• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಓ ಗೆಳೆಯರೆ ನನ್ನ ಗೆಳತಿಯರೆ...!!

'ಜೀವನದಲ್ಲಿ ಒಳ್ಳೆಯ ಪತಿ/ಪತ್ನಿ, ಮಕ್ಕಳು ಮತ್ತು ಸ್ನೇಹಿತರು ದೊರೆಯಲು ಪುಣ್ಯ ಮಾಡಿರಬೇಕಮ್ಮ'  ಇದು ವರನಟ ಡಾ||ರಾಜ್ಕುಮಾರ್ ಅವರು ಸಿನಿಮಾವೊಂದರಲ್ಲಿ ಹೇಳಿರುವ ಮಾತು. ಪತಿ/ಪತ್ನಿ ಮತ್ತು ಮಕ್ಕಳಿಗೆ ಮೊದಲು ಬಾಂಧವ್ಯ  ಬೆಳೆಯುವುದು ಸ್ನೇಹಿತರೊಡನೆ. ಜೀವನದ ಹಾದಿಯಲ್ಲಿ ಅದೆಷ್ಟೋ ಮಂದಿ ಪರಿಚಯವಾಗುತ್ತಲೇ ಇರುತ್ತಾರೆ. ಆದರೆ ಅವರೆಲ್ಲರನ್ನೂ ಸ್ನೇಹಿತರೆಂದು ಪರಿಗಣಿಸಲು ಸಾಧ್ಯವೆ? ಖಂಡಿತ ಇಲ್ಲ. ಪರಿಚಯವೇ ಬೇರೆ; ಸ್ನೇಹವೇ ಬೇರೆ... ಆದರೆ ನಾವು ಇದನ್ನು ಹೇಗೆ ತಿಳಿಯುತ್ತೇವೆ...? ಎಲ್ಲರೂ ಜೀವನದ ಸಿಹಿ-ಕಹಿ ಹಂಚಿಕೊಳ್ಳಲು ಸಾಧ್ಯವೆ...? ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಬಾಲ್ಯ... ಅದೆಷ್ಟು ಸುಂದರ
ಚಿಕ್ಕವರಾಗಿದ್ದಾಗ ಓಣಿ-ಕೇರಿ, ಗ್ರಾಮ, ಬಡಾವಣೆಯ ಸಮಾನ ವಯಸ್ಕರೆಲ್ಲ ಸ್ನೇಹಿತರೆ. ಯಾವುದೇ ಪೂರ್ವಾಗ್ರಹವಿಲ್ಲದ ವಯೋಮಾನವದು. ಆದರೆ ಹೈಸ್ಕೂಲ್ ಹಂತಕ್ಕೆ ಬರುತ್ತಿದ್ದಂತೆ ನಮ್ಮ ಸ್ನೇಹಿತರ ವಲಯ ಮೊದಲಿನಷ್ಟು ದೊಡ್ಡದಾಗಿರುವುದಿಲ್ಲ. ಕಾಲೇಜಿಗೆ ಬಂದಾಗ ಮೊದಲಿಗಿಂತ ಕಡಿಮೆಯಾಗಿರುತ್ತದೆ. ವಿದ್ಯಾಭ್ಯಾಸ ಮುಗಿದು ಉದ್ಯೋಗಸ್ಥರಾದ ಮೇಲೆ ಸಂಖ್ಯೆ ಬಹಳ ಸೀಮಿತವಾಗಿರುತ್ತದೆ. ಮದುವೆಯಾದ ಮೇಲಂತೂ ಮತ್ತಷ್ಟು ಕುಗ್ಗುತ್ತದೆ. ಯಾಕೆ ಹೀಗೆ..? ಇದಕ್ಕೆ ಕಾರಣ ನಮ್ಮ ಆದ್ಯತೆ-ಅಭಿರುಚಿ-ಆಲೋಚನಾ ಧಾಟಿಗಳು ಬದಲಾಗುತ್ತಾ ಹೋಗುವುದು. ಬಾಲ್ಯದಲ್ಲಿ ಆದ ಸ್ನೇಹ ಬೆಳೆಯುತ್ತಾ ಹೋದಂತೆ ಗಟ್ಟಿಯಾಗುತ್ತಾ ಹೋಗಿ ಜೀವನದ ಕೊನೆಯವರೆಗೂ ಇರುವುದು ತುಂಬ ಅಪರೂಪ.

