• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಕೌಟುಂಬಿಕ ಜೀವನ ಕಮರಲು ಅವಕಾಶ ಕೊಡಬೇಡಿ. . .


 ಅನೇಕರು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಕೊರಗುತ್ತಿರುತ್ತಾರೆ. ` ತಾವು ಕುಟುಂಬದ ಕಡೆ ಗಮನ ನೀಡಲಿಲ್ಲ. ನೀಡಿದ್ದರೆ ಕೊರಗುಗಳನ್ನು ತಪ್ಪಿಸಿಕೊಳ್ಳಬಹುದಿತ್ತು' ಆದರೆ ಕಳೆದುಹೋದ ಸಂಗತಿ ಬಗ್ಗೆ ಚಿಂತಿಸಿ ಫಲವಾದರೂ ಏನು?. ಆಯಾ ಕಾಲಘಟ್ಟದಲ್ಲಿ ಮಹತ್ವವಿರುವ ಎಲ್ಲ ಸಂಗತಿಗಳ ಬಗ್ಗೆಯೂ ಗಮನಹರಿಸುವುದು ಅಗತ್ಯ?..ಈ ರೀತಿ ಮಾಡಿಲ್ಲವೆಂದಾಗ ತುಂಬ ಬಿಕ್ಕಟ್ಟಿನ ಸನ್ನಿವೇಶಗಳೂ ನಿರ್ಮಾಣವಾಗುತ್ತವೆ. ಮನೆ-ಮನಗಳು ಒಡೆದುಹೋಗಿರುತ್ತವೆ. ಬದುಕು ಏಕಾಂಗಿಯಾಗಿರುತ್ತದೆ. ಇದಕ್ಕೆಲ್ಲ ಆಸ್ಪದ ನೀಡದೆ ನಿಭಾಯಿಸುವುದು ಒಂದು ಕಲೆ.


ನಿರಾಳವಾಗುವ ಸ್ಥಳ: ಮನೆ ಎನ್ನುವುದು ಮೈ-ಮನಸು ನಿರಾಳವಾಗುವುದಕ್ಕೆ ಇರುವ ಸ್ಥಳ. ಪತಿ/ಪತ್ನಿಯೊಂದಿಗೆ ತುಂಬು ಸೌಹಾರ್ದತೆ-ಪ್ರೀತಿ-ಪ್ರೇಮ, ತಂದೆ-ತಾಯಿ ಜೊತೆಯಲಿ ಗೌರವ, ಸಹೋದರ-ಸಹೋದರಿಯರೊಟ್ಟಿಗೆ ವಾತ್ಸಲ್ಯ?ಮಕ್ಕಳೊಟ್ಟಿಗೆ ಮಮತೆ ಇವೆಲ್ಲವೂ ಇದ್ದರೆ ಅದೊಂದು ಕುಟುಂಬ ಮತ್ತು ಮನೆ ಎನಿಸಿಕೊಳ್ಳುತ್ತದೆ. ನೆನಪಿಡಿ?ಇದ್ಯಾವುದಕ್ಕೂ ನೀವು ಹಣ ಖಚರ್ು ಮಾಡಬೇಕಿಲ್ಲ. ಒತ್ತಡ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ. ರೀತಿ ಮಾಡಿದಾಗ ಮನೆಯ ವಾತಾವರಣದ ಸ್ಪಂದನೆ ಬೇರೆಯದೇ ರೀತಿ ಇರುತ್ತದೆ. ನಿಮ್ಮ ಮೈ-ಮನಸು ತಂತಾನೆ ನಿರಾಳವಾಗುತ್ತದೆ.

