• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಕನಸುಗಳು ಭ್ರಮೆಯೋ ಅಥವಾ ಭವಿಷ್ಯ ಸೂಚಕವೋ...

ಕನಸು ಕಾಣದವರಿಲ್ಲ. ಕನಸು ವ್ಯಕ್ತಿಯನ್ನು ಎತ್ತರಕ್ಕೇರಿಸುವಂತೆ ತಳಕ್ಕೂ ತಳ್ಳುತ್ತದೆ. ಅಂಥ ಶಕ್ತಿ ಕನಸುಗಳಿಗೆ ಉಂಟು. ಆದರೆ ಇಂಥ ಕನಸುಗಳ ನಡುವೆ ವ್ಯತ್ಯಾಸವಿದೆ. ಮನುಷ್ಯ ವಿಶ್ಲೇಷಣಾ ಶಕ್ತಿ ಬೆಳೆಸಿಕೊಂಡ ಹಂತದಿಂದಲೂ ಇಂದಿನವರೆಗೂ ಕನಸುಗಳ ಕನವರಿಕೆಯಲ್ಲಿಯೇ ತೊಡಗಿದ್ದಾನೆ. ಇಂಥ ಕನಸು ಸದಾ ಬಣ್ಣಬಣ್ಣದಲ್ಲಿ ಇರುತ್ತವೆ. ಕನಸು ಭವಿಷ್ಯ ಸೂಚಕವೇ.. ಭ್ರಮೆಯೇ ಎಂಬುದರ ಬಗ್ಗೆ ಇಂದಿಗೂ ಅಧ್ಯಯನಗಳು ಸಾಗಿವೆ. ಭಯಭೀತಿಯ ಕನಸು ಕಂಡ ಸಂದರ್ಭದಲ್ಲಿ ಅದು ನಿಜವಾಗದಿರುವಂತೆ ದೇವರ ಮೊರೆ ಹೋಗುವ ಮಂದಿ ಒಳ್ಳೆಯ ಕನಸು ಬಿದ್ದಾಗ ಅದನ್ನು ನನಸು ಮಾಡುವಂತೆ ಅದೇ ದೇವರ ಮೊರೆ ಹೋಗುತ್ತಾರೆ. ವ್ಯಕ್ತಿ ಬದುಕಿರುವವರೆಗೂ ಇಂಥ ಕನಸುಗಳ ಕಲಸುಮೇಲೋಗರ ಇದ್ದೇ ಇರುತ್ತದೆ. ಇಂಥ ಕನಸುಗಳ ಸುತ್ತ ಒಂದು ಸುತ್ತು ಹಾಕಿಬರೋಣ ಬನ್ನಿ. . 

ದಿಕ್ಸೂಚಿ
ಇಡೀ ವಿಶ್ವದಾದ್ಯಂತ ಕನಸುಗಳಿಗೆ ಬೇರೆಬೇರೆಯಾದ ರೀತಿಯಲ್ಲಿ ಮನ್ನಣೆ ನೀಡುತ್ತಾ ಬರಲಾಗಿದೆ. ಕೆಲವೊಂದು ದೇಶಗಳಲ್ಲಿ ಕನಸಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡದಿದ್ದರೆ ಮತ್ತೆ ಕೆಲವು ದೇಶಗಳಲ್ಲಿ ಕನಸುಗಳಿಗೆ ಅತೀವ ಪ್ರಾಶಸ್ತ್ಯ ನೀಡಲಾಗುತ್ತದೆ. ಇಂಥ ದೇಶಗಳ ಸಾಲಿಗೆ ಭಾರತ ಕೂಡ ಸೇರಿದೆ. ಇಂದಿಗೂ ಇಲ್ಲಿನವರು ಕನಸುಗಳು ಮುಂದೆ ಘಟಿಸಲಿರುವ ಘಟನೆಗಳ ದಿಕ್ಸೂಚಿ ಎಂದು ನಂಬಿಕೊಂಡಿದ್ದಾರೆ. ಭಾರತೀಯರು ಕನಸುಗಳಿಗೆ ನೀಡುತ್ತಿದ್ದ ಮನ್ನಣೆಗಳ ಸಂಗತಿ ಪೌರಾಣಿಕ ಕಥೆ-ಕಾವ್ಯಗಳಲ್ಲಿ-ಜನಪದ ಕಥಾನಕಗಳಲ್ಲಿ-ಚರಿತ್ರೆಯಲ್ಲಿ ದಾಖಲಾಗಿವೆ. ಕನಸುಗಳಿಗೆ ಅತೀವ ಸಂತೋಷ ಅಥವಾ ಅತೀವ ಸಂಕಟ-ಭಯ ಉಂಟಾದರೆ ಕೂಡಲೇ ಜ್ಯೋತಿಷಿಗಳ ಬಳಿ ಹೋಗುವ ಪರಿಪಾಠ ಅಂದಿನಿಂದ ಇಂದಿನವರೆಗೂ ಬೆಳೆದುಕೊಂಡು ಬಂದಿದೆ.

