• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಕಳೆ ಇಲ್ಲದ ‘ಮದುಮಗಳು’

ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಓದುವುದು ಒಂದು ಅನನ್ಯ ಅನುಭವ. ಈ ಕಾರಣದಿಂದ ಕೃತಿಯ ರಂಗರೂಪ ಹೇಗಿರಬಹುದೆಂಬ ಕುತೂಹಲ ಇತ್ತು. ಬೆಂಗಳೂರಿನ ಕಲಾಗ್ರಾಮದಲ್ಲಿ ನಾಟಕ ನೋಡಿದೆ. ಈ ಕುರಿತು  ಹವ್ಯಾಸಿ ರಂಗಭೂಮಿ ಹಿನ್ನೆಲೆಯೂ ಇರುವ ನನ್ನ ಅಭಿಪ್ರಾಯಗಳನ್ನು  ದಾಖಲಿಸಿದ್ದೇನೆ. ನಾಟಕ ನೋಡಿದವರು ನಿಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು.


ಸಾಮಾಜಿಕ ಸಂದರ್ಭ:

19ನೇ ಶತಮಾನದ ಉತ್ತರಾರ್ಧ, 20ನೇ ಶತಮಾನದ ಆದಿಭಾಗದ ಸಾಮಾಜಿಕ ಬದುಕಿನ ದಟ್ಟ ಚಿತ್ರಣವನ್ನು ಮಲೆಗಳಲ್ಲಿ ಮದುಮಗಳು ಕಟ್ಟಿಕೊಡುತ್ತದೆ. ಅವತ್ತಿನ ಸಂದರ್ಭದಲ್ಲಿ ದಲಿತ ಸಮುದಾಯದ ಮೇಲೆ ಆಗುತ್ತಿದ್ದ ದೌರ್ಜನ್ಯ, ಶೋಷಣೆಗಳನ್ನ ಕಾದಂಬರಿಕಾರ ಮುಕ್ತವಾಗಿ ಕಟ್ಟಿಕೊಡುತ್ತಾರೆ. ಮೇಲ್ಜಾತಿಯ ಚಿನ್ನಮ್ಮ-ಮುಕುಂದಯ್ಯ ಅವರ ಪ್ರೇಮದ ಪರಿಯನ್ನ ಚಿತ್ರಿಸುತ್ತಲೆ ದಲಿತರಾದ ತಿಮ್ಮಿ-ಗುತ್ತಿ, ಪಿಂಚಲು-ಐತ ಅವರ ಪ್ರೀತಿಯ ಅನನ್ಯತೆಯನ್ನು ನವಿರಾಗಿ ಕಟ್ಟಿಕೊಡುತ್ತಾರೆ. 
ಕೇಂದ್ರ ಪ್ರಜ್ಞೆ:


ಈ ಮೂರು ಜೋಡಿಗಳಷ್ಟೆ ಕಾದಂಬರಿಯ ಕೇಂದ್ರಪ್ರಜ್ಞೆಯಲ್ಲ. ಸಾಮಾಜಿಕ ಶೋಷಣೆ ಹೇಳುವುದು ಕೂಡ ಕೇಂದ್ರಪ್ರಜ್ಞೆಯಾಗಿದೆ. ಕಾದಂಬರಿ ಕಾಲಘಟ್ಟದಲ್ಲಿ ಮಲೆನಾಡಿಗೆ ಅಡಿಯಿಟ್ಟ ಮತಾಂತರ ಪ್ರಕ್ರಿಯೆಯನ್ನು ಹೇಳಲಾಗಿದೆ.

ಆದರೆ ಕಾದಂಬರಿಯ ಕೇಂದ್ರಪ್ರಜ್ಞೆಯನ್ನು ಗ್ರಹಿಸಿ ಪ್ರೇಕ್ಷಕರ ಮುಂದಿಡಲು ನಿರ್ದೇಶಕ ಸಿ. ಬಸವಲಿಂಗಯ್ಯ ಪೂರ್ಣ ವಿಫಲರಾಗಿದ್ದಾರೆ. ಕಾದಂಬರಿಯ ಮೇಲ್ನೋಟದ ರೂಪ ಮುಂದಿಡಲು ಪ್ರಯತ್ನಿಸುತ್ತಿದ್ದಾರೆ ಎನಿಸಿದರೂ ಅದರಲ್ಲಿಯೂ ಅವರು ಯಶಸ್ವಿ ಆಗಿಲ್ಲ.

ನಾಟಕೀಯ ಅಂಶಗಳ ಕೊರತೆ:

ಕಾದಂಬರಿ ಓದುವುದೆ ಬೇರೆ, ಅದರ ರಂಗಾನುಭವ ಬೇರೆ. ನಾಟಕ ಅಥವಾ ಕಥೆ, ಕಾದಂಬರಿಯನ್ನ ಇಬ್ಬರು ಅಥವಾ ಹೆಚ್ಚು ಜನ ವೇಷಭೂಷಣ ಹಾಕಿ ಜೋರಾಗಿ ಪಠಣ ಮಾಡಿದಾಕ್ಷಣ ಅದು ನಾಟಕ ಎನಿಸುವುದಿಲ್ಲ. ನಾಟಕೀಯತೆಯೂ ಬೇಕು. ಅದಿದ್ದರೆ ಮಾತ್ರ ನಾಟಕ. ರಂಗರೂಪ ಮಲೆಗಳಲ್ಲಿ ಮದುಮಗಳಲ್ಲಿ ಈ ನಾಟಕೀಯ ಅಂಶಗಳ ಕೊರತೆ ಹೆಚ್ಚಾಗಿದೆ.

