಲ್ಲಿ ಮತ್ತೆ ಈ ಅವಕಾಶ ದೊರೆತಾಗ ದೇವೇಗೌಡ ಮತ್ತು ಕುಮಾರಸ್ವಾಮಿ ಇದನ್ನು ತಪ್ಪಿಸಿದರು ಎಂದು ಸಾರ್ವಜನಿಕ ಸಭೆಗಳಲ್ಲಿ ಸ್ವತಃ ಸಿದ್ದರಾಮಯ್ಯ ಹೇಳಿದ್ದಾರೆ. ಇದನ್ನು 2013ರ ಜುಲೈನಲ್ಲಿ ನಡೆದ ವಿಧಾನಸಭೆ ಕಲಾಪದಲ್ಲಿ ಕುಮಾರಸ್ವಾಮಿ ಸ್ವತಃ ಇದನ್ನು ಒಪ್ಪಿಕೊಂಡಿದ್ದು ನಕಾರಾತ್ಮಕ ಅಂಶವಾಗಿ ಪರಿವರ್ತನೆಯಾಯಿತು.
ಈ ನಂತರ ಸಾರ್ವಜನಿಕ ವೇದಿಕೆಗಳಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಸತತವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸತೊಡಗಿದ್ದು ಕೂಡ ನನ್ನ ಪ್ರಕಾರ ಹಿಂದುಳಿದ ವರ್ಗಗಳಿಗೆ ದೊಡ್ಡ ಇರಿಸು-ಮುರಿಸು
ಆದರೆ ಕಾಂಗ್ರೆಸ್ ಗೆಲುವಿಗೆ ಇನ್ನೂ ಕಾರಣಗಳಿವೆ. ರಾಮನಗರ ಕ್ಷೇತ್ರದಲ್ಲಿ ಆರ್ಥಿಕ ದುರ್ಬಲರು ಗಣನೀಯ ಪ್ರಮಾಣದಲ್ಲಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದೂ ಮತಗಳಿಕೆಯಲ್ಲಿ ಸಕಾರಾತ್ಮಕ ಅಂಶ. ನಂತರ ಶಾಲೆಗಳಲ್ಲಿ ಜಾರಿಗೆ ತಂದ ಕ್ಷೀರಭಾಗ್ಯ ಯೋಜನೆ, ಹೈನುಗಾರರಿಗೆ ಸಹಕಾರ ಸಂಘಗಳಲ್ಲಿ ದೊರೆಯುತ್ತಿದ್ದ ಮೊತ್ತ ಹೆಚ್ಚಳ ಮಾಡಿದ್ದೂ ಕಾರಣವಾಗುವ ಅಂಶಗಳು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇಕಡ 70ರಷ್ಟು ಒಕ್ಕಲಿಗ ಮತದಾರರಿದ್ದಾರೆ. ಇಲ್ಲಿರುವ ಜೆಡಿಎಸ್ ಶಾಸಕರ ಸಂಖ್ಯೆಯೂ ಹೆಚ್ಚು. ಹೀಗಿದ್ದೂ ಜೆಡಿಎಸ್ ತನಗೆ ಬರಬೇಕಿದ್ದ ಗಣನೀಯ ಮತಗಳನ್ನು ಕಳೆದುಕೊಳ್ಳುವಂತೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಆ ಪಕ್ಷದ ನಾಯಕರು ನಾಲಿಗೆಯನ್ನು ಸಡಿಲ ಬಿಟ್ಟ ಅಂಶ.
ಮಂಡ್ಯ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶ್ರೀನಿವಾಸ್ ಅವರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಮ್ಯಾ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದೂ ನಂತರ ಆರಂಭದಲ್ಲಿ ಇದನ್ನು ಅನುಮೋದಿಸುವಂತೆ ಕುಮಾರಸ್ವಾಮಿ ಅವರೂ ಮಾತನಾಡಿದ್ದು ನಕಾರಾತ್ಮಕ ಪರಿಣಾಮ ಬೀರಿತು.
ಮಂಡ್ಯದ ಜನತೆಯಲ್ಲಿ ರಾಜಕೀಯ ಪ್ರಜ್ಞೆ ಹೆಚ್ಚಿದೆ. ಇವರು ಅಪ್ರಬುದ್ಧ ರಾಜಕೀಯ ಸಹಿಸಲಾರರು ಎಂಬುದಕ್ಕೆ ಫಲಿತಾಂಶ ಸಾಕ್ಷಿಯಾಗಿದೆ. ಇದರ ಜೊತೆಗೆ ಕ್ಷೇತ್ರದಲ್ಲಿರುವ ಮುಸ್ಲಿಮರು, ಹಿಂದುಳಿದ ಜಾತಿಗಳು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೆಂಬಲಿಸಲು ತೆಗೆದುಕೊಂಡ ನಿರ್ಧಾರ, ಸರ್ಕಾರದ ಜನಪ್ರಿಯ ಯೋಜನೆಗಳೂ ಕಾರಣವಾಗಿವೆ.
2014ರಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಹತ್ತಿರದಲ್ಲಿಯೇ ಇರುವ ಈ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡೆ ಹೇಗಿರಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ.

