• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಸಂಕೋಚವ ಬಿಡು. . .!!


ಜೀವನದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಸರಸರನೆ ಏರುವುದಕ್ಕೆ ಕೆಲವೊಂದು ಸ್ವಭಾವಗಳು ಅಡ್ಡಿಯಾಗುತ್ತವೆ. ಅವುಗಳಲ್ಲಿ ಸಂಕೋಚವೂ ಸೇರಿದೆ. ಹಾಗಿದ್ದರೆ ಸಂಕೋಚದ ಅವಶ್ಯಕತೆಯೆ ಇಲ್ಲವೆ ಎಂದು ನೀವು ಪ್ರಶ್ನಿಸಬಹುದು. ತಪ್ಪು ಮಾಡಲು-ಸುಳ್ಳು ಹೇಳಲು ಸಂಕೋಚವಿರಬೇಕೆ ವಿನ: ಮಿಕ್ಕಂತೆ ಇದರ ಅವಶ್ಯಕತೆಯಿಲ್ಲ. ಇದೇ ರೀತಿ ದಾಕ್ಷಿಣ್ಯ ಸಹ. ನೀವು ಸಂಕೋಚ ಸ್ವಭಾವದವರಾಗಿದ್ದರೆ ದಾಕ್ಷಿಣ್ಯವೂ ಅದರ ಜೊತೆಗೆ ಇರುತ್ತದೆ. ಇವೆರಡರಿಂದ ಜೀವನದಲ್ಲಿ ಪಡಬೇಕಾದ ಕಷ್ಟ-ನಷ್ಟ ಅಪಾರ. ಇದನ್ನು ನಿವಾರಿಸಿಕೊಳ್ಳುವುದು ಹೇಗೆ, ಉಪಾಯ ಇಲ್ಲಿದೆ...

ಸಮ ವಯಸ್ಕರೊಂದಿಗೆ ಬೆರೆಯಲು ಅಡ್ಡಿ
ಭಾರತೀಯ ವಾತಾವರಣ ತುಂಬ ಸಂಕೀರ್ಣ. ಮೇಲು ಜಾತಿ-ಕೆಳ ಜಾತಿ, ಆ ಕೋಮು-ಈ ಕೋಮು, ಶ್ರೀಮಂತ-ಬಡವ, ಮಹಾನಗರ-ಹಳ್ಳಿ, ರೂಪು-ಬಣ್ಣ-ಭಾಷೆ-ವೇಷ-ನಡೆ-ನುಡಿ ಇತ್ಯಾದಿ ಅನೇಕ ಅಂಶಗಳು ಸಂಕೋಚವನ್ನು ಉದ್ದೀಪನ ಮಾಡುತ್ತಿರುತ್ತವೆ. ಕೆಲವರು ದಿಟ್ಟತನದಿಂದ ಇದರಿಂದ ಪಾರಾದರೆ ಉಳಿದವರು ಸಂಕೋಚದ ಸುಳಿಯಲ್ಲಿಯೆ ಸಿಲುಕಿರುತ್ತಾರೆ. ಬಾಲ್ಯದಲ್ಲಿದ್ದಾಗ ಪ್ರಭಾವ ಬೀರಿದ ಪರಿಸರದ ಅಂಶಗಳೇ ಜೀವನದ ಉದ್ದಕ್ಕೂ ಆಳುತ್ತಿರುತ್ತದೆ. ಅವರು ದೊಡ್ಡ ನಗರದವರು ನಾವು ಹಳ್ಳಿವರು ಅವರೊಂದಿಗೆ ಹೇಗೆ ಮಾತಾಡುವುದು ಏನು, ಅವರು ಇಂಗ್ಲೀಷಿನಲ್ಲಿ ತುಂಬ ಚೆನ್ನಾಗಿ ಮಾತನಾಡುತ್ತಾರೆ, ನಮಗೆ ಇಂಗ್ಲೀಷ ಬರುವುದಿಲ್ಲ. ಅವರು ಉತ್ತಮವಾಗಿ ಡ್ರೆಸ್ ಮಾಡುತ್ತಾರೆ. ಅವರ ರೀತಿ ನಾವು ಉಡುಗೆ-ತೊಡುಗೆ ಧರಿಸುವುದಿಲ್ಲ. ಇಂಥ ಸಣ್ಣಸಣ್ಣ ಅಂಶಗಳು ಕೂಡ ಬೃಹದಾಕಾರವಾಗಿ ಕಾಡತೊಡಗಿರುತ್ತವೆ.

