• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಕೋಪವೇತಕೆ ನನ್ನಲಿ ಹೇಳು ಬಾ ಪ್ರೇಯಸಿ…!

ಪ್ರೀತಿ ಮಾಡೋದು ದೊಡ್ಡ ಸಂಗತಿಯಲ್ಲ. ಒಮ್ಮೆ ಮೂಡಿದ ಪ್ರೀತಿ ನಿರಂತರವಾಗಿ ಬೆಳೆದು ಹೆಮ್ಮರವಾಗುವಂತೆ ನೋಡಿಕೊಳ್ಳುವುದು ಮುಖ್ಯ. ಸಂಗತಿ ಗೊತ್ತಿಲ್ಲದ ಅನೇಕರು ಪ್ರೇಮ ವೈಫಲ್ಯಕ್ಕೀಡಾಗುತ್ತಾರೆ. ನಂತರ ಕೊರಗುತ್ತಾರೆ. ಇದಕ್ಕೆ ಆಸ್ಪದ ನೀಡದೇ ಪ್ರೀತಿ ಎಂಬ ದಿವ್ಯ ಅನುಭೂತಿಯನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಾಧ್ಯ. ಮುಖ್ಯವಾಗಿ ಯುವತಿಯರ ಮನೋಭಾವ ಎಷ್ಟೆ ಆಧುನಿಕವೆನ್ನಿಸಿದರೂ ಅವರು ಆಂತರ್ಯದಲ್ಲಿ ತುಂಬ ಮೃದುವಾಗಿರುತ್ತಾರೆ. ಪ್ರಿಯಕರನ ಸಣ್ಣಪುಟ್ಟ ತಪ್ಪುಗಳಿಂದಲೂ ತುಂಬ ನೊಂದುಕೊಳ್ಳುತ್ತಾರೆ. ಇಂಥ ತಪ್ಪುಗಳು ಪುನರಾವರ್ತನೆಯಾಗುತ್ತಿದ್ದರೆ ಅವರು ಸಹಿಸುವುದಿಲ್ಲ. ಯುವಕರ ದೃಷ್ಟಿಯಲ್ಲಿ ಅವೆಲ್ಲ ತಪ್ಪುಗಳೇ ಅಲ್ಲದಿರಬಹುದು. ಆದ್ದರಿಂದ ಪ್ರೀತಿಯನ್ನು ನಿರ್ವಹಿಸುವುದು ಒಂದು ಕಲೆ.