3 comments:

 1. ಕಂಡಿತಾ!, ಮತದಾರರು ಪ್ರಜ್ಞಾವಂತರು ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ. ಹಾವು ಮುಂಗುಸಿಯಂತಿದ್ದ ಜೆಡಿಎಸ್ ಮತ್ತು ಬಿಜೆಪಿ ಅಪವಿತ್ರ ಮೈತ್ರಿಗೆ ಮುಂದಾಗಬಾರದಿತ್ತು. ಈ ಅಪವಿತ್ರ ಮೈತ್ರಿಯಿಂದಾಗಿಯೇ ಸಿ.ಎಸ್.ಪುಟ್ಟರಾಜು ಹಾಗೂ ಅನಿತಾ ಕುಮಾರಸ್ಸೋವಾಮಿ ಸೋಲನುಭವಿಸಬೇಕಾಯಿತು. ಜೊತೆಗೆ ಆಡಳಿತ ರೋಢ ಸಕಾ೵ರದ ವಚ೵ಸ್ಸು ಇಲ್ಲಿ ಕೆಲಸ ಮಾಡಿರುವುದು ಸ್ಯೇಪಷ್ಟವಾಗಿ ಗೋಚರಿಸುತ್ತಿದೆ. ಈ ನಿಟ್ಟಿನಲ್ಲಿ ಗೆಲುವಿನ ನಗೆ ಬೀರಿರುವ ಈ ಇಬ್ಬರು ಸಂಸದರೂ ಹೆಚ್ಚು ಬೀಗದೆ ಜಿಲ್ಲೆಯ ಅಭಿವೃದ್ದಿ ಕೆಲಸಗಳಿಗೆ ಮುಂದಾಗುವುದು ಒಳಿತು. ಇಲ್ಲದಿದ್ದರೆ ಮತ್ತೊಮ್ಮೆ ಮುಂದಿನ 6 ತಿಂಗಳಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆ ಇವರ ಮೇಲೆ ಪರಿಣಾಮ ವ್ಯತಿರಕ್ತ ಪರಿಣಾಮ ಬೀರುವುದಂತೂ ಗ್ಯಾರಂಟಿ.

  ReplyDelete
 2. Harishchandra BhatSunday, 25 August, 2013

  Peculiar voters. 2+2 = not 4. It could be 5 or 3 ! BJP did not help itself with the coalition. Instead gave its votes on a platter to Congress. The caste groups did not wish to go with JDS. It also shows that BJP voters would go with Congress in such situations !

  ReplyDelete
 3. ಮುಂದಿನವರ್ಷದ ಫಲಿತಾಂಶದ ಜೊತೆ ತನ್ನ ಜನಪ್ರಿಯತೆಯಿಂದ ಗೆದ್ದ ನಟಿ ಏನು ಮಾಡುತ್ತಾರೆ ಎಂಬ ಕೂತೂಹಲವಿದೆ.

  ReplyDelete