ವಿಭಿನ್ನ ವಿಶ್ಲೇಷಣೆ
ಜ್ಯೋತಿಷಿಗಳ ಬಳಿ ಹೋದಂಥ ಸಂದರ್ಭದಲ್ಲಿ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಅವರು ಕರಸನ್ನು ತಮ್ಮದೇ ಆದ ಧಾಟಿಯಲ್ಲಿ ವಿವರಿಸುತ್ತಾರೆ. ಪೂಜೆ-ಪುರಸ್ಕಾರ-ತೀರ್ಥಯಾತ್ರೆ-ದಾನ-ಧರ್ಮ ಇತ್ಯಾದಿ ಸೂಚಿಸುತ್ತಾರೆ. ಇದಕ್ಕಾಗಿ ಅಪಾರ ಖರ್ಚು-ವೆಚ್ಚವಾಗುತ್ತದೆ. ಇಂಥ ವಿಶ್ಲೇಷಣೆಗಳು ಸಾಮಾನ್ಯವಾಗಿ ಅಶಾಂತಿಯನ್ನು ಹೆಚ್ಚಿಸುವಂತೆಯೇ ಇರುತ್ತವೆ. ಒಂದೇ ಕನಸಿಗೆ ಒಬ್ಬೊಬ್ಬ ಜ್ಯೋತಿಷಿಯು ಬೇರೆ ಬೇರೆ ಅರ್ಥಗಳನ್ನು ಹೇಳುತ್ತಾರೆ. ಬೇಕಿದ್ದರೆ ನೀವು ಇದನ್ನು ಪರೀಕ್ಷಿಸಿ ನೋಡಬಹುದು. ಒಬ್ಬರು ತಿಳಿಸಿದ ಅರ್ಥಕ್ಕೂ ಮತ್ತೊಬ್ಬರು ತಿಳಿಸಿದ ಅರ್ಥಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ.

ಆತ್ಮದ ಸಂಚಾರ ಮತ್ತು ಮುಂಜಾನೆಯ ಕನಸು
ರಾತ್ರಿಯ ವೇಳೆ ಗಾಢನಿದ್ರೆ ಆವರಿಸಿದ ಬಳಿಕ ಆತ್ಮ ಸಂಚಾರ ಹೊರಡುತ್ತದೆ. ಸಂದರ್ಭದಲ್ಲಿ ಅದು ಕಾಣುವ ಸಂಗತಿಗಳು ಸ್ವಪ್ನದ ರೀತಿ ಬೀಳುತ್ತವೆ. ಇದು ಭಾರತೀಯರ ನಂಬಿಕೆ. ಮುಖ್ಯವಾಗಿ ಭಾರತೀಯರು ರಾತ್ರಿಯ ವೇಳೆ ಬಿದ್ದ ಕನಸುಗಳಿಗೆ ಅತೀವ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಹಗಲುಗನಸುಗಳಿಗೆ ಅವರು ಮನ್ನಣೆ ನೀಡುವುದಿಲ್ಲ. ಮುಖ್ಯವಾಗಿ ಮುಂಜಾನೆ ಸಮಯದಲ್ಲಿ ಕಂಡ ಕನಸುಗಳು ನಿಜವಾಗುತ್ತವೆ ಎಂದು ನಂಬುತ್ತಾರೆ. ಅವು ಭಯಭೀತಿ ಉಂಟು ಮಾಡುವ ಕನಸಾಗಿದ್ದರೆ ನನಸಾಗದಿರಲಿ ಎಂದು ಪ್ರಾರ್ಥಿಸುತ್ತಾರೆ. ಅದೇ ಮನಸಿಗೆ ಸಂತೋಷ ನೀಡುವಂಥ ಕನಸಾಗಿದ್ದರೆ ಆದಷ್ಟು ಬೇಗ ನನಸು ಮಾಡು ಎಂದು ಬೇಡಿಕೊಳ್ಳುತ್ತಾರೆ. ನಿಟ್ಟಿನಲ್ಲಿ ಹರಕೆ ಕಟ್ಟಿಕೊಳ್ಳುವರೂ ಉಂಟು.

