• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಸಂವೇದನಾಶೀಲ ಮನಸಿನ ‘ಮೀಡಿಯಾ ಡೈರಿ ‘

ಲೈಮ್ ಲೈಟಿನಲ್ಲಿ ಇರುವ ವ್ಯಕ್ತಿಗಳ ಒಡನಾಟದಲ್ಲಿರುವ ಪತ್ರಕರ್ತರಿಗೆ ನೋಡುವ ‘ದೃಷ್ಟಿ’ ಮಬ್ಬಾಗುವ ಸಾಧ್ಯತೆ ಇರುತ್ತದೆ. ಈ  ಅಪಾಯ ಮೀರಿದಾಗ ಮಾತ್ರ ಹೊಳಹುಗಳುಳ್ಳ ‘ಅಂತರದೃಷ್ಟಿ’ ವರದಿ ಸಮುದಾಯಕ್ಕೆ ದಕ್ಕುತ್ತದೆ. ಶ್ರೀನಿವಾಸ ಗೌಡ ಅವರ ‘ಮೀಡಿಯಾ ಡೈರಿ’ ಕೃತಿ ಇಂಥ ಸಂವೇದನಾಶೀಲ ಬರಹಗಳನ್ನು ಒಳಗೊಂಡಿದೆ. ಹಿರಿಯ ಪತ್ರಕರ್ತ ಜಿ.ಎನ್. ಮೋಹನ್ ಅವರ ಸಂಪಾದಕತ್ವದ ಮೀಡಿಯಾ ಮಾಲಿಕೆಯಡಿ ಬಂದಿರುವ ಎರಡನೇ ಪುಸ್ತಕವಿದು. ಅಂಕಿತ ಪ್ರಕಾಶನ ಇದನ್ನು ಹೊರ ತಂದಿದೆ.

2008 ರಿಂದ ‘ಖಾಸಗಿ ಡೈರಿ’ ಹೆಸರಿನ ಬ್ಲಾಗಿನಲ್ಲಿ ಶ್ರೀನಿವಾಸ ಗೌಡ ಅವರು ಪತ್ರಿಕೋದ್ಯಮದ ಪರಿಧಿಯಲ್ಲಿರುವ ಲೇಖನಗಳನ್ನು ಬರಿಯುತ್ತಿದ್ದಾರೆ. ಈ ಬ್ಲಾಗಿನಲ್ಲಿ ಪ್ರಕಟವಾದ ಮೊದಲ ಲೇಖನದಿಂದ 2011 ರ ಮೇ ತನಕ ಪ್ರಕಟವಾದ ಬರಹಗಳೆಲ್ಲವನ್ನೂ ನಾನು ಓದಿದ್ದೇನೆ. ಮೇ ನಂತರ ಯಾಕೋ ಹೊಸ ಲೇಖನಗಳು ಪ್ರಕಟವಾಗುತ್ತಿಲ್ಲ. ಈ ಬ್ಲಾಗಿನ ಖಾಯಂ ಓದುಗನಾಗಲು ಕಾರಣಗಳೆಂದರೆ ವಿಷಯಗಳನ್ನು ಪೂರ್ವಾಗ್ರಹಪೀಡಿತವಿಲ್ಲದೆ ನಿರೂಪಿಸುವುದು. ಜೊತೆಗೆ ಪ್ರಶ್ನೆಗಳನ್ನು ಎತ್ತುವ ಶೈಲಿ. ಇಂಥ ಲೇಖನಗಳೆ ‘ಮೀಡಿಯಾ ಡೈರಿ’ ಹೆಸರಿನಲ್ಲಿ ಸಂಕಲನವಾಗಿವೆ. ಮುಖ್ಯವಾಗಿ ಇದು ನಾಳೆ  ಪುಸ್ತಕವಾಗಿ ಬರಬೇಕೆಂಬ ಯಾವುದೇ ಐಡಿಯಾ ಇಟ್ಟುಕೊಂಡು ಬರೆದ ಲೇಖನಗಳ ಸಂಗ್ರಹವಲ್ಲ !

ಕೆಲಸ ಮಾಡಿದ ಕಡೆ ಮನಸಿಗೆ ಬಲವಾಗಿ ತಟ್ಟಿದ ವಿಷಯಗಳೇ ಇಲ್ಲಿ ಮೂಡಿವೆ. ‘ನಾನು ದಿಲ್ಲಿಗೆ ಬಂದೆ’ ಅಧ್ಯಾಯದಲ್ಲಿ ಅಲ್ಲಿನ ಪ್ರಮುಖ ಪರಂಪಾರಿಕ ಕಟ್ಟಡಗಳನ್ನು ಕಟ್ಟಿದವರಾರು ಎಂಬ ಮಾಹಿತಿ ಓದಗಿಸುತ್ತಾರೆ. ಬೇರೆ ಬೇರೆ ಸಂಗತಿಗಳಿಗೆ ಸಂಬಂಧಿಸಿದಂತೆ  ಇಂಥ ಮಾಹಿತಿ ನೀಡುವಿಕೆ ಮುಂದುವರಿಯುತ್ತಲೇ ಸಾಗುತ್ತದೆ. ಆದರಿದು ಕೇವಲ ‘ಟಚ್ ಅಂಡ್ ಗೋ’ ಮಾದರಿಯದಲ್ಲ. ವಿದ್ಯಮಾನದ ಆಳಕ್ಕೆ ಸಾಧ್ಯವಾದಷ್ಟು ಇಳಿದು ಕಟ್ಟಿಕೊಡುವ ಮಾಹಿತಿ. ‘ಡಾನ್ ಆಫ್ ಪಾವರ್ಟಿ’  ‘ ಥ್ರೀ ಸೆವೆಂಟಿ ಸೆವೆನ್’  ‘ರಿಯಾಕ್ಷನ್ ಫಾರ್ ರಿಯಾಕ್ಷನ್ ಜರ್ನಲಿಸಂ’  ‘ಲೆವೆಲ್ ಪ್ಲೇಯಿಂಗ್ ಫೀಲ್ಡ್ ಎಲ್ಲಿ’  ‘ಗುರಾಣಿ ಪತ್ರಕರ್ತೆ’  ‘ಗಣಿ ರೆಡ್ಡಿಗಳ ಮುಂದೆ ಹೈ ಕಮಾಂಡ್ ನಂಗಾ ನಾಚ್’  ‘ಸ್ವಯಂ ಸೇವಕ ಪತ್ರಕರ್ತರು’ ಮತ್ತು ‘ಗೋಲಿ ಹೊಡೆವ ಹುಡುಗ’ ಇವೆಲ್ಲ ತಳಸ್ಪರ್ಶಿ ನೋಟವಿರುವ ಅಧ್ಯಾಯಗಳು.

ಸಲಿಂಗಿಗಾಮಿಗಳ ಬಗ್ಗೆ ಭಾರತೀಯ ಸಮಾಜಕ್ಕೆ ಜಿಗುಪ್ಸೆಯ ದೃಷ್ಟಿಕೋನ. ಇಂಥ ಸಂದರ್ಭದಲ್ಲಿ ದೆಹಲಿಯ ಕೋರ್ಟ್ ಕೊಟ್ಟ ತೀರ್ಪು ಸಂಚಲನವನ್ನೇ ಉಂಟು ಮಾಡಿತು. ಅದರ ಚಲನೆಯಿನ್ನೂ ನಿಂತಿಲ್ಲ. ಈ ತೀರ್ಪನ ಬಗ್ಗೆ ಒಂದು ಎ.ವಿ. ಅಥವಾ ಎ.ಬಿ. ಕೊಟ್ಟು ಕೈ ತೊಳೆದುಕೊಳ್ಳುವ ಜಾಯಮಾನಕ್ಕೆ ಹೋಗದೆ ಘಟನೆಯ ಹಿಂದಿನ ವಿದ್ಯಮಾನ-ಹೋರಾಟಗಳ ಬೆನ್ನು ಹತ್ತುತ್ತಾರೆ. ಈ ಸಂದರ್ಭದಲ್ಲಿ ನೀಡುವ ವಿವರಗಳು ಮನ ಕಲಕುತ್ತವೆ. ಭಾರತೀಯ ದಂಡ ಸಂಹಿತೆಯ ಕಲಂ 377 ಏನೆಲ್ಲ ಮಾಡಬಲ್ಲದಾಗಿತ್ತು. ಇದರ ವಿರುದ್ಧ ಏಕಾಗಿ ಕಾನೂನಾತ್ಮಕ ಹೋರಾಟ ನಡೆಯಿತು ಎಂಬ ವಿವರಗಳನ್ನು ಕಟ್ಟಿಕೊಡುತ್ತಾರೆ.

ರಾಜಕೀಯದ ಆಯಸ್ಕಾಂತೀಯ ಶಕ್ತಿ ಕೇಂದ್ರ ಆಕಸ್ಮಿಕವಾಗಿ ಯಾರನ್ನೂ ಎಳೆದುಕೊಂಡು ಅವರ ಸುತ್ತ ಪ್ರಭಾ ವಲಯ ನಿರ್ಮಿಸಬಲ್ಲದು. ಇಂಥ ಘಟನೆ ಬಗ್ಗೆ ‘ಸಿಂಗ್ ಈಸ್ ಕಿಂಗ್’ ಅಧ್ಯಾಯದಲ್ಲಿ ವಿವರಗಳನ್ನು ನೀಡುತ್ತಾರೆ. ದಕ್ಷಿಣ ಭಾರತದ ರಾಜಕಾರಣಿಗಳ ಬಗ್ಗೆ ಉತ್ತರದ ಮುಖ್ಯವಾಗಿ ದೆಹಲಿಯ ಪತ್ರಕರ್ತರಿಗೆ ಇರುವ ಪೂರ್ವಾಗ್ರಹಪೀಡಿತ ಭಾವನೆಗಳ ಬಗ್ಗೆ ತಿಳಿಸುತ್ತಾರೆ. ರಾಜಕಾರಣಿ ಮೆದುವಾಗಿ ಕಂಡರೆ ಆತನನ್ನು ಅವರು ಹೇಗೆ ಅಟ್ಯಾಕ್ ಮಾಡುತ್ತಾರೆ. ದೇವೇಗೌಡರಂಥವರು ಇದಕ್ಕೆ ಹೇಗೆ ತಿರುಗೇಟು ನೀಡುತ್ತಾರೆ ಎಂಬುದನ್ನೆಲ್ಲ ದಾಖಲಿಸುತ್ತಾರೆ. ದಲಿತ ರಾಜಕಾರಣಿಗಳ ಬಗ್ಗೆ ದೆಹಲಿಯ ರಾಜಕೀಯ ವಲಯದಲ್ಲಿ ಇರುವ ನೋಟವನ್ನು ‘ಅಕ್ಕ ಮಾಯಾವತಿಯ ಬೆವರಿನ ವಾಸನೆ’ ಅಧ್ಯಾಯದಲ್ಲಿ ಬಹಳ ಸೂಕ್ಷ್ಮವಾಗಿ ಮಾಹಿತಿ ನೀಡುತ್ತಾ ಮೂತಿ ತಿರುವಿದವರು ಮರೆಯಾಗಿ ಹೋದ ಸಂಗತಿ ತಿಳಿಸುತ್ತಾರೆ. ನಮ್ಮ ನಡುವೆ ಇದ್ದು ಕೂಡ ಹೆಚ್ಚಿನ ಜನಕ್ಕೆ ಅಪರಿಚಿತವಾಗಿಯೆ ಉಳಿದ ರಾಜಕಾರಣಿಗಳ ಸಕಾರಾತ್ಮಕ ಅಂಶಗಳು ಕೂಡ ಅರಿವಾಗುತ್ತವೆ.

ಓದುತ್ತಾ ಹೋದಂತೆಲ್ಲ ತಿಳಿ ನಗೆ ಮೂಡಿಸುವ ಬರಹದ ಮಾದರಿಗಳು ಇಲ್ಲಿವೆ. ‘ಟ್ರೆಂಡ್ ಏನಿದೆ ಗೌಡ್ರೆ’  ‘ಪತ್ರಕರ್ತರನ್ನ ಬೆಳಿಸ್ತಾ ಇದ್ದೀನಿ, ಅದಕ್ಕಂತ ಸಪ್ರೇಟ್ ಬಜೆಟ್ ಇಕ್ಕಿದ್ದೀನಿ’ ಎಂಬ ಅಧ್ಯಾಯಗಳನ್ನು ಓದಲು ತೊಡಗಿದಂತೆ ಗಂಭೀರವಾದ ಬರಹಗಳ ದೆಶೆಯಿಂದ ಬಿಗಿದುಕೊಂಡಿದ್ದ ಮುಖದ ಸ್ನಾಯುಗಳು ಸಡಿಲವಾಗುವಂತೆ ನಗೆ ಮೂಡುತ್ತದೆ. ಇದನ್ನು ಓದಿಯೇ ಸವಿಯಬೇಕು. ರಾಜ್ಯದಲ್ಲಿ ಎಂಥೆಂಥ  ರಾಜಕಾರಣಿಗಳು ನಮ್ಮನ್ನು ಆಳುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ !

ಗಂಭೀರವಾದ ಪ್ರಶ್ನೆಗಳನ್ನ ಎತ್ತುವ ಬರಹಗಳೂ ಇವೆ. ‘ಉಳ್ಳವರು ಆಗುವರೆನಯ್ಯಾ’ ಅಧ್ಯಾಯದಲ್ಲಿ ಪತ್ರಕರ್ತರ ವೃತ್ತಿ ಅವಲಂಬಿಸುವವರ್ಯಾರು, ಮಿಕ್ಕವರೇಕೆ ಇಲ್ಲಿಗೆ ಬರುವುದಿಲ್ಲ ಎಂಬುದನ್ನು ಚರ್ಚಿಸಲಾಗಿದೆ. ‘ ಮಲ್ಯನ ಆತ್ಮಕ್ಕೆ ಶಾಂತಿ ಸಿಗಲಿ’ ! ಅಧ್ಯಾಯದಲ್ಲಿ ರೈತರಿಗೆ ಸಂಬಂಧಿಸಿದ ವಿಚಾರಗಳನ್ನೆತ್ತುತ್ತಾರೆ. ಪ್ರಸ್ತುತ ಭಾರತೀಯ ಪತ್ರಿಕೋದ್ಯಮ ಅದರಲ್ಲಿಯೂ ಮುಖ್ಯವಾಗಿ ಟಿವಿ ಪತ್ರಿಕೋದ್ಯಮ ಯಾವ ಹಂತದಲ್ಲಿ ನಿಂತಿದೆ. ‘ಜನರಿಗೆ ಬೇಕಾದನ್ನು ಕೊಡುತ್ತೇವೆ’ ಎನ್ನುವುದರಲ್ಲಿ ಎಂಥ ಅಪಾಯ ಅಡಗಿದೆ ಎಂಬುದನ್ನು ಸೂಕ್ಷ್ಮವಾಗಿ ವಿವೇಚಿಸಲಾಗಿದೆ

ಈ ಕೃತಿಯಲ್ಲಿ ಲೇಖಕ ಆಡುವ ಮಾತೊಂದು ಹೀಗಿದೆ. ‘ I am journalist. Because I Enjoy more Democracy within Democrasy ‘ ಎನ್ನುವುದು ಪತ್ರಕರ್ತ ಹುದ್ದೆ ವ್ಯಕ್ತಿತ್ವವನ್ನೇ ವರ್ಣಿಸುತ್ತದೆ ಅಲ್ಲವೆ...

ಅಷ್ಟಮಂಗಲ ಪ್ರಶ್ನೆ ಅಗತ್ಯವಿದೆಯೆ…?

