• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

'ಎದೆಗೆ ಬಿದ್ದ ಅಕ್ಷರ' ಮತ್ತು ಜಾತಿ ಆತಂಕ ಕುರಿತ ಚರ್ಚೆ

‘ಈ ಹೊತ್ತಿಗೆ’ ಹೆಸರೇ ಸೂಚಿಸುವಂತೆ ಸಮಾನ ಮನಸ್ಕರು ಸೇರಿ ಸದಭಿರುಚಿ ಪುಸ್ತಕಗಳ ಬಗ್ಗೆ ಚರ್ಚಿಸುವ ಅನೌಪಚಾರಿಕ ವೇದಿಕೆ. ಸಿನಿಮಾ ಮತ್ತು ಸಾಮಾಜಿಕ ಬೆಳವಣಿಗೆಗಳನ್ನೂ ಪುಸ್ತಕಗಳ ಮೂಲಕವೇ ಇಲ್ಲಿ ವಿಮರ್ಶಿಸಲಾಗುತ್ತದೆ. ಇಲ್ಲಿ ಇತ್ತೀಚಿಗೆ ದೇವನೂರು ಮಹಾದೇವ ಅವರ 'ಎದೆಗೆ ಬಿದ್ದ ಅಕ್ಷರ' ಕುರಿತು ಚರ್ಚೆ ನಡೆಯಿತು. ಎರಡು ಭಾಗಗಳಲ್ಲಿ ನಡೆದ ಸಂವಾದದ ಸಾರಾಂಶವನ್ನು ತೇಜಸ್ವೀನಿ ಹೆಗಡೆ ಕಟ್ಟಿಕೊಟ್ಟಿದ್ದಾರೆ. ಓದಿ, ನೀವೂ ಪ್ರತಿಕ್ರಿಯಿಸಿ....

ಈ ಸಲ 'ಈ ಹೊತ್ತಿಗೆ' ಯಲ್ಲಿ ಸ್ವಲ್ಪ ವಿಭಿನ್ನತೆಯಿತ್ತು. ದೇವನೂರ ಮಹಾದೇವ ಅವರ "ಎದೆಗೆ ಬಿದ್ದ ಅಕ್ಷರ" ಪುಸ್ತಕದ ಬಗ್ಗೆ ಓದುಗರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಜಾತಿ ತಲ್ಲಣಗಳ ಬಗ್ಗೆ ಚರ್ಚಿಸಲಾಯಿತು.  ಮೊದಲ ಭಾಗದಲ್ಲಿ ಅಂದರೆ ಜೂನ್ ೨೩ ರಂದು ಭಾರತಿ ಬಿ.ವಿ. ಸಂಧ್ಯಾರಾಣಿ, ಸುನೀಲ್, ವೀರೇಂದ್ರ ಪಾಟೀಲ್, ಕುಮಾರ ರೈತ, ಸರಳಾ ದ್ವಾರಕಾವಾಸ, ಸೋಮಪ್ಪ ಮತ್ತು ತೇಜಸ್ವಿನಿ ಹೆಗಡೆ ಮತ್ತಿತರರು ಭಾಗವಹಿಸಿದ್ದರು. ಮುಂದಿನ ಭಾಗದಲ್ಲಿ ಅಂದರೆ ಜುಲೈ ೭ರಂದು ಜಯಲಕ್ಷ್ಮೀ ಪಾಟೀಲ್, ಸರಳಾ ದ್ವಾರಕಾವಾಸ, ವೀರೇಂದ್ರ ಪಾಟೀಲ್ ಮತ್ತು ತೇಜಸ್ವಿನಿ ಹೆಗಡೆ  ಪುಸ್ತಕದ ಕುರಿತಾಗಿ ಸಂವಾದ ನಡೆಸಿದರು.
ಮೊದಲಿಗೆ ಮಾತನಾಡಿದ ಸರಳಾ ಅವರು, ಮೇಲ್ಜಾತಿಯವರು ಕೆಳ ಜಾತಿಯವರನ್ನು ಹಿಂದೆ ಕೆಟ್ಟದಾಗಿ ನಡೆಸಿಕೊಂಡಿದ್ದು ನಿಜ. ಈಗ ಈ ಜಾತಿ ಮಡಿಯೆಲ್ಲಾ ಯಾರೂ ಮಾಡೋದಿಲ್ಲ.. ಈಗೆಲ್ಲಾ ಈ ಅಸ್ಪೃಶ್ಯತೆ ಇಲ್ಲ ಎಂದೇ ನಾನು ವಾದಿಸುತ್ತಿದ್ದೆ. ಆದರೆ ನಾವು ಖುದ್ದು ಈ ಕೆಟ್ಟ ಪದ್ಧತಿಯನ್ನು ಅನುಸರಿಸದಿದ್ದರೂ, ನಮ್ಮವರು ಹಿಂದೆ ಹೀಗೆಲ್ಲಾ ಮಾಡಿದ್ದರಲ್ಲಾ ಅನ್ನೋ ಅಳುಕು ನಮ್ಮೊಳಗೆ ಹೊಕ್ಕಿ, ಬೇಸರ ಉಂಟುಮಾಡುವಂತಿದೆ ಈ ಪುಸ್ತಕ ಎಂದರು. 