ಸಿಡುಕು ಮೋರೆ-ಗಂಟು ಮೋರೆ ಬೇಡ:
ಸಾಕಷ್ಟು ಮಂದಿ ತಮ್ಮ ದೈನಂದಿನ ವ್ಯವಹಾರಗಳಲ್ಲಿ ಸಿಡುಕು ಮೋರೆ ಅಥವಾ ಗಂಟು ಮೋರೆ ಹಾಕಿಕೊಂಡಿರುತ್ತಾರೆ. ಸಾಮಾನ್ಯವಾಗಿ ಸಾರ್ವಜನಿಕ ಸಂಪರ್ಕ ಹೆಚ್ಚಿರುವ ಸರಕಾರಿ ಕಛೇರಿಗಳಲ್ಲಿ ಕೆಲಸ ಮಾಡುವವರಲ್ಲಿ ಇಂಥ ಪ್ರವೃತ್ತಿ ಹೆಚ್ಚು. ಆದರೆ ಇಂಥ ವರ್ತನೆ ನಿಮ್ಮ ಬಗ್ಗೆ ಬೇರೊಂದು ಭಾವನೆ ಮೂಡಿಸುತ್ತಿರುತ್ತದೆ ! ಇದೇ ಪ್ರವೃತ್ತಿಯನ್ನು ನೀವು ಮನೆಯಲ್ಲಿಯೂ ಮುಂದುವರಿಸಿದರೆ ನೀವೇ ನಿಮ್ಮ ಕೈಯಾರ ಕೌಟುಂಬಿಕ ವಾತಾವರಣದಲ್ಲಿ ಅನಾರೋಗ್ಯ ಮೂಡಿಸುತ್ತಿದ್ದೀರಿ ಎಂದೇ ಅರ್ಥ. ರೀತಿ ಇದ್ದರೆ ಮೊದಲನೆಯದಾಗಿ ನಿಮ್ಮ ಬಗ್ಗೆ ನಿಮ್ಮ ಪುಟ್ಟ ಮಕ್ಕಳಿಗೆ ಸದಾಭಿಪ್ರಾಯ ಮೂಡುವುದಿಲ್ಲ. ಪ್ರೀತಿ-ವಿಶ್ವಾಸ ಬೆಳೆಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಾನಸಿಕ ಕಂದರ ಬೆಳೆಯುತ್ತಲೇ ಸಾಗುತ್ತದೆ. ನೀವು ಮಕ್ಕಳಿಗೆ ಒಳ್ಳೆಯ ಊಟ-ವಸತಿ-ಬಟ್ಟೆ-ಶಿಕ್ಷಣ ಎಲ್ಲವನ್ನೂ ನೀಡಬಹುದು. ಆದರೆ ಇಂಥ ಧೋರಣೆಯಿಂದ ಪ್ರೀತಿ-ಮಮತೆ ನೀಡಲು ಸಾಧ್ಯವಿಲ್ಲ.

ಅಂಜಿಕೆ:
ಮಕ್ಕಳ ಮನಸು ಸೂಕ್ಷ್ಮ ಎನ್ನುವುದು ನಿಮಗೆ ಚೆನ್ನಾಗಿ ತಿಳಿದಿದೆ. ಬಾಲ್ಯದಲ್ಲಿದ್ದಾಗ ನೀವು ಕೂಡ ತಂದೆ-ತಾಯಿ ಪ್ರೀತಿ-ವಿಶ್ವಾಸ-ಮಮತೆಗೆ ಎಷ್ಟು ಹಂಬಲಿಸುತ್ತಿದ್ದೀರಿ ಎನ್ನುವುದನ್ನು ನೆನಪು ಮಾಡಿಕೊಳ್ಳಿ. ಕೆಲಸದ ಒತ್ತಡ-ಅದು ತಂದೊಡ್ಡುವ ಸವಾಲು ಇವೆಲ್ಲವುಗಳ ನಡುವೆ ನಿಮ್ಮ ಬಾಲ್ಯಕಾಲವನ್ನು ಮರೆಯಬೇಡಿ. ನೀವು ಶೀಘ್ರಕೋಪಿಗಳಾಗಿದ್ದರೆ-ಸಿಡುಕುಮೋರೆಯವರಾಗಿದ್ದರೆ ನಿಮ್ಮ ಮಕ್ಕಳಲ್ಲಿ ನಿಮ್ಮ ಬಗ್ಗೆ ಅಂಜಿಕೆ ಭಾವ ಬೆಳೆಯುತ್ತಲೇ ಹೋಗುತ್ತದೆ.

