• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಮಂಕಾಗಿರುವ ‘ಚಂದ್ರ’

ರಾಜ ಮನೆತನದ ಯುವತಿ, ಸಂಗೀತ ವಿದ್ವಾಂಸ ಮನೆತನದ ಯುವಕ ಇವರಿಬ್ಬರ ನಡುವೆ ಪ್ರೇಮ ಮೊಳೆಯುತ್ತದೆ. ಅದಕ್ಕೆ ಎದುರಾಗುವ ಅಡ್ಡಿ- ಆತಂಕಗಳು,  ಕೊನೆಗೆ ಅವುಗಳ ನಿವಾರಣೆಯ ಕಥೆಯನ್ನು ಕನ್ನಡದ ಹೊಸ ಚಿತ್ರ ‘ ಚಂದ್ರ’ ಹೇಳುತ್ತದೆ. ಈ ಕಥೆಯನ್ನು ನಿರ್ದೇಶಕಿ ಪ್ರೇಕ್ಷಕರಿಗೆ ಕಟ್ಟಿ ಕೊಟ್ಟಿರುವ ರೀತಿ ಹೇಗೆ… ?


ಪ್ರಜಾ ಪ್ರಭುತ್ವದ ದಿನಗಳಲ್ಲಿ ಬದುಕುತ್ತಾ ರಾಜ ಪ್ರಭುತ್ವದ ವೈಭವದ  ದಿನಗಳನ್ನು ನೆನೆಯುವ, ಈಗಲೂ ಅದೇ ಅದ್ದೂರಿತನ ಬೇಕೆಂದು ಬಯಸುವ ರಾಜ ಮನೆತನದ ಕುಟುಂಬದ ಮುಖ್ಯಸ್ಥ. ಇದೇ ಧೋರಣೆಯನ್ನು ಹೊಂದಿರುವ ಕಿರಿಯ ಸಹೋದರ. ಸದಾ ರೇಷ್ಮೆಸೀರೆ, ಮೈ ತುಂಬ ಚಿನ್ನಾಭರಣಗಳನ್ನು ಹೇರಿಕೊಂಡ ಇವರ ಪತ್ನಿಯಂದಿರು. ಈಗಲೂ ಮಹಾರಾಜ ಎಂದು ಕರೆಸಿಕೊಳ್ಳಲು ಇಷ್ಟಪಡುವ ರಾಜ (ಶ್ರೀನಾಥ್)ಗೆ ಓರ್ವ ಮಗಳು ಚಂದ್ರಾವತಿ. ಈಕೆ ನಾಟ್ಯ, ಸಂಗೀತ, ಸಮರಕಲೆಯಲ್ಲಿ ಪರಿಣಿತೆ. ( ಶ್ರೇಯಾ ಶರಣ್), ಹಾಸ್ಯಾಸ್ಪದ ವರ್ತನೆಯ ಮಗ ಸುಕುಮಾರ್ (ವಿವೇಕ್)
ರಾಜ ಕುಟುಂಬದವರಿಗೆ ಸಂಗೀತ ಹೇಳಿಕೊಡುವ ವಿದ್ವಾಂಸನ ಮಗ ಚಂದ್ರಹಾಸ ( ಪ್ರೇಮ್ ಕುಮಾರ್) ಹಿಮಾಲಯಕ್ಕೆ ಹೋಗಿ ಬರುತ್ತಾನೆ. ಈತ ಸಂಗೀತ, ಸಮರ ಕಲೆ, ಆರ್ಯುವೇದದಲ್ಲಿ ಪರಿಣಿತ. ಚಂದ್ರಾವತಿ ಮತ್ತು ಆಕೆಯ ಚಿಕ್ಕಪ್ಪನ ಮಗಳಿಗೆ ಸಂಗೀತ ಹೇಳಿಕೊಡಲು ಬರುತ್ತಾನೆ. ಇವರಿಬ್ಬರಿಗೂ ಮೊದಲ ನೋಟದಲ್ಲಿಯೇ ಪ್ರೇಮಾಂಕುರವಾಗಿ ಬಿಡುತ್ತದೆ ! ಆದರೆ ಪರಸ್ಪರ ಬಾಯಿಬಿಟ್ಟು ಹೇಳಿಕೊಳ್ಳುವುದಿಲ್ಲ !!
