• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಲೂಸಿಯಾ ಚಿತ್ರದ ಗಮನ ಸೆಳೆದ ಹಾಡುಗಳು

ಸಾಮಾನ್ಯ ಜನರ ಎದೆಯಾಳದ ನೋವು- ನಲಿವುಗಳನ್ನು ಸಮರ್ಥವಾಗಿ, ಅದರದೇ ನುಡಿಕಟ್ಟಿನಲ್ಲಿ, ಲಯಬದ್ಧವಾಗಿ ಅಭಿವ್ಯಕ್ತಗೊಳಿಸುವ ಸಿನಿಮಾ ಅಥವಾ ಹಾಡುಗಳು ಜನಪ್ರಿಯವಾಗುತ್ತವೆ.  ಲೂಸಿಯಾ ಸಿನಿಮಾದಲ್ಲಿರುವ ಈ ಬಗೆಯ ಹಾಡುಗಳು ನನ್ನ ಗಮನ ಸೆಳೆದವು.

ಸರಳತೆ ಮತ್ತು ಕಾವ್ಯದ ಮಿಂಚುಗಳು:
ಕಾವ್ಯ ಗಹನವಾದಷ್ಟು ಅರ್ಥೈಸಿಕೊಳ್ಳುವಿಕೆಗೆ ಕಷ್ಟ.  ಜನ ಸಾಮಾನ್ಯರ ಮಾಧ್ಯಮವೂ ಆಗಿರುವ ಸಿನಿಮಾದಲ್ಲಿ ಸರಳತೆಯ ನೆಲೆಯೊಳಗೆ ಗಹನತೆ ಹೇಳುವುದು, ಜೊತೆಗೆ ಅದರಲ್ಲಿ ಕಾವ್ಯಾತ್ಮಕ ಅಂಶಗಳನ್ನು ತರುವುದು ಅಗತ್ಯ. ಎಲ್ಲ ಹಾಡುಗಳಲ್ಲಿಯೂ ಇದನ್ನು ಸಾಧಿಸುವುದು ಕಷ್ಟವಾದರೂ ಪ್ರೀತಿ ಪ್ರೇಮ ಮತ್ತು ವಿಷಾದ ಇರುವಂಥ ಸನ್ನಿವೇಶಗಳಲ್ಲಿ ಇಂಥ ಅಂಶಗಳನ್ನು ಪ್ರಯತ್ನಪಟ್ಟರೆ ತರಬಹುದು.
‘ಹೇಳು ಶಿವ ಯಾಕಿಂಗಾದೆ’ ಹಾಡಿನಲ್ಲಿ ಇಂಥ ಮಿಂಚುವ ಸಾಲುಗಳಿವೆ. ಎದೆ ಬಾಗಿಲು ಒತ್ತಿ ನಸು ನಕ್ಕಿತು ಹೂವೊಂದು’ ‘ಅವಳ ಕಣ್ಣ ನಗುವಿನಲ್ಲಿ ಮಿನುಗುತ್ತಿತ್ತು ಹನಿಯೊಂದು’ ಬೆಳದಿಂಗಳ ಹೀಟಿಗೆ ಎದ್ದು ಊಳಿಟ್ಟಿತು ನಾಯೊಂದು’ ‘ಸತ್ತ ಚಂದ ಮಾಮನಿಗೊಂದು ಶವಪೆಟ್ಟಿಗೆ ಸಿಗಬಹುದೆ’

ಈ ಸಾಲುಗಳನ್ನು ಕೇಳಿದಾಗ ಹಾಡಿನಲ್ಲಿ ರೂಪಾತ್ಮಕ ಅಂಶಗಳನ್ನು ತಂದಿರುವ ಗೀತೆ ರಚನೆಕಾರ ಯೋಗರಾಜ ಭಟ್ಟರ ಪ್ರತಿಭೆಗೆ ಸಲಾಮು ಹೇಳಲೇಬೇಕು. ಪ್ರತಿ, ಪ್ರೇಮ, ಪ್ರಣಯದ ಸಂಕೇತ ಚಂದ್ರ, ಇವನ ಪೂರ್ಣಚಂದ್ರ ಕಂಡಾಗಲೆಲ್ಲ ವಿರಹ ಹೆಚ್ಚಾಗುತ್ತಿದೆ. ಆದರೆ ಪ್ರೀತಿ ಸತ್ತು ಹೋದವರ ಪಾಲಿಗೆ ಆತ ಸತ್ತ ಚಂದಮಾಮ. ಅದನ್ನು ‘ಸತ್ತ ಚಂದ ಮಾಮನಿಗೊಂದು ಶವಪೆಟ್ಟಿಗೆ ಸಿಗಬಹುದೆ’ ಎಂದು ಹೇಳುವ ಮೂಲಕ ಪ್ರೇಮಿಯ ನೋವಿನ ತೀವ್ರತೆಯನ್ನು ಭಟ್ಟರು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.