ಸುಳ್ಳು ಹೇಳಬೇಡಿ
ಪ್ರಿಯ ಗೆಳತಿ ಸ್ವಭಾವ ತುಂಬ ಸೂಕ್ಷ್ಮ. ತಮ್ಮ ಗೆಳೆಯನ ಗುಣಾವಗುಣಗಳನ್ನು ಬೇಗ ಗ್ರಹಿಸುತ್ತಾರೆ. ಆದರೆ ಅದನ್ನು ಬೇಗನೆ ತೋರ್ಪಡಿಸಿಕೊಳ್ಳುವುದಿಲ್ಲ. ನೀವು ಇಲ್ಲಸಲ್ಲದ ಗುಣಗಳನ್ನು ಆರೋಪಿಸಿಕೊಂಡು ಪೋಸ್ ಕೊಡುತ್ತಿದ್ದರೆ ಅವರು ಒಳಗೇ ನಗುತ್ತಿರುತ್ತಾರೆ. ಅದೇ ಗುಣ ಮುಂದುವರಿಸಿದರೆ ಒಂದಲ್ಲ ಒಂದು ದಿನ ನೀವು ಬೆಪ್ಪರಾಗ್ತೀರಾ. ಆದ್ದರಿಂದ ಗೆಳತಿ ಮುಂದೆ ವಿನಾಕಾರಣ ಸುಳ್ಳು ಹೇಳಬೇಡಿ. ನಿಮ್ಮ ಸ್ವಭಾವ-ಸಂಪಾದನೆ ಹೇಗಿದೆಯೋ ಹಾಗೆ ತೋರ್ಪಡಿಸಿಕೊಳ್ಳಿ. ಇಲ್ಲದ ಷೋ ಆಕೆಗೆ ಇಷ್ಟವಾಗದೆ ಇದ್ದಾಗ ನಿಮಗೆ ಕಷ್ಟ. ಭೇಟಿಯಾಗುತ್ತೇನೆ ಎಂದ ಸಮಯಕ್ಕೆ ಸರಿಯಾಗಿ ಹೋಗಲಿಲ್ಲವೆಂದರೆ ಮುಂಚಿತವಾಗಿ ತಿಳಿಸಿ. ನಿಜವಾದ ಕಾರಣ ಹೇಳಿ. ಹೀಗೆ ಮಾಡದೇ ಆಕೆಯನ್ನು ಸಾಕಷ್ಟು ಕಾಯಿಸಿ ಮುಂದೆ ಹಾಜರಾಗಿ ಕಾರಣಗಳನ್ನು ಕೊಟ್ಟರೆ ಆಕೆ ನಂಬುವುದು ಕಷ್ಟ. ಒಂದು ವೇಳೆ ನೀವು ನಿಜವನ್ನೇ ಹೇಳಿದ್ದರೂ ಕೂಡ! ನೀವು ಪ್ರೀತಿಸುತ್ತಿರುವ ಹುಡುಗಿಗೆ ಸಿಗರೇಟಿನ ವಾಸನೆ ಕಂಡರೂ ಆಗುವುದಿಲ್ಲ ಎಂದಿರುವ ಸಂದರ್ಭದಲ್ಲಿ ನಾನು ಸಿಗರೇಟನ್ನೇ ಸೇದುವುದಿಲ್ಲ ಎಂದು ಹೇಳಬೇಡಿ. ಮುಂದೆ ಸಿಕ್ಕಿಕೊಂಡಾಗ ಫಜೀತಿಯಾಗುತ್ತದೆ. ಅಭ್ಯಾಸವಿದೆ. ನಿನಗೆ ಇಷ್ಟವಿಲ್ಲದಿದ್ದರೆ ಬಿಡುತ್ತೇನೆ ಎಂದು ತಿಳಿಸಿ. ಅದರಂತೆ ಪ್ರಯತ್ನಿಸಿ ಧೂಮಪಾನ ಬಿಡಿ. ಆಕೆಗೂ ಖುಷಿಯಾಗುತ್ತದೆ. ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಇಲ್ಲದ ಶ್ರೀಮಂತಿಕೆಯ ಪ್ರದರ್ಶನ ಮಾಡಬೇಡಿ. ಒಂದು ವೇಳೆ ಶ್ರೀಮಂತರಾಗಿದ್ದರೂ ಅದರ ಪ್ರದರ್ಶನ ಬೇಡ. ಕೆಲವು ಗೆಳೆಯರು ತಮ್ಮ ಗೆಳತಿಯರನ್ನು ಮೆಚ್ಚಿಸಲು ಸ್ನೇಹಿತನಿಂದ ಪಡೆದುಕೊಂಡ ಹೋದ ಕಾರು, ದುಬಾರಿ ಬೆಲೆಯ ಬೈಕುಗಳನ್ನು ತಮ್ಮದೆ ಎಂದು ಹೇಳಿ ಇಂಪ್ರೆಸ್ ಮಾಡಲು ಯತ್ನಿಸುತ್ತಾರೆ. ಆದರೆ ಹೀಗೆ ಹೇಳಿದ್ದನ್ನು ನೀವು ಸದಾ ಮೇಂಟೈನ್ ಮಾಡುವುದಕ್ಕೆ ಆಗುವುದಿಲ್ಲ. ಆಗ ನೀವು ಮಾಡಿದ್ದ ಇಂಪ್ರೆಷನ್ ಮಾಯವಾಗಿ ಅಲ್ಲಿ ಅಸಹ್ಯ ಮೂಡುತ್ತದೆ. ಆದ್ದರಿಂದ ಅಪಾಯಕಾರಿ ಸುಳ್ಳುಗಳನ್ನು ಎಂದೂ ಹೇಳಬೇಡಿ...

