• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಗುಂಡಿನ ಮತ್ತೆ ಗಮ್ಮತ್ತು?ಅಳತೆ ಮೀರಿದರೆ ಅಪತ್ತು …!...?

ಪ್ರಸ್ತುತ ದಿನಗಳಲ್ಲಿ ಮದ್ಯಪಾನವನ್ನು ಸಾಮಾಜಿಕ ಅಪರಾಧ ಎನ್ನುವಂತೆ ನೋಡಲಾಗುತ್ತಿಲ್ಲ. ಆದರೆ ಕಳೆದ ಮೂರು ದಶಕಗಳ ಹಿಂದೆ ಇಂಥ ಭಾವನೆ ಇರಲಿಲ್ಲ. ಅದನ್ನು ಸಾಮಾಜಿಕ ಅಪರಾಧ ಎನ್ನುವಂತೆ ನೋಡಲಾಗುತ್ತಿತ್ತು. ಮದ್ಯಪಾನಿಗಳಿಗೆ ಸಾಮಾಜಿಕ ಮನ್ನಣೆ ಇರಲಿಲ್ಲ. ಇಂದಿನ ದಿನಗಳಲ್ಲಿ ಮದ್ಯಪಾನ, ಜೀವನದ ಒಂದು ಶೈಲಿ ಎನ್ನುವಂತೆ ಆಗಿದೆ. ಗುಂಡಿನ ಮತ್ತೆ ಗಮತ್ತು ಎನ್ನುವಂಥ ವಾತಾವರಣ ಇದೆ. ಆದರೆ ಇದು ಅಳತೆ ಮೀರಿದರೆ ಅಪತ್ತು ಎನ್ನುವುದನ್ನು ಸದಾ ನೆನಪಿನಲ್ಲಿಡಬೇಕು.  
 ಕುಡಿತದ ಅಳತೆ ಎನ್ನುವುದು ಕೂಡ ಜಿಜ್ಞಾಸೆ ವಿಷಯವಾದ್ದರಿಂದ ಮತ್ತು ಕುಡಿತದ ಗುಂಗಿನಲ್ಲಿ ಅಳತೆ ಎನ್ನುವುದೇ ಮರೆತು ಹೋಗುವ ಸಾಧ್ಯತೆಗಳೆ ಹೆಚ್ಚಿರುವುದರಿಂದ ಮದ್ಯಪಾನದಿಂದ ದೂರವಿರುವುದೆ ಸೂಕ್ತ. ಇಂದು ಗುಂಡು ಹಾಕಲು ಅನೇಕ ನೆಪಗಳು ಸಿಗುತ್ತವೆ. ಎಷ್ಟೆಂದರೆ ಕುಡಿತಕ್ಕೊಂದು ಸಮರ್ಥನೆ ಒದಗಿಸಲು ಪ್ರತಿಯೊಂದು ಸಂದರ್ಭವನ್ನು ನೆಪವಾಗಿ ಬಳಸಿಕೊಳ್ಳುತ್ತಾರೆ. ಇದರಿಂದ ಯಾರಿಗೆ ನಷ್ಟ ಎನ್ನುವುದನ್ನು ಯೋಚಿಸಬೇಕು.