ಭಾಷೆಯ ಕೊಡುಗೆ ಅಪಾರ 
ಓರ್ವ ವ್ಯಕ್ತಿಯ ಸಂಕೋಚದ ವಿಚಾರದಲ್ಲಿ ಭಾಷೆಯ ಕೊಡುಗೆ ಅಪಾರ. ತನ್ನ ಮಾತೃಭಾಷೆಯಲ್ಲಿ ಸೊಗಸಾಗಿ ವ್ಯವಹರಿಸುವವರು ಇಂಗ್ಲೀಷ್ ಎಂದೊಡನೆ ಮುದುರಿಕೊಳ್ಳುತ್ತಾರೆ. ಇಂಗ್ಲೀಷ ಗೊತ್ತಿರುವವರು ಮತ್ತು ಗೊತ್ತಿಲ್ಲದವರು ಎಂಬ ಎರಡು ವರ್ಗಗಳ ಸೃಷ್ಟಿಯಾಗಿದೆ. ಎರಡನೇಯ ವರ್ಗ ಗ್ರಾಮೀಣ ಪ್ರದೇಶದಲ್ಲಿಯೆ ಹೆಚ್ಚು. ಈ ಕಾರಣದಿಂದ ಉನ್ನತ ವ್ಯಾಸಂಗದ ಸಲುವಾಗಿ ದೊಡ್ಡ ದೊಡ್ಡ ನಗರಗಳತ್ತ ಬಂದಾಗ ಇವರು ಇಂಗ್ಲೀಷ್ ಮಾತನಾಡುವ ಸಹಪಾಠಿಗಳು-ಪರಿಚಯಸ್ಥರೊಡನೆ ಬೆರೆಯುವುದಿಲ್ಲ. ಅವರರಾಗಿಯೇ ಸ್ನೇಹಕ್ಕೆ ಮುಂದಾದರೂ ಹಿಂಜರಿಯುತ್ತಾರೆ. ಇದಕ್ಕೆ ಕಾರಣ ಸಂಕೋಚ. ನಾನು ಇಂಗ್ಲೀಷಿನಲ್ಲಿ ತಪ್ಪುತಪ್ಪಾಗಿ ಮಾತನಾಡಿದರೆ ಅವರು ತಪ್ಪು ತಿಳಿಯಬಹುದು-ನಗಬಹುದು-ಕುಹಕವಾಡಬಹುದು ಎಂಬ ಭೀತಿ ಕಾಡುತ್ತಿರುತ್ತದೆ. ಈ ಭೀತಿ ಸಂಕೋಚಕ್ಕೆ ನೀರು-ಗೊಬ್ಬರ ಹಾಕಿ ಬೆಳೆಸಿದಂತಾಗುತ್ತದೆ. ಇದರಿಂದ ಸುತ್ತಲಿನ ವರ್ತುಲವನ್ನು ಹೆಚ್ಚಿಸಿಕೊಳ್ಳದೇ ಸದಾ ತಮ್ಮ ಸ್ವಭಾವದವರ ಜೊತೆಯೆ ಇರುತ್ತಾರೆ.

ನಗೆಪಾಟಲು
ಯಾವ ಭಾಷೆಯೂ ಕೀಳಲ್ಲ, ಯಾವ ಭಾಷೆಯೂ ಮೇಲಲ್ಲ. ಇಂಗ್ಲೀಷಿನಲ್ಲಿ ಮಾತನಾಡಿದ ಮಾತ್ರಕ್ಕೆ ಬುದ್ದಿವಂತರು, ಮಾತೃಭಾಷೆಯಲ್ಲಿಯೆ ಮಾತನಾಡುವವರು ದಡ್ಡರು ಎಂಬ ಸ್ವಯಂ ಧೋರಣೆಯೆ ಸರಿಯಲ್ಲ. ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ಪ್ರತಿಭೆಯ ಖನಿಗಳೇ ಬಂದಿರುತ್ತಾರೆ. ಆದರೆ ಇವರಿಗೆ ಕ್ರಮಬದ್ಧವಾದ ಇಂಗ್ಲೀಷ್ ಶಿಕ್ಷಣ ಗೊತ್ತಿರುವುದಿಲ್ಲ. ಇವರಿಗೆ ಕಾಲೇಜುಗಳಲ್ಲಿ ಪ್ರತ್ಯೇಕವಾದ ತರಗತಿಗಳ ಮೂಲಕ ಇಂಗ್ಲೀಷ್ ಕಲಿಸಿದರೆ ನಗರದಲ್ಲಿ ಇದ್ದು ಕಾನ್ವೆಂಟಿನಲ್ಲಿ ಓದಿದವರಿಗಿಂತ ಸರಸರನೆ ಮುನ್ನಡೆಯಬಲ್ಲರು. ಅವರಿಗಿಂತಲೂ ಅತ್ಯುತ್ತಮವಾಗಿ ಮಾತನಾಡಬಲ್ಲರು. ಈ ಕೆಲಸ ಆಗಬೇಕಿದೆ. ಆದರೆ ಇಂಗ್ಲೀಷ್ ಭಾಷೆ ಸರಿಯಾಗಿ ಗೊತ್ತಿಲ್ಲ ಎಂದು ಹೇಳಲು ಯಾವ ಸಂಕೋಚವೂ ಬೇಡ. ನಮ್ಮ ಭಾಷೆಯಲ್ಲಿಯೆ ಅತ್ಯುತ್ತಮವಾಗಿ ವ್ಯವಹರಿಸಬಲ್ಲೆವು ಎಂಬ ಆತ್ಮವಿಶ್ವಾಸವಿದ್ದರೆ ಸಾಕು. ಈ ರೀತಿ ಮಾಡದ ರಾಜಕಾರಣಿಗಳು ರಾಜ್ಯ ಬಿಟ್ಟು ಹೊರಗೆ ಹೋದಾಗ ಅಲ್ಲಿಯ ಪತ್ರಕರ್ತರು ಇಂಗ್ಲೀಷಿನಲ್ಲಿ ಕೇಳಿದ ಪ್ರಶ್ನೆಗಳಿಗೆ ತಪ್ಪುತಪ್ಪಾದ ಮತ್ತು ಅಪಾರ್ಥ ಕೊಡುವ ಇಂಗ್ಲೀಷಿನಲ್ಲಿ ಮಾತನಾಡಿ ನಗೆಪಾಟಲಿಗೆ ಈಡಾಗುತ್ತಾರೆ. ಇದರ ಬದಲಿಗೆ ಮಾತೃಭಾಷೆಯಲ್ಲಿಯೆ ಸ್ಪಷ್ಟವಾಗಿ-ನಿಖರವಾಗಿ ಮಾತನಾಡಿದರೆ ಅವರೇ ಪ್ರಭಾವಿತರಾಗುತ್ತಾರೆ. ಪ್ರಾದೇಶಿಕ ಭಾಷೆಯಲ್ಲಾಡಿದ ಮಾತಿಗೆ ಇಂಗ್ಲೀಷ್ ಅಥವಾ ಹಿಂದಿಯಲ್ಲಿ ತಲೆಬರಹ ಕೊಟ್ಟು ಕೊಳ್ಳುತ್ತಾರೆ. ಇಷ್ಟೆಲ್ಲ ತಪ್ಪಿಗೆ ಕಾರಣವೇನು ಗೊತ್ತೆ ಅದೇ ಸಂಕೋಚ !

