• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಡೈರೆಕ್ಟರ್ ಸ್ಪೆಷಲ್: ಅನಾಥ ಪ್ರಜ್ಞೆಯಿಂದ ಕಳಚಿಕೊಳ್ಳುವ ಪ್ರಯತ್ನ

ಕೌಟುಂಬಿಕ ಸಂಬಂಧಗಳ ನಡುವೆ ಬೆಳೆಯದ ವ್ಯಕ್ತಿ ಅವುಗಳಿಗಾಗಿ ಕಾತರಿಸುವುದು ಸಹಜ. ಇಂಥ ಸಂಬಂಧಗಳನ್ನು ಕೃತಕವಾಗಿ ಕಟ್ಟಿಕೊಂಡು ಅನಾಥ ಭಾವದಿಂದ ಕಳಚಿಕೊಳ್ಳಲು ಹೊರಟಾಗ ಬಿಚ್ಚಿಕೊಳ್ಳುವ ಮುಖವಾಡಗಳ ಬಗ್ಗೆ ‘ಡೈರೆಕ್ಟರ್ ಸ್ಪೆಷಲ್’ ಹೇಳಲು ಹೊರಟಿದೆ. ಬಹು ಸಂಕೀರ್ಣ ಕಥಾ ಹಂದರ ಇಟ್ಟುಕೊಂಡು ಪುಟ್ಟದೊಂದು ಮನೆಯೊಳಗೆ ಅದರ ಬೆಳವಣಿಗೆ ಹೇಳಲು  ನಿರ್ದೇಶಕ ಗುರುಪ್ರಸಾದ್ ಪ್ರಯತ್ನಿಸಿದ್ದಾರೆ.