ತಿರುವಂತನಪುರದ ಅನಂತನ ಅನಂತ ಸಂಪತ್ತು ಸಂಬಂಧ ಇತ್ತೀಚೆಗೆ ಅಷ್ಟಮಂಗಲ ಪ್ರಶ್ನೆ ಪ್ರಕ್ರಿಯೆ ನಡೆಯಿತು. ಅನಂತ ಪದ್ಮನಾಭ ದೇಗುಲ ಮತ್ತು ಅದರ ಸುತ್ತಲಿನ ಘಟನಾವಳಿಗಳ ಸರಣಿ ಬರಿಯಲಾರಂಭಿಸಿದ ಕಾರಣ ಈ ಸಂದರ್ಭದಲ್ಲಿ ಸಾಕಷ್ಟು ಮಂದಿ ಇದರ ಬಗ್ಗೆ ತಿಳಿಸಿ ಎಂದರು. ನನಗೆ ಇಂಥ ಆಚರಣೆ; ನಂತರದ ಫಲಿತಾಂಶಗಳ ಬಗ್ಗೆ ಸಂಬಂಧಿಸಿದವರಿಂದಲೇ ತಿಳಿಯಬೇಕೆಂಬ ಹಂಬಲ. ಇದರಿಂದಾಗಿಯೇ ಕಳೆದ ವಾರ   ನಾರಾಯಣ ರಂಗ ಭಟ್ಟರನ್ನು ಕಾಸರಗೋಡು ಮಧೂರಿನ ಅವರ ನಿವಾಸದಲ್ಲಿಯೇ ಭೇಟಿ ಮಾಡಿದೆ. ಅನಂತ ಪದ್ಮನಾಭ ದೇಗುಲದಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಸಿಕೊಟ್ಟ ಪ್ರಮುಖ ದೈವಜ್ಞರಿವರು.
 ಕರ್ನಾಟಕದ ಕರಾವಳಿ ಪ್ರದೇಶ ಮತ್ತು ಕೇರಳದಲ್ಲಿ ಅಷ್ಟಮಂಗಲ ಪ್ರಶ್ನೆ ಪರಿಚಿತ ಆಚರಣೆ. ಆದರಿದು ಎಲ್ಲ ಸಂದರ್ಭಗಳಲ್ಲಿಯೂ ನಡೆಯುವುದಿಲ್ಲ. ತುಂಬ ಜಿಜ್ಞಾಸೆ ಮೂಡಿದಾಗ ಮಾತ್ರ ಇಂಥ ಪ್ರಶ್ನೆ ಕೇಳುವ ಆಚರಣೆ ನಡೆಯುತ್ತದೆ. ರಾಜ-ಮಹಾರಾಜರ ಆಳ್ವಿಕೆ ಘಟ್ಟದಲ್ಲಿ ಪ್ರಮುಖ ದೇಗುಲಗಳಲ್ಲಿ ಪ್ರತಿ ವರ್ಷ ಅಷ್ಟಮಂಗಲ ಪ್ರಶ್ನೆ ಕೇಳಲಾಗುತ್ತಿತ್ತು. ದೇಗುಲ ಕ್ರಿಯೆಗಳು ಸುಗಮವಾಗಿ ನಡೆಯುತ್ತಿದೆಯೇ, ಅಲ್ಲಿರುವಂಥ ನೌಕರರ (ಅರ್ಚಕರು ಮತ್ತು ಮೊಕ್ತೇಸರ ಕೂಡ ಸೇರಿದಂತೆ) ನಡವಳಿ ಹೇಗಿದೆ, ದೇವ ಆಚರಣೆಗಳಲ್ಲಿ ಏನಾದರೂ ದೋಷಗಳಾಗಿದೆಯೇ ಎಂಬುದನ್ನು ಅರಿಯುವುದಕ್ಕಾಗಿ ಈ ರೀತಿ ಮಾಡಲಾಗುತ್ತಿತ್ತು. ದೋಷಗಳು ಕಂಡು ಬಂದರೆ ಅದಕ್ಕೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿದ್ದರು. ರಾಜರ ಆಳ್ವಿಕೆ ಮುಕ್ತಾಯದ ನಂತರ ದೇಗುಲಗಳಲ್ಲಿ ಇಂಥ ಪ್ರಶ್ನೆ ಪ್ರಕ್ರಿಯೆ ವಿರಳವಾಯಿತು.
ದೈವಜ್ಞ ನಾರಾಯಣ ರಂಗ ಭಟ್ಟರು
 ಅನಂತ ಪದ್ಮನಾಭ ದೇಗುಲದಲ್ಲಿ ಸಾಕಷ್ಟು ವರ್ಷಗಳಿಂದ ಇಂಥ ಪ್ರಶ್ನೆ ಪ್ರಕ್ರಿಯೆ ನಡೆದಿರಲಿಲ್ಲ. ನಿಧಿ ಇರುವ ನೆಲ ಮಾಳಿಗೆ ಕೊಠಡಿಗಳನ್ನು ಸುಪ್ರೀಮ್ ಕೋರ್ಟ್ ತೆರೆಸಿದ ನಂತರವೇ ದೇಗುಲದ ಆಡಳಿತ ನೋಡಿಕೊಳ್ಳುತ್ತಿರುವ ಟ್ರಾವೆಂಕೂರು ಟ್ರಾವೆಂಕೂರು ರಾಜಮನೆತನದವರು ಅಷ್ಟಮಂಗಲ ಪ್ರಶ್ನೆ ಪ್ರಕ್ರಿಯೆ ನಡೆಸಲು ಮುಂದಾಗಿದ್ದು. ಬಳಿಕ ಬಂದ ಫಲಿತಾಂಶಗಳನ್ನು ತಿಳಿಯುವ ಮೊದಲು ‘ಅಷ್ಟಮಂಗಲ ಪ್ರಶ್ನೆ’ ಎಂದರೇನು ತಿಳಿಯೋಣ.
ಅನಂತ ಪದ್ಮನಾಭ ದೇಗುಲದ ಮುಂದೆ  ದೈವಜ್ಞರ ತಂಡ
  ‘ಈ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ ‘ದೈವ ಪ್ರಶ್ನೆ’ ನಡೆಯಲಾಗುತ್ತಿದೆ ಎಂದೂ ಕೆಲವರು ಹೇಳುತ್ತಿದ್ದರು. ಆದ್ದರಿದು ‘ದೇವ ಪ್ರಶ್ನೆ’ ದೇವರಿಗೆ ಸಂಬಂಧಿಸಿದ ವಿಚಾರಗಳನ್ನು ತಿಳಿಯುವ ಸಂದರ್ಭದಲ್ಲಿ ಅನುಸರಿಸಲಾಗುವ ಆಚರಣೆಗೆ ಹೀಗೆಂದು ಸಂಬೋಧಿಸಲಾಗುತ್ತದೆ. ಮೂಲಭೂತವಾಗಿ ಇದು ಮತ್ತು ‘ಅಷ್ಟಮಂಗಲ ಪ್ರಶ್ನೆ’ ಎರಡೂ ಒಂದೇ’ ಎನ್ನುತ್ತಾರೆ ದೈವಜ್ಞ( ಪ್ರಶ್ನೆಗಳಿಗೆ ಉತ್ತರಕ್ಕಾಗಿ ಯಾರನ್ನು ಸಂದರ್ಶಿಸುತ್ತೆವೆಯೋ ಅವರೆ ದೈವಜ್ಞರು) ನಾರಾಯಣ ರಂಗ ಭಟ್ಟರು. 

‘ಭೂತ-ವರ್ತಮಾನ-ಭವಿಷ್ಯತ್ ಕುರಿತ ವಿಚಾರಗಳನ್ನು ಹೇಳುವುದು. ಇದಕ್ಕಾಗಿ ಅನುಸರಿಸುವ ಜ್ಯೋತಿಷ ಶಾಸ್ತ್ರದ ಎಲ್ಲ ರೀತಿಯ ವಿಧಾನಗಳು ಅಷ್ಟಮಂಗಲದಲ್ಲಿ ಅಡಕವಾಗಿವೆ. ಈ ವಿಧಾನದಲ್ಲಿ ಎಲ್ಲ ರೀತಿಯ ಸಮಸ್ಯೆಗಳಿಗೂ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಬಹುದು. ದೇವರ ಚೈತನ್ಯ-ಸಾನಿಧ್ಯ ಕುರಿತು ಕಣ್ಣಿಗೆ ಗೋಚರವಾಗದ ವಿಷಯಗಳನ್ನು ಅರಿಯಬಹುದು.  ಅನುಷ್ಠಾನ ಮಾರ್ಗ. ಪ್ರಶ್ನಾ ಮಾರ್ಗ ( ಪೂರ್ವಾರ್ಧ ಮತ್ತು ಉತ್ತರಾರ್ಧ) ಗ್ರಂಥಗಳಲ್ಲಿ ಈ ಸಂಬಂಧಿತ ಮಾಹಿತಿಗಳಿವೆ’ ಎನ್ನುತ್ತಾರೆ.

ಅಷ್ಟಮಂಗಲದ ವಿವರಗಳನ್ನು ನೋಡಿದಾಗ ಇದಕ್ಕೆ ಸಂಖ್ಯಾಶಾಸ್ತ್ರವೇ ಬಹುಮುಖ್ಯ ಆಧಾರ ಎನ್ನುವುದು ತಿಳಿಯುತ್ತದೆ. ಇಲ್ಲಿ ಲೆಕ್ಕಾಚಾರವೂ ಪ್ರಮುಖ. ‘ ದೈವಜ್ಞರನ್ನು ಕಂಡು ಕೋರಿಕೆ ಸಲ್ಲಿಸಿದ ಗಳಿಗೆಯಿಂದಲೂ ಲೆಕ್ಕಚಾರ ಆರಂಭವಾಗುತ್ತದೆ. ಇದು ಸಂಖ್ಯಾಶಾಸ್ತ್ರ ಮಾತ್ರವೇ ಅಲ್ಲ; ದೇಹ ಭಾಷೆ ( ಬಾಡಿ ಲಾಂಗ್ವೇಜ್) ಮುಖಾಂತರವೂ ಸಮಸ್ಯೆಗಳನ್ನು ಅರಿಯುವ ವಿಧಾನ.
‘ಬಹುತೇಕರು ವ್ಯಕ್ತಿಯ ಮುಖಲಕ್ಷಣ ನೋಡಿ ಈ ಜ್ಯೋತಿಷ ಹೇಳುತ್ತಾರೆ ಎಂದು ಕೊಳ್ಳುತ್ತಾರೆ. ಆದರೆ ಕವಡೆ, ದೀಪ, ಶಕುನಗಳು, ವ್ಯಕ್ತಿ ಕುಳಿತ ಸ್ಥಳ-ದಿಕ್ಕು, ಆತ/ಆಕೆಯ ಮಾತು, ನೋಡುವ ನೋಟ, ದೇಹ ಭಾಷೆ (ಇದಕ್ಕೆ ಸ್ಪರ್ಶನ ಎನ್ನುತ್ತಾರೆ) ಧರಿಸಿದ ಬಟ್ಟೆ, ಬಂದ ಸಮಯ ಇವೆಲ್ಲವೂ ಪರಿಗಣಿತವಾಗುತ್ತದೆ. ಸ್ಪರ್ಶನವೆಂದರೆ ಬಂದ ವ್ಯಕ್ತಿ ಪ್ರಶ್ನೆ ಕೇಳುವಾಗ ಯಾವ ಭಂಗಿಯಲ್ಲಿ ಕುಳಿತಿದ್ದಾನೆ. ತನ್ನ ದೇಹದ ಯಾವ ಭಾಗಗಳನ್ನು ಪದೇಪದೇ ಮುಟ್ಟುತ್ತಿದ್ದಾನೆ ಎಂಬುದನ್ನೆಲ್ಲ ಸೂಕ್ಷ್ಮವಾಗಿ ಅವಲೋಕಿಸಲಾಗುತ್ತದೆ’ ಎಂದು ವಿವರಿಸುತ್ತಾರೆ ದೈವಜ್ಞ ನಾರಾಯಣ ರಂಗ ಭಟ್ಟರು.

ಮುಂದುವರಿದು ‘ ಎಲ್ಲ ಸಮಸ್ಯೆಗಳಿಗೂ ಸಮಾಧಾನ ಕಂಡುಕೊಳ್ಳಲು ಅಷ್ಟಮಂಗಲ ಪ್ರಶ್ನೆ ಕೇಳಲಾಗುವುದಿಲ್ಲ. ಸ್ಥಳಕ್ಕೆ ತೆರಳಿ ಸಾಕಷ್ಟು ಸಮಯ ಅಲ್ಲಿ ಇದ್ದು ಉತ್ತರ ಹೇಳಬೇಕಾಗುತ್ತದೆ. ಬಂದ ವ್ಯಕ್ತಿಯ ಸಮಸ್ಯೆಗೆ ಅನುಗುಣವಾಗಿ ಯಾವ ರೀತಿಯ ಪ್ರಶ್ನಾ ಮಾರ್ಗ ಸೂಕ್ತ ಎಂದು ವಿವೇಚಿಸಲಾಗುತ್ತದೆ. ‘ತಾತ್ಕಾಲಿಕ ಪ್ರಶ್ನಾ ಮಾರ್ಗ’ ಸೂಕ್ತ ಎನಿಸಿದರೆ ಅದನ್ನೆ ಅನುಸರಿಸಲಾಗುತ್ತದೆ’ ಎಂದು ವಿವರಿಸುತ್ತಾರೆ.
ಅಷ್ಟಮಂಗಲ ಪ್ರಶ್ನಾ ಸಂದರ್ಭದಲ್ಲಿ ಬಳಸಲ್ಪಡುವ ಎಂಟು ವಸ್ತುಗಳು
 ‘ಅಷ್ಟಮಂಗಲ ಪ್ರಶ್ನಾ ಮಾರ್ಗ’ ಅನುಸರಿಸುವಾಗ ಎಂಟು ವಸ್ತುಗಳು ಮುಖ್ಯವಾಗುತ್ತವೆ. ಕುಂಕುಮ, ಕನ್ನಡಿ, ಹೂ ಅಕ್ಷತೆ (ಭತ್ತ-ಅಕ್ಕಿ ಮಿಶ್ರಣ), ಹಣ್ಣು ತಾಂಬೂಲ ಮತ್ತು ಬಿಳಿ ಬಟ್ಟೆ. ಸಾಮಾನ್ಯವಾಗಿ ಈ ಮಾರ್ಗ ಅನುಸರಿಸುವಾಗ ಒಬ್ಬರಿಗಿಂತ ಹೆಚ್ಚು ಮಂದಿ ದೈವಜ್ಞರು ಇರುತ್ತಾರೆ. ಇಂತಿಷ್ಟೆ ಕಾಲ ಮಿತಿಯೊಳಗೆ ಈ ಮಾರ್ಗದ ಆಚರಣೆ ಮುಗಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಂದೆರಡು ದಿನಗಳಾಗಬಹುದು ಅಥವಾ ಇನ್ನೂ ಹೆಚ್ಚು ದಿನಗಳಾಗಬಹುದು. ಈ ಹಂತಗಳಲ್ಲಿ ಕಂಡು ಬಂದ ವಿಷಯಗಳನ್ನೆಲ್ಲ ವಿಮರ್ಶಿಸಿ-ವಿಶ್ಲೇಷಿಸಿ ಫಲಿತಾಂಶ ತಿಳಿಸುತ್ತಾರೆ.
 
ಅಷ್ಟಮಂಗಲದ ಬಗ್ಗೆ ವಿವರವಾಗಿ ತಿಳಿದು; ಧನ್ಯವಾದ ಹೇಳಿ ಮೇಲೆದ್ದಾಗ ಬರೋಬ್ಬರಿ ಒಂದೂವರೆ ತಾಸು ಚರ್ಚಿಸಿದ್ದೆವು. ನಾನು ಹೋದ ಸಂದರ್ಭದಲ್ಲಿ ದೂರದೂರಿನಿಂದ ಬಂದ ಕುಟುಂಬವೊಂದು ತಮ್ಮ ಸಮಸ್ಯೆಗಳನ್ನು ತಿಳಿಸಿ ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಿದ್ದರು. ಇನ್ನೂ ಕೆಲವರು ಹೊರಗೆ ಕುಳಿತಿದ್ದರು. ಒಳಗಿದ್ದವರು ಹೊರಗೆ ಬಂದ ಬಳಿಕ ನನ್ನನ್ನು ಕರೆದರು. ಹೆಚ್ಚು ಸಮಯವಿಲ್ಲ; ಎರಡೇ ನಿಮಿಷ ಮಾತನಾಡಬಹುದು ಎಂದವರು ಸಂವಾದದಲ್ಲಿ ತೊಡಗಿದಂತೆ ಸುದೀರ್ಘವಾಗಿಯೇ ಮಾತನಾಡಿದರು.  ಅಷ್ಟಮಂಗಲದ ಬಗ್ಗೆ ಇನ್ನೂ ಸಾಕಷ್ಟು ವಿಷಯಗಳನ್ನು ತಿಳಿಸಿದರು. ಎಲ್ಲವನ್ನೂ ಇಲ್ಲಿ ವಿವರಿಸಿದರೆ ವಿಷಯ ಕಗ್ಗಂಟು ಎನಿಸಬಹುದು. ಆದ್ದರಿಂದ ಸಂಕ್ಷಿಪ್ತ ಮಾಡಿದ್ದೇನೆ. ಹೊರ ಬರುವ ಸಂದರ್ಭದಲ್ಲಿ ಅವರು ಹೇಳಿದ ಮಾತು ಕಿವಿಯಲ್ಲಿ ಗುಯ್ಹ್ ಗುಡುತ್ತಿದೆ.