ವೈಜ್ಞಾನಿಕ ಅಧ್ಯಯನ
ಸಾಮಾನ್ಯವಾಗಿ ಭಾರತೀಯರು ಕನಸುಗಳನ್ನು ಜ್ಯೋತಿಷ ಶಾಸ್ತ್ರದ ಹಿನ್ನೆಲೆಯಲ್ಲಿ ವಿಶ್ಲೇಷಿಸಲು ಪ್ರಯತ್ನಿಸಿದರೇ ಹೊರತು ವೈಜ್ಞಾನಿಕವಾಗಿ ಅಧ್ಯಯನ ಮಾಡಲಿಲ್ಲ. ಮೊಟ್ಟ ಮೊದಲಿಗೆ ಕನಸುಗಳ ಹಿನ್ನೆಲೆ-ಮುನ್ನೆಲೆಯನ್ನು ವೈಜ್ಞಾನಿಕ ನೆಲೆಯಲ್ಲಿ ವಿಶ್ಲೇಷಿಸಲು ಅದಕ್ಕೊಂದು ಅರ್ಥ ನೀಡಲು ಪ್ರಯತ್ನಿಸಿದವರು ಪ್ರಖ್ಯಾತ ಮನೋವಿಜ್ಞಾನಿಗಳಾದ ಫ್ರಾಯ್ದ್ ಮತ್ತು ಯುಂಗ್. ಇವರ ಬಳಿಗೆ ಮನೋರೋಗಿಗಳು ಚಿಕಿತ್ಸೆ ಸಲುವಾಗಿ ಬರುತ್ತಿದ್ದಾಗ ಬೇರೆಬೇರೆ ವಿಧಾನಗಳ ಮೂಲಕ ಅವರ ಕಾಯಿಲೆಯ ಕಾರಣಗಳನ್ನು ತಿಳಿಯಲು ಇವರು ಯತ್ನಿಸುತ್ತಿದ್ದರು. ಆಗ ಅವರ ಕಂಡ ಕನಸುಗಳ ವಿಷಯವೂ ಪ್ರಸ್ತಾಪವಾಗುತ್ತಿತ್ತು. ಅದನ್ನೆಲ್ಲ ವಿವರವಾಗಿ ತಿಳಿದು ಬರೆದುಕೊಳ್ಳುತ್ತಿದ್ದರು. ಇಂಥ ಸಂದರ್ಭದಲ್ಲಿ ಅವರು ಕಂಡ ಕನಸಿಗೂ ಮತ್ತು ಅವರುಗಳ ರೋಗಗಳ ಚಿಹ್ನೆಗಳಿಗೂ ಸಾಮ್ಯತೆ ಇದ್ದಿದ್ದನ್ನು ಫ್ರಾಯ್ಡ್ ಗಮನಿಸಿದ್ದರು. ಕನಸುಗಳ ಬಗ್ಗೆಯೇ ಕುತೂಹಲ ಬೆಳೆಸಿಕೊಂಡ ಇವರು ಅವುಗಳನ್ನು ವಿಶೇಷವಾಗಿ ಅಧ್ಯಯನ ಮಾಡಿದರು. ಇದರ ಫಲವಾಗಿ ಅನೇಕ ಲೇಖನಗಳನ್ನು ಬರೆದರು. ಇವುಗಳ ಸಂಕಲನವೇಇಂಟರ್ಪ್ರಿಟೇಶನ್ಸ್ ಆಫ್ ಡ್ರೀಮ್ಸ್ ಪುಸ್ತಕ. ಕನಸುಗಳನ್ನು ವಿಶ್ಲೇಷಿಸುವುದರ ಮೂಲಕ ಸುಪ್ತ ಮನಸಿನ ಕ್ರಿಯೆಗಳನ್ನು ಅರಿಯಲು ಸಾಧ್ಯ ಎಂದು ಇವರು ಪ್ರತಿಪಾದಿಸಿದರು. ಮುಂದೆ ಇದು ಕೂಡ ಚಿಕಿತ್ಸಾ ವಿಧಾನವಾಗಿ ಪರಿಗಣಿತವಾಯಿತು.

