• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಕಾಲಮಾನಕೆ ಹಿಡಿದ ಕನ್ನಡಿ...

40 ವರುಷ... ವ್ಯಕ್ತಿ, ಸಮಾಜ, ರಾಷ್ಟ್ರದ ಬೆಳವಣಿಗೆಯಲಿ ದೊಡ್ಡ ಕಾಲಮಾನ. ಭಾರತದಲಿ ಈ ಅವಧಿಯಲಿ ಏನೆಲ್ಲ ಬೆಳವಣಿಗೆಗಳಾಗಿವೆ...? ಉಪಗ್ರಹಗಳ ಮೂಲಕ ಬಾಹ್ಯಾಕಾಶ ಚಟುವಟಿಕೆ, ಸಾವಿರಾರು ಕಿಲೋಮೀಟರ್ ದೂರ ಚಿಮ್ಮುವ ಕ್ಷಿಪಣಿ, ಟೆಲಿವಿಷನ್, ಕಂಪ್ಯೂಟರ್, ಮೊಬೈಲ್... ಇದೆಲ್ಲ ತಂತ್ರಜ್ಞಾನದ ವಿಷಯ. ಸಾಮಾಜಿಕವಾಗಿ ಆದ ಬದಲಾವಣೆ ಏನು..? ವ್ಯಕ್ತಿ, ಸಮೂಹ, ಸಮಾಜ ಯೋಚಿಸುವ ಮನಸ್ಥಿತಿಯಲಿ ಆದ ಬದಲಾವಣೆ ಏನು..?
ಈ ಪ್ರಶ್ನೆಗಳಿಗೆ ದೇವನೂರು ಮಹಾದೇವ ಅವರು 40 ವರುಷದ ಅವಧಿಯಲಿ ಬರೆದ ಲೇಖನಗಳ ಸಂಗ್ರಹ "ಎದೆಗೆ ಬಿದ್ದ ಅಕ್ಷರ" ವಸ್ತುನಿಷ್ಠ ಉತ್ತರ ಹೇಳುತ್ತದೆ. ವೀಕ್ಷಿಸುವ ಕಣ್ಣು, ಮನಸಿನ ಪ್ರಾಮಾಣಿಕತೆಯಿಂದಾಗಿ ಇಲ್ಲಿನ ಬರಹಗಳಿಗೆ ಸಮಾಜಶಾಸ್ತ್ರೀಯ ದೃಷ್ಟಿಕೋನವೂ ಪ್ರಾಪ್ತಿಯಾಗಿದೆ.

ಏಳು ವಿಭಾಗಗಳಿವೆ. ಮನವ ಕಾಡುತಿದೆ, ಒಳನೋಟ, ಮತಾಂಧರ ಮೆದುಳೊಳಗೆ, ಹೀಗೆ ಮುಂದುವರಿದರೆ, ಮುತ್ತು ಮುಳುಗ ಮತ್ತು ಇತರ, ಮುಖಾಮುಖಿ, ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ. ಅನೇಕ ಘಟನೆ, ವಿದ್ಯಮಾನಗಳ ಬಗ್ಗೆ ಇಲ್ಲಿ ಬರೆಯಲಾಗಿದೆ.
'ಕೇವಲ ಮನುಷ್ಯನಾಗುವುದೆಂದರೆ' ಲೇಖನದಲಿ 'ಅಲ್ಲಿ ಕೃಷ್ಣ ದೇವಾಲಯವಿದೆ. ಹೊರಗೆ ಕನಕದಾಸ ಹಾಡುವ ಭಂಗಿಯಲಿ ನಿಂತಿದ್ದಾನೆ. ನಡುವೆ ಒಂದು ಕಿಂಡಿ ಇದೆ. ಈ ದೃಶ್ಯ ಯಾರ್ಯಾರಿಗೆ ಹೇಗೆ ಕಾಣಿಸಬಹುದು ಎಂಬ ಕುತೂಹಲದಿಂದ ಲೇಖಕರು ನೀಡಿಕೊಳ್ಳುತ್ತಾ ಹೋಗುವ ಉತ್ತರಗಳು ಸಮುದಾಯಗಳ ಯೋಚನಾ ಲಹರಿಯಂತೆ ಕಾಣುತ್ತವೆ. ಆದರೆ ಕನಕ ಭಿನ್ನವಾಗಿಯೇ ಯೋಚಿಸುತ್ತಾರೆ. ಈ ಮೂಲಕ 15ನೇ ಶತಮಾನದ ಕನಕ ಇಂದಿನ ಅತ್ಯಾಧುನಿಕ ಕಾಲಘಟ್ಟದ ವ್ಯಕ್ತಿಗಳ ಸೀಮಿತ ದೃಷ್ಟಿಯನ್ನು ಮೀರಿ ಯೋಚಿಸುತ್ತಿದ್ದರು ಎಂಬುವುದನ್ನು ಹೆಚ್ಚು ವಿವರಗಳಿಲ್ಲದೆ ಪರಿಣಾಮಕಾರಿಯಾಗಿ ಹೇಳುತ್ತಾರೆ.
