• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ರಾಂಝಣಾ: ಸೂತ್ರ ಇಲ್ಲದ ಗಾಳಿಪಟ

ಹಿಂದೂ ಪುಟ್ಟ ಬಾಲಕನಿಗೆ ಮುಸ್ಲಿಮ್ ಬಾಲಕಿ ಮೇಲೆ ಮೋಹ ಮೂಡುತ್ತದೆ ! ಹದಿ ಹರೆಯದಲ್ಲಿ ಪ್ರಕಟವಾಗಿ, ನಂತರ ಗೀಳಾಗಿ ಬೆಳೆಯುತ್ತದೆ. ಬಾಲಕಿ ಬೆಳೆದ ನಂತರ ಆಕೆ ಮತ್ತೋರ್ವನಿಗೆ ಮನಸೋಲುತ್ತಾಳೆ. ಇಷ್ಟು ಹೇಳಿದ ಕೂಡಲೆ ಇದು ತ್ರಿಕೋನ ಪ್ರೇಮದ ಕಥೆ ಎಂಬ ಭಾವನೆ ಓದುಗರಲ್ಲಿ ಬರಬಹುದು. ಆದರೆ ಹಿಂದಿ ಹೊಸ ಚಿತ್ರ ‘ರಾಂಝಣಾ’ ವಿದ್ಯಾರ್ಥಿ ಚಳವಳಿ, ರಾಜಕೀಯ, ಕೃಷಿ ಜಮೀನು ಸ್ವಾಧೀನ, ಪ್ರತಿಭಟನೆ, ಭ್ರಷ್ಟಾಚಾರದ ವಿರುದ್ಧ ಆಂದೋಲನ ಮತ್ತು ಚುನಾವಣೆ ಹೀಗೆ ಅನೇಕ ವಿಷಯಗಳ ಸುತ್ತ ಗಿರಕಿ ಹೊಡೆಯುತ್ತದೆ.

ಬನಾರಸ್ (ವಾರಣಾಶಿ) ದೇಗುಲದ ತಮಿಳು ಮೂಲದ ಅರ್ಚಕರ ಸುಮಾರು ಎಂಟು ವರ್ಷದ ಮಗ ಕುಂದನ್ ಶಿವನ್ ತನ್ನ ಸಮ ವಯಸ್ಕರೊಂದಿಗೆ ದಸರಾ ಆಚರಿಸಲು ಚಂದಾ ಸಂಗ್ರಹಿಸತೊಡಗುತ್ತಾನೆ. ಆಗ ನಮಾಜ್ ಮಾಡಿ ಏಳುತ್ತಿರುವ ಸಮ ವಯಸ್ಸಿನ ಬಾಲಕಿ ಜೋಯಾಳನ್ನು ನೋಡಿ ಅವನಿಗೆ ಮೋಹ ಮೂಡುತ್ತದೆ !
ಈ ಪ್ರೀತಿ ಪ್ರಕಟವಾಗುವುದು ಹದಿ ಹರೆಯದಲ್ಲಿ. ಈ ಸಂದರ್ಭಗಳಲ್ಲಿ ಕುಂದನ್ ಶಂಕರ್ಗೆ (ಧನುಷ್) ಜೋಯಾ(ಸೋನಮ್ ಕಪೂರ್)ಳಿಂದ ಸಾಕಷ್ಟು ಸಲ ಕಪಾಳಮೋಕ್ಷವೂ ಆಗುತ್ತದೆ. ಇದನ್ನು ಆತ ಎಂಜಾಯ್ ಮಾಡುತ್ತಾನೆ !! ಅಂತೂ ತನ್ನೊಡನೆ ಏಕಾಂತದಲ್ಲಿ ಮಾತನಾಡಲು ಜೋಯಾಳನ್ನು ಒಪ್ಪಿಸುವಲ್ಲಿ ಸಫಲನಾಗುತ್ತಾನೆ. ಇವರಿಬ್ಬರು ಮಾತನಾಡುವಾಗ ಈಕೆಗೆ ಈತನ ಜನಿವಾರ ಕಾಣುತ್ತದೆ. ನಿನ್ನನ್ನು ಮುಸ್ಲಿಮ್ ಎಂದುಕೊಂಡಿದ್ದೆ. ನಿನ್ನ ನನ್ನ ಸಂಬಂಧ ಸಾಧ್ಯವಿಲ್ಲ ಎಂದು ರೋಷದಿಂದ ಹೊರಡುವಾಗ ನಿಜ ಹೇಳದಿದ್ದಕ್ಕೆ ಮತ್ತೊಮ್ಮೆ ಕಪಾಳಕ್ಕೆ ಬಿಗಿದು ಹೊರಡುತ್ತಾಳೆ. ಆದರೂ ಕುಂದನ್ ಮೋಹ ಕುಂದುವುದಿಲ್ಲ !!!
