• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ನೀ ನಡುಗುವೇಕೆ... ಬಾ. . . ಭಯವನ್ನು ಬಿಡು. . .

ನಮ್ಮ ದೇಹ ಮತ್ತು ಮನಸನ್ನು ಯಾವುದಾದರೊಂದು ತೀವ್ರತರವಾದ ಘಟನೆಗೆ ಸಜ್ಜುಗೊಳಿಸುವುದಕ್ಕೆ ಕೊಂಚ ಮಟ್ಟಿನ ಉದ್ವೇಗ-ಆವೇಗ ಅತ್ಯಗತ್ಯ. ಆದರೆ ಇವುಗಳು ಅತಿಯಾಗುತ್ತಲೇ ಹೋದರೆ ಅದು ಮಾನಸಿಕ ರೋಗವಾಗಿ ಪರಿಣಮಿಸುತ್ತದೆ. ಇದಕ್ಕೆ ಶೀಘ್ರವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅಗತ್ಯ. ವ್ಯಕ್ತಿ ತನ್ನಲ್ಲಿ ಅತಿ ಆತಂಕ ಮನೆ ಮಾಡಿದೆ ಎಂದು ಅರಿವಾದ ತಕ್ಷಣ ಮನೋ ವೈದ್ಯರನ್ನು ಸಂಪರ್ಕಿಸಬೇಕು. ಒಂದು ವೇಳೆ ವ್ಯಕ್ತಿ ಇದನ್ನು ಗುರುತಿಸಲು ವಿಫಲವಾಗಿದ್ದರೆ ಆಪ್ತರು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿಸಬೇಕು.

ಮಿತವಾಗಿದ್ದರೆ ಸಾಮಾನ್ಯ ಚಿಹ್ನೆ:
ಆತಂಕ ಮಗುವಿನಿಂದ ಹಿಡಿದು ಮುದುಕರವರೆಗೆ ಸಾಮಾನ್ಯ ಚಿಹ್ನೆ. ಆತಂಕ ಸ್ವಭಾವ ಇಲ್ಲವೇ ಇಲ್ಲ ಎನ್ನುವ ವ್ಯಕ್ತಿಯನ್ನು ಕಾಣಲು ಸಾಧ್ಯವೇ ಇಲ್ಲ. ಇನ್ನೇನು ಮರಣ ಹೊಂದಬಹುದು ಎಂಬ ಸ್ಥಿತಿಯಲ್ಲಿರುವವರಿಗೂ ಆತಂಕ ತಪ್ಪಿದಲ್ಲ. ಕೇವಲ ದುಃಖದ ಸನ್ನಿವೇಶದಲ್ಲಿ ಮಾತ್ರವಲ್ಲ; ಸುಖದ ಸನ್ನಿವೇಶಗಳಲ್ಲಿಯೂ ಆತಂಕ ಉಂಟಾಗುತ್ತದೆ. ಆದ್ದರಿಂದ ಬದುಕಿನಲ್ಲಿ ಆತಂಕ-ಕಳವಳ ಎನ್ನುವುದು ಸರ್ವೇ ಸಾಮಾನ್ಯವಾಗಿರುವುದನ್ನು ಕಾಣಬಹುದು. ಇದು ಘಟನೆಗೆ ಮುಖಾಮುಖಿಯಾಗಿಸುವುದಕ್ಕೆ ಒಂದು ರೀತಿ ಮಾನಸಿಕ ತಾಲೀಮು ಇದ್ದಂತೆ ಇರುತ್ತದೆ.
ಆತಂಕದ ಸ್ಥಿತಿ ಹೇಗಿರುತ್ತದೆ:
ಘಟನೆಯೊಂದು ಹೇಗೆ ಪರ್ಯವಸನವಾಗುತ್ತದೋ, ನಾನು ಮಾಡಿದ ಕೆಲಸ-ಆಡಿದ ಮಾತಿಗೆ ಎಂಥ ಪ್ರತಿಕ್ರಿಯೆ ವ್ಯಕ್ತವಾಗುತ್ತದೋ ಪ್ರಯಾಣ ಸುಖಕರವಾಗುವುದೋ ಇಲ್ಲವೋ, ದೂರದ ಊರಿನಲ್ಲಿರುವ ಆಪ್ತರ ಸ್ಥಿತಿ ಹೇಗಿದೆಯೋ, ಹೂಡಿದ ಬಂಡವಾಳದ ಕಥೆಯೇನು, ಆನಾರೋಗ್ಯ ಕಾಡಿದರೇನು ಇತ್ಯಾದಿ ಯೋಚನೆಗಳ ಸಂದರ್ಭದಲ್ಲಿ ಅತಿ ಆತಂಕಿತ ಮನೋಭಾವದವರಲ್ಲಿ ವಿವಿಧ ಲಕ್ಷಣಗಳು ಕಂಡು ಬರುತ್ತವೆ.

