• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ನಡೆ ಮುಂದೆ ನಡೆ ಮುಂದೆ..ನುಗ್ಗಿ ನಡೆ ಮುಂದೆ...!

ಬದುಕಿನಲ್ಲಿ ಮುಂದೆ ಬರಬೇಕು ಎನ್ನುವುದು ಪ್ರತಿಯೊಬ್ಬರ ಆಕಾಂಕ್ಷೆ. ಸಾಕಾರಗೊಳಿಸಲು ಮಾಡುವ ಪ್ರಯತ್ನಗಳಾದರೂ ಏನು ಎನ್ನುವುದು ಮುಖ್ಯ. `ಎಲ್ಲದಕ್ಕೂ ಅದೃಷ್ಟ ಬೇಕು. ವಿಧಿ ಬರೆದಂತೆ ಆಗುತ್ತೆ. ನಮ್ಮ ಕೈಯಲ್ಲೇನಿದೆ' ಎಂಬ ಮಾತುಗಳು ಸಾಮಾನ್ಯ. ಮುಂದೆ ಬರಬೇಕು ಎಂದು ಇಚ್ಛಿಸುವಂಥವರೂ ಇಂಥ ಮಾತುಗಳನ್ನು ಆಡುವುದರಿಂದ ಹೊರತಲ್ಲ. ಭಾವನೆಯೆ ಬದುಕಿನಲ್ಲಿ ಮುಂದೆ ಹೆಜ್ಜೆ ಇಡುವುದಿರಲಿ...ಅದೆಷ್ಟೋ ಗಾವುದ ಹಿಂದಕ್ಕೆ ಬದುಕನ್ನು ತೆಗೆದುಕೊಂಡು ಹೋಗಿ ನಿಲ್ಲಿಸಿರುತ್ತದೆ. ಹಾಗಿದ್ದರೆ ಯಶಸ್ಸು ಕಾಣಲು ಏನು ಮಾಡಬೇಕು...ಉತ್ತರ ಇಲ್ಲಿದೆ.


ಸಕಾರಾತ್ಮಕ ಗುಣಗಳು:
ಯಶಸ್ಸಿನ ಹಾದಿಯಲ್ಲಿ ನಡೆಯುವುದು ಖಂಡಿತ ಕಠಿಣವಲ್ಲ. ಇದು ಕಷ್ಟ ಎಂಬ ಮನೋಭಾವ ಎಂದಿಗೂ ನಿಮ್ಮ ಹತ್ತಿರ ಸುಳಿಯಬಾರದು. ನೀವು ಆಯ್ಕೆ ಮಾಡಲಿಚ್ಛಿಸುವ ಮತ್ತು ಈಗಾಗಲೇ ಆಯ್ಕೆ ಮಾಡಿಕೊಂಡಿರುವ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವುದು ಖಂಡಿತ ಸಾಧ್ಯ. ಇದಕ್ಕಾಗಿ ಕೆಲವೊಂದು ಸಕಾರಾತ್ಮಕ ಗುಣಗಳನ್ನು ಬೆಳೆಸಿಕೊಳ್ಳುವುದು ಅತ್ಯಾವಶ್ಯಕ.


ಇಂದು ಮಾಡಬೇಕಾದ ಕೆಲಸ ಇಂದೇ ಮಾಡು:
ನೀವು ಕೈಗೆತ್ತಿಕೊಂಡಿರುವ ಕೆಲಸ-ಕಾರ್ಯಗಳ ರೂಪುರೇಷೆ ಬಗ್ಗೆ ನೀಲ ನಕಾಶೆ ರೂಪಿಸಿಕೊಳ್ಳಿ. ಪೂರ್ವಭಾವಿ ಯೋಜನೆ ಇದ್ದರೆ ಕೆಲಸ ಸರಾಗವಾಗಿ ಸಾಗಲು ಅನುಕೂಲ. ನಿಗದಿಪಡಿಸಿಕೊಂಡ ವೇಳಾಪಟ್ಟಿಯಂತೆ ಕೆಲಸ ಮಾಡಿ. ಇದರ ಪ್ರಕಾರವೇ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಂಡು ಪೂರೈಸಿ. ನಾಳೆ ಮಾಡೋಣ-ನಾಳಿದ್ದು ಮಾಡೋಣ. ಈಗ ಸ್ವಲ್ಪ ಆರಾಮವಾಗಿರೋಣ ಎಂಬ ಭಾವಗಳು ಬರುವುದು ಅತ್ಯಂತ ಸಹಜ. ಯಾವುದೇ ಕಾರಣಕ್ಕೂ ಇವುಗಳಿಗೆ ಆದ್ಯತೆ ನೀಡಬೇಡಿ. ಒಮ್ಮೆ ಇವುಗಳ ಧ್ವನಿಗೆ ಕಿವಿಗೊಟ್ಟಿರೆಂದರೆ ಬಿಡಿಸಿಕೊಂಡು ಬರುವುದು ತುಂಬ ಕಷ್ಟ. ನೆನಪಿರಲಿ.