ಬ್ಲೇಡಿನಲ್ಲಿ ಈತ ತನ್ನ ಕೈ ಕುಯ್ದುಕೊಂಡಾಗ ದಿಗಿಲುಗೊಳ್ಳುವ ಜೋಯಾ ಪ್ರೀತಿಸುತ್ತಾಳೆ. ಇದು ಆಕೆಯ ಪ್ರೊಫೆಸರ್ ತಂದೆಗೆ ಗೊತ್ತಾಗುತ್ತದೆ. ದಿಗಿಲುಗೊಳ್ಳುವ ಅವರು ಮಗಳನ್ನು ಅಲಿಘರ್ ನಲ್ಲಿರುವ ಸಂಬಂಧಿ ಮನೆಗೆ ವ್ಯಾಸಂಗಕ್ಕೆ ಕಳುಹಿಸುತ್ತಾರೆ. ಈಕೆ ಮತ್ತೆ ಹಿಂದಿರುಗುವುದು ಎಂಟು ವರ್ಷದ ನಂತರ; ದೈಹಿಕ ಮತ್ತು ಮಾನಸಿಕ ಬದಲಾವಣೆಗಳೊಂದಿಗೆ. ಆದರೆ ಕುಂದನ್ ಮನಸ್ಥಿತಿ ಮಾತ್ರ ಹದಿ ಹರೆಯದ್ದು !
ಹದಿ ಹರೆಯಕ್ಕೆ ಕಾಲಿಡುತ್ತಿರುವ ದಿನಗಳಲ್ಲಿನ ಘಟನೆಗಳನ್ನು ಈಕೆ ಗಂಭೀರವಾಗಿ ತೆಗೆದುಕೊಂಡಿಲ್ಲದ ಕಾರಣ ಮರೆತಿರುತ್ತಾಳೆ. ಆದರೆ ಕಥಾ ನಾಯಕನಿಗೆ ಆಕೆಯನ್ನು ಸದಾ ನೆನಪಿಸಿಕೊಳ್ಳುವ ಕೆಲಸ ಬಿಟ್ಟರೆ ಮತ್ತೊಂದು ಇದ್ದಂತೆ ಕಾಣುವುದಿಲ್ಲ. ಇದರಿಂದ ಮತ್ತೆ ಈತನ ಪ್ರೀತ್ಸೆ ಪ್ರೀತ್ಸೆ ರಾಗ ಶುರು !!!!
ಆಗ ಜೋಯಾ, ಅಲಿಘರ್ ನಂತರ ದೆಹಲಿ ಜವಾಹರ್ ಲಾಲ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗ ಅಲ್ಲಿನ ವಿದ್ಯಾರ್ಥಿ ನಾಯಕ ( ಅಭಯ್ ಡಿಯೋಲ್)ನೊಂದಿಗೆ ಪ್ರೇಮಾಂಕುರವಾಗಿರುವುದನ್ನು ಹೇಳುತ್ತಾಳೆ. ಬದಲಾಗುತ್ತೇನೆ ಎನ್ನುವ ಕುಂದನ್ ತನ್ನ ಬಾಲ್ಯದ ಗೆಳತಿಯನ್ನು ಮದುವೆಯಾಗಿ ನಿನ್ನನ್ನು ಮರೆಯುತ್ತೇನೆ ಎನ್ನುತ್ತಾನಾದರೂ ಮರೆಯುವುದಿಲ್ಲ. ಜೋಯಾಳನ್ನು ಹಿಂಬಾಲಿಸುವುದನ್ನು ಕಡೆಯ ತನಕ ಬಿಡುವುದೆ ಇಲ್ಲ !!!!. 
ನಂತರ ಕಥೆ ಪಂಜಾಬಿಗೆ, ದೆಹಲಿಗೆ ಮತ್ತು ದೆಹಲಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಸಾಗುತ್ತದೆ. ಎಡಪಂಥೀಯ ಧೋರಣೆಗಳಿಂದ ಪ್ರಭಾವಿತರಾದ ವಿದ್ಯಾರ್ಥಿಗಳ ಚಳವಳಿ, ಬೀದಿ ನಾಟಕಗಳು, ಭ್ರಷ್ಟಾಚಾರದ ಆಕ್ರೋಶ, ರೈತರ ಭೂಮಿಯನ್ನು ಸರ್ಕಾರ ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳುವುದು, ಅದನ್ನು ಪ್ರತಿಭಟಿಸುವ ರೈತರು, ಇಂಥ ಇತ್ತೀಚಿನ ಘಟನೆಗಳೆಲ್ಲ ತುರುಕಲ್ಪಟ್ಟಿವೆ.
ಒಂದೆರಡು ಘಟನೆಗಳಿಂದಲೆ ಕುಂದನ್ ಶಂಕರ್ ನಾಯಕನಾಗಿ ಬೆಳೆದು ಬಿಡುವುದು,  ಅಚ್ಚರಿ ಮೂಡಿಸುತ್ತದೆ. ನಂತರ ಜನಪ್ರಿಯ ನಾಯಕನ ಕೊಲೆಗೆ ಸಂಚು ರೂಪಿಸಿ, ಅವನ ಸಾವಿನಿಂದ ಲಾಭ ಪಡೆಯಲು ರಾಜಕೀಯ ಪಕ್ಷವೊಂದು ಹವಣಿಸುವುದು ಸಮರ್ಪಕವಾಗಿ ಮೂಡಿ ಬಂದಿಲ್ಲ. ವಿದ್ಯಾರ್ಥಿ ನಾಯಕನ ಸಾವಿನ ನಂತರ ಜೋಯಾ ಸಂಘಟನೆ ನಾಯಕಿಯಾಗುವುದು ಕೂಡ ಇದೇ ರೀತಿಯೆ ಆಗಿದೆ.