ಅಂಜಿಕೆಯಿಂದ ಅಸಹ್ಯಕ್ಕೆ:
ಕೆಲವರು ಕಛೇರಿಯ-ವ್ಯವಹಾರದ ಸ್ಥಳದ ಕಹಿ ಅನುಭವ-ಒತ್ತಡವನ್ನೆಲ್ಲ ತಂದು ಮನೆಯಲ್ಲಿ ಹಾಕುತ್ತಿರುತ್ತಾರೆ. ಹೆಂಡತಿ-ಮಕ್ಕಳೊಂದಿಗೆ ಸಿಡುಕುವುದು, ಚೀರಾಡುವುದು-ಥಳಿಸುವುದು ಇತ್ಯಾದಿ ಮಾಡುತ್ತಲೇ ಇರುತ್ತಾರೆ. ಆದರೆ ಇದೆಲ್ಲವನ್ನು ಹೆಂಡತಿ-ಮಕ್ಕಳು ಸಹಿಸಿಕೊಂಡಿದ್ದಾರೆ ಎಂದರೆ ಅದು ನಿಮ್ಮ ಮೇಲಿನ ಪ್ರೀತಿಯಿಂದಲ್ಲ. ಬದುಕಿನ ಅನಿವಾರ್ಯತೆಯಿಂದಷ್ಟೆ. ಮಕ್ಕಳು ಬೆಳೆದಂತೆಲ್ಲ ನಿಮ್ಮ ವರ್ತನೆಗಳನ್ನು ವಿಶ್ಲೇಷಣೆ ಮಾಡುತ್ತಾರೆ. ಆಗ ಅವರ ಅಂಜಿಕೆ ಅಸಹ್ಯ ಭಾವಕ್ಕೆ ತಿರುಗುತ್ತದೆ. ಹೆಂಡತಿಗಂತೂ ಎಂದೋ ಅಸಹ್ಯ ಭಾವನೆ ಬಂದಾಗಿರುತ್ತದೆ. ವಯಸ್ಕರಾಗುತ್ತಿದಂತೆ ಮಕ್ಕಳು ನಿಮ್ಮಿಂದ ದೂರ ಹಾರಿ ಹೋಗುತ್ತಾರೆ. ಬಾಲ್ಯದಿಂದಲೇ ಇಂಥ ಕಾಲ ಯಾವಾಗ ಬರುವುದೋ ಎಂದು ಚಡಪಡಿಸುತ್ತಲೇ ಇರುತ್ತಾರೆ. ಆದ್ದರಿಂದ ನೆನಪಿಡಿ. ಮನೆಯೆನ್ನವುದು ನಿಮ್ಮ ಸಿಟ್ಟು-ಒತ್ತಡಗಳನ್ನು ತಂದು ಸುರಿಯುವ ಕಸದ ತೊಟ್ಟಿಯಲ್ಲ !