 ಅವರು ತೀವ್ರವಾಗಿ ಬೆವರುತ್ತಿರುತ್ತಾರೆ. ಬಳಲಿಕೆ ಕಂಡು ಬರುತ್ತದೆ. ಚಡಪಡಿಕೆ ಇರುತ್ತದೆ. ತಮ್ಮ ಮನಸು ಉದ್ವಿಗ್ನವಾಗಿದೆ ಎಂಬುದು ಅವರಿಗೆ ತಿಳಿಯುತ್ತದೆ. ಆದರೆ ಅದನ್ನು ಅವರು ನಿಯಂತ್ರಿಸಿಕೊಳ್ಳಲಾರರು. ಉಸಿರಾಟವೂ ತೀವ್ರವಾಗಿ ಏರಿಳಿಯುತ್ತಿರುತ್ತದೆ. ಇವರನ್ನು ಈ ಸ್ಥಿತಿಯಲ್ಲಿ ಕಂಡವರಿಗೂ ಗಾಬರಿಯಾಗುತ್ತದೆ.
ಇಂಥವರಿಗೆ ಬಾಯಿ ಒಣಗಿದಂತಾಗಿ ಪದೇಪದೇ ನೀರು ಕುಡಿಯುತ್ತಿರಬೇಕೆನ್ನಿಸುತ್ತಿರುತ್ತದೆ. ಕೆಲವರಿಗೆ ಮತ್ತೆ ಮತ್ತೆ ಮಲ ವಿಸರ್ಜನೆ ಒತ್ತಡ ಉಂಟಾಗುತ್ತದೆ. ಕೈಕಾಲುಗಳಲ್ಲಿ ಶಕ್ತಿ ಉಡುಗಿ ಹೋದಂತೆ ಅನಿಸುತ್ತದೆ. ಯಾವ ಕೆಲಸವನ್ನೂ ಮಾಡುವುದಕ್ಕೂ ಮನಸಿರುವುದಿಲ್ಲ. ಹಸಿವು ಕಡಿಮೆಯಾಗುತ್ತದೆ. ಸದಾ ತಳಮಳ ಕಾಡುತ್ತಿರುತ್ತದೆ. 
ಇಂಥ ಸ್ಥಿತಿಯಿಂದ ಸಮರ್ಪಕವಾಗಿ ಯೋಚಿಸಿ ನಿರ್ಧಾರ ಕೈಗೊಳ್ಳುವ ಶಕ್ತಿಯನ್ನು ಇವರು ಕಳೆದುಕೊಳ್ಳುತ್ತಾರೆ. ಕ್ರಮೇಣ ತಲೆನೋವು, ಮೈ ಕೈ ನೋವು ಕಾಣಿಸಿಕೊಳ್ಳುತ್ತದೆ. ಲೈಂಗಿಕ ಆಸಕ್ತಿಯೂ ಕುಂದುತ್ತದೆ.
ಇಂಥ ಸ್ಥಿತಿ ತಾತ್ಕಾಲಿಕವ ಅಥವಾ ದೀರ್ಘವೆ:
ಆತಂಕದಿಂದ ವ್ಯಕ್ತಿಯಲ್ಲಿ ಉಂಟಾಗುವ ಬದಲಾವಣೆ ತಾತ್ಕಾಲಿಕವೇ ಅಥವಾ ದೀರ್ಘವೇ ಎಂಬುದು ವ್ಯಕ್ತಿಯ ಸ್ಥಿತಿ-ಗತಿ ಅವಲಂಬಿಸಿರುತ್ತದೆ. ಇಂಥ ಸ್ಥಿತಿ ಕೆಲವೇ ನಿಮಿಷ ಇರಬಹುದು ಅಥವಾ ಸುದೀರ್ಘ ಸಮಯ ಇರಬಹುದು. ವ್ಯಕ್ತಿಯಿಂದ ವ್ಯಕ್ತಿಗೆ ಇದು ಬದಲಾಗುತ್ತದೆ.