ಜ್ಯೋತಿಷಿಗಳು ಎಂದರೆ ಬಹುತೇಕ ಜನ ಮಂತ್ರ-ತಂತ್ರ-ಸಿದ್ದಿಗಳನ್ನೆಲ್ಲ ತಿಳಿದವರು. ಎಂಥದ್ದೆ ಸಮಸ್ಯೆ ಪರಿಹರಿಸಬಲ್ಲರು ಎಂದುಕೊಂಡಿದ್ದಾರೆ. ಆದರೆ ವಾಸ್ತವ ಇದಲ್ಲ. ಜ್ಯೋತಿಷ ಎಂದರೆ ಮಾರ್ಗದರ್ಶನ ಮಾಡುವುದು ಮಾತ್ರ.  ಜ್ಯೋತಿಷಿ ಓರ್ವ ಗೈಡ್’

ಕಾಸರಗೋಡು ಕನ್ನಡಿಗರ ಹುದ್ದೆ ಕಸಿಯಲು ಹುನ್ನಾರ…!..?

ಇತ್ತೀಚೆಗಷ್ಟೆ ಕಾಸರಗೋಡು ಕನ್ನಡಿಗರ ಹಿತರಕ್ಷಣಾ ಸಮಿತಿ ನಿಯೋಗದವರು ಕೇರಳ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದರು. ಶಿಕ್ಷಣ ಇಲಾಖೆ ಸಚಿವ ಮತ್ತು ಕಾರ್ಯದರ್ಶಿಯನ್ನು ಕಂಡಿದ್ದರು. ಇವರೆಲ್ಲರಿಂದ ಮಲೆಯಾಳ ಹೇರಿಕೆಯಾಗುವುದಿಲ್ಲವೆಂಬ ಭರವಸೆ ಹೊತ್ತು ಹಿಂದಿರುಗಿದ್ದರು. ಆದರೆ ನಡೆಯುತ್ತಿರುವುದೆ ಬೇರೆ. ಕಾಸರಗೋಡಿನಿಂದ ಕನ್ನಡ ಸಂಸ್ಕೃತಿ ಹೊರದೂಡಲು ಒಂದಲ್ಲ ಒಂದು ತಂತ್ರ ಮಾಡುತ್ತಲೇ ಇರುವ ಕೇರಳ ಸರಕಾರ ಈಗ ಮತ್ತೊಂದು ಕುತಂತ್ರ ಮಾಡಿದೆ. ಕಾಸರಗೋಡು ಕನ್ನಡಿಗರ ಹುದ್ದೆಗಳನ್ನು ಕಸಿಯುವ ಹುನ್ನಾರ ನಡೆಸಿದೆ.
ಕನ್ನಡ ಶಾಲೆಗಳಲ್ಲಿ ಮಲೆಯಾಳಮ್ ಕಡ್ಡಾಯ ಹೇರಿಕೆ ಮಾಡದಂತೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ಆಗ್ರಹ ಪತ್ರ ಸಲ್ಲಿಸುತ್ತಿರುವ ಕಾಸರಗೋಡು ಜಿಲ್ಲಾ ಕನ್ನಡ ಹಿತರಕ್ಷಣಾ ಸಮಿತಿ ನಿಯೋಗ
ಭಾಷಾವಾರು ಪ್ರಾಂತ್ಯ ರಚನೆಯಾದ ಸಂದರ್ಭದಲ್ಲಿ ಅನ್ಯಾಯವಾಗಿ ಕೇರಳಕ್ಕೆ ಕನ್ನಡ ಸಂಸ್ಕೃತಿ ಪ್ರದೇಶ ಕಾಸರಗೋಡು ಸೇರಿತು. ಈ ನಂತರ ಭಾಷಾ ಅಲ್ಪಸಂಖ್ಯಾತ ಪ್ರದೇಶದ ಹಿತದೃಷ್ಟಿಯಿಂದ ಕೆಲವಾರು ನಿಯಮಗಳು ರಚಿಸಲ್ಪಟ್ಟವು. ಕನ್ನಡ ಶಾಲೆ-ಕಾಲೇಜುಗಳನ್ನು ಉಳಿಸಿಕೊಳ್ಳುವುದು, ಪ್ರತಿಯೊಂದು ಸರಕಾರಿ-ಅರೆ ಸರಕಾರಿ ಕಛೇರಿಗಳಲ್ಲಿ, ಸ್ಥಳೀಯ ಸಂಸ್ಥೆ(ನಗರ ಸಭೆ-ಗ್ರಾಮ ಸಭೆ-ಪಟ್ಟಣ ಪಂಚಾಯತ್ ) ಮತ್ತು ಸರಕಾರಿ ಅನುದಾನಿತ ಸಂಘ-ಸಂಸ್ಥೆಗಳಲ್ಲಿ ಕನ್ನಡ ಬಲ್ಲವರನ್ನು ನೇಮಿಸುವುದು. 
ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ಕಾಸರಗೋಡಿನ ಪ್ರತಿ ಸರಕಾರಿ ಕಚೇರಿಗಳಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದರು. ಇವರಲ್ಲಿ ಹಲವರನ್ನು ದುರುದ್ದೇಶಪೂರ್ವಕವಾಗಿ ವರ್ಗಾವಣೆ ಮಾಡಲಾಯಿತು. ಇನ್ನು ಉಳಿದವರು ವಯೋ ನಿವೃತ್ತಿಯಾದರು. ಕಣ್ಣೂರು ಜಿಲ್ಲೆಗೆ ಸೇರಿದ್ದ ಕಾಸರಗೋಡನ್ನು ಜಿಲ್ಲೆಯನ್ನಾಗಿ ರಚನೆ ಮಾಡಲಾಯಿತು. ಇದರಿಂದ ಈ ಪ್ರದೇಶದ ಅಭಿವೃದ್ಧಿಯಾಗುತ್ತದೆ ಎಂದು ನಂಬಿಸಲಾಯಿತು. ಆದರೆ ಜಿಲ್ಲಾ ರಚನೆ ಮಾಡಿದ ಉದ್ದೇಶವೇ ಬೇರೆಯಾಗಿತ್ತು. ಜಿಲ್ಲಾ ಕೇಂದ್ರಕ್ಕೆ ಹೆಚ್ಚು ಕಛೇರಿಗಳು ಬರುತ್ತವೆ. ಹುದ್ದೆಗಳು ಜಾಸ್ತಿಯಾಗುತ್ತವೆ. ಇಲ್ಲಿಗೆ ಮಲೆಯಾಳಿಗರನ್ನು ತುಂಬಬಹುದು. ಜಿಲ್ಲಾ ಕೇಂದ್ರವಾದ ನಂತರ ವ್ಯವಹಾರಗಳು ಹೆಚ್ಚುತ್ತವೆ. ಸಹಜವಾಗಿಯೇ ನೆರೆ-ಹೊರೆಯ ಮಲೆಯಾಳಿ ಭಾಷಿಕರು ಇತ್ತ ಆಕರ್ಷಿತವಾಗುತ್ತಾರೆ ಎಂಬುದಾಗಿತ್ತು. ಇದರಂತೆಯೆ ಆಯಿತು. ಸಂಪದ್ಭರಿತ ನಾಡಾದ ಕಾಸರಗೋಡಿಗೆ ಮಲೆಯಾಳ ಭಾಷಿಕರು ಪ್ರವಾಹದಂತೆ ವಲಸೆ ಬರತೊಡಗಿದರು. ಮಲೆಯಾಳೀಕರಣ ಸದ್ದಿಲ್ಲದೇ ನಡೆಯತೊಡಗಿತು.
ಕಾಸರಗೋಡು ಜಿಲ್ಲಾ ಕಚೇರಿ ಸಮುಚ್ಛಯ
ನಿಯಮದಂತೆ ಜಿಲ್ಲಾಧಿಕಾರಿ-ತಹಸಿಲ್ದಾರ್-ಠಾಣಾಧಿಕಾರಿ-ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಕನ್ನಡ ಬಲ್ಲಂಥವರೆ ನೇಮಕವಾಗಬೇಕು. ಈ ರೀತಿ ಮಾಡಿದರೆ ಮಲೆಯಾಳೀಕರಣ ಆಗುವುದಿಲ್ಲವೆಂದುಕೊಂಡ ಕೇರಳ ಸರಕಾರ ಇಂಥ ಹುದ್ದೆಗಳಿಗೆ ಕನ್ನಡದ ಗಂಧ-ಗಾಳಿಯೂ ಗೊತ್ತಿಲ್ಲದವರನ್ನು ನೇಮಿಸಿತು. ರಾಜ್ಯ ಸರಕಾರದ 44 ಕ್ಕೂ ಹೆಚ್ಚು ಇಲಾಖೆಗಳ ಕಛೇರಿಗಳು ಕಾಸರಗೋಡು ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿವೆ. ಇಲ್ಲೆಲ್ಲ ಆಯಾ ಕಚೇರಿಯ ವಹಿವಾಟಿಗೆ ಅನುಗುಣವಾಗಿ ಕನ್ನಡಿಗರನ್ನೇ ದ್ವಿತೀಯ ದರ್ಜೆ ಸಹಾಯಕ(ಗುಮಾಸ್ತರು)ರ ಹುದ್ದೆಗಳಿಗೆ ನೇಮಕಾತಿ ಆಗಬೇಕು. ಆದರೆ ಇಂಥ ಕಾರ್ಯವನ್ನು ಕೇರಳ ಸರಕಾರ ಯೋಜಿತವಾಗಿಯೆ ಮಾಡುತ್ತಿಲ್ಲ.
ಇಂದು ಎಲ್ಲ ಸರಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲ ಹುದ್ದೆಗಳು ಖಾಲಿ ಇವೆ. ಇಂಥ ಹುದ್ದೆಗಳಿಗೆ ಅರ್ಜಿ ಕರೆದು ಅರ್ಹರನ್ನು ನೇಮಕ ಮಾಡಿಕೊಳ್ಳಬೇಕು. ಇಂಥ ನೂರಕ್ಕೂ ಹೆಚ್ಚು ಹುದ್ದೆಗಳಿಗೆ ಕೇರಳ ರಾಜ್ಯ ಲೋಕಸೇವಾ ಆಯೋಗ ಅರ್ಜಿಯನ್ನೇನೋ ಕರೆದಿದೆ. ಆದರೆ ಇಲ್ಲಿಯೂ ಕುತಂತ್ರ ಮಾಡಲಾಗಿದೆ. ‘ಕನ್ನಡ ಬಲ್ಲ’ ಹುದ್ದೆಗಳನ್ನು ‘ಕನ್ನಡ-ಮಲೆಯಾಳ ಬಲ್ಲ’ ಹುದ್ದೆಗಳಾಗಿ ಮಾರ್ಪಾಡಿಸಲಾಗಿದೆ. ವಿಷಯದ ಆಳ ಗೊತ್ತಿಲ್ಲದವರಿಗೆ ಅದು ಕೇರಳ ರಾಜ್ಯ ಹೀಗೆ ಮಾಡಿದರೆ ತಪ್ಪೇನು ಎಂದು ಅನಿಸಬಹುದು. ಆದರೆ ಪ್ರತಿಯೊಂದು ಸರಕಾರಿ ಕಚೇರಿಗಳಲ್ಲಿ ಕೇರಳ ಮಾತೃಭಾಷೆ ಮಂದಿ ಬಹುಸಂಖ್ಯಾತವಾಗಿದ್ದಾರೆ. ಇಲ್ಲಿಗೆ ತಮ್ಮ ತಮ್ಮ ವ್ಯವಹಾರಗಳ ಸಲುವಾಗಿ ತೆರಳುವ ಕನ್ನಡಿಗರು ಮಲೆಯಾಳ ಗೊತ್ತಿಲ್ಲದೇ ಪಾಡು ಪಡಬೇಕಾಗುತ್ತದೆ. ಈ ದೃಷ್ಟಿಯನ್ನಿಟ್ಟುಕೊಂಡೆ ಪ್ರತಿಯೊಂದು ಸರಕಾರಿ ಕಚೇರಿಯಲ್ಲಿ ಕನ್ನಡ ಬಲ್ಲಂಥವರನ್ನು ನೇಮಕ ಮಾಡಿಕೊಳ್ಳಬೇಕೆಂಬ ನಿಯಮ ಕನ್ನಡಿಗರ ಒತ್ತಾಸೆಯಿಂದಲೇ ರಚನೆಯಾಗಿತ್ತು. ಇಂಥ ನಿಯಮಗಳ ಬಗ್ಗೆ ಕೇರಳ ಸರಕಾರಕ್ಕೆ ಜಾಣ ಮರೆವು !
ತಿರುವಂತನಪುರದಲ್ಲಿರುವ ಕೇರಳ ಸರಕಾರದ ಸಚಿವಾಲಯ
ಇಂಥ ನೂರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ 2011ರ ಅಕ್ಟೋಬರ್ ನಲ್ಲಿ ಲಿಖಿತ ಪರಿಕ್ಷೆ ನಡೆಯಲಿದೆ.  'ಪರೀಕ್ಷಾ ಅಭ್ಯರ್ಥಿಗಳು ನೂರು ಅಂಕಗಳಿರುವ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರಿಯಬೇಕು. ಇದರಲ್ಲಿ 20 ಅಂಕಗಳನ್ನು ಇಂಗ್ಲೀಷಿನಿಂದ ಮಲೆಯಾಳಕ್ಕೆ ಭಾಷಾಂತರಕ್ಕಾಗಿ, 20 ಅಂಕಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡುವುದಕ್ಕಾಗಿ ನಿಗದಿಪಡಿಸಲಾಗಿದೆ. ಇನ್ನುಳಿದ 60 ಅಂಕಗಳಿಗಿನ ಪ್ರಶ್ನೆಗಳೆಲ್ಲವೂ ಇಂಗ್ಲೀಷ್ ಮತ್ತು ಮಲೆಯಾಳದಲ್ಲಿರುತ್ತವೆ’ ಎನ್ನುತ್ತಾರೆ ಬದಿಯಡ್ಕದ ‘ಬಲ್ಪು’ ಸಂಘಟನೆ ಸಂಚಾಲಕ ಸುಂದರ ಬಾರಡ್ಕ.
‘ಬಲ್ಪು’ ಸಂಘಟನೆ ಸಂಚಾಲಕ ಸುಂದರ ಬಾರಡ್ಕ.
 ವಿಷಯ ಹೀಗಿರುವುದರಿಂದಲೇ ಅತ್ಯಧಿಕ ಸಂಖ್ಯೆಯಲ್ಲಿ ಮಲೆಯಾಳಿ ಮಾತೃಭಾಷಿಕರು ಅರ್ಜಿ ಸಲ್ಲಿಸಿದ್ದಾರೆ. ಈ ಹುದ್ದೆಗಳೆಲ್ಲ ನಿರಾಯಾಸವಾಗಿ ಇವರ ಪಾಲಾಗುತ್ತವೆ. ಹೀಗೆ ಆಗಲಿ. ಸರಕಾರಿ ಕಚೇರಿಗಳಿಗೆ ಬರುವ ಕಾಸರಗೋಡು ಕನ್ನಡಿಗರು ಮಲೆಯಾಳ ಗೊತ್ತಿಲ್ಲದ ಕಾರಣ ವಿಲವಿಲನೆ ಒದ್ದಾಡಲಿ. ಹೀಗೆ ಮಾಡಿದರೆ ಅವರು ಮಲೆಯಾಳವನ್ನೆ ಒಪ್ಪಿಕೊಳ್ಳುವ ಸ್ಥಿತಿಗೆ ಬರುತ್ತಾರೆ. ಆಗ ನಿರಾಯಾಸವಾಗಿ ಕನ್ನಡ ಸಂಸ್ಕೃತಿಯನ್ನು ಕಾಸರಗೋಡಿನಿಂದ ಹೊರದಬ್ಬಬಹುದು ಎಂಬುದು ಕೇರಳ ಸರಕಾರದ ಹುನ್ನಾರ.
ಕಾಸರಗೋಡು ಜಿಲ್ಲಾ ಸರಕಾರಿ ಕಚೇರಿಗಳಲ್ಲಿ ಎಷ್ಟು 'ಕನ್ನಡ ಬಲ್ಲ' ಹುದ್ದೆಗಳಿವೆ ಎಂಬ ವಿವರ.
 ‘ಈಗಾಗಲೇ ಕಾಸರಗೋಡಿನ ಸರಕಾರಿ ಕಚೇರಿಗಳಲ್ಲಿ ಕನ್ನಡದಲ್ಲಿ ಯಾವುದೇ ಆದೇಶ-ನಮೂನೆಗಳು ದೊರೆಯುತ್ತಿಲ್ಲ. ಇದರ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಮಲೆಯಾಳ ಕಲಿಯದಿದ್ದರೆ ಕಾಸರಗೋಡಿನಲ್ಲಿ ಬದುಕಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಮಾಡುವುದೇ ಕೇರಳ ಸರಕಾರದ ಆಲೋಚನೆಯಾಗಿದೆ’ ಹೀಗೆನ್ನುತ್ತಾರೆ ನರೇಶ್. ಇವರು ಕಾಸರಗೋಡು ಜಿಲ್ಲೆ, ಮುಳ್ಳೇರಿಯಾದಲ್ಲಿ ಖ್ಯಾತ ಆಯುರ್ವೇದ ವೈದ್ಯರು.
 