ರಂಗತಂತ್ರಗಳು:

ಕಾದಂಬರಿಯನ್ನ ರಂಗರೂಪಕ್ಕೆ ತಂದಾಗ ಅದರಲ್ಲಿಯೂ ಬಹು ನಿರೀಕ್ಷೆ ಹುಟ್ಟಿಸುವ ಮಲೆಗಳಲ್ಲಿ ಮದುಮಗಳಂಥ ಕೃತಿಗಳಲ್ಲಿ ಕೊಂಚವಾದರೂ ವಿನೂತನ ಎನಿಸುವಂಥ ರಂಗತಂತ್ರಗಳು ಬೇಕು. ಆದರೆ ಇಲ್ಲಿ ಅದು ಕಾಣೆಯಾಗಿದೆ.

ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಸಾಕಷ್ಟು ಬಾರಿ ಬಳಸಲ್ಪಟ್ಟ ರಂಗತಂತ್ರಗಳೇ ಇಲ್ಲಿ ಪ್ರಯೋಗ ಆಗಿವೆ. ಹಯವದನ, ಜೋಕುಮಾರ ಸ್ವಾಮಿ, ಮಹಾಚೈತ್ರ, ಮಾದರಿ ಮಾದಯ್ಯ ಇತ್ಯಾದಿ ನಾಟಕಗಳ ಉದಾಹರಣೆಗಳನ್ನು  ಇಲ್ಲಿ ನೀಡಬಹುದು. ಸೂತ್ರಧಾರರ ನಡುವಿನಿಂದಲೆ ಪಾತ್ರಧಾರಿಯೊರ್ವ ಹುಟ್ಟಿಕೊಳ್ಳುವ ತಂತ್ರವೂ ನಾಯಿಕಥೆ ನಾಟಕದಲ್ಲಿ ಬಳಕೆಯಾಗಿದೆ.

ಬಳಕೆಯಾಗಿರುವ ರಂಗತಂತ್ರಗಳನ್ನು ಮತ್ತೆ ಬಳಸಬಾರದು ಎಂಬುದೇನಿಲ್ಲ. ಆದರೆ ಅದಕ್ಕೆ ಲವಲವಿಕೆಯ ಸ್ಪರ್ಶ ಅಗತ್ಯ. ಇಲ್ಲಿಯ ಸೂತ್ರಧಾರರಲ್ಲಿ ಕಥೆ ಹೇಳುವ ಅದಮ್ಯ ಉತ್ಸಾಹ, ಚೇತೋಹಾರಿತನ ಕಾಣೆಯಾಗಿದೆ.

 ಸಂಗೀತ


ನಾಟಕಕ್ಕೆ ಏರುಗತಿಯನ್ನ ನೀಡಿ ಪ್ರೇಕ್ಷಕರನ್ನು ಹಿಡಿದಿಡುವ ಪಾತ್ರವನ್ನ ಸಂಗೀತವೂ ನಿಭಾಹಿಸುತ್ತದೆ. ಜೊತೆಗೆ ನಾಟಕದ ಕಾಲಘಟ್ಟವನ್ನ ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿಸುವುದಕ್ಕೂ ಅಗತ್ಯ. ಆದರೆ ಹಂಸಲೇಖ ಒದಗಿಸಿರುವ ಸಂಗೀತ, ರಂಗಸಂಗೀತ ಖಂಡಿತ ಅಲ್ಲ. ರಂಗಸಂಗೀತದ ಅಂಶಗಳು ಗೈರುಹಾಜರಾಗಿರುವುದು ಎದ್ದು ಕಾಣುತ್ತದೆ. ಗಂಭೀರ ಅಲ್ಲದ ಸಿನಿಮಾಗಳಿಗೆ ನೀಡುವ ಸಂಗೀತದ ಮಾದರಿ ಇಲ್ಲಿದೆ. ನಾಟಕಕ್ಕೆ ಪೂರಕ ಅಲ್ಲದ ಸಂಗೀತ ತೀವ್ರ ನಿರಾಶೆ ಮೂಡಿಸುತ್ತದೆ.

70 ಲಕ್ಷ ರೂ. ವೆಚ್ಚದ ರಂಗಸಜ್ಜಿಕೆ:

ಬಯಲು ರಂಗಮಂದಿರದಲ್ಲಿ ಅದೂ ನಾಲ್ಕು ಬೇರೆ ಬೇರೆ ವೇದಿಕೆಗಳಲ್ಲಿ ನಾಟಕ ಪ್ರದರ್ಶಿತವಾಗುತ್ತದೆ, ಅದರಲ್ಲಿಯೂ ಶಶಿಧರ ಅಡಪ ಅವರ ರಂಗವಿನ್ಯಾಸ ಎಂದಾಗ ನಿರೀಕ್ಷೆ ಹೆಚ್ಚು. ಈ ನಿರೀಕ್ಷೆಯಲ್ಲಿ ನಾಟಕ ನೋಡಲು ಹೋಗಿದ್ದರಿಂದ ನಿರಾಶೆ ಆಯಿತು. ನಾಲ್ಕೈದು ಅಡಿಕೆಮರ ತಂದು ನಿಲ್ಲಿಸಿದಾಕ್ಷಣ ಮಲೆನಾಡಿನ ಸಂವೇದನೆ ಉಂಟಾಗುತ್ತದೆ ಎಂದು ಭಾವಿಸುವುದರಲ್ಲಿ ಅರ್ಥವಿಲ್ಲ. ಕೆರೆ ಅಂಗಳ ಇಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಗಿಲ್ಲ.

