• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಲಂಕೇಶ್ ವ್ಯಕ್ತಿತ್ವ ಹಿಡಿದಿಡುವ ಯತ್ನ

ಸಮಕಾಲೀನ ಸಂದರ್ಭದಲ್ಲಿ ನಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ವ್ಯಕ್ತಿಗಳ ಬಗ್ಗೆ ತಿಳಿಯುವ ಕುತೂಹಲ ಇರುತ್ತದೆ. ಅದು ಆತ್ಮಕತೆ ಆಗಿರಬಹುದು ಅಥವಾ ಆ ವ್ಯಕ್ತಿಯ ಕುರಿತು ಸಮೀಪವರ್ತಿ ನೀಡಿದ  ಚಿತ್ರಣ ಇರಬಹುದು. ಅಂಥ ಕೃತಿ ಓದುತ್ತೇವೆ. ಸಾಧನೆಗೆ ಪೂರಕ ಅಂಶ ಇದ್ದರೆ ಮೆಚ್ಚುಗೆ ವ್ಯಕ್ತಪಡಿಸುತ್ತೇವೆ.
ಈ ನಿಟ್ಟಿನಲ್ಲಿ ಮಹಾಬಲಮೂರ್ತಿ ಕೊಡ್ಲೆಕೆರೆ ಬರೆದ 'ಲಂಕೇಶ್ ಅಲ್ಲ ಮೇಷ್ಟ್ರು' ಕೃತಿ ಓದಿದೆ. ಲಂಕೇಶ್ ಆತ್ಮಕತೆ 'ಹುಳಿಮಾವು' ಬಂದ ವರುಷಗಳ ನಂತರದ  ಕೃತಿ. ಹೊಸತೇನಾದರೂ ಇರಬಹುದು ಎಂಬ ಅನಿಸಿಕೆಯೂ ಇತ್ತು.
ಲೇಖಕರು ಹೇಳುವುದು ಹೀಗೆ 'ಈಗ ಈ ಕೆಲವು ನೆನಪುಗಳನ್ನು, ಲಂಕೇಶರ ಕುರಿತು ಹಲವನ್ನು ನಾನು ಬರೆಯುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದು ಅವರ ಜೀವಿತದ ಸುಮಾರು ಕೊನೆಯ ಐದು ವರ್ಷಗಳ ಅವಧಿಯಲ್ಲಿ ನನಗೆ ಅವರು ಹತ್ತಿರವಾದ ಕಾರಣಕ್ಕಾಗಿ'
ಲಂಕೇಶ್ ಆಪ್ತ ಓದುಗ ವಲಯಕ್ಕೆ ತಿಳಿದಿರದ ಅಥವಾ ತಿಳಿದಿದ್ದರೂ ಹೊಸ ಬೆಳಕಿನಲ್ಲಿ ವಿವೇಚಿಸಿದ ಅಂಶಗಳು ಇರಬಹುದು ಎಂದೆ 157 ಪುಟಗಳ ಈ ಪುಸ್ತಕವನ್ನು 'ಪಟ್ಟು' ಹಿಡಿದು ಓದಿದೆ. ಕೊನೆಗೆ ನನಗಾಗಿದ್ದು ನಿರಾಶೆ.
ರಾಜ್ಯದ ಮೂರು ದಶಕಗಳ ಸಾಂಸ್ಕೃತಿಕ, ರಾಜಕೀಯ ಕ್ಷೇತ್ರಗಳ ಬೆಳವಣಿಗೆ-ಬದಲಾವಣೆಗಳನ್ನ 'ಲಂಕೇಶ್ ಪತ್ರಿಕೆ'ಯ ಟೀಕೆ-ಟಿಪ್ಪಣಿ ಕಟ್ಟಿಕೊಡುತ್ತದೆ. ಗೌರವ ಪಡೆದ, ಕಾಡಿದ, ಕಿರಿಕಿರಿ ಉಂಟು ಮಾಡಿದ ವ್ಯಕ್ತಿ, ಪುಸ್ತಕ, ಸಿನಿಮಾ ಬಗ್ಗೆ 'ಮರೆಯುವ ಮುನ್ನ'ದಲ್ಲಿ ಲಂಕೇಶ್ ದಾಖಲಿಸಿದ್ದಾರೆ. ಅವರು ಹೇಳದೆ ಇರುವ ಮಹತ್ವ ಎನಿಸುವ ಅಂಶಗಳ್ಯಾವುದನ್ನೂ ಕೊಡ್ಲೆಕೆರೆ ದಾಖಲಿಸುವುದಿಲ್ಲ.