‘ಕನ್ನಡ ಬಲ್ಲ’ ಹುದ್ದೆಗಳನ್ನು ಕನ್ನಡ-ಮಲೆಯಾಳಮ್’ ಬಲ್ಲ ಹುದ್ದೆಗಳಾಗಿ ಮಾರ್ಪಾಡು ಮಾಡಿರುವುದು ನಿಯಮ ಬಾಹಿರ ಮತ್ತು ಭಾಷಾ ಅನೈತಿಕತೆ ಕೂಡ. ಏಕೆಂದರೆ ಕಾಸರಗೋಡು ಕನ್ನಡಿಗರು ಮಲೆಯಾಳ ಓದಲು-ಬರೆಯಲು ಕಲಿತವರಲ್ಲ. ಹೀಗೆ ಕಲಿಯಬೇಕಾದ ಅವಶ್ಯಕತೆಯೂ ಇಲ್ಲ. ಕಾಸರಗೋಡು ಗ್ರಾಮೀಣ ಪ್ರದೇಶದವರ ಅನುಕೂಲಕ್ಕಾಗಿ  ಸರಕಾರಿ ಕಚೇರಿಗಳಲ್ಲಿ ‘ಕನ್ನಡ ಬಲ್ಲ’ ಹುದ್ದೆಗಳಿರಬೇಕಿತ್ತು. ಇನ್ನು ಮುಂದೆ ಇವು ಇರುವುದಿಲ್ಲ. ಹೀಗಾದರೆ ಕಾಸರಗೋಡಿನ ಬಹುಸಂಖ್ಯಾತ ಕನ್ನಡಿಗ ರೈತಾಪಿ ಬಂಧುಗಳ ಕಥೆಯೇನು…?

ಕೇರಳ ಸರಕಾರ ಮತ್ತು ರಾಜ್ಯ ಲೋಕಸೇವಾ ಆಯೋಗದ ಇಂಥ ದುರುದ್ದೇಶಪೂರಿತ ಕ್ರಮದ ವಿರುದ್ಧ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಹಾಕುವ ಯೋಚನೆ ಬಲ್ಪು ಸಂಘಟನೆಯವರಿಗಿದೆ. ಆದರೆ ಇಷ್ಟೊಂದು ಆರ್ಥಿಕ ಅನುಕೂಲ ಈ ಸಂಘಟನೆಗಿಲ್ಲ. ಆದ್ದರಿಂದ ಕಾಸರಗೋಡಿನ ವಿವಿಧ ಸಂಘಟನೆಗಳವರು  ಸೇರಿ ರಚಿಸಿಕೊಂಡಿರುವ ‘ ಕಾಸರಗೋಡು ಜಿಲ್ಲಾ ಕನ್ನಡ ಹಿತರಕ್ಷಣಾ ಸಮಿತಿ’ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ. ಕೇರಳ ಮುಖ್ಯಮಂತ್ರಿ ನೀಡಿರುವುದು ಹುಸಿ ಭರವಸೆ ಎಂದರಿತು ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಬೇಕಾಗಿದೆ. ಈ ನಿಟ್ಟಿನಲ್ಲಿ ಬೇಕಾದ ನೆರವು ನೀಡುವ ಮನಸು ಕರ್ನಾಟಕದಲ್ಲಿರುವ ಕನ್ನಡಿಗರಿಗೆ ಸದಾ ಇದೆ. ಈ ಸಂದರ್ಭದಲ್ಲಿ ಸುಮ್ಮನೆ ಇದ್ದರೆ ಪರಿಸ್ಥಿತಿ ಕೈ ಮೀರಿ ಹೋಗುತ್ತದೆ. ಇದೇ ಅಕ್ಟೋಬರ್ ನಲ್ಲಿ ನಡೆಯಲಿರುವ ಪರೀಕ್ಷೆಗೆ ತಡೆಯಾಜ್ಞೆ ತರಲು ನ್ಯಾಯಾಲಯದ ಮೊರೆ ಹೋಗಲೇಬೇಕಿದೆ. ಇಲ್ಲವೇ ಕೇರಳ ಸರಕಾರದಿಂದ ಈ ಸಂಬಂಧ ಸೂಕ್ತ ಆದೇಶ ಪಡೆಯಲು ಒತ್ತಡ ತರಬೇಕಾಗಿದೆ. ತಡ ಮಾಡುವಂತಿಲ್ಲ.

ಈಗಾಗಲೇ ಕನ್ನಡ ಶಾಲೆಗಳಲ್ಲಿ ಕನ್ನಡದ ಗಂಧವೇ ಗೊತ್ತಿಲ್ಲದ ಮಲೆಯಾಳಿ ಅಧ್ಯಾಪಕರುಗಳನ್ನು ಕೇರಳ ಸರಕಾರ ನೇಮಕ ಮಾಡಿದೆ. ಗ್ರಾಮಗಳಿಗೆ ಮಲೆಯಾಳಿ ಹೆಸರುಗಳನ್ನಿಡುವ  ಚಾಳಿ ಮುಂದುವರಿಸುತ್ತಿದೆ. ಈ ಬಗ್ಗೆ ವಿವರವಾಗಿ ಬರಿಯುತ್ತೇನೆ.

ಪ್ರಜಾಪ್ರಭುತ್ವದ ಸೊಬಗು ಮೆರೆದ ಸಂಸತ್ತು

ಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಆಗಸ್ಟ್ 27, 2011 ಅವಿಸ್ಮರಣೀಯ ದಿನ. ‘ಲೋಕಪಾಲ್’’ ಮಸೂದೆ ಬಗ್ಗೆ ಸಂಸತ್ತಿನ ಉಭಯ ಸದಸಗಳಲ್ಲಿಯೂ ಅತ್ಯುತ್ತಮ ಚರ್ಚೆಯಾಯಿತು. ಮಾತನಾಡಿದ ಪ್ರತಿಯೊಬ್ಬರು ಸಮಸ್ಯೆಯ ಮಗ್ಗಲುಗಳ ಮೇಲೆ ತಮ್ಮದೇ ವಿಚಾರಗಳ ಬೆಳಕು ಚೆಲ್ಲಿದರು. ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತು ಪರಮೊಚ್ಚ’ ಎನ್ನುವುದನ್ನು ಮನಗಾಣಿಸಿದರು. ತಕರಾರುಗಳಿಲ್ಲದೆ ಮೂರು ಪ್ರಮುಖ ಸಂಗತಿಗಳನ್ನು ಅಂಗೀಕರಿಸಿದ್ದು ವಿಶೇಷ. ಈ ಮೂಲಕ ಭಾರತೀಯ ಸಂಸತ್ತು ಸಾಮಾಜಿಕ ಪ್ರಜ್ಞೆಯನ್ನು ಮೆರೆದಿದೆ. ಇವೆಲ್ಲದರ ಜೊತೆಗೆ 74 ವರ್ಷದ ಹಿರಿಯ ಜೀವ ಅಣ್ಣಾ ಹಜಾರೆ ಅನಿರ್ದಿಷ್ಟ ಅವಧಿ ಉಪವಾಸ ಸತ್ಯಾಗ್ರಹ ಮುಕ್ತಾಯಗೊಳಿಸುತ್ತಿರುವುದು ಸಹ ಸಂತಸದ ಸಂಗತಿ

ಸಂಸತ್ತಿನಲ್ಲಿ ಇಂದು ‘ಲೋಕಪಾಲ್’ ಮಸೂದೆ ಮೇಲೆ ಚರ್ಚೆ ಆರಂಭವಾಗುವಗುವ ಮುನ್ನ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಿಂದ ಚರ್ಚೆ ದಿಕ್ಕು ತಪ್ಪಬಹುದೆ ಎಂಬ ಆತಂಕವಿತ್ತು. ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಮಾತನಾಡುವಾಗ ಒಂದು ಹಂತದಲ್ಲಿ ಸಿ.ಬಿ.ಐ. ಅನ್ನು ಕಾಂಗ್ರೆಸ್ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಮಾಡಿದಾಗ ಓ ಇನ್ನು ವಿಷಯ ಹಳಿ ತಪ್ಪಬಹುದು ಎನಿಸಿತು. ಆದರೆ ಇದಕ್ಕೆ ಒಟ್ಟು ಸದನ ಅವಕಾಶ ನೀಡಲಿಲ್ಲ. ಇದರಿಂದಾಗಿ ಸಂಯಮದ ಚರ್ಚೆಗಳು ಸಾಧ್ಯವಾಯಿತು. ರಾಜ್ಯಸಭೆ ಕಲಾಪಕ್ಕಿಂತ ಲೋಕಸಭೆ ಕಲಾಪವನ್ನೇ ವೀಕ್ಷಿಸಿದೆ. ಒಟ್ಟು 27 ಮಂದಿ ಸಂಸದರು ಮಾತನಾಡಿದರು. ಇವರೆಲ್ಲರೂ  ತಮ್ಮದೆ ಆದ ರೀತಿಯಲ್ಲಿ ಸಮಸ್ಯೆಯ ಆಯಾಮಗಳನ್ನು ವಿಶ್ಲೇಷಿಸಿದರು.
ಸಂಸದರ ಮಾತಿನಲ್ಲಿ ‘ ಕಾನೂನು ರೂಪಿಸುವ ವಿಷಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತೆ ಅಂತಿಮ. ಸಂಸತ್ತಿನ ಹೊರಗಿನಿಂದ ಸಲಹೆಗಳು ಬರಬಹುದು. ಆದರೆ ಅಂತಿಮ ತಿರ್ಮಾನ ಸಂಸದೀಯ ವ್ಯವಸ್ಥೆಯದೇ’ ಎಂಬ ಅಂಶ ಗಮನಾರ್ಹವಾಗಿತ್ತು.
ಸಂಸತ್ತಿನ ಎರಡು ಸದನಗಳಲ್ಲಿಯೂ ಎಂಟು ತಾಸಿಗೂ ಹೆಚ್ಚು ಸಮಯ ಸಂವಾದ ಸಾಗಿತ್ತು. ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಹೆಚ್ಚು ಭಿನ್ನಮತ ಕಾಣದೇ ಇದ್ದಿದ್ದೂ ವಿಶೇಷವೇ. ಅಣ್ಣಾ ಹಜಾರೆ ಅವರ ಮೂರು ಪ್ರಮುಖ ಒತ್ತಾಯಗಳಾದ 1.ನಾಗರಿಕ ಸನ್ನದು ಜಾರಿ 2. ಕೆಳ ಹಂತದ ಅಧಿಕಾರಿ-ಸಿಬ್ಬಂದಿಯನ್ನು ಲೋಕಪಾಲ್ ವ್ಯಾಪ್ತಿಗೆ ತರುವುದು 3. ರಾಜ್ಯಗಳಲ್ಲಿ ಸಮರ್ಥ ಲೋಕಾಯುಕ್ತ ವ್ಯವಸ್ಥೆ ಅಳವಡಿಕೆ ವಿಚಾರಗಳಿಗೆ ಸಂಬಂಧಿಸಿ ಬರಬಹುದಾದ ಪ್ರಾಯೋಗಿಕ ತೊಡಕುಗಳ ಬಗ್ಗೆ ಸಂಸದರು ಸಂದೇಹ ವ್ಯಕ್ತಪಡಿಸಿದರಾದರೂ ಮಸೂದೆಯಲ್ಲಿ ಇವುಗಳ ಅಳವಡಿಕೆಗೆ ತಕರಾರು ತೆಗೆಯಲಿಲ್ಲ ಎಂಬುದು ಗಮನಾರ್ಹ. ಈ ವಿಚಾರದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಪ್ರಮುಖ ವಿರೋಧ ಪಕ್ಷ ಭಾರತೀಯ ಜನತಾ ಪಾರ್ಟಿ ನಡುವೆ ಒಮ್ಮತ ಮೂಡಿದ ಕಾರಣದಿಂದಲೇ ಸದನದ ನಡವಳಿಕೆಯಲ್ಲಿ ಬಹು ಅಪರೂಪವಾದ ‘ Sence of house’ ಕಾಣಲು ಸಾಧ್ಯವಾಯಿತು. ಈ ಮೂರು ವಿಷಯಗಳಿಗೂ ಸದನದ ಸದಸ್ಯರು ಮೇಜು ತಟ್ಟುವುದರ ಮೂಲಕ ಒಪ್ಪಿಗೆ ಸೂಚಿಸಿ ಸಂಸದೀಯ ಪ್ರಜ್ಞೆ ಮೆರೆದರು. ಸದನದ ಸ್ಥಾಯಿ ಸಮಿತಿಗೆ ಈ ಎಲ್ಲ ವಿಷಯ ವರ್ಗಾವಣೆಯಾಗುತ್ತದೆ. ಅಂತಿಮವಾಗಿ ಮಸೂದೆಗೆ ಸಮಿತಿ ಯಾವ ಸ್ವರೂಪ ದೊರೆಯಬಹುದು ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.
ಈ ವಿಷಯ ರಾಮಲೀಲಾ ಮೈದಾನಕ್ಕೆ ಮುಟ್ಟುತ್ತಿದಂತೆ ಅಣ್ಣಾ ಹಜಾರೆ ತಮ್ಮ ಉಪವಾಸ ಸತ್ಯಾಗ್ರಹವನ್ನು ನಾಳೆ ಅಂದರೆ ಆಗಸ್ಟ್ 28ರ ಬೆಳಿಗ್ಗೆ 10ಕ್ಕೆ ಮುಕ್ತಾಯಗೊಳಿಸುತ್ತಾರೆ ಎಂದು ಘೋಷಿಸಿದ್ದು ಕೂಡ ಪ್ರಮುಖ ಸಂಗತಿಯೆ. ಸಂಸತ್ತಿನ ನಿರ್ಣಯ ಮತ್ತು ಪ್ರಧಾನಿ ಪತ್ರವನ್ನು ಕೇಂದ್ರ ಮಂತ್ರಿ ವಿಲಾಸ್ ರಾವ್ ದೇಶ್ ಮುಖ್ ಅವರ ಮೂಲಕ ಅಣ್ಣಾ ಹಜಾರೆ ಅವರಿಗೆ ತಲುಪಿಸುವ ಮೂಲಕ ಕೇಂದ್ರ ಸರಕಾರ ತನ್ನ ಪ್ರಬುದ್ಧತೆ-ಬದ್ಧತೆ ತೋರಿದೆ. 

 ‘ ಇದು ಅರ್ಧ ವಿಜಯ ಮಾತ್ರ; ಪೂರ್ಣ ವಿಜಯ ಇನ್ನೂ ಬಾಕಿಯಿದೆ’ ಎಂದು ಅಣ್ಣಾ ಹಜಾರೆ ಹೇಳಿರುವುದು ಕುತೂಹಲಕಾರಿ. ಇದು ಅಣ್ಣಾ ಅವರ ಮುಂದಿನ ನಡೆಯನ್ನು ಸಾಂಕೇತಿಸುತ್ತದೆ ಅಲ್ಲವೆ…?

ರಾಹುಲ್ ಮಾತಿನಲ್ಲಿ ತಪ್ಪಿದೆಯೆ…?

ಸಂಸತ್ತಿನಲ್ಲಿ ‘ಲೋಕಪಾಲ್’ ಕುರಿತು ತಮ್ಮ ಅಭಿಪ್ರಾಯಗಳನ್ನು ರಾಹುಲ್ ಗಾಂಧಿ ಮುಕ್ತವಾಗಿ ಮಂಡಿಸಿದ್ದಾರೆ. ಗಂಭೀರ ಚರ್ಚೆಗೆ ಆಸ್ಪದ ನೀಡುವಂಥ ವಿಚಾರಗಳು ಇಲ್ಲಿವೆ. ಆದರೆ ಇದಕ್ಕೆ ಅಣ್ಣಾ ತಂಡ ಸ್ಪಂದಿಸಿರುವ ರೀತಿ ಕಳವಳಕಾರಿ. ರಾಹುಲ್ ಗಾಂಧಿ ಅವರನ್ನು ಭೇವಕೂಫ್ ಎಂದು ಜರಿಯಲಾಗಿದೆ. ತಾವು ಹೇಳಿದ್ದೆ ಅಂತಿಮ. ಇದಕ್ಕೆ ಯಾರೂ ಮರುಮಾತನಾಡದೆ ಒಪ್ಪಬೇಕು ಎಂಬ ಧೋರಣೆ ಪ್ರಜಾತಂತ್ರಕ್ಕೆ ಅಪಾಯಕಾರಿ. ಇಂಥ ನಿಲುವನ್ನು ಅಣ್ಣಾ ತಂಡ ಪ್ರದರ್ಶಿಸುತ್ತಿರುವುದು ಸರಿಯೆ…?