ನಾಲ್ಕು ರಂಗವೇದಿಕೆಗಳನ್ನ ಸಜ್ಜುಗೊಳಿಸಲು 70 ಲಕ್ಷ ರೂ. ವೆಚ್ಚವಾಗಿದೆ ಎಂದು ಕೇಳಿ ಆಶ್ಚರ್ಯ ಆಯಿತು. ಇಲ್ಲಿ ಬಳಸಿರುವ ಪರಿಕರ ನೋಡಿದರೆ ಅವೆಲ್ಲವನ್ನೂ ಒಂದೇ ವೇದಿಕೆಯಲ್ಲಿ ತರಬಹುದಾಗಿತ್ತು. ಚಲನಶೀಲ ಪರಿಕರ  ಬಳಸಿಕೊಂಡರೆ ಇದು ಸಾಧ್ಯವಾಗುತ್ತದೆ. ಆಗ ಪ್ರೇಕ್ಷಕರನ್ನ ಒಂದು ರಂಗದಿಂದ ಮತ್ತೊಂದು ರಂಗಕ್ಕೆ ಅಲೆದಾಡಿಸುವ ಪ್ರಮೇಯ ಇರುವುದಿಲ್ಲ. ಇಂಥ ಅನಿವಾರ್ಯತೆ ಉಳ್ಳಂಥ ರಂಗಸಜ್ಜಿಕೆಗಳನ್ನ ಇಲ್ಲಿ ಬಳಸಿಕೊಂಡಿಲ್ಲ.

ಇಲ್ಲಿ ಇಬ್ಬರು ವ್ಯಕ್ತಿಗಳಿಗೆ ಕುದುರೆ ಮುಖವಾಡ ಹಾಕಿ ಕರೆತರುವುದರ ಬದಲು ಜೀವಂತ ಕುದುರೆ ಬಳಸಬಹುದಾಗಿತ್ತು. ಇದು ಅಸಾಧ್ಯವೂ ಅಲ್ಲ. ಗುಬ್ಬಿ ವೀರಣ್ಣ ಅವರು ಪೌರಾಣಿಕ ನಾಟಕಗಳಲ್ಲಿ ವೇದಿಕೆಗೆ ನಿಜವಾದ ಆನೆ-ಕುದುರೆ ತರುತ್ತಿದ್ದರು ಎಂಬುದನ್ನು, ಜೊತೆಗೆ ಅವರು ತಿರುಗುವ ರಂಗಮಂಚಗಳನ್ನು ಬಳಸುತ್ತಿದ್ದರು ಎಂಬುದನ್ನು ನೆನೆದರೆ, ಪ್ರಸ್ತುತ ನಾಟಕಕ್ಕೆ ಆದ ಖರ್ಚು ನೋಡಿದರೆ ಇದೆಲ್ಲ ಅಸಾಧ್ಯವಂತೂ ಆಗಿರಲಿಲ್ಲ.

ಬೆಳಕು:

ನಟರ ಹಾವಾಭಾವ, ಮುಖಾಭಿವ್ಯಕ್ತಿಯನ್ನ ಪ್ರೇಕ್ಷಕರಿಗೆ ಸ್ಪಷ್ಟವಾಗಿ ತೋರಿಸುವ ಅಗತ್ಯ ಇದೆ. ಇದು ಸಾಧ್ಯ ಆಗದಿದ್ದರೆ ಅಂಥ ನಾಟಕ ಆಡಿಯೂ ಪ್ರಯೋಜನ ಇಲ್ಲ. ಪರೇಶ್ ಕುಮಾರ್ ಮಾಡಿರುವ ಬೆಳಕಿನ ವಿನ್ಯಾಸ ಪೂರ್ಣ ವಿಫಲ. ಬಯಲು ರಂಗ, ಅದರಲ್ಲಿಯೂ ಪ್ರತ್ಯೇಕ ರಂಗಮಂಚಗಳು ಬೇಡುವ ಬೆಳಕನ್ನ ಒದಗಿಸುವುದು ಒಂದು ಸವಾಲು. ಅದರಲ್ಲಿ ನಾಟಕ  ವಿಫಲ.

ನಾಟಕ ಸಾಹಿತ್ಯ:

ಮಲೆಗಳಲ್ಲಿ ಮದುಮಗಳು ಶುಷ್ಕ ಕಾದಂಬರಿ ಅಲ್ಲ. ಅದಕ್ಕೆ ಓದುಗರನ್ನ ತನ್ನೊಳಗೆ ಸೆಳೆದುಕೊಂಡು, ತನ್ನದೆ ಪ್ರಪಂಚಕ್ಕೆ ಕರೆದುಕೊಂಡು ಹೋಗುವ ಶಕ್ತಿ ಇದೆ. ಇದು ಸಂಭಾಷಣೆ ಸಹಿತವಾದ ಕಾದಂಬರಿ ಎಂಬುದನ್ನು ನೆನಪಿನಲ್ಲಿ ಇಡುವುದು ಅಗತ್ಯ. ಇಂಥಲ್ಲಿ ನಾಟಕ ಸಾಹಿತ್ಯ ಒದಗಿಸುವವರ ಶ್ರಮ ಕಡಿಮೆಯಾಗುತ್ತದೆ. ಆದರೆ ಕಾದಂಬರಿಯ ಈ ಶಕ್ತಿ ಇಲ್ಲಿ ಬಳಕೆಯಾಗಿಲ್ಲ.

ನಾಟಕಕ್ಕೆಂದು ಕೆ.ವೈ. ನಾರಾಯಣಸ್ವಾಮಿ ಬರೆದಿರುವ ಹಾಡುಗಳ್ಯಾವುದೂ ನೆನಪಿನಲ್ಲಿ ಉಳಿಯುವುದಿಲ್ಲ. ಇದಕ್ಕೆ ಬದಲಾಗಿ ಕುವೆಂಪು ಅವರೇ ಬರೆದಿರುವ ಗೀತೆಗಳನ್ನ ಬಳಸಿಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡಬಹುದಾಗಿತ್ತು.  ಈ ಸವಾಲನ್ನು ನಿರ್ದೇಶಕರು ಸ್ವೀಕರಿಸಬೇಕಿತ್ತು.