‘ಹೇಳು ಶಿವ ಯಾಕಿಂಗಾದೆ’ ಇಡೀ ಹಾಡು ಸರಳವಾಗಿ ಆಡು ಮಾತಿನ ಸ್ವರೂಪದಲ್ಲಿದ್ದರೂ ಅಲ್ಲಲ್ಲಿ ಕಾಣಿಸುವ ಇಂಥ ಸಾಲುಗಳಿಂದಾಗಿ ನೆನಪಿನಲ್ಲಿ ನೆನಪಿನಲ್ಲಿ ಉಳಿಯುತ್ತದೆ. ನವೀನ್ ಸಜ್ಜು, ರಕ್ಷೀತ್ ನಗರ್ಲೆ ಮತ್ತು ಯೋಗರಾಜ್ ಭಟ್ ಈ ಹಾಡು ಹಾಡುವ ಮೂಲಕ ಅದಕ್ಕೆ ಮತ್ತಷ್ಟು ಪುಟ ಕೊಟ್ಟಿದ್ದಾರೆ. 
ಜಮ್ಮ ಜಮ್ಮ ಜಮ್ಮ ತಮಟೆ:
‘ಎದೆಯೊಳಗಿನ ತಮ ತಮ ತಮಟೆ ಯಾರೋ ಬಡಿದ್ಹಂಗಾಯ್ತತೆ, ಮಿದುಳಿನ್ ಮೂಲೆಲೆಲ್ಲೋ ಪದಗಳು ಗುನ್ ಗುನ್ ಗುಟುತೈತೆ, ‘ ಆಕಾಶ ಹತ್ತೊಕ್ಕೊಂದ್ ಏಣಿ, ಈ ಲೋಕ ಸುತ್ತೋಕ್ ಒಂದ್ ದೋಣಿ, ಕನಸೊಂದ ಬಿತ್ತೋಕೆ ಭೂಮಿ’ ಈ ಸಾಲುಗಳನ್ನು ಕೇಳಿದ ಕೂಡಲೆ ವ್ಹಾ.. ವ್ಹಾ.. ಎನ್ನುವಂತಾಗುತ್ತದೆ.
‘ಇವಳ ಕಂಡ ಕೂಡಲೆ ನೆಟ್ಟಗಾಯ್ತು ಬೈತಲೆ, ಏನು ಚಂದ ಗಂಡು ಮಕ್ಕಳು ಇಷ್ಟು ಕೆಟ್ಟೆರೆ’ ಇವಳ ಕಣ್ಣ ಕಾಡಿಗೆ ನನ್ನ ಮನೆಯ ಬಾಡಿಗೆ ಒಂದೇ ರೇಟು, ಡೌಟೆ ಇಲ್ಲ, ತುಂಬ ತೊಂದರೆ’ ಈ ಸಾಲುಗಳನ್ನು ಕೇಳಿದಾಗ ತುಟಿಯಂಚಿನಲ್ಲಿ ನಗು ತಾನಾಗಿ ಅರಳುತ್ತದೆ. ಜೊತೆಗ ಅಲಂಕಾರ ಪ್ರಿಯ ಹೆಣ್ಣನ್ನು ಮದುವೆಯಾದ ಸಾಮಾನ್ಯ ಆದಾಯದ ವ್ಯಕ್ತಿಯ ಸ್ಥಿತಿ ನೆನೆದು ಮರುಕವೂ, ನಗುವೂ ಒಟ್ಟಿಗೆ ಉಂಟಾಗುತ್ತದೆ !