ತನ್ನ ಪತಿಯಾಗುವ ವ್ಯಕ್ತಿ ಬಗ್ಗೆ ಬಹು ರಮ್ಯ ಕಲ್ಪನೆಗಳನ್ನು ಕಟ್ಟಿಕೊಂಡ ಚಂದ್ರಾವತಿ ನೋಡಲು ಬಂದ ವರಗಳನ್ನೆಲ್ಲ ತಿರಸ್ಕರಿಸುತ್ತಿರುತ್ತಾಳೆ. ಆದರೆ ಅಮೆರಿಕದಲ್ಲಿ ನೆಲಸಿದ ಸಮೀಪ ಬಂಧು ಕುಟುಂಬದ ಯುವಕನೊಂದಿಗೆ ಮದುವೆ ನಿಶ್ಚಯವಾಗುತ್ತದೆ. ನಂತರ ಇವರಿಬ್ಬರ ವೇದನೆ ಶುರುವಾಗುತ್ತದೆ. ನಂತರ ಅಂತ್ಯವೂ ಆಗುತ್ತದೆ.
ಚಿತ್ರದಲ್ಲಿ ನೀವು ಎಲ್ಲಿಯೂ ತರ್ಕ ಕಾಣುವುದಿಲ್ಲ. ಪ್ರಬುದ್ಧ ಮನಸ್ಥಿತಿಯೆಂದು ತೋರಿಸಲ್ಪಡುವ ಚಂದ್ರಾವತಿ, ಚಂದ್ರಹಾಸ ನಡುವೆ ಪ್ರೇಮ ಮೊಳೆಯಲು ಕಾರಣವಾದರೂ ಏನು ಎಂಬುದು ಅರ್ಥವೇ ಆಗುವುದಿಲ್ಲ. ಸಂಗೀತ ಪಾಠ ಹೇಳಿಕೊಡಲು ಬಂದವನು ಆ ಕೆಲಸ ಮಾಡಿದಂತೆ ಕಾಣುವುದಿಲ್ಲ. ಈತನಿಗೆ ಅರಮನೆಗೆ ಬರಲು ಹೊತ್ತು ಗೊತ್ತು ಇರುವುದಿಲ್ಲ. ಹಗಲು- ರಾತ್ರಿ ಅಲ್ಲಿಯೇ ಠಿಕಾಣಿ. ರಾಜ ಕುಮಾರಿ ಸ್ನಾನ ಮಾಡಿ ತನ್ನ ಬೆಡ್ ರೂಮಿಗೆ ಬರುವ ಹಾದಿಗೂ ಮತ್ತು ಬೆಡ್ ರೂಮಿನೊಳಗೂ ಬರಲು ಅಡೆತಡೆಯಿಲ್ಲ, ಆಕ್ಷೇಪವೂ ಇಲ್ಲ.

ಇವರಿಬ್ಬರೂ ಪರಸ್ಪರ ನೋಡುತ್ತಾ, ಯುಗಳ ಗೀತೆ ಹಾಡುವ ಕನಸು ಕಾಣುತ್ತಾ ಇರುವಾಗಲೆ ಚಿತ್ರಕ್ಕೆ ಮಧ್ಯಾಂತರ ಘೋಷಣೆಯಾಗುತ್ತದೆ. ಆದರೆ ಕಥೆ ಆರಂಭವಾದಂತೆ ಪ್ರೇಕ್ಷಕನಿಗೆ ಅನಿಸುವುದೆ ಇಲ್ಲ. ಮಧ್ಯಾಂತರದ ನಂತರ ಕಥೆ ಅಮೆರಿಕಾದಲ್ಲಿ ಮುಂದುವರಿದು ಇಂಡಿಯಾಕ್ಕೆ ಹಿಂದಿರುಗುತ್ತದೆ. ಚಂದ್ರಾವತಿ ಅಲ್ಲಿಗೆ ಹೋಗಿ ಹಿಂದಿರುಗುತ್ತಾಳೆ.