ಸ್ವಯಂ ನಿರ್ಬಂಧ
ಸಂಕೋಚ ಪ್ರವೃತ್ತಿಯವರು ನಿಸ್ಸಂಕೋಚವಾಗಿ ಭಿನ್ನ ಸ್ವಭಾವದವರೊಡನೆ ಬೆರೆಯಲು ಯಾರೂ ನಿರ್ಬಂಧ ವಿಧಿಸಿರುವುದಿಲ್ಲ. ಆದರೆ ಇವರು ತಮ್ಮಷ್ಟಕ್ಕೆ ನಿರ್ಬಂಧ ಹೇರಿಕೊಂಡಿರುತ್ತಾರೆ. ಇದಕ್ಕೆ ಇತರರ ಮುಂದೆ ನಗೆಪಾಟಲಿಗೆ ಈಡಾಗಬಹುದೆಂಬ ಹಿಂಜರಿಕೆ. ಇದರಿಂದ ತನ್ನ ಸ್ವಭಾವಕ್ಕೆ ವಿರುದ್ಧವಾದ ವ್ಯಕ್ತಿಗಳು ಬಂದಾಗ ಮುದುರಿಕೊಳ್ಳುತ್ತಾರೆ. ಇದು ಹೇಗಿರುತ್ತದೆ ಎಂದರೆ ಶತ್ರುಗಳು ಬಂದಾಗ ಸ್ವಯಂ ರಕ್ಷಣೆಗಾಗಿ ಆಮೆ ತನ್ನ ಚಿಪ್ಪಿನೊಳಗೆ ಹುದುಕಿಕೊಳ್ಳುವಂತೆ ಇರುತ್ತದೆ. ವ್ಯಕ್ತಿಗಳು ಈ ರೀತಿ ಸಂಕೋಚದ ಚಿಪ್ಪಿನೊಳಗೆ ಮುದುರಿಕೊಳ್ಳುವುದರಿಂದ ಅನೇಕ ರೀತಿಯ ನಷ್ಟಗಳಿಗೆ ಒಳಗಾಗಬಹುದು. ಇದರ ಅರಿವು ಅವರಿಗಿರುತ್ತದಾದರೂ ಅದರಿಂದ ಪಾರಾಗುವ ಪ್ರಯತ್ನ ಮಾಡುವುದಿಲ್ಲ.

ಆತ್ಮವಿಶ್ವಾಸದ ಕೊರತೆ
ಸಂಕೋಚ ಪ್ರವೃತ್ತಿ ಬೆಳೆಯಲು ಮತ್ತೊಂದು ಕಾರಣವೇನೆಂದರೆ ಆತ್ಮವಿಶ್ವಾಸದ ಕೊರತೆ. ಕೆಲವರು ಭಾಷಾ ಸಮಸ್ಯೆ-ಉಡುಪು-ನಡೆ-ನುಡಿಯಲ್ಲಿ ವ್ಯತ್ಯಾಸ ಇರುವ ಸಮುದಾಯಗಳು ಇರುವ ಸ್ಥಳಗಳಿಗೆ ಹೋದರೂ ಹಿಂಜರಿಯದೆ ಅವರ ಜೊತೆ ಬೆರೆತು ಅಲ್ಲಿಯ ಅಂಶಗಳನ್ನೂ ಅರಿತು ಅಳವಡಿಸಿಕೊಳ್ಳುತ್ತಾರೆ. ಇದಕ್ಕೆ ಒಂದೇ ಒಂದು ಕಾರಣ ಆತ್ಮವಿಶ್ವಾಸ ! ಇದರ ಕೊರತೆಯಿಂದ ವ್ಯಕ್ತಿ ಸಾಮಾಜಿಕವಾಗಿ-ಆರ್ಥಿಕವಾಗಿ ಮುಂದಡಿಯಿಡುವ ಬದಲು ಹಿಂದಡಿಯಿಡುತ್ತಲೇ ಸಾಗುತ್ತಾನೆ. ಕ್ರಮೇಣ ಈತ ಏಕಾಂಗಿಯಾಗುವ ಸಾಧ್ಯತೆಗಳೂ ಹೆಚ್ಚು.