ಈ ಹಾಡಿನಲ್ಲಿ ಕನಸು ಮತ್ತು ಕತೃತ್ವ ಶಕ್ತಿ ಇರುವವನ ಭಾವನೆಗಳನ್ನು ಗೀತೆ ರಚನೆಕಾರ ಪೂರ್ಣಚಂದ್ರ ತೇಜಸ್ವಿ ಆಕಾಶ ಹತ್ತೊಕ್ಕೊಂದ್ ಏಣಿ, ಈ ಲೋಕ ಸುತ್ತೋಕ್ ಒಂದ್ ದೋಣಿ, ಕನಸೊಂದ ಬಿತ್ತೋಕೆ ಭೂಮಿ’ ಸಾಲುಗಳಲ್ಲಿ ಬಹಳ ಸ್ಪಷ್ಟ, ನೇರವಾಗಿ ಹೇಳಿದ್ದಾರೆ. ರಚನೆಗೆ ನವೀನ್ ಸಜ್ಜು ಧ್ವನಿ ಮತ್ತಷ್ಟು ಮೆರುಗು ನೀಡಿದೆ.
ಯಾಕೋ ಬರ್ಲಿಲ್ಲಾ:
‘ಬಾನಲಿತ್ತು ಮುರಿದೋದ್ ಚಂದ್ರ, ಕೈಯಲಿತ್ತು ಹರಿದೋದ್ ರೊಟ್ಟಿ, ಎರಡೂ ಕೂರ್ಸೆ ಆಡೋ ಆಟಕೆ ಯಾಕೋ ಬರ್ಲಿಲ್ಲ, ಇವಳು ಯಾಕೋ ಬರ್ಲಿಲ್ಲ’ ‘ ಭೂಮಿ ಬಟ್ಲಲ್ ಕಿತ್ತು ತಂದೆ ನಕ್ಷತ್ರವನ್ನೆಲ್ಲ’ ಸೇರು ತುಂಬ ಅಕ್ಕಿ ತುಂಬಿ ಹೊಸಿಲಲ್ಲಿಟ್ಟಿದೆ, ಬಲಗಾಲ್ಲಿಟ್ಟು ಬರ್ತಾಳಂತಾ ಬಾಗಿಲು ಕಾಯ್ತಿದ್ದೆ, ಅಲ್ಲೇ ಅವಳ ಕನಸು ಕಾಣ್ತಿದೆ. ಎದೆ ಮೇಲ್ ಜಾಡ್ಸಿ ಒಂದಗಾಯ್ತು ಅವಳಾಡಿದ್ ಒಂದ್ ಮಾತು’
ಈ ಸಾಲುಗಳು ರೂಪಕವಾಗುವ ಶಕ್ತಿಯನ್ನು ಪಡೆದುಕೊಂಡಿವೆ. ಧಕ್ಕೆ ಉಂಟಾಗಿರುವ ಪ್ರೇಮ, ಆರ್ಥಿಕ ಪರಿಸ್ಥಿತಿಯನ್ನು ಹೇಳುವುದರ ಜೊತಗೆ ಇದೆಲ್ಲವೂ ಸರಿ ಮಾಡುವ ಆಟಕ್ಕೆ ಅವಳು ಬರ್ಲಿಲ್ಲ’ ಮನೆಯೊಳಗೆ ಧಾನ್ಯ ಚೆಲ್ಲಬೇಕಾದವಳ ಮಾತು ಎದೆ ಇರಿದಿದೆ’ ಎನ್ನುವುದನ್ನು ಹೇಳಿರುವ ರೀತಿ ಅನನ್ಯ. ಭೂಮಿ ಬಟ್ಲಲ್ ಕಿತ್ತು ತಂದೆ ನಕ್ಷತ್ರವನ್ನೆಲ್ಲ’ ಎಂದು ಬರೆಯುವ ಮೂಲಕ ಹಾಡಿಗೊಂದು ಕಾವ್ಯಾತ್ಮಕ ಗೇಯತೆಯನ್ನು ಪೂರ್ಣಚಂದ್ರ ತೇಜಸ್ವಿ ತಂದುಕೊಟ್ಟಿದ್ದಾರೆ. ಅಷ್ಟೆ ಆದ್ರತೆಯಿಂದ ಇದನ್ನು ನವೀನ್ ಸಜ್ಜು ಹಾಡಿದ್ದಾರೆ
