• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಆತ್ಮಾನುಕಂಪ ಇಲ್ಲದ ಚಿತ್ರಣ

ಕರ್ನಾಟಕದ ಸಂದರ್ಭದಲ್ಲಿ ಖ್ಯಾತನಾಮರ ಪತ್ನಿಯಂದಿರು ಆತ್ಮಕಥಾನಕ ಬರೆದ ಉದಾಹರಣೆ ಕಡಿಮೆ. ಇಂಥ ಕಾರ್ಯವನ್ನು  ಸಾಹಿತಿ, ಪತ್ರಕರ್ತ ಲಂಕೇಶ್ ಅವರ ಪತ್ನಿ ಇಂದಿರಾ ‘ಹುಳಿಮಾವು ಮತ್ತು ನಾನು’ ಮೂಲಕ ಮಾಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ಆತ್ಮಕಥಾನಕಗಳಲ್ಲಿ ಆತ್ಮಾನುಕಂಪ ಕಾಣಿಸಿಕೊಳುವುದುಂಟು. ಆದರೆ ಈ ಕೃತಿಯಲ್ಲಿ ಲೇಖಕಿ ಮನನೋಯುವ ಅನೇಕ ಸನ್ನಿವೇಶ- ಸಂದರ್ಭ ಬಂದರೂ ಆತ್ಮಾನುಕಂಪದ ಛಾಯೆಯೂ ಕಾಣುವುದಿಲ್ಲ. ಈ ಕೃತಿ ಇಂದಿರಾ ಅವರ ಬೆಳವಣಿಗೆ ಕಥಾನಕವೂ ಹೌದು; ಜೊತೆಗೆ ಲಂಕೇಶ್ ವೈರುಧ್ಯಮಯ ಸ್ವಭಾವಗಳ ಅನಾವರಣ ಕೂಡ.

 ಐದು ದಶಕದ ಹಿಂದೆ ಇಂದಿರಾ ತಮ್ಮ 17ನೇ ವಯಸ್ಸಿನಲ್ಲಿ ಕನಸು ಕಂಗಳೊಂದಿಗೆ ಲಂಕೇಶ್ ಜೊತೆ ವೈವಾಹಿಕ ಬದುಕಿಗೆ ಅಡಿಯಿರಿಸುತ್ತಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಕುಟುಂಬ, ಲಂಕೇಶ್ ಕುಟುಂಬದ ಚಿತ್ರಣವನ್ನು ಲಂಬಿಸದೆ ಕಟ್ಟಿಕೊಡುತ್ತಾರೆ. ಮೊದಲು ಲಂಕೇಶ್ ಜೊತೆ ಮದುವೆ ಮಾಡಿಕೊಡಲು ಒಪ್ಪಿದ ಅಪ್ಪ ನಂತರ ಬೇಡ ಎಂದರೂ ಲೆಕ್ಕಿಸುವುದಿಲ್ಲ. ಇದು ಇಂದಿರಾ ವ್ಯಕ್ತಿತ್ವದಲ್ಲಿ ಅಂತರ್ಗತವಾಗಿದ್ದ ದೃಢತೆಯ ಮೊಳಕೆಯಾಗಿಯೂ ಕಾಣಿಸುತ್ತದೆ.


 ದಂಪತಿ, ಪಕ್ಷಿಗಳಂತೆ ಹಾರಾಡಿದ ರೀತಿಯನ್ನು ವಿವರಿಸುವ ಇಂದಿರಾ ತಮಗೆ ಗರ್ಭಪಾತ ಆದಾಗ ನೋವು ಭರಿಸಲಾಗದೆ ‘ರೀ, ಹೊಟ್ಟೆ ತುಂಬ ನೋಯುತ್ತಿದೆ ಎಂದರೆ ‘ಸ್ವಲ್ಪ ಸಹಿಸಿಕೋ, ಬೆಳಗ್ಗೆ ಡಾಕ್ಟರ್ ಹತ್ತಿರ ಹೋಗೋಣ’ ಎಂದು ಹೇಳಿದರು ಎನ್ನುವಾಗ ಆ ಮನಸ್ಥಿತಿ ನೆನೆದು ಮನಸು ತಲ್ಲಣಿಸುತ್ತದೆ.