ಧನಂಜಯ… ಅನಾಥಾಶ್ರಮದಲ್ಲಿ ಬೆಳೆದ,  ಯಥೇಚ್ಛ ಹಣ ಸಂಪಾದನೆಗೆ ಇಳಿದ ಯುವಕ. ಸದಾ ಕಾಡುತ್ತಲೆ ಇದ್ದ ಅನಾಥ ಪ್ರಜ್ಞೆಯಿಂದ ಹೊರಬರಲು ಅಪ್ಪ, ಅಮ್ಮ, ಅಣ್ಣ ಮತ್ತು ತಂಗಿ ಸಂಬಂಧಗಳನ್ನ ಪ್ರತಿಷ್ಠಾಪಿಸಿಕೊಳ್ಳುತ್ತಾನೆ. ಈತನ ಪ್ರಯತ್ನ ಅಥವಾ ಪ್ರಯೋಗ ಕುತೂಹಲಕಾರಿ. ಬಂದ ಒಬ್ಬೊಬರದು ಒಂದೊಂದು ಹಿನ್ನೆಲೆ, ಹೊಟ್ಟೆಪಾಡಿಗಾಗಿ ವಿವಿಧ ವೇಷ ಹಾಕುವ ಅಪ್ಪ, ಕಾರಣಾಂತರಗಳಿಂದ ಅವಿವಾಹಿತೆ ಆಗಿ ಉಳಿದ ಅಮ್ಮ, ಸಿನಿಮಾ ನಟಿಯಾಗಬೇಕೆಂದು ಹಂಬಲಿಸುವ ಮತ್ತೋರ್ವ ಅನಾಥೆ… ಬುದ್ದಿ ಇದ್ದೂ ‘ಅರಿವು’ ಇಲ್ಲದಂತೆ ನಟಿಸುವ ಯುವಕ.
ಮಧ್ಯಮ ವರ್ಗದ ಪುಟ್ಟ ಹಳೆಯ ಮನೆ ಒಂದರಲ್ಲಿ ಈ ಐದು ಪಾತ್ರಗಳು ಅರಳಲು ಪ್ರಯತ್ನಿಸುತ್ತವೆ. ಇದರಲ್ಲಿ ಅಪ್ಪನ ಪಾತ್ರ ಅನಾರೋಗ್ಯಕರವಾಗಿ, ಸ್ಥೂಲಕಾಯವಾಗಿ ಬೆಳೆದು ಬಿಡುತ್ತದೆ. ಪೋಷಣೆ ಇಲ್ಲದೆ ಸೊರಗುವುದು ಕೇಂದ್ರ ಪಾತ್ರ ಧನಂಜಯ. ವಾಚಾಳಿತನದಿಂದಲೆ ಸಿನಿಮಾ ಗೆಲ್ಲಬಹುದೆಂಬ ಭ್ರಮೆಗೆ ಬಿದ್ದಂತೆ ಕಾಣುವ ಗುರುಪ್ರಸಾದ್ ಸಿನಿಮಾ ಗೆಲುವಿಕೆಗೆ ಅಪ್ಪನ ಪಾತ್ರವನ್ನೆ ನೆಚ್ಚಿಕೊಂಡಂತೆ ಕಾಣುತ್ತದೆ.
ಧನಂಜಯ ತಂದ ದೊಡ್ಡ ಮೊತ್ತದ ಕಾಂಚಾಣ ಕುಣಿಯತೊಡಗುತ್ತದೆ. ಮನೆಯೊಳಗೆ ತಂತ್ರಗಳು ಮೊಳೆಯತೊಡಗುತ್ತವೆ. ದುಡ್ಡು ತಂದವ ಮುಖ್ಯವಾಗದೆ ದುಡ್ಡೆ ದೊಡ್ಡದಾಗುತ್ತದೆ. ಈ ಸಂದರ್ಭದಲ್ಲಿ ಪಾತ್ರಗಳ ಕಥೆಯನ್ನ ಸಶಕ್ತವಾಗಿ ನಿರೂಪಿಸಬೇಕಾದ ನಿರ್ದೇಶಕ ಅದರಲ್ಲಿ ದೊಡ್ಡ ಸೋಲು ಕಾಣುತ್ತಾರೆ.
ಸಿನಿಮಾದಲ್ಲಿನ ಅವಕಾಶಕ್ಕಾಗಿ ಮಾನ ಕಳೆದುಕೊಳ್ಳಲು ಇಚ್ಛಿಸದ ಅನಾಥೆಯನ್ನ ಮನೆಯೊಳಗೆ ಲಂಪಟ ಪಾತ್ರವಾಗಿ ಬಿಂಬಿಸುವುದು ಆಶ್ಚರ್ಯ ಮೂಡಿಸುತ್ತದೆ. ‘ಅರಿವು’ ಇಲ್ಲದ ವ್ಯಕ್ತಿಯೊಳಗೆ ಕೊಲೆಗಡುಕ ಇದ್ದಾನೆ ಎಂದು ಹಠಾತ್ತನೆ ತೋರಿಸುವ ಮೂಲಕ ಪ್ರೇಕ್ಷಕರಲ್ಲಿ ಷಾಕ್ ಮೂಡಿಸುವ ಯತ್ನದಲ್ಲಿಯೂ ಗುರು ಸೋಲುತ್ತಾರೆ.
ಅಂತಿಮ ಹಂತದಲ್ಲಿ ಪಾತ್ರಗಳು ಸೂತ್ರಧಾರನನ್ನೇ ಪ್ರಶ್ನಿಸಲು ಶುರು ಮಾಡತೊಡಗಿದಾಗ ರಂಗ ಪ್ರವೇಶಿಸುವ ಸೂತ್ರಧಾರ ಮಾತನಾಡತೊಡಗುವುದು ಕಥೆಯನ್ನ ಮತ್ತಷ್ಟು ದುರ್ಬಲಗೊಳಿಸುತ್ತದೆ. ಇಲ್ಲಿಯೂ ಪ್ರೇಕ್ಷಕರ ನಿರೀಕ್ಷೆ ಹುಸಿಗೊಳ್ಳುವವುದಿಲ್ಲ. ಪಾತ್ರಗಳು ಇರುವುದೆ ಹಾಗೆ ಎಂದ ಸೂತ್ರಧಾರ, ಪಾತ್ರಗಳ ಸ್ವರೂಪವನ್ನೆ ಮಾರ್ಪಡಿಸುವುದು ಪರಿಣಾಮಕಾರಿಯಾಗಿ ಮೂಡಿಲ್ಲ.
ಈ ಸಿನಿಮಾ ಅಸಂಗತ ನಾಟಕದ ಛಾಯೆ ಹೊತ್ತುಕೊಂಡಿದೆ. ಇಡೀ ಕಥೆ ಸಮರ್ಥವಾಗಿ ಅಭಿವ್ಯಕ್ತಗೊಂಡಿದ್ದರೆ ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಸಿನಿಮಾ ದಕ್ಕುವ ಸಾಧ್ಯತೆ ಇತ್ತು. ಆದರೆ ನಿರೂಪಣೆಯಲ್ಲಿ ಗುರು ನಿಯಂತ್ರಣ ಕಳೆದುಕೊಂಡಿರುವುದು ಬೇಸರ ಮೂಡಿಸುತ್ತದೆ.
ಚಿತ್ರದೊಳಗೆ ಪೂಜಾ ಗಾಂಧಿ ಕ್ಯಾಬರೆ ನರ್ತನ ಸಹಜವಾಗಿ ಅರಳಿಲ್ಲ.  ಅಪ್ಪನ ಕರಾಮತ್ತಿನಿಂದ ಧನಂಜಯನನ್ನು ಹೊಡೆಯಲು ಬಂದವರಿಂದ ತಮಿಳು ಮಾತನಾಡಿಸಿರುವ ಪ್ರಮೇಯ ಅರ್ಥವಾಗುವುದಿಲ್ಲ. ಇಂಥ ಗಿಮಿಕ್ ಅನಗತ್ಯ. ಕ್ಯಾಮರಾ ಕೆಲಸ ಸಮರ್ಥವಾಗಿಯೇ ಇದೆ. ಆದರೆ ಚಿತ್ರಕಥೆ- ಸಂಕಲನ ದುರ್ಬಲ. ಕೆಲವೊಂದು ಸನ್ನಿವೇಶಗಳು ಅನಗತ್ಯವಾಗಿ ಬಂದಿವೆ. ಪಾತ್ರಗಳಿಗೆ ಪೋಷಣೆಯೇ ದಕ್ಕಿಲ್ಲದಿರುವುದರಿಂದ ನಟರು-ನಟಿಯರು ಮಿಂಚಲು ಅವಕಾಶವೇ ಆಗಿಲ್ಲ. ಚಿತ್ರವನ್ನು ಆವರಿಸಿಕೊಂಡ ಅಪ್ಪ ಪಾತ್ರ (ರಂಗಾಯಣ ರಘು)ದ ವಾಚಾಳಿತನವೆ ನಟನಿಗೆ ಮುಳುವಾಗಿದೆ. ಇವೆಲ್ಲದರಿಂದ ‘ನಿರ್ದೇಶಕರ ವಿಶೇಷ’’ ಕಟ್ಟಿಕೊಡಲು ಗುರು ಸೋತಿದ್ದಾರೆ.

No comments:

Post a Comment