ಇದರ ನಿವಾರಣೆಗಾಗಿ ಸೂಕ್ತ ಪರಿಹಾರವ ಹುಡುಕಬೇಕಾಗಿದೆ. ಅದೇ ರೀತಿ ಕನ್ನಡ ಮಾಧ್ಯಮಕ್ಕೆ ಒತ್ತುಕೊಡಬೇಕೆಂದು ಹೇಳಿದ ದೇವನೂರರ ಮಾತು ನನ್ನ ಗಮನವನ್ನು ಸೆಳೆಯಿತು. ಕನ್ನಡವನ್ನು ಬಾಲ್ಯದಿಂದಲೇ ಒಂದು ಭಾಷೆಯನ್ನಾಗಿ ಮಕ್ಕಳ ಕಲಿಕೆಯಲ್ಲಿ ಅಳವಡಿಸಿಕೊಳ್ಳಬೇಕು. ಕೇವಲ ಕನ್ನಡ ಮಾಧ್ಯಮದಲ್ಲಿ ಮಾತ್ರ ಅಭ್ಯಸಿಸುವಂತೆ ಒತ್ತಾಯಿಸುವುದು ಅಷ್ಟು ಸಮಂಜಸವಲ್ಲ ಎಂದು ಅಭಿಪ್ರಾಯ ಪಟ್ಟರು.
ಭಾರತಿ ಬಿ.ವಿ. ಅವರ ಅಭಿಪ್ರಾಯದಂತೆ - ದೇವನೂರ ಅವರು ದಲಿತರನ್ನು ಶೋಷಿತ ವರ್ಗ ಎಂದು ಹೇಳಿದ್ದು ನಿಜ. ಆದರೆ ಮುಸ್ಲಿಮರನ್ನೂ ಶೋಷಿತ ವರ್ಗಕ್ಕೆ ಸೇರಿಸಿದ್ದು ಮಾತ್ರ ಒಪ್ಪಲಾಗುತ್ತಿಲ್ಲ. ಮುಸ್ಲಿಮರು, ಹಿಂದುಗಳಿಂದ ಶೋಷಿತರಾಗಿದ್ದಾರೆಂದು ನನಗೆ ಅನಿಸುವುದಿಲ್ಲ. ಅಸಲಿಗೆ ಹಿಂದುಗಳ ಮುಖ್ಯವಾಹಿನಿಗೆ ಸೇರಿಕೊಳ್ಳಲು ಮುಸ್ಲಿಮ್ ದಲಿತರು ಒಪ್ಪಿದ್ದಾರೆಯೇ ಅನ್ನೋದರ ಬಗ್ಗೆ ನನಗೆ ಸಂಶಯವಿದೆ. ಅವರ ಶಿಕ್ಷಣ, ಕಾನೂನು/ಕಟ್ಟಳೆ ಎಲ್ಲವೂ ಭಿನ್ನವಾಗಿದ್ದು, ಅವರೇ ಒಂದು ಬೇರೆ ಗೆರೆಹಾಕಿಕೊಂಡು, ದೂರವಾಗಿರುವಾಗ, ಹಿಂದು ದಲಿತರ ಜೊತೆಗೆ ಹೇಗೆ ಸಮೀಕರಿಸಲಾಗುವುದು? ಅದು ಹೇಗೆ ಹಿಂದು ದಲಿತರನ್ನು ಹಾಗೂ ಮುಸ್ಲಿಮ್‌ರನ್ನು ಸವರ್ಣೀಯರು ಶೋಷಿಸಿದ್ದಾರೆ ಎನ್ನಲಾಗುವುದು ಎಂದರು.