ಪಾರ್ಟಿ-ಪಾರ್ಟಿ !!
ರೀತಿಯ ಅಭ್ಯಾಸ ಕಾಲೇಜು ಗೆಳೆಯರಲ್ಲಿ, ಉದ್ಯೋಗಸ್ಥರಲ್ಲಿ, ಕಂಪನಿಗಳಲ್ಲಿ, ದೇಶ-ವಿದೇಶಗಳ ರಾಯಭಾರ ಸಂದರ್ಭಗಳಲ್ಲಿ, ಪ್ರೀತಿ ದಕ್ಕಿದಕ್ಕೆ, ಮದುವೆಯಾಗಿದಕ್ಕೆ, ಮಗು ಹುಟ್ಟಿದಕ್ಕೆ, ಹೊಸ ವಾಹನ ಖರೀದಿ, ಮನೆ ಕಟ್ಟಿಸುವುದು ಹೀಗೆ ನಾನಾ ಸಂದರ್ಭಗಳಲ್ಲಿ  ಪಾರ್ಟಿಇಲ್ಲವೆ ಎಂದು ಕೇಳುವುದು, ಪಾರ್ಟಿ ವ್ಯವಸ್ಥೆ ಮಾಡುವುದು ಸಾಮಾನ್ಯವಾಗಿ ಹೋಗಿದೆ. ಪಾರ್ಟಿ ಎಂದ ಮೇಲೆ ಮದ್ಯ ಇರಲೇಬೇಕು ಎನ್ನುವುದು ಕಡ್ಡಾಯ ನಿಯಮವೇನೋ ಎಂಬಂತಾಗಿ ಹೋಗಿದೆ. ಇಂಥ ಗಳಿಗೆಗಳಲ್ಲಿ ಖುಷಿಗೆಂದು ತೆಗೆದುಕೊಳ್ಳಲು ಆರಂಭಿಸಿದ ಮದ್ಯಪಾನ ಕ್ರಮೇಣ ಚಟವೇ ಆಗಿ ಹೋಗುತ್ತದೆ.

ಇವತ್ತು ತುಸು ಮಾತ್ರ ಕುಡಿತ !
ಬೇರೆ ಬೇರೆ ಕಾರಣಗಳಿಂದ ಗುಂಡಿನ ಗಮತ್ತು ಅಂಟಿಸಿಕೊಂಡವರು ಕ್ರಮೇಣ ಮದ್ಯದ ಪ್ರಮಾಣ ಹೆಚ್ಚು ಹೆಚ್ಚು ಮಾಡುತ್ತಲೇ ಹೋಗುತ್ತಾರೆ. ಆದರೆ ಪ್ರತಿಬಾರಿ ಕುಡಿಯಲು ಕುಳಿತಾಗಲೂ ಇವತ್ತು ಸ್ವಲ್ಪ ಮಾತ್ರ ತೆಗೆದುಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಹೆಚ್ಚು ಕುಡಿಯುವುದಿಲ್ಲ ಎಂದು ನಿರ್ಧಾರ ಮಾಡುತ್ತಾರೆ. ಇದನ್ನು ಸ್ನೇಹಿತರಿಗೂ ಹೇಳುತ್ತಾರೆ. ಆದರೆ ಗುಂಡು ಒಳಗೆ ಇಳಿಯುತ್ತಿದಂತೆ ನಿರ್ಧಾರವನ್ನೆಲ್ಲ ಮತ್ತೊಂದು ಬಾರಿ ಜಾರಿಗೆ ತರೋಣ. ಇವತ್ತು ಕಂಠ ರ್ತಿ ಕುಡಿದುಬಿಡೋಣ ಎಂಬ ಹಂತಕ್ಕೆ ಹೋಗುತ್ತಾರೆ. ಆದರೆ ನಾಳೆ ಇವರ ಕುಡಿತದ ಪಾಲಿಗೆ ನಾಳೆಯಾಗಿಯೆ ಉಳಿಯುತ್ತದೆ.

ದುರ್ಬಲ ಮನಸು:
ನನ್ನ ಮನಸು ಬಹಳ ಸ್ಟ್ರಾಂಗ್. ಯಾವುದೇ ಕಾರಣಕ್ಕೂ ಮದ್ಯಪಾನವನ್ನು ಚಟವಾಗಿ ಪರಿಣಮಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂತಲೇ ಹಲವರು ಅಂದುಕೊಳ್ಳುತ್ತಾರೆ. ಆದರೆ ಮದ್ಯಪಾನದ ದಿನಗಳು ಹೆಚ್ಚಾಗುತ್ತಾ ಹೋದಂತೆಲ್ಲ ಇವರ ದೃಢ ಚಿತ್ತ, ಮೃದು ಚಿತ್ತವಾಗಿ ಪರಿಣಮಿಸುತ್ತದೆ. ಇವರು ಕೂಡ ಮದ್ಯ ವ್ಯಸನಿಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದರಲ್ಲಿಯೂ ಸ್ವಭಾವತಃ ದುರ್ಬಲ ಮನಸು ಉಳ್ಳವರು ತಮ್ಮ ಕರ್ತವ್ಯದ ಅವಧಿಯಲ್ಲಿಯೂ ಮದ್ಯಪಾನ ಮಾಡಿ ಉದ್ಯೋಗಕ್ಕೆ ಕುತ್ತು ತಂದು ಕೊಳ್ಳುವ ಹಂತಕ್ಕೂ ತಲುಪುತ್ತಾರೆ.

