• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಅನಕ್ಷರತೆ…ಆದರ್ಶ…ಆಕಾಂಕ್ಷೆ…!!

ಈ ಇಡೀ ಸಿನಿಮಾ ಕಥೆ ಜರುಗುವುದು ಒಂದು ಸಣ್ಣ ತಾಂಡದಲ್ಲಿ. ಇಲ್ಲಿನವರೆಲ್ಲ ಇಟ್ಟಿಗೆ ತಯಾರಿಸುವ ಕಾರ್ಮಿಕರು. ಇಂಥ ಪರಿಸರ ಬಿಟ್ಟು ಆಚೀಚೆ ಕ್ಯಾಮರಾ ಅಲುಗುವುದಿಲ್ಲ. ಆದರೂ ಇಡೀ ಚಿತ್ರ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. ಲವಲವಿಕೆಯಿಂದ ನೋಡಿಸಿಕೊಂಡು ಹೋಗುತ್ತದೆ.  ಹಾಡುಗಳು ಚಿತ್ರೀಕರಣವಾಗಿರುವುದು ಇಲ್ಲಿಯೆ. ಆದರೆ ಹಾಡುಗಳನ್ನು ದೃಶ್ಯೀಕರಿಸಿರುವ ರೀತಿ ಬೇರೊಂದು ಲೋಕೇಶನ್ ಅಗತ್ಯವಾಗಿತ್ತು ಅನಿಸುವುದಿಲ್ಲ. ಬಹಳ ಸೀಮಿತ ಸ್ಥಳ-ಪರಿಕರಗಳನ್ನು ಬಳಸಿ ಅತ್ಯುತ್ತಮ ರೀತಿಯಲ್ಲಿ ನೀಡಲ್ಪಟ್ಟ ಈ ಸಿನಿಮಾ ತಮಿಳಿನ ‘ವಾಂಗೈ ಸೂಡವಾ’
 ಸಿನಿಮಾ, 1966ರ ಕಾಲಘಟ್ಟದ ಕಥೆ ಆಧರಿಸಿದೆ. ದಸ್ತಾವೇಜು ಬರಹಗಾರ ಅಣ್ಣಾಮಲೈ (ಕೆ.ಭಾಗ್ಯರಾಜ್) ಶಿಕ್ಷಕ ತರಬೇತಿ ಪೂರೈಸಿದ ತನ್ನ ಒಬ್ಬನೇ ಮಗ ವೇಲುತಂಬಿ (ವಿಮಲ್) ಸರಕಾರಿ ನೌಕರನಾಗಬೇಕು ಎಂಬ ಆಸೆ. ಶಾಲೆಗಳು ಇಲ್ಲದ ಕುಗ್ರಾಮಗಳಲ್ಲಿ ಅರೆಕಾಲಿಕ ಶಿಕ್ಷಕರಾಗಿ ಆರು ತಿಂಗಳು ಸೇವೆ ಸಲ್ಲಿಸಿದವರಿಗೆ ಪೂರ್ಣಾವಧಿ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಆದ್ಯತೆ ನೀಡುವಂಥ ಸರಕಾರಿ ನಿಯಮಾವಳಿ ಇದೆ ಎಂದು ಗೊತ್ತಿರುತ್ತದೆ. ಆದ್ದರಿಂದ ಇಂಥ ಸ್ಥಳಕ್ಕೆ ಹೋಗಲು ತಿಳಿಸುತ್ತಾನೆ. ಅಪ್ಪನ ಮನಸನ್ನು ನೋಯಿಸಲು ಇಚ್ಛಿಸದ ಮಗ ಇದಕ್ಕೆ ಅರೆಮನಸಿನಿಂದಲೇ ಒಪ್ಪಿಗೆ ಸೂಚಿಸುತ್ತಾನೆ. ತಿಂಗಳಿಗೆ 30 ರೂಪಾಯಿ ಸಂಬಳದ ಆಧಾರದ ಮೇಲೆ ನಿರ್ದಿಷ್ಟ ಸ್ಥಳವನ್ನು ಈತನಿಗೆ ಸೂಚಿಸಲಾಗುತ್ತದೆ.
 