ನೀ ತೊರೆದ ಗಳಿಗೆಯಲಿ:
ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ, ನೀ ದೇಹದೊಳಗೊ, ದೇಹ ನಿನ್ನೊಳಗೋ, ನೀ ಕನಸಿನೊಳಗೋ, ಕನಸು ನಿನ್ನೊಳಗೋ, ನೀ ಅಮಲಿನೊಳಗೋ ಅಮಲು ನಿನ್ನೊಳಗೋ, ಮನಸು, ದೇಹಗಳೆರಡೂ ಸೆಳೆಯುವ ಸುಳಿಯಂತಿರುವ ಪ್ರೇಮದೊಳಗೋ, ನೀ ತೊರೆದ ಗಳಿಗೆಯಲಿ ಎದೆಯ ತುಂಬ ನಿನ್ನಾ ಗುರುತು, ನೆನಪುಗಳ ಮಳಿಗೆಯಲಿ ಇನ್ಯಾರೂ ಇಲ್ಲ ನಿನ್ನ ಹೊರತು’
ಈ ಸಾಲುಗಳಲ್ಲಿ ತನ್ನ ಪ್ರೇಮಿಯನ್ನು ಉತ್ಕಟವಾಗಿ, ಭಾವ ತೀವ್ರತೆಯಿಂದ ನೆನೆಯುತ್ತಿರುವ ಹೆಣ್ಣಿನ ಮನಸ್ಥಿತಿಯನ್ನು ಗೀತೆ ರಚನೆಕಾರ ರಘುಶಾಸ್ತ್ರಿ ಬಹು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಈ ಹಾಡಿನ ಮೊದಲ ಸಾಲುಗಳನ್ನು ಕನಕದಾಸರ ರಚನೆಯಿಂದ ಪ್ರೇರಿತವಾಗಿ ಎತ್ತಿಕೊಂಡಿರುವುದು ಕೂಡ ಅಭಾಸ ಎನ್ನಿಸುವುದಿಲ್ಲ. ಬದಲಾಗಿ ಹಾಡಿಗೆ ಶಕ್ತಿ ಮತ್ತು ಬದುಕಿನ ದ್ವಂದ್ವ ಹೇಳುವ ಕಾವ್ಯ ಧ್ವನಿಯನ್ನು ತಂದುಕೊಟ್ಟಿದೆ. ಅನನ್ಯ ಭಟ್ ಇದನ್ನು ಭಾವಪೂರ್ಣವಾಗಿ ಹಾಡಿದ್ದಾರೆ.
ತಿನ್ಬೇಡ ಕಮ್ಮಿ…
ಈ ಇಡೀ ಸಿನಿಮಾದ ಹಾಡುಗಳಲ್ಲಿಯೆ ಹೈಲೈಟ್ ಎನಿಸುವಂಥ ಹಾಡು ತಿನ್ಬೇಡ ಕಮ್ಮಿ. ಇದರಲ್ಲಿ ಜನಪದೀಯ ಅಂಶಗಳು ಸಹಜವಾಗಿಯೇ ಮಿಳಿತಗೊಂಡಿವೆ. ಮಂಡ್ಯದ ಗ್ರಾಮೀಣ ನುಡಿಗಟ್ಟಿನ ಶಕ್ತಿಯನ್ನು ಬಹು ಸಮರ್ಥವಾಗಿ ಹಾಡಿನಲ್ಲಿ ತರಲಾಗಿದೆ.