ಪರೀಕ್ಷೆಯ ಆತಂಕ:ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಆತಂಕ ಸಾಮಾನ್ಯ.  ಈ ಭಯ ಮತ್ತು ಆತಂಕ ಪರೀಕ್ಷಾ ದಿನಗಳು ಹತ್ತಿರ ಬಂದಂತೆ ಹೆಚ್ಚಾಗುತ್ತದೆ. ಹಗಲು-ರಾತ್ರಿ ಕಷ್ಟಪಟ್ಟು ಓದುತ್ತಾರೆ. ಆದರೆ ಇಷ್ಟೆಲ್ಲ ಓದಿದ ಅನೇಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಸಮರ್ಪಕ ಉತ್ತರ ಬರೆಯದೆ ನಿರೀಕ್ಷೆಯಷ್ಟು ಅಂಕ ಗಳಿಕೆಯಾಗದೇ ನರಳುತ್ತಾರೆ. ಇದಕ್ಕೆಲ್ಲ ತೀವ್ರವಾದ ಆತಂಕವೇ ಕಾರಣ. ಇಂಥ ಸ್ಥಿತಿ ಅವರ ನೆನಪಿನ ಸ್ಥಿತಿ ಮೇಲೆಯೂ ದುಷ್ಪರಿಣಾಮ ಬೀರುತ್ತದೆ.
ಇಂಥ ಉದ್ವೇಗ ಮಿತಿ ಮೀರಿದಾಗ ಕಾಯಿಲೆಯ ಲಕ್ಷಣದಲ್ಲಿ ತೋರ್ಪಡಿಕೆಯಾಗಬಹುದು. ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಕೊಡಿಸಿದರೂ ಪ್ರಯೋಜನಗಳು ಕಂಡು ಬಾರದೆ ಇರಬಹುದು. ಇದಕ್ಕೆ ಮೂಲ ಕಾರಣ ಇದು ಮನೋಜನ್ಯ ಕಾಯಿಲೆಯಾಗಿರುವುದು. ಮನೋವೈದ್ಯರು ಸೂಕ್ತ ವಿಧಾನಗಳ ಮೂಲಕ ಕಾಯಿಲೆಯ ಮೂಲವನ್ನು ಪತ್ತೆ ಹಚ್ಚಿ ಮನೋ ಚಿಕಿತ್ಸೆ ನೀಡುತ್ತಾರೆ. ಇಂಥ ಚಕಿತ್ಸೆ ನಂತರ ಕಂಡು ಬಂದಿದ್ದ ಕಾಯಿಲೆ ತಂತಾನೆ ಗುಣವಾಗುತ್ತದೆ.

ಆತಂಕ-ಭಯ ಹತೋಟಿ ಹೇಗೆ:
ವ್ಯಕ್ತಿ ತನ್ನನ್ನು ತಾನು ಅರ್ಥ ಮಾಡಿಕೊಳ್ಳುವುದು ಸೂಕ್ತ. ತನ್ನ ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳುವುದು ಕೆಲಸ ಸಲೀಸಾಗಿ ನೆರವೇರಲು ಸಹಾಯವಾಗುತ್ತದೆ. ಬಯಕೆಗಳಿಗೂ ಮಿತಿ ಹಾಕಿಕೊಳ್ಳುವುದು ಸೂಕ್ತ. ಅತಿಯಾಸೆ ಗತಿಗೇಡು ಎಂಬುದನ್ನು ನೆನಪಿನಲ್ಲಿಡಬೇಕು. ದೇಹ ಮತ್ತು ಮನಸಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ದುಡಿಯುವುದು ಸೂಕ್ತ. ಇವುಗಳನ್ನು ನಿರ್ಲಕ್ಷಿಸುವುದು ಅಪಾಯಕ್ಕೆ ಕಾರಣವಾಗಬಹುದು. ಯಾವುದೇ ಕೆಲಸ ಮಾಡುವ ಮುನ್ನ ಸೂಕ್ತ ಯೋಜನೆ ಹಾಕಿಕೊಳ್ಳುವುದು ಮುಖ್ಯ. ಸಮಯವನ್ನು ಕಡೆಗಾಣಿಸದೇ ಕೆಲಸ ಮಾಡುವುದರಿಂದ ನಿಗದಿತ ವೇಳೆಯೊಳಗೆ ಕಾರ್ಯ ಪೂರೈಸಬಹುದು. ಪರೀಕ್ಷೆ-ಸಂದರ್ಶನಗಳಿಗೆ ಪೂರ್ವ ತಯಾರಿ ಅಗತ್ಯ. ಸೂಕ್ತ ಸಿದ್ದತೆ ಇದ್ದರೆ ಆತಂಕವಿಲ್ಲದೆ ಇವುಗಳನ್ನು ಎದುರಿಸಬಹುದು.