'ಕೊಳಕು ಎಲ್ಲಿದೆ' ಲೇಖನದಲ್ಲಿ ಪೌರಕಾರ್ಮಿಕರ ಕಷ್ಟ ಹೇಳುತ್ತಾ ಸಾರ್ವಜನಿಕ ಸ್ವಚ್ಛತೆ ವಿಷಯ ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು ಎಂಬ ಉಪಯುಕ್ತ ಸಲಹೆ ಮುಂದಿಡುತ್ತಾರೆ.
ಮೈಸೂರಿಗೆ ಆಫ್ರಿಕಾ ಲೇಖಕ ಚಿನುವಾ ಅಚಿಬೆ ಬಂದ ಸಂದರ್ಭದಲ್ಲಿ ಹಳ್ಳಿಯೊಂದರ ಪರಿಸ್ಥಿತಿ ನೋಡಿ ತಲ್ಲಣಿಸಿ ಅವರು ಮಾತನಾಡುತ್ತಾರೆ. ಈ ಸಂದರ್ಭದಲ್ಲಿ ಲೇಖಕರು ಹೇಳುವ 'ಇಲ್ಲಿನ ಜಾತಿಯ ಅಸ್ಪೃಶ್ಯತೆ ಭೀಕರ. ಆದರೆ ನಮಗೆಲ್ಲ ಸಾಮಾನ್ಯ, ರೂಢಿಗತ. ಅಂದರೆ ತಮಟೆ ಬಡಿಯುವ ರೂಢಿಯನ್ನು ದಲಿತರು ನಿರಾಕರಿಸಿದರೆ ಅವರ ಚರ್ಮದಿಂದಲೆ ತಮಟೆ ಮಾಡಿ ಬಡಿಯುವಷ್ಟು ಕ್ರೂರತೆ ಸವರ್ಣೀಯ ಮನಸ್ಸಲಿದೆ' ಭಾರತದ ಅನೇಕ ಹಳ್ಳಿಗಳ ವಾಸ್ತವವನ್ನು ಇದು ಕಟ್ಟಿಕೊಡುತ್ತದೆ.
'ಯಾರಿಗೆ ಯಾವ ಚಿಕಿತ್ಸೆ' ಯಲ್ಲಿ ಅಯೋಧ್ಯೆ ಘಟನೆ ಉಲ್ಲೇಖಿಸುತ್ತಾ ಮತಾಂಧತೆ ಕೇಳುವ ಬಲಿಗಳಿಗೆ ಕೊನೆಯೇ ಇಲ್ಲ ಎಂಬುದನ್ನು ವಿವರವಾಗಿ ಹೇಳುತ್ತಾರೆ.