ಸಿನಿಮಾ ಅಂದ ಮೇಲೆ ಒಂದು ಅಂತ್ಯ ಬೇಕು ತಾನೇ, ಪ್ರೇಮ- ಪ್ರೀತಿಯ ಬಗ್ಗೆ ನಾಯಕಿ ದೀರ್ಘ ಭಾಷಣದ ನಂತರ ಚಿತ್ರ ಮುಗಿಯುತ್ತದೆ. ಆಗ ಪ್ರೇಕ್ಷಕನಿಂದ ಅಬ್ಬಾ ಚಿತ್ರ ಮುಗಿಯಿತು ಎಂಬ ಸಮಾಧಾನದ ನಿಟ್ಟುಸಿರು ಜೋರಾಗಿಯೆ ಬರುತ್ತದೆ.
ನಾಯಕನ ಪರಾಕ್ರಮ ಹೇಗೆಂದು ತೋರಿಸಲು ನಿರ್ದೇಶಕಿ ಹಳಸಲು ತಂತ್ರಕ್ಕೆ ಮೊರೆ ಹೋಗಿದ್ದಾರೆ. ಕಳ್ಳನನ್ನು ಬೆನ್ನಟ್ಟಿ ಹಿಡಿಯಲು ಓಡುವ ನಾಯಕ, ಆತ ಸನಿಹದಲ್ಲಿಯೆ ಇದ್ದರೂ ಹಾದಿ ಬದಿ ಸಿಕ್ಕ ಕುದುರೆಯೇರಿ ಹಿಡಿಯಲು ದೌಡಾಯಿಸುವುದು ನಗು ತರಿಸುತ್ತದೆ. ಸಾಹಸ ದೃಶ್ಯಗಳ ಸಂಯೋಜನೆಯೂ ಸರಿಯಾಗಿಲ್ಲ.
ಅನಗತ್ಯವಾಗಿ ಪದೇಒದೇ ಪ್ರೇಮ್ ಸಿಕ್ಸ್ ಪ್ಯಾಕ್ ಮೈ ತೋರಿಸಲಾಗಿದೆ. ನಾಯಕಿ ಸೌಂದರ್ಯವತಿಯೋ ಅಲ್ಲವೋ ಎಂಬುದು ಪ್ರೇಕ್ಷಕನಿಗೆ ಆಕೆ ತೆರೆ ಮೇಲೆ ಕಂಡಾಗಲೆ ಗೊತ್ತಾಗುತ್ತದೆ. ಆದರೆ ಆಕೆ ಅಪರಿಮಿತ ಸುಂದರಿ ಎನ್ನುವುದನ್ನು ತೋರಿಸಲು ನಿರ್ದೇಶಕಿ ಪರದಾಡಿದ್ದಾರೆ. ಆಕೆ ಸ್ನಾನ ಮಾಡುವ ದೃಶ್ಯವನ್ನು ಅನಗತ್ಯವಾಗಿ ತರಲಾಗಿದೆ. ಮಲಗುವಾಗ ಮಹಿಳೆ ಒಡ್ಯಾಣ (ಸೊಂಟಕ್ಕೆ ಹಾಕುವ ದಪ್ಪನೆ ಆಭರಣ) ಧರಿಸಿ ಮಲಗುವುದಿಲ್ಲ ಎಂಬ ಸೂಕ್ಷ್ಮ ಅಂಶದತ್ತಲೂ ನಿರ್ದೇಶಕಿ ಗಮನ ನೀಡಿಲ್ಲ. ಇಂಥ ಅನೇಕ ಸೂಕ್ಷ್ಮ ಅಂಶಗಳನ್ನು ಅವರು ಮರೆತಿರುವುದು ಬೇಸರ ತರಿಸುತ್ತದೆ.