ಅಮ್ಮಿ ಎಂದರೆ ಅಮ್ಮ ಎಂದರ್ಥ. ಆದರೆ ಅಮ್ಮಿಯನ್ನು ಉಚ್ಚರಿಸುವಾಗಿನ ಶೈಲಿಯಿಂದ ಅದಕ್ಕೆ ಒರಟು ಗುಣ ಬಂದಿದೆ. ಆದರೆ ಈ ಹಾಡಿನಲ್ಲಿ ಆ ಒರಟು ಗುಣ ಮರೆಸಿ, ಅದಕ್ಕೊಂದು ಆತ್ಮೀಯತೆ ತಂದು ಕೊಟ್ಟಿರುವುದು ಮೆಚ್ಚುಗೆಯ ಅಂಶ. ಇಡೀ ಹಾಡು ಗ್ರಾಮೀಣರ ಊಟ- ತಿಂಡಿಯ ಶ್ರೀಮಂತಿಕೆ ಜೊತೆಗೆ ಯಾವುದನ್ನು ಹೆಚ್ಚು ತಿನ್ನಬೇಕು, ತಿನ್ನಬಾರದು ಎಂದು ಹೇಳುವ ಅಂಶಗಳನ್ನು ಒಳಗೊಂಡಿದೆ.
ತಿನ್ಬೇಡಕಮ್ಮಿ ತಿನ್ಬೇಡಕಮ್ಮಿ ನೀ ನೆಲಗಡ್ಲೆಯಾ’ ಎಂದು ಹೇಳುವ ಮೂಲಕ ನೆಲಗಡ್ಲೆ ತಿಂದರೆ ಆಗುವ ತೊಂದರೆ ಹೇಳಲಾಗುತ್ತಿದೆ. ಇದನ್ನು ಹೆಚ್ಚಾಗಿ ತಿಂದರೆ ವಾಯು, ರಕ್ತ ಹೀನತೆ ಉಂಟಾಗುತ್ತದೆ ಎಂದು ಗ್ರಾಮೀಣರು ಅನುಭವದಿಂದ ಕಂಡು ಕೊಂಡಿದ್ದಾರೆ.
ಇದಕ್ಕೆ ಬದಲಾಗಿ ‘ ಉಪ್ಪು- ಕಾರ ಹುಳಿ ಬಿಟ್ಕಂಡು, ಕಪ್ಪು ರಾಗಿ ಮುದ್ದೆ ತಿನ್ನೋದು ಒಳ್ಳೆದು ಕಮ್ಮಿ’ ಎಂದು ಹೇಳಲಾಗಿದೆ. ಇದರಿಂದ ಬರುವ ಆರೋಗ್ಯದ ಬಗ್ಗೆಯೂ ತಿಳಿ ಹೇಳಲಾಗಿದೆ. ಒಂದು ವೇಳೆ ಮಾಂಸಹಾರಿಯಾಗಿದ್ದರೆ ‘ ಹೇಟೆ ಕೋಳಿ ಕೊಬ್ಬು ಹೆಚ್ಕಂಡ್ ಕುಯ್ಕಂಡು ಹೆಸ್ರು ಮಾಡ್ಕಂಡು ಸೊರ್ದು ನೋಡಮ್ಮಿ’ ಎಂದು ಹೇಳುವ ಮೂಲಕ ಇದರ ರುಚಿಯ ಘಮ್ಮತ್ತನ್ನು ಅನುಭವಿಸಿ ನೋಡು ಎಂದು ಗೀತೆ ರಚನೆಕಾರ ಪೂರ್ಣಚಂದ್ರ ತೇಜಸ್ವಿ ಚೆನ್ನಾಗಿ ಬರೆದಿದ್ದಾರೆ.