ಕೃತಿಯುದ್ದಕ್ಕೂ ಕೊಡ್ಲೆಕೆರೆ ಗೊಂದಲಮಯ ಹೇಳಿಕೆಗಳನ್ನು ನೀಡುತ್ತಲೇ ಹೋಗುತ್ತಾರೆ. ಉದಾಹರಣೆಗೆ 'ನಾನು ಕಂಡಂತೆ ಲಂಕೇಶ್ ಪುಕ್ಕಲಲ್ಲ. ಆದರೆ ಕಾರಣವಿರದೆ ಉದ್ವಿಗ್ನರಾಗುತ್ತಿದ್ದರು ಎನ್ನಬಹುದು' (ಪುಟ 16) ಇದೇ ವಾಕ್ಯ ಮತ್ತೆ ಮತ್ತೆ ಪುನರಾವರ್ತನೆ ಆಗಿದೆ. (ಪುಟ 19) 'ನನ್ನಂಥವನ ಸಂಕಟ ಲಂಕೇಶ್ ಬಳಿ ತಪ್ಪು ಹುಡುಕುಲು ಸಾಧ್ಯವಾಗದ್ದು' (ಪುಟ 22) 'ಲಂಕೇಶ್ ಅಪ್ರಮಾಣಿಕವಾಗಿ ಕಾಣಿಸುವ ಪ್ರಾಮಾಣಿಕ ಮನುಷ್ಯ' (ಪುಟ 69) 'ಎಲ್ಲರೂ ಪ್ರಾಮಾಣಿಕರಂತೆ ತೋರಿಸುತ್ತಾರೆ. ಆದರೆ ಅಪ್ರಾಮಾಣಿಕರಾಗಿ ಇರುತ್ತಾರೆ' 'ರಾಜ್ಯದ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ನೆನಪಿಟ್ಟು ಜನ್ಮದಿನದ ಶುಭಾಶಯವನ್ನು ಲಂಕೇಶ್ಗೆ ತಿಳಿಸುತ್ತಿದದ್ದನ್ನೇ ಖಾರವಾಗಿ ಟೀಕಿಸಿದರು. ಆದರೆ ಈ ಖಾರದ ಟೀಕೆಯಿಂದ ಇದು ತನಗೆ ಬೇಕಾಗಿಲ್ಲ ಎಂಬುದನ್ನು ಲಂಕೇಶ್ ಜನರಿಗೆ ತಿಳಿಸಿದರೊ, ಇಲ್ಲಾ ಮುಖ್ಯಮಂತ್ರಿಯೂ ಕೂಡ ನೆನಪಿನಲ್ಲಿಟ್ಟು ಜನ್ಮದಿನದ ಶುಭಾಶಯವನ್ನು ತನಗೆ ತಿಳಿಸುತ್ತಾನೆ ಎಂಬುದನ್ನು ಜನರಿಗೆ ತಿಳಿಸಲು ಟೀಕಿಸತೊಡಗಿದ್ದರೋ ಎಂಬುದು ಈಗಲೂ ಒಂದು ಒಗಟು' (ಪುಟ 103) 'ಒಂದೆಡೆ ಒಮ್ಮೆ ಹಾಡುಗಾರ ಸಿ.ಅಶ್ವತ್ಥರನ್ನ ಗಾಯಕರೆ ಅಲ್ಲ ಎಂದು ಬರೆದುಬಿಟ್ಟರು.  ಅಶ್ವತ್ಥ ಇದರಿಂದ ಕೋಪಗೊಂಡು ಜಗಳವಾಡಲು ಲಂಕೇಶರಿದ್ದಲ್ಲಿಗೆ ಬಂದರು. ಆದರೆ ಲಂಕೇಶ್ ಹೊರಬರಲಿಲ್ಲ. ಲಂಕೇಶ ಹೊರ ಬರಲಿ ಇಂದು ಇದೆ ಹಬ್ಬ ಅವನಿಗೆ ಎಂದು ಕಾತರಿಸಿದರಂತೆ ಅಶ್ವತ್ಥ್. ಈಗಲೂ ಅನೇಕರು ಈ ಘಟನೆಯನ್ನು ಹೇಳುತ್ತಿರುವುದು ಒಂದು ಕತೆಯಂತಿದೆ. ಲಂಕೇಶ್ ಇದರಿಂದ ವಿಚಲಿತರಾಗಿ ಅಶ್ವತ್ಥರನ್ನ ದೂರ ಕಳಿಸಿರಯ್ಯ ಎಂದು ಅನೇಕರ ಬಳಿ ಕೇಳಿಕೊಂಡರಂತೆ' (ಪುಟ 116)
ಕಾರಣ ಇಲ್ಲದೆ ಉದ್ವಿಗ್ನ ಆಗುವುದು ಸಾಧ್ಯವೆ ? ಆಂತರಿಕವಾಗಿ ಆಗುವ ಮನೋಸಂಘರ್ಷಗಳು ಉದ್ವಿಗ್ನತೆಗೆ ಎಡೆ ಮಾಡಿಕೊಡುತ್ತವೆ. ವ್ಯಕ್ತಿಯ ಆತ್ಮೀಯತೆ ಕೆಲಸ ಮಾಡಬೇಕಿರುವುದು ಇಲ್ಲಿಯೆ. ಉದ್ವಿಗ್ನ ಸ್ಥಿತಿ ಏಕೆ ಆಯಿತು ಎಂದು ತಿಳಿಯುವುದು. ಆದರೆ ಈ ಕೆಲಸವಂತೂ ಕೃತಿಯಲ್ಲಿ ಕಾಣುವುದಿಲ್ಲ.