ಕುಟುಂಬದಲ್ಲಿ ಸಮಸ್ಯೆಗಳೇ ಬರುವುದಿಲ್ಲವೆ:
ಸಮಸ್ಯೆಗಳು ಬರುವುದೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಮುಖ್ಯ. ನೀವು ಶಾಂತ ಸ್ವಭಾವದವರೇ ಆಗಿರಬಹುದು. ನಿಮ್ಮ ಪತ್ನಿ/ಪತಿ ಅಥವಾ ಮಕ್ಕಳು ಇದಕ್ಕೆ ತದ್ವಿರುದ್ಧವಾದ ಸ್ವಭಾವ ರೂಢಿಸಿಕೊಂಡಿರಬಹುದು. ಇವರ ಸ್ವಭಾವಕ್ಕೆ ನೀವು ಅದೇ ರೀತಿ ಸ್ಪಂದಿಸುವುದು ವಾತಾವರಣವನ್ನು ಮತ್ತಷ್ಟು ಹದಗೆಡಿಸುತ್ತದೆ. ಆದ್ದರಿಂದ ಪತಿ/ಪತ್ನಿಯನ್ನು ಕೂರಿಸಿಕೊಂಡು ತಿಳಿ ಹೇಳಿ. ಅವರ ಸ್ವಭಾವವನ್ನು ತಿದ್ದುಕೊಳ್ಳಲು ತಿಳಿಸಿ. ಇಂಥ ನಡವಳಿಕೆ ನನಗೆ ಆಗಿ ಬರುವುದಿಲ್ಲ ಎನ್ನುವುದನ್ನು ಹೇಳಿ. ಇದರಿಂದ ಪರಿಸ್ಥಿತಿ ಬದಲಾಗುತ್ತದೆ. ಹಂತದಲ್ಲಿಯೂ ಆಗದಿದ್ದರೆ ಆಪ್ತರಾದ ಹಿರಿಯರ ಸಲಹೆ ತೆಗೆದುಕೊಳ್ಳಿ. ಆಗಲೂ ಪರಿಸ್ಥಿತಿಯಲ್ಲಿ ಬದಲಾವಣೆಯಾಗದಿದ್ದರೆ ಆಪ್ತ ಸಮಾಲೋಚಕರಿದ್ದಾರೆ ಅವರ ಸಲಹೆ ಪಡೆದುಕೊಳ್ಳಿ. ಮಕ್ಕಳು ತುಂಬ ತುಂಟರು-ಹಠಮಾರಿಗಳಾಗಿದ್ದರೆ ಶಾಲೆಗೆ ಹೋಗದೇ ಚಕ್ಕರ್ ಹೊಡೆಯುತ್ತಿದ್ದರೆ ಅದಕ್ಕೆ ಕಾರಣಗಳೇನಿರಬಹುದು ಎಂದು ನೀವೇ ವಿಶ್ಲೇಷಿಸಿ. ಅದರ ಹಿಂದಿನ ಅಂಶಗಳು ನಿಮಗೆ ಅರ್ಥವಾಗುತ್ತವೆ. ಮಕ್ಕಳ ಮನೋ ವೈದ್ಯರ ಸಲಹೆಯನ್ನೂ ಪಡೆಯಿರಿ. ಇದರಿಂದ ವಾತಾವರಣ ಸರಿಯಾಗುತ್ತದೆ. ಇದನ್ನು ಮಾಡದೇ ನೀವು ತಾಳ್ಮೆಗೆಟ್ಟರೆ ಕುಟುಂಬ ಕಮರಿ ಹೋಗುತ್ತದೆ.

ಹವ್ಯಾಸಗಳನ್ನು ರೂಢಿಸಿಕೊಳ್ಳಿ:
ಆರೋಗ್ಯಕರವಾದ ಹವ್ಯಾಸಗಳು ಇದ್ದರೆ ಬದುಕು ಚೆಂದ. ಅದಕ್ಕೆ ಹೆಚ್ಚಿನ ಅರ್ಥವೂ ಇರುತ್ತದೆ. ಹವ್ಯಾಸಗಳೆದ್ದ ಕೂಡಲೇ ಅವು ದುಬಾರಿಯದೇ ಆಗಬೇಕಿಲ್ಲ. ಪುಸ್ತಕ ಓದುವುದು, ಸಂಗೀತ ಕೇಳುವುದು, ಆಗಾಗ ಕುಟುಂಬದವರೊಂದಿಗೆ ಪಿಕ್ನಿಕ್ ಅಥವಾ ಪ್ರವಾಸ ಹೋಗಿರಬರುವುದು ಮಾಡಬಹುದು. ಚಿತ್ರಕಲೆ ಅಥವಾ ಪೋಟೋಗ್ರಫಿ-ಸಂಗೀತ ಕಲಿಯುವಿಕೆಯಲ್ಲಿ ಆಸಕ್ತಿ ಇದ್ದರೆ ಅದನ್ನು ಮಾಡಿ. ಬಿಡುವಿನ ವೇಳೆಯಲ್ಲಿ ಇಂಥ ಹವ್ಯಾಸಗಳೊಂದಿಗೆ ಕಳೆಯುವುದಿದೆಯಲ್ಲ ಅದೊಂದು ಅದ್ಭುತ ಅನುಭವ

