• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

‘ನಿಮ್ಮಿಷ್ಟಕ್ಕೆ ಇರೋಕ್ಕಾಗೊಲ್ಲ ತಿಳ್ಕೊಳಿ’

‘ನಾನು ಯಾರ ತಂಟೆಗೂ ಹೋಗುವುದಿಲ್ಲ, ಪರೋಪಕಾರಿ. ಆದ್ದರಿಂದಲೆ ನೆಮ್ಮದಿಯಾಗಿರುತ್ತೇನೆ’ ಎಂದು ನೀವು ಅಂದುಕೊಂಡಿದ್ದರೆ ಅದು ಭ್ರಮೆ ! ಈ ಜಗತ್ತಿನಲ್ಲಿ ಹಾಗೆ ಇರೋದಿಕ್ಕೆ ಆಗುವುದಿಲ್ಲ. ನೆಮ್ಮದಿ ಎನ್ನುವುದು ಕೂಡ ಅಷ್ಟು ಸುಲಭವಾಗಿ ದಕ್ಕುವುದಿಲ್ಲ’ ಸಂಕೀರ್ಣ ಬದುಕಿನಿಂದಾಗಿ ಹೀಗೆ ಆಗುತ್ತದೆ ಎಂದು ಬಹು ಪರಿಣಾಮಕಾರಿಯಾಗಿ ತಮಿಳು ಚಿತ್ರ ‘ವಟಿಕುಚಿ’ ಕಟ್ಟಿಕೊಡುತ್ತದೆ.