ಮುಂದುವರಿದು ಮಾತನಾಡಿ, ಇನ್ನು ಮೀಸಲಾತಿಯ ಬಗ್ಗೆ ಬಂದರೆ ನನ್ನ ಕಣ್ತೆರೆಸುವ ಘಟನೆಯೊಂದು ನಾನು ಕಾಂಬೋಡಿಯಾ ಪ್ರವಾಸದಲ್ಲಿದ್ದಾಗ ನಡೆಯಿತು. ಅಲ್ಲಿ ಮೈನಿಂಗ್ ಭ್ಲಾಸ್ಟಿಂದ ಕೈ ಕಾಲು ಕಳೆದುಕೊಂಡವರು ಮ್ಯೂಸಿಕ್ ಬ್ಯಾಂಡ್ ಕಟ್ಟಿಕೊಂಡು ಹಾಡುತ್ತಾರೆ. ಅವರೊಂದು ಬೋರ್ಡ್ ಹಾಕಿಕೊಂಡಿದ್ದರು. "ನಾವು ಈ ರೀತಿ ತೊಂದರೆಗೀಡಾಗಿದ್ದೀವಿ. ನಮಗೆ ಅಂಗವಿಕಲತೆ ಇದೆ. ನಮ್ಮ ಒಂದು ಜನರೇಷನ್ ಅಷ್ಟೇ ಸಾಕಿ. ನನ್ನ ಮಗನನ್ನು ಸಾಕೋ ಶಕ್ತಿ ನನಗಿಲ್ಲ. ನಿಮ್ಮ ಸಹಾಯದಿಂದ ಮಗ ಓದಿ ಬೆಳೆಯುತ್ತಾನೆ. ಅವನ ಮುಂದಿನ ಜನರೇಷನ್‌ಗೆ ನಿಮ್ಮ ಸಹಾಯ ಬೇಡ. ನನ್ನ ಮಗನೇ ಮೇಲೆ ತರಲು ಯತ್ನಿಸುತ್ತಾನೆ" ಅನ್ನೋ ಬೋರ್ಡ್ ಹಾಕಿಕೊಂಡಿದ್ದು ಬಹು ಮೆಚ್ಚುಗೆಯಾಯಿತು. 
ಇಂತಹದೇ ಸ್ವಾಭಿಮಾನ, ಮೀಸಲಾತಿ ಪಡೆಯೋರಲ್ಲೂ ಇರಬೇಕು. ಒಂದು ಹಂತದವರೆಗೆ ಮಾತ್ರ ಮೀಸಲಾತಿ ಇರಬೇಕು. ಅತ್ಯವಶ್ಯಕತೆ ಇದ್ದವರಿಗೆ ದೊರಕಿ ಅವರು ಆರ್ಥಿಕವಾಗಿ ಸದೃಢರಾದ ಮೇಲೆಯೂ ಅವರ ಮಗ, ಮೊಮ್ಮಗ, ಮಿಮ್ಮಗ ಎಲ್ಲರಿಗೂ ಈ ಮೀಸಲಾತಿಯ ಆವಶ್ಯಕತೆಯಿರುತ್ತದೆಯೇ? ಉತ್ತಮ ಸ್ಥಿತಿಯಲ್ಲಿ ಇರುವ ದಲಿತರ ಮಕ್ಕಳಿಗೂ ಮೀಸಲಾತಿಯನ್ನು ಕೊಡುವುದು ಸಲ್ಲ. ಅತಿ ಕೆಳಮಟ್ಟದಲ್ಲಿರುವ, ಅತ್ಯಗತ್ಯತೆ ಇರುವ, ಬೀದಿಯಲ್ಲಿ ಕಸಗುಡಿಸುವ, ಕಡು ಬಡತನದಿಂದ ಓದಲಾಗದವರಿಗೆ ಈ ಮೀಸಲಾತಿ ಲಭ್ಯವಾದರೆ ಹೆಚ್ಚು ಸೂಕ್ತ ಎಂದು ಅಭಿಪ್ರಾಯಿಸಿದರು.
ಕುಮಾರ ರೈತ ಅವರ ವಿಶ್ಲೇಷಣೆಯಂತೆ - ಮುಸ್ಲಿಮ್ಮರು ಕೆಲವು ಪ್ರಾಂತ್ಯಗಳಲ್ಲಿ ರಾಜಕೀಯ ಶೋಷಣೆಗೆ ಒಳಗಾಗಿದ್ದು ಹೌದು. ಕೆಲವು ಕಡೆ ಮುಸ್ಲಿಮರು ಸರಿಸಮಾನರಾಗಿ ಬೆಳೆದರೆ, ಕೆಲವು ಕಡೆ ಹಿಂದುಳಿದು ಶೋಷಣೆಗೆ ಒಳಗಾಗಿದ್ದೂ ಹೌದು. ದೇವನೂರ ಮಹಾದೇವ ಅವರು ಬೆಳೆದ ಪ್ರಾಂತ್ಯದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ದಲಿತರಲ್ಲದೇ ಮುಸ್ಲಿಮರೂ ತುಂಬಾ ಹಿಂದುಳಿದದ್ದರಿಂದ ಅವರಿಬ್ಬರ ತುಳಿತವೂ ಆಗಿತ್ತು. ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿಯ ರಾಜಕೀಯ, ಸಾಮಾಜಿಕ ವ್ಯವಸ್ಥೆಯ ಬೆಳವಣಿಗೆ ಇರುತ್ತದೆ. ಲೇಖಕರ ಕಾಲ ಘಟ್ಟದಲ್ಲಿ ಅವರ ಪ್ರಾಂತ್ಯದಲ್ಲಿದ್ದ ವ್ಯವಸ್ಥೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಿಂದು ದಲಿತರನ್ನು ಮುಸ್ಲಿಂ ದಲಿತರನ್ನೂ ಒಟ್ಟಿಗೇ ಸೇರಿಸಿರಬಹುದು ಎಂದು ವಿಶ್ಲೇಷಿಸಿದರು. 