ನಾಗರಿಕ ಸಾರಿಗೆ ಸೇವೆಗಳೇ ಇಲ್ಲದ ತಾಂಡಕ್ಕೆ ಲಾರಿಯೊಂದರಲ್ಲಿ ಕುಳಿತು ಬರುತ್ತಾನೆ. ಅಲ್ಲಿಯ ಸ್ಥಿತಿಗತಿ-ಜನಜೀವನ ಯಾವುದರ ಬಗ್ಗೆಯೂ ವೇಲುತಂಬಿಗೆ ಪರಿಚಯವಿಲ್ಲ. ಯಾರೊಬ್ಬರ ಪರಿಚಯವಿಲ್ಲ. ನಾಡವೈದ್ಯನೋರ್ವ ಈತನಿಗೆ ಆಡುಗಳನ್ನು ಕಟ್ಟುವ ದೊಡ್ಡಿಯಲ್ಲಿ ವಾಸಿಸಲು ತಿಳಿಸುತ್ತಾನೆ. ಜೋರಾಗಿ ಗಾಳಿ ಬೀಸಿದರೆ ಬಿದ್ದು ಹೋಗಬಹುದಾದ, ಮಳೆ ಬಂದರೆ ಸೋರುವ ಅರೆ ತೆರೆದ ಗುಡಿಸಲದು. ಅದುವರೆಗೂ ಅಲ್ಲಿ ಆಡುಗಳನ್ನು ಕಟ್ಟಿಕೊಂಡಿದಾತ ಸಿಟ್ಟಿನಿಂದಲೇ ಗುಡಿಸಲು ಖಾಲಿ ಮಾಡಿಕೊಡುತ್ತಾನೆ. ಇಲ್ಲಿ ವಾಸ ಮಾಡಬೇಕ ಎಂಬ ದಿಗ್ಬ್ರಮೆ ಈತನದು.  ಟ್ರಾನ್ಸಿಸ್ಟರ್ ನಲ್ಲಿ ಹಳೆ ಹಾಡುಗಳನ್ನು ಕೇಳುತ್ತಾ, ಆಡು-ಕುರಿಗಳ ಹಿಕ್ಕೆ, ಮೂತ್ರದ ಘಾಟಿಗೆ ಮೂಗು ಮುಚ್ಚಿಕೊಂಡು ಗುಡಿಸಲು ಸ್ವಚ್ಛಗೊಳಿಸುತ್ತಾನೆ. 

ಮಕ್ಕಳು ಓಡಾಡುವ ಹಂತಕ್ಕೆ ಬಂದರೆಂದರೆ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡಲೇ ಬೇಕಾದ ಸ್ಥಿತಿ ಅಲ್ಲಿಯದು. ಇವರನ್ನು ಈ ಕೆಲಸದಿಂದ ಬಿಡಿಸುವ, ಓದಿಸಬೇಕೆನ್ನುವ ಮನಸ್ಥಿತಿಯಾಗಲಿ ಅಲ್ಲಿನವರಿಗೆ ಇಲ್ಲ. ತಾಂಡಕ್ಕೆ ತಾಂಡವೇ ಇಟ್ಟಿಗೆ ತಯಾರಿಸುವ ಕಾರ್ಮಿಕ ಸಮುದಾಯವಾಗಿರುತ್ತದೆ. ಬೆಳಗ್ಗಿನಿಂದ ಸಂಜೆವರೆಗೂ ಮಕ್ಕಳನ್ನು ಶಾಲೆಗೆ ಕಳುಯಿಸಲು ಇಂಥವರು ಒಪ್ಪುವುದಿಲ್ಲ ಎಂದರಿತ್ತಿದ್ದ ಶಿಕ್ಷಣ ಇಲಾಖೆ ಸಂಜೆ ನಂತರ ಅಕ್ಷರ ಕಲಿಸಲು ಸೂಚಿಸಿರುತ್ತದೆ. ಆದರೆ ಮಕ್ಕಳನ್ನು ಶಾಲೆಗೆ ಕಳುಯಿಸಲು ತಾಂಡದವರ್ಯಾರಿಗೂ ಮನಸಿಲ್ಲ. ಅದುವರೆಗೂ ಅಕ್ಷರದ ಅಂಕೆಯಿಲ್ಲದೇ ಬೆಳೆದ ಮಕ್ಕಳಿಗೂ ಆಸಕ್ತಿಯಲ್ಲ. ಇದರ ಪರಿಣಾಮ ವಾದ್ಯಾರ್ (ಮೇಷ್ಟ್ರು) ನನ್ನು ಊರಿನಿಂದ ಹೊರ ಓಡಿಸುವಂಥ ಕಿರುಕುಳಗಳನ್ನು ನೀಡಲು ಮಕ್ಕಳು ಆರಂಭಿಸುತ್ತಾರೆ…! ತಡಿಕೆಯೂ ಸರಿಯಿಲ್ಲದ ಅರೆ ತೆರೆದ ಗುಡಿಸಲು ಬಿಟ್ಟುಕೊಟ್ಟಾತ ಕೂಡ ತನ್ನ ಬಲಿಷ್ಠ ಟಗರನ್ನು ಈತ ಹೋದಲ್ಲಿ-ಬಂದಲ್ಲಿ ಗುದ್ದಲು ಬಿಟ್ಟು ಕಾಡತೊಡಗುತ್ತಾನೆ.