ಮಕ್ಕಳನ್ನು ಪ್ರೋತ್ಸಾಯಿಸಿ:
ಚಿಕ್ಕಂದಿನಿಂದಲೇ ಮಕ್ಕಳು ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳುವುದಕ್ಕೆ ಪ್ರೋತ್ಸಾಯಿಸಿ. ಸದಾ ಓದು ಓದು ಎಂದು ಒತ್ತಡ ಹೇರುತ್ತಲೇ ಇರಬೇಡಿ. ಓದುವುದು ಮುಖ್ಯವೇ ಆದರೂ ಅದು ಅಸಹನೀಯ ಒತ್ತಡ ಎನಿಸಬಾರದು. ಮಕ್ಕಳು ತಮ್ಮ ಬಿಡುವಿನ ವೇಳೆಯಲ್ಲಿ ರೂಢಿಸಿಕೊಂಡ ಹವ್ಯಾಸ ಮುಂದೆ ಅವರ ಬದುಕಿಗೂ ಮುಖ್ಯ ಆಧಾರವಾಗಬಹುದು. ಹವ್ಯಾಸವನ್ನೇ ಅವರು ವೃತ್ತಿಯಾಗಿ ಸ್ವೀಕರಿಸುವಂಥ ಅವಕಾಶಗಳು ಇಂದು ಇವೆ. ಚಿತ್ರಕಲೆ-ಪೋಟೋಗ್ರಫಿ-ನೃತ್ಯ-ಸಂಗೀತ-ಸಾಹಿತ್ಯ ಇತ್ಯಾದಿ ಎಲ್ಲ ಪ್ರಕಾರಗಳಲ್ಲಿಯೂ ಇಂದು ಅಪಾರ ವೃತ್ತಿ ಅವಕಾಶಗಳಿವೆ. ಉಜ್ವಲ ಭವಿಷ್ಯವೂ ಇದೆ. ಮಕ್ಕಳು ಇಂಥ ಹವ್ಯಾಸಗಳಲ್ಲಿ ತಮಗೆ ಇಷ್ಟವಾದದ್ದನ್ನು ಆಯ್ಕೆ ಮಾಡಿಕೊಂಡಾಗ ಅವರ ಮನಸು ಏಕಾಗ್ರತೆ ಬೆಳೆಸಿಕೊಳ್ಳುತ್ತದೆ. ಅವರು ಹಾದಿ ತಪ್ಪುವುದಕ್ಕೆ ಅವಕಾಶವಾಗುವುದಿಲ್ಲ. ಏಕಾಗ್ರತೆ ಎನ್ನುವುದು ಅವರ ಓದಿಗೂ ಸಹಾಯ ಮಾಡುತ್ತದೆ.

ಇಷ್ಟೆಲ್ಲ ಸಕಾರಾತ್ಮಕ ಬೆಳವಣಿಗೆ ಘಟಿಸುವುದು ಕುಟುಂಬಕ್ಕೆ ಆಧಾರವಾಗಿರುವ ವ್ಯಕ್ತಿಯಿಂದ ಎನ್ನುವ ಸಂಗತಿ ಕಡೆಗಣಿಸಬೇಡಿ. ಕುಟುಂಬವನ್ನು ಸಲಹುವಾತ/ಕೆ ವಿರುದ್ಧ ಆರಂಭದಲ್ಲಿ ಯಾರೂ ಅವರ ವರ್ತನೆಗಳಿಗೆ ಆಕ್ಷೇಪ ತೋರದಿದ್ದರೂ ಕಾಲ ಕಳೆದಂತೆ ಸಹಿಸುತ್ತಲೇ ಹೋಗುವುದಿಲ್ಲ ಎನ್ನುವುದನ್ನು ನೆನಪಿಡಿ. ಎಲ್ಲ ಹಿನ್ನೆಲೆಯಲ್ಲಿ ಕೌಟುಂಬಿಕ ಜೀವನ ಕಮರುವುದಕ್ಕೆ ಅವಕಾಶ ಮಾಡಿಕೊಡಬೇಡಿ.

10 comments:

 1. ತುಂಬಾ ಚೆನ್ನಾಗಿ ಬರೆದಿದ್ದೀರಿ .ಅಭಿನಂದನೆಗಳು .

  ReplyDelete
 2. ನಿಮ್ಮ ಮಾತು ೧೦೦% ನಿಜ.......

  ReplyDelete
 3. ಕುಮಾರರವರೇ..

  ತುಂಬಾ ಉಪಯುಕ್ತ ಸಲಹೆಗಳು..
  ನಾವು ಆಚರಣೆಗೆ ತರಬಹುದು,, ಅಂಥವುಗಳು..

  ಧನ್ಯವಾದಗಳು..

  ReplyDelete
 4. ಮತ್ತೆ ಮತ್ತೆ ಓದುವ ಹಾಗಿದೆ ,ತುಂಬಾ ಚೆನ್ನಾಗಿದೆ.