ಅಪಘಾತಗಳು:
ಇಂದು ಹೆದ್ದಾರಿಗಳಲ್ಲಿ ಮತ್ತು ನಗರದ ರಸ್ತೆಗಳಲ್ಲಿ ರಾತ್ರಿಯ ವೇಳೆ ಸಂಭವಿಸುವ ಬಹುತೇಕ ಅಪಘಾತಗಳಿಗೆ ಕುಡಿದು ಚಾಲನೆ ಮಾಡುವುದೇ ಕಾರಣವಾಗಿದೆ. ಇದರಿಂದಾಗಿಯೇ ನಗರ-ಮಹಾನಗರಗಳಲ್ಲಿ ರಸ್ತೆ ಮದ್ಯೆ ಬ್ಯಾರಿಕೇಡುಗಳನಿಟ್ಟು-ವಾಹನಗಳನ್ನು ತಡೆಯುವ ಪೊಲೀಸರು,  ಚಾಲಕರು ಮದ್ಯಪಾನ ಮಾಡಿದ್ದಾರೆಯೋ ಇಲ್ಲವೋ ಎಂದು ಪರೀಕ್ಷಿಸುವಂಥ ಪರಿಸ್ಥಿತಿ ಉಂಟಾಗಿದೆ. ಇಂಥ ಸಂದರ್ಭಗಳಲ್ಲಿ ಪದೇಪದೇ ದಂಡ ಕಟ್ಟುವ ವ್ಯಕ್ತಿಗಳ ಸಂಖ್ಯೆಗೇನೂ ಕಡಿಮೆಯಿಲ್ಲ. `ಹೇ ಏನು ಒಂದಿಷ್ಟು ನೂರು ತಾನೇ ಬಿಸಾಕಿದರೆ ಆಯಿತು' ಎನ್ನುವ ಮನೋಭಾವ ಇವರಲ್ಲಿ ಮನೆ ಮಾಡಿರುತ್ತದೆ.

ವೇಗ ಕೊಂದು ಹಾಕುತ್ತದೆ:
ರಾತ್ರಿಯ ವೇಳೆ ಮದ್ಯಪಾನ ಮಾಡಿದ ನಂತರ ವಾಹನಗಳನ್ನು ಶರವೇಗದಲ್ಲಿ ಚಾಲನೆ ಮಾಡುವಂಥ ದುರಭ್ಯಾಸ ಹೆಚ್ಚುತ್ತಿದೆ. ವಾಹನದೊಳಗೆ ಕುಡಿದು ಚಿತ್ತಾದವರು ಚಾಲಕನ ಸ್ಥಾನದಲ್ಲಿ ಕುಳಿತವರಿಗೆ ವೇಗದಿಂದ ವಾಹನ ಚಲಾಯಿಸಲು ಉತ್ತೇಜನ ನೀಡುತ್ತಿರುತ್ತಾರೆ. ಇದರಿಂದ ದಾರಿ ಬದಿ ಸಾಗುತ್ತಿರುವವರು, ನಿಂತವರು ಕೂಡ ಇವರ ಮೋಜಿಗೆ ಬಲಿಯಾದ ನಿದರ್ಶನಗಳು ಸಾಕಷ್ಟು. ಇಂಥ ಮೋಜಿನಲ್ಲಿ ತೊಡಗಿದವರು ಭೀಕರ ಸಾವಿಗೆ ಈಡಾದ ಅಥವಾ ಶಾಶ್ವತ ಅಂಗವ್ಯೆಕಲ್ಯತೆ ತಂದುಕೊಂಡ ನಿದರ್ಶನಗಳು ಕೂಡ ಅಪಾರ. ಆದರೆ ಇಂಥ ಘಟನೆಗಳು ಉಳಿದವರಿಗೆ ಎಚ್ಚರಿಕೆಯ ಘಂಟೆಗಳಾಗದಿರುವುದೆ ದುರದೃಷ್ಟಕರ ಸಂಗತಿ.