ಇವೆಲ್ಲದರ ಜೊತೆಗೆ ವೇಲುತಂಬಿಗೆ ಮತ್ತೊಂದು ತೊಂದರೆಯೂ ಉಂಟಾಗುತ್ತದೆ. ಅದು ಉತ್ತಮ ಊಟ-ತಿಂಡಿಯದು. ತಾಂಡದಲ್ಲಿ ಚಹಾ ಮಾರುವ ಹೋಟೆಲ್ ಇಟ್ಟ ಯುವತಿ ಮಾದಿ (ಇನಿಯಾ) ತಾನೇ ನಿತ್ಯ ಒಳ್ಳೆ ಊಟ-ತಿಂಡಿ ಸರಬರಾಜು ಮಾಡುವುದಕ್ಕೆ ಹೇಳಿ ಹೆಚ್ಚಿನ ಹಣ್ಣವನ್ನೇ ಈತನಿಂದ ಪಡೆದಿರುತ್ತಾಳೆ. ಈಕೆಯ ಅಪ್ಪನ್ನೂ (ತಂಬಿ ರಾಮಯ್ಯ) ಕಿಲಾಡಿ. ಕಗ್ಗಂಟಾದ ಲೆಕ್ಕ ಹೇಳಿ ಮೇಷ್ಟ್ರನ್ನ ಕೆಕ್ಕರುಮಕ್ಕರು ಮಾಡುತ್ತಾನೆ. ಇದಕ್ಕೆ  ಉತ್ತರ ನೀಡಲು ಬಿಡುವುದಿಲ್ಲ. 'ನಮ್ಮೂರಿನವನು ಹೇಳಿದ ಸಣ್ಣ ಲೆಕ್ಕ ಬಿಡಿಸಲು ಆಗುವುದಿಲ್ಲ, ಹೀಗಿರುವಾಗ ನಮ್ಮ ಮಕ್ಕಳಿಗೆ ನೀನು ಅದ್ಯವಾ ಸೀಮೆ ಪಾಠ ಹೇಳಿಕೊಡುತ್ತಿ' ಎಂದು ಗ್ರಾಮಸ್ಥರು ರೇಗಿಸುತ್ತಾರೆ. ಒಳ್ಳೆ ಊಟ ಕೊಡುತ್ತೇನೆಂದ ಮಾದಿ ಮಾತು ತಪ್ಪುತ್ತಾಳೆ. ಮಕ್ಕಳ ಕಾಟವೂ ಹೆಚ್ಚಾಗತೊಡಗುತ್ತದೆ. ವೇಲುತಂಬಿಗೆ ರೋಸಿ ಹೋಗುತ್ತದೆ. ಆದರೆ ತಾಳ್ಮೆಗೆಡುವುದಿಲ್ಲ. ಇಡೀ ತಾಂಡವನ್ನು ಇಟ್ಟಿಗೆ ತಯಾರಿಸಲು ದುಡಿಸುತ್ತಿರುವ ಸಾಹುಕಾರ ಹೇಗೆ ಅವರನ್ನೆಲ್ಲ ಶೋಷಿಸುತ್ತಿದ್ದಾನೆ. ಇದಕ್ಕೆ ಅವರ ಅನಕ್ಷರತೆ ಹೇಗೆ ಕಾರಣವಾಗಿದೆ ಎಂಬುದನ್ನು ತೋರಿಸಿಕೊಡುತ್ತಾನೆ. ಇದು ಅರಿವಾದ ಕೂಡಲೇ ತಾಂಡದವರು ತಾವಾಗಿ ಮಕ್ಕಳನ್ನು ತಂದು ಶಾಲೆಗೆ ಸೇರಿಸುತ್ತಾರೆ. ಪ್ರೀತಿ-ವಿಶ್ವಾಸ-ಆರೋಗ್ಯ ಕ್ಯಾಂಪ್ ಗಳು, ಉಚಿತ ಶಿಕ್ಷಣ ಸಾಮಗ್ರಿಗಳನ್ನು ನೀಡುವ ಮೂಲಕ ಮಕ್ಕಳು ಮತ್ತು ಪೋಷಕರ ಹೃದಯಗಳನ್ನು ವೇಲುತಂಬಿ ಗೆಲ್ಲುತ್ತಾನೆ. ಆದರೆ ಇಷ್ಟಕ್ಕೆ ಈತನ ಕಷ್ಟ ಮುಗಿಯುವುದಿಲ್ಲ..!! 