ಮನೋಧರ್ಮ:
ವಿಭಿನ್ನ ಮನೋಧರ್ಮದವರಲ್ಲಿ ಗಾಢಸ್ನೇಹ ಬೆಳೆಯುವುದು ಬಹಳ ಅಪರೂಪ. ಅಲ್ಪಸ್ವಲ್ಪ ವ್ಯತ್ಯಾಸ ಗಳೊಂದಿಗೆ ಒಂದೇ ಮನೋಧರ್ಮ ಹೊಂದಿರುವವರು ಜೀವದ ಗೆಳೆಯರಾಗುವ ಅವಕಾಶ ಹೆಚ್ಚು. ಪರಸ್ಪರ ಅಭಿರುಚಿ-ಆಸಕ್ತಿ ಕೇಂದ್ರಗಳು ಒಂದೇ ಆಗಿರುವುದರಿಂದ ಅವರ ಮಟ್ಟದಲ್ಲಿ ಚರ್ಚೆಗಳು ಆಗುತ್ತಿರುತ್ತವೆ. ಕಾರ್ಯಕ್ರಮಗಳಲ್ಲಿ  ಭಾಗವಹಿಸುತ್ತಿರುತ್ತಾರೆ. ಸಿನಿಮಾ-ನಾಟಕಗಳನ್ನು ಒಟ್ಟಿಗೆ ನೋಡುತ್ತಿರುತ್ತಾರೆ. ಪ್ರವಾಸಗಳಿಗೂ ಒಟ್ಟಿಗೆ ಹೋಗಿ ಬರುತ್ತಾರೆ. ಇವೆಲ್ಲದರಿಂದ ಅವರ ಸ್ನೇಹ ಗಟ್ಟಿಯಾಗುತ್ತಾ ಸಾಗುತ್ತದೆ. ಇಂಥ ಸ್ನೇಹದಲ್ಲಿ ಬಿರುಕು ಉಂಟಾಗುವುದು ಭಿನ್ನಾಭಿಪ್ರಾಯದಿಂದಲ್ಲ. ಅಪನಂಬಿಕೆಯಿಂದ. ಇದರ ಹೊರತು ಇಂಥ ಸ್ನೇಹ ಸುದೀರ್ಘವಾಗಿರುತ್ತದೆ.

ಸಮಾಜೀಕರಣ:
ತಂದೆ-ತಾಯಿ, ಅಜ್ಜ-ಅಜ್ಜಿ-ಬಂಧು-ಬಳಗ-ಒಡಹುಟ್ಟಿದವರು ಇವರೆಲ್ಲ ವ್ಯಕ್ತಿ ಸಮಾಜೀಕರಣಗೊಳ್ಳಲು ಸಹಾಯ ಮಾಡುತ್ತಾರೆ. ಆಸಕ್ತಿಗಳಿಗೆ ನೀರೆರೆದು ಪೋಷಿಸುತ್ತಾರೆ. ಇವೆಲ್ಲದರ ಜೊತೆಗೆ ಪರಿಸರದಲ್ಲಿ ಒದಗುವ ಗೆಳೆಯರು ಸಹ ಸಮಾಜೀಕರಣಗೊಳ್ಳಲು ಮಹತ್ವದ ಸಹಾಯ ಮಾಡುತ್ತಾರೆ. ಸಂದರ್ಭ-ಸನ್ನಿವೇಶಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದು-ಸೂಕ್ತವಾಗಿ ಸ್ಪಂದಿಸುವುದು ಇವೆಲ್ಲ ಸಾಧ್ಯವಾಗುತ್ತದೆ. ವ್ಯಕ್ತಿಯ ಕಲಾಸಕ್ತಿಯೂ ಉತ್ತಮವಾಗಿ ಬೆಳವಣಿಗೆಯಾಗಲು ಸಹಾಯವಾಗುತ್ತದೆ. ಬಾಲ್ಯದಲ್ಲಾಗಲಿ-ಅಥವಾ ನಂತರದ ಅವಧಿಯಲ್ಲಾಗಲಿ ಪುರುಷರಾಗಲಿ, ದುಡಿಯುವ ಮಹಿಳೆಯರಾಗಲಿ ಮನೆಯಿಂದ ಹೊರಗೆ ಹೆಚ್ಚು ಸಮಯ ಇರಬೇಕಾದ ಸನ್ನಿವೇಶ ಇರುತ್ತದೆ. ಇಂಥ ಸಂದರ್ಭದಲ್ಲಿ ಆಗುವ ಎಲ್ಲ ಸ್ನೇಹಗಳು ಶಾಶ್ವತ ಎಂದು ಹೇಳಲು ಸಾಧ್ಯವಿಲ್ಲಆದರೆ ಇಂಥ ಗೆಳೆತನಗಳು ಸವಾಲುಗಳಿಗೆ ಮುಖಾಮುಖಿಯಾಗಲು ಉತ್ತೇಜಿಸುತ್ತವೆ ಮತ್ತು ಚೆನ್ನಾಗಿ ಧೈರ್ಯ ತುಂಬುತ್ತವೆ.