ಹೆಸ್ರು ಅಂದರೆ ಸಾರು/ಸಾಂಬಾರ್, ಕೋಳಿ ಸಾರಾಗಿದ್ದರೆ ಅದನ್ನು ಚೆನ್ನಾಗಿ ಕುಡಿದು ನೋಡು ಎಂದು ಬಹಳ ಘಮ್ಮತ್ತಾಗಿ ಹೇಳಿದ್ದಾರೆ. ‘ ಬಾರಮ್ಮಿ, ಕೂರಮ್ಮಿ, ಕನ್ನಡ ಕಲಿಯಮ್ಮಿ, ತುತ್ತು ಮಾಡಿ ನುಂಗುವಷ್ಟು ಸುಲಭ ಕಣಮ್ಮಿ’ ಎಂದು ಬರೆಯುವ ಮೂಲಕ ಸುಲಿದ ಬಾಳೆಹಣ್ಣಿನ ಥರ ಇರುವ ಕನ್ನಡ ಭಾಷೆಯ ಸರಳತೆ, ಸುಲಲಿತ ಅಂಶಗಳನ್ನು ಹೇಳಿದ್ದಾರೆ. ಈ ಹಾಡನ್ನು ಬಪ್ಪಿ ಬ್ಲಾಸಮ್, ಪೂರ್ಣಚಂದ್ರ ತೇಜಸ್ವಿ, ಅರುಣ್ ಎಂ. ಅದ್ಬುತವಾಗಿ ಹಾಡಿದ್ದಾರೆ. ಇದರ ಲಯ, ಗೇಯ, ಲವಲವಿಕೆ ನಿಜಕ್ಕೂ ವಿಶಿಷ್ಟ.
ಪಿಕ್ಚರೈಜೆಶನ್:
ಹಾಡುಗಳು ಚೆನ್ನಾಗಿದ್ದು, ಪಿಕ್ಚರೈಜೆಶನ್ ಡಲ್ ಆಗಿದ್ದರೆ ನೋಡುಗರಿಗೆ ತೀವ್ರ ಬೇಸರವಾಗುವುದು ಸಹಜ. ಆದರೆ ಇಲ್ಲಿ ಪ್ರತಿ ಹಾಡಿನ ದೃಶ್ಯಗಳ ಚಿತ್ರೀಕರಣ ಮತ್ತು ನೃತ್ಯ ಸಂಯೋಜನೆ ಆಕರ್ಷಕ. ಎಲ್ಲಿಯೂ ಅಭಾಸವಾಗದಂತೆ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಬಳಸಿರುವ ಕಾಸ್ಟೂಮ್ ಸಹ ಸೂಕ್ತವಾಗಿರುವ ರೀತಿ ಆರುಂಧತಿ ಅಂಜನಪ್ಪ ಶ್ರಮ ವಹಿಸಿದ್ದಾರೆ.ಮೇಕಪ್ ಕೂಡ ಢಾಳಾಗಿಲ್ಲ. ಹಿತಮಿತವಾಗಿರುವಂತೆ ವೈಢೂರ್ಯ ಲೋಕೇಶ್ ನೋಡಿಕೊಂಡಿದ್ದಾರೆ.
ಕ್ಯಾಮರಾ ವರ್ಕ್ ಮತ್ತು ಬೆಳಕು:
ಹಾಡುಗಳ ಚಿತ್ರೀಕರಣಕ್ಕೆ ಕ್ಯಾನನ್ 5 ಡಿ ಬಳಸಲಾಗಿದೆ ಎಂದು ತಂತ್ರಜ್ಞ ಮಹೇಶ್ ಹೇಳಿದರು. ಇದೊಂದು ಅಪರೂಪದ ಅಂಶ. ದೃಶ್ಯಗಳು ಬಹಳ ಸ್ಪಷ್ಟವಾಗಿ ಮೂಡಿಬಂದಿವೆ. ಕ್ಯಾಮರಾ ಬಳಸಿರುವ ರೀತಿಯೂ ಅನನ್ಯ. ಎಲ್ಲಿಯೂ ಶೇಕ್ ಆಗುವುದಿಲ್ಲ. ಕ್ಯಾಮರಾ ಆ್ಯಂಗಲ್ ಗಳು ಸಶಕ್ತವಾಗಿವೆ. ಛಾಯಾ ಗ್ರಹಣ ತಂಡದ ಮುಖ್ಯಸ್ಥ ಸಿದ್ದಾರ್ಥ ನುನಿ ಮತ್ತು ಜೊತೆಗಾರರಾದ ಗೊಮಟೇಶ್ ಉಪಾಧ್ಯೆ, ನಿಶಾಂತ್ ಬಹಳ ಪರಿಶ್ರಮ ಪಟ್ಟಿದ್ದಾರೆ. ಈ ತಂಡ ಹಾಡಿಗೆ ಮಾಡಿರುವ ಬೆಳಕಿನ ಸಂಯೋಜನೆ ಸುಂದರ.