ಹಗಲುಗನಸು
ಆತ್ಮವಿಶ್ವಾಸ ಕೊರತೆಯಿಂದ ಏಕಾಂಗಿಗಳಾದವರಲ್ಲಿ ಕಂಡುಬರುವ ಮತ್ತೊಂದು ಗಮನಾರ್ಹ ಅಂಶವೆಂದರೆ ಹಗಲುಗನಸು ಕಾಣುವುದು. ಇಂಥ ಪ್ರವೃತ್ತಿ ಸಮಾಜದೊಂದಿಗೆ ಬೆರೆಯದೇ ಪ್ರತ್ಯೇಕವಾಗಿರುವ ಗುಣ ಬೆಳೆಸುತ್ತದೆ. ಹಗಲುಗನಸು ಕಾಣುವ ರೂಢಿ ಬಲಿತಂತೆಲ್ಲ ವ್ಯಕ್ತಿಯಲ್ಲಿ ಖಿನ್ನತೆಯೂ ಆವರಿಸುತ್ತದೆ. ಕ್ರಮೇಣ ಇದು ಮನೋರೋಗದ ಸ್ವರೂಪಕ್ಕೆ ಮಾರ್ಪಾಡಾಗುತ್ತದೆ. ಇಂಥ ವ್ಯಕ್ತಿಯಲ್ಲಿ ಹತಾಶೆ ಆವರಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಯೂ ದಟ್ಟವಾಗಿರುತ್ತದೆ.

ಸಂವಹನಕ್ಕೆ ತೊಡಕು
ಸಂಕೋಚ ಮಿತಿಮೀರಿದಾಗ ಸಂವಹನಿಸುವ ಸಾಮರ್ಥ್ಯವೂ ಕುಗ್ಗುತ್ತದೆ. ತನ್ನದೇ ಮಾತೃಭಾಷೆಯವರು-ಸಮುದಾಯದವರು-ಸಹೋದ್ಯೋಗಿಗಳೊಂದಿಗೂ ಮಾತನಾಡಲು ಹಿಂಜರಿಯುವಂಥ ಸ್ಥಿತಿಯನ್ನು ತಮ್ಮಷ್ಟಕ್ಕೆ ನಿರ್ಮಿಸಿಕೊಳ್ಳುತ್ತಾರೆ. ಒಂದು ವೇಳೆ ಇಂಥವರು ಪರಿಸ್ಥಿತಿ ಬಲವಂತದಿಂದ ಮಾತನಾಡಿದರೂ ಅದರಿಂದ ತಪ್ಪು ಸಂವಹನಗಳಾಗುವ ಸಾಧ್ಯತೆ ಹೆಚ್ಚು. ಇದರಿಂದ ವ್ಯಕ್ತಿಯ ಮೇಲೆ ಮತ್ತಷ್ಟು ನಕಾರಾತ್ಮಕ ಪರಿಣಾಮಗಳಾಗುತ್ತವೆ

ನಿವಾರಿಸಿಕೊಳ್ಳುವುದು ಹೇಗೆ
ನಿಮಗೆ ಸಂಕೋಚ ಉಂಟು ಮಾಡುವಂಥ ಸನ್ನಿವೇಶಗಳ್ಯಾವುದು, ಎಂಥ ವ್ಯಕ್ತಿಯೊಡನೆ ನೀವು ಸಂಕೋಚದಿಂದ ವರ್ತಿಸುತ್ತೀರಿ, ವಿರುದ್ಧ ಲಿಂಗಿಗಳೊಡನೆ ಸಹಜವಾಗಿ ಮಾತನಾಡಲು ಹಿಂಜರಿಕೆ-ಸಂಕೋಚ ಇದೆಯೆ, ಭಾಷೆ-ಉಡುಪು-ನಡೆ-ನುಡಿ-ಶಿಕ್ಷಣ-ಪ್ರದೇಶ ಇವುಗಳು ಕಾರಣವಾಗಿದೆಯೆ ಎಂದು ಪಟ್ಟಿ ಮಾಡಿ. ಹೆಚ್ಚು ಸಂಕೋಚ ಉಂಟು ಮಾಡುವ ವ್ಯಕ್ತಿಗಳು-ಸನ್ನಿವೇಶ ಗುರುತಿಸಿಕೊಳ್ಳಿ. ಅಂಥ ವ್ಯಕ್ತಿಯೊಡನೆ ಯಾವ ರೀತಿ ಮಾತನಾಡಿದ್ದರೆ ಸರಿಯಿರುತ್ತಿತ್ತು, ಎಲ್ಲಿ ತಪ್ಪಾಗಿದೆ ಮತ್ತು ಆ ಸನ್ನಿವೇಶದಲ್ಲಿ ಇನ್ಯಾವ ರೀತಿ ವರ್ತಿಸಬಹುದಿತ್ತು. ಮುಂದೆ ಇಂಥ ವ್ಯಕ್ತಿ-ಸನ್ನಿವೇಶ ಎದುರಾದಾಗ ಯಾವ ರೀತಿ ಸೂಕ್ತವಾಗಿ ಪ್ರತಿಕ್ರಿಯಿಸಬಹುದು ಎಂದು ಯೋಚಿಸಿ. ಮುಂದೆ ಸಕಾರಾತ್ಮಕವಾಗಿ ಸ್ಪಂದಿಸಲು ಯತ್ನಿಸಿ. ಒಂದೆರಡು ಘಟನೆಗಳ ನಂತರ ನಿಮ್ಮಲ್ಲಿ ಸಾಕಷ್ಟು ಸುಧಾರಣೆಯಾಗಿರುತ್ತದೆ.