ಮೈಸೂರು ಅರಮಮನೆ ಒಳಾಂಗಣದ ಕೆಲವು ಭಾಗಗಳು, ಹೊರಾಂಗಣವನ್ನು ಬಳಸಿಕೊಳ್ಳಲಾಗಿದೆ. ತನ್ನ ನೋಡಲು ಬಂದ ವರನೋರ್ವನಿಗೆ ಚಂದ್ರಾವತಿ ತಮ್ಮ ರಾಜ ಕುಟುಂಬದ ಹಿರಿಯರ ಭಾವಚಿತ್ರಗಳನ್ನು ತೋರಿಸುತ್ತಾ ಸಂಬಂಧಗಳ ಬಗ್ಗೆ ಹೇಳುತ್ತಾ ಹೋಗುತ್ತಾಳೆ. ಕೊನೆಗೆ ಮೈಸೂರು ಸಂಸ್ಥಾನದ ದೊರೆಯಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಆಳೆತ್ತರದ ಚಿತ್ರ ತೋರಿಸಿ ಇವರು ನಿಮಗೆ ಗೊತ್ತು ಎಂದು ಹೇಳುತ್ತಾಳೆ. ಇದು ಮೈಸೂರು ರಾಜಮನೆತನದ ಕಥೆ ಹೇಳಲಾಗುತ್ತಿದೆಯೇನೋ ಎಂದು ಪ್ರೇಕ್ಷಕ ತಪ್ಪು ತಿಳಿದುಕೊಳ್ಳುವ ಆಸ್ಪದವಿದೆ.
ರಾಯಲ್ ಲವ್ ಸ್ಟೋರಿ ಎಂಬ ಟ್ಯಾಗ್ ಇರುವ, ಮೈಸೂರು ಅರಮನೆ ಬಳಸಿಕೊಂಡ ಕಥೆಯಲ್ಲಿ ಜಯಚಾಮರಾಜೇಂದ್ರ ಒಡೆಯರ್ ಭಾವಚಿತ್ರ ಬಳಸಿಕೊಂಡಿರುವುದು ಸರಿಯಲ್ಲ. ಈ ಬಗ್ಗೆ ನಿರ್ದೇಶಕಿ ಚಿಂತಿಸುವುದು ಅಗತ್ಯ.

ಕಳರಿಪಯಟ್ಟು ಆಡುವಾಗ ಮೈಯಲ್ಲಿ ಹಾರಾಡುವ ಆಭರಣ ಧರಿಸುವಂತಿಲ್ಲ. ಇದು ನಿಯಮ. ಆದರೆ ಅಭ್ಯಾಸದ ಸಂದರ್ಭದಲ್ಲಿ ತನ್ನ ವರಸೆ ತೋರಿಸಲು ಇಳಿಯುವ ನಾಯಕನ ಕುತ್ತಿಗೆಯಲ್ಲಿ ರುದ್ರಾಕ್ಷಿ ಸರ ಹಾರಾಡುತ್ತಿರುತ್ತದೆ. ಅಭ್ಯಾಸದ ಸಂದರ್ಭದಲ್ಲಿ ಕತ್ತಿ ಹಿಡಿದವರು ಜಿದ್ದಿಗೆ ಬಿದ್ದಂತೆ ನಾಯಕನ ಮೇಲುಡುಪು ಚಿಂದಿ ಮಾಡುವ ಔಚಿತ್ಯ ಅರ್ಥವಾಗುವುದಿಲ್ಲ. ನಾಯಕನ ಸಿಕ್ಸ್ ಪ್ಯಾಕ್ ತೋರಿಸಲು ಹೀಗೆ ಮಾಡುವ ಅವಶ್ಯಕತೆ ಇರಲಿಲ್ಲ.
ತನ್ನ ಮನೆತನದ ಹಿರಿಯರು, ಅವರು ಬರೆದ ಪುಸ್ತಕಗಳ ಬಗ್ಗೆ ನಾಯಕಿಗೆ ಅಪಾರ ಗೌರವ. ಆದರೆ ಆ ಪುಸ್ತಕಗಳ ಮೇಲೆ ಕೈ ಧೂಳಿನ ರಾಶಿ ಹೇಳುತ್ತದೆ. ಬಹುಶಃ ಹಳೇ ಪುಸ್ತಕಗಳೆಂದರೆ ಧೂಳು ಜಾಸ್ತಿ ಇರುತ್ತದೆ ಎಂಬುದು ನಿರ್ದೇಶಕಿ ಗ್ರಹಿಕೆಯಾಗಿದ್ದಿರಬಹುದು ಎನಿಸುತ್ತದೆ !