ಸಂಯಮ ಕಳೆದುಕೊಳ್ಳುತ್ತಾರೆ:
ಸಾಮಾನ್ಯ ಸಂದರ್ಭಗಳಲ್ಲಿ ತುಂಬು ಗಾಂಭಿರ್ಯದಿಂದ ಇರುವವರು ಮದ್ಯಪಾನ ಮಾಡಿದ ನಂತರ ತಮ್ಮ ಸಂಯಮ ಕಳೆದುಕೊಳ್ಳುತ್ತಾರೆ. ಅಗೌರವಯುತವಾಗಿ ವರ್ತಿಸುತ್ತಾರೆ. ಇದರಿಂದ ತಮ್ಮ ಗೌರವ ಕಳೆದುಕೊಂಡು ನಗೆಪಾಟಲಿಗೆ ಈಡಾಗುವುದಲ್ಲದೇ ಉಳಿದವರಿಗೂ ಮುಜುಗರ ಉಂಟು ಮಾಡುತ್ತಾರೆ. ಇಂಥವರು ಕುಡಿದಾಗ ಆಡುವ ಮಾತುಗಳು ಸಭ್ಯತೆಯ ಎಲ್ಲೆ ಮೀರಿರುತ್ತವೆ. ಲೈಂಗಿಕತೆಯನ್ನು ಬಿಂಬಿಸುವಂಥ ಶಬ್ದಗಳನ್ನೇ ಹೆಚ್ಚಾಗಿ ಬಳಸುತ್ತಾರೆ.

ಲೈಂಗಿಕ ದುರ್ವತನೆ:
ಸ್ವಯಂ ನಿಯಂತ್ರಣ ಮೀರುವ ಹಂತದವರೆಗೆ ಕುಡಿದ ಬಳಿಕ ಹಲವರು ಲೈಂಗಿಕ ದುರ್ವತನೆಗೂ ಇಳಿಯುತ್ತಾರೆ. ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. ಇದರಿಂದ ಸಾರ್ವಜನಿಕರಿಂದ ಧರ್ಮದೇಟು ತಿನ್ನುವವರಿಗೇನೂ ಕಡಿಮೆಯಿಲ್ಲ. ಇಂಥ ಮನೋಭಾವದ ಒಂದಷ್ಟು ಮಂದಿ ಸೇರಿದರೆ ಅವರ ವರ್ತನೆ ಮತ್ತಷ್ಟು ಹದ್ದು ಮೀರುತ್ತದೆ. ಒಂಟಿಯಾಗಿ ಸಿಕ್ಕ ಮಹಿಳೆಯ ಮೇಲೆ ಅತ್ಯಾಚಾರಕ್ಕೂ ಇಳಿಯುತ್ತಾರೆ. ಇಂಥ ಸಂದರ್ಭದಲ್ಲಿ ತೀವ್ರವಾಗಿ ಪ್ರತಿರೋಧಿಸಿದ ಮಹಿಳೆಯ ಕೊಲೆಯನ್ನೂ ಮಾಡಿಬಿಡುತ್ತಾರೆ. ಇವರ ಮೃಗೀಯ ಮನೋಭಾವಕ್ಕೆ ಮದ್ಯಪಾನ  ಪ್ರಚೋದನೆ ನೀಡಿರುತ್ತದೆ.