ಮಧ್ಯಮ ಪ್ರಮಾಣದ ಪಟ್ಟಣದಲ್ಲಿ ವಾಸಿಸುತ್ತಿರುವ ಮಧ್ಯಮ ವರ್ಗದ ದಂಪತಿ ಮಗ ಶಕ್ತಿ (ಧಿಲ್ಬನ್) ಓರ್ವ ತಂಗಿ. ಪದವೀಧರನಲ್ಲದ ಈ ಯುವಕ ಸ್ವಾಭಿಮಾನಿ. ದುಡಿದು ಬದುಕುವುದೂ ಗೊತ್ತಿದೆ. ಆಟೋ ಡ್ರೈವರ್ ವೃತ್ತಿ. ಸ್ವಂತ ಆಟೋ. ವಿರಾಮದ ವೇಳೆಯಲ್ಲಿ ಓಡಾಡಲು ಸ್ವಂತ ಬೈಕ್. ಈತನಿಗೆ ಎದುರುಮನೆ ಸುಂದರಿ ಮೀನಾ ಎಂಬ ಹೆಸರನ್ನ ಫ್ಯಾಷನ್ ಗಾಗಿ ಲೀನಾ ಎಂದು ಮಾಡಿಕೊಂಡ ಚೆಲುವೆ (ಅಂಜಲಿ) ಮೇಲೆ ಮನಸು.
ಈಕೆ ತಂದೆ ಪೋಸ್ಟ್ ಮ್ಯಾನ್. ಕುಡುಕ. ಆದರೆ ತಾನು ಕಟ್ಟಿಕೊಳ್ಳುವ ಯುವಕ ಸರ್ಕಾರಿ ಉದ್ಯೋಗಿಯಾಗಿರಬೇಕು. ಆಗಷ್ಟೆ ಸುಖದಾಯಕ ಬದುಕು ಎಂಬ ನಂಬಿಕೆಯಾಕೆ. ನಿನ್ನ ಪ್ರೀತಿಸುತ್ತಿದ್ದೇನೆ ಎಂದು ಶಕ್ತಿ ಹೇಳಿದಾಗ ಪ್ರೀತಿಸಿಕೋ.. ಆದರೆ ನಾನು ಪ್ರೀತಿಸುವುದಿಲ್ಲ ಎಂದು ನೇರವಾಗಿ ಹೇಳುವ ದಿಟ್ಟತನ. ಹೀಗೆ ಉತ್ತರ ಕೊಟ್ಟವಳಿಗೆ ಕಿರುಕುಳ ನೀಡದೆ ಆಕೆಯ ದರ್ಶನ ಮಾಡುವುದರಲ್ಲಿಯೆ ಖುಷಿ ಕಾಣುವ ಮನಸು ಶಕ್ತಿಯದು.
ಆತನ ನಡವಳಿಕೆಗೆ ಆಕೆ ಮಾರು ಹೋಗುತ್ತಿದಂತೆ ಶಕ್ತಿ ತನಗೆ ಅರಿವಿಲ್ಲದೆ ಪಾತಕಿಗಳ ಜಾಲದಲ್ಲಿ ಸಿಲುಕಿಕೊಳ್ಳುತ್ತಾನೆ. ಈತನ ಪರೋಪಕಾರಿ ಬುದ್ದಿ ಅದಕ್ಕೆ ಕಾರಣವಾಗುತ್ತದೆ. ಮತ್ತೊಂದು ಘಟನೆಯಲ್ಲಿ ತನ್ನಿಂದ ಹಾಡುಹಗಲೇ ಹಣ ದೋಚುವ ಕೊಲೆಗಾರರ ಬೆನ್ನು ಹತ್ತಿ ಪದೇಪದೇ ಏಟು ತಿಂದು ಸರಿಯಾಗಿ ತಿರುಗಿಸಿಕೊಟ್ಟು ತನ್ನ ಹಣ ವಾಪ್ಪಸ್ಸು ಪಡೆದುಕೊಳ್ಳುತ್ತಾನೆ. ಈ ಘಟನೆ ಕೊಲೆಗಾರರ ಮುಖಂಡನ ವರ್ಚಸ್ಸು ಕುಸಿಯಲು ಕಾರಣವಾಗಿ ಆತನ ಆದಾಯ ಕುಸಿಯುತ್ತದೆ. ಇದರಿಂದ ಆತ ಶಕ್ತಿಯನ್ನು ಕೊಲ್ಲಲ್ಲು ಸಂಚು ನಡೆಸುತ್ತಿರುತ್ತಾನೆ.
ಮತ್ತೊಮ್ಮೆ ಆದಾಯ ತೆರಿಗೆ ಉನ್ನತ ಅಧಿಕಾರಿಯ ಕೊಲೆ ಸಂಚನ್ನು ಆಕಸ್ಮಿಕವಾಗಿ ತಿಳಿದು ಅವರನ್ನು ಪಾರು ಮಾಡುತ್ತಾನೆ. ಅಧಿಕಾರಿ ಕೊಲೆಗೆ ಯತ್ನಿಸಿದವರು ಈತನನ್ನೆ ಕೊಲ್ಲಲು ಪ್ರಯತ್ನಿಸತೊಡಗುತ್ತಾರೆ. ಅತ್ತ ಈತನ ಕೊಲ್ಲುವ ಸಂಚು ಪ್ರಬಲವಾಗುತ್ತಾ ನಡೆದಿರುತ್ತದೆ. ಅದು ಈತನ ನೆರೆಮನೆಯ ವಾಸಿಯಾದ ಸ್ನೇಹಿತನಿಂದಲೆ. ಶಕ್ತಿಯ ಪರೋಪಕಾರಿ ಬುದ್ದಿ ತನ್ನ ಸಂಚಿಗೆ ಅಡ್ಡಿಯಾಗಬಹುದೆಂಬ ಅಂದಾಜು ಈತನದು. ಇದಕ್ಕಾಗಿ ಮತ್ತೊಂದು ಗ್ಯಾಂಗಿನ ಪಿಸ್ತೂಲ್ ಲಪಟಾಯಿಸುತ್ತಾನೆ.