ಕೃತಿಯಲ್ಲಿ ಎದ್ದು ಕಾಣುವ ಅಂಶ ಸರಿಯಲ್ಲ ಎಂದು ಅನಿಸಿದ್ದನ್ನು ನೇರವಾಗಿ ಹೇಳುವ ಇಂದಿರಾ ಅವರ ಸ್ವಭಾವ. ಶಿವಮೊಗ್ಗದಲ್ಲಿ ಇಂಗ್ಲೀಷ್ ನಾಟಕದಲ್ಲಿ ಲಂಕೇಶ್ ಅವರ ಅಭಿನಯ ಕೆಟ್ಟದಾಗಿತ್ತು ಎಂದು ಬರೆಯುತ್ತಾರೆ. ಸಿನಿಮಾಗಳಲ್ಲಿ ಲಂಕೇಶ್ ಅಭಿನಯಿಸಿದಾಗಲೂ ಅವರದು ಇದೇ ಮಾತು. ಅತ್ಯಾಪ್ತ ವ್ಯಕ್ತಿ ಅಭಿನಯಿಸಿದಾಗ ಬಾಯಿ ಮಾತಿಗಾದರೂ ಹೊಗಳಿ ಅಟ್ಟಕ್ಕೇರಿಸುವ ಪ್ರವೃತ್ತಿ ಕಾಣುವುದಿಲ್ಲ.


ಶಿವಮೊಗ್ಗದಲ್ಲಿ ಇದ್ದ ದಿನಗಳು ಒಂದು ಹಂತವಾದರೆ ಬೆಂಗಳೂರು ವಾಸದ ದಿನಗಳು ಅವರಿಗೆ ಬದುಕಿನ ಬೇರೆ ಬೇರೆ ಮಜಲುಗಳ ದರ್ಶನವನ್ನೂ ಮಾಡಿಸುತ್ತದೆ. ಲಂಕೇಶ್ ಅವರು ಹೆಂಡತಿ, ಮೂರು ಮಕ್ಕಳನ್ನು ತೊರೆದು ಬರುತ್ತೇನೆಂದು ಒಬ್ಬಾಕೆಗೆ ಬರೆದ ಪತ್ರ ಇವರ ನಂಬಿಕೆ ತಳಹದಿಯನ್ನೆ ಅಲ್ಲಾಡಿಸುತ್ತದೆ. ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡ ನಂತರ ಕುಸಿಯದೆ ಇಂದಿರಾ ಅವರು ಸ್ವಂತಿಕೆ ರೂಢಿಸಿಕೊಂಡ, ಆರ್ಥಿಕವಾಗಿಯೂ ಸ್ವಾವಲಂಬನೆ ಸಾಧಿಸಿದ ವಿವರಗಳು ಛಲಗಾತಿಯ ವ್ಯಕ್ತಿತ್ವದ ದರ್ಶನ ಮಾಡಿಸುತ್ತದೆ.

ಈ ನಂತರವೂ ಲಂಕೇಶ್ ಅವರ ಬೆಳವಣಿಗೆಯಲ್ಲಿ ಇಂದಿರಾ ಮಹತ್ತರ ಪಾತ್ರ ವಹಿಸುತ್ತಾರೆ. ಇದೊಂದು ಮಹತ್ತರ ಕಾರ್ಯ, ಉಪಕಾರ ತನ್ನಿಂದ ಘಟಿಸಿತು ಎಂದೇನೂ ಅವರು ಬರೆಯದಿದ್ದರೂ ತಾನು ನಂಬಿದ್ಧ ಸಂಗಾತಿಯ ಅಭಿವೃದ್ಧಿಯನ್ನು ಅವರು ಕನಸುವುದು ಎದ್ದು ಕಾಣುತ್ತದೆ.

ಮಕ್ಕಳ ಶೈಕ್ಷಣಿಕ ಬೆಳವಣಿಗೆ, ಆರೋಗ್ಯದ ಕಡೆ ಗಮನ ನೀಡುತ್ತಲೆ ಆರಂಭಿಸಿದ ವ್ಯಾಪಾರದಲ್ಲಿ ಲಂಕೇಶ್ ಸಹಾಯ ಇಲ್ಲದೆ ಗಮನಾರ್ಹ ಸಾಧನೆಯನ್ನೂ ಮಾಡುತ್ತಾರೆ. ಆದರೆ ಎಲ್ಲಿಯೂ ಲಂಕೇಶ್ ಅವರನ್ನು ಟೀಕಿಸುವ, ನಿರ್ಲಕ್ಷಿಸುವ ಗೋಜಿಗೆ ಅವರು ಹೋಗುವುದಿಲ್ಲ. ಲಂಕೇಶ್ ಬದುಕಿನ ಕೊನೆವರೆಗೂ ತಮ್ಮ ಮಾರ್ದವತೆ, ಬೆಚ್ಚಗಿನ ಪ್ರೀತಿ ನೀಡುತ್ತಲೆ ತಮ್ಮದು ಖಡಕ್ ವ್ಯಕ್ತಿತ್ವ ಕೂಡ ಎಂದು ನಿರೂಪಿಸುತ್ತಾರೆ.ಈ ಎಲ್ಲ ಹಂತಗಳನ್ನು ಹೇಳುವಾಗ ಅವರು ಮಹಿಳಾ ಸ್ವಾತಂತ್ರ್ಯ, ಸಮಾನತೆಗಳ ಬಗ್ಗೆ ಭಾಷಣ ಮಾಡುವುದಿಲ್ಲ. ತಮ್ಮಷ್ಟಕ್ಕೆ ತಾವು ಮಾಡಬೇಕಾದ ಕೆಲಸ ಮಾಡುತ್ತಲೆ ಬೆಳೆದು ನಿಲ್ಲುತ್ತಾರೆ. ವೈಯಕ್ತಿಕ ಬದುಕಿನಲ್ಲಿ ನೊಂದು, ಭರವಸೆ ಕಳೆದುಕೊಂಡವರಿಗೆ ಬದುಕುವ ಛಾತಿ ಮೂಡಿಸುವ ಕಾರ್ಯವನ್ನು ಕೃತಿ ಮಾಡುತ್ತದೆ.