ಇಡೀ ತಾಂಡದ ಕಾರ್ಮಿಕರನ್ನು ಶೋಷಣೆ ಮಾಡುತ್ತಿದ್ದ, ದೊಡ್ಡದೊಂದು ರೌಡಿ ಪಡೆ ಸಾಕಿಕೊಂಡ ಇಟ್ಟಿಗೆ ಭಟ್ಟಿಯ ಬಲಿಷ್ಠ ಸಾಹುಕಾರನ ದ್ವೇಷ ವೇಲುತಂಬಿಯತ್ತ ತಿರುಗುತ್ತದೆ. ಆಗ ಸಂಭವಿಸುವ ಅಪಾಯಗಳೇನು, ಇದರಿಂದ ಈತ ಹೇಗೆ ಪಾರಾಗುತ್ತಾನೆ, ಈತನ ಬರುವಿಕೆ ನಿರೀಕ್ಷಿಸಿ; ಬಂದ ನಂತರ ಮೃತನಾಗುವ ಗ್ರಾಮದ ಅವಧೂತ ಹೊಂದಿದ್ದ ಭರವಸೆ ಗತಿಯೇನು, ಅಸಹಾಯಕ ತಾಂಡದವರ ಸ್ಥಿತಿಯೇನು, ಇವರು ಕೂಡ ತಮ್ಮ ಕಷ್ಟಗಳಿಂದ ಪಾರಾಗುತ್ತಾರೆಯೇ, ಮಕ್ಕಳು ಅನರಕ್ಷತೆಯಿಂದ ಪಾರಾಗಿ ಅಕ್ಷರಸ್ಥರಾಗುತ್ತಾರೆಯೆ, ತನ್ನ ಮಗ ಸರಕಾರಿ ನೌಕರನಾಗಬೇಕು ಎಂದುಕೊಂಡಿದ್ದ ಅಣ್ಣಾಮಲೈ ಆಸೆ ಗತಿಯೇನು..? ಮೇಷ್ಟ್ರ ಒಳ್ಳೆಯತನಕ್ಕೆ ಮನಸೋತು ಪ್ರೀತಿಸಿ; ತಾನೇ ಮುಕ್ತವಾಗಿ ಅದನ್ನು ಹೇಳಿಕೊಂಡು ಮದುವೆಯಾಗಲು ಕೋರಿದ ಮಾದಿ ಆಕಾಂಕ್ಷೆ ಏನಾಯಿತು ಎಂಬುದೆಲ್ಲ ಅತ್ಯಂತ ಹೃದಯಸ್ಪರ್ಶಿಯಾಗಿ ಚಿತ್ರಿತವಾಗಿದೆ.

