• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಬದುಕಿನ ಸಿಕ್ಕುಸಿಕ್ಕು; ಕ್ರೌರ್ಯದ ಅನಾವರಣ

ಅಂದುಕೊಂಡಷ್ಟು ಬದುಕು ಸರಳ ಅಲ್ಲ. ಮನುಷ್ಯರ ಮುಖವಾಡಗಳು ಅಸಂಖ್ಯ... ತಮ್ಮ ಪಾತ್ರಗಳನ್ನು ನಿರ್ವಹಿಸುತ್ತಲೆ ಅವುಗಳ ಹಿತಕ್ಕೆ ಧಕ್ಕೆ ಬಾರದ ಹಾಗೆ ನೋಡಿಕೊಳ್ಳಲು ಕ್ರೂರವಾಗುವ ಪರಿ ತಲ್ಲಣಗಳನ್ನು ಮೂಡಿಸುತ್ತದೆ. ಇವುಗಳ ಅನಾವರಣ ಮಾಡುತ್ತಲೇ ಕುಟುಂಬಗಳ ಪಲ್ಲಟಗಳನ್ನು ಘಾಚರ್ ಘೋಚರ್ ಕೃತಿ ಅನಾವರಣಗೊಳಿಸುತ್ತದೆ. ಕಥೆ ಹೇಳಿದ ಪರಿಯೂ ಅನನ್ಯ.
ಘಾಚರ್ ಘೋಚರ್ ಕೃತಿಯಲ್ಲಿ ಈ ಹೆಸರಿನದೆ ಮುಖ್ಯ ಕಥೆ. ನಂತರ ನಿರ್ವಾಣ, ಕೋಳಿ ಕೇಳಿ ಮಸಾಲೆ, ರಿಸ್ಕ್ ತಗೊಂಡು, ಸುಧೀರನ ತಾಯಿ ಮತ್ತು ವಿಚಿತ್ರ ಕಥೆ ಇವೆ.
ಘಾಚರ್ ಘೋಚರ್ ಸಹಜವಾಗಿ ಬೆಳೆಯುತ್ತಾ ಅಲ್ಲಿನ ಪಾತ್ರಗಳ ವ್ಯಕ್ತಿತ್ವಗಳು ಓದುಗರಿಗೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ಇಲ್ಲಿರುವ ಪಾತ್ರಗಳು ಕಾಲ್ಪನಿಕ ಎನಿಸುವುದೆ ಇಲ್ಲ. ಸಮಾನಾಂತರ ಕಾಲಘಟ್ಟದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನೆ ಬಳಸಿಕೊಂಡಿರುವುದರಿಂದ ಈ ಪಾತ್ರಗಳು ನಮಗೆ ಚಿರಪರಿತ ಅನಿಸುತ್ತವೆ. ಕೆಲವೊಮ್ಮೆ ನಾವೇ ಆ ಪಾತ್ರಗಳು ಆಗಿದ್ದಿರಲೂ ಸಾಕು.
ಈ ಮಾತನ್ನು ಏಕೆ ಹೇಳಿದೆನೆಂದರೆ ಇಲ್ಲಿಯ ಕಥಾನಾಯಕನ ಪಾತ್ರಕ್ಕೆ ಹೆಸರೆ ಇಲ್ಲ. ನಾನು, ನನ್ನ ಎಂಬುದರ ಮೂಲಕ ಕಥೆಯನ್ನ ಹೇಳತೊಡಗುವ ಪಾತ್ರ ತಾನು ಕಂಡ ಎಲ್ಲದರ ಬಗ್ಗೆಗೂ, ಎಲ್ಲರ ಬಗ್ಗೆಗೂ ದಕ್ಕಿದಷ್ಟನ್ನು ಹೇಳುತ್ತಾ ಹೋಗುತ್ತದೆ. ದಕ್ಕಿದಷ್ಟನ್ನು ಎಂಬದನ್ನು ಮತ್ತೆ ಹೇಳಬೇಕಾಗುತ್ತದೆ. ನಮ್ಮೆದುರಿಗೆ ಕುಳಿತ ನಮಗೆ ಆ ಕ್ಷಣಕ್ಕೆ ಪ್ರಾಮಾಣಿಕ ಅನಿಸಿದ ವ್ಯಕ್ತಿಯೊಬ್ಬ ತನ್ನ ಅನುಭವ ಹೇಳಿದ ಹಾಗಿದೆ.