ತಪ್ಪು ಹುಡುಕಲು ಸಾಧ್ಯವಾಗದಿದ್ದರೆ ಅದು ಆತ್ಮೀಯರೊಬ್ಬರು ಹೆಮ್ಮೆ ಪಡುವ ಅಂಶವೆ ವಿನಃ ಸಂಕಟ ಪಡುವಂತದ್ದಲ್ಲ. ಅಪ್ರಾಮಾಣಿಕವಾಗಿ ಕಾಣಿಸುವ ಮನುಷ್ಯ ಪ್ರಾಮಾಣಿಕ ಆಗಿದ್ದ ಎನ್ನುವುದು ಅಪರಿಚಿತರು ಹೇಳಬಹುದೆ ಹೊರತು ಪರಿಚಿತರು ಹೇಳಲು ಸಾಧ್ಯವಿಲ್ಲ.
ಬರವಣಿಗೆಯಲ್ಲಿ ಲಂಕೇಶ್ ಅಪ್ರಾಮಾಣಿಕತೆ ತೋರಿಸಿದ ಉದಾಹರಣೆಗಳಿಲ್ಲ. ಇಂಥ ಮಾತು ಹೇಳುವುದಕ್ಕೆ ಪೂರಕವಾದ ಅಂಶಗಳ ಉಲ್ಲೇಖ ಕೃತಿಯಲ್ಲಿ ಇಲ್ಲ. ಈ ಮಾತು ಕೂಡ ಪುನರಾವರ್ತನೆ ಆಗಿದೆ.
ರಾಮಕೃಷ್ಣ ಹೆಗಡೆ ಜನ್ಮದಿನದ ಶುಭಾಶಯ ತಿಳಿಸುವುದನ್ನು ಲಂಕೇಶ್ ಯಾಕೆ ಇಷ್ಟಪಡುತ್ತಿರಲಿಲ್ಲ ಎನ್ನವ ವಿಷಯ ಒಗಟಂತೂ ಅಲ್ಲವೆ ಅಲ್ಲ. ಇನ್ನೂ ಗಾಯಕ ಅಶ್ವತರ ಪ್ರಸಂಗ. ಇವರಿಗೆ ಹೆದರಿ ಲಂಕೇಶ್ ಹೊರಬರಲಿಲ್ಲ. ಸಹಾಯಕ್ಕಾಗಿ ಅಂಗಲಾಚಿದರು ಎನ್ನುವಂತೆ ಬರೆಯುವುದು ಲಂಕೇಶ್ ವ್ಯಕ್ತಿತ್ವಕ್ಕೆ ಮಾಡುವ ಅವಮಾನ. ಜೊತೆಗೆ ಇದು ನೋಡಿದ್ದಲ್ಲ. ಕೇಳಿಸಿಕೊಂಡಿದ್ದು.
ಈ ರೀತಿ ಕೇಳಿಸಿಕೊಂಡ ಅನೇಕ ಸಂಗತಿಗಳ ಬಗ್ಗೆ ಕೊಡ್ಲೆಕೆರೆ ಬರೆಯುತ್ತಾರೆ. ಆದರೆ ಅವುಗಳಲ್ಲಿ ನಿರ್ದಿಷ್ಟತೆ, ಖಚಿತತೆ ಇಲ್ಲ. ಬರವಣಿಗೆ ದೀರ್ಘಗೊಳಿಸುವುದಕ್ಕೆ, ಅನಗತ್ಯ ರೋಚಕ ಮಾಡುವುದಕ್ಕೆ ಇವುಗಳನ್ನು ಬರೆದಂತಿದೆ. ಇದಕ್ಕೆ ಕೃತಿಯಲ್ಲಿ ಇನ್ನೂ ಉದಾಹರಣೆಗಳಿವೆ. ಕೇಳಿಸಿಕೊಂಡವುಗಳನ್ನು ವಿಮರ್ಶೆಯ ಒರೆಗೆ ಹಾಕಿ ಉಜ್ಜಿ ನೋಡಬೇಕು ಎಂದೂ ಅವರಿಗೆ ಅನಿಸಿಲ್ಲ.