ಮುಗುಳ್ನಗೆ
ಗೆಳತಿ ಕಂಡ ಕೂಡಲೇ ನಿಮ್ಮ ಮುಖದಲ್ಲಿ ಮುಗುಳ್ನಗೆ ಅರಳಲಿ. ಇದು ಆಕೆಯನ್ನು ಸಂತಸಗೊಳಿಸುತ್ತದೆ. ತಂತಾನೇ ಆಕೆಯ ಮುಖವೂ ಅರಳುತ್ತದೆ. ಷೇಕ್ ಹ್ಯಾಂಡ್ ಮಾಡಿ. ಆಕೆಯ ಹಸ್ತಗಳನ್ನು ಬಿಗಿಯಾಗಿ ಹಿಡಿಯಿರಿ. ಹಸ್ತ ಮುದುಡಿಹೋಗುವಷ್ಟು ಬಿಗಿ ಬೇಡ. ಮುಗುಳ್ನಗೆ-ಹಸ್ತಲಾಘವ ಇವುಗಳಿಂದ ಆಕೆಗೆ ನಿಮ್ಮ ಜೊತೆ ಇದ್ದಾಗ ಭದ್ರತೆಯ ಭಾವನೆ ಮೂಡುತ್ತದೆ. ಪ್ರೀತಿ-ಪ್ರೇಮದಲ್ಲಿ ಹುಸಿಕೋಪ ಸಹಜವೇ ಆದರೂ ಇದನ್ನು ಹೆಚ್ಚು ಹೊತ್ತು ಮುಂದುವರಿಸಬೇಡಿ. ಆಕೆ ಜೊತೆಯಲ್ಲಿದ್ದಾಗ ಯಾವುದೇ ಕಾರಣಕ್ಕೂ ಸಿಡುಕುವುದು-ಗದರುವುದನ್ನು ಮಾಡಬೇಡಿ. ಆಕೆಯ ಮನಸು ಮುದುಡಿ ಹೋಗುತ್ತದೆ. ಇದು ಪದೇ ಪದೇ ಘಟಿಸುತ್ತಿದ್ದರೆ ನಿಮ್ಮಿಂದ ದೂರ ಸರಿಯಲು ಆಕೆ ಪ್ರಯತ್ನಿಸಬಹುದು. ಗೆಳತಿ ಜೊತೆಯಲ್ಲಿದ್ದಾಗ ಸಣ್ಣಪುಟ್ಟ ಕಾರಣಕ್ಕೂ ಇತರರ ಮೇಲೆ ಏರಿ ಹೋಗಬೇಡಿ. ಉದಾಹರಣೆಗೆ ಹೋಟೆಲಿಗೆ ಹೋಗಿರುತ್ತೀರಿ. ನೀವು ಆರ್ಡರ್ ಮಾಡಿದನ್ನು ತಂದು ಕೊಡುವುದು ತಡವಾಗುತ್ತದೆ ಅಥವಾ ಕ್ಲೀನ್ ಮಾಡುವ ವ್ಯಕ್ತಿ ತನ್ನ ಕೆಲಸ ಮಾಡುವಾಗ ನಿಮ್ಮ ಮೇಲೆ ನೀರು ತುಳುಕುತ್ತದೆ ಎಂದಿಟ್ಟುಕೊಳ್ಳಿ. ಆಗ ಅವರ ಮೇಲೆ ಕೂಗಾಡುವುದು-ಹೊಡೆಯಲು ಹೋಗುವುದನ್ನು ಮಾಡಬೇಡಿ. ಇಂಥ ಯಾವುದೇ ಘಟನೆಗಳಿಂದ ನೀವು ಹೀರೋಯಿಸಂ ತೋರಿಸುತ್ತೇನೆ ಎಂದಿಟ್ಟುಕೊಂಡರೆ ಅದು ನಿಮ್ಮ ಭ್ರಮೆ ಅಷ್ಟೆ. ಇಲ್ಲಿ ಒಂದೆರಡು ಉದಾಹರಣೆ ಕೊಟ್ಟಿದೆ ಅಷ್ಟೆ. ಅನಗತ್ಯವಾದ ಸಂದರ್ಭಗಳನ್ನು ಹೊರತುಪಡಿಸಿದರೆ ಕಾರಣವಿಲ್ಲದೆ ಉದ್ವೇಗಕ್ಕೆ ಒಳಗಾಗಬೇಡಿ.