ಭಾವನೆಗಳ ವಿನಿಮಯ:
ವ್ಯಕ್ತಿ ಹದಿಹರೆಯದ ಅವಸ್ಥೆ ದಾಟಿದಾಗ ತನ್ನೆಲ್ಲ ಭಾವನೆಗಳನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳುವುದಿಲ್ಲ. ಆಗ ಸ್ನೇಹಿತ/ತೆಯರೊಂದಿಗೆ ಅನಿಸಿಕೆ-ಅಭಿಪ್ರಾಯ-ಉದ್ವೇಗಗಳನ್ನು ಹಂಚಿಕೊಳ್ಳುತ್ತಾರೆ. ಅವರ ಸಲಹೆಗಳನ್ನು ಪಡೆಯುತ್ತಾರೆ. ಅದನ್ನು ಅನುಷ್ಠಾನಗೊಳಿಸಲು ಕಾತರರಾಗಿರುತ್ತಾರೆ. ಆದರೆ ಹದಿ ವಯಸ್ಸು ದಾಟಿದ ಕೆಲ ವರ್ಷಗಳ ಬಳಿಕ ಇಂಥ ಆವೇಗ ತಗ್ಗುತ್ತದೆ. ಆಗ ಏನಾದರೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದಾಗ ಕುಟುಂಬದಲ್ಲಿ ಆಪ್ತರಾದವರೊಟ್ಟಿಗೂ ಚರ್ಚೆ ನಡೆಸುವ ಪ್ರವೃತ್ತಿ ಕಂಡುಬರುತ್ತದೆ.

ಎಲ್ಲರೂ ಸ್ನೇಹಿತರಾಗಲು ಸಾಧ್ಯವೆ..?
ಜೀವನದಲ್ಲಿ ಪರಿಚಿತರಾದವರೆಲ್ಲ ಸ್ನೇಹಿತರಾಗುವುದಿಲ್ಲ. ಆದ್ದರಿಂದ ಇಂಥ ಪರಿಚಿತ ವರ್ಗವನ್ನು ಅದೇ ವರ್ಗದ ಇತರರಿಗೆ ಅಥವಾ ಕುಟುಂಬದವರಿಗೆ ಪರಿಚಯ ಮಾಡಿಕೊಡುವಾಗ ಸ್ನೇಹಿತರೆಂದು ಹೇಳುವುದು ಸರಿಯಲ್ಲ. ಸ್ನೇಹದ ವ್ಯಾಖ್ಯಾನವೇ ಬೇರೆ. ಪರಿಚಯ ಆಗಿದ್ದು ಮುಂದೆ ಸ್ನೇಹವಾಗಿ-ಗಾಢ ಸ್ನೇಹವಾಗಿ ಮಾರ್ಪಡಬಹುದು. ಆದರೆ ಅದಕ್ಕೂ ಮೊದಲು ಸ್ನೇಹ ಎಂಬ ವರ್ಗೀಕರಣದಲ್ಲಿ ತರುವುದು ಸಮಂಜಸವೆನ್ನಿಸುವುದಿಲ್ಲ. ಆದ್ದರಿಂದ ಪರಿಚಯ ಮಾಡಿಕೊಡುವಾಗ ಇವರು ನನಗೆ ಇಂಥ ವಲಯದ ಮೂಲಕ ಪರಿಚಿತರು ಎಂದೇ ಹೇಳಿ. ಇದರಲ್ಲಿ ಯಾವುದೇ ತಪ್ಪೂ ಇಲ್ಲ. ಮುಜುಗರ ಪಡುವ ಅಗತ್ಯವೂ ಇಲ್ಲ.