ಸಂಭಾಷಣೆ ಒಪ್ಪಿಸುವಿಕೆ:


ನಾಟಕದಲ್ಲಿ ಬಹುತೇಕ ಪಾತ್ರಧಾರಿಗಳು ಸಂಭಾಷಣೆ ಒಪ್ಪಿಸುವ ರೀತಿ ಸಮರ್ಪಕವಾಗಿಲ್ಲ. ಇದನ್ನು ನೋಡಿದರೆ ನಾಟಕ ಮತ್ತಷ್ಟೂ ಪಾಲೀಶ್ ಆಗಬೇಕಿತ್ತು ಎನಿಸುತ್ತದೆ. ಸಂಭಾಷಣೆ ಒಪ್ಪಿಸುವುದರಲ್ಲಿ ಮತ್ತೆ ಮತ್ತೆ ನಿಧಾನ ಮಾಡುವುದು, ಕೆಲವೊಮ್ಮೆ ಮರತೇ ಹೋದಂತೆ ಕೆಲಕ್ಷಣ ಸುಮ್ಮನೆ ನಿಂತುಬಿಡುವುದು ನೋಡಿದಾಗ ಇನ್ನೂ ಹೆಚ್ಚು ರಿಹರ್ಸಲ್ ಅಗತ್ಯವಿತ್ತು ಎನಿಸುತ್ತದೆ.

ಶ್ರಮ:


ಇಲ್ಲಿಯ ಪಾತ್ರಧಾರಿಗಳು ಅಪಾರ ಶ್ರಮಪಡುತ್ತಿದ್ದಾರೆ. ಒಂಭತ್ತು ಗಂಟೆಗಳ ಅವಧಿಯ ನಾಟಕದಲ್ಲಿ ಅಭಿನಯಿಸುವುದು ಸಾಧಾರಣ ಸಂಗತಿ ಅಲ್ಲ. ಆದರೆ ಇವರ ಶ್ರಮವನ್ನ ನಿರ್ದೇಶಕರು ಸಮರ್ಥವಾಗಿ ಬಳಸಿಕೊಳ್ಳಲು ವಿಫಲರಾಗಿದ್ದಾರೆ ಎನಿಸುತ್ತದೆ.

ಗಮನ ಸೆಳೆದವರು:


ಗುತ್ತಿ-ತಿಮ್ಮಿ, ಐತ-ಪಿಂಚಲು, ನಾಗಕ್ಕ, ಕುಂಟ ವೆಂಕಣ್ಣ, ಸುಬ್ಬಣ್ಣ ಹೆಗ್ಗಡೆ, ಐಗಳು, ಚಿಂಕ್ರ, ನಾಯಿ ಹುಲಿಯ ಪಾತ್ರಧಾರಿಗಳು ಅತ್ಯುತ್ತಮವಾಗಿ ನಟಿಸಿದ್ದಾರೆ. ಇಡೀ ನಾಟಕಕ್ಕೆ ಏರುಗತಿ ನೀಡುವುದಕ್ಕೆ ಇವರು ಶ್ರಮಪಟ್ಟಿದ್ದಾರೆ. ಅದರಲ್ಲಿಯೂ ವೆಂಕಟಪ್ಪನಾಯಕ (ಕುಂಟ ವೆಂಕಣ್ಣ) ಪಾತ್ರಧಾರಿಯ ನಟನೆ ಅಪಾರ ಮೆಚ್ಚುಗೆಗಳಿಸುತ್ತದೆ. ಸಂಭಾಷಣೆ ಒಪ್ಪಿಸುವಿಕೆ, ಹಾವಾಭಾವ, ಆಂಗಿಕಾಭಿನಯ ಎಲ್ಲದರಲ್ಲಿಯೂ ಈ ಪಾತ್ರಧಾರಿ ಗಮನ ಸೆಳೆಯುತ್ತಾರೆ.

ನಾಟಕದ ಅವಧಿ ಮತ್ತು ಮಸಾಲೆ:

ಒಂಭತ್ತು ಗಂಟೆಗಳಷ್ಟು ದೀರ್ಘಾವಧಿ ನಾಟಕ ಆಡುವ ಅವಶ್ಯಕತೆ ಇತ್ತೇ ? ಕಾದಂಬರಿಯ ಸಂಗ್ರಹ ರೂಪವನ್ನ ಅದರ ಕೇಂದ್ರ ಪ್ರಜ್ಞೆ ಆಶಯದೊಂದಿಗೆ 3 ರಿಂದ 4 ಗಂಟೆ ಅವಧಿಯಲ್ಲಿ ಹೇಳಬಹುದಾಗಿತ್ತು. ಇದು ಅಗತ್ಯವೂ ಹೌದು. ಏಕೆಂದರೆ ತುಂಬ ದೀರ್ಘಾವಧಿ ನಾಟಕದಲ್ಲಿ ಟೆಂಪೋ ಕಾಯ್ದುಕೊಳ್ಳುವುದು ಸಣ್ಣ ವಿಷಯ ಖಂಡಿತ ಅಲ್ಲ. ಇದನ್ನು ನಿರ್ಲಕ್ಷ್ಯ ಮಾಡಿದ ಕಾರಣದಿಂದಲೇ ಮೂರನೇ ರಂಗಮಂಚ ‘ಬಿದಿರುಮೆಳೆ’ ಗೆ ಬಂದ ನಂತರ ಕುಸಿದ ನಾಟಕದ ಟೆಂಪೋ ಮತ್ತೆ ಮೇಲೇಳುವುದಿಲ್ಲ.