ನಿಮ್ಮ ಸಂಕೋಚಕ್ಕೆ ಉಡುಪು ಕಾರಣವಾಗಿದಲ್ಲಿ ಸಾಧ್ಯವಾದರೆ ಅಂಥ ಉಡುಪನ್ನು ಬದಲಾಯಿಸಲು ಪ್ರಯತ್ನಿಸಿ. ಅಂಥ ಉಡುಪನ್ನೇ ಧರಿಸುವ ಅನಿವಾರ್ಯತೆಯಿದ್ದರೂ ಸಂಕೋಚ ಬೇಡ. ವಿದೇಶಗಳಿಗೆ ಹೋದಾಗಲೂ ಭಾರತೀಯ ಉಡುಗೆ-ತೊಡುಗೆ ತೊಟ್ಟು ತಮ್ಮ ಗಂಭೀರ-ನೇರ ಸ್ವಭಾವದಿಂದ ಅಲ್ಲಿಯವರ ಮನ್ನಣೆ ಗಳಿಸಿದ ಭಾರತೀಯರ ನಿದರ್ಶನ ಸಾಕಷ್ಟಿದೆ. ಹೀಗಿರುವಾಗ ಸ್ವದೇಶದಲ್ಲಿ ಉಡುಪಿನ ವಿಚಾರವಾಗಿ ಉದ್ವೇಗಕ್ಕೆ ಒಳಗಾಗಬೇಡಿ.

ಇಂಗ್ಲೀಷನ್ನೆ ಹೆಚ್ಚುಹೆಚ್ಚು ಬಳಸುವ ಜಾಗಗಳಿಗೆ ಹೋದಾಗ ಹಿಂಜರಿಕೆ ಬೇಡ. ಅಲ್ಲಿಯೂ ಪ್ರಾದೇಶಿಕ ಭಾಷೆಯವರು ಸಾಕಷ್ಟು ಮಂದಿ ಇರುತ್ತಾರೆ. ಪರಿಸ್ಥಿತಿಯ ಅನಿವಾರ್ಯತೆಯಿಂದ ಅವರು ಇಂಗ್ಲೀಷ್ ಅಥವಾ ಇನ್ನಿತರ ಭಾಷೆ ಬಳಸುತ್ತಿರಬಹುದು. ಇಂಥಲ್ಲಿ ಹಿಂಜರಿಕೆ ಬೇಡ. ನಿಮಗೆ ಚೆನ್ನಾಗಿ ಗೊತ್ತಿರುವ ಭಾಷೆಯಲ್ಲಿಯೆ ವ್ಯವಹರಿಸಿ. ಮತ್ತು ಉಳಿದ ಭಾಷೆ ಕಲಿಯಲು ಪ್ರಯತ್ನಿಸಿ. ನನಗೆ ಇಂಗ್ಲೀಷ್ ಭಾಷೆ ತೊಡಕಿದೆ. ತಪ್ಪಾದಲ್ಲಿ ಅನ್ಯಥಾ ಭಾವಿಸಬೇಡಿ ಎಂದು ನೇರವಾಗಿ ಹೇಳಿ. ನೀವು ಇಷ್ಟು ನೇರವಂತಿಕೆಯಾದರೆ ಯಾರೂ ನಿಮ್ಮನ್ನು ಛೇಡಿಸುವ ಪ್ರಯತ್ನವನ್ನು ಮಾಡಲಾರರು. ಇದರೊಂದಿಗೆ ಒಂದು ಮಾತು ಸದಾ ನೆನಪಿಡಿ. ನಡೆಯುವ ಕಾಲು ಎಡವುತ್ತದೆಯೆ ಹೊರತು ಕುಳಿತವರ ಕಾಲುಗಳಲ್ಲ ಎಂಬುದನ್ನು. ಮಗು ನಡಿಗೆ ಕಲಿಯುವುದು ಏಳುವ-ಬೀಳುವ ಮೂಲಕ. ಅದು ಹಾಗೆ ಸುಮ್ಮನಿದ್ದರೆ ನಡಿಗೆಯನ್ನು ಕಲಿಯಲು ಸಾಧ್ಯವೇ ಆಗುವುದಿಲ್ಲ. ಎಲ್ಲ ವಿಷಯಗಳಿಗೂ ಇದು ಅನ್ವಯಿಸುತ್ತದೆ. ತುಂಬ ಸಂಕೋಚ ಸ್ವಭಾವದ ವ್ಯಕ್ತಿಗಳೊಡನೆ ಸದಾ ಇರಬೇಡಿ. ಇಂಥ ವರ್ತುಲದಿಂದ ಆಚೆ ಬನ್ನಿ. ತುಂಬ ಆಪ್ತರಾದ ಮತ್ತು ಸಂಕೋಚವನ್ನು ರೂಢಿಸಿಕೊಳ್ಳದ ವ್ಯಕ್ತಿಯೊಡನೆ ಬೇಕಿದ್ದರೆ ನಿಮ್ಮ ಸಮಸ್ಯೆಗಳನ್ನು ಚರ್ಚಿಸಿ. ಇದರಿಂದ ನೀವು ಸಂಕೋಚ ಪ್ರವೃತ್ತಿ ತೊರೆಯಲು ಅವರ ಉತ್ತೇಜನವೂ ದೊರೆಯುತ್ತದೆ.