ಅಭಿನಯ:
ಹಾಡುಗಳಲ್ಲಿ ಎಲ್ಲಿಯೂ ಕಿಂಚಿತ್ತೂ ಅಭಾಸವಾಗದಂತೆ ಪಾತ್ರಗಳೆ ತಾವಾಗಿ ಸತೀಶ್, ಶೃತಿ ಹರಿಹರನ್, ಹರ್ಷಿಕಾ ಶೆಟ್ಟಿ ಮತ್ತು ಇನ್ನಿತರ ಪಾತ್ರಧಾರಿಗಳು ಅಭಿನಹಿಸಿದ್ದಾರೆ. ಇವರೆಲ್ಲರ ಮುಖಗಳಲ್ಲಿ ಕಾಣಿಸುತ್ತಿರುವ ಜೀವನೋತ್ಸವ ಹಾಡುಗಳ ಪರಿಣಾಮವನ್ನು ಹೆಚ್ಚಿಸುವುದರಲ್ಲಿಯೂ ಪಾತ್ರ ವಹಿಸಿವೆ.
ಗೀತೆಗಳನ್ನು ಬರೆದಿರುವ ಜೊತೆಗೆ ಸಂಗೀತವನ್ನೂ ನೀಡಿರುವ ಪೂರ್ಣಚಂದ್ರ ತೇಜಸ್ವಿ, ಈ ಎಲ್ಲ ಅಂಶಗಳು ಸಂಯೋಜಿತವಾಗಿ, ಹದವಾಗಿ ಮೂಡುವಂತೆ ಮಾಡಿರುವ ಚಿತ್ರಕಥೆಗಾರ, ನಿರ್ದೇಶಕ ಪವನ್ ಕುಮಾರ್ ಮತ್ತು ಅವರ ತಂಡದ ಇನ್ನಿತರರು ವಿಶೇಷ ಪರಿಶ್ರಮ ಪಟ್ಟಿರುವುದು ತಿಳಿಯುತ್ತದೆ. ಈ ಎಲ್ಲ ಕಾರಣಗಳಿಂದಾಗಿಯೆ ‘ಲೂಸಿಯಾ’ ಒಟ್ಟು ಮೇಕಿಂಗ್ ಹೇಗಿರಬಹುದು ಎಂಬ ಕುತೂಹಲ ತೀವ್ರವಾಗಿದೆ.

7 comments:

 1. Making and story help roti and concept nimmanna chainda alugadokke bidalla sir.... And all acting is super.... Psychological thrilling with namma sogadu tumbiro anta ondu hosa prayatanada movie sir... Its very nice and super..

  ReplyDelete
 2. Sorry miss mad de.... Rumba chenagi songs na analyze madiddira sir.. Yavde kavite avara life ge attira adaga hege iruute and a sukshama vagi analyses madi ddira very nice... Keep going,..

  ReplyDelete
 3. Sorry miss mad de.... Tumba chenagi songs na analyze madiddira sir.. Yavde kavite avara life ge attira adaga hege iruute and a sukshama vagi analyses madi ddira very nice... Keep going,..