ಕಥೆ, ಕಾದಂಬರಿಗೆ ಅಗತ್ಯವಾದ ವಸ್ತುಗಳು ಅನೇಕರಿಗೆ ಅನೇಕ ಸಂದರ್ಭಗಳಲ್ಲಿ ದೊರೆಯುತ್ತವೆ. 'ಕುಸುಮಬಾಲೆ' ಗೆ ವಸ್ತು ದೊರೆತ ಸನ್ನಿವೇಶ ಮೈ ನಡುಗಿಸುವಂತಿದೆ. ದಲಿತ ಸಂಘಟನೆ ಸ್ನೇಹಿತನ ಕೊಲೆಯಾಗಿರುತ್ತದೆ. ಲೇಖಕರು ಆ ಸ್ಥಳಕ್ಕೆ ಹೋಗುತ್ತಾರೆ. ದುರ್ಘಟನೆಯನ್ನು ಕಂಡ ವೃದ್ಧೆಯೊಬ್ಬರು 'ನೀವು ಎರಡು ದಿನ ಮುಂಚೆ ಬಂದಿದ್ದರೆ ರಕ್ತದ ಕಲೆಗಳನ್ನು ನೋಡಬಹುದಿತ್ತು' ಎನ್ನುತ್ತಾರೆ. ಆಗ ಲೇಖಕರಿಗೆ ಅನಿಸಿದ್ದು ' ಗೋಡೆಗೆ ಸುಣ್ಣ ಬಳಿದ ಮಾತ್ರಕ್ಕೆ ರಕ್ತದ ಕಲೆಗಳು ಉಳಿಯುವುದಿಲ್ಲವೆ ?'
'ಅಸ್ಪೃಶ್ಯತೆ ನಿನ್ನ ಮೂಲ ಎಲ್ಲಿ' ಎಂಬ ಲೇಖನದಲ್ಲಿ ದಲಿತ ನೌಕರನಿಗೆ ದಲಿತರಿಲ್ಲದ ಗ್ರಾಮವೊಂದರಲ್ಲಿ ಇರಲು ಮನೆ ಸಿಗದೆ ಪರದಾಡುವ ಸನ್ನಿವೇಶ ಹೇಳುತ್ತಾರೆ. ಇದನ್ನು ಹೇಳುತ್ತಲೆ  ಅಸ್ಪೃಶ್ಯತೆ ಆಚರಿಸಲು ಮನಸಿಲ್ಲದವರು ಹೇಗೆ ಅಂಥ ಕ್ರೂರ ಮನಸ್ಥಿತಿಗೆ ಸಿಲುಕುವ ವಾತಾವರಣ ನಿರ್ಮಿಸಲಾಗುತ್ತದೆ ಎಂಬುದನ್ನೂ ವಿವರಿಸುತ್ತಾರೆ. ಇದು ದಶಕಗಳ ಹಿಂದಿನ ಮಾತಾದರೂ ಬೆಂಗಳೂರೆಂಬ ಮಹಾನಗರಿಯಲ್ಲಿ ದಲಿತರಿಗೆ ಮನೆ ಸಿಗದ ಸ್ಥಿತಿ ನೆನಸಿಕೊಂಡರೆ ಅರೇ 40 ವರುಷದ ಕಾಲದಲ್ಲಿ ಭಾರತೀಯರ ಮನಸ್ಥಿತಿ ಬದಲಾಗಿಯೇ ಇಲ್ಲ ಎಂಬುದು ಮತ್ತೊಮ್ಮೆ ಅರಿವಾಗಿ ಮನಸು ಪಿಚ್ಚೆನ್ನಿಸುತ್ತದೆ.
ಪ್ಯೂಢಲ್ ಮನಸ್ಥಿತಿಯ ಮನೆತನಗಳಿಂದ ಬಂದು ಸಂವೇದನಾಶೀಲ ಲೇಖಕರಾದವರಲ್ಲಿಯೂ ಒಮ್ಮೊಮ್ಮೆ ಅಸಂವೇದನೆ ಇಣುಕುವುದನ್ನು 'ಆಲನಹಳ್ಳಿಗೆ ಅರ್ಥವಾಗುವುದು ಮತ್ತು ಅರ್ಥವಾಗದಿರುವುದು' ಲೇಖನದಲ್ಲಿ ಎರಡು ಘಟನೆಗಳನ್ನಿಟ್ಟುಕೊಂಡು ಹೇಳುತ್ತಾರೆ.
ದಲಿತ ಸಂಘರ್ಷ ಸಮಿತಿ ರಚನೆಯಾಗುವುದಕ್ಕೆ ಕಾರಣರಾದ ವ್ಯಕ್ತಿಗಳಲ್ಲಿ ಒಬ್ಬರಾದರೂ ಆ ಸಂಘಟನೆಯ ಇಂದಿನ ಸ್ಥಿತಿಗತಿಯನ್ನು 'ಅರಳುಮರುಳು ಕಣ್ಣಲ್ಲಿ- ದಸಂಸ' ಲೇಖನದಲ್ಲಿ ನೇರವಾಗಿಯೇ ಹೇಳುತ್ತಾರೆ.
ಮಂಡಲ್ ವರದಿ, ರಾಷ್ಟ್ರ-ರಾಜ್ಯದ ಸಮಿಶ್ರ ರಾಜಕಾರಣ, ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ದಕ್ಕಿದ ಸ್ಥಿತಿಗತಿ, ಮುಂದೆ ಅದರಿಂದಾಗುವ ದೃಷ್ಟಿಕೋನಗಳನ್ನು ಕರಾರುವಾಕ್ಕಾಗಿಯೇ ಹೇಳಿದ್ದಾರೆ. ಸರ್ಕಾರಿ ಶಾಲೆ ಮುಚ್ಚುವಿಕೆ, ಖಾಸಗೀವಲಯದಲ್ಲಿ ಮೀಸಲಾತಿ, ಲಂಕೇಶ್ ಹೀಗೆ ಅನೇಕ ಮಜಲುಗಳಲ್ಲಿ ದೇವನೂರ ಅವರ ಚಿಂತನೆ ಇಲ್ಲಿ ಪ್ರಕಟವಾಗಿದೆ.
ಲೇಖನಗಳ ಕಾಲಾನುಕ್ರಮಣಿಕೆ, ಆಯಾ ಲೇಖನ ಬರೆದ/ ಭಾಷಣ ಮಾಡಿದ ದಿನ ಅಥವಾ ಕನಿಷ್ಠ ವರ್ಷವನ್ನಾದರೂ ಇಲ್ಲಿ ನಮೂದಿಸಬೇಕಿತ್ತು. ಒಂದೆ ವಸ್ತು ದೃಷ್ಟಿಯ ಕೆಲವು ಲೇಖನ ಮತ್ತೆಮತ್ತೆ ಬಂದಿವೆ.
'ಎದೆಗೆ ಬಿದ್ದ ಅಕ್ಷರ' ಕೃತಿಯನ್ನು ಪದವಿಪೂರ್ವ ಹಂತದ ಎಲ್ಲ  ವಿಭಾಗ(ವಿಜ್ಞಾನ, ಮಾನವಿಕ, ವಾಣಿಜ್ಯ) ಗಳಿಗೂ ಪಠ್ಯ ಮಾಡಬೇಕಾದ ಅವಶ್ಯಕತೆ ತುರ್ತಿನದಾಗಿದೆ. ಮುಂದಿನ ಅಕಾಡೆಮಿಕ್ ವರ್ಷದಿಂದಲೇ ಇದು ಜಾರಿಗೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರುವ ಅವಶ್ಯಕತೆ ಹೆಚ್ಚಾಗಿದೆ.
ಆಗ 'ಮನುಷ್ಯ ಸಂಬಂಧ ಅನ್ನೋದು ದೊಡ್ಡದು ಕನ' ಅನ್ನುವವರ ಸಂಖ್ಯೆ ಖಂಡಿತ ಹೆಚ್ಚಾಗುತ್ತದೆ ಎಂಬುದು ನನ್ನ ಆಶಯ

1 comment:

 1. Avinash KannammanavarTuesday, 02 April, 2013


  "ಆಹಾ" ಅದ್ಭುತ ವಿಮರ್ಶೆ. 40 ವರ್ಷದ ಲೇಖನ ಸಂಗ್ರಹ ಅದ್ಭುತವಾಗಿದೆ, ಕೆಲವೊಂದು ಲೇಖನಗಳ ಪ್ರಸ್ತುತೆ ಈಗ ಇಲ್ಲ ಅನ್ನಿಸುತ್ತೆ, ಮತ್ತು ಕೆಲವು ಲೇಖನಗಳು "ಅಯ್ಯೋ, ಇನ್ನು ಸಮಾಜದಲ್ಲಿ ಯಾವುದೇ ಬದಲಾವಣೆ ಆಗಿಲ್ಲವೇ?? " ಅನ್ನುವ ಭಾವವನ್ನು ಕೊಡುತ್ತವೆ.

  ReplyDelete