ವಿನ್ಸೆಂಟ್... ಹಾ ಈ ಹೆಸರಿನಿಂದಲೇ ಕಥೆ ಆರಂಭವಾಗುತ್ತದೆ. ಅದು ಕಾಫಿಹೌಸಿನಲ್ಲಿ.... ಈತ ಒಬ್ಬ ವೇಟರ್... ಅಷ್ಟೆ ಅಲ್ಲ. ಧೃತರಾಷ್ಟ್ರನ ಸಂಜಯ ಕೂಡ. ಇಲ್ಲಿ 'ನಾನು' ಪಾತ್ರ ಕೆಲವೊಮ್ಮೆ ಧೃತರಾಷ್ಟ್ರ. ಅವನ ಮನಸಿನ ತುಮುಲಗಳನ್ನು ವಿನ್ಸೆಂಟ್ ಹೇಳುತ್ತಿರುತ್ತಾನೆ.
ಕಥೆಯುದ್ದಕ್ಕೂ ಈ ಪಾತ್ರ ಇದೆ. ಕಥೆ ಅಂತ್ಯ ( ಅದು ಆರಂಭವೂ ಆಗಿದಿರಬಹುದು)ದಲ್ಲಿ ವಿನ್ಸೆಂಟ್ ಹೇಳುವ ಸರ್, ಕೈತೊಳೆದುಕೊಳ್ಳಿ.. ನಿಮ್ಮ ಕೈಯಲ್ಲಿ ರಕ್ತವಿದೆ' ಈ ಮಾತು ಅನೇಕ ಅರ್ಥಗಳನ್ನು ಧ್ವನಿಸುತ್ತಲೆ ನಮ್ಮೊಳಗೆ ಹುಟ್ಟುಮಾಡುವ ಆತಂಕ ಅಪಾರ. ಇಲ್ಲಿ 'ನಾನು' ಕೊಲೆಗಾರನಲ್ಲದ ಕೊಲೆಗಾರ.
'ನಾನು' ವಿನ ಕುಟುಂಬದ ಮುಖ್ಯಸ್ಥ ಈತನ ಚಿಕ್ಕಪ್ಪ ವೆಂಕಟಾಚಲ.  ಮಾಲತಿ ತಂಗಿ. ಬಾಯಿಜೋರಿನ ಹೆಣ್ಣು. ಅಪ್ಪಅಮ್ಮ ಇವರ ಹೆಸರೆ ಕಥೆಯುದ್ದಕ್ಕೂ ಅಪ್ಪಅಮ್ಮ, ತನ್ನ ಪಾತ್ರದ ಪ್ರಾಮುಖ್ಯತೆ ಅರಿತೂ ಅಸಹಾಯಕ ಅಪ್ಪ. ತನ್ನ ಪಾತ್ರದ ಪ್ರಾಮುಖ್ಯತೆ ಉಳಿಸಿಕೊಳ್ಳಲು ಹೋರಾಡುತ್ತಲೆ ಇರುವ ಅಮ್ಮ.
ನಂತರ 'ನಾನು' ಪತ್ನಿ ಅನಿತಾ. ಸೂಕ್ಷ್ಮ ಮನಸಿನ ಬಂಡಾಯ ಮನಸ್ಥಿತಿ ಹೆಣ್ಣು. ಆದರೆ ವಾಸ್ತವ ಮತ್ತು ಆದರ್ಶಕ್ಕೂ ಇರುವ ವ್ಯತ್ಯಾಸ ತಿಳಿದು ಅದನ್ನು ಅರಗಿಸಿಕೊಳ್ಳಲಾಗದೆ ದುರಂತದೆಡೆಗೆ ಸಾಗುವ ಹೆಣ್ಣು.
ಇಲ್ಲಿ ಬಡತನ, ಶ್ರೀಮಂತಿಕೆ ಎರಡೂ ಕೂಡ ಪಾತ್ರಗಳು. ಇವು ಉಳಿದ ಎಲ್ಲ ಪಾತ್ರಗಳನ್ನು ಕುಣಿಸುತ್ತಾ ಹೋಗುತ್ತವೆ. ಇವುಗಳ ತಾಳಕ್ಕೆ ಕುಣಿಯದ ಮನಸ್ಥಿತಿ ಹೊಂದಿದ ಅನಿತಾ ಬೇರೆ ಪಾತ್ರಗಳು ಅಸ್ತಿತ್ವ ಉಳಿಸಿಕೊಳ್ಳಲು ನಡೆಸುವ ಹೋರಾಟದಲ್ಲಿ ಇಲ್ಲವಾಗಿಬಿಡುತ್ತಾಳೆ.