ಸುಪ್ತಾವಸ್ಥೆ ಮತ್ತು ಪ್ರಜ್ಞಾವಸ್ಥೆ
ಮನಸ್ಸಿನ ಆಲೋಚನಾ ಪ್ರಕ್ರಿಯೆಗಳು ಎರಡು ಸ್ತರಗಳಲ್ಲಿ ನಡೆಯುತ್ತವೆ. ಅವುಗಳೆಂದರೆ ಒಂದು ಸುಪ್ತಾವಸ್ಥೆ ಇನ್ನೊಂದು ಜಾಗೃತಾವಸ್ಥೆ. ಸುಪ್ತಾವಸ್ಥೆಯ ಆಲೋಚನಾ ಪ್ರಕ್ರಿಯೆಗಳೆಲ್ಲ ಪ್ರಜ್ಞಾವಸ್ಥೆಗೆ ಬರುವುದಿಲ್ಲ. ಹೀಗೆ ಬರಬೇಕಾದರೆ ವಿವೇಚನಾವಸ್ಥೆಯನ್ನು ದಾಟಿ ಬರಬೇಕಾಗುತ್ತದೆ. ಯಾವುದು ಯೋಗ್ಯವೆನ್ನಿಸುತ್ತದೆಯೋ ಅದು ಮಾತ್ರ ಎರಡನೇ ಸ್ಥಿತಿಗೆ ಬರಲು ಅವಕಾಶವಾಗುತ್ತದೆ. ಇಂಥ ವಿವೇಚನಾ ಸ್ಥಿತಿ ಎಷ್ಟು ಶಕ್ತಿಯುತವಾಗಿರುತ್ತದೋ ಅಷ್ಟು ಒಳ್ಳೆಯದು.

ಪ್ರಜ್ಞಾವಸ್ಥೆಗೆ ಬರಲಾಗದ ಆಲೋಚನೆಗಳೆಲ್ಲ ದಮನಿತ ಸ್ಥಿತಿಯಲ್ಲಿರುತ್ತವೆ. ತಮ್ಮ ಅವಕಾಶಗಳಿಗಾಗಿ ಕಾಯುತ್ತವೆ. ಹೇಗಾದರೂ ಪ್ರಕಟಣೆಯಾಗಬೇಕೆಂಬ ಹಂಬಲ ಇವುಗಳಿಗಿರುತ್ತದೆ. ಇಂಥ ದಮನಿತ ಕಲ್ಪನೆ-ಆಲೋಚನೆಗಳೆಲ್ಲ ಕನಸಿನ ಮೂಲಕ ಹೊರ ಹರಿಯುತ್ತವೆ. ಆದರೆ ಅವು ನೇರರೂಪದಲ್ಲಿ ಪ್ರಕಟವಾಗದೇ ಛದ್ಮವೇಷದಲ್ಲಿ ಬರುತ್ತವೆ! ಇದಕ್ಕೆ ಕಾರಣ ನಿದ್ರಾವಸ್ಥೆಯಲ್ಲಿ ಪ್ರಜ್ಞಾವಸ್ಥೆ ಮೇಲಿನ ಹತೋಟಿ ಸಡಿಲವಾಗುವುದು. ನಿದ್ರೆಯಿಂದ ಎದ್ದ ನಂತರ ವ್ಯಕ್ತಿ ಮತ್ತೆ ಪ್ರಜ್ಞಾವಸ್ಥೆ ಮೇಲೆ ಸಂಪೂರ್ಣ ಹತೋಟಿ ಪಡೆಯುತ್ತಾನೆ. ಆಗ ಮೊದಲನೆ ಸ್ಥಿತಿಯ ಆಲೋಚನೆಗಳು ಮತ್ತೆ ದಮನಿತ ಸ್ಥಿತಿಗೆ ಹಿಂದಿರುಗುತ್ತವೆ. ಇದರಿಂದಾಗಿಯೆ ಕಂಡ ಕನಸುಗಳೆಲ್ಲ ನೆನಪಿನಲ್ಲಿ ಉಳಿಯುವುದಿಲ್ಲ. ನೆನಪಿನಲ್ಲಿ ಉಳಿಯುವುದು ಕೂಡ ಕಂಡ ಕನಸಿನ ಅತ್ಯಲ್ಪ ತುಣುಕುಗಳು ಮಾತ್ರ!