ಆಶಾ ಭಾವನೆ:
ಸಕಾರಾತ್ಮಕ ಮನೋಭಾವ ರೂಢಿಸಿಕೊಳ್ಳುವುದು ಬಹಳ ಮುಖ್ಯ. ನಕಾರಾತ್ಮಕ ಭಾವನೆಗಳೇ ವ್ಯಕ್ತಿಯ ಶಕ್ತಿಯನ್ನು ಮನೋಶಕ್ತಿಯನ್ನು ಸಂಪೂರ್ಣವಾಗಿ ಕುಗ್ಗಿಸುತ್ತವೆ. ಒಳ್ಳೆಯದಾಗುತ್ತದೆ. ನನ್ನ ಪ್ರಯತ್ನ ನಾನು ಮಾಡುತ್ತೇನೆ. ಮುಂದಿನ ನಿರ್ಣಯ ಮಾಡುವುದು ಬೇಡ. ನನ್ನ ಶ್ರಮವನ್ನು ಸಂಪೂರ್ಣವಾಗಿ ತೊಡಗಿಸುತ್ತೇನೆ ಎಂದು ನಿರ್ಧರಿಸಿ. ಇದರಂತೆ ನಿಮ್ಮ ಪಾಲಿನ ನಿಗದಿತ ಜವಾಬ್ದಾರಿಯನ್ನು ಪೂರೈಸಿ. ನಿಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುವವರ ಜೊತೆ ಇದ್ದಾಗ ನಕಾರಾತ್ಮಕವಾಗಿ ಮಾತನಾಡಬೇಡಿ. ನೀವು ಯಾವುದೋ ಬೇಸರದ ಮೂಡಿನಲ್ಲಿ ಹೀಗೆ ಮಾತನಾಡಿರಬಹುದು. ಆದರೆ ನಿಮ್ಮ ಮಾತಿನ ಫಾಯಿದೆಯನ್ನು ಇತರರು ತೆಗೆದುಕೊಳ್ಳಬಹುದು. ನೀವು ಹೇಳಿದ ಮಾತನ್ನು ನಿಮ್ಮ ಮೇಲಾಧಿಕಾರಿಗಳಿಗೆ ಅಥವಾ ನಿಮ್ಮ ಇತರ ಸಹೋದ್ಯೋಗಿಗಳ ಜೊತೆ ಹೇಳಬಹುದು. ಇದರಿಂದ ಅವರು ನಿಮ್ಮ ಬಗ್ಗೆ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ಮುಂದೆ ನಿಮಗೆ ಹೆಚ್ಚಿನ ಜವಾಬ್ದಾರಿಗಳು ಬರದೇ ಇರಬಹುದು. ನಿಮ್ಮ ಕಾಲಿನ ಮೇಲೆ ನೀವೇ ಕಲ್ಲು ಹಾಕಿಕೊಳ್ಳುವ ಕೆಲಸ ಮಾಡಬೇಡಿ.


ನಕಾರಾತ್ಮಕ ಮನೋಭಾವದವರನ್ನು ದೂರವಿಡಿ:
ನೀವು ಎಂಥ ವ್ಯಕ್ತಿಗಳ ಜೊತೆ ಸದಾ ಇರುತ್ತಿರೋ ಅಥವಾ ಮಾತುಕಥೆಯಾಡುತ್ತಿರುತ್ತಿರೋ ಅವರ ಮನೋಭಾವಗಳ ಪ್ರಭಾವ ನಿಮ್ಮ ಮೇಲೆ ಖಂಡಿತ ಆಗುತ್ತದೆ. ಆದ್ದರಿಂದ ` ಕೆಲಸ ಆಗಲ್ಲ-ಹೋಗಲ್ಲ. ಸುಮ್ನೆ ಯಾಕೆ ಶ್ರಮ ತೆಗೆದುಕೊಳ್ಳುತ್ತಿಯಾ, ವ್ಯಕ್ತಿ ಸರಿಯಿಲ್ಲ. ವ್ಯಕ್ತಿ ಸರಿಯಿಲ್ಲ. ಕೆಲಸ ಮಾಡಿದ್ರೂ ಸೂಕ್ತ ಮರ್ಯಾದೆ ಸಿಗೋಲ್ಲ. ಕೆಲ್ಸ ಮಾಡಿದವರನ್ನು ಒಂದೇ ರೀತಿ ಮತ್ತು ಮಾಡದವರನ್ನು ಒಂದೇ ರೀತಿ ಟ್ರೀಟ್ ಮಾಡುತ್ತಾರೆ. ಭಾಗ್ಯಕ್ಕೆ ಶ್ರಮಪಟ್ಟು ಏನು ಫಲ' ಎಂದು ಸದಾ ಗೊಣಗುತ್ತಿರುವ ವ್ಯಕ್ತಿಗಳಿಂದ ದೂರವಿರುವುದು ಸೂಕ್ತ. ಇಲ್ಲದಿದ್ದರೆ ಎರಡು ಕಾಲಿಗಳಿಗೂ ಸರಪಳಿ ಹಾಕಿಕೊಂಡು ಓಡಲು ಪ್ರಯತ್ನಿಸಿದಂತೆ ಆಗುತ್ತದೆ.