ಹವ್ಯಾಸ
ಹೊರಾಂಗಣ ಕ್ರೀಡೆಗಳಲ್ಲಿ ತೊಡಗಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಲ್ಲಿ ನೀವು ಚಾಂಪಿಯನ್ ಆಗಬೇಕಿಲ್ಲ. ಇಂಥ ಅಭ್ಯಾಸಗಳು ನೀವು ಸಂಕೋಚ ಪ್ರವೃತ್ತಿಯಿಂದ ಆಚೆ ಬರಲು ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ಮೈ ಮನಸುಗಳನ್ನು ಹುರುಪಿನಿಂದಿಡಲು ಸಹಾಯ ಮಾಡುತ್ತದೆ.

ಧ್ಯಾನ
ಇದರಿಂದ ಮನಸಿಗೆ ಅಪಾರ ಶಕ್ತಿ ಲಭ್ಯವಾಗುತ್ತದೆ. ಎಂಥದ್ದೆ ಪರಿಸ್ಥಿತಿಯನ್ನು ಎದುರಿಸುವ ಗುಣವನ್ನು ಬೆಳೆಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಆದ್ದರಿಂದ ಧ್ಯಾನ ತರಗತಿಗಳಿಗೆ ಸೇರಿಕೊಳ್ಳಿ. ಒಂದು ವೇಳೆ ಇದಕ್ಕೆ ಸಮಯಾವಕಾಶವಿಲ್ಲದಿದ್ದರೆ ಇದರ ಕುರಿತಾದ ಪುಸ್ತಕಗಳನ್ನು ಓದಿ ಅದರಲ್ಲಿ ನೀಡಿರುವ ಮಾರ್ಗದರ್ಶನದಂತೆ ನಡೆಯಿರಿ. 
ಪುಸ್ತಕಗಳು: ಸದಭಿರುಚಿಯ ಮತ್ತು ದಿಟ್ಟತೆಯನ್ನು ಪ್ರಚೋದಿಸುವಂಥ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ. ಇದರಿಂದ ನೀವು ಎಲ್ಲಿ ತಪ್ಪಿದರೂ ಅದನ್ನೂ ಕೂಡಲೇ ಸರಿಪಡಿಸಿಕೊಳ್ಳುವ ಮತ್ತು ಮುಂದೆ ಅಂಥ ತಪ್ಪುಗಳನ್ನು ಮಾಡದಂಥ ಪ್ರವೃತ್ತಿ ನಿಮ್ಮಲ್ಲಿ ಬೆಳೆಯುತ್ತದೆ.

ಮನೋವೈದ್ಯರನ್ನು ಕಾಣಿ
ಸಂಕೋಚದಿಂದಾಗಿ ಖಿನ್ನತೆ ಎಂಬುದು ಸಂಪೂರ್ಣ ಆವರಿಸಿಕೊಳ್ಳುವ ಮೊದಲು ಮನೋವೈದ್ಯರನ್ನು ಕಾಣಿ. ಅವರ ಸಲಹೆಗಳನ್ನು ಪಡೆಯಿರಿ. ಮತಿಭ್ರಮಣೆ ಆದವರು ಮಾತ್ರ ಮನೋವೈದ್ಯರಲ್ಲಿಗೆ ಹೋಗಬೇಕು, ನನಗೇನಾಗಿದೆ ಎಂಬ ತಪ್ಪು ಧೋರಣೆಗಳನ್ನು ಕೈ ಬಿಡಿ. ದೇಹಕ್ಕೆ ಅನಾರೋಗ್ಯ ಕಾಡುವಂತೆ ಮನಸಿಗೂ ಕಾಡುತ್ತದೆ. ಇದಕ್ಕೂ ಕಾರಣಗಳಿರುತ್ತದೆ. ಇದನ್ನು ಪತ್ತೆ ಹಚ್ಚಿ ಬೇರು ಸಮೇತ ಕೀಳುವ ಅವಶ್ಯಕತೆಯಿರುತ್ತದೆ ಎಂಬುದನ್ನು ಮನಗಾಣಿರಿ. ಮನೋವೈದ್ಯರೊಡನೆ ಆಪ್ತ ಸಮಾಲೋಚನೆ ಮಾಡುವುದರಿಂದ ಕೀಳರಿಮೆ ಎಂಬುದನ್ನೂ ಸುಲಭವಾಗಿ ನಿವಾರಿಸಿಕೊಳ್ಳುಬಹುದು ಎಂಬುದನ್ನು ನೆನಪಿಡಿ. ಮನೋವೈದ್ಯರನ್ನು ಕಾಣುವ ಹಂತಕ್ಕೂ ಮೊದಲು ಮೇಲೆ ಹೇಳಿದ ಸಲಹೆ ಅನುಸರಿಸಲು ಪ್ರಯತ್ನಿಸಿ. ಇದರಿಂದ ಖಂಡಿತ ಸಕಾರಾತ್ಮಕ ಬೆಳವಣಿಗೆ ಇರುತ್ತದೆ.