ಗೆಳೆಯರು/ಗೆಳತಿಯರ ಮುಂದೆ:
ನಿಮ್ಮ ಗೆಳೆಯರನ್ನು ಆಕೆಗೆ ಪರಿಚಯಿಸುವಾಗ ಆಕೆಯ ತೋಳಿಗೆ ನಿಮ್ಮ ತೋಳು ಸೇರಿಸಿ ಅಥವಾ ಆಕೆಯ ಹಸ್ತವನ್ನು ಹಿಡಿದಿರಿ. ಇದು ಆಕೆಗೆ ಸಂತಸವಾಗುತ್ತದೆ. ನಿಮ್ಮ ಮೇಲಿನ ನಂಬಿಕೆಯೂ ಗಟ್ಟಿಯಾಗುತ್ತದೆ. ಆಕೆ ತನ್ನ ಗೆಳತಿಯರನ್ನು ಪರಿಚಯಿಸುವ ಸಂದರ್ಭದಲ್ಲಿಯೂ ಹೀಗೆ ಮಾಡಿ. ಆದರೆ ಯಾವುದೇ ಕಾರಣಕ್ಕೂ ಸಭ್ಯತೆಯ ಎಲ್ಲೆ ಮೀರಿ ಹೋಗಬೇಡಿ. ಇದು ಆಕೆಗೆ ಕಿರಿಕಿರಿ ಮತ್ತು ಮುಜುಗರ ಉಂಟು ಮಾಡುತ್ತದೆ.

ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ:
ಆಕೆ ಭೇಟಿಯಾದ ಸಂದರ್ಭದಲ್ಲಿ ಮೊದಲು ಮುಗುಳ್ನಗೆ ಬೀರಿ, ಹಸ್ತಲಾಘವ ನೀಡಿದ ನಂತರ ಎದಿರು-ಬದಿರು ನಿಂತು/ಕುಳಿತು ಮಾತನಾಡಿ. ಹೀಗಿರುವಾಗ ಆಕೆಯ ಕಣ್ಣುಗಳಲ್ಲಿ ಕಣ್ಣಿಟ್ಟು ಮಾತನಾಡಿ. ಗಮನಿಸಿ. ಇದರಿಂದ ಆಕೆಯ ಕಣ್ಣುಗಳು ಹೊಳೆಯುವುದಕ್ಕೆ ಆರಂಭಿಸುತ್ತವೆ. ಜಗತ್ತಿನಲ್ಲಿಯೇ ತಾನು ಸುಖಿ. ಓರ್ವ ವಿಶ್ವಾಸಾರ್ಹ ಪ್ರೇಮಿ ತನಗಿದ್ದಾನೆ ಎಂಬ ಭಾವದಿಂದ ಆಕೆಯ ಮುಖವೂ ಸಂತಸದಿಂದ ಅರಳಿರುತ್ತದೆ. ನೀವಿಬ್ಬರೇ ಇದ್ದ ಸಂದರ್ಭದಲ್ಲಿ ಲವ್ ಯೂ ಎಂದು ಹೇಳುತ್ತಾ ಆಕೆಯ ಮೂಗಿನ ತುದಿ ಮತ್ತು ಗಲ್ಲದ ಮೇಲೆ ಹೂ ಮುತ್ತು ಕೊಡಿ. ಇದರಿಂದ ಆಕೆಗೆ ಮತ್ತಷ್ಟು ಸಂತಸವಾಗುತ್ತದೆ. ಸಂಯಮವಿರಲಿ. ಇದಕ್ಕಿಂತ ಮುಂದಕ್ಕೆ ಮುಂದುವರಿಯಬೇಡಿ! ಆಕೆ ಎಷ್ಟೇ ಆಧುನಿಕಳಾಗಿ ಕಂಡರೂ ಅಂತರ್ಯದಲ್ಲಿ ಸಂಪ್ರದಾಯಸ್ಥ ಮನೋಭಾವವಿರುತ್ತದೆ.