ಎದೆಗುಂದಬೇಡಿ:
ನೀವು ಮಾಡುತ್ತಿರುವ ಕೆಲಸ-ಕಾರ್ಯಗಳು ಸಮರ್ಪಕವಾಗಿಯೆ ಇವೆ. ನಿಗದಿತ ಅವಧಿಯೊಳಗೆ ಒಪ್ಪಿಕೊಂಡ ಕೆಲಸ ಮಾಡಿ ಮುಗಿಸುತ್ತೀರಿ ಅಥವಾ ನಿಮ್ಮ ಕ್ಷೇತ್ರದಲ್ಲಿ ನಿಮಗೊಪ್ಪಿಸಿದ ಕೆಲಸದ ಬಗ್ಗೆ ನಿಮದೇ ಸ್ವಂತ ಆಲೋಚನೆಯನ್ನು ಮೇಲಾಧಿಕಾರಿಗಳ ಮುಂದೆ ಇಡುತ್ತೀರಿ. ಆದರೆ ಇದಕ್ಕೆ ಸೂಕ್ತ ಸ್ಪಂದನೆ-ಪ್ರಶಂಸೆ ದೊರೆಯುವುದಿಲ್ಲ ಎನ್ನುವ ಸಂದರ್ಭ ಬಂದರೆ ಎದೆಗುಂದಬೇಡಿ. ಸಂದರ್ಭಗಳು ಒಂದೇ ರೀತಿ ಇರುವುದಿಲ್ಲ. ನಿಮ್ಮ ಕೆಲಸವನ್ನು ಗಮನಿಸುವಂಥ ಕಣ್ಣುಗಳು ಇದ್ದೇ ಇರುತ್ತವೆ ಎಂಬುದರ ಬಗ್ಗೆ ಗಮನವಿರಲಿ. ಬೆಳಕನ್ನು ಮುಚ್ಚಿಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ.


ಸಂಪರ್ಕಗಳನ್ನು ಬೆಳೆಸಿಕೊಳ್ಳಿ:
ನೀವು ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ಇರುವಂಥ ಮತ್ತು ಈಗಾಗಲೇ ಗುರುತಿಸಿಕೊಂಡ ವ್ಯಕ್ತಿಗಳ ಸಂಪರ್ಕಗಳನ್ನು ಬೆಳೆಸಿಕೊಳ್ಳಿ. ನೀವು ಗುರುತಿಸಿರುವಂಥ ಅವರ ಕೆಲಸ-ಕಾರ್ಯಗಳ ಬಗ್ಗೆ ನಿಮ್ಮ ಸದಾಭಿಪ್ರಾಯ ವ್ಯಕ್ತಪಡಿಸಿ. ಇದರಿಂದ ಅವರು ಖಂಡಿತ ಪ್ರಭಾವಿತರಾಗುತ್ತಾರೆ. ನಿಮ್ಮ ಕಛೇರಿಯಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಜೊತೆ ಮಾತ್ರ ಸಂಪರ್ಕ ಇದ್ದರೆ ಸಾಕು. ಉಳಿದ ಸಂಗತಿ-ವ್ಯಕ್ತಿಗಳನ್ನು ಪರಿಚಯಿಸಿಕೊಳ್ಳುವುದರಿಂದ ಆಗುವ ಪ್ರಯೋಜನವೇನು ಎಂದು ಯೋಚಿಸಬೇಡಿ. ಯಾವ ಸಂಪರ್ಕಗಳು ಯಾವ ಸಂದರ್ಭದಲಲಿ ಕೆಲಸಕ್ಕೆ ಬರುತ್ತದೋ ಹೇಳಲು ಸಾಧ್ಯವಿಲ್ಲ. ಇದರ ಜೊತೆಗೆ ನೀವು ಕೆಲಸ ಮಾಡುವ ಕ್ಷೇತ್ರಕ್ಕೆ ನೇರವಾಗಿ ಸಂಬಂಧಿಸಿದ ಇತರ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಪರಿಚಯ ಬೆಳೆಸಿಕೊಳ್ಳಿ.