 ವಾರಕ್ಕೆ ಮೂರು ದಿನ ಪ್ರದರ್ಶನ ನೀಡಬೇಕಾದ ಕಲಾವಿದರ ಮೇಲೆ ಆಗುವ ಮಾನಸಿಕ- ದೈಹಿಕ ಶ್ರಮ ಅಪಾರ. ಸರಿಯಾದ ವಿಶ್ರಾಂತಿ ಇಲ್ಲದಿದ್ದರೆ ಅವರು ಕುಸಿದುಹೋಗುತ್ತಾರೆ. ಏಕೆಂದರೆ ನಿರಂತರವಾಗಿ ನಿದ್ದೆಗೆಡುವುದು, ಪ್ರೇಕ್ಷಕರ ನಿರೀಕ್ಷೆಗಳನ್ನ ಸಫಲಗೊಳಿಸಲು ಪ್ರಯತ್ನಪಡುವುದು ಭಾರಿ ಶ್ರಮದಾಯಕ ಕಾರ್ಯ. ಕಲಾವಿದರ ಮೇಲೆ ಇಷ್ಟೊಂದು ಶ್ರಮ ಹೇರುವ ಅಗತ್ಯ ಇತ್ತೆ ?

ಇನ್ನು ಮಸಾಲೆ ವಿಷಯಕ್ಕೆ ಬರುವುದಾದರೆ  ಹಾಡುಗಳು, ನೃತ್ಯ ಅಗತ್ಯಕ್ಕಿಂತಲೂ ಹೆಚ್ಚಾಗಿವೆ. ಆದ್ದರಿಂದ ಮಸಾಲೆ ಕೊಂಚ ಜಾಸ್ತಿ ಆಗಿದೆ.

ಹಾಸ್ಯಸ್ಪದ ಅಗತ್ಯವಿತ್ತೆ ?


ಕಾದಂಬರಿಯ ಸಾಬರು ಮತ್ತು ಕ್ರೈಸ್ತ ಪಾತ್ರಗಳನ್ನ ಇಲ್ಲಿ ಹಾಸ್ಯಸ್ಪದವಾಗಿ ತೋರಿಸಲಾಗಿದೆ. ಇದರ ಅಗತ್ಯ ಇರಲಿಲ್ಲ. ಸಾಮಾಜಿಕ ಶೋಷಣೆಯಿಂದ ನೊಂದ, ಬೆಂದ ದಲಿತರಿಗೆ ಕ್ರೈಸ್ತಧರ್ಮಕ್ಕೆ ಮತಾಂತರಗೊಳ್ಳುವುದು ಅನಿವಾರ್ಯ ಎನಿಸಿರುತ್ತದೆ. ಶತಮಾನದ ಹಿಂದೆ ಮತಾಂತರಗೊಂಡವವರ ಮನೋಸ್ಥೆರ್ಯ, ಸಾಮಾಜಿಕ, ಆರ್ಥಿಕ ಸ್ಥಾನಮಾನ ಬದಲಾವಣೆಯಾಗಿರುವುದನ್ನು ತಳ್ಳಿಹಾಕುವಂತಿಲ್ಲ.

ಇವತ್ತಿನ ಕಾಲಘಟ್ಟದಲ್ಲಿ ನಿಂತು ಮತಾಂತರ ಏಕಾಯಿತು, ಅಂಥ ಅನಿವಾರ್ಯತೆ ಏನಿತ್ತು ಎಂಬುದನ್ನು ನಿರ್ದೇಶಕರು ಯೋಚಿಸಬೇಕಿತ್ತು. ದಲಿತರು ಮದುವೆ ಸಂದರ್ಭಗಳಲ್ಲಿ ಕುದುರೆ ಏರುವಂತಿಲ್ಲ. ಮೇಲ್ಜಾತಿಗಳು ವಿಧಿಸಿದ ಈ ನಿಯಮ ಮುರಿದರೆ ಅಂಥವರಿಗೆ ಉಳಿಗಾಲವಿರಲಿಲ್ಲ ಎಂದು ಕಾದಂಬರಿಕಾರರು ವಿವರಿಸಿದ್ದಾರೆ.

ಕುದುರೆ ಮೇಲೆ ಕರ್ಕಂಡು ಹೋಗ್ತಿನಿ ಎಂದು ಗುತ್ತಿ ಹೇಳಿದಾಗ ಕುದುರೆ ಕಾಲು ಜೊತೆ ನಿನ್ನ ಕಾಲೂ ಮುರಿತಾರೆ ಎನ್ನುವ ತಿಮ್ಮಿಯ ನೋವು, ನಮ್ಮ ದುಡ್ಡಲ್ಲಿ ನಾವು ಕುದುರೆ ಏರಿದರೆ ಅವರಿಗೇನು ತೊಂದರೆ ಎನ್ನುವ ಸೇಸನಾಯ್ಕನ ಮನದಾಳದ ನೋವಿನ ಮಾತು ರಂಗರೂಪಗೊಳ್ಳುವ ಅಗತ್ಯ ಇತ್ತು.

ದಲಿತರಿಗಾಗುತ್ತಿದ್ದ , ಈಗಲೂ ಆಗುತ್ತಿರುವ ಕಿರುಕುಳ, ಮಾನಸಿಕ, ದೈಹಿಕ ಯಾತನೆ, ಕೊಲೆಗಳ ಹಿನ್ನೆಲೆಯಲ್ಲಿ ಕಾದಂಬರಿಯ ಕ್ರೈಸ್ತ ಫಾದರ್ ಗಳ ಪಾತ್ರಗಳನ್ನ ಗಂಭೀರವಾಗಿ ಮುಂದಿಡಬೇಕಿತ್ತು. ಆದರೆ ನಿರ್ದೇಶಕರು ಆ ಗೋಜಿಗೆ ಹೋಗಿಲ್ಲ. ಇದು ಬೇಸರದ ಸಂಗತಿ.