ದಾಕ್ಷಿಣ್ಯ ಪ್ರವೃತ್ತಿ ತಂದೊಡುವ ಸಮಸ್ಯೆಗಳು
ಸಂಕೋಚ-ದಾಕ್ಷಿಣ್ಯ ಎರಡೂ ಒಟ್ಟೊಟ್ಟಿಗೆ ಇರುತ್ತವೆ. ಇವೆರಡು ನಕಾರಾತ್ಮಕ ಗುಣಗಳಲ್ಲಿ ಹೆಚ್ಚು ವ್ಯತ್ಯಾಸಗಳಿಲ್ಲ. ದಾಕ್ಷಿಣ್ಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಕೂಡ ಅಪಾಯಕಾರಿಯೆ. ಇದರಿಂದ ನೀವಷ್ಟೆ ಅಲ್ಲ, ನಿಮ್ಮನ್ನು ನಂಬಿದ ಕುಟುಂಬದವರು-ಆಪ್ತರು ಕಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ನಿಮ್ಮ ಕೈನಿಂದ ಮಾಡಲಾಗದ ಅಥವಾ ನಿಮಗೆ ಬೇರೆ ಜವಾಬ್ದಾರಿ ಇದ್ದು ಸಕಾಲದಲ್ಲಿ ನೇರವೇರಿಸಲಾಗದ ಕೆಲಸಗಳನ್ನು ವಹಿಸಲು ಯಾರಾದರೂ ಮುಂದೆ ಬಂದರೆ ಅದನ್ನು ಒಪ್ಪಿಕೊಳ್ಳಬೇಡಿ. ಇದರಿಂದ ಅನಗತ್ಯ ಒತ್ತಡ ಉಂಟಾಗುತ್ತದೆ. ಸಕಾಲದಲ್ಲಿ ಕೆಲಸ ಪೂರೈಸದಿದ್ದರೆ ವೈಮನಸು ಉಂಟಾಗುವ ಸಾಧ್ಯತೆ ಇರುತ್ತದೆ. ಹಣಕಾಸು ವ್ಯವಹಾರದಲ್ಲಿಯೂ ಅಷ್ಟೆ. ನಿಮ್ಮ ಬಳಿ ಇತರರು ಸಾಲ ಕೇಳಿದಾಗ ಅವರು ಸಾಲ ಪಡೆಯುವುದಕ್ಕೆ ಅರ್ಹರೆ-ಕೊಟ್ಟ ಸಾಲ ಹಿಂದಿರುಗಿಸಬಲ್ಲರೆ, ಒಂದು ವೇಳೆ ಅವರು ನೀವು ಹೇಳಿದ ಸಮಯಕ್ಕೆ ಸಾಲದ ಹಣ ಹಿಂದಿರುಗಿಸದಿದ್ದರೆ ಅದನ್ನು ಭರಿಸುವ ಆರ್ಥಿಕ ಶಕ್ತಿ ನಿಮ್ಮಲಿದೆಯೆ, ಇದು ನಿಮ್ಮ ವ್ಯವಹಾರಗಳಿಗೆ ಅಡ್ಡಿಯಾಗುವುದಿಲ್ಲವೆ ಎಂಬ ಅಂಶಗಳನ್ನೆಲ್ಲ ಯೋಚಿಸಿ. ಇದರ ಪ್ರಕಾರ ನಡೆಯಿರಿ. ಸಾಲ ಕೊಡಲು ಸಾಧ್ಯವಿಲ್ಲ ಎನಿಸಿದರೆ ನನ್ನ ಬಳಿ ಹಣವಿಲ್ಲ ಎಂದು ಹೇಳಿ. ಇದರ ಬದಲು ನಾಳೆ ನೋಡೋಣ-ನಾಳಿದ್ದು ನೋಡೋಣ ಎಂಬ ವಾಯಿದೆಗಳನ್ನು ಹೇಳಬೇಡಿ.