ಮುಂದುವರಿದು ಮಾತನಾಡಿ, ಇವತ್ತೂ ಕೂಡ ಯಾರು ಯಾರನ್ನು ತುಳಿದರು? ಆರ್ಥಿಕವಾಗಿ, ಸಾಮಾಜಿಕವಾಗಿ ಯಾರು ಅಧಿಕಾರದಲ್ಲಿದ್ದು ಯಾರನ್ನು ತುಳಿದರು ಅನ್ನೋದನ್ನು ಯೋಚಸಲೇ ಹೋಗುತ್ತಿಲ್ಲ. ಜಾತಿ ಬಲ, ಅಧಿಕಾರ ಇದ್ದವರು ಮಾತ್ರ ತಳ ಸಮುದಾಯಗಳನ್ನು ಶೋಷಿಸಲು ಸಾಧ್ಯ. 
ಓರ್ವ ಬಡ ಅರ್ಚಕನಿಗೆ ಮಾತ್ರ ಒಂದು ದಲಿತ ಸಮುದಾಯವನ್ನು ಬಹಿಷ್ಕರಿಸುವ ಶಕ್ತಿ ಇರಲಿಲ್ಲ. ಇವನ ಹಿಂದೆ ರಾಜ, ಶಾನುಭೋಗ, ಪಟೇಲ ಹೀಗೇ ಹಲವು ಅಧಿಕಾರಿಗಳ ಕುಮ್ಮಕ್ಕೂ ಇದ್ದೇ ಇತ್ತು. ಇಲ್ಲಿ ಶಾನುಭೋಗ, ಪಟೇಲ ಜವಾಬ್ದಾರಿಗಳನ್ನು ಕೇವಲ ಬ್ರಾಹ್ಮಣರೇ ಮಾಡಿದ್ದಿಲ್ಲ. ಬೇರೆ ಬೇರೆ ಪ್ರಾಂತ್ಯಗಳಲ್ಲಿ ಬೇರೆ ಬೇರೆ ಜಾತಿಯವರು ಮಾಡಿದ್ದಾರೆ. ಆಯಾ ಪ್ರಾಂತ್ಯದಲ್ಲಿ ಪ್ರಾಬಲ್ಯವಿರುವ ಜಾತಿಯವರು ಅಧಿಕಾರ ವಹಿಸಿದ್ದಾರೆ. ಗೌಡರು, ಲಿಂಗಾಯಿತರು, ವೈಶ್ಯರು ಎಲ್ಲರೂ ಇದ್ದರು. ಜಾತಿ ಬಲ, ಅಧಿಕಾರ ಹಾಗೂ ಆರ್ಥಿಕವಾಗಿ ಸಬಲರಾಗಿರುವವರಿಂದಲೇ ಅಸ್ಪೃಶ್ಯತೆ ಬೆಳೆಯಲು ಸಾಧ್ಯವಾಯಿತು. ಎಲ್ಲರ ಬೆಂಬಲದಿಂದಲೇ ಪುರೋಹಿತ ವರ್ಗದವರು ದಲಿತರಿಗೆ ಬಹಿಷ್ಕಾರ ಹಾಕಲು ಸಾಧ್ಯವಾಗಿದ್ದು.
ಇವತ್ತು ಯಾರಿಗೆ ಈ ಅಸ್ಪೃಶ್ಯತೆ ಬೇಕು ಅನ್ನೋದು ದೊಡ್ಡ ಪ್ರಶ್ನೆ. ಇದೊಂದು ರಾಜಕೀಯ ಪ್ರೇರಿತ ವ್ಯವಸ್ಥೆ. ಇವತ್ತಿನ ಸಾಹಿತಿಗಳಲ್ಲಿ ಬಹುತೇಕರು ಭಾರತದ ಮೈಕ್ರೋ ಸಿಸ್ಟಮ್ಸ್‌ ಸರಿಯಾಗಿ ಅಧ್ಯಯನ ಮಾಡದಿರುವುದರಿಂದ ಕೇವಲ ಬ್ರಾಹ್ಮಣರ ಮೇಲೆ ಮಾತ್ರ ಆರೋಪ ಮಾಡುತ್ತಿದ್ದಾರೆ. ಇಂದು ನಾವು ಪೂರ್ವಾಗ್ರಹಿತರಾಗುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ನಾವು ಓದಿಕೊಳ್ಳುತ್ತಿರುವ ಎಲ್ಲ ಬಗೆಯ ಸಾಹಿತ್ಯ ಎಂದು ಅಭಿಪ್ರಾಯಪಟ್ಟರು.