ಇರುವೆ, ಅದರ ಗೂಡು ಕೂಡ ಇಲ್ಲಿ ಸಂಕೇತ... ಅವುಗಳು ಮನೆ ವಾತಾವರಣಕ್ಕೆ ಕೊಡುವ ಕಿರಿಕಿರಿ ಸಹಿಸಲಾರದೆ ಅವುಗಳ ಮೂಲ ಮತ್ತೆ ಹಚ್ಚಿ ನಾಶ ಮಾಡುತ್ತೇನೆ ಎನ್ನುವ ಅಮ್ಮ ತನ್ನ ಅಸ್ತಿತ್ವಕ್ಕಾಗಿ ಏನೂ ಮಾಡಬಲ್ಲೆ ಎಂಬುದನ್ನು ತೋರಿಸುತ್ತಾಳೆ.  ಕಡಿಮೆ ಆದಾಯದ ಸೇಲ್ಸ್ ಮನ್ ಹೆಂಡತಿಯಾಗಿ ಕುಟುಂಬ ನಿರ್ವಹಣೆ ಖರ್ಚನ್ನು ಸರಿದೂಗಿಸಿಕೊಂಡು ಹೋಗುವ ಈಕೆಗೆ ಅಲ್ಲಿನ ಆರ್ಥಿಕ ನೆಮ್ಮದಿ ಮತ್ತು ಅದರ ಮೂಲಗಳ ಸೌಖ್ಯ ಕೂಡ ಮುಖ್ಯವಾಗುತ್ತದೆ. ನಂತರ ಮೂಲಗಳ ಬದಲು ಮೂಲದ ಸೌಖ್ಯವಷ್ಟೆ ಮುಖ್ಯವಾಗುತ್ತದೆ.
ವೆಂಕಟಾಚಲನಿಂದ ಶ್ರೀಮಂತಿಕೆ ಬಂದ ನಂತರ ಆತನೆ ಇವರ ಪಾಲಿಗೆ 'ಗೋವಿಂದ' ಆತನೆ ಇವರ ಬದುಕಿನ ಸೂತ್ರಧಾರಿ. ಶ್ರೀಮಂತಿಕೆ ಬಂದ ನಂತರ ಮೂಲ ಉಢಾಪೆ ಗುಣ ಮುಂದುವರಿಸುವ ಮಾಲತಿ ಸ್ವನಾಶಕ್ಕೆ ಉದಾಹರಣೆಯಾಗಿಬಿಡುತ್ತಾಳೆ.
ಗಂಡನನ್ನು ಬಿಟ್ಟು ತವರು ಸೇರುವ ಈಕೆಗೂ ಅನಿತಾಳಿಗೂ ಸಮರ ಶುರುವಾಗುತ್ತದೆ. ಅಮ್ಮ ಪಾತ್ರಧಾರಿಯೂ ಇಲ್ಲಿ ಪಾಲುದಾರಳಾಗುತ್ತಾಳೆ.
ಮಾತಿನಿಂದಲೆ ಒಬ್ಬರನ್ನು ಒಬ್ಬರು ಕೊಲ್ಲಲ್ಲು ಯತ್ನಿಸುತ್ತಲೆ ಕೊಲೆಗಾರ ಮನಸ್ಥಿತಿ ರೂಢಿಸಿಕೊಳ್ಳುತ್ತಲೆ ಹೋಗುತ್ತಾರೆ. ತನಗೆ ಬರಬೇಕಿದ್ದ ವ್ಯವಹಾರದ ಬಾಕಿಗಳನ್ನು ವಸೂಲಿ ಮಾಡಿಕೊಳ್ಳಲು ರಿಕವರಿ ಏಜೆಂಟ್ ಎಂಬ ಹೆಸರು ಹೊತ್ತ ಗೂಂಡಾಗಳನ್ನು ನೇಮಿಸಿಕೊಂಡಿರುವ ವೆಂಕಟಾಚಲ ತಾನೂ ಅದೇ ಮನಸ್ಥಿತಿ ರೂಢಿಸಿಕೊಂಡು ಮಾಲತಿ ಬದುಕಿನ ಸರ್ವನಾಶಕ್ಕೆ ಸಹಕಾರಿಯಾಗುವುದು ದಿಗ್ಮೂಢತೆ ಮೂಡಿಸುತ್ತದೆ.
ಇಲ್ಲಿ 'ನಾನು' ಕಥೆಯುದ್ದಕ್ಕೂ ಅಸಹಾಯಕ ಪಾತ್ರ. ಕಥೆಗಾರ ವಿವೇಕ ಶಾನಭಾಗ ಇಲ್ಲಿನ ಯಾವ ಪಾತ್ರಗಳನ್ನು ಕಡೆಗಾಣಿಸಿಲ್ಲ. ನಿರುದ್ವಿಗ್ನವಾಗಿ ಇವರು ಸಮಾನಾಂತರ ಬದುಕಿನ ಕ್ರೌರ್ಯ ಮತ್ತು ಅದರ ಸಿಕ್ಕುಗಳ ಬಗ್ಗೆ ಹೇಳಿಸಿದ್ದಾರೆ. ಅಂದ ಹಾಗೆ ಘಾಚರ್ ಘೋಚರ್ ಅಂದ್ರೆ ಏನು ಅಂತ ಹೇಳಲಿಲ್ಲ ಎಂದು ನೀವು ಅಂದುಕೊಂಡಿರಬಹುದಲ್ವೆ... ಅದಕ್ಕೆ ಉತ್ತರ ನನ್ನ ಈ ಬರಹದಲ್ಲಿಯೇ ಇದೆ. ಉತ್ತಮ ಕಥೆ ನೀವೂ ಓದಿ....