  ReplyDelete
 5. ಅಂಬರೀಶ್. ವಾಲ್ಮೀಕಿSaturday, 26 November, 2011

  ಸಾರ್ ನೀವು ಇಂತಹ ಒಳ್ಳೆಯ ಸಲಹೆಗಳನ್ನು ಕೇವಲ ಇಂಟರ್ ನೆಟ್ ನಲ್ಲಿ ಪ್ರಕಟಿಸುತ್ತಿದ್ದೇರಿ ಆದರೆ ನೀವೆ ಒಂದು ಪತ್ರಿಕೆಯನ್ನು ಪ್ರಕಟಿಸಿದರೆ ಇನ್ನೂ ಉಪಯುಕ್ತ ಎಂದೆನಿಸುತ್ತದೆ.

  ReplyDelete
 6. ಜವಾಗಲೂ ಒಂದೊಳ್ಳೆಯ ಲೇಖನ. ಓದಿದ ಪ್ರತಿಯೊಬ್ಬರಿಗೂ ಉಪಯೋಗವಾಗುವುದು ಎಂಬುದು ನನ್ನ ಅಭಿಪ್ರಾಯ. ಮಾನಸಿಕ ಅಸಮತೋಲನವೇ ಪ್ರತಿ ತೊಂದರೆಗೂ ಕಾರಣ. ಸಮತೋಲನದ ಮನಸ್ಸು ಪ್ರಪಂಚವನ್ನೇ ಗೆಲ್ಲಬಹುದು.
  ನೀವು ಶೀಘ್ರಕೋಪಿಗಳಾಗಿದ್ದರೆ-ಸಿಡುಕುಮೋರೆಯವರಾಗಿದ್ದರೆ ನಿಮ್ಮ ಮಕ್ಕಳಲ್ಲಿ ನಿಮ್ಮ ಬಗ್ಗೆ ಅಂಜಿಕೆ ಭಾವ ಬೆಳೆಯುತ್ತಲೇ ಹೋಗುತ್ತದೆ. ಇದು ನಿಜಕ್ಕೂ ಸತ್ಯವಾದ ಮಾತು. ಇದೊಂದು ಕೊರತೆಯಿಂದ ನಮ್ಮ ಮನಸ್ಸು ಒಡೆದು ಕೂಡಿಕೊಳ್ಳುವುದಕ್ಕೆ ತಡಕಾಡಿ ಪರಿತಪಿಸುತ್ತದೆ.

  ReplyDelete
 7. ಕೆಲವೊಮ್ಮೆ ಬದುಕುಗಳು ಸರಿಪಡಿಸಲಾಗದ ಹಂತದಲ್ಲಿರುತ್ತವೆ.ಅಲ್ಲಿ ಸಂಬಂಧ ಕುದುರಿಸುವ ಕಲೆಯ ಉಪಯೋಗ ನಡೆಯುವುದೇ ಇಲ್ಲ. ಒಂದು ಮಾತಿನಂತೆ ಬಿರುಕಿಟ್ಟ ಗೋಡೆಗೆ ತೇಪೆ ಹಚ್ಚಿದಂತೆ. ಎಷ್ಟೆ ತೇಪೆ ಹಚ್ಚಿದರೂ ನಿಜದ ಗೋಡೆಯ ಗಟ್ಟಿತನ ಉಳಿಯುವುದಿಲ್ಲ. ಗಟ್ಟಿಯಾಗಬೇಕಾದರೆ ಮತ್ತೊಂದು ಗೋಡೆ ಕಟ್ಟಲು ಪ್ರಯತ್ನಿಸಬೇಕು.ಸಂಬಂದ ಅನ್ನೋದು ಬರೀ ನಂಬಿಕೆ.ಎಲ್ಲವನ್ನೂ ಮುಚ್ಚಿ ಹಾಕಿ ಒಬ್ಬರಿಗೊಬ್ಬರು ಸರಿ- ತಪ್ಪುಗಳನ್ನು ಒಪ್ಪಿಕೊಳ್ಳುವುದು.ಮನಸ್ಸು ಅಷ್ಟು ಸುಲಭದಲ್ಲಿ ಯಾರೊಂದಿಗೂ ಒಗ್ಗಿಕೊಳ್ಳುವಂತಹದ್ದಲ್ಲ. ಅದರಲ್ಲೂ ಸ್ತ್ರೀಯರ ಮನಸ್ಸು ಇನ್ನಷ್ಟು ಗಟ್ಟಿ. ಗಂಡಸು ಈ ವಿಷಯದಲ್ಲಿ ತುಂಬಾ ದುರ್ಬಲ.