ಗೆಳೆತನ ಉಳಿಸುವ ಅಂಶಗಳ್ಯಾವುವು:
ಸ್ನೇಹ ಎನ್ನುವುದು ಕೂಡ ಸಸಿಯಿದ್ದ ಹಾಗೆ. ಅದನ್ನು ಪರಸ್ಪರ ವಿಶ್ವಾಸ-ಸಹಕಾರ ಎಂಬ ನೀರು ಗೊಬ್ಬರ ಹಾಕಿದರೇನೇ ಅದು ಬೆಳೆದು ಹೆಮ್ಮರವಾಗುವುದುಆದ್ದರಿಂದ ಸ್ನೇಹವನ್ನು ಸುದೀರ್ಘ ಕಾಲ ಉಳಿಸಿಕೊಳ್ಳಲು ಕೆಲವೊಂದು ಅಂಶಗಳನ್ನು ಅನುಸರಿಸಬೇಕು. ತುರ್ತು ಸಮಯದಲ್ಲಿ ನೆರವಿಗೆ ಧಾವಿಸುವುದು, ಯೋಗಕ್ಷೇಮ ವಿಚಾರಿಸುತ್ತಿರುವುದು, ಅವರ ಸದಭಿರುಚಿ, ಆಸಕ್ತಿಗಳಿಗೆ ಪ್ರೋತ್ಸಾಹ ನೀಡುವುದು, ಸ್ನೇಹಿತ/ತೆಯ ಖಾಸಗಿ ಜೀವನದಲ್ಲಿ ಮಧ್ಯ ಪ್ರವೇಶಿಸಬಾರದು. ಕೇಳದ ಹೊರತು ಸಲಹೆಗಳನ್ನು ನೀಡಬಾರದು. ಒಂದು ವೇಳೆ ಸ್ನೇಹಿತ/ತೆ ಹಾದಿ ತಪ್ಪುತ್ತಿದ್ದಾರೆ ಎಂದಾಗ ಸೂಚ್ಯವಾಗಿ ಹೇಳುವುದು ಮತ್ತು ಅವರ ಕುಟುಂಬ ವರ್ಗದವರ ಗಮನಕ್ಕೆ ತರುವುದು ಅಗತ್ಯ. ಇದರಿಂದ ತಕ್ಷಣಕ್ಕೆ ಅಂಥವರಿಗೆ ನಿಮ್ಮ ಮೇಲೆ ಸಿಟ್ಟು ಬಂದರೂ ಮುಂದೆ ವಾಸ್ತವ ಸ್ಥಿತಿ ಅರ್ಥವಾಗುತ್ತದೆ. ಒಂದು ವೇಳೆ ಇದರಿಂದಲೂ ಪ್ರಯೋಜನವಾಗಲಿಲ್ಲವೆಂದರೆ ಅಂಥ ಸ್ನೇಹದಿಂದ ದೂರವಾಗುವುದು ಉತ್ತಮ.

ಟೀಕೆ-ಟಿಪ್ಪಣಿ
ಆಪ್ತ ಸ್ನೇಹಿತರ ವಲಯದಲ್ಲಿ ಪರಸ್ಪರ ಟೀಕೆ-ಟಿಪ್ಪಣಿ ಇವೆಲ್ಲ ನಡೆಯುತ್ತವೆ. ಆದರೆ ಇಂಥ ಮಾತುಗಳನ್ನೇ ವಲಯದ ಹೊರಗೂ ಉಪಯೋಗಿಸಿದರೆ ಸ್ನೇಹದಲ್ಲಿ ಬಿರುಕು ಬರುವುದು ಖಂಡಿತ. ಆದ್ದರಿಂದ ಯಾವುದೇ ಕಾರಣಕ್ಕೂ ಪರಿಚಿತ/ಅಪರಿಚಿತ ವಲಯದಲ್ಲಿ ಇರುವಾಗ ಟೀಕೆ-ಟಿಪ್ಪಣಿ ಮಾಡಬೇಡಿ.

ಸಾಲ ಶೂಲ
ಸ್ನೇಹಿತರ ನಡುವೆ ಸಾಲ ತೆಗೆದುಕೊಳ್ಳುವುದು-ಕೊಡುವುದು ಇವೆಲ್ಲ ಸಾಮಾನ್ಯ. ಆದರೆ ಸ್ನೇಹಿತ ತಾನೆ ಕೊಟ್ಟಿದ್ದು, ಕೊಟ್ಟರೂ ಆಗುತ್ತದೆ-ಕೊಡದಿದ್ದರೂ ಆಗುತ್ತದೆ ಎಂಬ ಧೋರಣೆ ಬೇಡ. ಇದು ಸ್ನೇಹವೆಂಬ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇಷ್ಟೆಲ್ಲ ಆಗಿಯೂ ನಿಮಗೆ ಉತ್ತಮ ಸ್ನೇಹಿತರಿಲ್ಲ ಎನಿಸಿದರೆ ಕೊರಗಬೇಡಿ. ಆಗ ಅಣ್ಣಾವ್ರು ಹೇಳಿದ ಮೇಲಿನ ಮಾತನ್ನು ನೆನಪಿಸಿಕೊಳ್ಳಿ...