8 comments:

 1. ನಿಮ್ಮ ಅಭಿಮಾನಿ ನಾನು. ನೀವು ಬರಿಯುವ ಎಲ್ಲ ಲೇಖನಗಳನ್ನು ನಾನು ಓದುತ್ತೇನೆ. ಅದ್ಯಾಕೋ ಮದುಮಗಳು ನಾಟಕದ ಬಗ್ಗೆ ತುಂಬಾ ಋಣಾತ್ಮಕ ಅಂಶಗಳನ್ನು ಬರೆದಿದ್ದೀರಿ. ನಾಟಕ ಇಷ್ಟ ಆಗೋದು ಬಿಡೋದು ವಯಕ್ತಿಕ ಅಂಶ. ನನಗನಿಸಿದ್ದ ಕೆಲ ಅಂಶಗಳನ್ನು ಹೇಳುತ್ತೇನೆ.
  ನಾಲ್ಕೈದು ಅಡಿಕೆಮರ ತಂದು ನಿಲ್ಲಿಸಿದಾಕ್ಷಣ ಮಲೆನಾಡಿನ ಸಂವೇದನೆ ಉಂಟಾಗುತ್ತದೆ ಎಂದು ಭಾವಿಸುವುದರಲ್ಲಿ ಅರ್ಥವಿಲ್ಲ? ಇದು ಸಿನಿಮಾ ಅಲ್ಲವಲ್ಲ ... ನಾಟಕ. ನಾಟಕ ಅಂದರೇನೆ ಸುಳ್ಳು ಅಲ್ಲವೇ? ಮಲೆನಾಡಿನ ಪರಿಸರ ತೋರಿಸುವುದಕ್ಕೆ ಅಷ್ಟು ಗಿಡಗಳು ಸಾಕು. ೯ ಘಂಟೆಗಳ ಕಾಲ ಕುಂತಲ್ಲೇ ಕೂಡಲು ಸಾಧ್ಯವಿಲ್ಲವಲ್ಲ.. ಅದಕ್ಕೆ ನಾಲ್ಕು ರಂಗ ವೇದಿಕೆ ಸಿದ್ಧಗೊಂಡಿವೆ. ಪ್ರೇಕ್ಷಕ ಸ್ವಲ್ಪವಾದರೂ ನಡೆದಾಡಲು ಅವಕಾಶ ಇದೆ.
  ನಾಟಕದ ಸಂಗೀತ ಅಷ್ಟಕ್ಕಷ್ಟೇ. ಸಿನಿಮಾ ಹಾಡುಗಳ ರೀತಿಯಲ್ಲಿರುವುದು ಒಪ್ಪತಕ್ಕದ್ದು. ನಿಜವಾದ ಕುದುರೆ ಆನೆಗಳನ್ನು ತರುವುದು ತುಂಬಾ ಕಷ್ಟದ ಕೆಲಸವಾದರೂ ತರಬಹುದು. ತಂದರೆ ಪ್ರಾಣಿ ದಯಾ ಸಂಘದವರು ಸುಮ್ಮನೆ ಇರುತ್ತಾರೆಯೇ? ರಗಳೆ ರಂಪಾಟಗಳು ಶುರುವಾಗಿಬಿಡುತ್ತವೆ
  ೯ ಘಂಟೆ ನಾಟಕವಾಡುವುದು ಪ್ರಯೋಗಾತ್ಮಕ. . ೩ ಅಥವಾ ೪ ಘಂಟೆಗೆ ನಾಟಕವನ್ನು ಸೀಮಿತಗೊಳಿಸುವುದಾದರು ಹೇಗೆ? ಅತೀ ದೊಡ್ಡ ಕಾದಂಬರಿ ಅದು! ನಾಟಕದ ಶಿಸ್ತಿನಲ್ಲಿ ಬೇಕಾದನ್ನು ತೊಗೊಂಡು ಬೇಡಾದನ್ನು ಬಿಡುವುದು ಸರಿ ಅಲ್ಲ. ನೃತ್ಯ ಹಾಡುಗಳು ಬೇಕೇ ಬೇಕು. ೯ ಘಂಟೆಯ ಪ್ರದರ್ಶನ! ಬರೀ ಡೈಲಾಗ್ ಕೇಳೋಕೆ ಆಗಲ್ವಲ್ಲ...
  ಈ ನಾಟಕ ಮೈಸೂರಿನಲ್ಲಿ ನೋಡಿದ್ದೇ. ಬೆಳಗ್ಗೆ ೬ ಘಂಟೆಗೆ ಮುಗಿದಾದಮೇಲೆ ಜೀವನ ಸಾರ್ಥಕ ಎಂಬ ಭಾವ ನನ್ನ ಮುಖದಲ್ಲಿತ್ತು.
  ಮದುಮಗಳು ನಾಟಕ ಕರ್ನಾಟಕ ರಂಗಭೂಮಿಯ ಅತೀ ದೊಡ್ಡ ಸಾಧನೆ ಇದು ಅಲ್ಲವೇ?

  ReplyDelete
  Replies
  1. I completely agree with you vasan. Nataka nododu adara bagge pratikriy bariyodu bhala sulabha, aadare adara hinde yeshtu parishrama ide annodu bareelilla lekhakaru.

   Delete
 2. ಅಶೋಕವರ್ಧನ ಜಿ.ಎನ್Sunday, 26 May, 2013

  ನಿರ್ವಿವಾದವಾಗಿ ಮಹಾನ್ ಕಾದಂಬರಿ - ಮಮಮಗಳು.ಆದರೆ ಅದನ್ನೇ ಆವಾಹಿಸಿಕೊಂಡು ನಾಟಕರೂಪ ನೋಡಿದ ಬಹುತೇಕ ವಿಮರ್ಶೆಗಳು, ಮೆಚ್ಚುನುಡಿಗಳಿಗೆ ಭಿನ್ನವಾಗಿ, ಕಟುವಾಗಿ ಸ್ಪಂದಿಸಿದ್ದೀರಿ, ಅಭಿನಂದನೆಗಳು. ನನಗೂ ಮಮಮಗಳು ನಾಟಕರೂಪದ ಬೆಂಗಳೂರು ಪ್ರಯೋಗ ದೊಡ್ಡ ಭ್ರಮನಿರಸನ. ಈ ಕುರಿತ ಸವಿವರ ಲೇಖನವನ್ನು ೨೮-೫-೧೩ರ ಬೆಳಿಗ್ಗೆ ನನ್ನ ಜಾಲತಾಣ - www.athreebook.com, ಇದರಲ್ಲಿ ಓದಬಹುದು.