  ReplyDelete
 4. ವರದಿಗಾರರೇ ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ, ನೀವು ಬಳಸಿರುವ ಪದಗಳು, ಅವುಗಳ ಲಾಲಿತ್ಯ ಸೂಪರ್, ನೀವು ಸಹ ತುಂಬಾ ಸಾಹಿತ್ತಿಕವಾಗಿಯೇ ವಿಶ್ಲೇಷಿಸಿ ಬರೆದಿದ್ದೀರಾ...:) ನಾನೂನು ಮಂಡ್ಯ-ಮೈಸೂರಿನ ಹಳ್ಳಿ ಸೋಗದಡಿನಲ್ಲೇ ಬೆಳೆದು ಬಂದವ, ಆ ಕಾರಣದಿಂದಲೇನೋ ಈ ಎಲ್ಲಾ ಹಾಡುಗಳು ಆಪ್ತ ಎನಿಸಿವೆ, ನನ್ನೊಳಗೆ ಜಾಗ ಮಡ್ಕೊಂಡ್ಬಿಟ್ಟಿವೆ, ಮತ್ತೆ ನೀವು ಬರೆದಿರುವಂತೆ ನಾಯಕಿಯ ಹೆಸರು ತಪ್ಪು.. ಅದು ಶ್ರುತಿ ಹಾಸನ್ ಅಲ್ಲ ಶ್ರುತಿ ಹರಿಹರನ್ ...:) ಹಾಡುಗಳ ಹಾಗೂ ಚಿತ್ರದ ತುಣುಕುಗಳ ಕಾರಣಗಳಿಂದಾಗಿಯೆ ‘ಲೂಸಿಯಾ’ ಚಿತ್ರದ ಮೇಕಿಂಗ್ ಹೇಗಿರಬಹುದು, ಹೇಗೆ ಪ್ರತಿಯೊಬ್ಬರು ತಮ್ಮ ತಮ್ಮ ವೈಯಕ್ತಿಕ ನೆಲೆಗಟ್ಟಿನಲ್ಲಿ ಈ ಹಾಡುಗಳನ್ನ visualize ಮಾಡ್ಕೊಂಡಿರ್ತೀವೋ ಹಾಗೇನೇ ಮೂಡಿ ಬರುತ್ತೋ ಎಂಬ ಕುತೂಹಲ ಕಾತರದಿಂ ತೀವ್ರತರವಾಗಿದೆ .....::)

  ReplyDelete
 5. ‘ಸತ್ತ ಚಂದ ಮಾಮನಿಗೊಂದು ಶವಪೆಟ್ಟಿಗೆ ಸಿಗಬಹುದೆ’ಅದ್ಭುತ ಅನ್ನಿಸಿದಂತಾ ಸಾಲು.
  Looking forward to the movie.

  ReplyDelete
 6. ‘ಅವಳ ಕಣ್ಣ ನಗುವಿನಲ್ಲಿ ಮಿನುಗುತ್ತಿತ್ತು ಹನಿಯೊಂದು’ ಬೆಳದಿಂಗಳ ಹೀಟಿಗೆ ಎದ್ದು ಊಳಿಟ್ಟಿತು ನಾಯೊಂದು’ ‘ಸತ್ತ ಚಂದ ಮಾಮನಿಗೊಂದು ಶವಪೆಟ್ಟಿಗೆ ಸಿಗಬಹುದೆ’
  Superb lines...ittechege neenasam sathish ellarigu ishta agtha iddare..avara manarism, dialogue delevery is wonderful

  ReplyDelete
 7. ಸೊಗಸಾದ ಬರಹ , ನೀವು ಬಾನಲ್ಲಿತ್ತು ಮುರ್ದೋದ್ ಚಂದ್ರ.....ಗೀತೆಯನ್ನು ಸೂಕ್ಷ್ಮವಾಗಿ ಆಲಿಸಿದರೆ , ಅದು ಹೂವಿನ್ ಬಟ್ಟಲಲ್ ಕಿತ್ತು ತಂದೆ ನಕ್ಷತ್ರಾನೆಲ್ಲ ಅಂತ ಕೇಳ್ಸುತ್ತೆ , ದಯವಿಟ್ಟು ಇನ್ನೊಮ್ಮೆ ಸ್ಪಷ್ಟವಾಗಿ ಆಲಿಸಿ ಅದು ಭೂಮಿ ಬಟ್ಟ್ಲೋ ಅಥ್ವಾ ಹೂವಿನ್ ಬಟ್ಟ್ಲೋ ಅಂತ.ಅದು ಹೂವಿನ್ ಬಟ್ಲೆ ಇರ್ಬೇಕು ಯಾಕಂದ್ರೆ ಮುಂದಿನ ಸಾಲು ಹೇಳುತ್ತೆ ಕಟ್ಟಿ ಮುಡ್ಸೋ ಹೊತ್ತಿಗೆನೆ ಬೆಳಕರ್ದೊಯ್ತ್ಹಲ್ಲ..

  ReplyDelete