ಸೆಕ್ಸಿ ಎನ್ನಬೇಡಿ:
ನಿಮ್ಮ ಗೆಳತಿಯನ್ನು ಎಂದೂ ಸೆಕ್ಸಿ ಎನ್ನಬೇಡಿ. ಹೀಗೆ ಕರೆಯುವುದರಿಂದ ಆಕೆಗೆ ಸಂತಸವಾಗುತ್ತದೆ ಎಂದು ನೀವು ತಿಳಿದಿದ್ದರೆ ಅದು ತಪ್ಪು. ಸೆಕ್ಸಿ ಎಂದು ಕರೆಯಿಸಿಕೊಳ್ಳುವುದು ಹಲವು ಯುವತಿಯರಿಗೆ ಇಷ್ಟವಾಗುವುದಿಲ್ಲ. ಇದು ಅವರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಆದ್ದರಿಂದ ನೀವು ಮುಗುಳ್ನಗುತ್ತಾನೀನು ಸೆಕ್ಸಿಯಲ್ಲ. ಆದರೆ ಸುಂದರಿಎಂದು ಹೇಳಿ. ಆಕೆಯ ಖುಷಿ ಇಮ್ಮಡಿಗೊಳ್ಳುತ್ತದೆ.

ಟೀಕಿಸಬೇಡಿ:
ಆಕೆಯ ಕೇಶ ವಿನ್ಯಾಸ, ಉಡುಪು, ನಡೆಯುವ ಮತ್ತು ಮಾತನಾಡುವ ಶೈಲಿಗಳನ್ನು ಎಂದೂ ಟೀಕಿಸಬೇಡಿ. ಬದಲು ಆಕೆಗೆ ನೀನು ಹೀಗಿದ್ದರೆ ಮತ್ತಷ್ಟೂ ಚೆನ್ನಾಗಿ ಕಾಣುತ್ತಿ. ಆದರೂ ನಷ್ಟವಿಲ್ಲ. ಹಾಗೆ ಇರದಿದ್ದರೂ ನಷ್ಟವಿಲ್ಲ. ನಿನ್ನ ಚೆಂದ ಕಡಿಮೆಯಾಗುವುದಿಲ್ಲ ಎಂದು ಹೇಳಿ. ಆಕೆಗೆ ನಿಮ್ಮ ಮನೋಗತ ಇಷ್ಟವಾಗುತ್ತದೆ. ಅದರಂತೆ ಬದಲಾವಣೆಗೊಳ್ಳಲು ಆಕೆ ಪ್ರಯತ್ನಿಸುತ್ತಾಳೆ. ಇದರ ಬದಲು ನೀವು ಟೀಕಿಸಿದರೆ ಪರಿಸ್ಥಿತಿ ಹದಗೆಡುತ್ತದೆ. ಕ್ರಮೇಣ ಇದು ಸರಿಪಡಿಸಲಾಗದ ಹಂತವನ್ನೂ ತಲುಪಬಹುದು.

ಆಕೆಯ ಗೆಳತಿಯರನ್ನು ಹೊಗಳಬೇಡಿ:
ಆಕೆಯ ಗೆಳತಿಯರಲ್ಲಿ ಕೆಲವರ ಗುಣಗಳು ನಿಮಗೆ ಇಷ್ಟವಾಗುತ್ತವೆ ಎಂದಾದರೆ ಎಂದೂ ಅದನ್ನು ಆಕೆ ಮುಂದೆ ಹೇಳಬೇಡಿ. ಇದು ಆಕೆಗೆ ಖಂಡಿತಾ ಇಷ್ಟವಾಗುವುದಿಲ್ಲ. ಆಕೆಯ ಗೆಳತಿಯ ಸೌಂದರ್ಯವನ್ನು ಬಣ್ಣಿಸುವ-ಹೊಗಳುವ ಪ್ರಯತ್ನ ಮಾಡಬೇಡಿ. ಇದರಿಂದ ಆಕೆ ಸಿಟ್ಟಿ ಗೇಳುತ್ತಾಳೆ. ನಿಮ್ಮ ಮೇಲೆ ಅನುಮಾನವನ್ನೂ ಪಡಬಹುದು. ಜೊತೆಗೆ ಇಂಥ ಮಾತುಗಳು ಆಕೆಗೆ ಕಿರಿಕಿರಿಯನ್ನೂ ಉಂಟುಮಾಡುತ್ತವೆ.