ವಿಸಿಟಿಂಗ್ ಕಾರ್ಡ್ಸ್ ವ್ಯವಸ್ಥಿತವಾಗಿಡಿ:
ಕಚೇರಿ-ಕಾರ್ಯಕ್ರಮ-ಸಭೆ-ಸಮಾರಂಭಗಳಲ್ಲಿ ನಿಮ್ಮ ಕ್ಷೇತ್ರದ ಮತ್ತು ಸಂಬಂಧಿಸಿದ ಕ್ಷೇತ್ರದ ವ್ಯಕ್ತಿಗಳ ಪರಿಚಯ ಆದಾಗ ವಿಸಿಟಿಂಗ್ ಕಾರ್ಡ್ಸ್ ವಿನಿಮಯ ಮಾಡಿಕೊಳ್ಳುವುದು ಸಹಜ. ಇಂಥ ಸಂದರ್ಭದಲ್ಲಿ ನಿಮ್ಮಲ್ಲಿ ವಿಸಿಟಿಂಗ್ ಕಾರ್ಡ್ಸ್ ಇಲ್ಲವೆಂತಲೂ ಅಥವಾ ಮುಗಿದಿದೆಯೆಂತಲೋ ಹೇಳಬೇಡಿ. ವಿಸಿಟಿಂಗ್ ಕಾರ್ಡ್ ಮಾಡಿಸಿಲ್ಲದಿದ್ದರೆ ಕೂಡಲೇ ಮಾಡಿಸಿ. ಇದು ಕೂಡ ಅತ್ಯಾಕರ್ಷವಾಗಿರಲಿ. ನೀವು ನೀಡುವ ವಿಸಿಟಿಂಗ್ ಕಾರ್ಡ್ ಕೂಡ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಕಾರ್ಡ್ ಗಳು ಪೂರ್ಣ ಖಾಲಿಯಾಗುವುದಕ್ಕೂ ಮುನ್ನ ಮತ್ತೆ ಮಾಡಿಸಿ. ಮನೆಯಿಂದ ಹೊರಡುವಾಗ ಪರ್ಸಿನಲ್ಲಿ ವಿಸಿಟಿಂಗ್ ಕಾರ್ಡ್ ಗಳನ್ನು ಇಟ್ಟುಕೊಂಡಿದ್ದೀರಾ ಗಮನಿಸಿ. ಹೆಚ್ಚು ವ್ಯಕ್ತಿಗಳನ್ನು ಭೇಟಿಯಾಗುವ ಸಂದರ್ಭದಲ್ಲಿ ಅಗತ್ಯಕ್ಕೆ ತಕ್ಕಂತೆ ಕಾರ್ಡ್ ಗಳನ್ನು ಇಟ್ಟುಕೊಳ್ಳಿ.


ಇತರರಿಂದ ಪಡೆದ ವಿಸಿಟಿಂಗ್ ಕಾರ್ಡ್ ಗಳನ್ನು ಸುವ್ಯವಸ್ಥಿತವಾಗಿ ಇಟ್ಟುಕೊಳ್ಳುವುದು ಅಗತ್ಯ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ಎಲ್ಲೆಂದರಲ್ಲಿ ಹಾಕಬೇಡಿ. ತುರ್ತು ಸಂದರ್ಭಗಳಲ್ಲಿ ತಕ್ಷಣ ದೊರೆಯುವುದಿಲ್ಲ. ತುಂಬ ಅಗತ್ಯದ ಸಂಪರ್ಕವಾಗಿದ್ದರೆ ಅದನ್ನು ಮೊಬೈಲ್ ಅಥವಾ ನಿಮ್ಮ ಬಳಿ ಸದಾ ಇಟ್ಟುಕೊಂಡಿರುವ ಟಿಲಿಪೋನ್ ಇಂಡೆಕ್ಸ್ನಲ್ಲಿ ಬರೆದುಕೊಳ್ಳಿ. ಅವರ ಹೆಸರಿನ ಜೊತೆಗೆ ಅವರ ಕೆಲಸ ಮಾಡುತ್ತಿರುವ ಕ್ಷೇತ್ರದ ಹೆಸರನ್ನೂ ಫೀಡ್ ಮಾಡಿಕೊಳ್ಳಿ. ಇದರಿಂದ ಮುಂದೆ ಗೊಂದಲವಾಗುವುದು ತಪ್ಪುತ್ತದೆ. ನೀವು ಪಡೆದ ವಿಸಿಟಿಂಗ್ ಕಾರ್ಡ್ ಗಳಲ್ಲಿ ಯಾವುದೇ ಒಂದನ್ನು ಕೂಡ ಕೆಲಸಕ್ಕೆ ಬಾರದ್ದು ಎಂದು ಎಸೆಯಬೇಡಿ.