ಎಡಪಂಥೀಯ ಧೋರಣೆಗಳುಳ್ಳ ಸಂಭಾಷಣೆಗಳು ಸಾಕಷ್ಟಿವೆ. ಪಾತ್ರಧಾರಿಗಳು ಇದನ್ನು ಆವೇಶದಿಂದಲೇ ಒಪ್ಪಿಸುತ್ತಾರೆ. ಆದರೆ ಅದರ ಅಸಹಜ ಒಪ್ಪಿಸುವಿಕೆ ರಾಚುತ್ತದೆ. ಜೋಯಾಳನ್ನು ಹಿಂಬಾಲಿಸುವ ಕುಂದನ್ ಆಕೆಯಿದ್ದ ಅಪಾರ್ಟ್ ಮೆಂಟ್ ಅನ್ನು ಪೈಪ್ ಲೈನ್ ಮುಖಾಂತರ ಏರುವಾಗ ಚಳವಳಿಗಾರರಿಗೆ ಸಿಕ್ಕಿಬೀಳುತ್ತಾನೆ. ಇವನನ್ನು ಹಿಡಿದು ಕುಳ್ಳಿರಿಸಿಕೊಂಡು ಚಳವಳಿಗಾರರು ವ್ಯವಸ್ಥೆ ಬಗ್ಗೆ ಆಡುವ ಮಾತುಗಳು ತಮಾಷೆಯಾಗಿ, ವ್ಯಂಗ್ಯವಾಗಿ ಕಾಣುವಂತೆ ಮಾಡಲಾಗಿದೆ.
ಚಿತ್ರಕ್ಕೆ ಹಿಮಾಂಶು ಶರ್ಮ ಕಥೆ, ಚಿತ್ರಕಥೆ ಒದಗಿಸಿದ್ದಾರೆ. ಇವರೆ ಒದಗಿಸಿರುವ ಸಂಭಾಷಣೆಯಲ್ಲಿ ಪಂಚಿಂಗ್ ಇಲ್ಲ. ಆದರೆ ಕಥೆಯನ್ನು ಬೆಳೆಸುವ ರೀತಿ, ಒಪ್ಪಿಸುವ ಕ್ರಮದಲ್ಲಿ ಗಟ್ಟಿತನ ಕಾಣುವುದಿಲ್ಲ. ನಿರ್ದೇಶಕ ಆನಂದ್ ಎಲ್. ರಾಯ್ ಶ್ರಮ ವಹಿಸಿದಂತೆ ಕಾಣುವುದಿಲ್ಲ. ನುರಿತ ನಿರ್ದೇಶಕನ ಕಸುಬುದಾರಿಕೆ ನಾಪತ್ತೆಯಾಗಿದೆ. ಹೇಮಲ್ ಕೊತ್ತಾರಿ ಸಂಕಲನ ಕಾರ್ಯವೂ ಸಮರ್ಪಕವಾಗಿಲ್ಲದಿರುವುದು ಎದ್ದು ಕಾಣುತ್ತದೆ. ಇಲ್ಲಿಯ ಅನೇಕ ದೃಶ್ಯಗಳಿಗೆ ಕತ್ತರಿ ಹಾಕಿದ್ದರೂ ನಷ್ಟವಂತೂ ಆಗುತ್ತಿರಲಿಲ್ಲ. ಛಾಯಾಗ್ರಾಹಕ ನಟರಾಜನ್ ಸುಬ್ರಮಣಿಯಮ್, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ನಟನೆಯಲ್ಲಿ ಧನುಷ್, ಸೋನಮ್ ಕಪೂರ್, ಮಹಮ್ಮದ್ ಆಯೂಬ್ ಮಿಂಚುತ್ತಾರೆ. ಆದರೆ ಇವರ ಶ್ರಮ, ಚಿತ್ರಕಥೆ, ನಿರ್ದೇಶನ ಮಾಡಿದವರು ಕೃತಿ ಹೆಣೆಯಲು ಪರಿಶ್ರಮ ಪಟ್ಟಿರದ ಕಾರಣ ತೊಳೆದು ಹೋಗಿದೆ. ಇವೆಲ್ಲದರಿಂದ ಪ್ರೇಕ್ಷಕನಿಗೆ ಸಿನಿಮಾ, ಸೂತ್ರ ಇಲ್ಲದ ಗಾಳಿಪಟದ ಹಾರಾಟದಂತೆ ಕಾಣುತ್ತದೆ.

No comments:

Post a Comment