ಆಗಸ್ಟ್ 26ರಂದು ಸಂಸತ್ತಿನ ಶೂನ್ಯವೇಳೆಯಲ್ಲಿ ರಾಹುಲ್ ಗಾಂಧಿ ಮಾತನಾಡಲು ಎದ್ದು ನಿಂತಾಗ ಸಮಸ್ಯೆಯ ಆಳಕ್ಕೆ ಪಾತಾಳ ಗಾರುಡಿ ಹಾಕಿನೋಡುವಂಥ ವಿಚಾರ ಹೊರಹೊಮ್ಮಬಹುದೆಂದು ವಿಪಕ್ಷಗಳಿಗೆ ಅನಿಸಿರಲಾರದು. ಏಕೆಂದರೆ ಸಂಸತ್ತಿನ ಹೊರಗೆ-ಒಳಗೆ ಲೋಕಪಾಲ್ ಬಗ್ಗೆ ರಾಹುಲ್ ಗಾಂಧಿ ಮೂರ್ನಾಲ್ಕು ಪುಟಗಳಷ್ಟಿದ್ದ ಭಾಷಣದ ಪ್ರತಿ ಹಿಡಿದು ಓದಲು ನಿಂತಿದ್ದು ಇದೇ ಮೊದಲು. ಈ ಕಾರಣಕ್ಕಾಗಿಯೂ ಹೇಳಿಕೆ ಏನಿರಬಹುದು ಎಂಬ ಕುತೂಹಲವಿತ್ತು.  ನಿರಾಶೆಯೇನೂ ಆಗಲಿಲ್ಲ. ಸಂಸತ್ತಿನಲ್ಲಿ ಯುವ ರಾಜಕಾರಣಿಯ ವಿಚಾರಗಳನ್ನು  ಅರಿಯುವುದಕ್ಕೆ ಆಸ್ಪದವಾಯಿತು.
ರಾಹುಲ್ ಗಾಂಧಿ ಅವರ ಭಾಷಣದ ಸಾರಾಂಶ ವಾಸ್ತವಕ್ಕೆ ಕನ್ನಡಿ ಹಿಡಿದಿತ್ತು. ‘ಲೋಕಪಾಲ್ ಸಂಸ್ಥೆ ಒಂದರಿಂದಲೇ ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ. ಇದಕ್ಕಾಗಿ ಅತಿ ಪರಿಣಾಮಕಾರಿ ಕಾನೂನು ರಚನೆಯಾಗಬೇಕು. ಮುಖ್ಯವಾಗಿ ಭ್ರಷ್ಟಾಚಾರ ನಿರ್ಮೂಲನೆ, ರಾಜಕೀಯ ಪಕ್ಷಗಳ ಆದ್ಯತಾ ಕಾರ್ಯಕ್ರಮವಾಗಬೇಕು. ಇದಕ್ಕೆ ಎಲ್ಲ ಸ್ತರಗಳಿಂದಲೂ ಬೆಂಬಲ ದೊರೆಯಬೇಕು. ಮುಖ್ಯವಾಗಿ ರಾಜಕೀಯ ಪಕ್ಷಗಳಿಗೆ ಕಟಿಬದ್ಧತೆಯಿರಬೇಕು.

ಲೋಕಪಾಲ್ ಸಂಸ್ಥೆಯೆ ಭ್ರಷ್ಟವಾದರೆ ಗತಿಯೇನು…?

ಭ್ರಷ್ಟಾಚಾರ ನಿರ್ಮೂಲನೆಗೆ ಸರಳ-ಸುಲಭ ಸೂತ್ರವಿಲ್ಲ. ಒಂದೇ ಒಂದು ಮಸೂದೆ ರಾಷ್ಟ್ರದಲ್ಲಿನ ಭ್ರಷ್ಟಚಾರ ನಿರ್ಮೂಲನೆ ಮಾಡಿಬಿಡುತ್ತದೆ. ಭ್ರಷ್ಟಚಾರ ಮುಕ್ತ ಸಮಾಜ ಸೃಷ್ಟಿಯಾಗುತ್ತದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ನನಗೆ ಗಂಭೀರ ಸಂದೇಹವಿದೆ. ಒಂದು ವೇಳೆ ಲೋಕಪಾಲ್ ಸಂಸ್ಥೆಯೆ ಭ್ರಷ್ಟವಾದರೆ ಗತಿಯೇನು’ ಲೋಕಪಾಲ್ ಸಂಸ್ಥೆ ಯಾರಿಗೆ ಉತ್ತರದಾಯಿ ಆಗಿರಬೇಕು..? ಸ್ವಾಯತ್ತ ಚುನಾವಣಾ ಆಯೋಗದಂತೆ ಲೋಕಪಾಲ್ ಸಂಸ್ಥೆ ರಚಿಸಿ ಸಂಸತ್ತಿಗೆ ಉತ್ತರದಾಯಿ ಆಗಿರುವಂತೆ ಮಾಡಬೇಕು.

ಚುನಾವಣೆಗಾಗಿ ರಾಜಕೀಯ ಪಕ್ಷಗಳಿಗೆ ಸರಕಾರಿ ಸಹಾಯ ಧನ, ಸಾರ್ವಜನಿಕ ಆಡಳಿದಲ್ಲಿ ಪಾರದರ್ಶಕತೆ, ಭೂ ವ್ಯವಹಾರ-ಗಣಿಗಾರಿಕೆಯಂಥ ಉದ್ಯಮಗಳ ಮೇಲೆ ಸೂಕ್ತ ನಿಯಂತ್ರಣ, ಕಾಲನುಕಾಲಕ್ಕೆ ತೆರಿಗೆ ಪರಾಮರ್ಶೆ, ವೃದ್ಧಾಪ್ಯ ವೇತನ, ಸಾರ್ವಜನಿಕ ಪಡಿತರ ವಿಷಯಗಳ ಸಮರ್ಪಕ ನಿರ್ವಹಣೆ.

ಇಂಡಿಯಾದ ದೊಡ್ಡ ಸಾಧನೆಯೆಂದರೆ ಪ್ರಜಾಪ್ರಭುತ್ವ. ಹೊಸ ರಕ್ತ (ಯುವಕರು) ರಾಜಕೀಯಕ್ಕೆ-ಸಂಸತ್ತಿಗೆ ಬರಬೇಕು. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಮುಚ್ಚಿರುವ ತಮ್ಮ ಬಾಗಿಲುಗಳನ್ನು ತೆರೆಯಬೇಕು. ಇಂಥ ಬೆಳವಳಿಗೆಗಳು ತಳ ಸ್ತರದಲ್ಲಿಯೂ ಪ್ರಜಾಪ್ರಭುತ್ವವನ್ನು ಗಟ್ಟಿಯಾಗಿ ಬೇರೂರಿಸಲು ಸಹಾಯಕ.

ಇಂದು ಭ್ರಷ್ಟಚಾರ ವಿರೋಧಿ ಮಸೂದೆಗಾಗಿ ಒತ್ತಡ, ನಾಳೆ ಮತ್ತೊಂದು ಮಗದೊಂದು ವಿಷಯಕ್ಕೆ ಒತ್ತಡ ಉಂಟಾಗುತ್ತಲೇ ಇರಬಹುದು. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ‘

ರಾಹುಲ್ ಗಾಂಧಿ ಹೇಳಿಕೆಗಳ ಸಾರಾಂಶವಿದು. ಇದು ಕ್ರಮಬದ್ಧವಾಗಿಲ್ಲ. ನನ್ನ ನೆನಪಿಗೆ ಬಂದ ರೀತಿ ಕೆಲವು ಅಂಶಗಳನ್ನು ಇಲ್ಲಿ ನಮೂದಿಸಿದ್ದೇನೆ. ಮುಖ್ಯವಾಗಿ ಇಲ್ಲಿ ನಾವು ಗಮನಿಸಬೇಕಿರುವುದು ಲೋಕಪಾಲ್ ಉತ್ತರದಾಯಿತ್ವದ ಬಗ್ಗೆ. ಬಲಿಷ್ಠ ಸಂಸ್ಥೆಯೊಂದು ಸಂಸತ್ತಿಗೆ  ಉತ್ತರದಾಯಿ ಅಲ್ಲವೆಂದರೆ ಪ್ರಜಾಸತ್ತಾತ್ಮಕ ಸಂಸದೀಯ ವ್ಯವಸ್ಥೆಗೆ ಕಂಟಕಕಾರಿಯಾಗಲೂಬಹುದು. ಒಂದು ವೇಳೆ ಇಂಥ ಲೋಕಪಾಲ್ ಸಂಸ್ಥೆಯೆ ಭ್ರಷ್ಟವಾದರೆ ಗತಿಯೇನು ಎಂಬ ರಾಹುಲ್ ಆತಂಕವನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.

ರಾಷ್ಟ್ರದಲ್ಲಿ ಬೇರುಬಿಟ್ಟಿರುವ ಭ್ರಷ್ಟಚಾರ ನಿರ್ಮೂಲನೆಗೆ ಲೋಕಪಾಲ್ ಮಸೂದೆ ಮಂತ್ರದಂಡವಾಗಲು ಸಾಧ್ಯವಿಲ್ಲ. ಸಮಸ್ಯೆ ತುಂಬ ಸಂಕೀರ್ಣವಾಗಿದೆ. ಮುಖ್ಯವಾಗಿ ಚುನಾವಣ ವ್ಯವಸ್ಥೆ. ಈ ನಿಟ್ಟಿನಲ್ಲಿ ರಾಹುಲ್ ಸಲಹೆ ಸ್ವಾಗತಾರ್ಹ. ಇವೆಲ್ಲದರ ಜೊತೆಗೆ ಭ್ರಷ್ಟವಾಗದ ಯುವ ಸಮೂಹ ಸಕ್ರಿಯ ರಾಜಕೀಯಕ್ಕೆ ಬರಬೇಕಿದೆ. ಶಾಸನ ಸಭೆಗಳಿಗೂ ಪ್ರವೇಶ ಮಾಡಬೇಕಿದೆ. ಈ ದಿಶೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮುಕ್ತವಾಗಿದಷ್ಟು ಉತ್ತಮ.
 
ಭಾರತದ ದೊಡ್ಡ ಸುಂದರತೆಯೆ ಪ್ರಜಾಪ್ರಭುತ್ವ. ಏಕಮುಖ ಧೋರಣೆಗಳು-ಚರ್ಚೆಗೆ ಆಸ್ಪದ ನೀಡದ ಒತ್ತಡಗಳು ಇಂಥ ವ್ಯವಸ್ಥೆಗೆ ಅಪಾಯಕಾರಿ. ಈ ನಿಟ್ಟಿನಲ್ಲಿ ಚರ್ಚೆಗಳಾಗಿ ಬಲಿಷ್ಠವಾದ ಮತ್ತು ಸಂಸತ್ತಿಗೆ ಸದಾ ಉತ್ತರದಾಯಿ ಆಗಿರಬೇಕಾದ ಮಸೂದೆ ರಚನೆ; ತನ್ಮೂಲಕ ‘ಲೋಕಪಾಲ್’ ಸಂಸ್ಥೆ ಉದಯವಾಗಬೇಕು. ಆದರೆ ಇದಕ್ಕೆ ತದ್ವಿರುದ್ಧವಾಗಿ ಆಗುತ್ತಿರುವ ಬೆಳವಣಿಗೆ ಕಳವಳಕಾರಿ. ಇಂದು ರಾತ್ರಿ(ಆಗಸ್ಟ್ 26)ಯೊಳಗೆ ಚರ್ಚೆ ಮುಗಿಯಬೇಕು. ಮಸೂದೆಗೆ ಅಂಕಿತ ಬೇಳಲೇಬೇಕು. ಇಲ್ಲದಿದ್ದರೆ ಪರಿಸ್ಥಿತಿ ಸರಿಯಾಗುವುದಿಲ್ಲ ಎಂದು ಕಿರಣ್ ಬೇಡಿ ಹೇಳುತ್ತಾರೆ. ಅಣ್ಣಾ ಹಜಾರೆ ಅವರ ದೇಹಾರೋಗ್ಯ ವಿಷಯವನ್ನು ಮುಂದಿಟ್ಟುಕೊಂಡು ಸಂಸತ್ತಿನ ಮೇಲೆ ನಕಾರಾತ್ಮಕ ಒತ್ತಡ ಹಾಕಲು ಯತ್ನಿಸುತ್ತಾರೆ.

ಇನ್ನು ಅಣ್ಣಾ ತಂಡದ ಮತ್ತೋರ್ವ ಪ್ರಮುಖ ಸದಸ್ಯ ಪ್ರಶಾಂತ್ ಭೂಷಣ್ , ಚರ್ಚೆಗೆ ಆಸ್ಪದ ನೀಡುವಂಥ ಭಾಷಣ ಮಾಡಿದ ರಾಹುಲ್ ಗಾಂಧಿ ಅವರನ್ನು ಭೇವಕೂಫ್ ಎಂದು ಹೀಯಾಳಿಸುತ್ತಾರೆ. ಅರವಿಂದ್ ಕೇಜ್ರಿವಾಲ್ ಅಂತೂ ಮಾಧ್ಯಮಗಳು ಯಾವ ರೀತಿ ವರದಿ ಮಾಡಬೇಕು ಎಂಬುದನ್ನು ಪಾಠ ಮಾಡುತ್ತಾರೆ. ಈ ಸಂದರ್ಭದಲ್ಲಿ ಇವರ ಮಾತು-ಅಂಗಿಕ ಭಾಷೆ ಆಕ್ಷೇಪಾರ್ಹವಾಗಿತ್ತು. ಇದನ್ನು ಮಾಧ್ಯಮಗಳು ಪ್ರಶ್ನಿಸುವುದು ಸೂಕ್ತವಾಗಿತ್ತು.

 ನಿಜ. ಬಲಿಷ್ಠ ಲೋಕಪಾಲ್ ಅತ್ಯವಶ್ಯಕ. ಆದರೆ ಸಂಸತ್ತಿಗೆ ಪರ್ಯಾಯವಾದ ಲೋಕಪಾಲ್ ಬೇಕಿಲ್ಲ. ಇಂಥ ವ್ಯವಸ್ಥೆ ಎಂದಿಗೂ ಪ್ರಜಾತಂತ್ರಕ್ಕೆ ಕಂಟಕಕಾರಿ.

ಅಣ್ಣಾ ಹಠಮಾರಿತನವೇಕೆ…?