ಇದ್ಯಾವುದೂ ಗೊತ್ತಿಲ್ಲದ ಶಕ್ತಿ ತನ್ನ ಅಮಾಯಕತನ, ವೃತ್ತಿ ಹಾಗೂ ಲೀನಾ ಸುತ್ತ ನಂತರ ಆಕೆಯೊಂದಿಗೆ ಸುತ್ತಲು ಶುರು ಮಾಡುತ್ತಾನೆ. ಮನೆ, ಅಮ್ಮ, ಅಪ್ಪ, ತಂಗಿ, ವೃತ್ತಿ ಮತ್ತು ಲೀನಾ ಬಿಟ್ಟರೆ ಜಗತ್ತಿನ ಮತ್ತೊಂದು ಮುಖದ ಬಗ್ಗೆ ಯೋಚಿಸದೆ ಇದ್ದವನ ನೆಮ್ಮದಿಗೆ ಭಂಗ ತರುವ ಕಾರ್ಯ ತೀವ್ರವಾಗುತ್ತಿದಂತೆ ಈತನ ಧೈರ್ಯ ಕುಗ್ಗುವುದಿಲ್ಲ. ಬರುವುದನ್ನು ಎದುರಿಸಲು ಶುರು ಮಾಡುತ್ತಾನೆ. ಆದರೆ  ಸ್ನೇಹಿತನೆ ತನ್ನ ಕೊಲೆಗೆ ಯತ್ನಿಸುವುದು ತಿಳಿದು ದಿಗ್ಬ್ರಮೆಯಾಗುತ್ತದೆ.
ಈ ಮೂರೂ ಗುಂಪಿನೊಂದಿಗೆ ಆತ ಹೇಗೆ ಸೆಣಸಿ ಪಾರಾಗುತ್ತಾನೆ ಎನ್ನುವುದನ್ನ ನಿರ್ದೇಶಕ ಬಹಳ ಶಕ್ತಿಯುತವಾಗಿ ಹೇಳಿದ್ದಾನೆ. ಇಲ್ಲಿ ಕಥೆ ಹೇಳುವ ಧಾಟಿಯೆ ಗಮನ ಸೆಳೆಯುತ್ತದೆ. ಸಣ್ಣ ಕಥೆ ಇಟ್ಟುಕೊಂಡು ಅದನ್ನು ಗಂಭೀರವಾಗಿ ಬೆಳೆಸುತ್ತಾ ಹೋಗಲಾಗಿದೆ. ಚಿತ್ರಕಥೆ ಬಿಗಿಯಾಗಿದೆ. ಸಿನಿಮಾ ಟೆಂಪೋ ಕೊನೆಯವರೆಗೂ ಏರುಗತಿಯಲ್ಲಿಯೆ ಇದೆ.
ಎಲ್ಲಿಯೂ ಪ್ರೇಕ್ಷಕನಿಗೆ ಏಕತಾನತೆ, ಬೇಸರ ಆಗುವುದಿಲ್ಲ. ಜನಪ್ರಿಯ ಸಿನಿಮಾ ಫಾರ್ಮುಲಾ ಇಟ್ಟುಕೊಂಡೆ ಒಂದು ಗಂಭೀರ ಸಮಸ್ಯೆಯನ್ನು ಬಹು ಪರಿಣಾಮಕಾರಿಯಾಗಿ ಹೇಳಬಹುದು ಎನ್ನುವುದಕ್ಕೆ ವಟಿಕುಚಿ ಉತ್ತಮ ಉದಾಹರಣೆ. ವಟಿಕುಚಿ ಎಂದರೆ ಕಡ್ಡಿಪೆಟ್ಟಿಗೆ ಎಂದರ್ಥ, ಅಲ್ಲಿ ಸ್ಪೋಟಕವೂ ಇದೆ, ಜೊತೆಗೆ ಬೆಳಕು ಇದೆ !
ಸಿನಿಮಾ ಶುರುವಾಗುವ ಮತ್ತು ಮುಕ್ತಾಯವಾಗುವ ರೀತಿಯೇ ಮನೋಜ್ಞ. ಪ್ರತಿ ಫ್ರೇಮಿನಲ್ಲಿಯೂ ನಿರ್ದೇಶಕನ ಪರಿಶ್ರಮ ಎದ್ದು ಕಾಣುತ್ತದೆ. ಯಾವ ದೃಶ್ಯವೂ ಅನಗತ್ಯ ಎನಿಸುವುದಿಲ್ಲ. ತರ್ಕದ ಹಳಿಯನ್ನು ಬಿಟ್ಟು ಕಥೆ ಸಾಗುವುದಿಲ್ಲ ಆಧುನಿಕ ಜಗತ್ತಿನ ಸಂಕೀರ್ಣತೆ, ಕ್ರೂರತೆ, ಯಾವುದೆ ವ್ಯಕ್ತಿಯೂ ತನ್ನಷ್ಟಕ್ಕೆ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ‘ನಿಮ್ಮಿಷ್ಟಕ್ಕೆ ಇರೋಕ್ಕಾಗೊಲ್ಲ ತಿಳ್ಕೊಳಿ’ ಎನ್ನುವುದನ್ನು ಚಿತ್ರ ಶಕ್ತಿಯುತವಾಗಿ ಪ್ರೇಕ್ಷಕನಿಗೆ ದಾಟಿಸುತ್ತದೆ.

ಧಿಲ್ಬನ್, ಅಂಜಲಿ ಮತ್ತು ಇತರ ಸಹನಟರು ಸೊಗಸಾಗಿ ನಟಿಸಿದ್ದಾರೆ. ಖಳನಾಯಕನಾಗಿ ಸಂಪತ್ ಲಾಲ್ ನಟನೆ ಮೆಚ್ಚುಗೆ ಗಳಿಸುತ್ತದೆ. ನಿರ್ದೇಶಕ ಕ್ರಿಸ್ಲಿನ್ ವಿಶೇಷ ಶ್ರಮ ವಹಿಸಿದ್ದಾರೆ. ಪ್ರದೀಪ್ ಕೆ.ಎಲ್., ಎನ್. ಬಿ. ಶ್ರೀಕಾಂತ್ ಅವರ ಸಂಕಲನ ಕಾರ್ಯ, ಆರ್.ಬಿ. ಗುರುದೇವ್ ಅವರ ಛಾಯಾಗ್ರಹಣ, ಎಂ. ಗಿಬ್ರಾನ್ ಅವರ ಸಂಗೀತ ಅತ್ಯುತ್ತಮವಾಗಿದೆ.No comments:

Post a Comment