ಸಂತೈಸಿ:
ಆಕೆ ಯಾವುದಾದರೂ ಕಾರಣಕ್ಕೆ ಗಾಬರಿ-ಉದ್ವೇಗ-ದುಃಖದಲ್ಲಿದ್ದರೆ ಆಕೆಯನ್ನು ಸಂತೈಸಿ. ಹೆದರಬೇಡ. ನಿನ್ನೊಂದಿಗೆ ನಾನಿದ್ದೇನೆ ಎಂದು ಹೇಳಿ. ಆಕೆಗೊಂದು ಪರಮಾಪ್ತವಾದ-ಬಲವಾದ ಮಾನಸಿಕ ಆಸರೆ ದೊರೆತಂತಾಗುತ್ತದೆ. ಇದರ ಬದಲು ಆಕೆಯ ಕಷ್ಟಕ್ಕೆ ಬಾಯಿಮಾತಿನಲ್ಲಿ ಮರುಕ ವ್ಯಕ್ತಪಡಿಸಿ ಪ್ರಯೋಜನವೇನು. ಆದರಿಂದ ಆಗುವ ಅನುಕೂಲವೇನು ಎಂದು ನೀವು ತಿಳಿದಿದ್ದರೆ ಅದು ದೊಡ್ಡ ತಪ್ಪು. ಇಂಥ ಸನ್ನಿವೇಶಗಳಲ್ಲಿ ನಿಮ್ಮ ಸಂತೈಸುವಿಕೆ ಆಕೆಗೆ ಆನೆಬಲ ತಂದಂತೆ ಆಗುತ್ತದೆ. ಅದನ್ನು ಮರೆಯಬೇಡಿ.

ಹಾಡುಗಳನ್ನು ಗುನುಗಿ:
ನಿಮ್ಮ ಹಾಡಿದರೆ ಸುಮಧುರವಾಗಿಲ್ಲದೇ ಇರಬಹುದು. ಆದರೆ ಬಗ್ಗೆ ಆಕೆಯೇನೂ ಚಿಂತಿಸುವುದಿಲ್ಲ. ನೀವಿಬ್ಬರೇ ಇದ್ದಾಗ ಇಷ್ಟವಾದ ಹಾಡುಗಳನ್ನು ಮೆಲುವಾಗಿ ಗುನುಗಿ ಇದು ಆಕೆಗೆ ಅತ್ಯಂತ ಪ್ರಿಯವೆನ್ನಿಸುತ್ತದೆ. ಆಕೆಯೂ ದನಿ ಸೇರಿಸುತ್ತಾಳೆ.

ಇಷ್ಟೆಲ್ಲ ಮಾಡಬೇಕೆ:
ಶಂಕೆ ನಿಮ್ಮಲ್ಲಿ ಮೂಡಬಹುದು. ಆದರೆ ಪ್ರೀತಿ ಎಂಬ ಸುಂದರ ಅನುಭೂತಿ ಸದಾ ಹಸಿರಾಗಿರಲು ಇವೆಲ್ಲ ಅಗತ್ಯ. ಇಲ್ಲದಿದ್ದರೆ ಪ್ರೀತಿ ಶುಷ್ಕವೆನ್ನಿಸಿ ಒಣಗಿ ಹೋಗಬಹುದು ಎಚ್ಚರ….!

1 comment:

 1. ಪ್ರೇಮಿಗಳ ಮನಸ್ಸೊಳಗೆ ಇಳಿದು ರಿಸರ್ಚ್ ಮಾಡಿ ಬಿಟ್ಟಿದ್ದಿರೇನು?!
  ವಾವ್ಹ್..ಸೂಪರ್ಬ್..
  ಸಂಬಂಧಗಳ ಭದ್ರತೆಗೆ ಸೂಕ್ತ ಲೇಖನ...

  ಹಾಗೆ ಹುಡುಗನನ್ನು ಅರ್ಥೈಸಿ ಕೊಳ್ಳಲು ಹುಡುಗಿಗೆ ಕಿವಿ ಮಾತಿರೋ ಲೇಖನವೊಂದು ಬರಲಿ ಸರ್...

  ReplyDelete