ಕಿವಿಗೊಡಿ:
ಸದಾ ನಿಮ್ಮ ಮಾತುಗಳನ್ನೆ ಇತರರು ಕೇಳುತ್ತಿರಲಿ ಎಂದು ಬಯಸಬೇಡಿ. ಇದರಿಂದ ನಿಮ್ಮ ಸಂಪರ್ಕದಲ್ಲಿರುವವರು ನಿಮ್ಮಿಂದ ದೂರ ಸರಿಯಬಹುದು. ನಿಮ್ಮ ಕ್ಷೇತ್ರದ ವ್ಯಕ್ತಿಗಳು ಏನಾದರೂ ಹೇಳುತ್ತಿದ್ದರೆ ಗಮನವಿಟ್ಟು ಕೇಳಿ. ಅವರು ಹೇಳಿದ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಿ. ಕಛೇರಿಗೆ ಸಂಬಂಧಿಸಿದ ಮೀಟಿಂಗ್ಗಳಾಗಲಿ ಅಥವಾ ಮುಖ್ಯವಾದ ಸಭೆಗಳಿಗೆ ಹೋದ ಸಂದರ್ಭಗಳಲ್ಲಾಗಲಿ, ಆಹ್ವಾನಿತರು ಆಡುವ ಮಾತುಗಳನ್ನು ಶ್ರದ್ಧೆಯಿಟ್ಟು ಆಲಿಸಿ. ನೋಟ್ ಪ್ಯಾಡಿನಲ್ಲಿ ಮುಖ್ಯಾಂಶಗಳನ್ನು ಗುರುತು ಹಾಕಿಕೊಳ್ಳಿ. ಕಛೇರಿಗೆ ಸಂಬಂಧಿಸಿದ ಮೀಟಿಂಗ್ಗಳಲ್ಲಿ ರೀತಿ ನೋಟ್ ಹಾಕಿಕೊಳ್ಳುವುದನ್ನು ಖಂಡಿತ ಮರೆಯಬೇಡಿ. ಬಗ್ಗೆ ನಂತರ ನಿಮ್ಮ ಮೇಲಾಧಿಕಾರಿ ಸ್ಪಷ್ಟನೆ ಕೇಳಿದರೆ ತಡಬಡಾಯಿಸುವಂಥ ಪರಿಸ್ಥಿತಿ ಎದುರಾಗಿ, ನೀವು ಮುಜುಗರಕ್ಕೆ ಈಡಾಗುವುದನ್ನು ತಪ್ಪಿಸಿಕೊಳ್ಳಿ. ನಿಮ್ಮ ಕಛೇರಿಗೆ ಗ್ರಾಹಕ/ಸಾರ್ವಜನಿಕರು, ಇತರ ಕಛೇರಿಗಳವರು ಬಂದಾಗ ಅವರು ಹೇಳುವುದನ್ನು ಪೂರ್ಣ ಕೇಳಿಸಿಕೊಂಡು ಅರ್ಥ ಮಾಡಿಕೊಳ್ಳಿ. ನಡುವೆ ಅಡ್ಡಬಾಯಿ ಹಾಕಬೇಡಿ. ಇದರಿಂದ ಅವರು ಹೇಳುವುದನ್ನು ನೀವು ಮತ್ತು ನೀವು ಹೇಳುವುದನ್ನು ಅವರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೇ ಗೊಂದಲ ಉಂಟಾಗುತ್ತದೆ.