ರಾಷ್ಟ್ರದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರ ಹತ್ತಿಕ್ಕಲು ಸಮರ್ಥ ಲೋಕಪಾಲ್ ಬೇಕು. ಇದರಲ್ಲಿ ಎರಡು ಮಾತಿಲ್ಲ. ಈ ನಿಟ್ಟಿನಲ್ಲಿ ಹೋರಾಡುತ್ತಿರುವ ಅಣ್ಣಾ ಹಜಾರೆ ಅಭಿನಂದನೀಯರು. ಆದರೆ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆ ಗಮನಿಸಿದರೆ ಅಣ್ಣಾ ಅವರು ಅನಗತ್ಯ ಹಠಮಾರಿತನ ತೋರುತ್ತಿದ್ದರೆ ಎನಿಸುತ್ತದೆ. ಇಂಥ ಧೋರಣೆ ಹಿಂದೆ ಕಾಣದ ಶಕ್ತಿಗಳ ಕೈವಾಡವಿದೆಯೆ ಎಂಬ ಶಂಕೆ ಒಂದು ಕ್ಷಣವಾದರೂ ಉದ್ಭವಿಸದೇ ಇರದು. ಹಠಮಾರಿತನವೇಕೆ ಅಣ್ಣಾ….?
ರಾಮಲೀಲಾ ಮೈದಾನದಲ್ಲಿ ಅಣ್ಣಾ ಉಪವಾಸ ಸತ್ಯಾಗ್ರಹ ಆರಂಭಿಸಿದ 6ನೇ ದಿನದಿಂದಲೇ ಕೇಂದ್ರ ತನ್ನ ನಿಲುವಿನಲ್ಲಿ ರಾಜಿ ಮಾಡಿಕೊಳ್ಳುತ್ತಾ ಸಾಗಿತು. ಖುದ್ದು ಪ್ರಧಾನಿ ಮಾತುಕಥೆಗೆ ಆಹ್ವಾನ ನೀಡಿದರು. ಆಗಸ್ಟ್ 23ರಂದೇ ಉಪವಾಸ ಸತ್ಯಾಗ್ರಹ ಸ್ಥಗಿತಗೊಳಿಸಲು ಮನವಿ ಮಾಡಿದರು. ಅತ್ಯುತ್ತಮ ಮಸೂದೆ ತರಲು ಬದ್ಧವಾಗಿರುವುದಾಗಿ ತಿಳಿಸಿದರು. ಅಣ್ಣಾ ತಂಡದ ಅರವಿಂದ ಕೇಜ್ರಿವಾಲಾ, ಕಿರಣ್ ಬೇಡಿ ಮತ್ತು ಪ್ರಶಾಂತ್ ಭೂಷಣ್ ಅವರೊಂದಿಗೆ ಕೇಂದ್ರದ ಹಿರಿಯ ಸಚಿವರಾದ ಅರ್ಥ ಸಚಿವ ಪ್ರಣವ್ ಮುಖರ್ಜಿ, ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರು ಚರ್ಚಿಸಿದರು.
ಪ್ರಧಾನ ಮಂತ್ರಿಯನ್ನು ಲೋಕಪಾಲ್ ವ್ಯಾಪ್ತಿಗೆ ತರಲು ಯಾವುದೇ ಅಭ್ಯಂತರವಿಲ್ಲ. ಸಂಸತ್ ಸದಸ್ಯರ ಮೇಲಿನ ಆರೋಪಗಳನ್ನು ಲೋಕಪಾಲ್ ತನಿಖೆಗೆ ವಹಿಸಲು ಸಿದ್ಧ. ಸಿಬಿಐ ಅಂಗವಾಗಿರುವ ಭ್ರಷ್ಟಚಾರ ವಿರೋಧಿ ಘಟಕವನ್ನು ಲೋಕಪಾಲ್ ವಿಚಕ್ಷಣೆ ತರಲು ಒಪ್ಪಿಗೆಯಿದೆ ಎಂಬ ಮಾಹಿತಿಯನ್ನು ಕೇಂದ್ರ ಸರಕಾರ ಅಣ್ಣಾ ತಂಡಕ್ಕೆ ಹೇಳಿತು. ನಾಗರಿಕ ಸನ್ನದು ರಚನೆ, ಕೇಂದ್ರದ ಕಿರಿಯ ಶ್ರೇಣಿ ಅಧಿಕಾರಿಗಳನ್ನು ಲೋಕಾಪಾಲ್ ವ್ಯಾಪ್ತಿಗೆ ತರುವುದು ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತ ರಚನೆ ಕುರಿತ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಉಳಿದುಕೊಂಡಿತು. ಆದರೆ ಈ ವಿಷಯಗಳಲ್ಲಿಯೂ ಚರ್ಚೆಯ ಬಾಗಿಲನ್ನು ಕೇಂದ್ರ ಮುಚ್ಚಲಿಲ್ಲ ಎಂಬುದು ಗಮನಾರ್ಹ. ನ್ಯಾಯಾಂಗದ ಮೇಲೆ ಆರೋಪ ಬಂದರೆ ತನಿಖೆ ನಡೆಸುವ ಸಂಬಂಧ ಪ್ರತ್ಯೇಕ ಮಸೂದೆ ಅನುಷ್ಠಾನಗೊಳಿಸುವುದಾಗಿಯೂ ತಿಳಿಸಲಾಯಿತು.
ಚರ್ಚೆಯ ಈ ಹಂತದಲ್ಲಿ ಕೇಂದ್ರ ಒಪ್ಪಿಗೆ ಸೂಚಿಸಿದ ಅಂಶಗಳು ಭಾರಿ ಮಹತ್ವವಿರುವಂಥ ವಿಚಾರಗಳು. ಇಷ್ಟಾದರೂ ಅಣ್ಣಾ ಮತ್ತು ತಂಡ ತನ್ನ ಹಠಮಾರಿತನ ಧೋರಣೆ ಬಿಡಲಿಲ್ಲ. ಆಗಸ್ಟ್ 24ರಂದು ಸಂಜೆ ನವದೆಹಲಿಯಲ್ಲಿ ನಡೆದ ಸರ್ವಪಕ್ಷಗಳ ಸಭೆ ಒಮ್ಮತದ ನಿರ್ಣಯಕ್ಕೆ ಬರಲು ವಿಫಲವಾಯಿತು. ಅಣ್ಣಾ ತಂಡ ರೂಪಿಸಿದ ಜನಲೋಕಪಾಲ್ ಸರ್ವಸಮ್ಮತ ಎಂದು ಬಿಜೆಪಿಯೂ ಸೇರಿದಂತೆ ಯಾವುದೇ ಪಕ್ಷಗಳೂ ಹೇಳಲಿಲ್ಲ. ಸೂಕ್ಷ್ಮ ಸಂದರ್ಭಗಳಲ್ಲಿ ಪ್ರಧಾನ ಮಂತ್ರಿಯನ್ನು ಲೋಕಪಾಲ್ ವ್ಯಾಪ್ತಿಗೆ ಒಳಪಡಿಸಬಾರದು ಎಂದ ಬಿಜೆಪಿಯ ಅರುಣ್ ಜೇಟ್ಲಿ ಯಾವುದು ಸೂಕ್ಷ್ಮ-ಅಸೂಕ್ಷ್ಮ ಎಂದು ನಿರ್ಣಯಿಸುವವರು ಯಾರು, ವಿನಾಯತಿ ಯಾರು ನೀಡಬೇಕು ಎಂಬ ಬಗ್ಗೆ ತುಟಿ ಬಿಚ್ಚಲಿಲ್ಲ. ಸುಷ್ಮಾ ಸ್ವರಾಜ್ ಅವರು ಕೇಂದ್ರ ರೂಪಿಸಿರುವ ಮಸೂದೆ ಸರಿಯಲ್ಲ ಎಂದು ಹೇಳಿದರೆ ಹೊರತು ಅಣ್ಣಾ ತಂಡದ ಜನಲೋಕಪಾಲ್ ಶಕ್ತ ಎಂದೇನೂ ಹೇಳಲಿಲ್ಲ. ಇಷ್ಟಾದರೂ ಸರ್ವಪಕ್ಷಗಳ ಸಭೆ ಒಂದು ವಿಚಾರದಲ್ಲಿ ಒಮ್ಮತಕ್ಕೆ ಬರಲು ಯಶಸ್ವಿಯಾಯಿತು…! ಅದು ಅಣ್ಣಾ ಹಜಾರೆ ಅವರು ತಮ್ಮ ಉಪವಾಸ ಸತ್ಯಾಗ್ರಹ ಸ್ಥಗಿತಗೊಳಿಸಬೇಕು ಎಂಬುದು. ಈ ಸಂದೇಶವನ್ನು ಅಣ್ಣಾ ಅವರಿಗೆ ತಲುಪಿಸಲಾಯಿತು. ಆದರೂ ಅಣ್ಣಾ ಮತ್ತು ತಂಡ ತಮ್ಮ ಧೋರಣೆ ಸಡಿಲಿಸಲಿಲ್ಲ.
 ಆಗಸ್ಟ್ 25ರಂದು ಸಂಸತ್ತಿನಲ್ಲಿ ಪ್ರಧಾನ ಮಂತ್ರಿ ಅವರು ಅಣ್ಣಾ ತಂಡದ ಒತ್ತಾಯಗಳನ್ನು ಸಂಪೂರ್ಣ ಪರಿಶೀಲಿಸುವುದಾಗಿ ಮತ್ತು ಸಮರ್ಥ ಲೋಕಪಾಲ್ ಮಸೂದೆ ಮಂಡಿಸುವುಕ್ಕೆ ಕಟಿಬದ್ಧವಾಗಿರುವುದಾಗಿ ತಿಳಿಸಿದರು. ಜೊತೆಗೆ ಅಣ್ಣಾ ಅವರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಉಪವಾಸ ಹಿಂದೆಗೆದುಕೊಳ್ಳಲು ಮನವಿ ಮಾಡಿದರು. ಕೇಂದ್ರದ ಮನವಿಯನ್ನು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ವಿಲಾಸ್ ರಾವ್ ದೇಶಮುಖ್ ಖುದ್ದು ತಲುಪಿಸಿದರು. ಈ ಬಳಿಕವೂ ಮತ್ತೆ ತೆರಳಿ ಕೇಂದ್ರದ ಲಿಖಿತ ಭರವಸೆಯನ್ನೂ ನೀಡಿದರು. ಆಗಸ್ಟ್ 26 ರಂದು ಸಂಸತ್ತಿನಲ್ಲಿ ಈ ವಿಷಯಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಲಾಯಿತು.
ಸಂಸತ್ತಿನಲ್ಲಿ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಕೂಡ ಉಪವಾಸ ಸತ್ಯಾಗ್ರಹ ನಿಲ್ಲಿಸುವಂತೆ ಅಣ್ಣಾ ಅವರಿಗೆ ಮನವಿ ಮಾಡಿದರು. ಇವೆಲ್ಲಕ್ಕಿಂತಲೂ ಮಿಗಿಲಾಗಿ ಲೋಕಸಭಾ ಅಧ್ಯಕ್ಷರಾದ ಮೀರಾ ಕುಮಾರ್ ಅವರು ತಮ್ಮ ಕುರ್ಚಿಯಿಂದ ಎದ್ದು ನಿಂತು ಅಣ್ಣಾ ಅವರ ಬದ್ಧತೆ ಶ್ಲಾಘಿಸಿದರು. ಉಪವಾಸ ಸತ್ಯಾಗ್ರಹ ನಿಲ್ಲಿಸುವಂತೆ ಮನವಿ ಮಾಡಿದರು. ಈ ಎಲ್ಲ ಮಾಹಿತಿಗಳು ಸರಸರನೆ ಅಣ್ಣಾ ಅವರಿಗೆ ತಲುಪುತ್ತಿದದ್ದು ಸ್ಪಷ್ಟವಾಗುತ್ತಿತ್ತು. ಆದರೆ ಈ ಬಳಿಕ ಮಾತನಾಡಿದ ಅಣ್ಣಾ ಉಪವಾಸ ಸತ್ಯಾಗ್ರಹ ನಿಲ್ಲಿಸುವುದಿಲ್ಲವೆಂದು ಘೋಷಿಸಿದರು.
ಸರ್ವಪಕ್ಷಗಳ ಸಭೆ ನಂತರ ಸಂಸತ್ತು ಒಕ್ಕೊರಲಿನಿಂದ ಮನವಿ ಮಾಡಿಕೊಂಡ ನಂತರವೂ ಅಣ್ಣಾ ಮತ್ತು ತಂಡ ತಮ್ಮ ಧೋರಣೆಗೆ ಅಂಟಿಕೊಂಡಿರುವುದು ಏನನ್ನು ತೋರಿಸುತ್ತದೆ. ಇವರು ಪ್ರಜಾಪ್ರಭುತ್ವದ ಅತ್ಯುನ್ನತ ಸಂಸ್ಥೆಯಾದ ಸಂಸತ್ತಿನ ಮೇಲೆ ಸವಾರಿ ಮಾಡಲು ಹೊರಟಿದ್ದಾರೆಂದೆ ತಾನೆ. ಇಂಥ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಟಕಕಾರಿಯಲ್ಲವೆ. ಕೇಂದ್ರ ತಗ್ಗಿದ ನಂತರವೂ ಗುದ್ದುತ್ತಲೇ ಇರುವ ಅಣ್ಣಾ ಮತ್ತು ತಂಡದ ನಿಲುವು ನೋಡಿದರೆ ಇವರ ಹಿಂದೆ ಕಾಣದ ಶಕ್ತಿಗಳ ಕೈವಾಡವಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತದೆಯಲ್ಲವೆ….?

ಕಾಸರಗೋಡು ಕನ್ನಡ ; ಕೇರಳ ಮುಖ್ಯಮಂತ್ರಿ ಹೇಳಿದೇನು….?

ಇದೇ ಆಗಸ್ಟ್ 22ರಂದು ಕಾಸರಗೋಡಿನಲ್ಲಿ ಕನ್ನಡ ಹಿತರಕ್ಷಣಾ ಸಮಿತಿಯವರ ಭೇಟಿ. ಅಲ್ಲಿನ ಕನ್ನಡ-ಕನ್ನಡಿಗರ ಸ್ಥಿತಿಗತಿ ಬಗ್ಗೆ ಚರ್ಚೆ.  ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕೆಂದು ಅವರು ಸತತವಾಗಿ ನಡೆಸುತ್ತಿರುವ ಹೋರಾಟ ಅಪಾರ. ಈ ಸಲುವಾಗಿಯೆ ಬೇರೆಬೇರೆ ಹೆಸರಿನ ಕನ್ನಡ ಸಂಘಟನೆಗಳವರು ಒಟ್ಟಾಗಿ ‘ಕಾಸರಗೋಡು ಕನ್ನಡ ಹಿತರಕ್ಷಣಾ ಸಮಿತಿ ರಚಿಸಿಕೊಂಡಿದ್ದಾರೆ. ಈ ಸಮಿತಿಯವರು ಇತ್ತೀಚೆಗೆ 'ಕನ್ನಡಿಗರು ಮಲೆಯಾಳ ಕಡ್ಡಾಯ ಕಲಿಯಲೇಬೇಕೆಂಬ ಆದೇಶ' ಹಿಂಪಡೆಯಲು ಒತ್ತಾಯಿಸಿ ಕೇರಳ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದರು. ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದಾದರೂ ಏನು…?
ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ನ್ಯಾಯಸಮ್ಮತ ಆಗ್ರಹ ಪತ್ರ ಸಲ್ಲಿಸುತ್ತಿರುವ ಕಾಸರಗೋಡು ಕನ್ನಡಿಗರ ನಿಯೋಗ
ಶಾಸಕರಾದ ನೆಲ್ಲಿಕುನ್ನು, ಅಬ್ದುಲ್ ರಜಾಕ್ ಅವರೊಂದಿಗೆ ನಿಯೋಗದ ಸದಸ್ಯರಾದ ಬಿ. ಸುಬ್ಬಯ್ಯ ರೈ, ಕೇಶವ ಪ್ರಸಾದ್ ನಾಣಿತ್ತಲು, ಜಿ.ಕೆ.ಶೆಟ್ಟಿ, ಸಂಜೀವ ರೈ ಕಾಟುಕುಕ್ಕೆ, ರವೀಂದ್ರ ಮಾಸ್ತರ್, ವಕೀಲ ಮುರುಳೀಧರ ಬಳ್ಳೋಕರಾಯರು, ಎಸ್.ವಿ. ಭಟ್, ಸತೀಶ್ ಮಾಸ್ಟರ್ ಮತ್ತು ಸುಭಾಷ್ ಪಟ್ಟಾಜೆ
 ‘ಕಾಸರಗೋಡಿನ ಕನ್ನಡಿಗ ವಿದ್ಯಾರ್ಥಿಗಳು ಮಲೆಯಾಳ ಕಡ್ಡಾಯ ಕಲಿಯಲೇಬೇಕೆಂಬ ಆದೇಶಕ್ಕೆ ಮಣಿದರೆ ಕನ್ನಡ ಸಂಸ್ಕೃತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಇಂಥ ಪರಿಸ್ಥಿತಿ ಉಂಟಾಗದಂತೆ ಕಾಸರಗೋಡಿನ ಕನ್ನಡಿಗರೆಲ್ಲರೂ ಒಂದಾಗಿ ಹೋರಾಟ ನಡೆಸಬೇಕಾದ ಅನಿರ್ವಾಯತೆಯಿದೆ’ ಇದು ಯುವ ವಕೀಲ, ಕಾಂಗ್ರೆಸಿನ ಮುಖಂಡ ಬಿ. ಸುಬ್ಬಯ್ಯ ರೈ ಅವರ  ಮಾತು. ಕೇರಳ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮುಂದಿನ ನಡೆ ನಿರ್ಧರಿಸುವ ಸಲುವಾಗಿ ಕಾಸರಗೋಡಿನ ಕನ್ನಡ ಅಧ್ಯಾಪಕರ ಭವನದಲ್ಲಿ ನಡೆದ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಅವರ ಮಾತುಗಳು ಹೋರಾಟದ ಮುಂದಿನ ಹೆಜ್ಜೆಗಳು ಹೇಗಿರಬೇಕು ಎಂಬುದನ್ನು ಖಚಿತವಾಗಿ ವಿವರಿಸುತ್ತಿದ್ದವು.