ಕಾರು-ಬೈಕು
ನಿಮ್ಮ ಬಳಿ ಕಾರು ಬೈಕು ಇದ್ದಾಗ ಸ್ನೇಹಿತರು ಅದನ್ನು ಕೇಳುವುದು ಸಾಮಾನ್ಯ. ಆದರೆ ಕೇಳಿದ ವ್ಯಕ್ತಿ ಬಳಿ ಲೈಸನ್ಸ್ ಇದೆಯೆ, ಅಪಾಯವಿಲ್ಲದಂತೆ ಜಾಗರೂಕವಾಗಿ ವಾಹನ ಚಲಾಯಿಸುವಂಥ ಸ್ವಭಾವದವರೆ ಎಂಬುದನ್ನು ಯೋಚಿಸಿ. ಇಲ್ಲದಿದ್ದರೆ ಕೊಡಲು ಸಾಧ್ಯವಿಲ್ಲವೆಂದು ನೇರವಾಗಿ ಹೇಳಿ. ಇದರಿಂದ ಮುಂದಾಗಬಹುದಾದ ಅಪಾಯಗಳನ್ನು ತಪ್ಪಿಸಿಕೊಳ್ಳಬಹುದು.ನೇರವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಿ:ಸುತ್ತಿ-ಬಳಸಿ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನೀವು ನೇರವಾಗಿ ಮಾತನಾಡಿದಷ್ಟು ಹೆಚ್ಚು ಖಚಿತವಾಗಿರುತ್ತೀರಿ. ತೊಂದರೆಗಳೂ ಇರುವುದಿಲ್ಲ. ಇದರ ಬದಲು ಅವರೇನು ಎಂದುಕೊಳ್ಳುತ್ತಾರೋ-ಇವರೇನೂ ತಿಳಿದುಕೊಳ್ಳುತ್ತಾರೋ ಎಂದುಕೊಂಡರೆ ನಿಂತ ನೀರಿನಂತೆ ಕೊಳೆಯಬೇಕಾದ ಸ್ಥಿತಿ ಉಂಟಾಗುತ್ತದೆ

6 comments:

 1. ಉತ್ತಮವಾಗಿ ಲೇಖನವನ್ನು ಮನಸ್ಸಿಗೆ ಮತ್ತು ಮನುಷ್ಯನ ಸ್ವಭಾವಕ್ಕೆ ಕಟ್ಟಿ ಕೊಟ್ಟಿದ್ದೀರಿ ರೈತರೆ.ನಿಮ್ಮ ಮಾತು ಕೆಲವೊಮ್ಮೆ ಸತ್ಯ ಅನ್ನಿಸುತ್ತದೆ.ಪ್ರತೀ ಮನಸ್ಸಿಗೆ ತೆರೆದುಕೊಳ್ಳುವ ಮನಸ್ಸು ಬೇಕು.ನಾನು ಒಂದು ಲೆಕ್ಕದಲ್ಲಿ ತುಂಬಾ ಸಂಕೋಚದವನು.ಈಗ ಸ್ವಲ್ಪ ಮುಂದೆ ಬಂದಿದ್ದೇನೆ.ಅಂತೂ ಕೆಲವೊಮ್ಮೆ ಉಗಿಸಿಕೊಳ್ಳುವಾಗ ಮುಂದೆ ಬರಲು ಭಯ ಪಡುತ್ತೇನೆ.

  ReplyDelete
 2. ಮನಸ್ಸಿನ ಭಾವನೆಗಳನ್ನು, ಅನಿಸಿದ ವಿಷಯಗಳನ್ನು ಶಬ್ದಗಳಲ್ಲಿ ಕಟ್ಟಿಡುವ ಯತ್ನ ಸಂಕೋಚ,..ಏಳಿ ಎದ್ದೇಳಿ, ಮರಳಿ ಯತ್ನವ ಮಾಡಿ, ಮರಳಿ ಯತ್ನವ ಮಾಡಿ. ಗುರಿ ಮುಟ್ಟುವವರೆಗೂ ನಿಲ್ಲದಿರಿ! ಪ್ರಯತ್ನಿಸಿದರೂ ಸಫಲರಾಗದಿದ್ದರೆ ಎದೆಗುಂದಬೇಕಿಲ್ಲ; ನಡೆವರಲ್ಲದೆ, ಕುಳಿತವರು ಎಡುಹುವರೇ?, ಬರಿಯ ಮಂತ್ರದಿಂದ ಮಾವಿನ ಕಾಯಿ ಉದುರುವುದಿಲ್ಲ, ಶ್ರದ್ಧಾಪೂರ್ಣ ನಡೆ-ನುಡಿಯ, ಆತ್ಮವಿಶ್ವಾಸಿಗಳಾದ ಇಂಥವರಿಂದಲೇ ಉದ್ದಕ್ಕೂ ಅಸಾಧ್ಯ ಕೆಲಸಗಳು, ನಂಬಲಾಗದ ಮಹತ್ಕಾರ್ಯಗಳು ನಡೆದಿರುವುದು,
  ಉತ್ತಮ ಲೇಖನ....:):):):)

  ReplyDelete
 3. ಪರಿತಪನೆ, ಚಡಪಡಿಕೆ, ಕೊರಗು, ವೇದನೆ, ಹತಾಶೆ, ಅಸಹಾಯಕತೆ, ವಿಷಾದ, ಅಲವತ್ತುಕೊಳ್ಳುವಿಕೆ, ಭಾವಭಂಗದ ಹಿಂದುಗಡೆ ಈ ಸಂಕೋಚವೆಂಬ ಹೆಮ್ಮಾರಿ ಕುಳಿತುಕೊಂಡಿದೆ.
  ಉತ್ತಮ ಲೇಖನ.....:):):):)

  ReplyDelete
 4. Nanagu kelavu vishayagalli sankocha swabhavavide adarinda horabaralu prayatnisuttini....lekhana bahala upayukthavaagide....

  ReplyDelete
 5. nannastu sankochada swabhava bereyarigu illa anisuttittu. Omme Vishveshwara bhattara Lekhana Odida mele ondastu kadime agide anniside. adaru beru sameta tegeduhakalu agilla. prayathna munduvaredide.

  ReplyDelete