  ReplyDelete
 3. ಗೀತೆಗಳು ಆಧುನಿಕವಾಗಿವೆ ,, ಅದರಲ್ಲೂ ಗುತ್ತಿ ಮತ್ತು ತಿಮ್ಮಿ, ಕಾಡಿನಲ್ಲಿ ಮಲಗಿ ಬೆಳಿಗ್ಗೆ ಎದ್ದಾಗ ಬರುವ ಮಂಜಿನ ಗೀತೆ ಪೂರ್ತಿ ಹೊಸ ಚಿತ್ರದ ಗೀತೆ ಅನಿಸುತ್ತದೆ, ೪ ಬೇರೆ ಬೇರೆ ವೇದಿಕೆ ಗಳನ್ನೂ ಮಾಡಲು ಜನರಿಗೆ ಒಂದೇ ಸ್ಥಳದಲ್ಲಿ ಕುಳಿತು ಆಗುವ ಬೇಸರ / ನಿದ್ರೆಯನ್ನು ತಡೆಯುವುದೂ ಆಗಿರಬಹುದು ..
  ಮತ್ತೊಂದು ಮಾತು ,, ಕುವೆಂಪು ಅವರನ್ನು ಒಂದು ಜಾತಿಗೆ ಸ್ಥಿಮಿತ ಮಾಡುವ ಕೆಲಸವೂ ನಡೆಯುತ್ತಿದೆ.ಕೊನೆಯಲ್ಲಿ ಬರುವ ಸಂಭಾಷಣೆ ಕೂಡ ಒಂದು ನಿರ್ದಿಷ್ಟ ಜಾತಿಯನ್ನು ಹೋಗಳಿದಂತಿದೆ.

  ReplyDelete
 4. ನಾನು ಕಾದಂಬರಿಯನ್ನು ಓದಿಲ್ಲ, ರಂಗಮಂಚದ ಜ್ಞಾನವೂ ಕಡಿಮೆ
  ನನಗೆ ನಾಟಕ ಇಷ್ಟ ಆಗಿತ್ತು ಆದರೆ ಈಗ ನಿಮ್ಮ ಅಭಿಪ್ರಾಯಗಳು ಮತ್ತೊಂದು
  ಮಗ್ಗುಲನ್ನು ತೋರಿಸುತ್ತಿವೆ. ಒಟ್ಟಿನಲ್ಲಿ ನಾಟಕದಿಂದ ಮತ್ತೆ ಜನ ಮದುಮಗಳನ್ನು
  ಓಡುವಂತಾದರೆ ಚೆನ್ನ. ಆಳವಾದ ವಿಶ್ಲೇಷಣೆ, ವಂದನೆಗಳು