ವಕೀಲ ಬಿ. ಸುಬ್ಬಯ್ಯ ರೈ
 ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗೈ ಯುವ ಮುಖಂಡ ಕೇಶವ ಪ್ರಸಾದ್ ಅವರದು ಒಗ್ಗಟ್ಟಿನ ಮಂತ್ರ. ಬಿಡಿಬಿಡಿಯಾಗಿ ಹೋರಾಟಕ್ಕೆ ನಿಂತರೆ ಕೇರಳ ರಾಜಕಾರಣಿಗಳು ಇದರ ಫಾಯಿದೆ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಕಾಸರಗೋಡಿನಲ್ಲಿ ಕನ್ನಡ ಮತ್ತು ಕನ್ನಡ ಸಂಸ್ಕೃತಿ ಉಳಿಯಬೇಕಾದರೆ ಒಂದೇ ವೇದಿಕೆಯಡಿ ಹೋರಾಟಬೇಕಾದ ಅವಶ್ಯಕತೆಯನ್ನು ವಿವರಿಸಿದರು. ಸಭೆಯಲ್ಲಿದ್ದ  ಹಿರಿಯರು ಸಹ ಇವರಿಬ್ಬರ ಮಾತುಗಳಿಗೆ ತಲೆದೂಗಿದರು.
ಯುವ ಮುಖಂಡ ಕೇಶವ ಪ್ರಸಾದ್ ಹಾಗೂ ಮತ್ತಿತರ ಮುಖಂಡರು
  ಕಾಸರಗೋಡು  ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಎಸ್.ವಿ.ಭಟ್ ಅವರು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಭೇಟಿ ಕಾರ್ಯಕ್ರಮದ ಬಗ್ಗೆ ವಿವರವಾಗಿಯೇ ಹೇಳಿದರು. ಯುವ ರಾಜಕಾರಣಿಗಳಾದ ಬಿ. ಸುಬ್ಬಯ್ಯ ರೈ , ಕೇಶವ ಪ್ರಸಾದ್ ಮತ್ತು ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಪಿ.ಕೆ. ಅಬ್ದುಲ್ ರಜಾಕ್ ಅವರ ಸತತ ಪ್ರಯತ್ನಗಳಿರದೇ ಇದ್ದರೆ ಮುಖ್ಯಮಂತ್ರಿಯಿಂದ ಸಕಾರಾತ್ಮಕ ಭರವಸೆ ಪಡೆಯಲು ಆಗುತ್ತಿರಲಿಲ್ಲ ಎಂದರು.

ಕಾಸರಗೋಡಿನಲ್ಲಿ ಮಲೆಯಾಳಮ್ ಅನ್ನು ಬೇರೂರಿಸಬೇಕೆಂದು ಸತತವಾಗಿ ಪ್ರಯತ್ನಿಸುತ್ತಿರುವುದು ರಾಜಕೀಯದವರಿಗಿಂತಲೂ ಅಲ್ಲಿನ ಅಧಿಕಾರಿಶಾಹಿ. ಶಾಸಕರಿಬ್ಬರ ನೇತೃತ್ವದಲ್ಲಿ ಕಾಸರಗೋಡು ಕನ್ನಡ ಹಿತರಕ್ಷಣಾ ಸಮಿತಿ ನಿಯೋಗದೊಂದಿಗೆ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಸಮಾಧಾನವಾಗಿ ಚರ್ಚಿಸಿ, ಕನ್ನಡಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಕೇರಳ ಶಿಕ್ಷಣ ಇಲಾಖಾ ಕಾರ್ಯದರ್ಶಿ ಶಿವಶಂಕರ್ ಅವರನ್ನು ಕರೆದು ಕನ್ನಡಿಗರ ನಿಯೋಗದೊಂದಿಗೆ ವಿವರವಾಗಿ ಚರ್ಚಿಸಲು ತಿಳಿಸಿದರು. ಶಿಕ್ಷಣ ಖಾತೆ ಸಚಿವ ಅಬ್ದುರಬ್ ಅವರಿಂದಲೂ ನಿಯೋಗಕ್ಕೆ ಸಕಾರಾತ್ಮಕ ಭರವಸೆ ದೊರೆಯಿತು.

ಕಾರ್ಯದರ್ಶಿ ಶಿವಶಂಕರ್, ತಮ್ಮೆದುರು ಕುಳಿತ ಕನ್ನಡ ನಿಯೋಗದ ಸದಸ್ಯರೊಂದಿಗೆ ಮಲೆಯಾಳ ಕಲಿಕೆ ಅತ್ಯವಶ್ಯಕವೆಂದು ಹೇಳಿ ಮನವೊಲಿಸಲು ಪ್ರಯತ್ನಿಸಿದರು. ಈ ನಿಟ್ಟಿನಲ್ಲಿ ಯಾರಿಗೂ ಯಾವುದೇ ತೊಂದರೆ-ಆತಂಕ ಉಂಟಾಗದಂತೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. ಇಂಥ ಮಾತಿನ ಪಟ್ಟುಗಳಿಗೆ ಕನ್ನಡಿಗರು ಸಮರ್ಪಕವಾಗಿ ಪ್ರತಿಪಟ್ಟು ಹಾಕಿದ ನಂತರವೇ ಅವರು ಸುಮ್ಮನಾಗಿದ್ದು. 2011-12ರ ಶೈಕ್ಷಣಿಕ ವರ್ಷದಲ್ಲಿ ಮಲೆಯಾಳ ಕಡ್ಡಾಯ ಕಲಿಕೆಯಿಲ್ಲ. ಮುಂದೆಯೂ ಸಹ ಕನ್ನಡಿಗ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದ ರೀತಿ ಕ್ರಮ ತೆಗೆದುಕೊಳ್ಳುವುದಾಗಿ ಅವರು ನೀಡಿದ ಭರವಸೆ ಹೊತ್ತ ನಿಯೋಗ ಕಾಸರಗೋಡಿಗೆ ಮರಳಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ವಿ.ಭಟ್ ಮಾತನಾಡುತ್ತಿರುವುದು. ಹಿತರಕ್ಷಣಾ ಸಮಿತಿ ಸಂಚಾಲಕ ಜಿ.ಕೆ.ಶೆಟ್ಟಿ ಚಿತ್ರದಲ್ಲಿದ್ದಾರೆ

‘ಭರವಸೆಯನ್ನು ನಂಬಿ ಕೂರಲು ಸಾಧ್ಯವಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು.ಮುಂದೆ ಯಾವ ರೂಪದ ಆದೇಶಗಳು ಬರುತ್ತವೋ ಏನು. ಪ್ರತಿಕೂಲ ಆದೇಶ ಬಾರದಂತೆ ಮುಂಜಾಗ್ರತೆಯಿಂದಿರುವುದು ಸೂಕ್ತ’ ಎಂಬ ಅಭಿಪ್ರಾಯ  ವ್ಯಕ್ತವಾದವು. ಮುಖ್ಯವಾಗಿ ಕಾಸರಗೋಡು ಶಾಸಕ ನೆಲ್ಲಿಕುನ್ನು ಮತ್ತು ಮಂಜೇಶ್ವರ ಶಾಸಕ ಅಬ್ದುಲ್ ರಜಾಕ್ ಅವರ ಸಹಕಾರದ ಬಗ್ಗೆ ಸಭೆಯಲ್ಲಿ ಮುಕ್ತ ಶ್ಲಾಘನೆಯಾಯಿತು. ಈ ಇಬ್ಬರು ಶಾಸಕರ ಮನೆಭಾಷೆ ಮಲೆಯಾಳವಾದರೂ ಸಹ ಕನ್ನಡ ಸಂಸ್ಕೃತಿಯಲ್ಲಿ ಬೆಳೆದವರು. ಇಂಥ ಸಂಸ್ಕೃತಿ ಉಳಿಸಿಕೊಳ್ಳಬೇಕೆಂಬ ಇರಾದೆಯೂ ಇವರಿಗಿದೆ ಎಂಬುದು ಇವರ ಇದುವರಿಗಿನ ನಡವಳಿಕೆಗಳಿಂದ ಗೊತ್ತಾಗಿದೆ.

ಕಾಸರಗೋಡಿನ ಕನ್ನಡಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆಯೇನೋ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಂದ ದೊರಕಿದೆ. ಆದರೆ ನಿಜಕ್ಕೂ ಅಲ್ಲಿ ನಡೆಯುತ್ತಿರುವುದೇನು….? ಕೇರಳ ಸರಕಾರದ ಹೆಜ್ಜೆಗಳು ಯಾವ ರೀತಿ ಇವೆ…? ಆತಂಕಕಾರಿಯಾದ ವಿವರಗಳನ್ನು ಮುಂದೆ ನೋಡೋಣ.

ಕಾಸರಗೋಡು ಕನ್ನಡಿಗರ ದನಿಗೆ ಕಿವಿಗೊಡಿ…!

ಅನ್ಯಾಯವಾಗಿ ಕೇರಳಕ್ಕೆ ಸೇರಿರುವ ಕಾಸರಗೋಡಿನ ಕನ್ನಡಿಗರ ಮೂಗಿನವರೆಗೂ ಮಲೆಯಾಳಿ ಮುಳುಗು ನೀರು ಬಂದಿದೆ. ಇದನ್ನು ಪ್ರತಿಭಟಿಸದಿದ್ದರೆ ಇಲ್ಲಿ ಕನ್ನಡ ಸಂಪೂರ್ಣ ಮುಳುಗಿ ಹೋಗುತ್ತದೆ ಎಂದು ಅಲ್ಲಿನ ಕನ್ನಡಿಗರು ಅರಿತಿದ್ದಾರೆ. ಪ್ರತಿಭಟನೆಗಳನ್ನು ತೀವ್ರಗೊಳಿಸಿದ್ದಾರೆ. ಈ ಕುರಿತ ವಿವರಕ್ಕೆ ತೆರಳುವ ಮುನ್ನ ಕೆಲ ದಿನಗಳ ಹಿಂದೆ  'ಸಂಕಥೆ' ಯಲ್ಲಿ ಪ್ರಕಟವಾದ ಕನ್ನಡದ ಕತ್ತು ಹಿಚುಕುತ್ತಿರುವ ಕೇರಳ ಸರಕಾರ…!? ಲೇಖನಕ್ಕೆ ಬಂದ ಪ್ರತಿಕ್ರಿಯೆಗಳನ್ನು ಗಮನಿಸಿ. ಕಾಸರಗೋಡು ನಿವಾಸಿಗಳ ನೋವು ವ್ಯಕ್ತವಾಗಿದೆ. ಇದಲ್ಲದೆ  ಸಮಸ್ಯೆಯ ತಳಸ್ಪರ್ಶಿ ಅರಿವು ಇಲ್ಲದವರು ನೀಡಿದ ಅಭಿಪ್ರಾಯಗಳಿವೆ


Anand Shetty said...
1.ಇನ್ನಾದರೂ ಕನ್ನಡಿಗರೆಲ್ಲ ಎಚ್ಚೆತ್ತುಕೊಳ್ಳಬೇಕು, ನಮ್ಮ ಸರ್ಕಾರವು ಎಚ್ಚೆತ್ತುಕೊಂಡು ಸ್ವಲ್ಪ ಗಮನಹರಿಸಬೇಕಿದೆ.
Anonymous said...
2. ಮಲಯಾಳ ಭಾಷೆ, ಸಾಹಿತ್ಯದ ಬಗ್ಗೆ ನನಗೆ ಗೌರವವಿದೆ. ಕಾಸರಗೋಡಿನ ಹಳೆಯ ತಲೆಮಾರಿನ ಮತ್ತು ಇಂದಿನ ಹಲವರು ಸ್ಥಳೀಯ ಮಲಯಾಳಿಗಳು ಇಲ್ಲಿನ ತುಳು ಕನ್ನಡ ಮೊದಲಾದ ಸ್ಥಳೀಯ ಸಾಂಸ್ಕೃತಿಕ ವೈವಿಧ್ಯವನ್ನು ಗೌರವಿಸುತ್ತಾರೆ.ಆದರೆ ವಲಸೆ ಬಂದ ಬರುತ್ತಿರುವ ತೆಂಕಣದ ಮಲಯಾಳಿಗಳಿಗೆ ಕಾಸರಗೋಡಿನ ಬಗ್ಗೆ ಪ್ರೀತಿ ಇಲ್ಲ.ಇಲ್ಲಿನ ಭಾಷಾ ಸಾಮರಸ್ಯವನ್ನು ನಾಶ ಮಾಡುವವರು ಅವರೇ .ಇವರಲ್ಲಿ ಭಾಷಾಂಧ ಅಧಿಕಾರಿಗಳು ಸ್ಥಳೀಯ ಭಾಷೆ ಸಂಸ್ಕೃತಿಗಳನ್ನು ಕೀಳಾಗಿ ಕಾಣುತ್ತಾರೆ.ಸ್ತಳೀಯ ಭಾಷೆಗಳನ್ನು ಕಲಿಯುವುದೂ ಇಲ್ಲ.ಮಲಯಾಳದ ಬಲಾತ್ಕಾರ ಹೇರಿಕೆಯಿಂದ ಕನ್ನಡಕ್ಕೆ ಮಾತ್ರ ಅಪಾಯ ಅಲ್ಲ.ಕಾಸರಗೋಡನ್ನು ಕಳೆದು ಕೊಂಡರೆ ಕರ್ನಾಟಕದ ಕನ್ನಡಿಗರಿಗಿಂತಲೂ ತುಳುವರಿಗೆ ಹೆಚ್ಚು ನಸ್ಟ. ಚಂದ್ರಗಿರಿ ನದಿಯಾಚೆ ತುಳು ಕೊಂಕಣಿ ಭಾಷೆಗಳು ಮಲಯಾಳದ ಪ್ರಭಾವದಿಂದ ಹೆಚ್ಚು ಕಡಿಮೆ ಅಳಿದು ಹೋಗಿವೆ.ಕನ್ನಡ ಪ್ರಭಾವವಿರುವ ಉತ್ತರ ಕಾಸರಗೋಡು, ಮಂಜೇಶ್ವರ ದಕ್ಷಿಣ ಕನ್ನಡ ಉಡುಪಿಗಳಲ್ಲಿ ತುಳು ವ್ಯಾವಹಾರಿಕವಾಗಿ ಉಳಿದಿದೆ. ಮಲಯಾಳ ಪರ್ಥೆನಿಯಂ ಗಿಡದ ಹಾಗೆ. ಅದು ಇರುವಲ್ಲಿ ಬೇರೆ ಭಾಷೆಗಳು ಮರೆಯಾಗುತ್ತವೆ. ತೆಂಕಣದ ಮಲಯಾಳಿಗಳು ಇತರ ಭಾಷೆ ಕಲಿಯುವುದಿಲ್ಲ.ಇತರ ಸಂಸ್ಕೃತಿಗಳ ಜತೆ ಹೊಂದಾಣಿಕೆ ಇರದ ಹಟಮಾರಿಗಳು. ಕಾಸರಗೋಡಿನ ಬಹುಭಾಷೆ ಸಾಂಸ್ಕೃತಿಕ ವೈವಿಧ್ಯ ಜಾನಪದ ಐತಿಹ್ಯ ವಿಶಿಸ್ತತೆ ನಾಶವಾಗಲು ಇನ್ನು ಹೆಚ್ಚು ಕಾಲ ಬೇಡ.ತುಳು ಅಕಾಡಮಿ ಒಂದು ಮೋಸ ಮತ್ತು ಕನ್ನಡಿಗ-ತುಳುವರನ್ನು ಒಡೆಯುವ ತಂತ್ರ.ಇದೀಗ ಉರ್ದು, ಕನ್ನಡ ಕೊಂಕಣಿ ಅಕಾಡಮಿ ಗಳಿಗೆ ಬೇಡಿಕೆ ಬರುತ್ತಿದೆ. ಅಕಾಡಮಿ ಗಳಿಂದ ಸಾಮಾನ್ಯ ಕನ್ನಡಿಗ ತುಳು ಕೊಂಕಣಿ ಉರ್ದು ಭಾಷಿಗರ ಕನ್ನಡ ಕಲಿತವರ ಶೈಕ್ಷಣಿಕ ಔದ್ಯೋಗಿಕ ವ್ಯಾವಹಾರಿಕ ಸಮಸ್ಯೆಗಳು ಬಗೆಹರಿಯುವುದಿಲ್ಲ.ಮಲಯಾಳ ಹೇರಿಕೆಯಿಂದ ಕನ್ನಡ ಶಾಲೆಗಳು ಕನ್ನಡ ಕಲಿತವರ ಉದ್ಯೋಗಾವಕಾಶ ಕ್ರಮೇಣ ಕೊನೆಗೊಳ್ಳುತ್ತದೆ.ವಿದ್ಯರ್ತಿಗಳಿಗೆ ಸಮಸ್ಯೆಯಾಗುತ್ತದೆ. ಕನ್ನಡ ಶಾಲೆಗಳಿಗೆ ಕನ್ನಡದ ಗಂಧಗಾಳಿ ಇಲ್ಲದ ಅಧ್ಯಾಪಕರನ್ನು ನೆಮಿಸುತ್ತಿರುವ ಕೇರಳ ಸರಕಾರ ಕನ್ನಡ ಶಾಲೆಗಳನ್ನು ನಿರ್ನಾಮ ಮಾಡಲು ಸಂಚು ಹೂಡಿದೆ
3. ಏಕಿಕರಣ ಹೋರಾಟದಲ್ಲಿ ಮೂಚೂಂಣಿಯಲ್ಲಿದ್ದ ಕಾಸರಗೋಡು ಕನ್ನಡಿಗರ ನೋವು ಈಗ ಅರಣ್ಯ ರೋದನವಾಗಿದೆ.ಇದೀಗ ಯಾವ ಕನ್ನಡ ಸಂಘಟನೆಗಳಿಗೂ ಬೇಡವಾದ ವಿಷಯವಾಗಿದೆ. ಕಾಸರಗೋಡಿನ ಕನ್ನಡಿಗರ ನೋವಿಗೆ ದನಿಯಾಗಬೇಕಾದದ್ದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ...
ಕಲರವ said...
4.kannada para kalakali, kalakaiyaage vuliyuvudeno.. emba bhidiyu kaaduttide.nimma kaalajige nammadu daniyide.abhinandanegalu.