ಕೊಲೆ-ಸುಲಿಗೆ:
ತೀವ್ರ ಕುಡಿತದ ಬಳಿಕ ಆರಂಭವಾಗುವ ವಾಗ್ವಾದಗಳು, ಜಗಳಗಳು ಕೊಲೆಯಲ್ಲಿ ಪರ್ಯವಸನಗೊಳ್ಳುವ ಸಾಧ್ಯತೆಗಳು ಹೆಚ್ಚು. ಮದ್ಯಪಾನದ ಅಮಲು ಇಂಥ ಕೃತ್ಯಗಳನ್ನು ಮಾಡಿಸುತ್ತದೆ. ಒಂದೇ ರೀತಿಯ ಮನೋಭಾವವಿರುವವರು ಸೇರಿ ಮದ್ಯಪಾನ ಮಾಡಿದ ನಂತರ ದರೋಡೆ-ಸುಲಿಗೆಯಂಥ ಪ್ರಕರಣಗಳಿಗೂ ಇಳಿದ ನಿದರ್ಶನಗಳಿವೆ.

ತುಡಿತ:
ಅಳತೆ ಮೀರಿ ಕುಡಿಯುವುದು, ಸಾಮಾಜಿಕ ನಿಬಂಧನೆಗಳನ್ನು, ಕಚೇರಿಯ ಕಟ್ಟುಪಾಡುಗಳನ್ನು ಉಲ್ಲಂಘಿಸುವುದರ ಮೂಲಕ ಹಲವರು ಮದ್ಯ ವ್ಯಸನಿಗಳು ತಮ್ಮ ಉದ್ಯೋಗಕ್ಕೆ ಕುತ್ತು ತಂದುಕೊಂಡಿರುತ್ತಾರೆ. ಆದರೂ ಕುಡಿತ ಬಿಟ್ಟಿರದ ಇಂಥವರು ತಮ್ಮ ಚಟ ಪೂರೈಸಿಕೊಳ್ಳಲು ಎಂಥ ಕೀಳುತನಕ್ಕಾದರೂ ಇಳಿಯುತ್ತಾರೆ. ಮನೆಯಲ್ಲಿ ಬೆಲೆ ಬಾಳುವ ಸಾಮಾನುಗಳನ್ನು ಕದಿಯುವುದು, ಅಕ್ಕಪಕ್ಕದ ಮನೆಗಳಲ್ಲಿಯೂ ಕಳವು ಮಾಡುವುದು ಶುರು ಮಾಡುತ್ತಾರೆ. ಕ್ರಮೇಣ ಇದು ಬೆಳೆಯುತ್ತಾ ಹೋಗುತ್ತದೆ. ಮತ್ತಷ್ಟು ಭೀಕರ ಕೃತ್ಯಗಳನ್ನು ಎಸಗಲು ಪ್ರೇರೆಪಿಸುತ್ತದೆ.