ಕಥೆಯಲ್ಲಿಯೇ ಧಮ್ ಇಲ್ಲ. ಪದೇಪದೇ ಬಂದಿರುವ ಇಂಥ ಕಥಾ ವಸ್ತುವನ್ನು ಫ್ರೆಶ್ ಆಗಿ ಕಟ್ಟಿಕೊಡುವ ಪ್ರಯತ್ನವೂ ಆಗಿಲ್ಲ. ಚಿತ್ರಕಥೆಯೂ ಜಾಳುಜಾಳಾಗಿದೆ. ಬಿಗಿಯಾದ ಸ್ಕ್ರಿಪ್ಟ್ ರಚಿಸುವುದರತ್ತ ಗಮನ ನೀಡುವುದು ಅಗತ್ಯವಾಗಿತ್ತು. ಕಥೆ, ಚಿತ್ರಕಥೆ, ಹಾಡುಗಳನ್ನು ಬರೆಯುವುದರೊಂದಿಗೆ ನಿರ್ದೇಶನವನ್ನೂ ಮಾಡಿರುವ ರೂಪಾ ಅಯ್ಯರ್ ಈ ಯಾವ ವಿಭಾಗದಲ್ಲಿಯೂ ಪ್ರೇಕ್ಷಕನ ಮೆಚ್ಚುಗೆ ಗಳಿಸಲು ವಿಫಲರಾಗಿದ್ದಾರೆ. ಸಂಭಾಷಣೆಗಳೂ ದುರ್ಬಲ.
ಸಾಮಾನ್ಯವಾಗಿ ಪ್ರೇಮದ ಕಥಾವಸ್ತು ಇರುವ ಚಿತ್ರಗಳಲ್ಲಿ ಮನಮೋಹಕ ಛಾಯಾಗ್ರಹಣ ಮಾಡಲು ವಿಪುಲ ಅವಕಾಶ ಇರುತ್ತದೆ. ಆದರೆ ಇಲ್ಲಿ ಆ ಕೆಲಸ ಆಗಿಲ್ಲ. ಛಾಯಾಗ್ರಾಹಕ ಎ.ಎಚ್.ಕೆ ದಾಸ್ ತಮ್ಮ ಕಾರ್ಯದಲ್ಲಿ ವಿಫಲರಾಗಿದ್ದಾರೆ. ಸಂಕಲನವೂ ಶಕ್ತವಾಗಿಲ್ಲ. ಕಾಸ್ಟೂಮ್ ಕೂಡ ಮನಸೆಳೆಯುವುದಿಲ್ಲ. ಗೌತಮ್ ಶ್ರೀವಾತ್ಸವ ಅವರ ಸಂಗೀತ ಪ್ರೇಕ್ಷಕನ ಮನಗೆಲ್ಲಲು ವಿಫಲವಾಗಿದೆ.
ತಮಿಳು ಶೈಲಿಯಲ್ಲಿ ಕನ್ನಡ ಮಾತನಾಡಿರುವ ಹಾಸ್ಯನಟ ವಿವೇಕ್, ಚಿತ್ರದ ಬಹುತೇಕ ಫ್ರೇಮುಗಳಲ್ಲಿ ಇದ್ದಾರೆ. ಅತ್ಯಂತ ಪರಿಣಾಮಕಾರಿಯಾಗಿ ಡೈಲಾಗ್ ಹೇಳುವ ಇವರ ಮತ್ತು ಸಾಧು ಕೋಕಿಲ ಸಾಮರ್ಥ್ಯ ಬಳಕೆಯಾಗಿಲ್ಲ.  ಹಾಸ್ಯ ಸನ್ನಿವೇಶಗಳು ಹಾಸ್ಯಾಸ್ಪದವಾಗಿವೆ.