  ReplyDelete
 5. dinesh kukkujadkaTuesday, 28 May, 2013


  ಮೂಲ ಕಾದಂಬರಿ ಓದಿರುವ ಪ್ರೇಕ್ಷಕನಿಗೆ ರಂಗಪ್ರಯೋಗಗಳು ಬಹುತೇಕ ಕಡೆಗಳಲ್ಲಿ ನಿರಾಶೆ ಮೂಡಿಸುವುದು ಸಾಮಾನ್ಯವೇ ಆಗಿದ್ದರೂ ರಂಗಾಯಣದ ಈ ಪ್ರೊಡಕ್ಷನ್ ಬಗ್ಗೆ ತುಂಬಾ ನಿರೀಕ್ಷೆಗಳಿದ್ದವು. ನನ್ನ ಮಟ್ಟಿಗೆ ಈ ಪ್ರಯೋಗದ ಬಹು ದೊಡ್ಡ ವೈಫಲ್ಯವೇ ಭಾಷೆ. ಇಡೀ ಕಾದಂಬರಿ ಕಟ್ಟಿಕೊಡುವ ಮಲೆನಾಡ ಆ ಸ್ವಾದಿಷ್ಟ ನುಡಿಗಟ್ಟುಗಳು ತನ್ನ ಮೂಲ ರೂಪ ಕಳೆದುಕೊಂಡು ಪಾತ್ರಧಾರಿಗಳು ತಾವು ತಾವೇ ಇಷ್ಟಪಟ್ಟ ಕನ್ನಡದ ಹಲವು ರಂಗಿನ ನುಡಿಗಟ್ಟುಗಳಾಗಿ ರಂಗದಲ್ಲಿ ಕಲಸುಮೇಲೋಗರೆಯಾಗಿರುವುದು ಈ ಕಥಾನಕಕ್ಕೆ ಹೊಂದಿಕೆಯಾಗದೇ ಹೋಯಿತು. ಆರ್ಥಿಕ ಆಡಂಬರಗಳ ಸೋಂಕಿಲ್ಲದ ಕಾರಣಕ್ಕಾಗಿಯೇ ಯಾವ ಜನಜೀವನ ತನ್ನ ಜೀವಸಹಜ ಸೊಬಗಿನಿಂದ ಜೀವಂತವಾಗಿರುತ್ತದೋ, ರಂಗದ ಮೇಲೆ ಅದರ ಪ್ರತಿರೂಪಿನ ಪ್ರದರ್ಶನಕ್ಕಾಗಿ ಲಕ್ಷ-ಲಕ್ಷ!!! ಗಮನಿಸಬೇಕಾದ ಅಂಶವೆಂದರೆ, ದುಡ್ಡಿನಿಂದಷ್ಟೇ ಅದನ್ನೆಲ್ಲಾ ಕಾಣಿಸಹೊರಟರೆ, ಕಾಣುವುದು ದುಡ್ಡು ಮಾತ್ರ! ಅಬ್ಬರದ ಮುಂದೆ- ಕಾದಂಬರಿಯುದ್ದಕ್ಕೂ ಮಾತನಾಡುವ ಮೌನ ಕಳೆದುಹೋದುದೆಲ್ಲಿ? ಕಾದಂಬರಿಯ ನಾಡಿ, ಅದರ ಧ್ವನಿಯಲ್ಲಿ, ಅದರ ಮೌನದಲ್ಲಿ, ಹಲವೆಡೆ ಮಲೆನಾಡ ಮೂಕ ಮರ್ಮರದಲ್ಲಿ....ಮರಮರಗಳ ಸಂದಿಗೊಂದಿಗಳಲ್ಲಿ ಮೂರ್ತವಾಗಿಯೋ-ಅಮೂರ್ತವಾಗಿಯೋ, ವಿವಿಧ ಸ್ಥರಗಳಲ್ಲಿರುವುದನ್ನೆಲ್ಲಾ ಹಿಡಿದಿಡುವುದು ಸುಲಭದ ಮಾತಂತೂ ಆಗಲಾರದು ನಿಜ. ಒಂದು ಮಹತ್ವಾಕಾಂಕ್ಷಿ ರಂಗಪ್ರಯೋಗದ ಪ್ರಾಯೋಗಿಕ ತಾಂತ್ರಿಕ ಸವಾಲುಗಳನ್ನೆಲ್ಲಾ ವಿಶಾಲ ಕಣ್ಣುಗಳೊಳಗಿನ ರಂಗಪ್ರೀತಿಯಿಂದ ಪರಿಗಣಿಸುತ್ತಲೇ, ಅದು ಪಡೆದಿರುವ ಯಶಸ್ಸಿನ ಸರ್ವ ಶ್ರೇಯಸ್ಸುಗಳನ್ನು ಅದರ ಹಿನ್ನೆಲೆಯಲ್ಲಿ ಬೆವರುಸುರಿಸಿದ ಸಾಂಸ್ಕೃತಿಕ ಕಾಳಜಿಯ ಜೀವಗಳಿಗೆಲ್ಲ ಸಲ್ಲಿಸುತ್ತಲೇ ಒಂದು ಮಾತು...... ಕಾಸಿಗಷ್ಟೇ ಬಗ್ಗಿ ಬರದ ಒಂದು ಧ್ಯಾನಸ್ಥ ಸ್ಥಿತಿಯ ನೋಟವಿದೆಯಲ್ಲಾ.....ಇಂಥ ಕಡೆಗಳಲ್ಲಿ ಅದರ ಇರುವಿಕೆಯನ್ನು ಅದರ ರೂವಾರಿಗಳು ಪರಿಚಯಿಸಿಕೊಳ್ಳಲೇಬೇಕಿದೆ.

  ReplyDelete
 6. ವಿಮರ್ಶೆ ಚೆನ್ನಾಗಿದೆ... ನೀವು ಮೆಚ್ಚಿಕೊಂಡ ಕೆಲವು ಕಡೆಗಳಲ್ಲೂ ನನ್ನ ಕೆಲವು ಭಿನಾಭಿಪ್ರಾಯಗಳಿವೆ.. ಒಂದು ಉದಾಹರಣೆಗೆ ನೀವು ತಿಳಿಸಿದ ವೆಂಕಟಪ್ಪ ನಾಯಕನ ಹಾಸ್ಯದಿಂದ ಅಪಾರ ಮೆಚ್ಚುಗೆ ಗಳಿದಿದರೂ, ಮೂಲ ಕೃತಿಯ ಚಿತ್ರಣ ಹಾಸ್ಯಾಸ್ಪದವಾಗಿಲ್ಲ... ಆದಲೇ ದಿನೇಶ್ ಅವರು ತಿಳಿಸಿರುವಂತೆ ಭಾಷೆಯ ವೈಫಲ್ಯ ಎದ್ದು ಕಾಣುತ್ತದೆ.. ಇಲ್ಲಿ ಹೆಚ್ಚಿನ ಪರಿಶ್ರಮ ಬೇಕಿತ್ತು... ಮಲೆನಾಡಿನ ಮೂಲ ಕಥೆಗೆ, ಮಂಡ್ಯ, ಉತ್ತರಕರ್ನಾಟಕದ ಭಾಷೆಗಳು ಒಗ್ಗುವುದಿಲ್ಲ..

  ReplyDelete
 7. ಅನ್ನಪೂರ್ಣSaturday, 01 June, 2013

  ನಿಮ್ಮ ವಿಮರ್ಶೆ ಸೂಕ್ತವಾಗಿದೆ.ಮತಾತಂತರದ ಬಗ್ಗೆ ನಿಮ್ಮ ಅನಿಸಿಕೆ ಸರಿ.ಕಾರಣವಿಲ್ಲದೆ ಯಾರೂ ಮತಾಂತರಗೋಳ್ಳುವುದಿಲ್ಲ.ಇಂತಹ ಬೆಳವಣಿಗೆಯನ್ನ,ವರ್ತಮಾನದ ಕನ್ನಡಿಯಲ್ಲಿ,ನಿರ್ಧೇಶಕರು ನೋಡಬೇಕಿತ್ತು.ನಾಟಕಕ್ಕೆ ಒದಗಿಸಿರುವ ಸಂಗೀತ ರಂಗ ಸಂಗೀತದಂತೆ ಇಲ್ಲ.ಮುಸ್ಲಿಮರನ್ನು,ಹಾಸ್ಯಸ್ಪದವಾಗಿ ತೋರಿಸಿರುವುದು ಖಂಢನೀಯ.

  ReplyDelete