6 comments:

 1. ಕುಮಾರ ರೈತರವರೆ..

  ಗೆಳೆತನದ ಬಗೆಗೆ ಒಳ್ಳೆಯ ಲೇಖನ...

  ಗೆಳೆತನ ಪ್ರೀತಿ, ಪ್ರೇಮದ ಹಾಗೆ..
  ಎಲ್ಲರೊಡನೆಯೂ ಆಗುವದಲ್ಲ..
  ಯಾಕೆ ಆಯ್ತು ಅನ್ನೋದೂ ಗೊತ್ತಾಗುವದಿಲ್ಲ..

  ಆದರೆ "ಗೆಳೆತನವನ್ನು" ಜತನವಾಗಿ ಕಾಯ್ದುಕೊಳ್ಳುವದು ನಮ್ಮ ಜವಾಬ್ದಾರಿಕೂಡ..

  Thank u Sir...

  ReplyDelete
 2. ಕುಮಾರ ರೈತ ಅವರೇ ಲೇಖನ ಚೆನ್ನಾಗಿತ್ತು ಆದರೆ ವಿದೇಶಿ ಸಂಸ್ಕೃತಿ ಬಿಂಬಿಸುವ ಫೋಟೋಗಳು ಅಷ್ಟೊಂದು ಇಷ್ಟವಾಗಲಿಲ್ಲ.

  ReplyDelete
 3. ಮಮತೆ ತೊರುವ ತಾಯಿಯ೦ತೆ; ಪ್ರೇತಿ ತೋರುವ ತ೦ದೆಯ೦ತೆ
  ಕಷ್ಠದಲಿ ಕಾಪಾಡುವ‌ ದೈವದ೦ತೆ; ಬೇಡಿದನ್ನು ನೀಡುವ ಕರ್ಣನ೦ತೆ ಗೆಳೆತನ...
  ಗೆಳೆತನದ ಬಗೆಗೆ ಒಳ್ಳೆಯ ಲೇಖನ.......:):):):):)

  ReplyDelete
 4. ಗೆಳೆತನದ ಬಗೆಗೆ ಒಳ್ಳೆಯ ಲೇಖನ...:):):):)
  ಮಮತೆ ತೊರುವ ತಾಯಿಯ೦ತೆ; ಪ್ರೇತಿ ತೋರುವ ತ೦ದೆಯ೦ತೆ
  ಕಷ್ಠದಲಿ ಕಾಪಾಡುವ‌ ದೈವದ೦ತೆ; ಬೇಡಿದನ್ನು ನೀಡುವ ಕರ್ಣನ೦ತೆ
  ....:))))

  ReplyDelete
 5. ವಿದೇಶಿ ಜನರ ಫೋಟೋ ಹಾಕಿದ್ದರಲ್ಲಿ ತಪ್ಪೇನಿಲ್ಲ. ಸ್ನೇಹ, ಪರಿಚಿತ, ಅಪರಿಚಿತ, ಪ್ರೇಮ, ಪ್ರೀತಿ ಇವುಗಳನ್ನು , ಇವುಗಳ ನಡುವಿನ ವ್ಯತ್ಯಾಸದ ಸಮೇತ ಸರಿಯಾಗಿ ನಿಭಾಯಿಸಿ ಕೊಂಡು ಬರುತ್ತಿರುವುದು ವಿದೇಶಿ ಸಂಸ್ಕೃತಿ ಯೆ. ಒಂದರ ಹೆಸರಿನಲ್ಲಿ, ಇನ್ನೊಂದರ ಮುಖವಾಡ ಅಲ್ಲಿನ ಸಂಬಂಧಗಳಲ್ಲಿ ಕಾಣುವುದಿಲ್ಲ. ಅಲ್ಲಿ ಎಲ್ಲವೂ ಸ್ಪಷ್ಟ, ನಿಖರ. ಗೊಂದಲಗಳಿಗೆ ಅವಕಾಶ ಇಲ್ಲ. ನಮ್ಮಲ್ಲಿಯೂ ಒಂದು ಕಾಲದಲ್ಲಿ ಹಾಗಿತ್ತೇನೋ. ಗೊತ್ತಿಲ್ಲ. ಈಗಂತೂ ಇಲ್ಲ. we are not assertive in the matter of relationships.

  ReplyDelete