ಮೌನಿ said...
5. ಯಾರು ಕಥೆಗೆ ಕಿವಿಗೊಡುವವರು ? ಯಾರು ಹೆರಿಗೆಬೇನೆಗೆ ಹೆಗಲುಕೊಡುವವರು ? ಯಾರು ಎದೆಬಾವಿಗೆ ಎದೆಕೊಡುವವರು ?ಯಾರು ಕನ್ನಡಕ್ಕೆ ಕೈ ಎತ್ತುವವರು ? ಯಾರು ಕನ್ನಡಕ್ಕೆ ಕಟಿಬದ್ಧರಾಗುವವರು ?ದರಿದ್ರ ರಾಜಕಾರಣಿಗಳು, ಹೊಲಸು ಬಿಳಿಧಾರಿಗಳು,,,!!??
Anonymous said...
6. Kasaragod is part of Kerala now, You have to learn Malayalam, But it is upto you u want to keep kannada culture or not !! If I respect other's mother, then only my mother will get respect !! Jai Karnataka Maathe..
Anonymous said...
7. ನಾವೆಲ್ಲರೂ ಭಾರತ ದೇಶದಲ್ಲಿದ್ದೇವೆ.ನಮ್ಮಲ್ಲಿ ಎಷ್ಟು ಮಂದಿ ಹಿಂದೀ ಕಲಿಯುತ್ತೇವೆ ಅಥವಾ ಅದರಲ್ಲಿ ವ್ಯವಹರಿಸುತ್ತೇವೆ? ನಮ್ಮ ಬದುಕನ್ನು ಹಿಂದೀ ಬಾಧಿಸುತ್ತಿಲ್ಲ ಅಲ್ಲವೇ? ಹಾಗಿದ್ದ ಮೇಲೆ ನಾವು ಕಾಸರಗೊಡಿಗರು ನಮ್ಮದಲ್ಲದ ತಪ್ಪಿಗೆ ಕೇರಳಕ್ಕೆ ಸೇರಿದ ಮಾತ್ರಕ್ಕೆ ಮಲಯಾಳವನ್ನು ಕಡ್ಡಾಯವಾಗಿ ಯಾಕೆ ಕಲಿಯಬೇಕು? ನಾವು ಇಲ್ಲಿಗೆ ವಲಸೆ ಬಂದವರಲ್ಲ.ಪ್ರಜಾವಾಣಿಯಲ್ಲಿ ವೈದೇಹಿಯವರು ಬರೆದ ಭಾನುವಾರದ ಅಂಕಣ ದಯವಿಟ್ಟು ಗಮನಿಸಿ.ಬೆಲ್ಜಿಯಂ ನಂತಹ ಬಹುಭಾಷ ಸಂಸ್ಕೃತಿಯ ದೇಶಗಳಲ್ಲಿ ಎಲ್ಲ ಭಾಷೆಗಳಲ್ಲೂ ವ್ಯವಹರಿಸಬಹುದಾದ ಅವಕಾಶವಿದೆ. ನಮ್ಮಲ್ಲಿ ಎಲ್ಲ ಧರ್ಮದವರಿಗೆ ಅವರವರ ಅಚಾರ ವಿಚಾರಗಳೊಂದಿಗೆ ಬದುಕುವ ಹಕ್ಕಿದೆ. ಹಿಂದೂ ಗಳು ಬಹುಸಂಖ್ಯಾತರೆಂದು ಅವರ ನೀತಿ ನಿಯಮಗಳನ್ನು ಅಲ್ಪಸಂಖ್ಯಾತ ಧರ್ಮದವರ ಮೇಲೆ ಹೆರುವ ಹಾಗಿಲ್ಲ. ನಮ್ಮನ್ನೂ ನಮ್ಮ ಭಾಷೆ ಸಂಸ್ಕೃತಿ ಗಳೊಂದಿಗೆ ಬದುಕಲು ಬಿಡಿ.ಕಾಸರಗೋಡಿನಲ್ಲಿ ಸ್ಥಳನಾಮಗಳನ್ನೂ ಕನ್ನಡಿಗರ ಹೆಸರನ್ನೂ ಕೂಡ ಮಲಯಾಲೀಕರಿಸುತ್ತಿದ್ದಾರೆ. ಇಲ್ಲಿನ ಮಲಯಾಳಿಗಳಿಗೆ ಕನ್ನಡಿಗರನ್ನು ಕಂಡರೆ ಎಷ್ಟು ಅಸಡ್ಡೆ ಎಂದರೆ ಕನ್ನಡಿಗರ ಬಗ್ಗೆ ಒಂದು ವಾರ್ತೆಯನ್ನೂ ಮಲಯಾಳ ಮಾಧ್ಯಮದವರು ಪ್ರಕಟಿಸುವುದಿಲ್ಲ.ಕರ್ನಾಟಕ ದವರಿಗೂ ನಾವು ಹೊರಗಿನವರು! ನಾವು ಎಲ್ಲ ಭಾಷೆಗಳನ್ನೂ ಗೌರವಿಸುತ್ತೇವೆ. ಮಾತನಾಡುತ್ತೇವೆ.ಎಲ್ಲ ಸಣ್ಣ ಪುಟ್ಟ ಭಾಷಾ ವೈವಿಧ್ಯಗಳನ್ನೂ ಉಳಿಸುತ್ತಿದ್ದೇವೆ.ಆದ್ರೆ ಇಲ್ಲಿಗೆ ವಲಸೆ ಬರುವ ಮಲಯಾಳಿಗಳಿಗೆ ಕನ್ನಡ ತುಳು ಅಂದರೆ ತಾತ್ಸಾರ.IF I RESPECT OTHERS MOTHER ...ಎಂದು ಕಾಮೆಂಟ್ ಮಾಡಿದವರು ಯಾರನ್ನು ಉದ್ದೆಶಿಸಿದ್ದಾರೋ ಗೊತ್ತಿಲ್ಲ.ಕಾಸರಗೋಡು ಕನ್ನಡಿಗರಿಗೆ ಪರಭಾಷಾಸೌಹಾರ್ದದ ಪಾಠ ಯಾರೂ ಹೇಳಿಕೊಡಬೇಕಾಗಿಲ್ಲ. ನಾವು ಅಹಿಂಸಾತ್ಮಕವಾಗಿ ಹೋರಾಡುತ್ತಿದ್ದೇವೆ.ನೀವು ಕನ್ನಡಿಗರಾಗಿದ್ದರೆ ನಮ್ಮ ಸ್ಥಿತಿಯಲ್ಲಿ ನೀವಿದ್ದಿದ್ದರೆ ಇಲ್ಲಿ ಕನ್ನಡ ಉಳಿಸುವ ಕಷ್ಟ ಅರ್ಥವಾಗುತ್ತಿತ್ತು.
Anonymous said...
8. I really appreciate your comments, but if u look at belagaum (belagavi) people struggle for the same language issues. obviously they are marati people & still they learn Kannada & live in Kannada. For me Belagaum & Kasaragod are same. If my comments are hurted you , then m extremely sorry.

Regards,
Shr

2 ಮತ್ತು 7ನೇ ಪ್ರತಿಕ್ರಿಯೆ ನೋಡಿದಾಗ ಕಾಸರಗೋಡಿನ ಕನ್ನಡಿಗರ ವೇದನೆ ನಮ್ಮ ಹೃದಯವನ್ನು ತಟ್ಟುತ್ತದೆ. ಅವರು ಧನ ಸಹಾಯ ಅಥವಾ ಮತ್ಯಾವುದೇ ಕ್ಷಣಿಕ ಸಹಾಯ ಕೋರುತ್ತಿಲ್ಲ. ‘ಕನ್ನಡವನ್ನು ಉಳಿಸಬೇಕಾಗಿದೆ’ ಎಂಬುದಷ್ಟೆ ಅವರ ಕೂಗು. ಇದು ಕಾಸರಗೋಡಿನಲ್ಲಿ ಕನ್ನಡ ಸಂಸ್ಕೃತಿ ಹೊಂದಿರುವ ಪ್ರತಿಯೊಬ್ಬರ ನಿರೀಕ್ಷೆಯೂ ಹೌದು.
6 ಮತ್ತು 8 ನೇ ಕಾಮೆಂಟುಗಳನ್ನು ಮಾಡಿದವರಿಗೆ ಸಮಸ್ಯೆ ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇಲ್ಲ ಎಂತಲೇ ಹೇಳಬೇಕಾಗಿದೆ. ಕಾಸರಗೋಡಿನ ಸಮಸ್ಯೆಗೂ ಬೆಳಗಾವಿಗೂ ವ್ಯತ್ಯಾಸವಿದೆ. ಬೆಳಗಾವಿ ಕನ್ನಡಿಗರದು. ಕನ್ನಡ ನೆಲದಲ್ಲಿಯೇ ಇದೆ. ಇಲ್ಲಿ ಇರ ಬಯಸುವವರು ಕನ್ನಡ ಕಲಿಯಲೇಬೇಕು. ಆದರೆ ಕಾಸರಗೋಡಿನ ಕನ್ನಡಿಗರು ಮಲೆಯಾಳ ಕಲಿಯುವ ಅವಶ್ಯಕತೆಯಿಲ್ಲ. ಅದು ಕನ್ನಡ + ತುಳು ಭಾಷಾ ಸಂಸ್ಕೃತಿಯ ನೆಲ. ದಶಕಗಳ ಹಿಂದೆಯೇ ಇದನ್ನು ಕೇರಳ ಸರಕಾರ ಕೂಡ ತಾತ್ವಿಕವಾಗಿ ಒಪ್ಪಿದೆ. ಆದರೂ ಅದಕ್ಕೆ ಜಾಣ ಮರೆವು. ಕನ್ನಡ + ತುಳು ಭಾಷಾ ಸಂಸ್ಕೃತಿಯನ್ನು ಅಲ್ಲಿಂದ ನಿರ್ನಾಮ ಮಾಡುವ ಹಠ. ಇಂಥ ಹಠಮಾರಿತನ ನೆರವೇರಲು ಅವಕಾಶ ನೀಡದಂತೆ ಪ್ರತಿಭಟಿಸುವ ಅವಶ್ಯಕತೆಯಿದೆ. ಈ ಕೆಲಸವನ್ನು ಅಲ್ಲಿನ ಕನ್ನಡಿಗರು ಪುನರಾರಂಭಿಸಿದ್ದಾರೆ 

ಆಗಸ್ಟ್ 3, 2011 ರಂದು ಕಾಸರಗೋಡಿನ ಕನ್ನಡಿಗರು ಬೃಹತ್ ಪ್ರತಿಭಟನಾ ಜಾಥಾ ಮತ್ತು ಧರಣಿ ಮೂಲಕ ಕೇರಳ ಸರಕಾರದ ಭಾಷಾ ಕುತಂತ್ರವನ್ನು ಖಂಡಿಸಿದರು.. ಯಾವುದೇ ಕಾರಣಕ್ಕೂ ಇಂಥ  ಅನೀತಿ ಭಾಷಾ ಹೇರಿಕೆಗೆ ಅವಕಾಶ ನೀಡುವುದಿಲ್ಲ. ಕನ್ನಡಿಗರಿಂದ ಉಗ್ರ ಪ್ರತಿಭಟನೆ ಆರಂಭಕ್ಕೂ ಮುನ್ನ ‘ ಶಾಲೆಗಳಲ್ಲಿ ಮಲೆಯಾಳ ಕಡ್ಡಾಯ ಕಲಿಕೆ’ ಆದೇಶ ಹಿಂಪಡೆಯಲು ಒತ್ತಾಯಿಸಿದರು.

‘ ಭಾಷಾ ಕಲಿಕೆಯ ನೆಪದಲ್ಲಿ ಕೇರಳ ಸರಕಾರ, ಕನ್ನಡವನ್ನು ತೆರೆಮರೆಯಲ್ಲಿ ಮುಗಿಸುವ ಸಂಚು ರೂಪಿಸಿದೆ. ಕಳೆದ ಎರಡು ದಶಕಗಳಿಂದ ಕನ್ನಡಿಗರು ಒಗ್ಗಟ್ಟು ಇಲ್ಲದೆ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಕೇರಳ ಸರಕಾರದ ಮಲೆಯಾಳಿ ಕಡ್ಡಾಯ ಆದೇಶವನ್ನು ಪ್ರತಿಭಟಿಸಲು ಕನ್ನಡ ಸಂಘ ಸಂಸ್ಥೆಗಳು ಮುಂಚೂಣಿಗೆ ಬರಬೇಕು’ ಪ್ರತಿಭಟನಾ ಜಾಥಾ ಉದ್ದೇಶಿಸಿ ಮಾತನಾಡಿದ ಎನ್. ಕೆ. ಮೋಹನ್ ದಾಸ್ ಅವರ ಖಡಾಖಂಡಿತ ಮಾತಿದು. ಇವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಪ್ರತಿನಿಧಿ.

ಕಾಸರಗೋಡಿನ ಸರಕಾರಿ ಕಾಲೇಜಿನಿಂದ ಹೊರಟ ಮೆರವಣಿಗೆ ಹಾದಿ ಸಾಗಿದಂತೆಲ್ಲ ಹಿಗ್ಗುತ್ತಲೇ ಹೋಯಿತು. ಇದು ಅಲ್ಲಿನ ಕನ್ನಡಿಗರಲ್ಲಿ ಕೇರಳ ಸರಕಾರದ ಭಾಷಾ ಅನೀತಿ ವಿರುದ್ಧದ ಆಕ್ರೋಶವನ್ನು ವ್ಯಕ್ತಪಡಿಸುತ್ತಿತ್ತು. ಕಾಸರಗೋಡು ಕನ್ನಡಿಗರ ಹಿತರಕ್ಷಣಾ ಸಮಿತಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ, ಕೇರಳ ಸರಕಾರಿ ಕನ್ನಡ ನೌಕರರ ಸಂಘ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಅಪೂರ್ವ ಕಲಾವಿದರು, ಕಾಸರಗೋಡು ಸರಕಾರಿ ಕಾಲೇಜಿನ ಸ್ನೇಹರಂಗ ಬಳಗದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಧರಣಿ ಕುಳಿತು ಹೋರಾಟದ ಬಿಸಿಯನ್ನು ಕೇರಳ ಸರಕಾರಕ್ಕೆ ಮುಟ್ಟಿಸಿದರು. ಇದೇ ಸಂದರ್ಭದಲ್ಲಿ  ಉಪ ಜಿಲ್ಲಾ ವಿದ್ಯಾಧಿಕಾರಿಗಳ ಕಚೇರಿಗಳಿಗೂ ಮುತ್ತಿಗೆ ಹಾಕಿ ಪ್ರತಿಭಟಿದ್ದು ವಿಶೇಷವಾಗಿತ್ತು.
ಇದೆಲ್ಲವನ್ನು ಕರ್ನಾಟಕದಲ್ಲಿರುವ, ಅದರಲ್ಲೂ ಬೆಂಗಳೂರಿನಲ್ಲಿರುವ ಕನ್ನಡಿಗರು ನೋಡಿತ್ತಾ, ಸುಮ್ಮನೆ ಕೂರುವುದು ಥರವಲ್ಲ. ‘ ಮಲೆಯಾಳ ಕಡ್ಡಾಯ’ ಆದೇಶವನ್ನು ಹಿಂತೆಗೆದುಕೊಳ್ಳಲು ಕೇರಳ ಸರಕಾರದ ಮೇಲೆ ಒತ್ತಡ ಹೇರುವಂತೆ ಕರ್ನಾಟಕ ಸರಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ. ಮುಖ್ಯಮಂತ್ರಿ, ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಅಥವಾ ಇಮೈಲ್ ಮೂಲಕ ನಮ್ಮ ದನಿಯನ್ನು ತಲುಪಿಸಬೇಕಾಗಿದೆ. ಅವರ ಇಮೈಲ್ cm@kar.nic.in, cs@karnataka.gov.in