  ReplyDelete
 8. ಗಂಡ ಹೆಂಡತಿ ಮಧ್ಯೆ ಇರುವ ಸಂಬಂಧ ಅವರಿಬ್ಬರ ಸಂಸ್ಕಾರ, ಬದ್ಧತೆ, ವಿವೇಕ, ವಿವೇಚನೆ, ತ್ಯಾಗ ಬುದ್ಧಿ, ಕ್ಷಮಾಗುಣ, ಹೊಂದಾಣಿಕೆಯ ಪ್ರವೃತ್ತಿ, ಕಷ್ಟಸಹಿಷ್ಣುತೆ, ಔದಾರ್ಯ ಮೊದಲಾದ ಅಂಶಗಳನ್ನು ಅವಲಂಬಿಸಿರುತ್ತದೆ.ಒಬ್ಬರ ಸೋಲು ಇನ್ನೊಬ್ಬರ ಗೆಲುವಿಗೆ ಸೋಪಾನವಾಗುತ್ತದೆ. ಇನ್ನೊಬ್ಬರ ಅರ್ಥಹೀನ ಬದುಕು ಮತ್ತೊಬ್ಬರಿಗೆ ಅರ್ಥಪೂರ್ಣತೆ ತಂದುಕೊಡುತ್ತದೆ
  ಹೊಂದಾಣಿಕೆ ಎಂದರೆ ಬರೀ ಮಾತುಗಳಿಗೆ ಸಮ್ಮತಿ ನೀಡುವುದಲ್ಲ,ಮಾತುಗಳ ಉದ್ದೇಶಗಳನ್ನು ಅರ್ಥೈಸಿಕೊಂಡು ಸಮ್ಮತಿಸುವುದು. ಹೊಂದಾಣಿಕೆ ಎಂದರೆ ಕೋಪವನ್ನು ಬಚ್ಚಿಟ್ಟುಕೊಂಡು ಇರುವುದಲ್ಲ
  ಕೋಪ ಬಾರದ ರೀತಿಯಲ್ಲಿ ಪರಿಹಾರವನ್ನು ಕಂಡು ಕೊಳ್ಳುವುದು,ಹೊಂದಾಣಿಕೆ ಎಂದರೆ ತಪ್ಪುಗಳನ್ನು ವಿಮರ್ಶೆ ಮಾಡದಿರುವುದಲ್ಲ ತಪ್ಪುಗಳೇನಿದ್ದರೂ ಮನಸ್ಸಿಗೆ ಮುದವಾಗುವಂತೆ ಒಪ್ಪಿಸುವುದು ಹೊಂದಾಣಿಕೆ ಎಂದರೆ ಯಾವಾಗಲೂ ಮೌನವಾಗಿದ್ದು ಬಿಡುವುದಲ್ಲ,ಮಾತುಗಳನ್ನು ಎಲ್ಲೆ ಮೀರಿ ಹೋಗದಂತೆ ಕಾಪಾಡಿಕೊಳ್ಳುವುದು.
  ಒಂದೊಳ್ಳೆಯ ಲೇಖನ….ಧನ್ಯವಾದಗಳು

  ReplyDelete
 9. article super sir.......

  ReplyDelete
 10. ಸರ್, ತುಂಬಾ ದಿನಗಳ ನಂತರ ವೆಬ್ ನಲ್ಲಿ ಭೇಟಿಯಾಗುತ್ತಿರುವೆ. ನಿಮ್ಮ ಲೇಖನ ಅರ್ಥಪೂರ್ಣವಾಗಿದೆ. ನಿಮ್ಮ ನೆನಪು ಸದಾ ನನ್ನಲ್ಲಿರುತ್ತದೆ. -ಸಿದ್ಧರಾಮ ಹಿರೇಮಠ.

  ReplyDelete