ಸಮಯಪಾಲನೆ:
ಮುಖ್ಯವಾದ ಸಭೆ-ಸಮಾರಂಭಗಳಿಗೆ ಹೋಗಬೇಕಾದಾಗ ಮತ್ತು ಪ್ರಮುಖ ವ್ಯಕ್ತಿಗಳ ಭೇಟಿ ನಿಗದಿಯಾಗಿದ್ದ ಸಂದರ್ಭದಲ್ಲಿ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಹಾಜರಾಗಿ. ನಂತರ ಅವರ ಬಳಿ ಟ್ರಾಫಿಕ್ ಮತ್ತೊಂದು-ಮಗದೊಂದು ಕಾರಣಗಳನ್ನು ನೀಡಬೇಡಿ. ಕೆಲವರು ಯಾವುದೇ ಕಾರಣಕ್ಕೂ ಸಮಯಕ್ಕೆ ಸರಿಯಾಗಿ ಬಾರದ ವ್ಯಕ್ತಿಗಳ ಬಗ್ಗೆ ಗಮನ ಕೊಡುವುದಿಲ್ಲ. ಜೊತೆಗೆ ಅಂಥವರ ಬಗ್ಗೆ ನಿರ್ಲಕ್ಷ್ಯ ಮನೋಭಾವ ಬೆಳೆಸಿಕೊಳ್ಳುತ್ತಾರೆ. ಆದ್ದರಿಂದ ಯಾವ ಸ್ಥಳಕ್ಕೆ ನೀವು ಹೋಗಬೇಕೋ ಅಲ್ಲಿಗೆ ತಲುಪಲು ತಗುಲುವ ಸಮಯ ಅಂದಾಜಿಸಿಕೊಳ್ಳಿ. ಟ್ರಾಫಿಕ್ ಕಿರಿಕಿರಿಯಿದ್ದರೆ ಸಾಕಷ್ಟು ಮುಂಚಿತವಾಗಿಯೇ ಹೊರಡಿ. ನಿಗದಿಪಡಿಸಿದ ಸಮಯಕ್ಕೂ ಮೊದಲೇ ಹೋದರೆ ಚೆನ್ನಾಗಿರುವುದಿಲ್ಲ ಎಂದು ಭಾವಿಸಬೇಡಿ. ನಿರೀಕ್ಷಣಾ ಕೊಠಡಿಯಲ್ಲಿ ಭೇಟಿ ಸಮಯ ಬರುವವರೆಗೂ ಕುಳಿತುಕೊಳ್ಳಿ. ಮಾತನಾಡಬೇಕಾದ ವಿಷಯಗಳ ಬಗ್ಗೆ ಮನಸಿನಲ್ಲಿಯೇ ರಿಹರ್ಸಲ್ ಮಾಡಿಕೊಳ್ಳಿ. ತಡವಾಗಿ ಬಂದಾಗ ಚಡಪಡಿಸುವುದಕ್ಕಿಂತ ಇದು ತುಂಬ ಒಳ್ಳೆಯದು.


ಮಾಹಿತಿಗಳನ್ನು ಸಂಗ್ರಹಿಸಿ:
ಇದು ಮಾಹಿತಿ ಯುಗ. ನೀವು ಕೆಲಸ ಮಾಡುತ್ತಿರುವ ಕ್ಷೇತ್ರ ಮತ್ತು ಇದಕ್ಕೆ ನೇರವಾಗಿ ಸಂಬಂಧಿಸಿದ ಕ್ಷೇತ್ರಗಳ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ಮಾಹಿತಿ ಸಂಗ್ರಹಿಸಿ. ಇದರಿಂದ ಯಾರೂ ನಿಮ್ಮನ್ನು ಹಿಂದಿಕ್ಕುವುದಾಗಲಿ-ತುಳಿದು ಮೇಲೇರುವುದಾಗಲಿ ಸಾಧ್ಯವಾಗುವುದಿಲ್ಲ. ಸಂಗ್ರಹಿಸಿದ ಮಾಹಿತಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ನಿಮ್ಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ ವ್ಯಕ್ತಿಗಳ ಬಗ್ಗೆ ಪುಸ್ತಕಗಳು ಪ್ರಕಟವಾಗಿದ್ದರೆ ಅದನ್ನು ಓದಿ. ಕಥೆ ಪುಸ್ತಕ ಓದುವ ರೀತಿಗಿಂತ ಭಿನ್ನವಾಗಿ ಮಾಹಿತಿ ಸಂಗ್ರಹಣೆ ದೃಷ್ಟಿಯಿಂದ ಮನನ ಮಾಡಿ. ಮುಖ್ಯವಾಗಿ ಕಂಡುಬಂದ ಅಂಶಗಳನ್ನು ಗುರುತಿಸಿ. ಅಂಥ  ವ್ಯಕ್ತಿಗಳು ಆತ್ಮಕಥೆಗಳನ್ನು ಬರೆದಿದ್ದರೆ ಓದಿ. ಅವರ ಯಶಸ್ಸಿಗೆ ಕಾರಣವಾದ ಅಂಶಗಳನ್ನು ಗ್ರಹಿಸಿ.