ಕುಡಿಯದಿದ್ದರೆ ಕೈ ಕಾಲು ನಡುಕ:
ಕುಡಿತವನ್ನು ವ್ಯಸನ ಮಾಡಿಕೊಂಡವರನ್ನು ಏಕೆ ಹೀಗೆ ಎಂದು ಪ್ರಶ್ನಿಸಿ. ಆಗ ಅವರು ಹೇಳುವ ಸಾಮಾನ್ಯ ಉತ್ತರ ಹೀಗಿರುತ್ತದೆ. `ಕುಡಿಯದಿದ್ದರೆ ಕೈ ಕಾಲು ನಡುಕ ಉಂಟಾಗುತ್ತದೆ' ಇದು ಒಂದು ರೀತಿ ನರ ದೌರ್ಬಲ್ಯ. ಇದಕ್ಕೆ ಕಾರಣ ಸತತ ಕುಡಿತತದ ಪರಿಣಾಮ. ಮನೋ ಸ್ಥೈರ್ಯ ಇಲ್ಲದಿರುವುದು ಕೂಡ ಇದಕ್ಕೆಲ್ಲ ಮೂಲ ಕಾರಣ. ದೃಢ ಮನಸು ಮಾಡಿ ಕುಡಿತ ಬಿಟ್ಟರೆ ಒಂದೆರಡು ದಿನಗಳಲ್ಲಿಯೆ ಕೈ ಕಾಲು ನಡುಕ ಉಂಟಾಗುವ ಅನಿಸಿಕೆ ದೂರಾಗುತ್ತದೆ. ಆದರೆ ಇಂಥ ದೃಢ ನಿರ್ಧಾರ ಮಾಡುವವರ ಸಂಖ್ಯೆ ಅತ್ಯಂತ ವಿರಳ.ಚಿಕಿತ್ಸೆ:
ಮದ್ಯಪಾನವನ್ನು ವ್ಯಸನ ಮಾಡಿಕೊಂಡವರಿಗೆ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಇಲ್ಲಿ ದೈಹಿಕ ಚಿಕಿತ್ಸೆಗಿಂತಲೂ ಮುಖ್ಯವಾಗಿ ಮನೋ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಮದ್ಯಪಾನದ ವ್ಯಸನಕ್ಕೆ ಈಡಾದ ಆರಂಭದ ದಿನಗಳಲ್ಲಿಯೆ ವ್ಯಕ್ತಿಯನ್ನು ಕರೆ ತಂದರೆ ಚಿಕಿತ್ಸೆ ಪರಿಣಾಮ ಉತ್ತಮವಾಗಿರುತ್ತದೆ. ಶೀಘ್ರ ಗುಣಮುಖರೂ ಆಗಲು ಸಾಧ್ಯ. ಇದಕ್ಕಾಗಿ ಮದ್ಯಪಾನ ವ್ಯಸನ ಬಿಡಿಸುವ ಕೇಂದ್ರಗಳಲ್ಲಿಯೆ ಇರುವ ಅವಶ್ಯಕತೆಯಿರುತ್ತದೆ. ಮದ್ಯಪಾನ ವ್ಯಸನಿಯ ಸ್ಥಿತಿ ಮೇಲೆ ಇದನ್ನು ವೈದ್ಯರು ನಿರ್ಣಯಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಮನೆಯಲ್ಲಿಯೇ ಇದ್ದು ವೈದ್ಯರು ಸೂಚಿಸಿದ ನಿಗದಿತ ದಿನಗಳಂದು ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಸ್ಥಿತಿ ಉಲ್ಭಣಿಸಿದೆ ಎಂದಾಗ ಮಾತ್ರ ಚಿಕಿತ್ಸಾ ಕೇಂದ್ರಗಳಲ್ಲಿಯೆ ವೈದ್ಯರು ಹೇಳಿದಷ್ಟು ದಿನ ಇರಬೇಕಾಗುತ್ತದೆ.

ದೂರ:
ಎಲ್ಲ ಹಿನ್ನೆಲೆಯಲ್ಲಿ ಮದ್ಯಪಾನವನ್ನು ಸೋಶಿಯಲ್ ಸ್ಟೇಟಸ್, ಸಿಂಬಲ್, ಕಡಿಮೆ ಕುಡಿದರೆ ಆರೋಗ್ಯಕರ ಎಂದೆಲ್ಲ ನೆಪ ಹೇಳುವುದಕ್ಕಿಂತ ಅದರ ಅಭ್ಯಾಸದಿಂದ ದೂರವಿರುವುದು  ಅಗತ್ಯ.