5 comments:

 1. ಪುಸ್ತಕ ಓದಬೇಕಾಗಿದೆ,  ಲೈಬ್ರರಿಗೆ ಹೋಗಿ ಹುಡುಕಬೇಕಾಗಿದೆ,   ಬಂದಿರಬಹುದು.

  ReplyDelete
 2. ಬಹಳ ದಿನದ ನಂತರ ನಿಮ್ಮ ಬ್ಲಾಗ್ ಓದಿದ್ದು
  ವಿವೇಕ್ ಶಾನಭಾಗರನ್ನು ಓದಬೇಕಿದೆ

  ReplyDelete
 3. ಅನುಸೂಯFriday, 29 March, 2013

  ವಿಮರ್ಶೆ ಅರ್ಥಪೂರ್ಣವಾಗಿದೆ ಹಾಗೂ ವಸ್ತುನಿಷ್ಟವಾಗಿದೆ.ಘಾಚರ್ ಘೋಚಾರ್ ಕಥೆ ಎಷ್ಟೊಂದು,ನಮ್ಮ ದಿನನಿತ್ಯದ ವಿದ್ಯಮಾನಗಳಿಗೆ ಹತ್ತಿರವಾಗಿದೆ ಎಂದರೆ,ನಮ್ಮ ಹೊಲಿಕೆಯನ್ನು ಕೆಲವೊಂದು ಪಾತ್ರಗಳೊಂದಿಗೆ ಕಂಡುಕೊಳ್ಳುತ್ತೇವೆ.ಎಲ್ಲರೂ ಓದಬೇಕಾದ ಪುಸ್ತಕ.ಉತ್ತಮ ವಿಮರ್ಶೆಗಾಗಿ ಧನ್ಯವಾದಗಳು.

  ReplyDelete
 4. ನಾನು ಈ ಪುಸ್ತಕ ಓದಿದ್ದೇನೆ. ನಿಮ್ಮ ವಿಮರ್ಶೆ ಚೆನ್ನಾಗಿದೆ. ಇದೇ ರೀತಿ ಮುಂದೆಯೂ ನಿಮ್ಮಿಂದ ಉತ್ತಮ ಪುಸ್ತಕಗಳ ವಿಮರ್ಶೆ, ಪರಿಚಯ ಬರುತ್ತಿರಲಿ...

  ReplyDelete
 5. ಬಹಳ ದಿನಗಳ ನಂತರ ಬರೆದ ಉತ್ತಮ ವಿಮರ್ಶೆ, ಎಷ್ಟೋ ಸಾರಿ ನಾವೇ ಆ ಕಥೆಗಳಲ್ಲಿ ಬಂದಿದ್ದೀವೋ ಏನೋ ಅನಿಸ್ತ ಇತ್ತು ..

  ReplyDelete