ಸಂಧ್ಯಾರಾಣಿ ಅವರು ಮಾತನಾಡಿ, ದೇವನೂರ ಅವರ ದೃಷ್ಟಿಕೋನದಲ್ಲಿ ಇದನ್ನು ಓದಿದರೆ ಅವರ ಅನುಭವ, ನೋವುಗಳ ಸ್ಪಷ್ಟ ಚಿತ್ರಣ ಓದುಗರಿಗಾಗುತ್ತದೆ. ಮುಸಲ್ಮಾನರಿಂದ ಹಿಂದೆ ರಾಜಕೀಯ ಪ್ರೇರಿತ ಧಾಳಿಗಳಾಗಿದ್ದರಬಹುದು. ಧಾರ್ಮಿಕ ಕಾರಣಕ್ಕಾಗಿ ಧಾಳಿ, ಶೋಷಣೆ ಆಗಿದ್ದು ಇಲ್ಲ ಎಂದು ಅಭಿಪ್ರಾಯಪಟ್ಟರು.
ಸೋಮಪ್ಪ ಅವರು ಮಾತನಾಡಿ, ಹಿಂದೆ ಪೌರೋಹಿತಶಾಹಿ ಆಡಳಿತದಿಂದಾಗಿ ಅಸ್ಪೃಶ್ಯತೆ ಜಾರಿಯಲ್ಲಿತ್ತು.. ಅನ್ಯಾಯಗಳು ಆಗುತ್ತಿದ್ದವು. ಇಂದು ಕಾಲ ಸಾಕಷ್ಟು ಬದಲಾಗಿದೆ. ಇಂದು ಮೀಸಲಾತಿಯಿಂದ ನಿಜವಾಗಿ ಕಷ್ಟಪಟ್ಟು ಓದಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಭಾಗ ಒಂದರಲ್ಲಿ ಭಾಗವಹಿಸಿದ್ದ ಸುನೀಲ್ ಅವರು ಪುಸ್ತಕವನ್ನು ಓದಿಕೊಂಡು ಟಿಪ್ಪಣಿ ಬರೆದುಕೊಂಡು ಬಂದಿದ್ದರೂ ಸಮಯದ ಅಭಾವದಿಂದ  ತಮ್ಮ ಅಭಿಪ್ರಾಯಗಳನ್ನು ವಿಶದವಾಗಿ ಮಂಡಿಸಲಾಗಲಿಲ್ಲ.
ಎ.ಬಿ. ವೀರೇಂದ್ರ - ಅವರ ದೃಷ್ಟಿಯಲ್ಲಿ - ಪುಸ್ತಕದಲ್ಲಿರುವ ಲೇಖನಗಳು ರಚಿಸಲ್ಪಟ್ಟ ತಾರೀಕುಗಳು, ಪುಟ್ಟ ಟಿಪ್ಪಣಿ, ಹಿನ್ನಲೆ ಇವೆಲ್ಲಾ ವಿವರಣೆಗಳಿದ್ದಿದ್ದರೆ, ಆಯಾ ಕಾಲಘಟ್ಟವನ್ನು ದೃಷ್ಟಿಯಲ್ಲಿಟ್ಟುಕೊಂಡು ಅರ್ಥೈಸಿಕೊಳ್ಳಲು, ವಿಶ್ಲೇಷಿಸಲು ತುಂಬ ಸಹಕಾರಿಯಾಗುತ್ತಿತ್ತು. ಆದರೆ ಲೇಖಕರು ತಮ್ಮ ಲೇಖನದೊಳಗೆ ನಮ್ಮ ದೇಶದ ಜಾತಿಗಳ ಬಗ್ಗೆ ಸುಸ್ಪಷ್ಟ ಅಂಕಿ ಅಂಶಗಳನ್ನು ಕೊಟ್ಟಿದ್ದಾರೆ. ವಿವರಣೆಗಳಲ್ಲಿ ಸ್ಪಷ್ಟತೆಯಿದೆ. ಅಂತೆಯೇ ಲೇಖಕರು ಬ್ರಾಹ್ಮಣರನ್ನು ಮಾತ್ರ ದೂಷಿಸದೇ ತಮ್ಮೊಳಗೇ ಇರುವ ಒಡಕು, ಕೆಡಕುಗಳನ್ನೂ ತೆರೆದಿಟ್ಟಿದ್ದಾರೆ. ಒಂದೆರಡು ವ್ಯಕ್ತಿ ಪರಿಚಯವನ್ನು ಕಟ್ಟಿಕೊಡುವ ಲೇಖನಗಳು, ಖಾಸನೀಸರ ಅವರ ಕಥೆಯ ವಿಶ್ಲೇಷಣೆ ಇವೆಲ್ಲಾ ಬೇರೆಲ್ಲ ಲೇಖನಗಳಿಗಿಂತಲೂ ಬಲು ಇಷ್ಟವಾಯಿತು. ಆದರೆ ಸಂಪೂರ್ಣ ಓದಿದ ಮೇಲೆ ಈ ಪುಸ್ತಕಕ್ಕೆ ಅತಿಯಾದ ಪ್ರಚಾರಕೊಡಲಾಯಿತೇನೋ ಎಂದೆನಿಸಿತು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಜಯಲಕ್ಷ್ಮೀ ಪಾಟೀಲ್ ಮಾತನಾಡಿ, ನಾವು ಮೇಲ್ಜಾತಿ, ಕೆಳಜಾತಿ ಅನ್ನೋದನ್ನೆಲ್ಲ ಬಿಟ್ಟು ಈ ಪುಸ್ತಕ ಓದಬೇಕು. ಈಗ ಜಾತಿಪದ್ಧತಿ ಹಿಂದಿಗಿಂತ ಕಡಿಮೆಯಾಗಿದೆ. ಸ್ವಂತ ವ್ಯಕ್ತಿತ್ವವನ್ನು ಕಂಡುಕೊಳ್ಳುವ ಮನಸ್ಸು ಶೋಷಣೆಯನ್ನು ವಿರೋಧಿಸುತ್ತದೆ. ಎಲ್ಲ ದಲಿತರೂ ಒಪ್ಪಿಕೊಂಡು ಬಂದಿದ್ದ ಶೋಷಣೆಯನ್ನು ದೇವನೂರ ಅಂಥವರ ಸೂಕ್ಷ್ಮ, ಪ್ರಜ್ಞಾವಂತ ಮನಸ್ಸು ಧಿಕ್ಕರಿಸಿತು. ನೋವಿನಿಂದ ತೀವ್ರವಾಗಿ ಪ್ರತಿಭಟಿಸಿದರು. ಹಾಗೆ ಧಿಕ್ಕರಿಸುವಾಗ ಒಮ್ಮೊಮ್ಮೆ ಕೆಲವರಿಗೆ ಅತಿಯಾಗಿದೆ ಅನ್ನಿಸೋ ಮಾತುಗಳು ಹೊರಬಂದಿರಬಹುದು ಎಂದರು. 
ಈಗ ಹಳ್ಳಿಗಳಲ್ಲಿರುವಷ್ಟು ಜಾತಿ ಪ್ರಾಧಾನ್ಯತೆ, ಪಟ್ಟಣಗಳಲ್ಲಿ ಇಲ್ಲ. ಅಂಬೇಡ್ಕರ್ ಅವರು ಅನುಭವಿಸಿದ ಆಕ್ರೋಶ, ಹಿಂಸೆಯಿಂದಾಗಿಯೇ ಅವರೊಳಗೆ ಕಟುತ್ವವೂ ಬಂತು. ಆದರೆ ಅವರು ತುಂಬ ಬುದ್ಧಿವಂತರಾಗಿದ್ದರು, ದೂರದರ್ಶಿತ್ವವನ್ನುಳ್ಳವರಾಗಿದ್ದರಿಂದಲೇ ಅಂತಹ ಕಾನೂನು ಕೊಡಲು ಸಾಧ್ಯವಾಗಿದ್ದು. ದೇವನೂರ ಅವರು ಓರ್ವ ಉತ್ತಮ, ಒಳ್ಳೆಯ ಹೋರಾಟಗಾರ, ಬರಹಗಾರ. ಹಾಗೇ ನಮ್ಮ ನಿಮ್ಮಂತೇ ಎಲ್ಲ ಮನುಷ್ಯ ಸಹಜ ಸ್ವಭಾವಗಳನ್ನು ಹೊಂದಿದ ವ್ಯಕ್ತಿ. ಇದನ್ನು ಅರ್ಥಮಾಡಿಕೊಂಡು ಓದಬೇಕು, ಆಗ ಅವರ ಬರಹಗಳ ಹಿನ್ನೆಲೆ ಮತ್ತು ಆಶಯ ಹೆಚ್ಚು ಅರ್ಥವಾಗಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ತೇಜಸ್ವೀನಿ ಹೆಗಡೆ ಅವರು ಮಾತನಾಡಿ "ಎದೆಗೆ ಬಿದ್ದ ಅಕ್ಷರ"ವನ್ನೋದಿದ ಮೇಲೆ ನನಗನಿಸಿದ್ದು ಇಷ್ಟು - ದೇವನೂರ ಮಹಾದೇವ ಅವರು ಓರ್ವ ಸೌಮ್ಯ ಸ್ವಭಾವದ ಕ್ರಾಂತಿಕಾರಿ ಎಂದು. ಬಾಲ್ಯದಿಂದ ಅವರು ಅಸ್ಪೃಶ್ಯತೆಯಿಂದಾಗಿ ಅನುಭವಿಸಿದ ಯಾತನೆ, ಹಿಂಸೆಯ ಪರಿಣಾಮದ ಗಾಢತೆ, ತೀವ್ರತೆ ಅವರ ಅಕ್ಷರಗಳಲ್ಲು ಅಚ್ಚು ಮೂಡಿದೆ. ಅದೇ ಕೆಲವು ಕಡೆ ತುಸು ತೀಕ್ಷ್ಣ ರೂಪದಲ್ಲಿ ಅಸಹನೆಯನ್ನು ಹೊರ ಹಾಕಿದೆಯೇನೋ ಎಂದೆನಿಸಿತು. ಆದರೆ ಅವರಂದಂತೇ ಬ್ರಾಹ್ಮಣನಿಗಿಂತ ಬ್ರಾಹ್ಮಣ್ಯವು ತುಂಬ ಕೆಟ್ಟದ್ದು ಅನ್ನೋದನ್ನು ನನಗೆ ಒಪ್ಪಲು ಸಾಧ್ಯವಿಲ್ಲ. ಅನ್ಯಾಯ, ದಬ್ಬಾಳಿಕೆಗಳು ಬ್ರಾಹ್ಮಣ್ಯದ ಸರಿಯಾದ ಅರ್ಥ ತಿಳಿಯದ ಅರ್ದಂಬರ್ಧ ತಿಳಿದ, ತಿರುಚಿದ, ರಾಜಕೀಯ ಪ್ರೇರಿತ, ಸಾಮಾಜಿಕ ವ್ಯವಸ್ಥೆಗೆ ಸಿಲುಕಿದ ಬ್ರಾಹ್ಮಣ ವರ್ಗದಿಂದ ಆಗಿತ್ತು. ಮಾತ್ರವಲ್ಲದೇ ಕ್ಷತ್ರೀಯ, ವೈಶ್ಯ, ಶೂದ್ರರಲ್ಲೇ ತಮ್ಮ ತಮ್ಮೊಳಗೇ ಶೋಷಣೆ ಆಗುತ್ತಿತ್ತು. 
 ಬ್ರಾಹ್ಮಣ್ಯ ಬಂದಿದ್ದು ವೇದ ಕಾಲದಲ್ಲಿ. ಅಲ್ಲಿ ಹುಟ್ಟಿನಿಂದಲೇ ಯಾರೂ ಬ್ರಾಹ್ಮಣರಲ್ಲವೇ ಅಲ್ಲ. ಅವರವರ ಗುಣ ಸ್ವಭಾವದಿಂದ ಈತ ವೈಶ್ಯ, ಕ್ಷತ್ರೀಯ, ಬ್ರಾಹ್ಮಣ, ಶೂದ್ರ ಎಂದು ಕರೆಯಲ್ಪಟ್ಟಿತು. ಯಾರು ಬ್ರಾಹ್ಮಣ್ಯದ ಗುಣಧರ್ಮಗಳನ್ನು (ಧೃತಿ, ಕ್ಷಮಾ, ದಯಾ, ಶೌಚ, ಆಸ್ತೇಯ, ಇತ್ಯಾದಿ ಗುಣಸ್ವಭಾವಗಳು...) ಪಾಲಿಸುತ್ತಿದ್ದರೋ ಅವರೆಲ್ಲಾ ಬ್ರಾಹ್ಮಣರೇ ಆಗಿದ್ದರು. ಮುಂದೆ ಇದು ನಾನಾ ರೂಪ ಪಡೆದು ಹುಟ್ಟಿನಿಂದ ಜಾತಿ ನಿರ್ಧಾರವಾಗುವ ಪದ್ಧತಿಗೆ ಬದ್ಧವಾಯಿತು. ಬಹುಶಃ ದೇವನೂರ ಅವರ ದೃಷ್ಟಿಯಲ್ಲಿ ಅವರ ಬದುಕು ಕಾಣಿಸಿದ ಅನುಭವದಲ್ಲಿ ಅವರ ಪರಿಧಿಗೆ ಬ್ರಾಹ್ಮಣ್ಯವೇ ಕೆಟ್ಟದ್ದಾಗಿ ಕಂಡಿರಬಹುದು.. ಇದು ಅವರ ದೃಷ್ಟಿಕೋನವಷ್ಟೆ ಎಂದರು.
ಹಿಂದಿನ ಪರಿಸ್ಥಿತಿಗೂ ಇಂದಿಗೂ ತುಂಬ ವ್ಯತ್ಯಾಸವಿದೆ. ಮುಂದೆ ಮತ್ತಷ್ಟು ಬದಲಾವಣೆಯ ಸಾಧ್ಯತೆಯೂ ಖಂಡಿತ ಇದೆ. ಅಸ್ಪೃಶ್ಯತೆ ಇಲ್ಲದ ಜಾತಿ, ಧರ್ಮವೇ ಇರಲಿಲ್ಲ. ಇಲ್ಲ ಕೂಡ. ಆದರೆ ಹಿಂದಿನಷ್ಟು ತೀವ್ರತೆ, ಯಾತನೆ ಇಂದು ಇಲ್ಲ ಎಂದೆನಿಸುತ್ತದೆ ನನಗೆ. ಶಿಕ್ಷಣ, ಸಹೃದಯತೆ, ಸಹಬಾಳ್ವೆ, ಉದಾರತೆ, ಸಮಾನತೆ ಎಲ್ಲವೂ ಈಗ ಮೊದಲಿನಷ್ಟು ಈ ಕೆಟ್ಟ ಪದ್ಧತಿಯನ್ನು ಪೋಷಿಸುತ್ತಿಲ್ಲ. ಪೋಷಿಸಲು ಬಿಡುತ್ತಲೂ ಇಲ್ಲ. ದೇವನೂರ ಅವರೇ ತಮ್ಮ ಒಂದು ಲೇಖನದಲ್ಲಿ ಪ್ರಸ್ತಾಪಿಸಿರುವಂತೇ, ‘ಯಾವುದೇ ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತಿರುತ್ತದೆ.’ 