ಸಾಮಾನ್ಯವಾಗಿ ಕನಸುಗಳು ನೇರನೇರ ರೂಪದಲ್ಲಿ ಬರದೆ ಕೋಡಿಂಗ್ ಆಗಿ ಬರುತ್ತವೆ. ಇದನ್ನೇ ಫ್ರಾಯ್ಢ್ ಸಂಕೇತಗಳು ಎಂದು ಕರೆದರು. ದಮನಿತ ಆಕಾಕ್ಷೆಗಳು ಕನಸಿನ ರೂಪದಲ್ಲಿ ವ್ಯಕ್ತವಾಗುತ್ತವೆ ಎಂದು ಅವರು ವ್ಯಾಖ್ಯಾನ ಮಾಡಿದರು. ದಮನಿತ ಆಕಾಂಕ್ಷೆಗಳ ಪಟ್ಟಿ ದೊಡ್ಡದಾಗುತ್ತಲೇ ಇದ್ದು ವ್ಯಕ್ತಿ ಮಾನಸಿಕವಾಗಿ ದುರ್ಬಲವಾದ ಸ್ಥಿತಿಯಲ್ಲಿ ಅವು ತಮ್ಮ ಸ್ವರೂಪ ತೋರಿಸುವ ಸಾಧ್ಯತೆಗಳಿರುತ್ತವೆ. ಕೆಲವೊಮ್ಮೆ ಇಂಥ ಈಡೇರದ ಬಯಕೆಗಳೇ ವ್ಯಕ್ತಿಯನ್ನು ಮಾನಸಿಕವಾಗಿ ಅಸ್ವಸ್ಥನನ್ನಾಗಿ ಮಾಡುತ್ತವೆ.

ಸಂಕೇತೀಕರಣ ಅರ್ಥೈಸುವಿಕೆ:
ತೀರಾ ಅದುಮಿಟ್ಟ ಆಸೆ-ಆಕಾಂಕ್ಷೆಗಳ ಪರಿಣಾಮ ಮಾನಸಿಕ ಅಸ್ವಸ್ಥರಾದವರು ಬಂದಾಗ ಅವರ ಕನಸುಗಳನ್ನು ಕೂಡ ತಿಳಿದು ಅವುಗಳ ಅರ್ಥೈಸಿ ಅಡ್ಡಪರಿಣಾಮಗಳನ್ನು ಮನೋವಿಜ್ಞಾನಿಗಳು ತಿಳಿಸಿ ಹೇಳಬೇಕು ಎಂದು ಸಿಗ್ಮಂಡ್ ಫ್ರಾಯ್ಡ್ ಅವರು ಅಭಿಪ್ರಾಯಪಟ್ಟರು.

ಈಡೇರದ ಕಾಮನೆಗಳು !
ತಮ್ಮ ಬಳಿ ಚಿಕಿತ್ಸೆಗಾಗಿ ಬಂದವರಲ್ಲಿ ಹೆಚ್ಚಿನ ಮಂದಿ ಮಾನಸಿಕ ಅಸ್ವಸ್ಥರು ಲೈಂಗಿಕ ಅತೃಪ್ತಿಯಿಂದ ಬಳಲುತ್ತಿರುವುದನ್ನು ಫ್ರಾಯ್ಡ್ ಗುರುತಿಸಿದರು. ಅವರ ಕನಸುಗಳನ್ನು ವಿಶ್ಲೇಷಿಸಿದಾಗ ಇದೇ ಅಂಶಗಳು ಕಂಡುಬಂದವು. ಇವುಗಳ ಪ್ರಭಾವ ಅಪಾರವಾಗಿತ್ತು. ದಮನಿತ ಲೈಂಗಿಕ ಆಕಾಂಕ್ಷೆ ಕನಸಿನ ರೂಪದಲ್ಲಿ ಪ್ರಕಟವಾಗುತ್ತಿದ್ದ ರೀತಿ ಮತ್ತು ಪ್ರಜ್ಞಾವಸ್ಥೆ ಮೇಲೂ ಅದರ ಪರಿಣಾಮ ಬೀರುವಿಕೆಯ ಪ್ರಮಾಣ ಕಂಡು ಮನೋವಿಜ್ಞಾನಿ ಫ್ರಾಯ್ಡ್ ನಿಬ್ಬೆರಗಾಗಿದ್ದರು 

ಮನುಷ್ಯನ ಅತ್ಯಂತ ಮೂಲಭೂತ ಅವಶ್ಯಕತೆಗಳಲ್ಲಿ ಲೈಂಗಿಕತೆಯೂ ಒಂದು. ಪ್ರಜ್ಞಾವಸ್ಥೆಯಲ್ಲಿ ಉದ್ದೇಶಪೂರ್ವಕವಾಗಿ ದಮನಿತವಾಗುವ ಇಂಥ ಬಯಕೆಗಳು ಕನಸಿನ ಮೂಲಕ ನಿರಂತರವಾಗಿ ಪ್ರಕಟವಾಗತೊಡಗುತ್ತವೆ. ಆಗ ಹಸ್ತಮೈಥುನ ಮಾಡಿಕೊಳ್ಳುವ ಅಭ್ಯಾಸವಿರದವರಿಗೂ ತಂತಾನೆ ಸ್ವಪ್ನಸ್ಖಲನ ಉಂಟಾಗುತ್ತದೆ. ಇದರಿಂದ ಇಂದಿಗೂ ಅನೇಕರು ಬೆದರುತ್ತಾರೆ. ಮೋಹಿನಿ ಕಾಟವಿರಬಹುದು ಎಂಬುದೇ ಇವರ ಹೆದರಿಕೆಗೆ ಕಾರಣ. ಇಂಥ ಕ್ರಿಯೆಗಳ ಅರ್ಥವನ್ನು ಇವರಿಗೆ ತಿಳಿಸಿ ಹೇಳುವುದು ಅಗತ್ಯ. ಇಲ್ಲದಿದ್ದರೆ ಭೀತಿ ಕ್ರಮೇಣ ದೊಡ್ಡದಾಗಿ ಬೆಳೆಯುತ್ತಾ ಹೋಗಬಹುದು. ಜೊತೆಗೆ ಮಾನಸಿಕ ಅಸ್ವಸ್ಥತೆ ಉಂಟಾಗಿ ವ್ಯಕ್ತಿ ಪ್ರಜ್ಞಾವಸ್ಥೆಯಲ್ಲಿಯೂ ತನ್ನ ಮೇಲಿನ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

3 comments:

 1. ನಿಜ, ಕತ್ತಲಲ್ಲಿ ಬೇಕಾದರು ನಡೆಯಬಹುದು ಆದರೆ ಕನಸಿಲ್ಲದೆ ನಡೆಯಲು ಅಸಾದ್ಯ. ನಮ್ಮ ಕನಸುಗಳು ನಮ್ಮನ್ನು ರೂಪುಸುತ್ತೇವೆ ಆಗಾಗಿ ಕನಸುಗಳಿಗೆ ಬೆಲೆ ಕೊಡಲೇಬೇಕು. ಆದರೆ ಕನಸು ಕಾಣಲು ಅವಕಾಶಗಳನ್ನು ನಾವು ಮತ್ತು ಸಮಾಜ ಒದಗಿಸಿ ಕೊಡಬೇಕು. ಅವಕಾಶ ಕೊಡದೆ ಕನಸು ಕಾಣಲು ಹೇಳುವುದು ದಡ್ಡತನ. ವ್ರತ್ತಿ ಆಯ್ಕೆಯಲ್ಲಿ ಕನಸುಗಳು ಬು ಮುಖ್ಯ. ಆಗಾಗಿ ನಾವು ಮಕ್ಕಳ ಹತ್ತೀರ ಕೆಲಸ ಆಯ್ಕೆ ಬಗ್ಗೆ ಮಾತನಾಡುವಾಗ ಕನಸುಗಳ ಬಗ್ಗೆ ಮಾತನಾಡುತ್ತೇವೆ.

  ReplyDelete
 2. Your website is very beautiful sir..

  ReplyDelete
 3. ಕುಮಾರ್ ಕನಸು ಎಂಬ ಎಳೆಯಾ ಜಾಡು ಹಿಡಿದು ಬರೆದ ಅವಲೋಕನ...ಆತ್ಮಾವಲೋಕನಕಚ್ಚಿರುವುದಂತು ಸತ್ಯ ಇಷ್ಟ ಆಯ್ತು

  ReplyDelete