ಇಡೀ ಕೃತಿ ಇಂದಿರಾ ಅವರ ಬೆಳವಣಿಗೆ ಹಂತಗಳನ್ನು ವಿವರಿಸಿದರೂ ಲಂಕೇಶ್ ಸಂಪೂರ್ಣ ಆವರಿಸಿಕೊಂಡಿದ್ದಾರೆ. ಇದು ಲಂಕೇಶ್ ಅವರ ಮೇಲೆ ಇಂದಿರಾ ಇರಿಸಿದ ನಿರ್ವಾಜ್ಯ ಪ್ರೀತಿಯನ್ನೂ ಅಭಿವ್ಯಕ್ತಗೊಳಿಸುತ್ತದೆ. ಯಾವುದೆ ವಾದಗಳನ್ನು ಮುಂದಿಡದೆ ಓರ್ವ ಮಹಿಳೆ ಪತ್ನಿ, ತಾಯಿ ಪಾತ್ರಗಳ ಜವಾಬ್ದಾರಿ ಸಮರ್ಥವಾಗಿ ನಿರ್ವಹಿಸುತ್ತಲೆ ಉದ್ಯಮಿಯಾಗಿಯೂ ಸ್ವಾವಲಂಬನೆ ಸಾಧಿಸಿದ್ದನ್ನು ಹೇಳುವ ‘ಹುಳಿಮಾವು ಮತ್ತು ನಾನು’ ಈ ಎಲ್ಲ ಕಾರಣಗಳಿಗಾಗಿ ಕನ್ನಡ ಸಾಹಿತ್ಯ ಸಂದರ್ಭದ ಆತ್ಮಕಥೆಗಳ ಪ್ರಕಾರದಲ್ಲಿ ವಿಶಿಷ್ಟ ಕೃತಿ.

5 comments:

 1. ಇತ್ತೀಚಿಗೆ ಓದಿದ ಪುಸ್ತಕ. ಹೌದು ನೀವಂದಂತೆ ಆತ್ಮಾನುಕಂಪವಿಲ್ಲದೇ ಇಂದಿರಾ ಅವರು ಬರೆದ ರೀತಿ ಚೆನ್ನಾಗಿದೆ.

  ReplyDelete
  Replies
  1. ಇಂದಿರಾ ಅವರು ಬರವಣಿಗೆಗೆ ಹೊಸಬರಾದರೂ ಅದರ ಮೇಲಿನ ಹತೋಟಿ ಅಚ್ಚರಿ ಮೂಡಿಸುತ್ತದೆ. ಓದುಗರಿಗೆ ಅವರು ತಮ್ಮ ಬದುಕಿನ ಕಥೆ ಹೇಳುವ ರೀತಿ ಚೆನ್ನಾಗಿದೆ..

   Delete
 2. ಅನುಸೂಯFriday, 07 June, 2013

  ತುಂಬಾ ವಸ್ತುನಿಷ್ಠವಾದ ಆತ್ಮಕತೆ.ಪುಸ್ತಕ ತುಂಬ ಇಷ್ಠ ಆಯ್ತು.ಉತ್ತಮವಾಗಿ ವಿಮರ್ಶೆ ಮಾಡಿದ್ದಿರಾ.ಧನ್ಯವಾದಗಳು.

  ReplyDelete
 3. ನಾನು ಇತ್ತೀಚೆಗೆ ಓದಿದ ಒಂದು ಒಳ್ಳೆಯ ಪುಸ್ತಕ ಇದು. ಯಾರ ಅನುಕಂಪವನ್ನು ನಿರೀಕ್ಷಿಸದ ಹುಳಿಮಾವಿಗೆ ಸಾಟಿಯಾಗಿ ನಿಲ್ಲಬಲ್ಲ ಹೆಣ್ಣು ಇಂದಿರಾ ಅವರ ಧೈರ್ಯ ನಿಜಕ್ಕೂ ಅನುಕರಣೀಯ. ಪ್ರತಿಭಾವಂತನ ತಿಕ್ಕಲುತನ ,ರಾಜಿ, ಹೊಂದಾಣಿಕೆಗಳ ನಡುವೆ ಅರಳಿದ ಬದುಕು ನಿಜಕ್ಕೂ ಸುಂದರ...

  ReplyDelete