2 comments:

 1. ಸರ್, ನೀವು ಕೊನೆಗೆ ಹೇಳಿದಂತೆ ಮದ್ಯಪಾನ ಇಂದಿನ ದಿನಗಳಲ್ಲಿ ಸೋಶಿಯಲ್ ಸ್ಟೇಟಸ್ ಆಗಿಯೇ ಪರಿವರ್ತನೆಯಾಗಿದೆ. ಕುಡಿಯಲಾರದ ವ್ಯಕ್ತಿ ಪೆದ್ದು, ಸೋಶಿಯಲ್ ಆಗಿ ಇಲ್ಲ, ಸ್ಟೇಟಸ್ ಮೇಂಟೇನ್ ಮಾಡುವುದಿಲ್ಲ ಎಂಬ ಕುಹಕಗಳೇ ಹೆಚ್ಚು. ಆದರೆ ಸೋಶಿಯಲ್ ಸ್ಟೇಟಸ್ ಗಾಗಿ ಕುಡಿಯುವವರು ನಂತರ ತಮ್ಮ ಸ್ಟೇಟಸ್ ನ್ನೆ ಕಳೆದುಕೊಳ್ಳುತ್ತಾರೆಂಬುದನ್ನೂ ನಾವು ಮರೆಯುವಂತಿಲ್ಲ. ಉತ್ತಮ ಲೇಖನಕ್ಕಾಗಿ ಧನ್ಯವಾದಗಳು.

  ReplyDelete
 2. ಉತ್ತಮ ಲೇಖನ, ಧನ್ಯವಾದಗಳು…..
  ದೇಶದಲ್ಲಿ ಮದ್ಯಪಾನ ಚಟಕ್ಕೆ ಬೀಳುವವರ ಸರಾಸರಿ ವಯಸ್ಸು 19. ಇತ್ತೀಚೆಗೆ ಈ ಸರಕಾರಿ 11ಕ್ಕೆ ಇಳಿದಿದೆ.ಪ್ರತಿವರ್ಷ ಶೇ 15ರಷ್ಟು ಮಂದಿ ಹೊಸದಾಗಿ ಮದ್ಯಪಾನ ಚಟಕ್ಕೆ ಅಂಟಿಕೊಳ್ಳುತ್ತಿದ್ದಾರೆ ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯೊಂದರ ಪ್ರಕಾರ, ಜಗತ್ತಿನಾದ್ಯಂತ ವರ್ಷಕ್ಕೆ ಸುಮಾರು 2.5 ಮಿಲಿಯನ ಸಾವುಗಳಿಗೆ ಮೂಲ ಕಾರಣ ಮದ್ಯಪಾನ ಎಂದು ಘೋಷಿಸಲಾಗಿದೆ. ಮದ್ಯಪಾನ ಶಾರೀರಿಕವಾಗಿ ಮತ್ತು ಸಾಮಾಜಿಕವಾಗಿ ತೊಂದರೆಗಳನ್ನು ಉಂಟುಮಾಡುತ್ತದೆ. ಸಾವಿರಾರು ಕುಟುಂಬಗಳು ಈ ಕಾರಣ ದಿಂದಾಗಿ ಬೀದಿಪಾಲಾಗುತ್ತಿವೆ. ಮುಗ್ಧ ಜನತೆ ಮದ್ಯಪಾನದ ಚಟಕ್ಕೆ ಬಿದ್ದಲ್ಲಿ , ಅದರಿಂದಾಗ ಬಹುದಾದ ಅನಾಹುತಗಳನ್ನು ಮನಗಂಡು, ಈ ಚಟದಿಂದ ಬಿಡುಗಡೆ ಹೊಂದಬೇಕು ಜನರಿಗೆ ಮದ್ಯಪಾನದಿಂದಾಗಿ ಬರಬಹುದಾದ ಕಾಯಿಲೆಗಳು ಮತ್ತು ತೊಂದರೆಗಳ ಬಗ್ಗೆ ಅರಿವು ಮೂಡಿಸುವುದು ತಂಬಾ ಮುಖ್ಯ. ಸೋಷಿಯಲ್ ಸ್ಟೇಟಸ್ ಗಾಗಿ ಕುಡಿಯುವವರು ನಂತರ ತಮ್ಮ ಸ್ಟೇಟಸ್ (00000)ನ್ನೆ ಕಳೆದುಕೊಳ್ಳುತ್ತಾರೆ……

  ReplyDelete