ಹವ್ಯಾಸಗಳು:
ಓದುವುದು, ಪ್ರವಾಸ, ಛಾಯಾಗ್ರಹಣ, ಚಿತ್ರಕಲೆ, ಅಭಿನಯ ಇತ್ಯಾದಿ ನಿಮಗಿಷ್ಟವಾದ ಹವ್ಯಾಸ ರೂಢಿಸಿಕೊಳ್ಳಿ. ಇದರಿಂದ ಮನಸಿಗೆ ನೆಮ್ಮದಿ ದೊರೆಯುತ್ತದೆ. ನಿಮ್ಮ ತುಮುಲಗಳಿಗೆ ಸೂಕ್ತ ಅಭಿವ್ಯಕ್ತಿ ಮಾಧ್ಯಮ ದೊರೆಯುವುದರಿಂದ ಆತಂಕ ಬಿಡುಗಡೆಯಾಗುತ್ತದೆ. ಮನಸು ನಿರಾಳವಾಗಿರುತ್ತದೆ.
ಕ್ರೀಡೆ:
ಪ್ರತಿದಿನ ಸಂಜೆ ನಿಮಗಿಷ್ಟವಾದ ಕ್ರೀಡೆಯನ್ನು ಸ್ವಲ್ಪ ಸಮಯವಾದರೂ ಆಡುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ದೇಹ-ಮನಸಿಗೆ ಚೇತೋಹಾರಿಯಾದ ಅನುಭವ ದೊರೆಯುತ್ತದೆ. ನಿಮ್ಮ ಸಿಟ್ಟು-ಸೆಡವು ಕೂಡ ನಿಯಂತ್ರಣಕ್ಕೆ ಬರುತ್ತದೆ.
ಸ್ನೇಹ:
ಹೆಚ್ಚು ಮಂದಿ ಸ್ನೇಹಿತರೇ ಇರಬೇಕೆಂದೆನ್ನಿಲ್ಲ. ನಿಮ್ಮ ವ್ಯಕ್ತಿತ್ವ-ಅಭಿರುಚಿಗೆ ಅನುಗುಣವಾಗಿ ಸ್ಪಂದಿಸುವ ಒಬ್ಬಿಬ್ಬರು ಸ್ನೇಹಿತರಿದ್ದರೂ ಸಾಕು. ಅವರೊಂದಿಗೆ ನಿಮ್ಮ ಆಸಕ್ತಿ ವಿಷಯಗಳನ್ನು ಚರ್ಚಿಸಿ. ಇದರಿಂದ ಹೊಸ ಹೊಸ ವಿಷಯಗಳು ಹೊಳೆಯಬಹುದು.
ಚೆನ್ನಾಗಿ ನಿದ್ರಿಸಿ:
ಅನಗತ್ಯವಾಗಿ ಯೋಚಿಸುವುದನ್ನು ಬಿಡಿ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಿಗೆ ಮನಸಿನ ಸಾಮರ್ಥ್ಯ ಕುಂದುತ್ತದೆ. ಹಾಸಿಗೆಯಲ್ಲಿ ಅಡ್ಡಾದಾಗ ಯೋಚಿಸುತ್ತಲೇ ಇರಬೇಡಿ. ನಿದ್ರಿಸಲು ಪ್ರಯತ್ನಿಸಿ. ಬರುವ ಯೋಚನೆಗಳತ್ತ ಗಮನ ಕೊಡಬೇಡಿ. ಉತ್ತಮ ಆಹಾರ-ವಿಹಾರ-ವಿಶ್ರಾಂತಿ ಪಡೆಯುವುದು ಅತ್ಯಗತ್ಯ ಎಂಬುದನ್ನು ಮರೆಯದಿರಿ.

No comments:

Post a Comment