ಶ್ರೇಯಾ ನಟನೆ, ನೃತ್ಯದಲ್ಲಿ ಮಿಂಚಿದ್ದಾರೆ. ಪ್ರೇಮ್ ಅಭಿನಯ ಮೆಚ್ಚುಗೆ ಗಳಿಸುತ್ತದೆ. ಕಣ್ಣುಗಳಲ್ಲಿ ಪ್ರೀತಿ, ವಿಷಾದ ವ್ಯಕ್ತಪಡಿಸುವಿಕೆಯಲ್ಲಿ ಗಮನ ಸೆಳೆಯುತ್ತಾರೆ.  ಶ್ರೀನಾಥ್, ಸುಮಿತ್ರಾ, ಪದ್ಮಾ ವಾಸಂತಿ  ಪಾತ್ರದ ಆವರಣಕ್ಕೆ ಹೊಂದಿಕೊಂಡು ನಟಿಸಿದ್ದಾರೆ. ಸುಕನ್ಯಾ, ದೀಪಾ ಅಯ್ಯರ್, ಧರ್ಮ, ಇವರ್ಯಾರಿಗೂ ಅಭಿನಯಿಸಲು ಅವಕಾಶವೆ ದೊರೆತಿಲ್ಲ. ಇವೆಲ್ಲದರ ಪರಿಣಾಮ ‘ಚಂದ್ರ’ ಸಿನಿಮಾ ಮಂಕಾಗಿದೆ.
ಸಿನಿಮಾ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುವುದು ಅಗತ್ಯ. ಚಿತ್ರದ ಟೆಂಪೋ ಏರುಗತಿಯಲ್ಲಿ ಸಾಗಿ ಮುಕ್ತಾಯವಾಗಬೇಕು ಅಥವಾ ಅದರ ಸಮತೋಲನ ಕಾಯ್ದುಕೊಳ್ಳಬೇಕು. ಚಂದ್ರದಲ್ಲಿ ಈ ಎರಡೂ ಅಂಶಗಳು ಇಲ್ಲದಿರುವುದು 'ಮುಖಪುಟ' ಖ್ಯಾತಿಯ ರೂಪಾ ಅಯ್ಯರ್ ನಿರ್ದೇಶಿಸಿದ್ದಾರೆ ಎಂಬ ನಿರೀಕ್ಷೆಯಿಂದ ಸಿನಿಮಾ ನೋಡಲು ಹೋದವರಿಗೆ ನಿರಾಶೆ ಮೂಡಿಸುತ್ತದೆ.

ಚಿತ್ರದ ಟೈಟಲ್ ನಲ್ಲಿ ಗುರಾಣಿ ಮತ್ತು ಕತ್ತಿ ಇದೆ. ಗುರಾಣಿಗೆ ಸಿಕ್ಕಿಸಲ್ಪಡುವ ಕತ್ತಿ ಮೊನೆ, ಆಕಾಶದತ್ತ ಇರುತ್ತದೆಯೆ ಹೊರತು ನೆಲ ನೋಡುತ್ತಿರುವುದಿಲ್ಲ ಎನ್ನುವ ಅಂಶದತ್ತ ಗಮನ ನೀಡಲಾಗಿಲ್ಲ. ಸೊಂಟಕ್ಕೆ ಸಿಕ್ಕಿಸಿಕೊಂಡಾಗ ಮಾತ್ರ ಕತ್ತಿಯ ಮೊನೆ ನೆಲದತ್ತ ಮುಖ ಮಾಡಿರುತ್ತದೆ. ಕತ್ತಿ ಬಳಸುವ ವ್ಯಕ್ತಿಗಳಿಗೇ ಅಪಾಯವಾಗದಿರಲಿ ಎಂಬ ಕಾರಣದಿಂದ ಹೀಗೆ ಮಾಡಲಾಗುತ್ತದೆ. 
ರಾಯಲ್ ಲವ್ ಸ್ಟೋರಿ ಎಂಬ ಟ್ಯಾಗ್ ಲೈನ್ ಇದೆ. ಆದರೆ ಪ್ರೇಮದಲ್ಲಿ ಬಡತನದ ಲವ್, ಶ್ರೀಮಂತ ಲವ್ ಎಂದೇನೂ ಇರುವುದಿಲ್ಲ. ಪ್ರೀತಿ ಅಂದರೆ ಪ್ರೀತಿ ಅಷ್ಟೆ…

1 comment:

 1. ಉತ್ತಮವಾಗಿ ವಿಶ್ಲೇಷಿದ್ದಿರಾ..

  ReplyDelete