ಈ ಅನುಕಂಪನಕ್ಕೆ ಜಾತಿಯ ಹಂಗಿಲ್ಲ. ಹಾಗಾಗಿ ಅವರ ಹಿಂದಿನ ಕೆಲವು ಲೇಖನಗಳನ್ನು ಅವರು ಯಾವ ಕಾಲದಲ್ಲಿ ಬರೆದಿದ್ದಾರೆಂದು ಕೊಂಚ ಗಮನಿಸಿ ಓದಿದರೆ ಉತ್ತಮ. ಆದರೆ ಅಲ್ಲಿರುವ ಎಲ್ಲ ಲೇಖನಗಳೂ ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆಯುತ್ತವೆ ಎಂದೆನ್ನಲಾಗದು. ಒಟ್ಟಿನಲ್ಲಿ ನನ್ನ ಪ್ರಕಾರ ಇದು ಅವರ ಅನುಭವ. ಓರ್ವ ಹೋರಾಟಗಾರನ ಬದುಕಿನ ಹಾದಿ, ಆ ಹಾದಿಯಲ್ಲಿ ತಾನು ಅನುಭವಿಸಿದ ನೋವಿನ ಚಿತ್ರಣವನ್ನು, ಅವರ ಸಮುದಾಯಕ್ಕೆ ಆದ ಶೋಷಣೆ ಹಾಗೂ ಅದನ್ನು ಪ್ರತಿಭಟಿಸಿ ಮಾಡಿದ ಹೋರಾಟವನ್ನು ತೋರುವ ಪುಸ್ತಕ "ಎದೆಗೆ ಬಿದ್ದ ಅಕ್ಷರ"

3 comments:

 1. ಈ ಹೊತ್ತಿಗೆಯಲ್ಲಿ ಎದೆಗೆ ಬಿದ್ದ ಅಕ್ಷರ ಪುಸ್ತಕದ ಬಗ್ಗೆ ಮಾತನಾಡಿದ ನನ್ನ ಪೂರ್ತಿ ಮಾತು quote ಆಗಿಲ್ಲ. ನನ್ನ ಈ ಫ಼ೇಸ್ ಬುಕ್ ಸ್ಟೇಟಸ್ ನನ್ನ ಅವತ್ತಿನ ಮತ್ತು ಇವತ್ತಿನ ಅಭಿಪ್ರಾಯ ಕೂಡ...

  Bharathi Bv
  June 18 at 3:47pm ·
  ದೇವನೂರರ ಎದೆಗೆ ಬಿದ್ದ ಅಕ್ಷರ ಓದುತ್ತಾ ನ್ಯಾಯವಾಗಿ ಸಿಗಬೇಕಿದ್ದನ್ನ ಕೇಳಿ ಕೇಳಿ ಪಡೆಯುವವರ ಮನಃಸ್ಥಿತಿ ಹೆಚ್ಚು ಹೆಚ್ಚು ಅರ್ಥವಾಗ್ತಾ ಹೋಯ್ತು ...ಅದೆಲ್ಲ ಹಿಂದೆ ಆಗಿದ್ದು, ಈಗ ಪರಿಸ್ಥಿತಿ ಸುಧಾರಿಸಿದೆಯಲ್ಲ ಅಂತ ನಾವು ಅವರ ಆಕ್ರೋಶಕ್ಕೆ expiry date ಕೇಳಿದ್ರೆ ಅವ್ರು ಹೋಗ್ರೋ ಬೋ .. ಮಕ್ಳಾ ಅನ್ನದೇ ಮತ್ತೇನು ಅಂತಾರೆ ...
  Like · · Unfollow Post · Share · Promote

  ReplyDelete
 2. https://www.facebook.com/bharathi.bv.5/posts/649724231724328

  ReplyDelete
 3. ಬರಹ ಚೆನ್ನಾಗಿದೆ. ತೇಜಸ್ವಿನಿಯವರ ಅಭಿಪ್ರಾಯ ಸಮ್ಮತವಾಗಿದೆ

  ReplyDelete