ಗೊಂದಲ ಬೇಡ:
ನಿಮ್ಮ ಕ್ಷೇತ್ರದ ಅಥವಾ ನಿಮ್ಮ ವೈಯಕ್ತಿಕ ಜೀವನದ ಕೆಲಸಕಾರ್ಯಗಳನ್ನು ಮಾಡುವಾಗ ಗೊಂದಲ ಮಾಡಿಕೊಳ್ಳಬೇಡಿ. ಇದರಿಂದ ಸಮಯ-ಹಣ ಎಲ್ಲವೂ ಹಾಳಾಗುತ್ತದೆ. ನಿಮ್ಮ ಕ್ಷೇತ್ರದ ಕೆಲಸವಾಗಿದ್ದರೆ ಸಂಬಂಧಿಸಿದವರ ವಿಶ್ವಾಸವನ್ನೂ ಕಳೆದುಕೊಳ್ಳುತ್ತೀರಿ. ಆದ್ದರಿಂದ ಮಾಡಬೇಕಾದ ಕೆಲಸದ ಬಗ್ಗೆ ಸ್ಪಷ್ಟತೆ ಇರಲಿ.


ಸೃಜನಾತ್ಮಕತೆ ಇರಲಿ:
ನಿಮದು ಕ್ರಿಯಾಶೀಲ ವ್ಯಕ್ತಿತ್ವವಾಗಿರಲಿ. ಇದರಿಂದ ಸೃಜನಾತ್ಮಕ ವ್ಯಕ್ತಿತ್ವವಿರುತ್ತದೆ. ಮತ್ತೊಬ್ಬರನ್ನು ಅನುಕರಿಸುವುದು ಸುಲಭ. ಆದರೆ ನಿಮ್ಮದೇ ಆದ ಛಾಪು ಮೂಡಿಸುವಂಥ ರೀತಿ ಕೆಲಸ ಮಾಡುವುದು ಕಷ್ಟ. ಇಂಥ ಕಷ್ಟದ ಹಾದಿಯನ್ನೇ ನೀವು ಆರಿಸಿಕೊಳ್ಳಿ. ಉಳಿದವರಿಗಿಂತ ಬೇಗನೇ ಯಶಸ್ಸು ನಿಮ್ಮ ಕೈ ಹಿಡಿಯುತ್ತದೆ. ನಿಮ್ಮ ಮನಸಿನಲ್ಲಿ ಮೂಡುವ ಸೃಜನಾತ್ಮಕ ಭಾವನೆಗಳನ್ನು ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿ. ಬಗ್ಗೆ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ. ಅವರ ಸಲಹೆಗಳನ್ನು ಪಡೆದುಕೊಳ್ಳಿ. ವಿಷಯವನ್ನು ಮೇಲಾಧಿಕಾರಿಗಳಿಗೂ ತಿಳಿಸಿ ಅವರ ಒಪ್ಪಿಗೆ ಪಡೆಯಿರಿ. ಸಂದರ್ಭದಲ್ಲಿ ಅವರು ಏನಾದರೂ ಸಲಹೆ ನೀಡಿದರೆ ನಿರಾಕರಿಸಬೇಡಿ...ಒಂದು ವೇಳೆ ಅವರ ಸಲಹೆ ಸೂಕ್ತವಾಗಿರದೇ ಇದ್ದರೆ ನೇರವಾಗಿ ಹೇಳಬೇಡಿ


ಮುಖದಲ್ಲಿ ಮಂದಹಾಸವಿರಲಿ:
ಗಂಟುಮೋರೆ ಅಥವಾ ಸಿಟ್ಟಿನ ಮನೋಭಾವ ಇದ್ದರೆ ಯಾರೂ ನಿಮ್ಮನ್ನು ತಮ್ಮ ಆತ್ಮೀಯ ವಲಯಕ್ಕೆ ಸೇರಿಸಿಕೊಳ್ಳುವುದಿಲ್ಲ. ನಿಮ್ಮ ಅಧೀನ ಸಿಬ್ಬಂದಿ ಕೂಡ ಮಾತನಾಡಲು-ಮುಕ್ತವಾಗಿ ಚರ್ಚಿಸಲು ಹಿಂಜರಿಯುತ್ತಾರೆ. ಆದ್ದರಿಂದ ಎಲ್ಲರೊಂದಿಗೂ ವಿಶ್ವಾಸದಿಂದ ನಡೆದುಕೊಳ್ಳಿ. ಇದು ನಿಮ್ಮ ಕೆಲಸಕಾರ್ಯಗಳನ್ನು ಸುಲಲಿತವಾಗಿ ಮಾಡಲು ಸಹಾಯವಾಗುತ್ತದೆ.