   ದಿನಪತ್ರಿಕೆ, ಪುಸ್ತಕದ ನಡುವೆ ವ್ಯತ್ಯಾಸಗಳಿವೆ. ದಿನಪತ್ರಿಕೆಯಲ್ಲಿ ಅಂಕಣ ಬರೆದಾಗ ನಾಳೆ/ ಮುಂದಿನವಾರ ತಿಳಿಸುತ್ತೇನೆ ಎಂದು ಬರೆಯುವುದು ಓದುಗರನ್ನು ಹಿಡಿದಿಟ್ಟುಕೊಳ್ಳುವ ದೃಷ್ಟಿಯಿಂದ ಸಹಜ ಎಂದು ಭಾವಿಸಿದ್ದರೂ ಪುಸ್ತಕಕ್ಕೆ ಬಂದಾಗ ಇದು ಅಸಹಜ, ಆದರೆ ಇದನ್ನು ಗಮನಿಸಿ ಎಡಿಟ್ ಮಾಡುವ ಗೋಜಿಗೆ ಹೋಗದ ಕೊಡ್ಲೆಕೆರೆ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನೆ ಯಥಾವತ್ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ.
ಎಡಿಟ್ ಆಗದ ಯಾವುದೆ ಲೇಖನ, ಪುಸ್ತಕಗಳನ್ನು ಲಂಕೇಶ್ ಪ್ರಕಟಿಸುತ್ತಿರಲಿಲ್ಲ. ಇದು ಲೇಖಕ/ಸಂಪಾದಕ/ಪ್ರಕಾಶಕನ ಮೂಲಭೂತ ಅವಶ್ಯಕ ಕಾಳಜಿ. ಇಂಥ ಗಮನಾರ್ಹ ಸಂಗತಿ, ಲಂಕೇಶ್ ಬಗ್ಗೆ ಪುಸ್ತಕ ಬರೆದ ಕೊಡ್ಲೆಕೆರೆ ಅವರನ್ನು ಯಾಕೆ ಕಾಡಲಿಲ್ಲ? 

2 comments:

 1. ಡಾ.ಪಿ ವಿ ಅನುಸೂಯSaturday, 01 June, 2013

  ತುಂಬ ಉತ್ತಮ ವಿಮರ್ಶೆ.ನಾನು ಪುಸ್ತಕ ಓದಿಲ್ಲ.ಆದರೆ,ವೃತ್ತ ಪತ್ರಿಕೆಯಲ್ಲಿ, ಅಂಕಣದಲ್ಲಿ ಪ್ರಕಟವಾಗುವಾಗ ಓದಿದ್ದು.ಆಗ ನನಗೆ ಕೊಡ್ಲೆಕೆರೆ ಅವರು,ಲಂಕೇಶ್ ಅವರನ್ನು ಮೆಚ್ಚುತ್ತಿದ್ದಾರೋ ಅಥವಾ ಟೀಕಿಸುತ್ತಿದ್ದಾರೋ ಎಂಬ ಗೊಂದಲ ಇತ್ತು.

  ReplyDelete
 2. ಲಂಕೇಶ್ ಅವರನ್ನು ಅವರ ಎಲ್ಲಾ ದುರ್ಗುಣಗಳನ್ನು ದೂರ ಇಟ್ಟು ಕೇವಲ ಸ್ವಚ್ಚಂದ ಬೆಳಕಿನಲ್ಲಿ ಅವರನ್ನು ತೋರಿಸುವ ಹಪಾಹಪಿ ವಿಮರ್ಶಕರಿಗೆ ಇರುವಂತೆ ತೋರುತ್ತದೆ. ಲಂಕೇಶ್ ಇಷ್ಟ ವಾದದ್ದು ಅವರ ಎಲ್ಲ ಗುಣಗಳ ಸಂಮಿಶ್ರಣದೊಂದಿಗೆ ಎಂಬುದನ್ನು ಮೊದಲು ಅವರು ಅರಿಯಬೇಕು. ಲಂಕೇಶ್ ಸಂಪೂರ್ಣ ಮಾನವರಾಗಿರಲಿಲ್ಲ ಎಂಬುದು ಎಲ್ಲರಿಗು ಗೊತ್ತಿದ್ದ ಸತ್ಯ.ಅವರಲ್ಲೂ ಸಹ ಮಾನವ ಸಹಜ ದೌರ್ಬಲ್ಯಗಳು ಇದ್ದುವು. ಅದನ್ನು ಲೇಖಕರು ತಮ್ಮ ದೃಷ್ಟಿಯಲ್ಲಿ ತುಲನೆ ಮಾಡಿ ವಿಮರ್ಶಿಸಿದ್ದಾರೆ ಅಷ್ಟೇ.

  ReplyDelete