ಇಡೀ ಸಿನಿಮಾದ ಟೆಂಪೋ ಎಲ್ಲಿಯೂ ಕುಸಿಯುವುದಿಲ್ಲ. ಪ್ರತಿಯೊಬ್ಬರೂ  ಉತ್ತಮವಾಗಿ ಅಭಿನಯಿಸಿದ್ದಾರೆ. ಮಕ್ಕಳ ಅಭಿನಯ ಮನಸೆಳೆಯುತ್ತದೆ. ಅವರು ಉತ್ಸಾಹದ ಬುಗ್ಗೆಗಳು. ಅವರನ್ನು ಅತ್ಯಂತ ಸಹಜವಾಗಿ ಚಿತ್ರದಲ್ಲಿ ಪಾಲ್ಗೋಳಲು ಬಿಟ್ಟು ಅತ್ಯುತ್ತಮ ಅಭಿನಯವನ್ನೇ ನಿರ್ದೇಶಕ ಪಡೆದುಕೊಂಡಿದ್ದಾರೆ.
 ಸಿನಿಮಾದ ಪ್ರತಿಯೊಂದು ಹಾಡುಗಳ ಸಾಹಿತ್ಯ-ಸಂಗೀತ ಸೊಗಸಾಗಿದೆ. ಕೇಳಲು ಇಂಪಾಗಿವೆ. ನೋಡಲು ಕೂಡ ಸೊಗಸಾಗಿವೆ. ಕ್ಯಾಮರಾ ಕೂಡ ಇಡೀ ಸಿನಿಮಾದ ಸಮರ್ಥ ಪಾತ್ರಧಾರಿ. ಸೀಮಿತ ಬೆಳಕಿನಲ್ಲಿ ದೃಶ್ಯಗಳನ್ನು ಚಿತ್ರೀಕರಿಸಬೇಕಾದ ಸಂದರ್ಭಗಳಲ್ಲಿ ಕ್ಯಾಮರಾ ಕೆಲಸ ಮಾಡಿರುವ ರೀತಿ ಅತ್ಯಂತ ಗಮನಾರ್ಹ. ತಮ್ಮ ಕೆಲಸವನ್ನು ಕ್ಯಾಮರಾಮನ್ ಓಂ ಪ್ರಕಾಶ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಸಂಕಲನ ಕಾರ್ಯವನ್ನು ರಾಜಾ ಮಹಮ್ಮದ್ ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಿನಿಮಾದ ಸ್ಕ್ರೀಪ್ಟ್ ಬಿಗಿಯಾಗಿದೆ. ಚಿತ್ರಕಥೆ-ನಿರ್ದೇಶನದ ಜವಾಬ್ದಾರಿಯನ್ನು  ಎ. ಸರ್ಕುಣಮ್ ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಪ್ರಾಥಮಿಕ ಶಾಲೆ ಮೇಷ್ಟ್ರು ಮತ್ತು ತಡಿಕೆ ಹೋಟೆಲಿನಲ್ಲಿ ಚಹಾ ಮಾಡಿ ಮಾರಾಟ ಮಾಡುವ ಯುವತಿ ಹೀರೋ-ಹಿರೋಯಿನ್ ಆಗಿರುವ ಕಥೆಯ ಸಿನಿಮಾ ನೋಡುವುದೇ ಖುಷಿ ಸಂಗತಿ.

6 comments:

 1. hadugalanna chitrisiro reeti chennagide.
  -sathish babu

  ReplyDelete
 2. ಚೆನ್ನಾಗಿದೆ ವಿಷಯದ ವಿಶ್ಲೇಷಣೆ.ಪದ ಶೈಲಿ ಖುಷಿ ಆಯಿತು.

  ReplyDelete
 3. ಚೆನ್ನಾಗಿದೆ ಚೆನ್ನಾಗಿದೆ

  ReplyDelete
 4. Hearing a lot about the movie.Will watch it. Nice write up sir.
  Swarna

  ReplyDelete
 5. ಆತ್ಮೀಯರೇ, ನಿಮ್ಮ ಸಿನೇಮಾ ವಿಶ್ಲೇಷಣೆಯ ಶೈಲಿ ಚೆನ್ನಾಗಿದೆ...ಓದುತ್ತಿರುವಂತೆಯೇ ಇಡೀ ಸಿನೇಮಾ ನಮ್ಮ ಮುಂದೆ ನಡೆಯುತ್ತಿರುವಂತೆ ಭಾಸವಾಯಿತು. ಅಭಿನಂಧನೆಗಳು

  ReplyDelete