ಧನ್ಯವಾದ:
ನಿಮ್ಮ ಕ್ಷೇತ್ರದಲ್ಲಾಗಲಿ ಅಥವಾ ನಿಮ್ಮ ವೈಯಕ್ತಿಕ ಜೀವನದಲ್ಲಾಗಲಿ ಯಾರಿಂದಲಾದರೂ ಸಹಾಯವಾದರೆ ಅವರಿಗೆ ಕೃತಜ್ಞತೆ ತಿಳಿಸುವುದನ್ನು ಮರೆಯಬೇಡಿ. ಇದನ್ನು ನೀವು ಮಾಡಲಿಲ್ಲವೆಂದರೆ ಬೇರೆಯವರ ದೃಷ್ಟಿಯಲ್ಲಿ ಕೃತಘ್ನ ಎಂದೆನ್ನಿಸಿಕೊಳ್ಳುವುದು ಖಚಿತ. ಸಮಯ ಸಾಧಕರೆನ್ನಿಸಿಕೊಂಡರೆ ಯಶಸ್ಸು ದೊರೆಯುವುದು ಕಷ್ಟ. ಒಂದು ವೇಳೆ ದೊರೆತರೂ ಅದು ಹೆಚ್ಚು ಸಮಯ ಸ್ಥಿರವಾಗಿರುವುದಿಲ್ಲ. ಆದ್ದರಿಂದ ಆದ ಸಹಾಯ-ದೊಡ್ಡದೋ ಅಥವಾ ಸಣ್ಣದೋ ಅದನ್ನು ನೋಡದೇ ನೆರವಾದವರಿಗೆ ಹೃತ್ಪೂರ್ವಕ ಧನ್ಯವಾದ ತಿಳಿಸಿ. ಇದೇ ರೀತಿ ಸಭೆ-ಸಮಾರಂಭಗಳಿಗೆ ಆಮಂತ್ರಣ ಬಂದರೆ ಅದನ್ನು ನಿರ್ಲಕ್ಷಿಸಬೇಡಿ. ಸಾಧ್ಯವಾದರೆ ಭಾಗವಹಿಸಿ. ಇಲ್ಲದಿದ್ದರೆ ನಿಮ್ಮ ಶುಭಾಶಯ ಸಂದೇಶ ಕಳುಹಿಸಿ. ತುರ್ತು ಕಾರ್ಯ ನಿಮಿತ್ತ ಬರಲು ಸಾಧ್ಯವಾಗಿಲ್ಲ. ತಪ್ಪು ತಿಳಿಯಬೇಡಿ ಎಂದು ತಿಳಿಸಿ. ಇದರಿಂದ ಅವರು ನಿಮ್ಮ ಮೇಲಿಟ್ಟಿರುವ ವಿಶ್ವಾಸ ಮತ್ತಷ್ಟೂ ಬೆಳೆಯುತ್ತದೆ.


ಯಶಸ್ಸು ಕಟ್ಟಿಟ್ಟ ಬುತ್ತಿ:
ಇವಿಷ್ಟು ಅಂಶಗಳನ್ನು ನೀವು ಅಳವಡಿಸಿಕೊಂಡಿರಾದರೆ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಆಲ್ ಬೆಸ್ಟ್...

7 comments:

 1. ಕುಮಾರ ರೈತರೆ..

  ನಾವು ಮಾಡುವ ಪ್ರತಿ ಕೆಲಸವನ್ನು ಪ್ರೀತಿಯಿಂದ..
  ಶೃದ್ಧೆಯಿಂದ ಮಾಡಿದರೆ..
  ನಮ್ಮ ಕೆಲಸಗಳೇ ನಮಗೆ ಯಶಸ್ಸು ತಂದುಕೊಡುತ್ತವೆ..
  ಇದು ಅನುಭವದ ಮಾತು..

  ನಿಮ್ಮ ಸಲಹೆಗಳು ತುಂಬಾ ಉಪಯುಕ್ತವಾಗಿವೆ..
  ಇಮ್ಡಿನ ಮಕ್ಕಳಿಗೆ ದಾರಿ ದೀಪ..

  ಧನ್ಯವಾದಗಳು..

  ReplyDelete
 2. ನಿಮ್ಮ ಲೇಖನ ಬಹಳ ಉಪಯುಕ್ತವಾಗಿದೆ ... ಧನ್ಯವಾಧಗಳು

  ReplyDelete
 3. Really its a fantastic article.thanks for sharing.its a really touching lines.

  ReplyDelete
 4. Really its a fantastic article.thank you for sharing.after a long time reeding a good article

  ReplyDelete
 5. ನಡೆ ಮುಂದೆ ನುಗ್ಗಿ ನಡೆ ಮುಂದೆ ...ನಿಮ್ಮ ಯಶಸ್ಸಿನ ಸೂತ್ರಗಳು ತುಂಬಾ ಉಪಯುಕ್ತವಾಗಿವೆ .ಧನ್ಯವಾದಗಳು .

  ReplyDelete
 6. nijwaglu spurthi tumbuwantha atricle...need more sir.....

  ReplyDelete
 7. rajni s acharyaaMonday, 08 July, 2013

  Chandada lekhana..upayuktha maahithigala kaipidi..

  ReplyDelete